Tag: Kannada words

  • ಚಿಕ್ಕಬಳ್ಳಾಪುರ | ಕಾಗುಣಿತ ತಪ್ಪಾಗಿರೋದಕ್ಕೆ ತಹಶೀಲ್ದಾರ್‌ಗೆ ನೋಟಿಸ್

    ಚಿಕ್ಕಬಳ್ಳಾಪುರ | ಕಾಗುಣಿತ ತಪ್ಪಾಗಿರೋದಕ್ಕೆ ತಹಶೀಲ್ದಾರ್‌ಗೆ ನೋಟಿಸ್

    ಚಿಕ್ಕಬಳ್ಳಾಪುರ: ಪತ್ರವೊಂದರಲ್ಲಿ ಕಾಗುಣಿತ ತಪ್ಪಾಗಿರೋದಕ್ಕೆ ತಹಶೀಲ್ದಾರ್‌ಗೆ (Tahsildar) ನೋಟಿಸ್‌ ನೀಡಿರುವ ಚಿಕ್ಕಬಳ್ಳಾಪುರದಲ್ಲಿ (Chikkaballapura) ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ಪತ್ರದಲ್ಲಿ ಕನ್ನಡ ಪದಗಳು ತಪ್ಪಾಗಿದ್ದರೂ ಸಹಿ ಮಾಡಿರುವ ಚಿಂತಾಮಣಿ ತಹಶೀಲ್ದಾರ್ ಸುದರ್ಶನ್‌ ಅವರಿಗೆ ಚಿಕ್ಕಬಳ್ಳಾಪುರ ಡಿಸಿ ಪಿ.ಎನ್‌ ರವೀಂದ್ರ ಅವರು ನೋಟಿಸ್‌ ನೀಡಿದ್ದಾರೆ. ಅಲ್ಲದೇ ಒಂದು ವಾರದೊಳಗೆ ಉತ್ತರಿಸುವಂತೆ ಸೂಚನೆ ನೀಡಿದ್ದಾರೆ.

    ತಾಲೂಕು ಕಚೇರಿ ಎದುರು ಧರಣಿ ಮಾಡಲು ಶಂಬೂಕ ಸಂಘರ್ಷ ಸಮಿತಿ ಅನುಮತಿ ಕೋರಿ ತಹಶೀಲ್ದಾರ್‌ಗೆ ಮನವಿ ಪತ್ರ ನೀಡಿತ್ತು. ಇದಕ್ಕೆ ತಹಶೀಲ್ದಾರ್‌ ಅವರು ಅನುಮತಿ ನೀಡಲಾಗುವುದಿಲ್ಲ ಎಂದು ತಿಳಿವಳಿಕೆ ಪತ್ರ ನೀಡಿದ್ದರು. ತಿಳಿವಳಿಕೆ ಪತ್ರದಲ್ಲಿ ಸರಳ ಕನ್ನಡ ಪದಗಳನ್ನ ತಪ್ಪಾಗಿ ನಮೂದು ಮಾಡಲಾಗಿತ್ತು. ಈ ಬಗ್ಗೆ ಶಂಬೂಕ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸೂರ್ಯಕಿರಣ್‌ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.

    ಸೂರ್ಯಕಿರಣ್‌ ಅವರು ನೀಡಿದ ದೂರಿನ ಮೇರೆಗೆ ಜಿಲ್ಲಾಧಿಕಾರಿ ಪಿ.ಎನ್‌ ರವೀಂದ್ರ ಅವರು ತಹಶೀಲ್ದಾರ್‌ಗೆ ನೋಟಿಸ್‌ ಜಾರಿಗೊಳಿಸಿದ್ದಾರೆ.

  • ಸ್ವಾಸಂತ್ರ, ಬೇರೇಂದ್ರ, ದೇವಪ್ರಾಣಿ ಅಶೋಕ, ಅಂದ್ರಗೀನ – ಇದು ಶ್ರೀರಾಮುಲು ಕನ್ನಡ ಭಾಷಣ

    ಸ್ವಾಸಂತ್ರ, ಬೇರೇಂದ್ರ, ದೇವಪ್ರಾಣಿ ಅಶೋಕ, ಅಂದ್ರಗೀನ – ಇದು ಶ್ರೀರಾಮುಲು ಕನ್ನಡ ಭಾಷಣ

    ರಾಯಚೂರು: ಕನ್ನಡ ರಾಜ್ಯೋತ್ಸವ ದಿನದಂದೇ ಆರೋಗ್ಯ ಸಚಿವ ಶ್ರೀರಾಮುಲು ರಾಯಚೂರಿನಲ್ಲಿ ತಮ್ಮ ಭಾಷಣದುದ್ದಕ್ಕೂ ಕನ್ನಡದ ಕಗ್ಗೊಲೆ ಮಾಡಿದ್ದಾರೆ.

    ನಗರದ ಪೊಲೀಸ್ ಮೈದಾನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣವನ್ನಷ್ಟೇ ನೆರವೇರಿಸಿ ಮಾತನಾಡಿದ ರಾಮುಲು ಭಾಷಣದಲ್ಲಿ ಕನ್ನಡ ಪದಗಳನ್ನು ಇಷ್ಟ ಬಂದಂತೆ ಬಳಸಿ ಅರ್ಥವನ್ನೇ ಕೆಡಿಸಿದ್ದಾರೆ.

    ತಮ್ಮ ಭಾಷಣದಲ್ಲಿ ಅಳೆದು ತೂಗಿ ಎನ್ನಬೇಕಾದಲ್ಲಿ ಅಳೆದು ತುಳಿದು, ಕುವೆಂಪುಗೆ ಕುಯೆಂಪು, ದ.ರಾ ಬೇಂದ್ರೆ ಅವರನ್ನು ದ.ರಾ.ಬೇರೇಂದ್ರ, ಲೇಖಕರು ಎನ್ನುವ ಬದಲು ಲೇಕಕಗುರು, ಸ್ವಾತಂತ್ರ್ಯ ಹೇಳುವಲ್ಲಿ ಸ್ವಾಸಂತ್ರ, ಸಂಘಸಂಸ್ಥೆ ಬದಲಾಗಿ ಸಂಘ ಸಮಸ್ಯೆಗಳು, ದೇವನಾಂಪ್ರಿಯ ಅಶೋಕ ಬದಲಾಗಿ ದೇವಪ್ರಾಣಿಯ ಅಶೋಕ, ಪ್ರಗತಿ ಪಥದಲ್ಲಿ ಹೇಳುವಲ್ಲಿ ಪ್ರಗತಿ ಪದಕದಲ್ಲಿ, ಅಂದರೆ ಎಂಬಲ್ಲಿ ಅಂದ್ರಗೀನ. ಹೀಗೆ ಸಾಲು ಸಾಲು ತಪ್ಪು ಪದಗಳ ಬಳಕೆ ಮಾಡಿ ಕನ್ನಡಕ್ಕೆ ಅವಮಾನ ಮಾಡಿದ್ದಾರೆ.

    ಕನ್ನಡ ಧ್ವಜ ಹಾರಾಟಕ್ಕೆ ಕಡಿವಾಣ ಹಾಕಿದ್ದರ ಕುರಿತು ಸರಿಯಾಗಿ ಮಾತನಾಡದ ಶ್ರೀರಾಮುಲು ತಮ್ಮ ಮಾತುಗಳನ್ನೇ ಮೊಟಕುಗೊಳಿಸಿ ಸುಮ್ಮನಾದರು. ಸರ್ಕಾರ ಆದೇಶ ಮಾಡಿರುವುದರಿಂದ ಕನ್ನಡ ಧ್ವಜ ಹಾರಿಸಿಲ್ಲ ಎಂದಷ್ಟೇ ಹೇಳಿ ಸುಮ್ಮನೆ ಕುಳಿತರು.