Tag: Karavali Utsav

  • ಕರಾವಳಿ ಉತ್ಸವ; 4,500 ರೂ. ಕೊಟ್ರೆ ಹೆಲಿಕಾಪ್ಟರ್‌ನಲ್ಲಿ ಹಾರಾಡೋ ಅವಕಾಶ

    ಕರಾವಳಿ ಉತ್ಸವ; 4,500 ರೂ. ಕೊಟ್ರೆ ಹೆಲಿಕಾಪ್ಟರ್‌ನಲ್ಲಿ ಹಾರಾಡೋ ಅವಕಾಶ

    ಮಂಗಳೂರು: ಜಿಲ್ಲೆಯಲ್ಲಿ ಕರಾವಳಿ ಉತ್ಸವ (Karavali Utsav) ಸಂಭ್ರಮ ಆರಂಭವಾಗಿದೆ. ಕರಾವಳಿ ಉತ್ಸವ ಹಿನ್ನೆಲೆ ಜಿಲ್ಲಾಡಳಿತ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬಾನಂಗಳದಲ್ಲಿ ಹಾರಾಟಕ್ಕೊಂದು ಸುವರ್ಣ ಅವಕಾಶ ಕಲ್ಲಿಸಿದೆ.‌ ಹೆಲಿಕ್ಯಾಪ್ಟರ್ ಏರಿ ಕಡಲನಗರಿಯ ಸೌಂದರ್ಯ ಕಣ್ತುಂಬಿಕೊಳ್ಳಬಹುದಾಗಿದೆ.

    ಕಡಲನಗರಿ ಮಂಗಳೂರು (Mangaluru) ಕರಾವಳಿ ಉತ್ಸವಕ್ಕೆ ಸಜ್ಜಾಗುತ್ತಿದೆ. ಇದರ ಅಂಗವಾಗಿ ಜಿಲ್ಲಾಡಳಿತ ಹೆಲಿಟೂರಿಸಂ ಆಯೋಜಿಸಿದ್ದು, ಈ ಮೂಲಕ ಮಂಗಳೂರಿನ ಸೌಂದರ್ಯ ಬಾನಂಗಳದಲ್ಲಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಮೇರಿಹಿಲ್ ಹೆಲಿಪ್ಯಾಡ್‌ನಲ್ಲಿ‌ ಹೆಲಿಟೂರಿಸಂಗೆ ಚಾಲನೆ ದೊರಕಿದೆ. ಬೆಂಗಳೂರಿನ ತುಂಬಿ ಏರ್ ಟ್ಯಾಕ್ಸಿ ಕಂಪೆನಿಯ ಸಹಯೋಗದೊಂದಿಗೆ ದ‌.ಕ. ಜಿಲ್ಲಾಡಳಿತ ಹೆಲಿಟೂರಿಸಂ ಅನ್ನು ಆಯೋಜಿಸಿದೆ. ಹೆಲಿಕಾಪ್ಟರ್‌ನಲ್ಲಿ ರೌಂಡ್ ಹೊಡೆದ ಮಂಗಳೂರಿಗರು ನಗರದ ಸೌಂದರ್ಯವನ್ನು ಆಕಾಶದ ‌ಮೇಲಿನಿಂದ ಕಣ್ತುಂಬಿಕೊಂಡರು.‌ ಇದನ್ನೂ ಓದಿ: ಮಂಗಳೂರು ನಗರದಲ್ಲಿ ತಲೆಯೆತ್ತಿದೆ ಸ್ಮಾರ್ಟ್ ಮಾರ್ಕೆಟ್‌ಗಳು – ಉದ್ಘಾಟನೆಯಾಗದೇ ಪಾಳುಬಿದ್ದ ಹೊಸ ಕಟ್ಟಡಗಳು

    ಬಾನಂಗಳದಲ್ಲಿ ಕುಡ್ಲದ ಸೌಂದರ್ಯ ವೀಕ್ಷಿಸಲು ಬಯಸುವವರಿಗೆ ಡಿ.31ರವರೆಗೆ ಹೆಲಿಕಾಪ್ಟರ್ ಪ್ರಯಾಣಕ್ಕೆ ಅವಕಾಶವಿದೆ. 6-7 ನಿಮಿಷಗಳ ಕಾಲ ಹೆಲಿಕಾಪ್ಟರ್‌ನಲ್ಲಿ ರೌಂಡ್ ಹೊಡೆದು ಮಂಗಳೂರು ನಗರ, ನೇತ್ರಾವತಿ ನದಿ ತೀರ, ಬೀಚ್ ಸೌಂದರ್ಯವನ್ನು ವೀಕ್ಷಿಸಬಹುದು. ಪ್ರತಿ ರೌಂಡ್‌ನಲ್ಲಿ ಆರು ಮಂದಿಗೆ ಹೆಲಿಕಾಪ್ಟರ್ ಸುತ್ತಾಟಕ್ಕೆ ಅವಕಾಶವಿದೆ. ಇದಕ್ಕೆ ಕೇವಲ 4,500 ರೂ. ಪಾವತಿಸಿದರೆ ಸಾಕು ಯಾರು ಬೇಕಾದರೂ ಹೆಲಿಕಾಪ್ಟರ್ ಪ್ರಯಾಣ ಮಾಡಬಹುದು. www.helitaxii.com ನಲ್ಲಿ ಆನ್‌ಲೈನ್ ಬುಕ್ಕಿಂಗ್‌ ಹಾಗೂ ಸ್ಥಳದಲ್ಲೇ ಬುಕ್ಕಿಂಗ್ ಕೂಡಾ ಮಾಡಬಹುದು.

    ಈ ಹೆಲಿಟೂರಿಸಂ, ಆಯೋಜಿಸಿದ್ದು ಒಳ್ಳೆಯದೇ ಆದ್ರೆ, 6-7 ನಿಮಿಷದ ಸಂಚಾರಕ್ಕೆ 4,500 ರೂ. ದರ ನಿಗದಿಸಿದ್ದು, ಕೊಂಚ ದುಬಾರಿಯೆನಿಸಿದೆ. ದರ ಇಳಿಕೆ ಮಾಡಿದ್ದಲ್ಲಿ ಜನ ಸಾಮಾನ್ಯರೂ ಇದರ ಸದ್ಬಳಕೆ ಮಾಡಬಹುದು ಎನ್ನುವ ಅಭಿಪ್ರಾಯ ಕೇಳಿಬಂದಿದೆ. ಇದನ್ನೂ ಓದಿ: ಶಿರಾಡಿಯಲ್ಲಿ ಸುರಂಗ ಮಾರ್ಗ – ಡಿಪಿಆರ್‌ ತಯಾರಿಸಲು ಕೇಂದ್ರ ಒಪ್ಪಿಗೆ

  • ಕಡಲ ತೀರದಲ್ಲಿ ಹಾರಿದ ಬೃಹತ್ ಸ್ವದೇಶಿ, ವಿದೇಶಿ ಗಾಳಿಪಟಗಳು

    ಕಡಲ ತೀರದಲ್ಲಿ ಹಾರಿದ ಬೃಹತ್ ಸ್ವದೇಶಿ, ವಿದೇಶಿ ಗಾಳಿಪಟಗಳು

    – ಜನಮನ ಸೆಳೆದ ಅಂತರಾಷ್ಟ್ರೀಯ ಗಾಳಿಪಟ ಉತ್ಸವ

    ಮಂಗಳೂರು: ಬಾನಂಗಳದಲ್ಲಿ ರಂಗು ರಂಗಿನ ಬೃಹತ್ ಗಾಳಿಪಟಗಳ ಸ್ವಚ್ಛಂದ ಹಾರಾಟ, ಕಡಲ ದಡದಲ್ಲಿ ಸೂತ್ರದಾರನ ನಿಯಂತ್ರಣ. ಇದನ್ನು ನೋಡಿದ ವೀಕ್ಷಕರು ವಾವ್ ಎನ್ನುವ ಹರ್ಷೋದ್ಗಾರ. ಅರಬ್ಬಿ ಸಮುದ್ರದ ಕಿನಾರೆಯ ಪ್ರಶಾಂತ ವಾತಾವರಣ. ಇಳಿಸಂಜೆಯ ತಂಪಾದ ಗಾಳಿ ಕಡಲತಡಿಗೆ ಬಂದವರ ಮೈ ತಣಿಸಿದ್ರೆ ಬಾನಂಗಳದಲ್ಲಿ ಹಾರಾಡುತ್ತಿದ್ದ ಗಾಳಿಪಟಗಳು ಚಿತ್ತಾರ ಮೂಡಿಸುತ್ತಿದ್ದವು. ಇಂತಹ ಅದ್ಬುತ ದೃಶ್ಯ ಕಂಡುಬಂದಿದ್ದು ಮಂಗಳೂರಿನ ಪಣಂಬೂರು ಕಡಲಕಿನಾರೆಯಲ್ಲಿ.

    ಕರಾವಳಿ ಉತ್ಸವದ ಪ್ರಯುಕ್ತ ಮಂಗಳೂರಿನಲ್ಲಿ ಪಣಂಬೂರಿನ ಸುಂದರ ಕಡಲ ಕಿನಾರೆಯಲ್ಲಿ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ನಡೆದಿದೆ. ಅಮೆರಿಕ, ಥೈಲ್ಯಾಂಡ್, ನೆದರ್‍ಲ್ಯಾಂಡ್, ಚೀನಾ ಸೇರಿದಂತೆ ಆರು ದೇಶಗಳ ಹೆಸರಾಂತ 17 ಜನ ಗಾಳಿಪಟ ಕ್ರೀಡಾಪಟುಗಳು ಮಂಗಳೂರಿನ ಬಾನಿನಲ್ಲಿ ಅತ್ಯಾಕರ್ಷಕ ಚಿತ್ತಾರ ಮೂಡಿಸಿದ್ದಾರೆ. ವಿದೇಶಿಗರು ಸೇರಿದಂತೆ ದೇಶದ 25ಕ್ಕೂ ಹೆಚ್ಚಿನ ಗಾಳಿಪಟ ಕ್ರೀಡಾಪಟುಗಳು ಭಾಗವಹಿಸಿ ಗಾಳಿಪಟ ಉತ್ಸವದ ಮೆರಗು ಹೆಚ್ಚಿಸಿದರು.

    ವಿಭಿನ್ನ ಶೈಲಿಯ ಗಾಳಿಪಟಗಳು:
    ಹನುಮಂತನ ಬೃಹತ್ ಏರೋಫೋಯಿಲ್ ಗಾಳಿಪಟ, ಕುದುರೆ, ಮೊಸಳೆ, ವಿವಿಧ ಬಗೆಯ ಸಮುದ್ರ ಜೀವಿಗಳು, ಕೆಲವು ಹಣ್ಣು-ಹಂಪಲು ಮಾದರಿಯ ಗಾಳಿಪಟಗಳು ಸಮುದ್ರ ತೀರದ ನೀಲಿಯ ಆಗಸದಲ್ಲಿ ಸ್ವಚ್ಛಂದವಾಗಿ ಹಾರಾಡುತ್ತ ಹಕ್ಕಿಗಳಾದವು. ಸುಯ್ಯನೆ ಗಾಳಿಯಲ್ಲಿ ಚುರುಕಾಗಿ ಓಡಾಡುವ ಭಾರೀ ಉದ್ದದ ಹಾವಿನಾಕಾರದ ಗಾಳಿಪಟವಂತೂ ನೋಡುಗರನ್ನು ಮೈನವಿರೇಳಿಸುತ್ತಾ ಸೆಳೆಯುತ್ತಿತ್ತು. ಚಿತ್ರ ವಿಚಿತ್ರ ಬಗೆಯ ಗಾಳಿಪಟಗಳನ್ನು ಹಾರಿಸಿ ಕರಾವಳಿಯ ಜನರನ್ನು ವಿದೇಶಿಗರು ಆಕರ್ಷಿಸಿದರು.

    ಒಟ್ಟಿನಲ್ಲಿ ಸಮುದ್ರ ತೀರಕ್ಕೆ ಸಂಜೆಯ ತಣ್ಣನೆಯ ಗಾಳಿ ಸವಿದು ಸೂರ್ಯಾಸ್ತಮಾನ ನೋಡಲು ಬಂದವರಿಗೆ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ಉತ್ತಮ ಮನೋರಂಜನೆ ನೀಡಿತು.