Tag: Kapala betta

  • ಡಿಕೆಶಿ ಕನಕಪುರದ ಎಂಎಲ್‍ಎ ಅಷ್ಟೇ ಎಂದು ಗುಡುಗಿದ ಆರ್.ಅಶೋಕ್

    ಡಿಕೆಶಿ ಕನಕಪುರದ ಎಂಎಲ್‍ಎ ಅಷ್ಟೇ ಎಂದು ಗುಡುಗಿದ ಆರ್.ಅಶೋಕ್

    ಬೆಂಗಳೂರು: ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿವಾದ ರಾಜಕೀಯಯಕ್ಕೆ ತಿರುಗಿದೆ. ಹಿಂದೂ ಸಂಘಟನೆಗಳ ಪ್ರತಿಭಟನೆಗೆ ಬಿಜೆಪಿ ಸಾಥ್ ನೀಡಿದ್ದು, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ಬಾಣಗಳ ಸುರಿಮಳೆ ಜೋರಾಗಿದೆ. ಕನಕಪುರ ಡಿಕೆಶಿಗೆ ಸಂಬಂಧಿಸಿದ್ದಲ್ಲ, ಡಿಕೆಶಿ ಕನಕಪುರ ಎಂಎಲ್‍ಎ ಅಷ್ಟೇ ಅಂತಾ ಕಂದಾಯ ಸಚಿವ ಆರ್.ಅಶೋಕ್ ಗುಡುಗಿದ್ದಾರೆ.

    ಬೆಂಗಳೂರಿನ ಪದ್ಮನಾಭನಗರದಲ್ಲಿ ಮಾತನಾಡಿದ ಆರ್.ಅಶೋಕ್, ಗಲಾಟೆ ಮಾಡಬೇಡಿ ಅಂತಾ ಡಿಕೆಶಿ ಅವರ ಕಾರ್ಯಕರ್ತರಿಗೆ ಹೇಳಿದ್ರೆ ಗಲಾಟೆ ಮಾಡಿ ಅಂತಾ ಅರ್ಥ. ನಮ್ಮ ಸರ್ಕಾರ ಗಲಾಟೆ ಮಾಡಿಸಲ್ಲ, ಗಲಾಟೆ ಮಾಡಿಸಲು ಡಿಕೆಶಿಯಿಂದ ಸಾಧ್ಯ ಅಂತಾ ಟಾಂಗ್ ಕೊಟ್ಟರು.

    ಶಿವಕುಮಾರ್ ಪ್ರಚೋದಿಸುವ ಹೇಳಿಕೆ ಕೊಡಬಾರದು. ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ, ಬಾಲಗಂಗಾಧರ ಸ್ವಾಮೀಜಿ ರಾಮನಗರ ಜಿಲ್ಲೆಯವರು. ಶಿವಕುಮಾರ್ ಅವರಿಗೆ ಇವರು ಯಾರೂ ನೆನಪಾಗಿಲ್ವಾ? ಮೊದಲು ಹೆತ್ತ ತಾಯಿಯನ್ನು ಪೂಜಿಸೋಣ, ನಂತರ ಪಕ್ಕದ ಮನೆ ತಾಯಿಯನ್ನು ಪೂಜಿಸೋಣ ಎಂದರು.

    ಇನ್ನು ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿಚಾರವಾಗಿ ಡಿಸಿ ಮೌಖಿಕ ವರದಿ ನೀಡಿದ್ದು, ಸಮಗ್ರವಾಗಿ ಲಿಖಿತ ವರದಿ ನೀಡುವಂತೆ ಸೂಚಿಸಿರುವುದಾಗಿ ಅಶೋಕ್ ಸ್ಪಷ್ಟಪಡಿಸಿದ್ದಾರೆ. ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣಕ್ಕೆ ಡಿಸೆಂಬರ್ ತಿಂಗಳಲ್ಲಿ ಗ್ರಾಮ ಪಂಚಾಯತಿಯಿಂದ ಅನುಮತಿ ಪಡೆದಿದ್ದಾರೆ. ಆದರೆ ಎರಡು ವರ್ಷಗಳಿಂದ ಕೆಲಸ ನಡೆಯುತ್ತಿದೆ. ರಸ್ತೆ ಸಂಪರ್ಕ, ವಿದ್ಯುತ್ ಸಂಪರ್ಕಕ್ಕೆ ಅನುಮತಿಯನ್ನೇ ಪಡೆದಿಲ್ಲ ಅನ್ನೋದು ಆರ್. ಅಶೋಕ್ ವಾದ. ಹಾಗಾಗಿ ಸರ್ಕಾರ ಕಾನೂನಾತ್ಮಕವಾಗಿ ಹೋಗುತ್ತಿದೆ ಅಷ್ಟೇ. ಸಮಯಕ್ಕೆ ಸರಿಯಾದ ಕ್ರಮ ತೆಗೆದುಕೊಳ್ಳುವುದಾಗಿ ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.

  • ಕಪಾಲ ಬೆಟ್ಟಕ್ಕೆ ಬಿಜೆಪಿ ನಿಯೋಗ ಭೇಟಿ- ಡಿಕೆಶಿ ಕೆಂಡಾಮಂಡಲ

    ಕಪಾಲ ಬೆಟ್ಟಕ್ಕೆ ಬಿಜೆಪಿ ನಿಯೋಗ ಭೇಟಿ- ಡಿಕೆಶಿ ಕೆಂಡಾಮಂಡಲ

    ಬೆಂಗಳೂರು: ಭಾರೀ ವಿವಾದಕ್ಕೆ ಕಾರಣವಾಗಿರೋ ಕನಕಪುರದ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ಸ್ಥಾಪನೆ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದೆ. ಯಾವುದೇ ಕಾರಣಕ್ಕೂ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ಅವಕಾಶ ಇಲ್ಲ ಅಂತ ಬಿಜೆಪಿ ಹೇಳ್ತಿದ್ದರೆ, ಏಸು ಪ್ರತಿಮೆ  ಸ್ಥಾಪನೆ ಮಾಡಿಯೇ ಸಿದ್ಧ ಅಂತ ಮಾಜಿ ಸಚಿವ ಡಿಕೆ ಶಿವಕುಮಾರ್ ಹಠಕ್ಕೆ ಬಿದ್ದಿದ್ದಾರೆ. ಈ ಗೊಂದಲಗಳ ಮಧ್ಯೆ ಸೋಮವಾರ(ನಾಳೆ) ಬಿಜೆಪಿ, ಸ್ವಾಮೀಜಿಗಳ ನಿಯೋಗ ಕಪಾಲ ಬೆಟ್ಟಕ್ಕೆ ಭೇಟಿ ಕೊಡ್ತಿದ್ದು, ಬಿಜೆಪಿ ಭೇಟಿಗೆ ಡಿಕೆಶಿ ಕೆಂಡಾಮಂಡಲರಾಗಿದ್ದಾರೆ.

    ವಿಡಿಯೋ ಮೂಲಕ ತಮ್ಮ ಆಕ್ರೋಶವನ್ನ ಹೊರ ಹಾಕಿರೋ ಡಿಕೆ ಶಿವಕುಮಾರ್ ಕನಕಪುರ ಜನರು ಶಾಂತಿ ಕಾಪಾಡಬೇಕು ಅಂತ ಮನವಿ ಮಾಡಿದ್ದಾರೆ. ಬಿಜೆಪಿ ಅವರು ಉದ್ದೇಶ ಪೂರ್ವಕವಾಗಿ ವಿವಾದ ಮಾಡಲು ಸೋಮವಾರ ಕನಕಪುರದ ಕಪಾಲ ಬೆಟ್ಟಕ್ಕೆ ಬರುತ್ತಿದ್ದಾರೆ. ಅಲ್ಲಿ ಸಭೆ ಮಾಡಿ ಗೊಂದಲ ಸೃಷ್ಟಿ ಮಾಡೋದು ಅವರ ಉದ್ದೇಶ. ಹೀಗಾಗಿ ಯಾರು ಬಿಜೆಪಿ ಅವರ ಮಾತಿಗೆ ಶಾಂತಿ ಕಳೆದುಕೊಳ್ಳಬೇಡಿ. ಶಾಂತಿಯುತವಾದ ಕನಕಪುರದ ಗೌರವ ಕಾಪಾಡಿ ಎಂದು ಮನವಿ ಮಾಡಿದ್ದಾರೆ.

    ಅಲ್ಲದೆ ಬಿಜೆಪಿ, ಆರ್ ಎಸ್‍ಎಸ್ ವಿರುದ್ಧವೂ ಗುಡುಗಿರೋ ಡಿಕೆಶಿ, ಹಿಂದುಳಿದ ಕನಕಪುರವನ್ನ ಅಭಿವೃದ್ಧಿ ಮಾಡಿದ್ದೇವೆ. ಇದನ್ನ ಸಹಿಸದ ಬಿಜೆಪಿ, ಆರ್ ಎಸ್‍ಎಸ್ ಶಾಂತಿ ಕದಡಲು ಕನಕಪುರಕ್ಕೆ ಬರುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

  • ಗೋಮಾಳ ಭೂಮಿಯಲ್ಲಿ ಏಸು ಪ್ರತಿಮೆ: ರಾಮನಗರ ಜಿಲ್ಲಾಡಳಿತದಿಂದ ವರದಿ ಪೂರ್ಣ

    ಗೋಮಾಳ ಭೂಮಿಯಲ್ಲಿ ಏಸು ಪ್ರತಿಮೆ: ರಾಮನಗರ ಜಿಲ್ಲಾಡಳಿತದಿಂದ ವರದಿ ಪೂರ್ಣ

    ಬೆಂಗಳೂರು: ಕನಕಪುರದ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿವಾದ ಸಂಬಂಧ ಕಂದಾಯ ಇಲಾಖೆ ಕೇಳಿರುವ ವರದಿಯನ್ನು ರಾಮನಗರ ಜಿಲ್ಲಾಡಳಿತವು ಕೊನೆಗೂ ಸಿದ್ಧಪಡಿಸಿದೆ.

    ರಾಮನಗರ ಜಿಲ್ಲಾಧಿಕಾರಿ ಮತ್ತು ಕನಕಪುರ ತಹಶೀಲ್ದಾರ್ ನೇತೃತ್ವದಲ್ಲಿ ವರದಿ ತಯಾರಿಸಲಾಗಿದೆ. ಸುಮಾರು ಹತ್ತು ದಿನಗಳ ಕಾಲಾವಕಾಶದಲ್ಲಿ ರಾಮನಗರ ಜಿಲ್ಲಾಡಳಿತ ಈ ವರದಿಯನ್ನು ಸಿದ್ಧಪಡಿಸಿದೆ. ಕಂದಾಯ ಸಚಿವ ಆರ್ ಅಶೋಕ್ ಅವರಿಗೆ ಇನ್ನೆರಡು ದಿನಗಳಲ್ಲಿ ರಾಮನಗರ ಜಿಲ್ಲಾಧಿಕಾರಿಗಳು ವರದಿಯನ್ನು ಸಲ್ಲಿಕೆ ಮಾಡುವ ಸಾಧ್ಯತೆಯಿದೆ. ಇದನ್ನೂ ಓದಿ: ಡಿಕೆಶಿ, ಕಾಂಗ್ರೆಸ್ಸಿಗೆ ಲಾಭ ಮಾಡಿಕೊಡೋದು ಬೇಡ ಎಂದ ಯಡಿಯೂರಪ್ಪ

    ವರದಿಯಲ್ಲಿ ಏನಿದೆ?
    ರಾಮನಗರ ಜಿಲ್ಲಾಡಳಿತ ಸಿದ್ಧಪಡಿಸಿರುವ ಈ ವರದಿಯಲ್ಲಿ ಗೋಮಾಳ ಭೂಮಿಯಲ್ಲಿ ಯಾವುದೇ ನಿರ್ಮಾಣ, ಮಂಜೂರು, ಪರಭಾರೆ ಅಗತ್ಯ ಇಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ಅರ್ಹ ಮೂಲಗಳು ಪಬ್ಲಿಕ್ ಟಿವಿಗೆ ನೀಡಿರುವ ಮಾಹಿತಿಗಳನ್ವಯ ವರದಿಯ ಪ್ರಮುಖ ಅಂಶಗಳನ್ನು ಇಲ್ಲಿ ನೀಡಲಾಗಿದೆ.

    1. ಕಪಾಲ ಬೆಟ್ಟ ಗೋಮಾಳ ಭೂಮಿಯಾಗಿದೆ. ಇದರಲ್ಲಿ 10 ಎಕರೆ ಖಾಸಗಿ ಟ್ರಸ್ಟ್ ಗೆ ಅಕ್ರಮ ಮಂಜೂರು ಮಾಡಲಾಗಿದೆ.
    2. ವನ್ಯಜೀವಿ ಕಾಯ್ದೆ, ಬಿಎಂಆರ್ ಡಿಎಗಳ ನಿಯಮಗಳನ್ನು ಉಲ್ಲಂಘಿಸಿ 10 ಎಕರೆ ಗೋಮಾಳ ಭೂಮಿ ಪರಭಾರೆ ಮಾಡಲಾಗಿದೆ.
    3. ಕಪಾಲ ಬೆಟ್ಟ ನಲ್ಲಹಳ್ಳಿ ಸರ್ವೆ ನಂ.283 ರಲ್ಲಿದೆ. ಈ ಸರ್ವೆ ನಂಬರ್ ಬೆಟ್ಟದ ಪಕ್ಕದಲ್ಲೇ ಇರುವ ಕಾವೇರಿ ವನ್ಯ ಜೀವಿಧಾಮದ ಬಫರ್ ಝೋನ್ ವ್ಯಾಪ್ತಿಗೆ ಬರಲಿದೆ. ಹಾಗಾಗಿ ಯಾವುದೇ ನಿರ್ಮಾಣಕ್ಕೆ ಅವಕಾಶ ಇರುವುದಿಲ್ಲ. ಇದನ್ನೂ ಓದಿ: ಡಿಕೆ ಶಿವಕುಮಾರ ಅಲ್ಲ ಏಸುಕುಮಾರ – ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಆಕ್ರೋಶ

    4. ಕಾವೇರಿ ವನ್ಯ ಜೀವಿಧಾಮದ ಬಫರ್ ಝೋನ್ ನಲ್ಲಿ ಕಾಮಗಾರಿ ನಡೆಸಲು ರಾಜ್ಯ ಮತ್ತು ಕೇಂದ್ರ ಪರಿಸರ ಇಲಾಖೆಗಳ ಅನುಮತಿ ಬೇಕು. ಈ ಅನುಮತಿಗಳು ಏಸು ಪ್ರತಿಮೆ ನಿರ್ಮಾಣಕ್ಕೆ ಪಡೆದಿರುವುದಿಲ್ಲ.
    5. ಮೂರು ವರ್ಷಗಳ ಹಿಂದೆ ಬರ ಪರಿಸ್ಥಿತಿಯಿದ್ದಾಗ ಅಕ್ರಮವಾಗಿ ಕೊಳವೆ ಬಾವಿ ತೋಡಿಸಲಾಗಿತ್ತು.
    6. ಅಕ್ರಮವಾಗಿ ಕೊಳವೆ ಬಾವಿ ತೋಡಲು ರಾಮನಗರ ಜಿಲ್ಲಾ ಪಂಚಾಯಿತಿಯಿಂದ ಒಪ್ಪಿಗೆ ಪಡೆಯಲಾಗಿದೆ.
    7. ಏಸು ಪ್ರತಿಮೆ ನಿರ್ಮಿಸಲು ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆಯಲಾಗಿದೆ.
    8. ಪ್ರತಿಮೆ ನಿರ್ಮಿಸುವ ಸಲುವಾಗಿಯೇ ನಿಯಮ ಮೀರಿ 2 ಕಿ.ಮೀ ರಸ್ತೆ ನಿರ್ಮಿಸಲಾಗಿದೆ. ಇದನ್ನೂ ಓದಿ: ಏಸು ಪ್ರತಿಮೆಗೆ ಜಮೀನು – ಡಿಕೆಶಿಗೆ 4 ಪ್ರಶ್ನೆ ಕೇಳಿದ ಪ್ರತಾಪ್ ಸಿಂಹ

    ಕಂದಾಯ ಇಲಾಖೆಗೆ ರಾಮನಗರ ಡಿಸಿ ವರದಿ ಸಲ್ಲಿಸಿದ ನಂತರ ಸಚಿವ ಸಂಪುಟ ಸಭೆಯಲ್ಲಿ ಈ ವರದಿ ಮೇಲೆ ಮಹತ್ವದ ಚರ್ಚೆ ನಡೆಯಲಿದೆ ಎನ್ನಲಾಗಿದೆ. ಸಂಪುಟ ಸಭೆಯ ಚರ್ಚೆಯ ಬಳಿಕ ಸರ್ಕಾರದ ನಿರ್ಧಾರ ಗೊತ್ತಾಗಲಿದೆ. ಆದರೆ ಮೂಲಗಳ ಪ್ರಕಾರ ಏಸು ಪ್ರತಿಮೆ ನಿರ್ಮಿಸಲು ಉದ್ದೇಶಿಸಿರುವ ಗೋಮಾಳ ಭೂಮಿಯನ್ನು ಸರ್ಕಾರ ವಾಪಸ್ ಪಡೆಯುವ ಸಾಧ್ಯತೆ ದಟ್ಟವಾಗಿದೆ.