Tag: kapata nataka pathradhari

  • ಕಪಟ ನಾಟಕ ಪಾತ್ರಧಾರಿ: ಸಸ್ಪೆನ್ಸ್ ಕಥೆಯ ಥ್ರಿಲ್ಲಿಂಗ್ ಸವಾರಿ!

    ಕಪಟ ನಾಟಕ ಪಾತ್ರಧಾರಿ: ಸಸ್ಪೆನ್ಸ್ ಕಥೆಯ ಥ್ರಿಲ್ಲಿಂಗ್ ಸವಾರಿ!

    ಹುಲಿರಾಯ ಖ್ಯಾತಿಯ ಬಾಲು ನಾಗೇಂದ್ರ ನಾಯಕನಾಗಿ ನಟಿಸಿರುವ ಕಪಟ ನಾಟಕ ಪಾತ್ರಧಾರಿ ಚಿತ್ರ ತೆರೆಕಂಡಿದೆ. ಶೀರ್ಷಿಕೆಯೊಂದಿಗೇ ಗಮನ ಸೆಳೆದು, ಆ ನಂತರದಲ್ಲಿ ಹಾಡುಗಳು ಮತ್ತು ಟ್ರೇಲರ್ ಮೂಲಕ ಸಖತ್ ಕ್ರೇಜ್ ಸೃಷ್ಟಿಸಿದ್ದ ಈ ಚಿತ್ರ ನೋಡುಗರನ್ನೆಲ್ಲ ಕಾಡುವಂತೆ, ಎಲ್ಲ ವರ್ಗದ ಪ್ರೇಕ್ಷಕರೂ ಸಂಪೂರ್ಣವಾಗಿ ತೃಪ್ತರಾಗುವಂತೆ ಅಚ್ಚುಕಟ್ಟಾಗಿಯೇ ಮೂಡಿ ಬಂದಿದೆ.

    ಯಾವ ಥರದ ನಿರೀಕ್ಷೆಗಳೆದ್ದಿದ್ದವೋ ಅದಕ್ಕೆ ತಕ್ಕುದಾದ ಕಂಟೆಂಟಿನೊಂದಿಗೆ ಮೂಡಿ ಬಂದಿರೋ ಈ ಚಿತ್ರ ಮಧ್ಯಮ ವರ್ಗದ ಹುಡುಗನೊಬ್ಬನ ಭೂಮಿಕೆಯಲ್ಲಿ ತೆರೆದುಕೊಳ್ಳುವ ಸಸ್ಪೆನ್ಸ್ ಕಥೆಯೊಂದಿಗೆ ಥ್ರಿಲ್ಲಿಂಗ್ ಜರ್ನಿ ಮಾಡಿಸುವಷ್ಟು ಪರಿಣಾಮಕಾರಿಯಾಗಿ ಮೂಡಿ ಬಂದಿದೆ.

    ಇಲ್ಲಿರೋದು ಮಧ್ಯಮ ವರ್ಗದ ಹುಡುಗನೊಬ್ಬನ ಕಥೆ. ಅದು ಈ ವರ್ಗದ ಬಹುತೇಕ ಯುವಕರ ಪ್ರಾತಿನಿಧಿಕ ಕಥೆಯಂತೆಯೇ ಕಾಣಿಸುತ್ತದೆ. ಅದಕ್ಕೆ ಮತ್ತೂ ಒಂದಷ್ಟು ರೋಚಕ ಅಂಶಗಳನ್ನು ಸೇರಿಸಿ ಸಿನಿಮಾ ಸ್ಪರ್ಶ ನೀಡಿರುವಲ್ಲಿಯೇ ನಿರ್ದೇಶಕ ಕ್ರಿಶ್ ಅವರ ಕಸುಬುದಾರಿಕೆ ಎದ್ದು ಕಾಣಿಸುತ್ತದೆ. ಇದಕ್ಕಾಗಿ ಪ್ರತಿ ಪಾತ್ರಗಳನ್ನು ದುಡಿಸಿಕೊಂಡಿರೋದರಲ್ಲಿಯೇ ಇಡೀ ಸಿನಿಮಾದ ನಿಜವಾದ ಶಕ್ತಿಯೂ ಅಡಗಿದೆ. ಬಾಲು ನಾಗೇಂದ್ರ ಪ್ರತಿಭಾವಂತ ನಟ ಅನ್ನೋದು ಇಲ್ಲಿನ ಕೃಷ್ಣ ಎಂಬ ಪಾತ್ರದ ಮೂಲಕ ಮತ್ತೊಮ್ಮೆ ಸಾಬೀತಾಗಿದೆ.

    ಬಾಲು ನಾಗೇಂದ್ರ ಕೃಷ್ಣ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ಅದು ಯಾವ ಕೆಲಸವನ್ನೂ ನೆಟ್ಟಗೆ ಮಾಡಲಾಗದೆ ಸದಾ ಅಪ್ಪನಿಂದ ಉಗಿಸಿಕೊಳ್ಳುವ ಪಾತ್ರ. ಹೀಗಿರುವ ಯುವ ಕೃಷ್ಣನ ಮುಂದೆ ಅನಿವಾರ್ಯತೆಯೊಂದು ಸೃಷ್ಟಿಯಾಗುತ್ತೆ. ಅದರ ಭಾಗವಾಗಿ ಆಟೋ ಓಡಿಸಿ ಬದುಕೋ ನಿರ್ಧಾರ ತಳೆಯುತ್ತಾನೆ. ಈ ಹಾದಿ ಪ್ರೀತಿ ಪ್ರೇಮಗಳೊಂದಿಗೆ ರೊಮ್ಯಾಂಟಿಕ್ ಮೂಡಿಗೆ ಜಾರಿಸುತ್ತಲೇ ಅಲ್ಲೊಂದು ಹಾರರ್ ಸಸ್ಪೆನ್ಸ್ ಕಥನ ತೆರೆದುಕೊಳ್ಳುತ್ತೆ. ಆತನ ಆಟೋ ಹತ್ತಲೇ ಹಿಂದೆ ಮುಂದೆ ನೋಡುವಂಥಾ ನಿರ್ಮಾಣವಾಗುತ್ತೆ. ಹಾಗಾದರೆ ಆಟೋದೊಳಗಾಗೋ ಚಿತ್ರವಿಚಿತ್ರ ಅನುಭವದ ಸೂತ್ರಧಾರರ್ಯಾರು? ಅದರಲ್ಲಿ ಪಾತ್ರಧಾರಿಗಳ್ಯಾರೆಂಬುದಕ್ಕಿಲ್ಲಿ ರೋಚಕ ಉತ್ತರವೇ ಕಾದಿದೆ.

    ನಿರ್ದೇಶಕ ಕ್ರಿಶ್ ಹಲವಾರು ಟ್ವಿಸ್ಟ್ ಗಳನ್ನು ಒಳಗೊಂಡಿರುವ ಈ ಕಥೆಯನ್ನು ಎಲ್ಲಿಯೂ ಸಿಕ್ಕಾಗದಂತೆ ನಿರ್ವಹಿಸಿದ್ದಾರೆ. ಬಾಲು ನಾಗೇಂದ್ರ, ಸಂಗೀತಾ ಭಟ್ ಸೇರಿದಂತೆ ಇಡೀ ಪಾತ್ರವರ್ಗ ತಮ್ಮ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದೆ. ಅದು ಈ ಸಿನಿಮಾದೊಂದು ಶಕ್ತಿಯಾದರೆ, ಛಾಯಾಗ್ರಹಣ, ಸಂಗೀತ ಸೇರಿದಂತೆ ಎಲ್ಲ ವಿಭಾಗಗಳೂ ಇದರಲ್ಲಿ ಭಾಗಿಯಾಗುವಂತಿವೆ. ಒಟ್ಟಾರೆಯಾಗಿ ಇದೊಂದು ಅಚ್ಚುಕಟ್ಟಾದ ವಿಭಿನ್ನ ಚಿತ್ರ. ಕುಟುಂಬ ಸಮೇತರಾಗಿ ನೋಡಿ ಎಂಜಾಯ್ ಮಾಡಲು ಅಡ್ಡಿಯಿಲ್ಲ.

    ರೇಟಿಂಗ್ 3.5 / 5

  • ಕಪಟನಾಟಕ ಪಾತ್ರಧಾರಿಯಾಗಿ ಹಾಡಾದ ಹುಲಿರಾಯ!

    ಕಪಟನಾಟಕ ಪಾತ್ರಧಾರಿಯಾಗಿ ಹಾಡಾದ ಹುಲಿರಾಯ!

    ಬೆಂಗಳೂರು: ಒಂದು ಸಿನಿಮಾ ಹಿಟ್ ಆಗುತ್ತಲೇ ಅದರಲ್ಲಿ ನಟಿಸಿದ್ದ ನಾಯಕ, ನಾಯಕಿಯ ಮುಂದಿನ ಚಿತ್ರ ಯಾವುದೆಂಬುದರ ಬಗ್ಗೆ ಸಹಜವಾಗಿಯೇ ಪ್ರೇಕ್ಷಕರಲ್ಲೊಂದು ಕುತೂಹಲವಿರುತ್ತದೆ. ಅದೇ ರೀತಿ ಅರವಿಂದ್ ಕೌಶಿಕ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಹುಲಿರಾಯ ಚಿತ್ರದ ನಾಯಕ ಬಾಲು ನಾಗೇಂದ್ರ ಬಗ್ಗೆಯೂ ಪ್ರೇಕ್ಷಕರಲ್ಲಿ ಅಂಥಾದ್ದೊಂದು ಕುತೂಹಲ ಇದ್ದೇ ಇತ್ತು. ಆದರೆ ಕೊಂಚ ತಡವಾಗಿಯಾದರೂ ಬಾಲು ಭರ್ಜರಿಯಾಗಿಯೇ ಎಂಟ್ರಿ ಕೊಟ್ಟಿದ್ದಾರೆ. ಅವರೀಗ ಕಪಟನಾಟಕ ಪಾತ್ರಧಾರಿಯಾಗಿ ವಾಪಾಸಾಗಿದ್ದಾರೆ. ಇದೀಗ ಈ ಚಿತ್ರದ ರೊಮ್ಯಾಂಟಿಕ್ ಲಿರಿಕಲ್ ವಿಡಿಯೋವೊಂದು ಬಿಡುಗಡೆಯಾಗಿದೆ.

    ಕಪಟನಾಟಕ ಪಾತ್ರಧಾರಿ ಕ್ರಿಶ್ ನಿರ್ದೇಶನದ ಚಿತ್ರ. ಇದು ಆರಂಭವಾದಾಗ ಟೈಟಲ್ ಮೂಲಕವೇ ಒಂದಷ್ಟು ಸುದ್ದಿಯಾಗಿತ್ತು. ಆದರೆ ಆ ಬಳಿಕ ಯಾವ ಗದ್ದಲವೂ ಇಲ್ಲದಂತೆ ಅಚ್ಚುಕಟ್ಟಾಗಿ ಚಿತ್ರೀಕರಣ ಮುಗಿಸಿಕೊಂಡಿದ್ದ ಈ ಚಿತ್ರದ ಲಿರಿಕಲ್ ವೀಡಿಯೋ ಸಾಂಗ್ ಈಗ ಬಿಡುಗಡೆಯಾಗಿದೆ. ಯಾಕೆ ಅಂತ ಗೊತ್ತಿಲ್ಲ ಕಂಡ್ರಿ, ನನ್ನ ನೋಡಿ ನಕ್ಬಿಟ್ಳು ಸುಂದ್ರಿ ಎಂಬ ಈ ಹಾಡಿದೆ ನದಾಫ್ ಸಂಗೀತ ನೀಡಿದ್ದರೆ ವೇಣು ಹಸ್ರಳ್ಳಿ ಸಾಹಿತ್ಯ ಬರೆದಿದ್ದಾರೆ. ಈ ಹಾಡು ಹರಿಚರಣ್ ಶೇಷಾದ್ರಿಯವರ ಧ್ವನಿಯಲ್ಲಿ ಮೋಹಕವಾಗಿ ಮೂಡಿ ಬಂದಿದೆ. ಸದ್ಯಕ್ಕೆ ಕಪಟನಾಟಕ ಪಾತ್ರಧಾರಿ ಈ ರೊಮ್ಯಾಂಟಿಕ್ ಹಾಡಿನ ಮೂಲಕವೇ ಜನಮನ ಸೆಳೆದುಕೊಂಡಿದೆ.

    ಕಪಟನಾಟಕ ಪಾತ್ರಧಾರಿಯಲ್ಲಿಯೂ ಕೂಡಾ ಬಾಲು ನಾಗೇಂದ್ರ ತಮ್ಮ ನಟನೆಯ ಕಸುವಿಗೆ ತಕ್ಕುದಾದ ಪಾತ್ರದಲ್ಲಿಯೇ ನಟಿಸಿದ್ದಾರಂತೆ. ಹುಲಿರಾಯ ಚಿತ್ರದ ನಂತರ ಬಂದಿದ್ದ ಒಂದಷ್ಟು ಅವಕಾಶಗಳ ನಡುವೆ ಅವರು ಆರಿಸಿಕೊಂಡಿದ್ದು ಕ್ರಿಶ್ ಹೇಳಿದ್ದ ಕಥೆಯನ್ನು. ಇಲ್ಲಿ ಆಟೋ ಡ್ರೈವರ್ ಆಗಿ ಬಾಲು ನಟಿಸಿದ್ದಾರೆಂಬ ಹೊರತಾಗಿ ಕಥೆಯ ಬಗ್ಗೆ ಸಣ್ಣ ಸುಳಿವೂ ಹೊರಬಿದ್ದಿಲ್ಲ. ಆದರೆ ಕಥೆ ತೀರಾ ಭಿನ್ನವಾಗಿರೋದಂತೂ ಸತ್ಯವಂತೆ. ಹುಲಿರಾಯ ಚಿತ್ರದಲ್ಲಿಯೂ ಆ ಪಾತ್ರವನ್ನು ಆವಾಹಿಸಿಕೊಂಡು ನಟಿಸಿರೋ ಬಾಲು ನಾಗೆಂದ್ರ ಪಾಲಿಗೆ ಕಪಟನಾಟಕ ಪಾತ್ರಧಾರಿ ದೊಡ್ಡ ಮಟ್ಟದಲ್ಲಿಯೇ ಬ್ರೇಕ್ ನೀಡೋ ಸೂಚನೆಗಳಿವೆ.