Tag: Karachi Bakery

  • ಕರಾಚಿ ಮುಂದೊಂದು ದಿನ ಭಾರತದ ಭಾಗವಾಗಲಿದೆ – ಶಿವಸೇನೆಗೆ ಫಡ್ನವಿಸ್ ಟಾಂಗ್

    ಕರಾಚಿ ಮುಂದೊಂದು ದಿನ ಭಾರತದ ಭಾಗವಾಗಲಿದೆ – ಶಿವಸೇನೆಗೆ ಫಡ್ನವಿಸ್ ಟಾಂಗ್

    – ಪಾಕ್, ಬಾಂಗ್ಲಾ, ಪಾಕಿಸ್ತಾನ ಒಂದೇ ರಾಷ್ಟ್ರವಾಗಲಿ: ಎನ್‍ಸಿಪಿ ನಾಯಕ

    ಮುಂಬೈ: ಕರಾಚಿ ಬೇಕರಿ ವಿಚಾರದಲ್ಲಿ ಶಿವಸೇನಾ ಮತ್ತು ಬಿಜೆಪಿ ನಡುವೆ ಜಟಾಪಟಿ ಆರಂಭವಾಗಿದ್ದು, ಈ ವಿಚಾರವಾಗಿ ಮಾತನಾಡಿರುವ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕರಾಚಿ ಮುಂದೊಂದು ದಿನ ಭಾರತದ ಭಾಗವಾಗಲಿದೆ ಎಂದಿದ್ದಾರೆ.

    ಮಹಾರಾಷ್ಟ್ರದಲ್ಲಿರುವ ಕರಾಚಿ ಸ್ವೀಟ್ಸ್ ಮತ್ತು ಕರಾಚಿ ಬೇಕರಿಯ ಹೆಸರನ್ನು ಬದಲಿಸಿಕೊಳ್ಳಿ ಎಂದು ಶಿವಸೇನಾ ನಾಯಕ ನಿತಿನ್ ನಂದಗಾಂವ್ಕರ್ ಬೇಕರಿ ಮಾಲೀಕರಿಗೆ ಎಚ್ಚರಿಕೆ ನೀಡಿರುವ ವಿಡಿಯೋ ವೈರಲ್ ಆಗಿದೆ. ಈ ವಿಚಾರಕ್ಕೆ ಶಿವಸೇನಾ ನಾಯಕರಿಗೆ ಟಾಂಗ್ ಕೊಟ್ಟಿರುವ ದೇವೇಂದ್ರ ಫಡ್ನವಿಸ್ ನಾನು ಅಖಂಡ ಭಾರತದಲ್ಲಿ ನಂಬಿಕೆ ಇಟ್ಟಿರುವವರು, ಮುಂದೊಂದು ದಿನ ಕರಾಚಿ ಭಾರತದ ಭಾಗವಾಗಲಿದೆ ಎಂದಿದ್ದಾರೆ.

    ಫಡ್ನವಿಸ್ ಹೇಳಿಕೆ ವಿಚಾರವಾಗಿ ಮಾತನಾಡಿರುವ ಎನ್‍ಸಿಪಿ ನಾಯಕ ನವಾಬ್ ಮಲಿಕ್, ಫಡ್ನವಿಸ್ ಹೇಳಿದ ದಿನ ಬಂದೆ ಬರುತ್ತೆ. ಕರಾಚಿ ಭಾರತ ಭಾಗವಾಗುತ್ತೆ. ನಾವು ಹೇಳುವುದೇನೆಂದರೆ, ಭಾರತ, ಬಾಂಗ್ಲಾ ಮತ್ತು ಪಾಕ್ ವಿಲೀನಗೊಳ್ಳಬೇಕು. ಬಿಜೆಪಿ ಸರ್ಕಾರ ಈ ಮೂರು ರಾಷ್ಟ್ರಗಳನ್ನು ಒಂದೇ ರಾಷ್ಟ್ರವಾಗಿ ವಿಲೀನ ಮಾಡಿದರೆ ಅವರ ನಿರ್ಧಾರವನ್ನು ನಾವು ಸ್ವಾಗತ ಮಾಡುತ್ತೇವೆ ಎಂದು ಹೇಳಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ನಿತಿನ್ ನಂದಗಾಂವ್ಕರ್ ಅವರು, ಕರಾಚಿ ಬೇಕರಿ ಮಾಲೀಕರಿಗೆ ನಮಗೆ ಕರಾಚಿ ಎಂಬ ಹೆಸರು ಇಷ್ಟವಿಲ್ಲ. ಅದು ಪಾಕಿಸ್ತಾನದಲ್ಲಿ ಭಯೋತ್ಪಾದಕರ ಸಿಟಿಯಾದ ಕರಾಚಿಯ ಹೆಸರು. ಹೀಗಾಗಿ ನೀವು ಅಂಗಡಿಯ ಹೆಸರನ್ನು ಬದಲಿಸಿ. ನೀವು ಪಾಕಿಸ್ತಾನದಿಂದ ಬಂದಿರಬಹುದು, ಆದರೆ ಈಗ ಮುಂಬೈ ನಿಮ್ಮ ಊರು. ನೀವು ಬೇಕರಿಯ ಹೆಸರನ್ನು ಬದಲಿ, ನಾವು ನಿಮ್ಮ ವ್ಯಾಪಾರಕ್ಕೆ ಸಹಾಯ ಮಾಡುತ್ತೇವೆ. ನಾವು ಟೈಮ್ ಕೊಡುತ್ತೇವೆ ಮರಾಠಿಯಲ್ಲಿ ಯಾವುದಾದರೂ ಹೆಸರಿಡಿ ಎಂದು ಹೇಳಿದ್ದರು.

    ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಶಿವಸೇನಾ ಸಂಸದ ಸಂಜಯ್ ರಾವತ್, ಕಳೆದ 60 ವರ್ಷದಿಂದ ಕರಾಚಿ ಬೇಕರಿ ಮತ್ತು ಕರಾಚಿ ಸ್ವೀಟ್ಸ್ ಮುಂಬೈನಲ್ಲಿದೆ. ಅವರಿಗೂ ಮತ್ತು ಪಾಕಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ. ಬೇಕರಿಯ ಹೆಸರನ್ನು ಈಗ ಬದಲಿಸಿ ಎಂದು ಹೇಳಿವುದು ತರವಲ್ಲ. ಕರಾಚಿ ಬೇಕರಿಯ ಹೆಸರನ್ನು ಬದಲಿಸಿ ಎಂಬುದು ಶಿವಸೇನಾದ ಅಧಿಕೃತ ನಿಲುವಲ್ಲ ಎಂದಿದ್ದಾರೆ. ಇದರ ಜೊತೆಗೆ ಫಡ್ನವಿಸ್ ಹೇಳಿಕೆಗೆ ಟಾಂಗ್ ಕೊಟ್ಟಿದ್ದು, ಮೊದಲು ಪಾಕ್ ಅಕ್ರಮಿತ ಕಾಶ್ಮೀರವನ್ನು ಭಾರತಕ್ಕೆ ಸೇರಿಸಿ. ನಂತರ ಕರಾಚಿಯನ್ನು ಭಾರತದ ಭಾಗವಾಗುವ ವಿಚಾರದ ಬಗ್ಗೆ ಮಾತನಾಡಿ ಎಂದಿದ್ದಾರೆ.