Tag: Kapala Hill

  • ಕಪಾಲ ಬೆಟ್ಟದಲ್ಲಿ ಜಾಗರಣೆಗೆ ಅವಕಾಶ ನೀಡಿ: ಹಿಂದೂ ಜಾಗೃತಿ ಸೇನೆ

    ಕಪಾಲ ಬೆಟ್ಟದಲ್ಲಿ ಜಾಗರಣೆಗೆ ಅವಕಾಶ ನೀಡಿ: ಹಿಂದೂ ಜಾಗೃತಿ ಸೇನೆ

    ರಾಮನಗರ: ಕನಕಪುರ ತಾಲೂಕಿನ ಹಾರೋಬೆಲೆಯ ಕಪಾಲ ಬೆಟ್ಟದ ಏಸು ಪ್ರತಿಮೆ ವಿವಾದ ರಾಜ್ಯದಾದ್ಯಂತ ಸಾಕಷ್ಟು ಸದ್ದು ಮಾಡಿ, ಇದೀಗ ತಕ್ಕಮಟ್ಟಿಗೆ ಸೈಲೆಂಟ್ ಆಗಿದೆ. ಆದರೆ ವರದಿ ಕೇಳಿದ್ದ ಕಂದಾಯ ಸಚಿವರು ಇನ್ನೂ ಕೂಡಾ ವರದಿಯನ್ನ ಪಡೆಯುವ ಮನಸ್ಸು ಮಾತ್ರ ಮಾಡಿಲ್ಲ. ಇದೀಗ ಕಪಾಲ ಬೆಟ್ಟದ ವಿಚಾರಕ್ಕೆ ಮತ್ತೆ ಕಿಚ್ಚು ಹತ್ತಿಕೊಳ್ಳುವ ಲಕ್ಷಣಗಳು ಜಿಲ್ಲೆಯಲ್ಲಿ ಕಾಣಿಸಿಕೊಳ್ತಿದ್ದು, ಶಿವರಾತ್ರಿ ಜಾಗರಣೆ ಮಾಡಲು ಅವಕಾಶ ನೀಡುವಂತೆ ಹಿಂದೂಪರ ಸಂಘಟನೆ ಕಾರ್ಯಕರ್ತರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

    ಹಿಂದೂ ಜಾಗೃತಿ ಸೇನೆಯ ಕಾರ್ಯಕರ್ತರು ಇದೇ ಫೆಬ್ರವರಿ 21 ರಂದು ಶಿವರಾತ್ರಿ ವಿಶೇಷವಾಗಿ ಕಪಾಲ ಬೆಟ್ಟದಲ್ಲಿ ಜಾಗರಣ ಮಾಡಲು ಅನುಮತಿ ನೀಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾರ ಬಳಿ ಮನವಿ ಪತ್ರ ಸಲ್ಲಿಸಿದ್ದಾರೆ.

    ಶಿವರಾತ್ರಿ ಹಿಂದೂಗಳ ಪ್ರಮುಖ ಹಬ್ಬವಾಗಿದೆ. ಶಿವರಾತ್ರಿಯ ಅಂಗವಾಗಿ ಜಾಗರಣೆಯನ್ನ ಕಪಾಲಿ ಬೆಟ್ಟದಲ್ಲಿ ಆಯೋಜಿಸಲು ಅನುಮತಿ ಕೋರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದೇವೆ. ಕಾಲಭೈರವೇಶ್ವರನ ಸ್ವರೂಪವಾದ ಶ್ರೀಮುನೇಶ್ವರ ಸ್ವಾಮಿಯ ನಾಮಸ್ಮರಣೆ, ಜಪತಪ, ಭಜನೆ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಸೇನೆಯ ಶಿವು ಭಗತ್ ತಿಳಿಸಿದರು.

    ಸಂಘಟನೆಯ ಮನವಿಯನ್ನ ಸ್ವೀಕರಿಸಿದ್ದು, ಜಾಗರಣೆ ವಿಚಾರವಾಗಿ ಅನುಮತಿ ಪಡೆಯುವುದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕಳುಹಿಸಿಕೊಡುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಜಾಗರಣೆಗೆ ಅನುಮತಿ ನೀಡದಿದ್ದರೂ ಸಹ ಶಿವರಾತ್ರಿ ಜಾಗರಣೆಯನ್ನು ಕಪಾಲ ಬೆಟ್ಟದಲ್ಲಿಯೇ ಮಾಡಿಯೇ ತೀರುವುದಾಗಿ ಹಿಂದೂ ಜಾಗೃತಿ ಸೇನೆಯ ಕಾರ್ಯಕರ್ತರು ಹೇಳಿದ್ದಾರೆ.

  • ಕನಕಪುರದಲ್ಲಿ ಇಂದು ಕೇಸರಿ ಕಹಳೆ

    ಕನಕಪುರದಲ್ಲಿ ಇಂದು ಕೇಸರಿ ಕಹಳೆ

    ಬೆಂಗಳೂರು: ಟ್ರಬಲ್ ಶೂಟರ್, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಸ್ವಕ್ಷೇತ್ರದಲ್ಲೇ ಇಂದು ನಿಜವಾದ ಅಗ್ನಿ ಪರೀಕ್ಷೆ ಎದುರಾಗಿದೆ. ರಿಪಬ್ಲಿಕ್ ಆಫ್ ಕನಕಪುರ ಎನ್ನುತ್ತಿದ್ದವರಿಗೆ ಇಂದು ಸಂಕಷ್ಟ ಎದುರಾಗಲಿದೆ.

    ಹಾರೋಬೆಲೆಯ ಕಪಾಲ ಬೆಟ್ಟದಲ್ಲಿ ಏಸು ಮೂರ್ತಿ ಸ್ಥಾಪನೆ ವಿರೋಧಿಸಿ ಹಿಂದು ಜಾಗರಣ ವೇದಿಕೆ ಇಂದು ಕನಕಪುರ ಚಲೋ ಪ್ರತಿಭಟನೆಗೆ ಕರೆಕೊಟ್ಟಿದೆ. ಕನಕಪುರದ ಅಯ್ಯಪ್ಪ ಸ್ವಾಮಿ ದೇವಸ್ಥಾನದಿಂದ ಚನ್ನಬಸಪ್ಪ ವೃತ್ತದವರೆಗೆ ಕಾಲ್ನಡಿಗೆ ಜಾಥಾ ನಡೆಯಲಿದೆ ಅನಂತರ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಲಿದೆ. ಆದರೆ ಇದು ಕೇವಲ ಏಸು ಪ್ರತಿಮೆ ವಿರೋಧಿಸಿ ನಡೆಯುವ ಜಾಥಾ ಅಲ್ಲ ಅನ್ನೋದೆ ಡಿಕೆಶಿಗೆ ತಲೆನೋವು ತಂದಿಟ್ಟಿದೆ.

    ಬಿಜೆಪಿ ಇದೇ ಅವಕಾಶವನ್ನ ಬಳಸಿಕೊಂಡು ಕನಕಪುರದ ಕೋಟೆ ಮೇಲೆ ಕೇಸರಿ ಬಾವುಟ ಹಾರಿಸುವ ಪ್ರಯತ್ನ ಆರಂಭಿಸಿದೆ. ಹಿಂದು ಜಾಗರಣಾ ವೇದಿಕೆಯ ಪ್ರತಿಭಟನೆಯಲ್ಲಿ ಅನೇಕ ಬಿಜೆಪಿ ನಾಯಕರು ಸಹಾ ಭಾಗವಹಿಸಲಿದ್ದಾರೆ.

    ಇದು ಕಪಾಲ ಬೆಟ್ಟದ ಏಸು ಪ್ರತಿಮೆ ವಿವಾದವಾಗಿದ್ದರೆ ಡಿ.ಕೆ.ಶಿವಕುಮಾರ್ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಇದನ್ನೇ ಬಳಸಿಕೊಂಡು ಬಿಜೆಪಿ ಕನಕಪುರ ಕೋಟೆಗೆ ಲಗ್ಗೆ ಇಡಲು ಮುಂದಾಗಿದೆ. ಈ ಬೆಳವಣಿಗೆ ಇದುವರೆಗೆ ಕನಕಪುರಕ್ಕೆ ನಾನೇ ಕಿಂಗ್ ಅಂದುಕೊಂಡಿದ್ದ ಡಿ.ಕೆ.ಶಿವಕುಮಾರ್ ನೆಮ್ಮದಿ ಕೆಡಿಸಿದಂತಾಗಿದೆ.

  • ಕೆಂಪೇಗೌಡ್ರ ಮಗ ಅಂತೀರಲ್ಲ, ಹಾಗೇ ನಾನು ಕಾಳೇಗೌಡ್ರ ಮೊಮ್ಮಗ- ಡಿಕೆಶಿಗೆ ಸ್ವಾಮೀಜಿ ಟಾಂಗ್

    ಕೆಂಪೇಗೌಡ್ರ ಮಗ ಅಂತೀರಲ್ಲ, ಹಾಗೇ ನಾನು ಕಾಳೇಗೌಡ್ರ ಮೊಮ್ಮಗ- ಡಿಕೆಶಿಗೆ ಸ್ವಾಮೀಜಿ ಟಾಂಗ್

    ರಾಮನಗರ: ಕನಕಪುರಕ್ಕೂ ಕಾಳಿಗೂ ಏನ್ ಸಂಬಂಧ ಅಂತೀರಾ, ನಾನು ಕನಕಪುರದ ಮೊಮ್ಮಗ. ಮಾಜಿ ಮಂತ್ರಿಗಳೇ ನಾನು ಕನಕಪುರದ ಕೆಂಪೇಗೌಡರ ಮಗ ಅಂತೀರಲ್ಲ, ಹಾಗೇ ಕಾಳೇಗೌಡರ ಮೊಮ್ಮಗ ನಾನು. ಹೆದರಿಸಬೇಡಿ ಇಲ್ಲಿ ಹೆದರಿಕೊಳ್ಳುವವರು ಯಾರೂ ಇಲ್ಲ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಗೆ ರಾಮನಗರದಲ್ಲಿ ಕಾಳಿಮಠದ ರಿಷಿ ಕುಮಾರ ಸ್ವಾಮೀಜಿ ಟಾಂಗ್ ನೀಡಿದ್ದಾರೆ.

    ಕನಕಪುರ ತಾಲೂಕಿನ ಹಾರೋಬೆಲೆಯ ಕಪಾಲ ಬೆಟ್ಟದಲ್ಲಿ ನಿರ್ಮಾಣವಾಗುತ್ತಿರುವ ಏಸು ಪ್ರತಿಮೆ ವಿರೋಧಿಸಿದ್ದಾರೆ. ಹಾಗೆಯೇ ಪ್ರತಿಮೆಗಾಗಿ ಕೆತ್ತನೆಯಾಗುತ್ತಿರುವ ಕಪಾಲ ಬೆಟ್ಟದ ಮೇಲಿರುವ ಕಲ್ಲುಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಹಿಂದೂ ಜಾಗೃತಿ ಸೇನೆ ಕಾರ್ಯಕರ್ತರ ಜೊತೆ ಅವರು ರಾಮನಗರ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

    ಇದೇ ವೇಳೆ ಮಾತನಾಡಿದ ಸ್ವಾಮೀಜಿ, ಕನಕಪುರ ನಿಮ್ಮದಲ್ಲ, ರಾಮನಗರ ನಿಮ್ಮದಲ್ಲ, ಕರ್ನಾಟಕ ನಿಮ್ಮದಲ್ಲ. ನಮ್ಮದೂ ರಾಮನಗರನೇ, ನಾವು ಕೂಡ ಕರ್ನಾಟಕದವರೇ. ತಪ್ಪು ನಮ್ಮಿಂದ ಆಗಿಲ್ಲ. ಇಂತಹ ಎಷ್ಟೋ ಬೆಟ್ಟಗಳನ್ನು ಹೊಡೆದಿರುವಂತವರೆಲ್ಲ ಬೆಟ್ಟದ ಮೇಲೆ ಇನ್ನೊಂದು ಇಡುವುದಕ್ಕೆ ಹೋಗ್ತಾ ಇದ್ದೀರಾ. ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಂದು ಪರೋಕ್ಷವಾಗಿ ಮಾಜಿ ಸಚಿವ ಡಿಕೆ ಶಿವಕುಮಾರ್‍ರವರು ಬೆಟ್ಟವನ್ನೇ ಕರಗಿಸಿ ಗಣಿಗಾರಿಕೆ ನಡೆಸಿದ್ದಾರೆ. ಇದೀಗ ಮತ್ತೊಂದು ಬೆಟ್ಟದ ಮೇಲೆ ಏಸುವಿನ ಪ್ರತಿಮೆ ಕೂರಿಸಲು ಹೋಗ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಕಳೆದ ಡಿಸೆಂಬರ್ 31 ರಂದು ಕಪಾಲ ಬೆಟ್ಟಕ್ಕೆ ಭೇಟಿ ನೀಡಿದ ಬಳಿಕ ಅಪಪ್ರಚಾರ ಹಾಗೂ ದೂರುಗಳನ್ನು ನೀಡುವ ಮೂಲಕ ಹೆದರಿಸಲು ಪ್ರಯತ್ನಿಸ್ತಿದ್ದೀರಿ. ಸೋಷಿಯಲ್ ಮೀಡಿಯಾಗಳಲ್ಲಿ ಮೋದಿ ವಿರುದ್ಧ ಯಡಿಯೂರಪ್ಪ ವಿರುದ್ಧ ಮಾತನಾಡಿದ್ದಾರೆ ಎಂದು ಅಪಪ್ರಚಾರ ಮಾಡ್ತಿದ್ದೀರಿ. ಆದರೆ ರಿಷಿಕುಮಾರ ಸ್ವಾಮೀಜಿ ಮೊದಲಿನಂತಿಲ್ಲ ಹೆದರಿಸಬೇಡಿ, ಹೆದರುವವರು ಯಾರೂ ಇಲ್ಲ ಎಂದು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು.

    ಕಪಾಲ ಬೆಟ್ಟದಲ್ಲಿ ಅಕ್ರಮವಾಗಿ ಈಗಾಗಲೇ ರಸ್ತೆ, ವಿದ್ಯುತ್, ಕೊಳವೆ ಬಾವಿ ಸಂಪರ್ಕ ನೀಡಲಾಗಿದೆ. ಸದ್ಯಕ್ಕೆ ಕಪಾಲ ಬೆಟ್ಟದ ಮೇಲೆ ನಡೆಯುತ್ತಿರುವ ಕಲ್ಲು ಕೆತ್ತನೆಯ ಕಾರ್ಯದ ಕಲ್ಲುಗಳನ್ನು ಹಾಗೂ ಬೆಟ್ಟದ ಮೇಲಿರಿಸಿರುವ ಕಲ್ಲು ಕೊರೆಯುವ ಮಷಿನ್‍ಗಳನ್ನು 19 ನೇ ತಾರೀಕಿನ ಒಳಗಾಗಿ ತೆರವುಗೊಳಿಸಬೇಕು. ಇಲ್ಲದಿದ್ರೆ ರಾಮನಗರ ತಾಲೂಕಿನ ಬಿಡದಿ ಸಮೀಪವಿರುವ ಕೋತಿ ಆಂಜನೇಯ ದೇವಾಲಯದಿಂದ ಕಪಾಲ ಬೆಟ್ಟಕ್ಕೆ ಪಾದಯಾತ್ರೆ ನಡೆಸುತ್ತೇವೆ. ಪಾದಯಾತ್ರೆಯಲ್ಲಿ ಅನೇಕ ಸಾಧು-ಸಂತರು, ಉತ್ತರ ಕರ್ನಾಟಕದ ಸಾಧು-ಸಂತರು ಅನೇಕ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಭಾಗವಹಿಸ್ತಾರೆ. ಆ ದಿನ ಏನಾದ್ರೂ ಕಪಾಲ ಬೆಟ್ಟದಲ್ಲಿ ಹೆಚ್ಚು ಕಡಿಮೆಯಾದ್ರೆ ಅದಕ್ಕೆ ಜಿಲ್ಲಾಡಳಿತವೇ ನೇರ ಹೊಣೆಯಾಗಿರುತ್ತದೆ ಎಂದು ಎಚ್ಚರಿಕೆ ನೀಡಿದರು.

  • ಕಪಾಲ ಬೆಟ್ಟ ವಿವಾದ- ಜ.13ಕ್ಕೆ ಕನಕಪುರ ಚಲೋ

    ಕಪಾಲ ಬೆಟ್ಟ ವಿವಾದ- ಜ.13ಕ್ಕೆ ಕನಕಪುರ ಚಲೋ

    ರಾಮನಗರ: ಕನಕಪುರ ತಾಲೂಕಿನ ಹಾರೋಬೆಲೆಯ ಕಪಾಲ ಬೆಟ್ಟದಲ್ಲಿ ನಿರ್ಮಾಣವಾಗುತ್ತಿರುವ ಎತ್ತರದ ಏಸು ಕ್ರಿಸ್ತನ ಪ್ರತಿಮೆ ವಿಚಾರವಾಗಿ ಹಿಂದೂ ಜಾಗರಣ ವೇದಿಕೆ ಹಾಗೂ ಆರ್‍ಎಸ್‍ಎಸ್ ಕಾರ್ಯಕರ್ತರು ಜ.13 ರಂದು ಕನಕಪುರ ಚಲೋ ಹಮ್ಮಿಕೊಂಡಿದ್ದಾರೆ.

    ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹಿಂದು ಜಾಗರಣ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಉಲ್ಲಾಸ್, ಕಪಾಲ ಬೆಟ್ಟ ಮೊದಲಿಗೆ ಮುನೇಶ್ವರ ಬೆಟ್ಟವಾಗಿತ್ತು. ಮುನೇಶ್ವರನ ಆರಾಧನೆ ಮಾಡುತ್ತಿದ್ದ ಕುರುಹು ಇನ್ನೂ ಬೆಟ್ಟದಲ್ಲಿ ಇದೆ. ಆದರೆ ಅದೇ ಸ್ಥಳದಲ್ಲಿ ಶಿಲುಬೆ ನಿಲ್ಲಿಸಲಾಗಿದೆ. ಈ ಮೂಲಕ ಹಿಂದೂ ಧರ್ಮದವರನ್ನು ತುಳಿದು ಮತಾಂತರ ಮಾಡಿಸಿರುವ ಘಟನೆ ನಡೆದಿದೆ ಎಂದು ಆರೋಪಿಸಿದ್ದಾರೆ.

    ಕಪಾಲ ಬೆಟ್ಟ ಅರಣ್ಯ ಪ್ರದೇಶವಾಗಿದ್ದು, ಗೋಮಾಳ ಜಮೀನಾಗಿದೆ. ಗೋಮಾಳ ಗೋವುಗಳಿಗೆ ಮೀಸಲಿಟ್ಟ ಜಾಗವಾಗಿದ್ದು, ಅಲ್ಲಿನ ಗೋವುಗಳು ಪರದಾಡುವಂತಹ ವಾತಾವರಣ ಸೃಷ್ಟಿಯಾಗಿದೆ. ಅಲ್ಲದೆ ಜಮೀನು ಪರಭಾರೆ ಕಾನೂನು ಬಾಹಿರವಾಗಿ ನಡೆದಿದೆ. ಹೀಗಾಗಿ ರಾಜ್ಯ ಸರ್ಕಾರ ಮತ್ತೆ ಜಮೀನು ವಾಪಾಸ್ ಪಡೆಯಬೇಕೆಂದು ಆಗ್ರಹಿಸಿ ಜ.13ರಂದು ಕನಕಪುರ ಚಲೋ ನಡೆಸುತ್ತಿದ್ದೇವೆ. ಕಾರ್ಯಕ್ರಮದಲ್ಲಿ ಆರ್‍ಎಸ್‍ಎಸ್‍ನ ಕ್ಷೇತ್ರೀಯ ಪ್ರಮುಖ್ ಪ್ರಭಾಕರ್ ಕಲ್ಲಡ್ಕ ಭಟ್ ಭಾಗವಹಿಸಲಿದ್ದು, ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

    ರಾಮನಗರ ಸೇರಿದಂತೆ ಮಂಡ್ಯ, ಕೋಲಾರ ಭಾಗದಲ್ಲಿ ಪ್ರಮುಖವಾಗಿ ಒಕ್ಕಲಿಗರನ್ನೇ ಟಾರ್ಗೆಟ್ ಮಾಡಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ. ಈ ಬಗ್ಗೆ ಹಿಂದೂಗಳು ಎಚ್ಚೆತ್ತುಕೊಳ್ಳದಿದ್ದರೆ ಅನಾಹುತ ಕಾದಿದೆ ಎಂದರು.

  • ಏಸು ಪ್ರತಿಮೆ ನಿರ್ಮಾಣಕ್ಕೆ ಅವಕಾಶ ಕೊಡಿ- ಸಿಎಂ ಭೇಟಿ ಮಾಡಿದ ಕ್ರೈಸ್ತರ ನಿಯೋಗ

    ಏಸು ಪ್ರತಿಮೆ ನಿರ್ಮಾಣಕ್ಕೆ ಅವಕಾಶ ಕೊಡಿ- ಸಿಎಂ ಭೇಟಿ ಮಾಡಿದ ಕ್ರೈಸ್ತರ ನಿಯೋಗ

    ಬೆಂಗಳೂರು: ಕನಕಪುರದ ಹಾರೋಬೆಲೆಯಲ್ಲಿರುವ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಿಸಲು ಅವಕಾಶ ಕೋರಿ ಕ್ರೈಸ್ತರ ನಿಯೋಗ ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದೆ.

    ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ಡಾ.ಪೀಟರ್ ಮಚಾಡೊ ನೇತೃತ್ವದ ನಿಯೋಗದಿಂದ ಇಂದು ಮಧ್ಯಾಹ್ನ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸಿಎಂ ಬಿಎಸ್‍ವೈ ಭೇಟಿ ಮಾಡಿ ಮಾತುಕತೆ ನಡೆಸಲಾಯ್ತು. ಈ ವೇಳೆ ಕಪಾಲ ಬೆಟ್ಟದಲ್ಲಿ ಕ್ರೈಸ್ತ ಪ್ರತಿಮೆ ಸ್ಥಾಪನೆಗೆ ಅವಕಾಶ ಕೊಡುವಂತೆ ಸಿಎಂಗೆ ಮನವಿ ನಿಯೋಗದಿಂದ ಮನವಿ ಮಾಡಲಾಯಿತು.

    ಸಿಎಂ ಭೇಟಿ ಬಳಿಕ ಮಾತಾಡಿದ ಪೀಟರ್ ಮಚಾಡೊ, ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿಚಾರದಲ್ಲಿ ಸಿಎಂಗೆ ಮನವಿ ಮಾಡಿದ್ದೇವೆ. ಇದರಲ್ಲಿ ಯಾರೂ ರಾಜಕೀಯ ಮಾಡೋದು ಬೇಡ. ಸುಮಾರು ವರ್ಷಗಳಿಂದಲೂ ಏಸುವನ್ನು ಅಲ್ಲಿ ನಾವು ಪೂಜಿಸುತ್ತಾ ಬಂದಿದ್ದೇವೆ. ಅಲ್ಲಿ ಈಗ ಏಸು ಪ್ರತಿಮೆ ನಿರ್ಮಾಣ ಆಗುತ್ತಿದೆ. ಇದಕ್ಕೆ ವಿರೋಧ ಬೇಡ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ ಎಂದರು.

    ಕಪಾಲ ಬೆಟ್ಟದಲ್ಲಿ ಹಿಂದೂ ದೇವತೆಗಳನ್ನು ಪೂಜೆ ಮಾಡುತ್ತಾ ಇದ್ದರು ಎನ್ನುವ ವಿಷಯದ ಬಗ್ಗೆ ನಮಗೆ ಮಾಹಿತಿ ಇಲ್ಲ. ಅಷ್ಟಕ್ಕೂ ಅದು ಕಪಾಲಿ ಬೆಟ್ಟ ಅಲ್ಲ. ಅದು ಕಪಾಲ ಬೆಟ್ಟ. ಕಪಾಲಿ ಬೆಟ್ಟ ಅಂತ ಆಗಿದ್ದು ಹೇಗೆಂದು ಗೊತ್ತಿಲ್ಲ ಅಂತ ಇದೇ ವೇಳೆ ಪೀಟರ್ ಮಚಾಡೊ ಹೇಳಿದರು.

    ಕಪಾಲ ಬೆಟ್ಟದ ಸುತ್ತಮುತ್ತಲಿನ ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿರುವ ಆರೋಪವನ್ನೂ ಅವರು ಅಲ್ಲಗಳೆದರು. ನಾವು ಯಾರನ್ನೂ ಮತಾಂತರ ಮಾಡುತ್ತಿಲ್ಲ. ಮತಾಂತರ ಮಾಡೋದು ಸುಲಭ ಅಲ್ಲ. ಹಿಂದೆ ಬಂದಿದ್ದ ಕ್ರೈಸ್ತ ಮಿಷನರಿಗಳು ಮತಾಂತರ ಮಾಡಿರಬಹದು. ನಾವು ಒಂದೂವರೆ ಲಕ್ಷ ಮಕ್ಕಳಿಗೆ ವಿದ್ಯಾಭ್ಯಾಸ ಕೊಡುತ್ತಿದ್ದೇವೆ. ಒಬ್ಬರನ್ನಾದರೂ ಮತಾಂತರ ಮಾಡಿದ್ದನ್ನು ತೋರಿಸಲಿ ಎಂದು ಪೀಟರ್ ಮಚಾಡೋ ಸ್ಪಷ್ಟಪಡಿಸಿದರು.

    ಕ್ರೈಸ್ತರ ನಿಯೋಗಕ್ಕೆ ಮುಖ್ಯಮಂತ್ರಿಗಳು ಯಾವುದೇ ಸ್ಪಷ್ಟ ಭರವಸೆ ಕೊಟ್ಟಿಲ್ಲ ಎನ್ನಲಾಗಿದೆ. ರಾಮನಗರ ಜಿಲ್ಲಾಡಳಿತದಿಂದ ವರದಿ ಕೇಳಿದ್ದೇವೆ. ವರದಿ ಬಂದ ಬಳಿಕ ಸಚಿವರು, ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಯಾರಿಗೂ ಅನ್ಯಾಯವಾಗದಂತೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಸಿಎಂ ತಿಳಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

  • ಏಸು ಪ್ರತಿಮೆ ವಿವಾದ – ಜನವರಿ 13ಕ್ಕೆ ಪ್ರತಿಭಟನೆ ನಡೆಸಲಿರುವ ಬಿಜೆಪಿ ನಾಯಕರು

    ಏಸು ಪ್ರತಿಮೆ ವಿವಾದ – ಜನವರಿ 13ಕ್ಕೆ ಪ್ರತಿಭಟನೆ ನಡೆಸಲಿರುವ ಬಿಜೆಪಿ ನಾಯಕರು

    ರಾಮನಗರ: ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದ ಕಪಾಲ ಬೆಟ್ಡದಲ್ಲಿ ನಿರ್ಮಾಣವಾಗುತ್ತಿರುವ ಏಸು ಕ್ರಿಸ್ತನ ಪ್ರತಿಮೆ ವಿರೋಧಿಸಿ ಜನವರಿ 13ರಂದು ಬೆಟ್ಟಕ್ಕೆ ಭೇಟಿ ನೀಡಿ ಪ್ರತಿಭಟನೆ ನಡೆಸುವುದಾಗಿ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ರಾಮನಗರದಲ್ಲಿ ತಿಳಿಸಿದ್ದಾರೆ.

    ಕಪಾಲ ಬೆಟ್ಟದಲ್ಲಿ ನಿರ್ಮಾಣವಾಗುತ್ತಿರುವ ಏಸು ಕ್ರಿಸ್ತನ ಪ್ರತಿಮೆ ಇದೀಗ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಈಗಾಗಲೇ ಸರ್ಕಾರದಿಂದ ಜಿಲ್ಲಾಡಳಿತಕ್ಕೆ ವರದಿ ನೀಡುವಂತೆ ಸಹ ಸೂಚನೆ ನೀಡಲಾಗಿದೆ. ಇದೀಗ ದಿನದಿಂದ ದಿನಕ್ಕೆ ವಿವಾದ ರಂಗೇರುತ್ತಿದ್ದು ಬಿಜೆಪಿ ನಾಯಕರು ಬೆಟ್ಟಕ್ಕೆ ಭೇಟಿ ನೀಡಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

    ರಾಮನಗರದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಅಭಿಯಾನ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಭಾಗಿಯಾಗಿದ್ದರು. ನಗರದ ಕೆಂಪೇಗೌಡ ಸರ್ಕಲ್‍ನಿಂದ ಆರಂಭವಾದ ಜಾಗೃತಿ ಜಾಥಾ ಮೆರವಣಿಗೆ ಜೂನಿಯರ್ ಕಾಲೇಜ್ ಮೈದಾನದವರೆಗೆ ನಡೆಸಲಾಯಿತು. ಸಿಎಎ ಬೆಂಬಲದ ಅಭಿಯಾನದಲ್ಲಿ ಮಾಜಿ ಎಂಎಲ್‍ಸಿ ಅಶ್ವಥ್ ನಾರಾಯಣ್, ಬಿಜೆಪಿ ಜಿಲ್ಲಾಧ್ಯಕ್ಷ ಎಂ. ರುದ್ರೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

    ಈ ವೇಳೆ ಮಾಜಿ ಸಚಿವ ಸಿ.ಪಿ ಯೋಗೇಶ್ವರ್‍ರವರು, ಕಪಾಲ ಬೆಟ್ಟ ಅರಣ್ಯ ಪ್ರದೇಶದಲ್ಲಿ ಬರುತ್ತೆ, ಅದು ಗೋಮಾಳದ ಜಮೀನು. ಅಲ್ಲಿ ಅನಧಿಕೃತವಾಗಿ ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣ ಮಾಡ್ತಿರುವುದು ತಪ್ಪು ಎಂದರು. ಅಲ್ಲದೆ ಅನಧಿಕೃತವಾಗಿ ಪ್ರತಿಮೆ ನಿರ್ಮಾಣವಾಗುತ್ತಿರುವ ದೃಷ್ಟಿಯಿಂದ ಇದೇ ಜನವರಿ 13ರಂದು ಜಿಲ್ಲೆಯಾದ್ಯಂತ ಕಾರ್ಯಕ್ರಮ ರೂಪಿಸಿದ್ದೇವೆ. ಕಪಾಲ ಬೆಟ್ಟಕ್ಕೆ ಭೇಟಿ ನೀಡುತ್ತೇವೆ, ಕನಕಪುರದಲ್ಲಿ ಪ್ರತಿಭಟನೆ ಮಾಡುವುದಾಗಿ ಹೇಳಿದರು.

    ನಾವು ಶಾಂತಿ ಪ್ರಿಯರಾಗಿದ್ದು, ನಾವು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತೇವೆ. ಕಪಾಲ ಬೆಟ್ಟಕ್ಕೆ ಹೋಗಿ ಬಂದ ಬಳಿಕ ಕನಕಪುರದಲ್ಲಿ ಪ್ರತಿಭಟನೆ ಮೂಲಕ ಜನಜಾಗೃತಿ ಮೂಡಿಸುವಂತಹ ಕೆಲಸ ಮಾಡುವುದಾಗಿ ತಿಳಿಸಿದರು.

  • ಏಸು ಪ್ರತಿಮೆ ನಿರ್ಮಾಣ ಹಿನ್ನೆಲೆ – ಕಪಾಲ ಬೆಟ್ಟಕ್ಕೆ ಬಿಜೆಪಿ ಕಾರ್ಯಕರ್ತರು ಭೇಟಿ

    ಏಸು ಪ್ರತಿಮೆ ನಿರ್ಮಾಣ ಹಿನ್ನೆಲೆ – ಕಪಾಲ ಬೆಟ್ಟಕ್ಕೆ ಬಿಜೆಪಿ ಕಾರ್ಯಕರ್ತರು ಭೇಟಿ

    ರಾಮನಗರ: ಕನಕಪುರ ತಾಲೂಕಿನ ಹಾರೋಬೆಲೆಯ ಕಪಾಲ ಬೆಟ್ಟದಲ್ಲಿ ನಿರ್ಮಾಣವಾಗುತ್ತಿರುವ ಏಸುಕ್ರಿಸ್ತನ ಪ್ರತಿಮೆ ವಿಚಾರವಾಗಿ ಈಗಾಗಲೇ ಸಾಕಷ್ಟು ವಿರೋಧಗಳು ವ್ಯಕ್ತವಾಗಿವೆ. ದಿನನಿತ್ಯ ಬಿಜೆಪಿ ಸರ್ಕಾರದ ಸಚಿವರು, ನಾಯಕರು ಸಹ ಪ್ರತಿಮೆ ನಿರ್ಮಾಣದ ವಿಚಾರವಾಗಿ ಭೂಮಿ ಮಂಜೂರಾತಿ ಬಗ್ಗೆ ಮಾಜಿ ಸಚಿವ ಡಿಕೆ ಶಿವಕುಮಾರ್ ವಿರುದ್ಧ ಕಿಡಿಕಾರುತ್ತಿದ್ದಾರೆ. ಇದೀಗ ಬಿಜೆಪಿ ಜಿಲ್ಲಾ ಮಟ್ಟದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಇಂದು ಕಪಾಲ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ.

    ಹಾರೋಬೆಲೆಯ ಕಪಾಲ ಬೆಟ್ಟಕ್ಕೆ ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷ ಎಂ. ರುದ್ರೇಶ್ ನೇತೃತ್ವದ ಸುಮಾರು 50 ಮುಖಂಡರು, ಕಾರ್ಯಕರ್ತರ ತಂಡ ಕಪಾಲ ಬೆಟ್ಟಕ್ಕೆ ಭೇಟಿ ನೀಡಿತ್ತು. ಕಪಾಲ ಬೆಟ್ಟದ ತಳಭಾಗದಿಂದಲೂ ಕೂಡಾ ನಡೆದುಕೊಂಡೇ ಪ್ರತಿಮೆ ನಿರ್ಮಾಣವಾಗುತ್ತಿರುವ ಸ್ಥಳದವರೆಗೆ ಬೆಟ್ಟದ ವೀಕ್ಷಣೆ ಹಾಗೂ ಈ ಹಿಂದಿನ ಕುರುಹುಗಳ ವೀಕ್ಷಣೆ ನಡೆಸುತ್ತಾ ಸಾಗಿದರು. ಅಲ್ಲದೇ ಬೆಟ್ಟದ ಮೇಲ್ಭಾಗದಲ್ಲಿನ ಶಿಲುಬೆಯ ತಳಭಾಗದಲ್ಲಿ ಇರುವ ಮುನೇಶ್ವರ ಸ್ವಾಮಿಯ ಕಲ್ಲುಗಳು ಹಾಗೂ ಮುನಿಸೇವೆ ಮಾಡುತ್ತಿದ್ದ ಕುರುಹುಗಳ ವೀಕ್ಷಣೆ ಮಾಡಿದ್ರು.

    ಕಪಾಲ ಬೆಟ್ಟದಲ್ಲಿ ನಿರ್ಮಾಣವಾಗುತ್ತಿರುವ ಏಸುಕ್ರಿಸ್ತನ ಪ್ರತಿಮೆಯ ಜಾಗವವನ್ನು ವೀಕ್ಷಣೆ ಮಾಡಿದರು. ಅಲ್ಲದೇ ಕಪಾಲ ಬೆಟ್ಟ ಈ ಹಿಂದೆ ಮುನೇಶ್ವರ ಬೆಟ್ಟವಾಗಿತ್ತು ಅದಕ್ಕೆ ಸಂಬಂಧಪಟ್ಟ ಕುರುಹುಗಳು ಶಿಲುಬೆಯಿರುವ ಜಾಗದಲ್ಲಿದೆ ಎಂದರು. ಕಪಾಲ ಬೆಟ್ಟ ಸಾಕಷ್ಟು ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಯಾವುದೇ ರೀತಿ ಘಟನೆ ನಡೆದರೂ ಇದೀಗ ಸಿಸಿ ಕ್ಯಾಮೆರಾಗಳಲ್ಲಿ ರೆಕಾರ್ಡ್ ಆಗಲಿದ್ದು, ಏಸುವಿನ ಮಾದರಿ ಪ್ರತಿಮೆ ಬಳಿ ಹಾಗೂ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ನಾಲ್ಕು ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.

    ಕಪಾಲ ಬೆಟ್ಟದ ಭೇಟಿ ವಿಚಾರವಾಗಿ ಮಾತನಾಡಿದ ಬಿಜೆಪಿ ಜಿಲ್ಲಾದ್ಯಕ್ಷ ಎಂ.ರುದ್ರೇಶ್, ಪ್ರತಿಮೆ ನಿರ್ಮಾಣದ ಜಾಗದ ವಸ್ತುಸ್ಥಿತಿ ಹೇಗಿದೆ, ಪ್ರತಿಮೆ ನಿರ್ಮಾಣಕ್ಕು ಮುನ್ನ ಬೆಟ್ಟದ ವಸ್ತುಸ್ಥಿತಿ ಹೇಗಿತ್ತು ಎಂಬ ಬಗ್ಗೆ ಡಿಸಿಎಂ ಅಶ್ವಥ್ ನಾರಾಯಣ್ ಹಾಗೂ ಕಂದಾಯ ಸಚಿವ ಆರ್.ಅಶೋಕ್ ವರದಿ ಕೇಳಿದ್ದು ಜಾಗದ ವರದಿಯನ್ನ ನೀಡಲಿದ್ದೇವೆ. ಅದರ ಮುಂದಿನ ಕಾನೂನು ಕ್ರಮ ಏನಿದೆ ಅವರು ತೆಗೆದುಕೊಳ್ಳಲಿದ್ದಾರೆ. ಅಲ್ಲದೇ ಕೆಲವೇ ದಿನಗಳಲ್ಲಿ ಅವರು ಕೂಡಾ ಕಪಾಲ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು.

    ಏಸುಕ್ರಿಸ್ತನ ಪ್ರತಿಮೆ ನಿರ್ಮಾಣದ ಬೆಟ್ಟದ ತುದಿಗೆ ತೆರಳಲು ಮಣ್ಣಿನ ರಸ್ತೆ ಹಲವಾರು ವರ್ಷಗಳಿಂದ ಇದೆ. ಇತ್ತೀಚೆಗೆ ಪ್ರತಿಮೆಯ ಶಿಲಾನ್ಯಾಸದ ವೇಳೆ ರಸ್ತೆಯನ್ನ ಜೆಸಿಬಿ ಬಳಸಿ ಅಲ್ಪಸ್ವಲ್ಪ ದುರಸ್ಥಿ ಕಾರ್ಯ ನಡೆಸಲಾಗಿತ್ತು. ಆದರೆ ನಿನ್ನೆ ಕೆಲವರು ದಾರಿಯಲ್ಲಿ ಕೆಲವು ಕಡೆಗಳಲ್ಲಿ ಗುಂಡಿಗಳನ್ನು ತೋಡಿದ್ದು ವಾಹನಗಳು ಓಡಾಡಂತೆ ಮಾಡಿದ್ದಾರೆ. ಸುಮಾರು ಎರಡ್ಮೂರು ಅಡಿಗಳಷ್ಟು ಆಳವಾಗಿ ನಾಲ್ಕು ಕಡೆಗಳಲ್ಲಿ ಗುಂಡಿಗಳನ್ನು ತೆಗೆದಿದ್ದು ವಾಹನಗಳು ಬೆಟ್ಟದ ಮೇಲ್ಭಾಗಕ್ಕೆ ತೆರಳದಂತೆ ಮಾಡಲಾಗಿದೆ. ಈ ಬಗ್ಗೆ ಬಿಜೆಪಿ ಮುಖಂಡರು ಈ ರೀತಿ ಮಾಡಿ ಬೆಟ್ಟಕ್ಕೆ ಬರುವವರ ವಿರುದ್ಧ ಹಗೆತನ ಸಾಧಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಕಿಡಿಕಾರಿದರು.

  • ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ – ವಿವಾದಿತ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳ ತಂಡ

    ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ – ವಿವಾದಿತ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳ ತಂಡ

    ರಾಮನಗರ: ಮಾಜಿ ಸಚಿವ ಹಾಗೂ ಕನಪುರ ಶಾಸಕ ಡಿ.ಕೆ ಶಿವಕುಮಾರ್ ಸ್ವಕ್ಷೇತ್ರ ಕನಕಪುರದ ಹಾರೋಬೆಲೆಯ ಕಪಾಲ ಬೆಟ್ಟದಲ್ಲಿ ನಿರ್ಮಿಸಲು ಮುಂದಾಗಿರೋ ಏಸುಕ್ರಿಸ್ತನ ಪ್ರತಿಮೆ ನಿರ್ಮಾಣ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಪ್ರತಿಮೆ ನಿರ್ಮಾಣಕ್ಕೆ ರಾಜ್ಯ ಸರ್ಕಾರದ ಬಿಜೆಪಿ ನಾಯಕರು ಸಾಕಷ್ಟು ವಿರೋಧ ವ್ಯಕ್ತಪಡಿಸುತ್ತಿದ್ದರೆ. ಇತ್ತ ಕಂದಾಯ ಸಚಿವರ ಸೂಚನೆ ಮೇರೆಗೆ ರಾಮನಗರ ಜಿಲ್ಲೆಯ ಅಧಿಕಾರಿಗಳ ತಂಡ ಪ್ರತಿಮೆ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದ ಕಪಾಲ ಬೆಟ್ಟದಲ್ಲಿ ನಿರ್ಮಿಸಲು ಉದ್ದೇಶಿರುವ ಏಸುವಿನ 114 ಎತ್ತರದ ಪ್ರತಿಮೆ ನಿರ್ಮಾಣಕ್ಕೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿವೆ. ಈ ವಿಚಾರವಾಗಿ ಸಂಪೂರ್ಣ ವರದಿ ನೀಡಲು ಕಂದಾಯ ಸಚಿವ ಆರ್ ಆಶೋಕ್ ಅವರು ರಾಮನಗರ ಜಿಲ್ಲಾಧಿಕಾರಿ ಎಮ್ ಎಸ್ ಅರ್ಚನಾ ಅವರಿಗೆ ಸೂಚಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ಕಪಾಲ ಬೆಟ್ಟದ ಏಸು ಪ್ರತಿಮೆ ನಿರ್ಮಾಣ ಸ್ಥಳಕ್ಕೆ ರಾಮನಗರ ಉಪವಿಭಾಗಧಿಕಾರಿ ದಾಕ್ಷಾಯಿಣಿ, ಕನಕಪುರ ತಹಶೀಲ್ದಾರ್ ಅನಂದಯ್ಯ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಅಧಿಕಾರಿಗಳ ಭೇಟಿ ಬಗ್ಗೆ ಕನಕಪುರ ತಾಲೂಕಿನ ರಸ್ತೆ ಜಕ್ಕಸಂದ್ರದ ಜೈನ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿಕ್ರಿಸಿದ ಡಿಕೆಶಿ, ಅಧಿಕಾರಿಗಳು ಭೇಟಿ ನೀಡೋದ್ರಲ್ಲಿ ತಪ್ಪೇನಿಲ್ಲ, ಕಂದಾಯ ಸಚಿವರಾದ ಅಶೋಕ್ ಬೇಕಾದರೆ ಭೇಟಿ ನೀಡಲಿ. ರಾಜ್ಯದ ಸಿಎಂ ಮತ್ತು ಮಂತ್ರಿಗಳಿಗೆ ಗವರ್ನರ್ ಪ್ರತಿಜ್ಞಾ ವಿಧಿ ಹೇಳಿದ್ದಾರೆ. ಏನ್ ಪ್ರತಿಜ್ಞೆ ಭೋದಿಸಿದ್ದಾರೆ ಎಂದು ರಿಪೀಟ್ ಮಾಡಿಕೊಳ್ಳಲಿ. ಆ ಜಾಗಕ್ಕೆ 1600 ಇಸವಿಯಿಂದಲೂ ಇತಿಹಾಸ ಇದೆ. ನಾನೇನು ಹೊಸದಾಗಿ ಮಾಡಲು ಆಗುವುದಿಲ್ಲ ಎಂದರು.

    ಡಿಕೆಶಿ ತಮ್ಮ ಹಳ್ಳವನ್ನು ತಾವೇ ತೋಡಿಕೊಳ್ಳುತ್ತಿದ್ದಾರೆ ಎಂಬ ಬಿಜೆಪಿ ವಕ್ತಾರ ಅಶ್ವಥ್ ನಾರಾಯಣ್‍ರವರು ಹೇಳಿಕೆಗೆ ಹಳ್ಳ ತೋಡಿಕೊಂಡಿದ್ದೀನಿ ಅವರು ಬಂದು ಸಮಾಧಿ ಮಾಡಲಿ. ನಾನು ಸಾಕಷ್ಟು ದೇವಸ್ಥಾನಗಳ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಅವರು ನೋಡಲಿ ತೋರಿಸಿ ಎಂದರು. ಅಲ್ಲದೇ ನಮಸ್ತೇ ಸದಾ ವತ್ಸಲೇ ಮಾತೃಭೂಮಿ ಎಂಬ ವಾಕ್ಯ ನನಗೂ ಕೂಡಾ ಗೊತ್ತಿದೆ. ಯಾವ ದೇವರು, ಯಾವ ಧರ್ಮ, ಯಾರನ್ನು ಆಚರಣೆ ಮಾಡಬೇಕು ಎಂಬುದು ಅವರವರ ವೈಯಕ್ತಿಕ ವಿಚಾರ ಎಂದು ಬಿಜೆಪಿ ನಾಯಕರಿಗೆ ಟಾಂಗ್ ನೀಡಿದರು.