Tag: kanteerava studio

  • ಕಂಠೀರವ ಸ್ಟುಡಿಯೋದಲ್ಲಿ ಅಂಬಿ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ!

    ಕಂಠೀರವ ಸ್ಟುಡಿಯೋದಲ್ಲಿ ಅಂಬಿ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ!

    ಬೆಂಗಳೂರು: ಕಂಠೀರವ ಸ್ಟುಡಿಯೋದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೆದಿದೆ. ಒಕ್ಕಲಿಗರ ಸಂಪ್ರದಾಯದಂತೆ ಅಂಬಿ ಭೌತಿಕ ಕಾಯವನ್ನು ಸುಡಲಾಗುತ್ತದೆ.

    ತಲತಲಾಂತರಗಳಿಂದ ಅಂಬಿ ಮನೆತನದ ಪೌರೋಹಿತ್ಯ ಮಾಡುತ್ತಿರುವ ಮದ್ದೂರು ಮೂಲದ ಪುರೋಹಿತರಾದ ಚಿಕ್ಕ ಹುಚ್ಚಯ್ಯ, ಕೋಣಪ್ಪ ಪೂಜಾರಿ ನೇತೃತ್ವದಲ್ಲಿ ಅಂತ್ಯಸಂಸ್ಕಾರದ ಅಂತಿಮ ವಿಧಿವಿಧಾನಗಳು ನಡೆಯಲಿದೆ. ಇದನ್ನೂ ಓದಿ: ಕರ್ಮಭೂಮಿಯಲ್ಲಿ ಕರ್ಣನಿಗೆ ನಮನ – ಅಭಿಮಾನಿಗಳನ್ನು ನಿಯಂತ್ರಿಸಲು ವೇದಿಕೆ ಏರಿದ ಯಶ್

    ಏನೇನು ವ್ಯವಸ್ಥೆ ಮಾಡಲಾಗಿದೆ?
    ಸಾರ್ವಜನಿಕರು ಹಿಂಬದಿ ಗೇಟ್ ಮೂಲಕ ಪ್ರವೇಶಿಸಬಹುದಾಗಿದ್ದು, 4 ಕಡೆ ಎಲ್‍ಇಡಿ ಪರದೆಯನ್ನು ಹಾಕಲಾಗಿದೆ. ಸಾರ್ವಜನಿಕರಿಗೆ 2 ಸಾವಿರ, ವಿಐಪಿಗಳಿಗೆ 1 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. ಸಿಮೆಂಟ್, ಇಟ್ಟಿಗೆಯಿಂದ 16*16 ಸುತ್ತಳತೆ ಚಿತೆ ನಿರ್ಮಿಸಲಾಗಿದೆ. ಚಿತೆಗೆ ಬಿಳಿ ಬಣ್ಣವನ್ನು ಬಳಿಯಲಾಗಿದ್ದು, ಎಲ್ಲರಿಗೂ ಕಾಣಿಸಲೆಂದು ಒಂದೂವರೆ ಅಡಿ ಎತ್ತರದಲ್ಲಿ ಚಿತೆಯನ್ನು ನಿರ್ಮಾಣ ಮಾಡಲಾಗಿದೆ. ಇದನ್ನೂ ಓದಿ:ಬೆಂಗ್ಳೂರಿಗರೇ ಗಮನಿಸಿ, ಅಂಬಿ ಅಂತಿಮ ಯಾನ – ಯಾವ ಸಮಯಕ್ಕೆ ಏನು ನಿಗದಿಯಾಗಿದೆ?

    ನಟಸಾರ್ವಭೌಮ ವರನಟ ರಾಜಕುಮಾರ್ ಅವರ ಸಮಾಧಿಯ ಎದುರುಗಡೆ ಇರುವ ಒಂದೂವರೆ ಎಕರೆ ಸರ್ಕಾರಿ ಭೂಮಿಯಲ್ಲಿ ಅಂಬರೀಶ್ ಅಂತ್ಯಕ್ರಿಯೆ ನಡೆಯಲಿದೆ. ಇಲ್ಲಿಯೇ ಅಂಬಿ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಇದನ್ನೂ ಓದಿ : ಅಂಬಿ ಪಾರ್ಥಿವ ಶರೀರ ರವಾನೆಗೆ ಮತ್ತೊಮ್ಮೆ ಕಾಲದ ಮೊರೆ ಹೋದ ಸಮ್ಮಿಶ್ರ ಸರ್ಕಾರ!

    ಅಂಬಿ ಅಂತಿಮ ಯಾನ:
    * ಬೆಳಗ್ಗೆ 9 ಗಂಟೆ – ಸೇನಾ ಹೆಲಿಕಾಪ್ಟರ್ ಮೂಲಕ ಮಂಡ್ಯದಿಂದ ಬೆಂಗಳೂರಿಗೆ ಪಾರ್ಥಿವ ಶರೀರ ರವಾನೆ
    * ಬೆಳಗ್ಗೆ 10 ಗಂಟೆ – ಹೆಚ್‍ಎಎಲ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲಿರುವ ಅಂಬಿ ಹೊತ್ತ ಹೆಲಿಕಾಪ್ಟರ್
    * ಬೆಳಗ್ಗೆ 10.15 ಗಂಟೆ – ಹೆಚ್‍ಎಎಲ್‍ನಿಂದ ಕಂಠೀರವ ಸ್ಟೇಡಿಯಂಗೆ ಅಂಬುಲೆನ್ಸ್ ನಲ್ಲಿ ಪಾರ್ಥಿವ ಶರೀರ ಶಿಫ್ಟ್ (ಸಾರ್ವಜನಿಕ ದರ್ಶನ ಇರಲ್ಲ)
    * ಬೆಳಗ್ಗೆ 11 ಗಂಟೆ – ಕಂಠೀರವ ಸ್ಟೇಡಿಯಂನಿಂದ ತೆರೆದ ವಾಹನದಲ್ಲಿ ಅಂಬಿ ಅಂತಿಮ ಯಾನ ಆರಂಭ
    * ಮಧ್ಯಾಹ್ನ 1 ಗಂಟೆ – ಕಂಠೀರವ ಸ್ಟುಡಿಯೋಗೆ ಅಂಬರೀಶ್ ಪಾರ್ಥಿವ ಶರೀರ ರವಾನೆ
    * ಮಧ್ಯಾಹ್ನ 2 ಗಂಟೆ – ಸಕಲ ಸರ್ಕಾರಿ ಗೌರವಗಳೊಂದಿಗೆ ಅಣ್ಣಾವ್ರ ಸ್ಮಾರಕದ ಪಕ್ಕದಲ್ಲಿ ಅಂಬಿ ಅಂತ್ಯಕ್ರಿಯೆ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

     

  • ಸೋಮವಾರ ಕಂಠೀರವ ಸ್ಟುಡಿಯೋದಲ್ಲಿ ಅಂಬಿ ಅಂತ್ಯಕ್ರಿಯೆ

    ಸೋಮವಾರ ಕಂಠೀರವ ಸ್ಟುಡಿಯೋದಲ್ಲಿ ಅಂಬಿ ಅಂತ್ಯಕ್ರಿಯೆ

    ಬೆಂಗಳೂರು: ಮಾಜಿ ಸಚಿವ, ಹಿರಿಯ ಚಲನಚಿತ್ರ ನಟ ಅಂಬರೀಶ್(66) ಪಾರ್ಥೀವ ಶರೀರದ ಅಂತ್ಯಕ್ರಿಯೆ ಸೋಮವಾರ ಕಂಠೀರವ ಸ್ಟುಡಿಯೋದಲ್ಲಿ ಜರುಗಲಿದೆ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

    ಕಂಠೀರವ ಸ್ಟುಡಿಯೋದಲ್ಲಿರುವ ರಾಜ್ ಕುಮಾರ್ ಸಮಾಧಿ ಸ್ಮಾರಕದ ಬಳಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಸಿಎಂ ತಿಳಿಸಿದರು.

    ಭಾನುವಾರ ಇಡೀ ದಿನ ಪಾರ್ಥೀವ ಶರೀರವನ್ನು ಸಾರ್ವಜನಿಕ ಅಂತಿಮ ದರ್ಶನಕ್ಕೆ ಕಂಠೀರವ ಸ್ಟೇಡಿಯಂನಲ್ಲಿ ಇರಿಸಲಾಗುತ್ತಿದೆ. ಅಂತಿಮ ದರ್ಶನಕ್ಕೆ ಆಗಮಿಸಲು ಮಂಡ್ಯ ಜಿಲ್ಲೆಯಿಂದ ವಿಶೇಷ ಸಾರಿಗೆ ಬಸ್ ವ್ಯವಸ್ಥೆಗೊಳಿಸಲಾಗಿದೆ. ಅಂಬರೀಶ್ ನಿಧನದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದೆ.

    ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ನಗರದ ವಿಕ್ರಂ ಆಸ್ಪತ್ರೆಗೆ ಅಂಬರೀಶ್ ಅವರನ್ನು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ರಾತ್ರಿ ನಿಧನರಾದರು. ಅಂಬರೀಶ್ ಪತ್ನಿ, ಹಿರಿಯ ನಟಿ ಸುಮಲತಾ ಪುತ್ರ ಅಭಿಷೇಕ್ ಗೌಡ ಅವರನ್ನು ಅಗಲಿದ್ದಾರೆ.

    ಸಿಎಂ ಕಂಬನಿ
    ಕನ್ನಡ ಚಿತ್ರರಂಗ ಕಂಡ ಮಹತ್ವದ ಕಲಾವಿದ ಹಾಗೂ ಅಪರೂಪದ ವ್ಯಕ್ತಿತ್ವದ ರಾಜಕಾರಣಿ ಇನ್ನಿಲ್ಲ ಎನ್ನುವುದು ಅಪಾರ ದುಃಖವನ್ನುಂಟುಮಾಡಿದೆ. ನನ್ನ ಮತ್ತು ಅವರ ಸ್ನೇಹ ಅನುಗಾಲದ್ದು. ಚಿತ್ರರಂಗ ಹಾಗೂ ರಾಜಕಾರಣವನ್ನು ಮೀರಿದ ಸ್ನೇಹ ನಮ್ಮದಾಗಿತ್ತು. ಅಂಬರೀಶ್ ಹೃದಯ ಶ್ರೀಮಂತಿಕೆಯ ವ್ಯಕ್ತಿತ್ವವುಳ್ಳವರಾಗಿದ್ದರು. ಹಾಗಾಗಿಯೇ ಅವರು ಪ್ರತಿಯೊಬ್ಬರ ಗೌರವಕ್ಕೆ ಪಾತ್ರರಾಗಿದ್ದರು. ಅಂಬರೀಷ್ ಅವರ ಅಕಾಲಿಕ ಮರಣ ದೊಡ್ಡ ಶೂನ್ಯವನ್ನು ಸೃಷ್ಟಿಸಿದೆ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬ ವರ್ಗಕ್ಕೂ ಹಾಗೂ ಅಪಾರ ಅಭಿಮಾನಿಗಳಿಗೂ ನೀಡಲಿ ಎಂದು ಸಿಎಂ ಕಂಬನಿ ಮಿಡಿದಿದ್ದಾರೆ.

    https://www.youtube.com/watch?v=ApIo8O24SeU

  • ಶೂಟಿಂಗ್ ವೇಳೆ ನಟ ರಕ್ಷಿತ್ ಶೆಟ್ಟಿ ಪ್ರಾಣಾಪಾಯದಿಂದ ಪಾರು!

    ಶೂಟಿಂಗ್ ವೇಳೆ ನಟ ರಕ್ಷಿತ್ ಶೆಟ್ಟಿ ಪ್ರಾಣಾಪಾಯದಿಂದ ಪಾರು!

    ಬೆಂಗಳೂರು: ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ ಚಿತ್ರಿಕರಣದ ವೇಳೆ ಕುದುರೆ ಮೇಲಿನಿಂದ ಬಿದ್ದು, ಪ್ರಾಣಾಪಾಯದಿಂದ ಪಾರಾಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಶ್ರೀಮನ್ನಾರಾಯಣ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ. 10 ದಿನಗಳಿಂದ ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಈ ವೇಳೆ ರಕ್ಷಿತ್ ಶೆಟ್ಟಿ ಕುದುರೆ ಮೇಲೆ ಕುಳಿತು ಸವಾರಿ ಮಾಡುತ್ತಿರುತ್ತಾರೆ. ಅದೇ ಸಂದರ್ಭದಲ್ಲಿ ಕುದುರೆ ಏಕಾಏಕಿ ಕೆನೆದು ನಿಂತಿದೆ. ಆಗ ಆಯಾ ತಪ್ಪಿ ರಕ್ಷಿತ್ ಶೆಟ್ಟಿ ಹಾಗೂ ಕುದುರೆ ನೆಲದ ಮೇಲೆ ಹಿಮ್ಮುಖವಾಗಿ ಬಿದ್ದಿದ್ದಾರೆ. ಘಟನೆಯಲ್ಲಿ ಯಾವುದೇ ಅಪಾಯಗಳು ಸಂಭವಿಸಿಲ್ಲ.

    ಈ ಘಟನೆ ವೇಳೆ ಎಲ್ಲರೂ ಅವರವರ ಕೆಲಸದಲ್ಲಿ ಬ್ಯುಸಿಯಾಗಿದ್ದರು. ಕುದುರೆ ನೋಡಿಕೊಳ್ಳುವವರು ಬಳಿ ಇದ್ದರೂ ಏಕಾಏಕಿ ಕೆನೆದು ನಿಂತಿದ್ದು ಯಾಕೆ ಎನ್ನುವುದು ತಿಳಿದು ಬಂದಿಲ್ಲ. ಕುದುರೆಯಿಂದ ಬಿದ್ದರೂ ರಕ್ಷಿತ್ ಶೆಟ್ಟಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು ಎಂದು ಚಿತ್ರತಂಡ ತಿಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಣ್ಣಲ್ಲಿ ಮಣ್ಣಾದ ‘ದೊಡ್ಮನೆ’ ಅಮ್ಮ

    ಮಣ್ಣಲ್ಲಿ ಮಣ್ಣಾದ ‘ದೊಡ್ಮನೆ’ ಅಮ್ಮ

    ಬೆಂಗಳೂರು: ಹಿರಿಯ ನಿರ್ಮಾಪಕಿ, ಡಾ. ರಾಜ್‍ಕುಮಾರ್ ಅವರ ಪತ್ನಿ ಪಾರ್ವತಮ್ಮ ರಾಜ್ ಕುಮಾರ್ ಬಾರದ ಲೋಕದತ್ತ ಪ್ರಯಾಣ ಬೆಳೆಸಿದ್ದಾರೆ.

    ಇಂದು ಸಂಜೆ ಸುಮಾರು 5.30ರ ವೇಳೆಗೆ ಸಕಲ ಸರ್ಕಾರಿ ಗೌರವದೊಂದಿಗೆ ಪಾರ್ವತಮ್ಮ ಅವರ ಅಂತ್ಯಕ್ರಿಯೆ ನೆರವೇರಿತು. ಕಂಠೀರವ ಸ್ಟುಡಿಯೋದಲ್ಲಿ ಡಾ ರಾಜ್‍ಕುಮಾರ್ ಅವರ ಸಮಾಧಿ ಬಲಭಾಗದಲ್ಲಿಯೇ ಪಾರ್ವತಮ್ಮ ಅವರ ಅಂತ್ಯಕ್ರಿಯೆ ಮಾಡಲಾಯ್ತು.

    ಕಿರಿಯ ಪುತ್ರ ಪುನೀತ್ ರಾಜ್‍ಕುಮಾರ್ ಅಂತಿಮ ವಿಧಿವಿಧಾನ ನೆರವೇರಿಸಿದ್ರು. ಗೋವಿಂದನ ನಾಮ ಸ್ಮರಣೆ ಮಾಡುತ್ತಾ, ಶಂಕ ಜಾಗಟೆ ಬಾರಿಸುತ್ತಾ ಪೂಜೆ ಮಾಡಲಾಯ್ತು. ಈಡಿಗ ಸಂಪ್ರದಾಯದಂತೆ ವಿಧಿವಿಧಾನಗಳನ್ನ ನೆರವೇರಿಸಲಾಯ್ತು. ಪೊಲೀಸರು 3 ಸುತ್ತು ಕುಶಾಲ ತೋಪು ಹಾರಿಸುವ ಮೂಲಕ ಗೌರವ ವಂದನೆ ಸಲ್ಲಿಸಿದ್ರು.

    ಸಚಿವರಾದ ಕೆಜೆ ಜಾರ್ಜ್, ಡಿಕೆ ಶಿವಕುಮಾರ್ ಸೇರಿದಂತೆ ಚಿತ್ರರಂಗ ಹಾಗೂ ರಾಜಕೀಯ ಗಣ್ಯರು ಮತ್ತು ರಾಜ್‍ಕುಮಾರ್ ಕುಟುಂಬಸ್ಥರು ಈ ವೇಳೆ ಉಪಸ್ಥಿತರಿದ್ರು.

    ಕಂಠೀರವ ಸ್ಟುಡಿಯೋದೊಳಗೆ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿತ್ತು. ಸಾರ್ವಜನಿಕರು ಒಳನುಗ್ಗಲು ಯತ್ನಿಸಿ ನೂಕುನುಗ್ಗಲು ಉಂಟಾಗಿದ್ದರಿಂದ ಲಘು ಲಾಠಿಪ್ರಹಾರ ನಡೆಸಲಾಯ್ತು.

    ಬಹು ಅಂಗಾಂಗ ವೈಫಲ್ಯದಿಂದ ಬಳುತ್ತಿದ್ದ ಪಾರ್ವತಮ್ಮ ಅವರು ಕಳೆದ 15 ದಿನಗಳಿಂದ ನಗರದ ರಾಮಯ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಇಹಲೋಕ ತ್ಯಜಿಸಿದ್ದಾರೆ.

    ಓರ್ವ ಯಶಸ್ವಿ ಪುರುಷನ ಹಿಂದೆ ಓರ್ವ ಮಹಿಳೆ ಇರ್ತಾರೆ ಎಂಬ ಮಾತಿದೆ. ಈ ಮಾತು ಅಕ್ಷರಶಃ ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಸೂಕ್ತವಾಗಿದೆ. ಡಾ.ರಾಜ್ ಕುಮಾರ್ ಎಂಬ ಮಹಾನ್ ನಟನ ಹಿಂದೆ ಪಾರ್ವತಮ್ಮ ರಾಜ್ ಕುಮಾರ್ ದೊಡ್ಡ ಶಕ್ತಿ ಆಗಿದ್ದರು. ಡಾ.ರಾಜ್ ಕುಮಾರ್ ಓರ್ವ ವ್ಯಕ್ತಿಯಾಗಿ, ನಟರಾಗಿ, ನಟಸಾರ್ವಭೌಮರಾಗಿ, ಅಭಿಮಾನಿಗಳ ಪಾಲಿಗೆ ಅಣ್ಣಾವ್ರಾಗಿ ರೂಪುಗೊಳ್ಳಲು ಪಾರ್ವತಮ್ಮ ಅವರ ಕಾಣಿಕೆ ದೊಡ್ಡದು. ರಾಜ್ ಕುಮಾರ್ ಅವರಿಗೆ ಪಾರ್ವತಮ್ಮ ಕೇವಲ ಪತ್ನಿಯಾಗಿ ಮಾತ್ರವಲ್ಲ ಗೆಳತಿ, ಮಾರ್ಗದರ್ಶಕಿ ಹಾಗೂ ವ್ಯಕ್ತಿತ್ವ ರೂಪಕಿ ಆಗಿದ್ದರು. ”ಪಾರ್ವತಿ ನನ್ನ ಪತ್ನಿ ಮಾತ್ರವಲ್ಲ, ನನ್ನ ತಾಯಿ ಎಂದು ಸ್ವತಃ ರಾಜ್ ಕುಮಾರ್ ಅವರೇ ಹಲವು ಬಾರಿ ಹೇಳಿಕೊಂಡಿದ್ದನ್ನ ಇಲ್ಲಿ ಸ್ಮರಿಸಬಹುದು.

    ಮದುವೆ: ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಹಾಗೂ ಪಾರ್ವತಮ್ಮ ಕುಟುಂಬದವರು ಸಂಬಂಧಿಕರೇ ಆಗಿದ್ದರು. ಪಾರ್ವತಮ್ಮ ಹುಟ್ಟಿದ ಸಮಯದಲ್ಲಿ ಮನೆಗೆ ಬಂದಿದ್ದ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು ”ಇವಳೇ ನನ್ನ ಸೊಸೆ” ಎಂದು ಅಂದೇ ನಿರ್ಧರಿಸಿದ್ದರಂತೆ. ಇನ್ನು ರಾಜ್ ಕುಮಾರ್ ಕೂಡ ಸಂಗೀತ ಕಲಿಯಲು ಪಾರ್ವತಮ್ಮ ಅವರ ಮನೆಗೆ ಹೋಗುತ್ತಿದ್ದರಂತೆ. ಆಗಲೇ ಇಬ್ಬರಲ್ಲಿ ಪರಿಚಯ ಮೂಡಿತ್ತು.
    1953ರ ಜೂನ್ 25 ರಂದು ರಾಜ್ ಕುಮಾರ್ ಅವರೊಂದಿಗೆ ಪಾರ್ವತಮ್ಮ ಅವರು ವಿವಾಹವಾದರು. ಆಗ ಅವರ ವಯಸ್ಸು ಕೇವಲ 14, ರಾಜ್ ಕುಮಾರ್ ಅವರ ವಯಸ್ಸು 24 ವರ್ಷ. ನಂಜನಗೂಡಿನ ರಾಣಪ್ಪ ಛತ್ರದಲ್ಲಿ ಇವರಿಬ್ಬರ ಮದುವೆ ನೆರವೇರಿತ್ತು. ದುರಾದೃಷ್ಟವಶಾತ್ ರಾಜ್ ಕುಮಾರ್ ತಂದೆ ಈ ಮದುವೆಗೂ ಮುಂಚೆ ವಿಧಿವಶರಾಗಿದ್ದರು.

    ಅದೃಷ್ಟ ದೇವತೆ: ರಾಜ್ ಕುಮಾರ್ ಅವರಿಗೆ ಪಾರ್ವತಮ್ಮ ಅದೃಷ್ಟ ದೇವತೆ. ರಾಜ್ ಕುಮಾರ್ ಅವರನ್ನ ಪಾರ್ವತಮ್ಮ ಮದುವೆಯಾದಾಗ ರಾಜ್ ಅವರು ರಂಗಭೂಮಿ ಕಲಾವಿದರಾಗಿದ್ದರು. ಆದ್ರೆ ಮದುವೆಯ ನಂತರ ರಾಜ್ ಕುಮಾರ್ ಅವರಿಗೆ ಅದೃಷ್ಟ ಒಲಿಯುತ್ತೆ. ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ಸಿಗುತ್ತೆ. ಅದು 1954 ರ ‘ಬೇಡರ ಕಣ್ಣಪ್ಪ’ ಚಿತ್ರ. ಅಲ್ಲಿವರೆಗೂ ಮುತ್ತುರಾಜ್ ಆಗಿದ್ದವರು ರಾಜ್ ಕುಮಾರ್ ಆಗಿ ಬದಲಾಗ್ತಾರೆ.

    ದಿಟ್ಟ ನಿರ್ಮಾಪಕಿ : ಗಾಂಧಿನಗರದಲ್ಲಿ ಸಿನಿಮಾ ಮಾಡಿ ಹಣ ಕಳೆದುಕೊಂಡೆ, ಜೀವನ ಕಳೆದುಕೊಂಡೆ ಎಂದು ಹೇಳುವ ನಿರ್ಮಾಪಕರು ಕಾಣುತ್ತಾರೆ. ಆದ್ರೆ ಸಿನಿಮಾನೇ ಪ್ರಾಣ, ಸಿನಿಮಾನೇ ಉಸಿರು, ಸಿನಿಮಾದಿಂದಲೇ ಬದುಕು ಎಂದು ಬದುಕುತ್ತಾ, ಸಿನಿಮಾದಿಂದಲೇ ಎಲ್ಲವೂ ಸಿಕ್ಕಿದೆ ಎಂದು ಹೇಳಿಕೊಂಡ ದಿಟ್ಟ ಮಹಿಳೆ ಪಾರ್ವತಮ್ಮ ರಾಜ್ ಕುಮಾರ್. ಅದೇ ರೀತಿ ಯಶಸ್ವಿ ಸಿನಿಮಾಗಳನ್ನ ನಿರ್ಮಾಣ ಮಾಡಿ ಕನ್ನಡ ಚಿತ್ರರಂಗದ ದಿಟ್ಟ ನಿರ್ಮಾಪಕಿ ಎನಿಸಿಕೊಂಡರು. ಅದೊಂದು ಕಾಲದಲ್ಲಿ ರಾಜ್ ಕುಮಾರ್ ಅವರ ಜೊತೆ ಸಿನಿಮಾ ಮಾಡಿದ್ರೆ, ನಿರ್ಮಾಪಕರಿಗೆ ನಷ್ಟವಾಗುತ್ತೆ ಎಂಬ ಮಾತು ಕೇಳಿಬಂತು. ಇದರಿಂದ ರಾಜ್ ಕುಮಾರ್ ಅವರು ಬೇಸರಗೊಂಡು, ನಮಗೆ ಸಿನಿಮಾ ಬೇಡ, ಊರಿಗೆ ಹೋಗಿ ಕೃಷಿ ಮಾಡಿ ಬದುಕೋಣ ಎಂದು ನಿರ್ಧರಿಸಿದ್ದರಂತೆ. ಇಂತಹ ಸಮಯದಲ್ಲಿ ರಾಜ್ ಕುಮಾರ್ ಅವರಿಗೆ ಸಮಾಧಾನಪಡಿಸಿದ ಪಾರ್ವತಮ್ಮ ದಿಟ್ಟ ನಿರ್ಧಾರ ತೆಗೆದುಕೊಂಡರು. ಪೂರ್ಣಿಮಾ ಎಂಟರ್‍ಪ್ರೈಸಸ್, ವಜ್ರೇಶ್ವರಿ ಕಂಬೈನ್ಸ್ ಸ್ಥಾಪಿಸಿದರು. ಪತಿ, ಮಕ್ಕಳದ್ದು ಸೇರಿ 80ಕ್ಕೂ ಹೆಚ್ಚು ಚಿತ್ರ ನಿರ್ಮಿಸಿದ್ರು. ಮೊದಲ ಚಿತ್ರ ತ್ರಿಮೂರ್ತಿಯಿಂದ ಹಿಡಿದು ಶಬ್ಧವೇದಿವರೆಗೆ ಶೇಕಡಾ 90ರಷ್ಟು ಹಿಟ್ ಚಿತ್ರಗಳನ್ನು ಕೊಟ್ಟರು.

    ಮೂರು ರತ್ನಗಳನ್ನ ಕನ್ನಡಕ್ಕೆ ಕೊಟ್ಟ ಪಾರ್ವತಮ್ಮ: ಪಾರ್ವತಮ್ಮ ಅವರು ಕೇವಲ ರಾಜ್ ಕುಮಾರ್ ಅವರಿಗೆ ಮಾತ್ರ ಶಕ್ತಿ ಆಗಿರಲಿಲ್ಲ. ತಮ್ಮ ಮೂವರು ಮಕ್ಕಳಿಗೂ ಕೂಡ ಪಾರ್ವತಮ್ಮ ಯಶಸ್ಸಿನ ಮೆಟ್ಟಿಲು ಆಗಿದ್ದರು. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಎಂಬ ಮೂರು ರತ್ನಗಳನ್ನ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು. ವಿತರಣೆಯಲ್ಲಿ ಬದಲಾವಣೆ ತಂದರು. ಶಿವರಾಜ್‍ಕುಮಾರ್‍ಗೆ ಆನಂದ್, ರಥಸಪ್ತಮಿ.. ರಾಘವೇಂದ್ರ ರಾಜ್‍ಕುಮಾರ್‍ಗೆ ನಂಜುಂಡಿ ಕಲ್ಯಾಣದಿಂದ ಹಿಡಿದು ಸ್ವಸ್ತಿಕ್‍ವರೆಗೂ ಹಲವು ಹಿಟ್ ಚಿತ್ರಗಳನ್ನು ನೀಡಿದ್ರು.

    ಪಾರ್ವತಮ್ಮ ಕೃಪಾಕಟಾಕ್ಷದಿಂದ ಬಂದ ನಟಿಯರು: ಪಾರ್ವತಮ್ಮ ಅವರ ಆಶೀರ್ವಾದದಿಂದ ಅನೇಕ ಪ್ರತಿಭೆಗಳು ಇಂಡಸ್ಟ್ರಿಗೆ ಪರಿಚಯವಾಗಿದ್ದಾರೆ. ಸುಧಾರಾಣಿ, ಸರಳ, ವೀಣಾ, ವಿದ್ಯಾಶ್ರೀ, ಮಾಲಾಶ್ರೀ, ಮೋಹಿನಿ, ಮಮತಾಶ್ರೀ, ಪ್ರೇಮಾ, ಶಿಲ್ಪಾ, ಅನು ಪ್ರಭಾಕರ್, ರಕ್ಷಿತಾ, ರಮ್ಯಾ ಹೀಗೆ ಇನ್ನೂ ಹಲವು ನಟಿಯರು ಬೆಳ್ಳಿತೆರೆ ಆಳಿದ್ದಾರೆ.

    ಹೆಣ್ಣು ಮಕ್ಕಳ ಬದುಕಿಗೆ ಆಸರೆ : ಸಮಾಜದಲ್ಲಿ ತಿರಸ್ಕೃರಾದ ನಿರ್ಗತಿಕ ಮಹಿಳೆಯರು ಹಾಗೂ ಮಕ್ಕಳ ಪುನರ್ ವಸತಿಗಾಗಿ ಪಾರ್ವತಮ್ಮ ರಾಜಕುಮಾರ್ 1997ರಲ್ಲಿ ಈ ಸ್ವಯಂ ಸೇವಾ ಸಂಸ್ಥೆಯನ್ನ ಸ್ಥಾಪಿಸಿದ್ರು. ಮೈಸೂರಿನ ನಂಜನಗೂಡು ರಸ್ತೆಯಲ್ಲಿ ಸ್ಥಾಪಿಸಿರುವ ಈ ಶಕ್ತಿಧಾಮದಲ್ಲಿ ಪ್ರಸ್ತುತ 40 ಮಹಿಳೆಯರು ಹಾಗೂ 14 ಮಕ್ಕಳು ಆಶ್ರಯ ಪಡೆದಿದ್ದಾರೆ. 1997 ರಲ್ಲಿ ಸ್ಥಾಪನೆಯಾದ ಶಕ್ತಿಧಾಮಕ್ಕೆ ಡಾ.ರಾಜ್‍ಕುಮಾರ್ ಮೊದಲ ಅಧ್ಯಕ್ಷರಾಗಿದ್ರು. ಈಗಲೂ ಶಕ್ತಿಧಾಮಕ್ಕೆ ಪಾರ್ವತಮ್ಮ ರಾಜ್‍ಕುಮಾರ್ ಗೌರವಾಧ್ಯಕ್ಷರಾಗಿದ್ದರು. ದೌರ್ಜನ್ಯ, ಶೋಷಣೆ, ಲೈಂಗಿಕ ಕಿರುಕುಳ ಹಾಗೂ ಯಾವುದೇ ವೈಯುಕ್ತಿಕ ಸಮಸ್ಯೆಗಳಿಗೆ ಒಳಗಾಗಿರುವ ಮಹಿಳೆಯರಿಗೆ ಶಕ್ತಿಧಾಮ ನೆಲೆಯಾಗಿದೆ.

  • ರಾಜ್‍ ಕುಮಾರ್ ಸಮಾಧಿ ಬಳಿಯೇ ಪಾರ್ವತಮ್ಮ ರಾಜ್‍ ಕುಮಾರ್ ಅಂತ್ಯಕ್ರಿಯೆ

    ರಾಜ್‍ ಕುಮಾರ್ ಸಮಾಧಿ ಬಳಿಯೇ ಪಾರ್ವತಮ್ಮ ರಾಜ್‍ ಕುಮಾರ್ ಅಂತ್ಯಕ್ರಿಯೆ

    ಬೆಂಗಳೂರು: ಹಿರಿಯ ನಿರ್ಮಾಪಕಿ ಪಾವರ್ತಮ್ಮ ರಾಜ್‍ಕುಮಾರ್ ಇಹಲೋಕ ತ್ಯಜಿಸಿದ್ದಾರೆ. ಸದಾಶಿವನಗರದ ಪೂರ್ಣಪ್ರಜ್ಞ ಆಟದ ಮೈದಾನದಲ್ಲಿ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿದೆ. ಇಂದು ಮಧ್ಯಾಹ್ನ 4:30 ಕ್ಕೆ ಪಾರ್ಥಿವ ಶರೀರವನ್ನು ಕಂಠೀರವ ಸ್ಟುಡಿಯೋಗೆ ತೆಗೆದುಕೊಂಡು ಹೋಗಲಾಗುತ್ತದೆ. ಸರ್ಕಾರದಿಂದ ರಾಜ್‍ಕುಮಾರ್ ಸಮಾಧಿ ಬಳಿ ಪಾರ್ವತಮ್ಮ ರಾಜ್ ಕುಮಾರ್ ಅವರ ಅಂತ್ಯಸಂಸ್ಕಾರಕ್ಕೆ ಜಾಗ ನೀಡಲಾಗಿದೆ.

    ಈ ಹಿನ್ನೆಲೆಯಲ್ಲಿ ರಾಜ್‍ಕುಮಾರ್ ಸಮಾಧಿ ಸ್ಥಳಕ್ಕೆ ಗೃಹ ಸಚಿವರಾದ ಜಿ. ಪರಮೇಶ್ವರ್ ಭೇಟಿ ನೀಡಿ ಅಂತ್ಯಸಂಸ್ಕಾರಕ್ಕೆ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಮಾತನಾಡಿದ ಅವರು ಸಿನಿಮಾ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದಂತಹ, ಅಭಿಮಾನಿಗಳ ಗೌರವ ಪ್ರೀತಿ ಸಂಪಾದನೆ ಮಾಡಿದ ಡಾ ರಾಜ್ ಕುಮಾರ್ ಅವರ ಪತ್ನಿ ಪಾರ್ವತಮ್ಮ ರಾಜ್‍ಕುಮಾರ್ ಆನೇಕ ನಟ ನಟಿಯರಿಗೆ ಮಾರ್ಗದರ್ಶಕರಾದವರು. ಅವರ ನಿಧನದಿಂದ ಸಿನಿಮಾರಂಗ, ಕುಟುಂಬದ ಸದಸ್ಯರು, ಅಭಿಮಾನಿಗಳಿಗೆ ದುಃಖವಾಗಿದೆ. ದುಃಖ ಸಹಿಸೋ ಶಕ್ತಿ ದೇವರು ದಯಪಾಲಿಸಲಿ ಅಂದ್ರು.

    ಸರ್ಕಾರದಿಂದ ರಾಜಕುಮಾರ್ ಸಮಾಧಿ ಬಳಿ ಪಾರ್ವತಮ್ಮ ರಾಜ್ ಕುಮಾರ ಅಂತ್ಯಸಂಸ್ಕಾಕ್ಕೆ ಜಾಗ ನೀಡಲಾಗಿದೆ. ಅಭಿಮಾನಿಗಳಲ್ಲಿ ಮನವಿ ಮಾಡುತ್ತೇನೆ ರಾಜ್‍ಕುಮಾರ್ ಅವರ ಅಂತ್ಯಸಂಸ್ಕಾರದಲ್ಲಿ ನಡೆದ ಘಟನೆ ಮರುಕಳಿಸದಿರಲಿ ಅಂತ ಪರಮೇಶ್ವರ್ ಹೇಳಿದ್ರು.

    ಚಲನಚಿತ್ರ ವಾಣಿಜ್ಯ ಮಂಡಳಿ ಆಧ್ಯಕ್ಷ ಸಾ.ರಾ ಗೋವಿಂದ್ ಮಾತನಾಡಿ, ರಾಜ್ ಕುಮಾರ್ ಸಮಾಧಿ ಪಕ್ಕದಲ್ಲಿ ಆಂತ್ಯಕ್ರಿಯೆ ಮಾಡಲು ಅನುವು ಮಾಡಿಕೊಟ್ಟಿದ್ದಾರೆ. ರಾಜ್ಯದ ಮುಖ್ಯಮಂತ್ರಿಗೆ ಅಭಿನಂದನೆ. ಸದ್ಯ ಸ್ಥಳದಲ್ಲಿ ಪರಿಶೀಲನೆ ಮಾಡಿದ್ದೇವೆ. 3:30 ಕ್ಕೆ ಸದಾಶಿವನಗರದಿಂದ, ಸ್ಯಾಂಕಿ ಟ್ಯಾಂಕ್, ಸರ್ಕಲ್ ಮಾರಮ್ಮ ದೇವಾಲಯ, ಯಶವಂತಪುರ, ಗೋವರ್ಧನ ಥಿಯೇಟರ್ ಮಾರ್ಗವಾಗಿ ಕಂಠೀರವ ಸ್ಟುಡಿಯೋಗೆ ಪಾರ್ಥಿವ ಶರೀರ ಬರುತ್ತೆ ಅಂತ ತಿಳಿಸಿದ್ರು.

    ದಾಸಯ್ಯನ ಪದ್ದತಿಯಲ್ಲಿ ವಿಧಿವಿಧಾನದಲ್ಲಿ ನಡೆಯುತ್ತದೆ. ರಾಜ್ ಕುಮಾರ್ ಅವರಿಗೆ ಅವರ ಕುಟುಂಬ ಯಾವುದೇ ವಿದಿ ವಿಧಾನ ಮಾಡಿರಲಿಲ್ಲ. ಈ ಬಾರಿ ಸರಿಯಾದ ರೀತಿಯಲ್ಲಿ ವಿಧಿವಿಧಾನ ನಡೆಸಲಾಗುತ್ತೆ. ಡಾ. ರಾಜ್ ಕುಮಾರ್ ಪ್ರತಿಷ್ಠಾನದಿಂದ ಸಕಲ ರೀತಿ ಸಿದ್ಧತೆ ಮಾಡಲಾಗಿದೆ. ಸಾರ್ವಜನಿಕರು ಶಾಂತಿಯಿಂದ ವರ್ತಿಸಬೇಕಾಗಿ ಮನವಿ ಮಾಡುತ್ತೇವೆ ಅಂದ್ರು.

    ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆಯಿಂದ ಬಳುತ್ತಿದ್ದ ಪಾರ್ವತಮ್ಮ ಅವರು ನಗರದ ರಾಮಯ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ.