Tag: kannada sangha

  • ಕತಾರ್‌ನಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ – ಭೈರಪ್ಪ, ಪುನೀತ್‍ಗೆ ಬಿರುದು ನೀಡಿ ಸನ್ಮಾನ

    ಕತಾರ್‌ನಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ – ಭೈರಪ್ಪ, ಪುನೀತ್‍ಗೆ ಬಿರುದು ನೀಡಿ ಸನ್ಮಾನ

    ದೋಹಾ: ಕತಾರ್‌ನಲ್ಲಿರುವ ಕರ್ನಾಟಕ ಸಂಘ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಖ್ಯಾತ ಸಾಹಿತಿ ಎಸ್.ಎಲ್ ಭೈರಪ್ಪ ಮತ್ತು ನಟ ಪುನೀತ್‍ ರಾಜ್‍ಕುಮಾರ್ ಅವರಿಗೆ ಬಿರುದು ನೀಡಿ ಸನ್ಮಾನಿಸಿದೆ.

    ಅಲ್ ವಕ್ರಾದಲ್ಲಿ ಇರುವ ಡಿ.ಪಿ.ಎಸ್-ಎಂ.ಐ.ಎಸ್ ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ, ಕಾದಂಬರಿಕಾರ ಪದ್ಮಶ್ರೀ ಡಾ. ಎಸ್.ಎಲ್ ಭೈರಪ್ಪರವರಿಗೆ 2019ನೇ ಸಾಲಿನ `ಕತಾರ್ ಕನ್ನಡ ಸಮ್ಮಾನ್’ ಪುರಸ್ಕಾರವನ್ನು ನೀಡಿ ಸನ್ಮಾನಿಸಲಾಯಿತು. ಪುನೀತ್ ಅವರಿಗೆ ‘ಕಲಾ ಸಾರ್ವಭೌಮ’ ಬಿರುದನ್ನು ನೀಡಿ ಸನ್ಮಾನಿಸಲಾಯಿತು. ಪುನೀತ್ ದಂಪತಿ ಹಾಗೂ ಭೈರಪ್ಪನವರನ್ನು ವಾದ್ಯಗೋಷ್ಠಿಯ ಮೆರವಣಿಗೆಯಲ್ಲಿ ಸಭಾಂಗಣಕ್ಕೆ ಕರೆತಂದು ಸನ್ಮಾನಿಸಿದ್ದು ವಿಶೇಷವಾಗಿತ್ತು.

    ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾರತೀಯ ರಾಯಭಾರಿಯಾದ ಪಿ. ಕುಮರನ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಭಾರತೀಯ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರಾದ ಮಣಿಕಂಠನ್, ನಿಕಟಪೂರ್ವ ಅಧ್ಯಕ್ಷೆ ಮಿಲನ್ ಅರುಣ್, ಐ.ಸಿ.ಬಿ.ಫ್.ನ ಉಪಾಧ್ಯಕ್ಷರಾದ ಮಹೇಶ ಗೌಡ ಹಾಗೂ ಅದರ ಜಂಟಿ ಕಾರ್ಯದರ್ಶಿಯಾದ ಸುಬ್ರಮಣ್ಯ ಹೆಬ್ಬಾಗಿಲು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಸಂಘದ ಸ್ಮರಣ ಸಂಚಿಕೆ ‘ಶ್ರೀಗಂಧ’ವನ್ನು ಕೂಡ  ಅತಿಥಿಗಳಿಂದ ಅನಾವರಣ ಮಾಡಲಾಯಿತು.

    ಸಂಘವು ಅಂಗೀಕೃತಗೊಂಡು 20 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಟಿವಿ ನಟ ಹಾಗೂ ನಿರೂಪಕ ವಿಜಯೇಂದ್ರ ಅಥಣೀಕರ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರೆ ಹಿನ್ನೆಲೆ ಗಾಯಕರಾದ ಹರ್ಷಾ ಹಾಗೂ ಕು. ಮೈತ್ರಿ ಐಯ್ಯರ್ ಅವರು ಹಾಡಿ ರಂಜಿಸಿದರು. ಡಾ. ಸಂಜಯ್ ಶಾಂತಾರಾಮ್‍ರವರ ಶಿವಪ್ರಿಯ ತಂಡ ನೃತ್ಯ ರೂಪಕವನ್ನು ಪ್ರದರ್ಶಿಸಿತು.

    ಕರ್ನಾಟಕ ಮೂಲದ ಸಂಘ ಸಂಸ್ಥೆಗಳಾದ ತುಳು ಕೂಟ, ಬಂಟ್ಸ್ ಕತಾರ್, ಎಸ್. ಕೆ.ಎಮ್. ಡಬ್ಲ್ಯೂ, ಕೆ.ಎಮ್.ಸಿ.ಎ., ಎಂ.ಸಿ.ಸಿ, ಕತಾರ್ ಬಿಲ್ಲವಾಸ್ ಹಾಗೂ ಎಂ.ಸಿ.ಎ ಸಂಘಟನೆಗಳ ಅಧ್ಯಕ್ಷರು ಹಾಗು ಕಾರ್ಯಕಾರಿ ಸಮಿತಿಯ ಸದಸ್ಯರು ಕೂಡ ಪ್ರಸ್ತುತರಿದ್ದರು.

    ಸ್ಥಳೀಯ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಘದ ಸದಸ್ಯರು ಹಾಗೂ ಮಕ್ಕಳು ಅಪ್ಪು ಅಭಿನಯಿಸಿದಂತಹ ಸಿನಿಮಾ ಹಾಡುಗಳ ಮೆಡ್ಲೆ ಹಾಗೂ ರಾಜಕುಮಾರ್ ರವರ ಕುರಿತು ನೃತ್ಯರೂಪಕವನ್ನು ಪ್ರದರ್ಶಿಸಿ ಪುನೀತ್‍ರವರ ಮೆಚ್ಚುಗೆಯನ್ನು ಪಡೆದರು. ಬಂಟ್ಸ್ ಕತಾರ್‌ನ ಸದಸ್ಯರು ಲಿಂಗೈಕ್ಯರಾದ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಯವರ ಕುರಿತು, ತುಳು ಕೂಟದ ಸದಸ್ಯರು ಪಂಚಭೂತಗಳು ಹಾಗು ಅವುಗಳಲ್ಲಿ ಉಂಟಾಗುತ್ತಿರುವ ಮಾಲಿನ್ಯದ ಬಗೆಗೆ, ಕತಾರ್ ಬಿಲ್ಲವಾಸ್‍ರವರು ಪರಿಸರ / ಕಾಡುಗಳ ಸಂರಕ್ಷಣೆಯ ಕುರಿತು ಹೀಗೆ ಕಾರ್ಯಕ್ರಮವನ್ನು ಪ್ರದರ್ಶಿಸಿದರು. 1 ಸಾವಿರಕ್ಕೂ ಹೆಚ್ಚು ಕನ್ನಡಿಗರು ಕಾರ್ಯಕ್ರಮಕ್ಕೆ ಆಗಮಿಸಿ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದರು.

  • ಸೋಮವಾರ ಬಂದ್ ಆಗೇ ಆಗುತ್ತೆ, ಬಸ್ ಸಂಚಾರ, ಹೋಟೆಲ್ ತೆರೆಯಲು ಬಿಡಲ್ಲ: ವಾಟಾಳ್

    ಸೋಮವಾರ ಬಂದ್ ಆಗೇ ಆಗುತ್ತೆ, ಬಸ್ ಸಂಚಾರ, ಹೋಟೆಲ್ ತೆರೆಯಲು ಬಿಡಲ್ಲ: ವಾಟಾಳ್

    ಬೆಂಗಳೂರು: ರಾಜ್ಯದ ಜನರಿಗೆ, ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಹಾಗೂ ನೆಲ-ಜಲ, ನಾಡು-ನುಡಿ ರಕ್ಷಣೆಗಾಗಿ ಅನೇಕ ಬೇಡಿಕೆಗಳನ್ನ ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ಸೋಮವಾರ ನಡೆಯುವ ಬಂದ್ ಗೆ ಬೆಂಬಲ ನೀಡುವಂತೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಮನವಿ ಮಾಡಿದ್ದಾರೆ.

    ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂದ್ ನಿಲ್ಲಿಸಲು ಕೆಲವರು ಪಿತೂರಿ ಮಾಡುತ್ತಿದ್ದಾರೆ. ಅವರಿಗೆ ಭಯವಿದೆ, ಎಲ್ಲಿ ಮುಂದೆ ಪ್ರಾದೇಶಿಕ ಪಕ್ಷ ಕಟ್ತಾರೆ ಅಂತಾ. ನಾನು ಇದಕ್ಕೆಲ್ಲ ಬಗ್ಗಲ್ಲ, ಬಂದ್ ನಡೆಸೇ ನಡೆಸ್ತೀವಿ. ಕೆಲ ಸಂಘಟನೆಗಳ ವಿರೋಧ ಇದೆ. ಬಂದ್ ಆದ್ರೇ ಏನಾಗಿ ಹೋಗುತ್ತೆ. ಬಂದ್ ವಾಪಸು ಪಡೆದುಕೊಳ್ಳುವ ಮಾತೇ ಇಲ್ಲ. ಹೀಗಾಗಿ ನಾಳೆ ಬಂದ್ ಆಗೇ ಆಗುತ್ತೆ. ಬಸ್ ಸಂಚಾರ, ಹೋಟೆಲ್ ತೆರೆಯಲು ಬಿಡಲ್ಲ ಅಂತಾ ವಾಟಾಳ್ ಸ್ಪಷ್ಟಪಡಿಸಿದ್ದಾರೆ.

    ಬಳಿಕ ಸಾರಿಗೆ ನೌಕರರ ಸಂಘದ ಅನಂತ್ ಸುಬ್ಬರಾವ್ ಹಾಗು ನಾಗರಾಜ್ ವಿರುದ್ಧ ಕಿಡಿಕಾರಿದ ವಾಟಾಳ್ ನಾಗರಾಜ್, ನನ್ನ ಕರೆಯನ್ನು ಇವರು ಸ್ವೀಕರಿಸುತ್ತಿಲ್ಲ. ನಾನು ಅವರ ಹೋರಾಟಕ್ಕೆ ಸಾಕಷ್ಟು ಬೆಂಬಲ ನೀಡಿದ್ದೇನೆ. ಆದ್ರೆ ಈಗ ನನ್ನಂಥವನ ಕರೆಯನ್ನು ಸ್ಪೀಕರಿಸಲ್ಲ. ನಾಳೆ ಬಸ್ ಸಂಚಾರಕ್ಕೂ ಬಿಡಲ್ಲ ಅಂತಾ ಹೇಳಿದರು.

    ಮಾಧ್ಯಮದ ವಿರುದ್ಧ ಕಿಡಿ: ಬಂದ್ ಗೆ ಕೆಲ ಸಂಘಟನೆಗಳ ವಿರೋಧವಿದೆ. ವಿರೋಧಿಸುವ ಸಂಘಟನೆಗಳು ಕೆಲ ಸಣ್ಣಪುಟ್ಟ ಹೇಳಿಕೆಗಳನ್ನು ಕೊಟ್ಟರೆ ಮಾಧ್ಯಮದವರು ಅದನ್ನೇ ದೊಡ್ಡದು ಮಾಡುತ್ತೀರಿ. ಒಟ್ಟಿನಲ್ಲಿ ಬಂದ್ ಗೆ ವಿರೋಧ ಮಾಧ್ಯಮ ಸೃಷ್ಠಿ ಅಂತಾ ಮಾಧ್ಯಮದ ಮೇಲೆ ಗೂಬೆ ಕೂರಿಸಿದರು.