Tag: Karachi

  • ದಾವೂದ್ ನಮ್ಮ ನೆಲದಲ್ಲಿಲ್ಲ- ಉಲ್ಟಾ ಹೊಡೆದ ಪಾಕಿಸ್ತಾನ

    ದಾವೂದ್ ನಮ್ಮ ನೆಲದಲ್ಲಿಲ್ಲ- ಉಲ್ಟಾ ಹೊಡೆದ ಪಾಕಿಸ್ತಾನ

    ಇಸ್ಲಾಮಾಬಾದ್: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿಯಲ್ಲೇ ನೆಲೆಸಿದ್ದಾನೆ ಎಂಬ ಮಾಹಿತಿ ಇತ್ತೀಚೆಗೆ ವರದಿಯಾಗಿದೆ. ಆದರೆ ಪಾಪಿ ಪಾಕಿಸ್ತಾನ ಇದನ್ನು ಅಲ್ಲಗಳೆದಿದ್ದು, ದಾವೂದ್ ನಮ್ಮ ನೆಲದಲ್ಲಿಲ್ಲ ಎಂದು ಹೇಳಿದೆ.

    ಪಾಸ್‍ಪೋರ್ಟ್ ವಿವರಗಳೊಂದಿಗೆ ಭಯೋತ್ಪಾದಕರ ಪಟ್ಟಿಯನ್ನು ಪಾಕಿಸ್ತಾನ ವಿಶ್ವಸಂಸ್ಥೆಗೆ ಸಲ್ಲಿಕೆ ಮಾಡಿದ್ದು, ಇದರಲ್ಲಿ ಪಾತಕಿ ದಾವೂದ್ ಇಬ್ರಾಹಿಂ ಹೆಸರು ಸಹ ಇದೆ. ಅಲ್ಲದೆ ಪಾಸ್‍ಪೋರ್ಟ್‍ನಲ್ಲಿ ಪಾಕಿಸ್ತಾನದ ಕರಾಚಿ ವಿಳಾಸ ಸಹ ಇದೆ. ಇತ್ತೀಚೆಗಷ್ಟೇ ದಾವೂದ್ ತಮ್ಮಲ್ಲೇ ಇದ್ದಾನೆ ಎಂದು ಹೇಳಿಕೊಂಡಿದ್ದ ಪಾಕಿಸ್ತಾನ, ಇದೀಗ ಇದ್ದಿಕ್ಕಿದ್ದಂತೆ ಉಲ್ಟಾ ಹೊಡೆದಿದೆ. ದಾವೂದ್ ನಮ್ಮ ನೆಲದಲ್ಲಿಲ್ಲ ಎಂದು ತಿಳಿಸಿದೆ.

    ವಿಶ್ವಸಂಸ್ಥೆ ಗೊತ್ತುಪಡಿಸಿದ ಭಯೋತ್ಪಾದಕರ ಪಟ್ಟಿಯನ್ನು ಪಾಕಿಸ್ತಾನ ಬಿಡುಗಡೆ ಮಾಡಿದ್ದು, ಪಾಕ್ ಪಾಲಿಸಬೇಕಾದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿಯಮದ ಪ್ರಕಾರ ಉಗ್ರರ ಆಸ್ತಿ ಜಪ್ತಿ, ಪ್ರಯಾಣ ನಿಷೇಧ ಹಾಗೂ ಶಸ್ತ್ರಾಸ್ತ್ರ ನಿರ್ಬಂಧದ ಕುರಿತು ಮಾಹಿತಿ ನೀಡಿದೆ. ಈ ವೇಳೆ ಭಾರತದ ಮೋಸ್ಟ್ ವಾಂಟೆಡ್ ಟೆರರಿಸ್ಟ್ ದಾವೂದ್ ಇಬ್ರಾಹಿಂ ಕುರಿತು ಸಹ ಉಲ್ಲೇಖಿಸಿದ್ದು, ಇದರಲ್ಲಿ ಆತನ ವಿಳಾಸವನ್ನು ಕರಾಚಿ ಎಂದು ನಮೂದಿಸಿದೆ.

    ದಾವೂದ್ ಪಾಕಿಸ್ತಾನದಲ್ಲೇ ಇರುವಿಕೆಯನ್ನು ಒಪ್ಪಿಕೊಂಡ ಬಳಿಕ ಪಾಕಿಸ್ತಾನದಲ್ಲಿ ಅವನ ಕಾರ್ಯಾಚರಣೆಗಳ ಕುರಿತ ಯಾವುದೇ ಮಾಹಿತಿಯನ್ನು ನೀಡಿಲ್ಲ. ಇದನ್ನು ಪಾಪಿ ಪಾಕಿಸ್ತಾನ ಮುಚ್ಚಿಟ್ಟಿದೆ. ಇದೀಗ ದಾವೂದ್ ಪಾಕಿಸ್ತಾನದಲ್ಲೇ ಇರುವ ಕುರಿತು ಸುದ್ದಿಯಾಗುತ್ತಿದೆ. ಹೀಗಾಗಿ ಪಾಕಿಸ್ತಾನ ದಾವೂದ್ ಕರಾಚಿಯಲ್ಲಿರುವುದನ್ನು ಸಹ ನಿರಾಕರಿಸುತ್ತಿದೆ.

    ಭೂಗತ ಪಾತಾಕಿ ದಾವೂದ್ ಇಬ್ರಾಹಿಂ ನಮ್ಮಲ್ಲೇ ಇದ್ದಾನೆ ಎಂದು ಪಾಕಿಸ್ತಾನ ಸತ್ಯವನ್ನು ಒಪ್ಪಿಕೊಂಡಿತ್ತು. ಭಾರತದ ಮೋಸ್ಟ್ ವಾಂಟೆಡ್ ಟೆರರಿಸ್ಟ್ ದಾವೂದ್ ಇಬ್ರಾಹಿಂ ತಲೆಮರೆಸಿಕೊಂಡು ಪಾಕಿಸ್ತಾನದಲ್ಲಿ ಅವಿತು ಕೂತಿದ್ದಾನೆ ಎಂದು ಹೇಳಲಾಗುತ್ತಿತ್ತು. ಆದರೆ ಈ ಮಾತನ್ನು ಪಾಕಿಸ್ತಾನ ತಳ್ಳಿ ಹಾಕಿಕೊಂಡು ಬಂದಿತ್ತು. ಹಲವು ದಿನಗಳ ಬಳಿಕ ಈಗ ಸ್ವತಃ ಪಾಕಿಸ್ತಾನವೇ ದಾವೂದ್ ಕರಾಚಿಯಲ್ಲೇ ಇದ್ದಾನೆ ಎಂದು ಒಪ್ಪಿಕೊಂಡಿತ್ತು.

    ಆರ್ಥಿಕ ನಿರ್ಬಂಧದಿಂದ ಹೊರ ಬರಲು ಪಾಕಿಸ್ತಾನ ತಮ್ಮ ದೇಶದಲ್ಲಿ ಸಕ್ರಿಯವಾಗಿರುವ 88 ಉಗ್ರ ಸಂಘಟನೆಗಳನ್ನು ಬ್ಯಾನ್ ಮಾಡುವುದಾಗಿ ಹೇಳಿಕೊಂಡಿತ್ತು. ಇದರ ಭಾಗವಾಗಿ ದಾವೂದ್ ನಮ್ಮಲ್ಲಿಯೇ ಇದ್ದಾನೆ ಎಂದು ಒಪ್ಪಿಕೊಂಡಿತ್ತು. ಪಾಕಿಸ್ತಾನ ಸೇರಿದಂತೆ 14 ರಾಷ್ಟ್ರಗಳ ಪಾಸ್‍ಪೋರ್ಟ್‍ಗಳು ದಾವೂದ್ ಬಳಿ ಇವೆ ಎಂದು ಮಾಹಿತಿ ನೀಡಿತ್ತು. ಅಲ್ಲದೆ ದಾವೂದ್ ಆಸ್ತಿ, ಬ್ಯಾಂಕ್ ಅಕೌಂಟ್ ಸೀಜ್ ಮಾಡಿ ಆರ್ಥಿಕ ದಿಗ್ಬಂಧನ ಹೇರುತ್ತೇವೆ ಎಂದೂ ಕೂಡ ಹೇಳಿತ್ತು.

    ಪ್ಯಾರಿಸ್ ಮೂಲದ ಎಫ್‍ಎಟಿಎಫ್ (ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್) ಉಗ್ರರನ್ನು ಮಟ್ಟಹಾಕದೇ ಇದ್ದರೆ, ಬೂದು ಬಣ್ಣದಲ್ಲಿರುವ ನಿಮ್ಮನ್ನು ಕಪ್ಪುಪಟ್ಟಿಗೆ ಸೇರಿಸುತ್ತೇವೆ ಎಂದು ಈ ಹಿಂದೆ ಎಚ್ಚರಿಕೆ ನೀಡಿತ್ತು. ಇದರಿಂದ ಹೆದರಿದ ಪಾಕಿಸ್ತಾನ, ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಜೆಯುಡಿಯ ಹಫೀಜ್ ಸಯೀದ್, ಜೆಇಎಂನ ಮಸೂದ್ ಅಜರ್ ಮತ್ತು ದಾವೂದ್ ಇಬ್ರಾಹಿಂ ಸೇರಿದಂತೆ 88 ಉಗ್ರ ಸಂಘಟನೆಗಳ ಮೇಲೆ ಆರ್ಥಿಕ ದಿಗ್ಬಂಧನ ಹೇರಲು ನೋಟಿಸ್ ನೀಡಿದೆ.

    ಉಗ್ರ ಸಂಘಟನೆಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ಯಾರಿಸ್ ಮೂಲದ ಎಫ್‍ಎಟಿಎಫ್ 2019ರಲ್ಲಿ ಪಾಕಿಸ್ತಾನಕ್ಕೆ ಡೆಡ್‍ಲೈನ್ ವಿಧಿಸಿತ್ತು. ಆದರೆ ಈ ಡೆಡ್‍ಲೈನ್ ಅನ್ನು ಕೊರೊನಾ ಕಾರಣದಿಂದಾಗಿ ಮುಂದಕ್ಕೆ ಹಾಕಲಾಗಿದೆ. ಈಗ ಈ ಗಡುವು ಮುಗಿದಿದ್ದು, ಕಪ್ಪುಪಟ್ಟಿಗೆ ಸೇರುವ ಭಯದಲ್ಲಿ ಪಾಕಿಸ್ತಾನ ತನ್ನ ಉದರದಲ್ಲಿ ಬಚ್ಚಿಟ್ಟಿಕೊಂಡಿದ್ದ ಉಗ್ರಕ್ರಿಮಿಗಳಿಗೆ ನೋಟಿಸ್ ನೀಡಿದೆ.

  • ‘ಕೊರೊನಾ ಕುರಿತು ಹರಟೆ’- ಪಾಕ್ ವಿಮಾನ ದುರಂತಕ್ಕೆ ಪೈಲಟ್‍ಗಳ ನಿರ್ಲಕ್ಷ್ಯವೇ ಕಾರಣ

    ‘ಕೊರೊನಾ ಕುರಿತು ಹರಟೆ’- ಪಾಕ್ ವಿಮಾನ ದುರಂತಕ್ಕೆ ಪೈಲಟ್‍ಗಳ ನಿರ್ಲಕ್ಷ್ಯವೇ ಕಾರಣ

    ಇಸ್ಲಾಮಾಬಾದ್: ಪಾಕಿಸ್ತಾನ ಕರಾಚಿಯಲ್ಲಿ ಸಂಭವಿಸಿದ್ದ ಘೋರ ವಿಮಾನ ದುರಂತಕ್ಕೆ ಪೈಲಟ್‍ಗಳ ನಿರ್ಲಕ್ಷ್ಯವೇ ಕಾರಣ ಎಂದು ತನಿಖೆ ವೇಳೆ ಬಹಿರಂಗಗೊಂಡಿದೆ. 97 ಮಂದಿ ಈ ದುರಂತದಲ್ಲಿ ಸಾವನ್ನಪ್ಪಿದ್ದರು.

    ಲಾಹೋರ್ ನಿಂದ ಹೊರಟ್ಟಿದ್ದ ಏರ್‌ಬಸ್ ಎ320 ವಿಮಾನ ಕರಾಚಿಯಲ್ಲಿ ಲ್ಯಾಂಡಿಂಗ್ ವೇಳೆ ಪೈಲಟ್, ಏರ್ ಟ್ರಾಫಿಕ್ ಕಂಟ್ರೋಲರ್ ನಿರ್ಲಕ್ಷ್ಯದಿಂದ ಕೊರೊನಾ ವೈರಸ್ ಕುರಿತು ಮಾತನಾಡುತ್ತಿದ್ದರು ಎಂದು ಪಾಕ್ ವಿಮಾನಯಾನ ಸಚಿವ ಗುಲಾಮ್ ಸರ್ವಾರ್ ಖಾನ್, ಪಾರ್ಲಿಮೆಂಟ್‍ನಲ್ಲಿ ಜೂನ್ 24 ರಂದು ಮಾಹಿತಿ ನೀಡಿದ್ದಾರೆ.

    ಘಟನೆಯ ಕುರಿತು ತನಿಖೆ ಕೈಗೊಂಡಿದ್ದ ತಂಡ, ಪೈಲಟ್ ಹಾಗೂ ಏರ್ ಟ್ರಾಫಿಕ್ ಕಂಟ್ರೋಲರ್ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯ ವೇಳೆ ದೃಢಪಡಿಸಿದೆ. ಪೈಲಟ್, ಕೋ-ಪೈಲೆಟ್ ಇಬ್ಬರು ವಿಮಾನದ ಲ್ಯಾಂಡಿಂಗ್ ಮೇಲೆ ಗಮನ ನೀಡಿರಲಿಲ್ಲ. ಕೊರೊನಾ ಮಹಾಮಾರಿಯ ಕುರಿತ ಚರ್ಚೆಯ ಮುಳುಗಿದ್ದರು. ವಿಮಾನ ಹಾರಾಟ ನಡೆಸಲು 100 ರಷ್ಟು ಫಿಟ್ ಆಗಿತ್ತು. ಯಾವುದೇ ತಾಂತ್ರಿಕ ಸಮಸ್ಯೆ ಇರಲಿಲ್ಲ ಎಂದು ಸಚಿವರು ವಿವರಿಸಿದ್ದಾರೆ.

    ಪಾಕಿಸ್ತಾನದಲ್ಲಿ ಮೇ 22ರಂದು ನಡೆದ ಈ ದುರ್ಘಟನೆಯಲ್ಲಿ 97 ಮಂದಿ ಸಾವನ್ನಪ್ಪಿದ್ದರು. ಇಬ್ಬರು ಮಾತ್ರ ಜೀವಂತವಾಗಿ ಬದುಕುಳಿದಿದ್ದರು. ಘಟನೆಯ ಕುರಿತು ಪಾಕ್ ಸರ್ಕಾರ ಉನ್ನತ ತನಿಖೆಗೆ ಆದೇಶ ನೀಡಿತ್ತು. ಈ ತನಿಖೆಯಲ್ಲಿ ಪಾಕ್‍ನ ಉನ್ನತ ಅಧಿಕಾರಿಗಳ ಜೊತೆಗೆ ಫ್ರಾನ್ಸ್ ದೇಶದ ತಜ್ಞರು ಕೂಡ ಭಾಗಿಯಾಗಿದ್ದರು. ವಿಮಾನ ಪತನದ ಬಳಿಕ ಲಭಿಸಿದ ವಾಯ್ಸ್ ರೆಕಾರ್ಡ್, ಡೇಟಾ ಪರಿಶೀಲನೆ ನಡೆಸಿದ ಬಳಿಕ ಪ್ರಾಥಮಿಕ ವರದಿಯನ್ನು ಸಲ್ಲಿಸಲಾಗಿತ್ತು.

  • ಸಾವನ್ನಪ್ಪಿದ ಬಳಿಕವೂ ಸೋಶಿಯಲ್ ಮೀಡಿಯಾದಲ್ಲಿ ರೂಪದರ್ಶಿಯ ಟ್ರೋಲ್

    ಸಾವನ್ನಪ್ಪಿದ ಬಳಿಕವೂ ಸೋಶಿಯಲ್ ಮೀಡಿಯಾದಲ್ಲಿ ರೂಪದರ್ಶಿಯ ಟ್ರೋಲ್

    – ಜನವರಿಯಲ್ಲಿ ಬೆಸ್ಟ್ ಫೀಮೇಲ್ ಮಾಡೆಲ್ ಅವಾರ್ಡ್
    – ಕರಾಚಿಯ ವಿಮಾನ ದುರಂತದಲ್ಲಿ ಸಾವು

    ಇಸ್ಲಾಮಾಬಾದ್: ಕರಾಚಿ ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಪಾಕ್ ರೂಪದರ್ಶಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ.

    ಜಾರಾ ಆಬಿದಾ ಸಾವನ್ನಪ್ಪಿದ ಬಳಿಕವೂ ಟ್ರೋಲ್ ಆಗುತ್ತಿರುವ ರೂಪದರ್ಶಿ. ಧಾರ್ಮಿಕ ನಿಯಮಗಳನ್ನ ಜಾರಾ ಪಾಲನೆ ಮಾಡುತ್ತಿರಲಿಲ್ಲ ಎಂದು ಒಂದು ಪಂಗಡದ ಜನ ಟ್ರೋಲ್ ಮಾಡಲಾಗುತ್ತಿದೆ. ಟ್ರೋಲ್‍ಗಳಿಗೆ ಪರ-ವಿರೋಧಗಳು ವ್ಯಕ್ತವಾಗುತ್ತಲೇ ಜಾರಾ ಬಳಸುತ್ತಿದ್ದ ಸೋಶಿಯಲ್ ಮೀಡಿಯಾ ಖಾತೆಗಳನ್ನು ಡಿ ಆ್ಯಕ್ಟಿವ್ ಮಾಡಲಾಗಿದೆ.

    ಪ್ಲೇನ್ ಕ್ರ್ಯಾಶ್ ನಲ್ಲಿ ಜಾರಾ ಬದುಕುಳಿದಿದ್ದಾರೆ ಎಂಬ ಸುದ್ದಿಗಳು ಪಾಕಿಸ್ತಾನದಲ್ಲಿ ವ್ಯಾಪಕವಾಗಿ ಹಬ್ಬಿದ್ದವು. ಎಲ್ಲ ಗಾಳಿಸುದ್ದಿಗಳಿಗೆ ತೆರೆ ಎಳೆದ ಕುಟುಂಬಸ್ಥರು, ಜಾರಾ ನಮ್ಮನ್ನು ಬಿಟ್ಟು ಬಾರದ ಲೋಕಕ್ಕೆ ತೆರಳಿದ್ದಾಳೆ ಎಂದು ಖಚಿತಪಡಿಸಿದ್ದರು. ಸಾವಿನ ಸುದ್ದಿ ಖಚಿತವಾದ್ರೂ ಆಕೆ ಧರ್ಮ ವಿರೋಧಿ ಎಂಬ ಹೇಳಿಕೆಗಳನ್ನ ಬಳಸಿ ಟ್ರೋಲ್ ಮಾಡಿದ್ದಾರೆ.

    ಇರ್ಫಾನ್ ಎಂಬ ಸೋಶಿಯಲ್ ಮೀಡಿಯಾದಲ್ಲಿ, ವಿಮಾನ ದುರಂತದಲ್ಲಿ ಸಾವನ್ನಪ್ಪಿದವರಿಗೆ ಸ್ವರ್ಗ ಪ್ರಾಪ್ತಿಯಾಗುತ್ತೆ. ಯಾವ ಮುಸ್ಲಿಂ ಮಹಿಳೆ ತನ್ನ ಶರೀರವನ್ನು ಬಹಿರಂಗವಾಗಿ ತೋರಿಸುತ್ತಾಳೆ ಆಕೆಗೆ ನರಕ ಪ್ರಾಪ್ತಿಯಾಗುತ್ತೆ. ದೇವರು ಅಂತಹವರನ್ನು ಎಂದಿಗೂ ಕ್ಷಮಿಸಲ್ಲ. ಸ್ವರ್ಗ ಕೇವಲ ಶುದ್ಧ ಪುರುಷ ಮತ್ತು ಶುದ್ಧ ಮಹಿಳೆಯರಿಗೆ ಸಿಗುತ್ತೆ ಎಂದು ಬರೆದುಕೊಂಡಿದ್ದಾನೆ.

    ಜಾರಾ ಪರ ಬ್ಯಾಟಿಂಗ್: ಧರ್ಮ ವಿರೋಧಿ ಪಟ್ಟ ಕಟ್ಟಿ ಜಾರಾರನ್ನು ಕೆಲವರು ಟೀಕಿಸಿದ್ರೆ, ಮತ್ತೊಂದಿಷ್ಟು ಜನ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ. ಕೆಲವರು ಜಾರಾರ ಸಾವನ್ನು ತಮ್ಮ ವೃತ್ತಿಯನ್ನು ಉಳಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ. ಆ ಜನ ಜಾರಾ ವೃತ್ತಿಯನ್ನು ಕೆಟ್ಟದ್ದು ಅಂತ ಹೇಳೋದು ಅವರ ವೈಯಕ್ತಿಕ ಅಭಿಪ್ರಾಯ. ಈ ಸಮಯದಲ್ಲಿ ಸಾವನ್ನಪ್ಪಿರುವ ಜಾರಾಗಾಗಿ ಪ್ರಾರ್ಥನೆ ಮಾಡಬೇಕಿದೆ ಎಂದು ನೆಟ್ಟಿಗರೊಬ್ಬರು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಕರಾಚಿ ವಿಮಾನ ದುರಂತಕ್ಕೆ 97 ಮಂದಿ ಬಲಿ

    28 ವರ್ಷದ ಜಾರಾ ಆಬಿದಾ ಮಾಡೆಲ್ ಲೋಕದಲ್ಲಿ ಗುರುತಿಸಿಕೊಳ್ಳುತ್ತಿದ್ದರು. ಹಲವು ವಿಶೇಷ ಕಾರ್ಯಕ್ರಮಗಳಲ್ಲಿ ಜಾರಾ ಭಾಗಿಯಾಗುವ ಮೂಲಕ ಮಾಡೆಲ್ ಲೋಕದಲ್ಲಿ ತಮ್ಮದೇ ಹೆಸರು ಮಾಡಿದ್ದರು. ಜನವರಿಯಲ್ಲಿ ಈ ವರ್ಷದ ಬೆಸ್ಟ್ ಫೀಮೇಲ್ ಮಾಡೆಲ್ ಅವಾರ್ಡ್ ಸಹ ಜಾರಾ ಪಡೆದುಕೊಂಡು ಬಣ್ಣದ ಲೋಕಕ್ಕೆ ಎಂಟ್ರಿ ಕೊಡುವ ಸಿದ್ಧತೆಯಲ್ಲಿದ್ದರು. ಈ ವರ್ಷದ ಅಂತ್ಯದಲ್ಲಿ ಜಾರಾ ಸಿನಿಮಾ ಸೆಟ್ಟೇರಲಿತ್ತು. ಅಷ್ಟರಲ್ಲಿ ಕರಾಚಿ ವಿಮಾನ ದುರಂತದಲ್ಲಿ ಜಾರಾ ಸಾವು ಆಗಿದೆ.

  • ಲ್ಯಾಂಡ್ ಆಗುವ ಒಂದು ನಿಮಿಷ ಮೊದಲೇ ವಿಮಾನ ಪತನ

    ಲ್ಯಾಂಡ್ ಆಗುವ ಒಂದು ನಿಮಿಷ ಮೊದಲೇ ವಿಮಾನ ಪತನ

    – 10 ವರ್ಷದಲ್ಲಿ ಪಾಕ್‍ನಲ್ಲೇ 6 ದೊಡ್ಡ ವಿಮಾನ ದುರಂತ

    ಇಸ್ಲಾಮಾಬಾದ್: ಪಾಕಿಸ್ತಾನ ಇಂಟರ್‌ನ್ಯಾಷನಲ್ ಏರ್‌‌ಲೈನ್ಸ್ (ಪಿಐಎ)ನ ಪ್ರಯಾಣಿಕರ ವಿಮಾನವು ಕರಾಚಿಯ ವಸತಿ ಪ್ರದೇಶದಲ್ಲಿ ಶುಕ್ರವಾರ ಅಪಘಾತಕ್ಕೀಡಾಗಿದೆ.

    ಈ ವಿಮಾನ ಲಾಹೋರ್‌ನಿಂದ ಕರಾಚಿಗೆ ಪ್ರಯಾಣಿಸುತ್ತಿತ್ತು. ಕರಾಚಿಯ ಜಿನ್ನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪುವ ಒಂದು ನಿಮಿಷ ಮೊದಲೇ ವಿಮಾನ ದುರ್ಘಟನೆ ನಡೆದಿದೆ. ವಿಮಾನದಲ್ಲಿ 51 ಪುರುಷರು, 31 ಮಹಿಳೆಯರು, 9 ಮಕ್ಕಳು ಸೇರಿ 91 ಪ್ರಯಾಣಿಕರು ಹಾಗೂ 7 ಸಿಬ್ಬಂದಿ ಇದ್ದರು ಎಂದು ವರದಿಯಾಗಿದೆ.

    ಇದುವರೆಗೆ 5 ವರ್ಷದ ಮಗು, ಹಿರಿಯ ಪತ್ರಕರ್ತ ಅನ್ಸಾರಿ ನಖ್ವಿ ಸೇರಿ 13 ಜನರ ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಬ್ಯಾಂಕ್ ಆಫ್ ಪಂಜಾಬ್ ಅಧ್ಯಕ್ಷ ಜಾಫರ್ ಮಸೂದ್ ಅವರು ಸುರಕ್ಷಿತವಾಗಿದ್ದಾರೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅಪಘಾತದ ಬಗ್ಗೆ ದುಃಖ ವ್ಯಕ್ತಪಡಿಸಿದ್ದು, ಈಗ ನಮ್ಮ ಆದ್ಯತೆ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಎಂದು ಹೇಳಿದ್ದಾರೆ.

    ವಿಮಾನವು ಕರಾಚಿಯ ಮಾಡೆಲ್ ಕಾಲೋನಿಯ ಜಿನ್ನಾ ಗಾರ್ಡನ್ ಪ್ರದೇಶದಲ್ಲಿ ಬಿದ್ದಿದೆ. ಪರಿಣಾಮ ಅಲ್ಲಿನ ಅನೇಕ ಮನೆಗಳಿಗೆ ಬೆಂಕಿ ಹೊತ್ತಿ ಉರಿದಿದೆ. ಪಾಕಿಸ್ತಾನದ ನಾಗರಿಕ ವಿಮಾನಯಾನ ಪ್ರಾಧಿಕಾರದ ಪ್ರಕಾರ, ಪೈಲಟ್ ಎಂಜಿನ್ ವೈಫಲ್ಯದ ಬಗ್ಗೆ ವಾಯು ಸಂಚಾರ ನಿಯಂತ್ರಕಕ್ಕೆ ಮಾಹಿತಿ ನೀಡಿದ್ದರು. ಆದರೆ ವಿಮಾನ ಇನ್ನೇನು ಲ್ಯಾಂಡ್ ಆಗುವ ಹಂತದಲ್ಲಿ ಇದ್ದಾಗಲೇ ಸಂಪರ್ಕ ಕಳೆದುಕೊಂಡಿತ್ತು.

    ಅಪಘಾತಕ್ಕೀಡಾದ ವಿಮಾನ ಏರ್‌ಬಸ್-320ವು 15 ವರ್ಷ ಹಳೆಯದಾಗಿತ್ತು. ಪೈಲಟ್‍ನ ಹೆಸರು ಸಜ್ಜಾದ್ ಗುಲ್ ಎಂದು ವರದಿಯಾಗಿದೆ. ವಿಮಾನವನ್ನು ವಸತಿ ಪ್ರದೇಶವನ್ನು ದಾಟಿಸಲು ಪೈಲಟ್ ಪ್ರಯತ್ನಿಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಇದರಿಂದಾಗಿ ಕಡಿಮೆ ಪ್ರಮಾಣದಲ್ಲಿ ಮನೆಗಳು ಹಾನಿಗೊಳಗಾಗಿವೆ. ವಿಮಾನದಲ್ಲಿ ಸಹ ಪೈಲಟ್ ಮತ್ತು ಮೂರು ಏರ್ ಹೊಸ್ಟೆರ್ ಗಳಿದ್ದರು ಎಂದು ತಿಳಿದು ಬಂದಿದೆ.

    6 ದೊಡ್ಡ ವಿಮಾನ ದುರಂತಗಳು:
    1) 2010ರ ಜುಲೈ 28: ಕರಾಚಿಯಿಂದ ಹಾರಾಟ ನಡೆಸಿದ್ದ ಖಾಸಗಿ ವಿಮಾನಯಾನ ಸಂಸ್ಥೆ ಏರ್‍ಬಸ್‍ನ ವಿಮಾನ ಏರ್‌ಬಸ್-321 ಇಸ್ಲಾಮಾಬಾದ್ ಹೊರಗಿನ ಬೆಟ್ಟಗಳಿಗೆ ಡಿಕ್ಕಿ ಹೊಡೆದಿತ್ತು. ಈ ವೇಳೆ ಎಲ್ಲಾ 152 ಜನರು ಸಾವನ್ನಪ್ಪಿದ್ದರು.
    2) 2010ರ ನವೆಂಬರ್ 5: ಕರಾಚಿಯಲ್ಲಿ ಟೇಕ್-ಆಫ್ ಆದ ಸ್ವಲ್ಪ ಸಮಯದ ನಂತರ, ಅವಳಿ ಎಂಜಿನ್ ವಿಮಾನ ಅಪಘಾತಕ್ಕೀಡಾಗಿತ್ತು. ಇದು ಇಟಾಲಿಯನ್ ತೈಲ ಕಂಪನಿಯ ಸಿಬ್ಬಂದಿಯನ್ನು ಹೊತ್ತು ಪ್ರಯಾಣ ಬೆಳೆಸಿತ್ತು. ಈ ಅಪಘಾತದಲ್ಲಿ 21 ಜನರು ಮೃತಪಟ್ಟಿದ್ದರು.

    3) 2010ರ ನವೆಂಬರ್ 28: ಜಾರ್ಜಿಯಾದ ವಿಮಾನಯಾನ ಸನ್‍ವೇಯ ಅಲುಶಿನಿಲ್-76 ಸರಕು ವಿಮಾನವು ಕರಾಚಿಯಿಂದ ಹಾರಾಟ ನಡೆಸಿದ ನಂತರ ಅಪಘಾತಕ್ಕೀಡಾಗಿತ್ತು. ಇದರಲ್ಲಿ 12 ಜನರ ಬಲಿಯಾಗಿದ್ದರು.
    4) 2012ರ ಏಪ್ರಿಲ್ 20: ಇಸ್ಲಾಮಾಬಾದ್ ನಗರ ದಾಟಿದ ಸ್ವಲ್ಪ ದೂರದಲ್ಲೇ ಭೋಜ್ ಏರ್‌ಬಸ್-737 ವಿಮಾನ ಪತನಗೊಂಡಿತ್ತು. ಈ ವೇಳೆ ಸಿಬ್ಬಂದಿ ಸೇರಿದಂತೆ 128 ಪ್ರಯಾಣಿಕರು ಸಾವನ್ನಪ್ಪಿದ್ದರು.
    5) 2015ರ ಮೇ 8: ಗಿಲ್ಗಿಟ್‍ನಲ್ಲಿ ಪಾಕಿಸ್ತಾನ ಸೇನೆಯ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿತ್ತು. ಈ ಸಮಯದಲ್ಲಿ 8 ಜನರು ಪ್ರಾಣಬಿಟ್ಟಿದ್ದರು. ಇದರಲ್ಲಿ ನಾರ್ವೆ, ಫಿಲಿಪೈನ್ಸ್, ಇಂಡೋನೇಷ್ಯಾದ ರಾಯಭಾರಿಗಳು ಮತ್ತು ಮಲೇಷ್ಯಾ ಮತ್ತು ಇಂಡೋನೇಷ್ಯಾದ ರಾಯಭಾರಿಗಳ ಪತ್ನಿಯರು ಕೂಡ ಇದ್ದರು.
    6) 2016ರ ಡಿಸೆಂಬರ್ 7: ಚಿತ್ರಾಲ್‍ನಿಂದ ಇಸ್ಲಾಮಾಬಾದ್‍ಗೆ ಪ್ರಾಯಾಣಿಸುತ್ತಿದ್ದ ಪಿಐನ ಎಟಿಆರ್-42 ವಿಮಾನ ಪತನಗೊಂಡಿತ್ತು. ಅಪಘಾತದಲ್ಲಿ ಸಿಬ್ಬಂದಿ ಸೇರಿದಂತೆ 48 ಪ್ರಯಾಣಿಕರು ಸಾವನ್ನಪ್ಪಿದ್ದರು.

  • ಸಾಮೂಹಿಕ ಪ್ರಾರ್ಥನೆಗೆ ಅಡ್ಡಿಪಡಿಸಿದ ಪೊಲೀಸರನ್ನೇ ಹೊಡೆದ ಜನ

    ಸಾಮೂಹಿಕ ಪ್ರಾರ್ಥನೆಗೆ ಅಡ್ಡಿಪಡಿಸಿದ ಪೊಲೀಸರನ್ನೇ ಹೊಡೆದ ಜನ

    – ಏಳು ಜನರನ್ನ ಬಂಧಿಸಿದ ಪೊಲೀಸ್

    ಇಸ್ಲಾಮಾಬಾದ್: ಲಾಕ್‍ಡೌನ್ ನಡುವೆಯೂ ಸಾಮೂಹಿಕ ಪ್ರಾರ್ಥನೆ ನಡೆಸಿದ್ದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸರನ್ನೇ ಹೊಡೆದ ಘಟನೆ ಪಾಕಿಸ್ತಾನದ ಕರಾಚಿಯ ಲಿಯಾಕ್ವಾಟಾಬಾದ್ ಪ್ರದೇಶದಲ್ಲಿ ನಡೆದಿದೆ.

    ಹೆಮ್ಮಾರಿ ಕೊರೊನಾ ವೈರಸ್ ಭೀತಿಯಿಂದಾಗಿ ಪಾಕಿಸ್ತಾನದಲ್ಲಿ ಲಾಕ್‍ಡೌನ್ ಘೋಷಿಸಲಾಗಿದೆ. ಆದರೂ ಲಿಯಾಕ್ವಾಟಾಬಾದ್ ಪ್ರದೇಶದಲ್ಲಿ ಜನರು ಶುಕ್ರವಾರ ಸಾಮೂಹಿಕ ಪ್ರಾರ್ಥನೆ ನಡೆಸಿದ್ದರು. ಈ ವೇಳೆ ಪೊಲೀಸರು ಜನರನ್ನು ಚದುರಿಸಲು ಯತ್ನಿಸಿದಾಗ ಕೆಲ ಕಿಡಿಗೇಡಿಗಳು ಪೊಲೀಸರ ಮೇಲೆಯೇ ಕಲ್ಲು ತೂರಿದ್ದಾರೆ. ಅಷ್ಟೇ ಅಲ್ಲದೆ ಅಲ್ಲಿಂದ ಪರಾರಿಯಾಗುತ್ತಿದ್ದ ಪೊಲೀಸರ ಜೀಪ್ ಬೆನ್ನಟ್ಟಿ ದಾಳಿಗೆ ಮುಂದಾಗಿದ್ದರು.

    ಲಾಕ್‍ಡೌನ್ ಉಲ್ಲಂಘಿಸಿದ್ದಕ್ಕೆ ಮತ್ತು ಪೊಲೀಸರ ಮೇಲೆ ಹಲ್ಲೆಗೈದ 7 ಜನ ಮುಖಂಡರನ್ನು ಬಂಧಿಸಲಾಗಿದೆ. ಪಾಕಿಸ್ತಾನದಲ್ಲಿ 2,600ಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ತಗುಲಿದ್ದು, 40ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

  • ಮೂರನೇ ಮದ್ವೆ ಆಗಲು ಹಸೆಮಣೆ ಏರಿದ ಪತಿ – ಮಂಟಪದಲ್ಲೇ ಹಿಗ್ಗಾಮುಗ್ಗಾ ಥಳಿಸಿದ ಮೊದಲನೇ ಪತ್ನಿ

    ಮೂರನೇ ಮದ್ವೆ ಆಗಲು ಹಸೆಮಣೆ ಏರಿದ ಪತಿ – ಮಂಟಪದಲ್ಲೇ ಹಿಗ್ಗಾಮುಗ್ಗಾ ಥಳಿಸಿದ ಮೊದಲನೇ ಪತ್ನಿ

    ಇಸ್ಲಾಮಾಬಾದ್: ಇಬ್ಬರು ಪತ್ನಿಯರಿದ್ದರೂ ಅವರ ಕಣ್ತಪ್ಪಿಸಿ, 3ನೇ ಮದುವೆಯಾಗಲು ಹೊರಟಿದ್ದ ಪತಿರಾಯನಿಗೆ ಮೊದಲ ಪತ್ನಿ ಮದುವೆ ಮಂಟಪಕ್ಕೆ ಬಂದು ಹಿಗ್ಗಾಮುಗ್ಗಾ ಹೊಡೆದಿದ್ದಾಳೆ.

    ಪಾಕಿಸ್ತಾನದ ಕರಾಚಿಯ ನಜಿಮಾಬಾದಿನಲ್ಲಿ ಈ ಘಟನೆ ನಡೆದಿದೆ. ರಫೀಕ್ ಮೂರನೇ ಮದುವೆಗೆ ತಯಾರಾಗಿದ್ದ ಪತಿ. ಈಗಾಗಲೇ ಇಬ್ಬರು ಪತ್ನಿಯರಿದ್ದರೂ ಮೂರನೇ ಮದ್ವೆಗೆ ರಫಿಕ್ ಮುಂದಾಗಿದ್ದನು. ಈ ಬಗ್ಗೆ ಆತನ ಮೊದಲ ಪತ್ನಿ ಮದಿಹಾ ಹಾಗೂ ಆಕೆಯ ಕುಟುಂಬಸ್ಥರಿಗೆ ವಿಷಯ ತಿಳಿದಿದ್ದು, ತಕ್ಷಣ ಮದುವೆ ಮಂಟಪಕ್ಕೆ ನುಗ್ಗಿ ರಫೀಕ್‍ಗೆ ಥಳಿಸಿದ್ದಾರೆ. ಈ ಗಲಾಟೆಯಿಂದ ರಫೀಕ್‍ನ ಮೂರನೇ ಮದುವೆ ನಿಂತು ಹೋಗಿದೆ.

    ರಫೀಕ್ ನನಗೆ ತಿಳಿಯದಂತೆ ಕದ್ದು-ಮುಚ್ಚಿ ಎರಡನೇ ಮದುವೆ ಆಗಿದ್ದ. ಆದರೆ ಈ ವಿಚಾರ ನನಗೆ ತಿಳಿದು ನಾನು ಜಗಳವಾಡಿದ್ದಾಗ ಕ್ಷಮೆ ಕೇಳಿ ನನ್ನ ಜೊತೆಯೇ ಇರುತ್ತೇನೆ ಎಂದಿದ್ದನು. ಅವನ ಮಾತು ಕೇಳಿ ನಾನು ಕ್ಷಮಿಸಿ ಸುಮ್ಮನಿದ್ದೆ. ಈಗ ಮೂರನೇ ಮದುವೆ ಆಗಲು ಮುಂದಾಗಿದ್ದಾನೆ ಎಂದು ಮದಿಹಾ ಆರೋಪಿಸಿದ್ದಾಳೆ.

    ಆದರೆ ರಫೀಕ್ ಮಾತ್ರ, ನಾನು ಮದಿಹಾಗೆ ವಿಚ್ಛೇದನ ನೀಡಿದ್ದೇನೆ. ಇಬ್ಬರೂ ಮಾತನಾಡಿಕೊಂಡು ಬೇರೆ ಆಗಿದ್ದೇವೆ. ನಾನು ಮತ್ತೊಂದು ಮದುವೆ ಆಗೋಕೆ ಅವಳ ಒಪ್ಪಿಗೆ ಬೇಕಾಗಿಲ್ಲ. ವಿಚ್ಛೇದನ ಬಳಿಕ ಬೇರೆ ಮದುವೆ ಆಗಲು ನನಗೆ ಹಕ್ಕಿದೆ ಎಂದು ಆರೋಪವನ್ನು ತಳ್ಳಿಹಾಕಿದ್ದಾನೆ.

    ಸದ್ಯ ಮದುವೆ ಮಂಟಪದಲ್ಲಿ ನಡೆದ ರಂಪಾಟದ ದೃಶ್ಯಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಹಿಂದೂ ಎಂಬ ಕಾರಣಕ್ಕೆ ಹೀನಾಯವಾಗಿ ನೋಡ್ತಿದ್ರು – ಶೋಯೆಬ್ ಅಖ್ತರ್

    ಹಿಂದೂ ಎಂಬ ಕಾರಣಕ್ಕೆ ಹೀನಾಯವಾಗಿ ನೋಡ್ತಿದ್ರು – ಶೋಯೆಬ್ ಅಖ್ತರ್

    ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಆಡುತ್ತಿದ್ದ ವೇಳೆ ತಂಡದಲ್ಲಿ ಹಿಂದೂ ಕ್ರಿಕೆಟ್ ಆಟಗಾರರನ್ನು ಎಷ್ಟು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದರು ಎಂಬುವುದನ್ನು ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಬಹಿರಂಗ ಪಡಿಸಿದ್ದಾರೆ.

    ಪಾಕ್ ಕ್ರಿಕೆಟ್ ತಂಡದಲ್ಲಿ ಹೆಚ್ಚಿನ ಆಟಗಾರರು ಧರ್ಮ, ಜಾತಿ, ಪ್ರದೇಶದ ಆಧಾರದ ಮೇಲೆ ತಾರತಮ್ಯ ಮಾಡುತ್ತಿದ್ದರು. ಮಾಜಿ ಆಟಗಾರ ದಾನಿಶ್ ಕನೇರಿಯಾ ಅವರು ಸಾಕಷ್ಟು ತಾರತಮ್ಯಕ್ಕೆ ಒಳಗಾಗಿದ್ದಾರೆ. ಅವರೊಂದಿಗೆ ಕುಳಿತು ಊಟ ಮಾಡಲು ಕೂಡ ಆಟಗಾರರು ಇಷ್ಟ ಪಡುತ್ತಿರಲಿಲ್ಲ. ಇಡೀ ತಂಡ ಇದೇ ರೀತಿ ವರ್ತಿಸುತಿತ್ತು. ಅದರಲ್ಲೂ ಹೆಚ್ಚಿನ ಆಟಗಾರರು ಈ ರೀತಿ ಇದ್ದರು ಎಂದು ಅಖ್ತರ್ ಹೇಳಿದ್ದಾರೆ.

    ಯಾವಾಗಲೂ ನಿನ್ನ ಧರ್ಮ ಯಾವುದು? ಪ್ರದೇಶ ಯಾವುದು? ಎಂದು ಮಾತನಾಡುತ್ತಿದ್ದರು. ಕರಾಚಿ, ಪಂಜಾಬ್, ಪೇಜಾವರ್ ಪ್ರದೇಶಕ್ಕೆ ಸೇರಿದವರಾ ಎಂದು ಹೆಚ್ಚು ಚರ್ಚೆ ಮಾಡುತ್ತಿದ್ದರು. ಅದರಲ್ಲೂ ಮೂವರು ಆಟಗಾರರು ಹೆಚ್ಚು ಈ ರೀತಿ ವರ್ತಿಸುತ್ತಿದ್ದರು. ಹಿಂದೂ ಎಂಬ ಕಾರಣಕ್ಕೆ ದಾನಿಶ್ ರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದರು. ಆದರೆ ಅಂದು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯವನ್ನು ಆತನಿಂದಲೇ ಗೆಲುವು ಪಡೆದಿದ್ದೆವು. ಆತ ತಂಡದಲ್ಲಿರದಿದ್ದರೆ ಖಂಡಿತಾ ಪಂದ್ಯವನ್ನು ಕಳೆದುಕೊಳ್ಳುತ್ತಿದ್ದೆವು. ಆದರೆ ಆತನಿಗೆ ಲಭಿಸಬೇಕಾದ ಗೌರವ ಮಾತ್ರ ಲಭಿಸಲಿಲ್ಲ ಎಂದಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ದಾನಿಶ್ ಕನೇರಿಯಾ, ಅಖ್ತರ್ ಹೇಳಿರುವುದು ಸತ್ಯ. ಆತ ಒಬ್ಬ ಲೆಜೆಂಡ್ ಆಟಗಾರ. ನನಗೆ ಯಾವಾಗಲೂ ಬೆಂಬಲವಾಗಿ ನಿಂತಿರುತ್ತಿದ್ದ. ಆದರೆ ಆ ಸಮಯದಲ್ಲಿ ತಂಡದ ಇತರೆ ಆಟಗಾರರು ತಾರತಮ್ಯ ಮಾಡುತ್ತಿದ್ದರು. ಅಖ್ತರ್ ರೊಂದಿಗೆ ಕೆಲ ಆಟಗಾರರು ಕೂಡ ಬೆಂಬಲ ನೀಡಿದ್ದಾರೆ. ಶೀಘ್ರದಲ್ಲೇ ನನ್ನ ವಿರುದ್ದ ತಾರತಮ್ಯ ನಡೆಸಿದ ಆಟಗಾರರ ಹೆಸರುಗಳನ್ನು ಬಹಿರಂಗ ಪಡಿಸುತ್ತೇನೆ ಎಂದಿದ್ದಾರೆ. ಅಲ್ಲದೇ ಪಾಕ್ ಪರ ಆಡುವುದು ಅದೃಷ್ಟವಾಗಿದ್ದು, ಅದನ್ನು ಗೌರವಿಸುತ್ತೇನೆ ಎಂದಿದ್ದಾರೆ.

    ಪಾಕಿಸ್ತಾನ ಪರ ಅಂತರ್ ರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡಿದ 2ನೇ ಆಟಗಾರ ದಾನಿಶ್ ಆಗಿದ್ದು, ಅನಿಲ್ ದಲ್ಪತ್ ಮೊದಲ ಆಟಗಾರ. ದಾನಿಶ್ ಪಾಕ್ ಪರ 61 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 261 ವಿಕೆಟ್ ಪಡೆದಿದ್ದರೆ. ಏಕದಿನ ಕ್ರಿಕೆಟ್ ನಲ್ಲಿ 18 ಪಂದ್ಯಗಳಿಂದ 15 ವಿಕೆಟ್ ಗಳಿಸಿದ್ದಾರೆ.

  • ಜೀವನ ನಿರ್ವಹಣೆಗಾಗಿ ಚಾಲಕನಾದ ಪಾಕ್ ಕ್ರಿಕೆಟರ್

    ಜೀವನ ನಿರ್ವಹಣೆಗಾಗಿ ಚಾಲಕನಾದ ಪಾಕ್ ಕ್ರಿಕೆಟರ್

    ಕರಾಚಿ: ಪಾಕಿಸ್ತಾನದ ಪರ ದೇಶಿಯ ಕ್ರಿಕೆಟ್ ಟೂರ್ನಿಯಗಳಲ್ಲಿ ಆಡಿದ್ದ ತಂಡದ ಮಾಜಿ ಆಟಗಾರ ಸದ್ಯ ಜೀವನ ನಿರ್ವಹಣೆಗಾಗಿ ವ್ಯಾನ್ ಚಾಲಕರಾಗಿ ಕಾರ್ಯನಿರ್ವಹಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪಾಕ್ ಮಾಜಿ ಆಟಗಾರ ಫಜಲ್ ಸುಭಾನ್ ಸದ್ಯ ವ್ಯಾನ್ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಪಾಕ್ ಕ್ರಿಕೆಟ್‍ನಲ್ಲಿ ತೆಗೆದುಕೊಂಡ ಕೆಲ ನಿರ್ಣಯಗಳೇ ಆಟಗಾರರು ಈ ಸ್ಥಿತಿಗೆ ಬರಲು ಕಾರಣವಾಗಿದೆ ಎಂದು ಫಜಲ್ ಸುಭಾನ್ ಹೇಳಿದ್ದಾರೆ.

    ಪಾಕ್ ತಂಡದ ಪರ ಆಡಲು ಬಹಳಷ್ಟು ಶ್ರಮಪಟ್ಟೆ. ದೇಶಿಯ ಕ್ರಿಕೆಟ್ ಭಾಗವಾಗಿ ನಡೆಯುವ ಡಿಪಾರ್ಟ್ ಮೆಂಟಲ್ ಕ್ರಿಕೆಟ್‍ನಲ್ಲೂ ಆಡುತ್ತಿದೆ. ಇದರಿಂದ ನನಗೆ 1 ಲಕ್ಷ ರೂ. ಸಿಗುತ್ತಿತ್ತು. ಆದರೆ ಸದ್ಯ ಈ ಟೂರ್ನಿಗಳನ್ನು ರದ್ದು ಪಡಿಸಿದ ಕಾರಣ ನಾನು ಜೀವನ ನಿರ್ವಹಣೆಗಾಗಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

    ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದಂತೆ ಎಚ್ಚೆತ್ತ ಪಾಕ್ ಆಟಗಾರ ಮೊಹಮ್ಮದ್ ಹಫೀಜ್, ಪಾಕ್ ಕ್ರಿಕೆಟ್ ಮಂಡಳಿ ಕೈಗೊಂಡ ಹೊಸ ನಿಯಮಗಳ ಕಾರಣ ಹಲವು ಆಟಗಾರರು ಇದೇ ರೀತಿ ಬೀದಿಗೆ ಬಿದ್ದಿದ್ದಾರೆ. ಹೊಸ ನಿಯಮಗಳಿಂದ ಕೇವಲ 200 ಮಂದಿಗೆ ಮಾತ್ರ ಉಪಯೋಗವಿದ್ದು, ಸಾವಿರಾರರು ದೇಶಿ ಕ್ರಿಕೆಟ್ ಆಟಗಾರರು ಸಮಸ್ಯೆ ಎದುರಿಸಿದ್ದಾರೆ. ಇದರ ಹೊಣೆಯನ್ನು ಯಾರು ತೆಗೆದುಕೊಳ್ಳುತ್ತಾರೆ ಎಂದು ನನಗೆ ತಿಳಿದಿಲ್ಲ ಎಂದು ಪಾಕ್ ಕ್ರಿಕೆಟ್ ಮಂಡಳಿಯ ವಿರುದ್ಧ ಕಿಡಿಕಾರಿದ್ದಾರೆ.

  • ಪಾಕ್ ಆಟಗಾರರಿಗೆ ಬಿರಿಯಾನಿ ನೀಡಲ್ಲವೆಂದ ನೂತನ ಕೋಚ್

    ಪಾಕ್ ಆಟಗಾರರಿಗೆ ಬಿರಿಯಾನಿ ನೀಡಲ್ಲವೆಂದ ನೂತನ ಕೋಚ್

    ಕರಾಚಿ: ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಪಾಕಿಸ್ತಾನ ಕ್ರಿಕೆಟ್ ಆಟಗಾರರ ಫಿಟ್ನೆಸ್ ಬಗ್ಗೆ ತಂಡದ ಆಡಳಿತ ಮಂಡಳಿ ಎಚ್ಚೆತ್ತು ಕೊಂಡಿದ್ದು, ಆಟಗಾರರ ಮೆನುವಿನಲ್ಲಿ ಬಿರಿಯಾನಿ ನೀಡಲ್ಲ ಎಂದು ಹೇಳಿದೆ.

    ತಂಡದ ನೂತನ ಕೋಚ್ ಆಗಿ ಆಯ್ಕೆಯಾಗಿರುವ ಮಿಸ್ಬಾ ಉಲ್ ಹಕ್ ಈ ವಿಚಾರವನ್ನು ತಿಳಿಸಿದ್ದು, ಆಟಗಾರರ ಕಳಪೆ ಡಯಟ್ ನಿಂದ ಪ್ರದರ್ಶನ ಮೇಲೆ ಪ್ರಭಾವ ಉಂಟಾಗುತ್ತಿದೆ. ಆದ್ದರಿಂದ ಅವರಿಗೆ ಕಟ್ಟುನಿಟ್ಟಿನ ಡಯಟ್ ಪಾಲನೆ ಮಾಡಲು ಸೂಚನೆ ನೀಡಿದ್ದಾರೆ.

    ವಿಶ್ವಕಪ್ ಟೂರ್ನಿಯ ಸಂದರ್ಭದಲ್ಲಿ ಪಾಕ್ ತಂಡದ ಆಟಗಾರರ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡಿದ್ದವು. ಪಾಕ್ ಕ್ರಿಕೆಟ್ ಅಭಿಮಾನಿಗಳೇ ತಂಡದ ಆಟಗಾರರ ಫಿಟ್ನೆಸ್ ಕುರಿತು ಟೀಕೆ ಮಾಡಿ ಕಿಡಿಕಾರಿದ್ದರು. ಇದರಿಂದ ಆಟಗಾರರಿಗೆ ಸ್ಪಷ್ಟ ಸಂದೇಶ ರವಾನಿಸಿರುವ ಮಿಸ್ಬಾ, ರಾಷ್ಟ್ರೀಯ ತಂಡದ ಆಯ್ಕೆ ಸಂದರ್ಭದಲ್ಲಿ ಆಟಗಾರರ ಫಿಟ್ನೆಸ್ ಅಂಶವನ್ನು ಪರಿಗಣಿಸಲಾಗುತ್ತದೆ ಎಂದು ಹೇಳಿದ್ದಾರೆ. ಅಲ್ಲದೇ ಬಿರಿಯಾನಿ ಸೇರಿದಂತೆ ಸಿಹಿ ತಿನಿಸುಗಳನ್ನು ಆಟಗಾರರ ಮೆನುವಿನಿಂದ ದೂರ ಮಾಡಿ, ಬದಲಿಯಾಗಿ ಹಣ್ಣು ಹಾಗೂ ತರಕಾರಿಗಳ ಸೇವನೆ ಮಾಡಲು ಸಲಹೆ ನೀಡಿದ್ದಾರೆ.

    ಮಿಸ್ಬಾ ತಂಡದ ಕೋಚ್ ಆಗಿ ಆಯ್ಕೆಯಾದ ಬಳಿಕ ಶ್ರೀಲಂಕಾ ವಿರುದ್ಧ ಸರಣಿಯಲ್ಲಿ ಪಾಕ್ ತಂಡ ಭಾಗವಹಿಸುತ್ತಿದೆ. ತಲಾ ಮೂರು ಏಕದಿನ ಹಾಗೂ ಟಿ20 ಪಂದ್ಯಗಳ ಟೂರ್ನಿ ಇದಾಗಿದ್ದು, ಆ ಬಳಿಕ 2 ಟೆಸ್ಟ್ ಪಂದ್ಯಗಳ ಟೂರ್ನಿ ನಡೆಯಲಿದೆ.

  • 6 ವರ್ಷಗಳ ನಂತರ ಪಾಕಿಸ್ತಾನದ ಜೈಲಿನಿಂದ ಯುವಕ ವಾಪಸ್!

    6 ವರ್ಷಗಳ ನಂತರ ಪಾಕಿಸ್ತಾನದ ಜೈಲಿನಿಂದ ಯುವಕ ವಾಪಸ್!

    ಜೈಪುರ: ಆರು ವರ್ಷಗಳ ಕಾಲ ಪಾಕಿಸ್ತಾನದ ಕರಾಚಿ ಜೈಲಿನಲ್ಲಿದ್ದ ರಾಜಸ್ಥಾನದ ಬುಂಡಿ ಜಿಲ್ಲೆಯ ಯುವಕ ಭಾರತಕ್ಕೆ ಮರಳಿದ್ದಾನೆ.

    ತನಗೆ ಗೊತ್ತಿಲ್ಲದೆ ಜೂಗ್ರಾಜ್ ಭೀಲ್ ಪಾಕಿಸ್ತಾನದ ಗಡಿಭಾಗವನ್ನು ದಾಟಿದ್ದ ಕಾರಣ ಆತನನ್ನು ಬಂಧಿಸಲಾಗಿತ್ತು. ಆರು ವರ್ಷದ ಜೈಲುವಾಸದ ನಂತರ ರಾಜಸ್ಥಾನದ ಬುಂಡಿ ಜಿಲ್ಲೆಯಾ ರಾಮ್‍ಪುರಿಯಗೆ ವಾಪಸ್ ಬಂದಿದ್ದಾನೆ.

    ಆರು ವರ್ಷಗಳ ಹಿಂದೆ ಕಾಡಿನಲ್ಲಿರುವ ರಾಮದೇವರ ಪ್ರಾರ್ಥನೆಗೆ ಎಂದು ಜೂಗ್ರಾಜ್ ಭೀಲ್ ಹೋಗಿದ್ದ. ದೇವಾಲಯದ ದರ್ಶನ ಮುಗಿಸಿ ಕಾಡಿನಿಂದ ವಾಪಸ್ ಬರುವಾಗ ದಾರಿ ತಪ್ಪಿ ಭಾರತದ ಗಡಿ ದಾಟಿ ಪಾಕಿಸ್ತಾನಕ್ಕೆ ಹೋಗಿದ್ದಾನೆ. ಆ ಸಂದರ್ಭದಲ್ಲಿ ಪಾಕ್ ಪೊಲೀಸರು ಆತನನ್ನು ಬಂಧಿಸಿದ್ದಾರೆ.

    ಕಳೆದ ವರ್ಷದ ಜೂನ್ ತಿಂಗಳವರೆಗೆ ಆತ ಎಲ್ಲಿದ್ದಾನೆ ಎಂಬ ಸುಳಿವು ಸಿಕ್ಕಿರಲಿಲ್ಲ. ಆದರೆ ಅವನು ಪಾಕಿಸ್ತಾನದ ಕರಾಚಿ ಜೈಲಿನಲ್ಲಿ ಇದ್ದಾನೆ ಎಂದು ತಿಳಿದ ಬುಂಡಿ ಜಿಲ್ಲೆಯ ಸ್ಥಳೀಯರು ಕೇಂದ್ರ ಸರ್ಕಾರಕ್ಕೆ ಆತನನ್ನು ಬಿಡುಗಡೆ ಮಾಡಿಸುವಂತೆ ಒತ್ತಾಯ ಮಾಡಿದ್ದರು.

    ಅದರಂತೆ ಭಾರತ ಸರ್ಕಾರ ಜೂಗ್ರಾಜ್‍ನನ್ನು ಬಿಡುಗಡೆ ಮಾಡಿಸಿದೆ. ಸಾಮಾಜಿಕ ಕಾರ್ಯಕರ್ತ ಧರ್ಮೇಶ್ ಯಾದವ್ ಮತ್ತು ಜೂಗ್ರಾಜ್ ಭೀಲ್ ಅಣ್ಣ ಬಾಬುಲಾಲ್ ಭೀಲ್ ಅವರು ವಾಘಾ ಗಡಿಯಿಂದ ಆತನನ್ನು ಕರೆದುಕೊಂಡು ಬಂದಿದ್ದಾರೆ.

    ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಧರ್ಮೇಶ್ ಯಾದವ್ ಅವರು, ವಾಘಾ ಗಡಿಗೆ ಬಂದ ಜೂಗ್ರಾಜ್ ಕೇವಲ ಅಣ್ಣನನ್ನು ಮಾತ್ರ ಗುರುತಿಸಿದ್ದ. ಆತ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಮನೆಗೆ ಬಂದು 2 ದಿನವಾದರೂ ಒಂದು ಮಾತನ್ನು ಮಾತನಾಡಿರಲಿಲ್ಲ. ಈಗ ಸ್ವಲ್ಪ ಸುಧಾರಿಸಿದ್ದಾನೆ. ಆತ ಕ್ಷೇಮವಾಗಿ ಮರಳಿ ಬಂದಿರುವುದು ದೇವರ ಆಶೀರ್ವಾದ ಎಂದು ಹೇಳಿದ್ದಾರೆ.