Tag: kannada sahitya sammelana

  • ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರ ನೇಮಕಕ್ಕೆ ತೀವ್ರ ವಿರೋಧ

    ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರ ನೇಮಕಕ್ಕೆ ತೀವ್ರ ವಿರೋಧ

    ಚಿಕ್ಕಮಗಳೂರು: ಜನವರಿ 10 ಮತ್ತು 11ರಂದು ಜಿಲ್ಲೆಯ ಶೃಂಗೇರಿಯಲ್ಲಿ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕಲ್ಕುಳಿ ವಿಠಲ್ ಹೆಗ್ಡೆ ವಿರುದ್ಧ ತೀವ್ರ ಅಸಾಮಾಧಾನ ವ್ಯಕ್ತವಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ ಉಳಿಸಿ ವೇದಿಕೆ ಕಲ್ಕುಳಿ ವಿಠಲ್ ಹೆಗ್ಡೆ ನೇಮಕಕ್ಕೆ ವಿರೋಧ ವ್ಯಕ್ತಪಡಿಸಿದೆ.

    ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗುವವರು ವಿವಾದಗಳಿಂದ ದೂರವಿದ್ದು, ರಾಜಕೀಯಕ್ಕೂ ಅಂಟಿಕೊಂಡಿರದೆ ಸಾಹಿತ್ಯ ಕೃಷಿ ಮಾಡಿದ ಸರ್ವಮಾನ್ಯ ವ್ಯಕ್ತಿಗಳಾಗಿ ಕ್ರಿಮಿನಲ್ ಆರೋಪಗಳಿಂದ ಮುಕ್ತರಾಗಿರಬೇಕು. ಆದರೆ ಕಲ್ಕುಳಿ ವಿಠಲ್ ಹೆಗ್ಡೆ ವಿವಾದಿತ ವ್ಯಕ್ತಿಯಾಗಿದ್ದು, ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆಯ ಎಲ್ಲಾ ಅಂಶಗಳನ್ನ ಗಾಳಿಗೆ ತೂರಿ ಏಕಪಕ್ಷೀಯವಾಗಿ ಅಧ್ಯಕ್ಷರನ್ನ ನೇಮಕ ಮಾಡಲಾಗಿದೆ ಎಂದು ಸಾಹಿತ್ಯ ಪರಿಷತ್ ಉಳಿಸಿ ವೇದಿಕೆ ಆರೋಪಿಸಿದೆ.

    ಕನ್ನಡ ರಾಜ್ಯೋತ್ಸವದಂದು ತಾಲೂಕು ಸಾಹಿತ್ಯ ಪರಿಷತ್ ಸನ್ಮಾನಕ್ಕಾಗಿ ಕಲ್ಕುಳಿ ವಿಠಲ್ ಹೆಗ್ಡೆ ಹೆಸರನ್ನು ಸೂಚಿಸಿತ್ತು. ಆದರೆ ಇವರ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿರುವುದರಿಂದ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಇವರ ಹೆಸರನ್ನ ಕೈಬಿಡಲಾಗಿತ್ತು. ಈಗ ಮತ್ತೆ ಅವರನ್ನು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿಸಿ ಮತ್ತೊಂದು ವಿವಾದ ಸೃಷ್ಟಿಸುತ್ತಿರುವುದು ವಿಪರ್ಯಾಸ ಎಂದು ವೇದಿಕೆ ಹೇಳಿದೆ. ಇವರದ್ದು ನಕ್ಸಲ್ ಚಟುವಟಿಕೆಗಳನ್ನು ಬೆಂಬಲಿಸುವ ಪ್ರವೃತ್ತಿ ಎಂದು ಪೊಲೀಸ್ ವರದಿಗಳು ಸ್ಪಷ್ಟಪಡಿಸಿವೆ. ಇವರೊಂದಿಗೆ ಪ್ರಮುಖ ಹೋರಾಟಗಳಲ್ಲಿ ಭಾಗಿಯಾದವರು ಭೂಗತರಾಗಿ ನಕ್ಸಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಪ್ರಮುಖ ನಕ್ಸಲೈಟ್‍ಗಳೆಂದು ಪೊಲೀಸ್ ಇಲಾಖೆ ಘೋಷಿಸಿರುವ ವ್ಯಕ್ತಿಗಳೊಂದಿಗೆ ಇವರ ಸಂಬಂಧ ಹೊಂದಿದ್ದರು ಎಂದು ರಾಜ್ಯಕ್ಕೆ ಗೊತ್ತಿದೆ ಅಂತಿದೆ ವೇದಿಕೆ.

    2006-07ನೇ ಇಸವಿಯಲ್ಲಿ ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ನಕ್ಸಲ್ ನಿಗ್ರಹ ದಳ ಹೊರತಂದ ‘ಮಲೆನಾಡಲ್ಲಿ ಚಟುವಟಿಕೆಗಳನ್ನು ನಡೆಸುತ್ತಿರುವ ನಕ್ಸಲೀಯರ ವಿವರಗಳು’ ಎಂಬ ಕೈಪಿಡಿಯಲ್ಲಿ ಮಲೆನಾಡಿನಲ್ಲಿ ನಕ್ಸಲರ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಿರುವ ವ್ಯಕ್ತಿಗಳ ವಿವರಗಳು ಎಂಬ ತಲೆಬರಹದಲ್ಲಿ ಇವರ ಹೆಸರೇ ಮೊದಲಿನಲ್ಲಿದೆ. ಅಷ್ಟೇ ಅಲ್ಲದೆ, ದಲಿತ ವಿರೋಧಿ ಎಂಬ ಹಣೆಪಟ್ಟಿ ಅಂಟಿಸಿಕೊಂಡಿದ್ದು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಆಸ್ತಿಯನ್ನ ಅಕ್ರಮವಾಗಿ ಸ್ವಾಧೀನಪಡಿಸಿಕೊಂಡ ಬಗ್ಗೆ ಮೊಕದ್ದಮೆಗಳು ದಾಖಲಾಗಿದ್ದು, ನ್ಯಾಯಾಲಯದ ಕಟಕಟ್ಟೆ ಕೂಡ ಏರಿದೆ. ಆದ್ದರಿಂದ ಕೂಡಲೇ ಇವರನ್ನು ಬದಲಾವಣೆ ಮಾಡಬೇಕು ಹಾಗೂ ಸಾಹಿತ್ಯ ಸಮ್ಮೇಳನವನ್ನು ಮುಂದಕ್ಕೆ ಹಾಕಬೇಕೆಂದು ಸಾಹಿತ್ಯ ಪರಿಷತ್ ಉಳಿಸಿ ವೇದಿಕೆ ಸದಸ್ಯರಾದ ಸಂತೋಷ್ ಕೋಟ್ಯಾನ್, ಸುಮಂತ್, ರಂಜಿತ್ ಶೆಟ್ಟಿ, ನೂತನ್, ಕಿಶೋರ್, ಜ್ಞಾನೇಂದ್ರ ಹಾಗೂ ಕಾರ್ತಿಕ್ ಎಂಬುವರು ಎಸ್‍ಪಿ ಹರೀಶ್ ಪಾಂಡೆಗೆ ಮನವಿ ಸಲ್ಲಿದ್ದಾರೆ.

  • ಚಂಪಾ ಮೊಮ್ಮಕ್ಕಳು ಎಲ್ಲಿ ಓದುತ್ತಿದ್ದಾರೆ: ಸಿಎಂ ಎಚ್‍ಡಿಕೆ

    ಚಂಪಾ ಮೊಮ್ಮಕ್ಕಳು ಎಲ್ಲಿ ಓದುತ್ತಿದ್ದಾರೆ: ಸಿಎಂ ಎಚ್‍ಡಿಕೆ

    ಹುಬ್ಬಳ್ಳಿ: ರಾಜ್ಯದ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆ ಮುಚ್ಚಲು ನಾನು ಸಿದ್ಧನಿದ್ದೇನೆ. ಇದನ್ನೇ ನಾನು ಸಾಹಿತ್ಯ ಸಮ್ಮೇಳನದಲ್ಲಿ ಹೇಳಿದ್ದೇನೆ. ಆದರೆ ನನ್ನ ಬಗ್ಗೆ ಚಂಪಾ ಅವರು ಇಲ್ಲ ಸಲ್ಲದ ಮಾತುಗಳನ್ನು ಆಡಿದ್ದು, ಚಂಪಾ ಅವರ ಮೊಮ್ಮಕ್ಕಳು ಯಾವ ಶಾಲೆಯಲ್ಲಿ ಓದುತ್ತಾರೆ ಎಂದು ಸ್ಪಷ್ಟಪಡಿಸಲಿ ಎಂದು ಸಿಎಂ ಎಚ್‍ಡಿ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

    ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ಚಂಪಾ ಅವರ ಸಿಎಂ ಅವರ ವಿರುದ್ಧ ಆಡಿದ ಮಾತಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಅವರು, ಚಂಪಾ ಹಿರಿಯರಾಗಿ ನನ್ನ ಬಗ್ಗೆ ಇಲ್ಲ ಮಾತುಗಳನ್ನ ಆಡಬಾರದು. ನನಗೂ ಪದ ಬಳಕೆ ಮಾಡಲು ಬರುತ್ತದೆ. ಅವರು ತಮ್ಮ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು. ನಾನು ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆ ಮುಚ್ಚಲು ಸಿದ್ಧನಿದ್ದೇನೆ. ಸಾಹಿತ್ಯ ಸಮ್ಮೇಳನದಲ್ಲಿ ಕೂಡ ಇದನ್ನೆ ಹೇಳಿದ್ದು. ನನ್ನ ವಿರುದ್ಧ ಪದ ಬಳಕೆ ಮಾಡಿರುವ ಚಂಪಾ ಅವರ ಮೊಮ್ಮಕ್ಕಳು ಯಾವ ಶಾಲೆಯಲ್ಲಿ ಓದುತ್ತಾರೆ ಎಂದು ಅವರು ಸ್ಪಷ್ಟಪಡಿಸಲಿ. ಕನ್ನಡ ನೆಲ, ಭಾಷೆ ಉಳಿಸಿಕೊಳ್ಳಲು ನಾನು ರೆಡಿ ಇದ್ದೇನೆ ಎಂದರು.

    ಇದೇ ವೇಳೆ ಸಿನಿಮಾ ನಟರ ಮೇಲೆ ಐಟಿ ದಾಳಿ ಬಗ್ಗೆ ಪ್ರತಿಕ್ರಿಯಿಸಿ, ಐಟಿ ಅಧಿಕಾರಿಗಳು ತಮ್ಮ ದಿನಚರಿಯ ಮೇಲೆ ದಾಳಿ ಮಾಡಿದ್ದಾರೆ. ಅದು ಕೇಂದ್ರ ತೆರಿಗೆ ಇಲಾಖೆಯ ದಿನಚರಿ. ಅದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ತೆರಿಗೆ ವಂಚನೆ ಮತ್ತು ತೆರಿಗೆ ಮೇಲೆ ಅನುಮಾನ ಬಂದರೆ ದಾಳಿ ಮಾಡುತ್ತಾರೆ ಎಂದರು. ಅಲ್ಲದೇ ವಿಧಾನಸಭೆ ವೆಸ್ಟ್ ಗೇಟ್ ಬಳಿ ಹಣ ಪತ್ತೆ ವಿಚಾರ ಪ್ರಶ್ನೆಗೆ ಉತ್ತರಿಸಿ, ಪೊಲೀಸರು ಈಗಾಗಲೇ ತನಿಖೆ ನಡೆಸುತ್ತಿದ್ದಾರೆ. ನಾನು ಯಾವುದೇ ಕಾರಣಕ್ಕೂ ಈ ರೀತಿಯ ವಿಚಾರಕ್ಕೆ ಪ್ರಭಾವ ಬೀರಲ್ಲ. ಪೊಲೀಸರು ಸ್ವತಂತ್ರ ತನಿಖೆ ಮಾಡಲಿ. ತನಿಖೆ ವರದಿ ಬಂದ ಮೇಲೆ ಕ್ರಮದ ಬಗ್ಗೆ ವಿಚಾರ ಮಾಡುತ್ತೇವೆ ಎಂದರು. ಇದನ್ನು ಓದಿ: ಕನ್ನಡ ಸಮ್ಮೇಳನದಲ್ಲಿ ಚಂಪಾ ಹೇಳಿಕೆಗೆ ಸಿಎಂ ಗರಂ!

    ರಾಜ್ಯ ಸರ್ಕಾರ ಇಂಧನ ಮೇಲಿನ ತೆರಿಗೆ ಬಗ್ಗೆ ಮಾಹಿತಿ ನೀಡಿದ ಸಿಎಂ, ಇಡೀ ದೇಶದಲ್ಲಿ ನಮ್ಮ ರಾಜ್ಯದಲ್ಲಿ ಪೆಟ್ರೋಲ್, ಡಿಸೇಲ್ ಕಡಿಮೆ ಇದೆ. ನಾವು ತೆರಿಗೆ ಏರಿಸಿದರೂ, ನಮ್ಮ ಪಕ್ಕದ ರಾಜ್ಯಗಳಿಗೆ ಹೋಲಿಕೆ ಮಾಡಿ ನೋಡಿದರೆ ಮತ್ತೆ ನಮ್ಮದೇ ಕಡಿಮೆಯಾಗುತ್ತೆ ಎಂದರು. ಅಲ್ಲದೇ ಸಾರಿಗೆ ದರ ಹೆಚ್ಚಳದ ಬಗ್ಗೆ ಬೇಡಿಕೆ ಇದೆ. ಈ ಬಗ್ಗೆ ಸಭೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕನ್ನಡ ಸಮ್ಮೇಳನದಲ್ಲಿ ಚಂಪಾ ಹೇಳಿಕೆಗೆ ಸಿಎಂ ಗರಂ!

    ಕನ್ನಡ ಸಮ್ಮೇಳನದಲ್ಲಿ ಚಂಪಾ ಹೇಳಿಕೆಗೆ ಸಿಎಂ ಗರಂ!

    ಧಾರವಾಡ: 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ-ಇಂಗ್ಲಿಷ್ ಶಾಲೆಗಳ ಬಗ್ಗೆ ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ಮಾತಿಗೆ ಸಿಎಂ ಕುಮಾರಸ್ವಾಮಿ ಗರಂ ಆದ ಘಟನೆ ನಡೆದಿದೆ.

    ಸಾಹಿತಿ ಚಂದ್ರಶೇಖರ ಪಾಟೀಲ ಮಾತನಾಡಿ, ಸರ್ಕಾರಿ ಶಾಲೆಗಳನ್ನ ಹೇಗೆ ಸಬಲೀಕರಣ ಮಾಡಬೇಕು ಅಂತ ಹಿಂದಿನ ಸಿಎಂಗೆ ಹೇಳಿದ್ದೆವು. ಮೈತ್ರಿ ಸರ್ಕಾರಕ್ಕೆ ಮೈತ್ರಿ ಎಂಬ ಧರ್ಮ ಇದ್ದರೆ ಹಳೇ ಯೋಜನೆಗಳನ್ನ ಮುಂದುವರಿಸುವುದು ಧರ್ಮ ಅಂದ್ರು.

    ಇದಕ್ಕೆ ಸಿಡಿಮಿಡಿಗೊಂಡ ಸಿಎಂ, ಮೈತ್ರಿ ಧರ್ಮ ಪಾಲನೆ ಮಾಡಲು ಸಿದ್ಧನಿದ್ದೇನೆ. ಕಂಬಾರರು ಭಾಷಣದಲ್ಲಿ ಕೊಟ್ಟ ಮಾಹಿತಿಯಂತೆ ಭಾಷೆ ರಕ್ಷಣೆಗೆ ನಾನು ಬದ್ಧ. ನಿರ್ಣಯ ಮಾಡಿ, ಕಾನೂನು ತರೋಣ ಎಂದು ಹೇಳಿದರು. ಇದೇ ವೇಳೆ, ಬಡ ಮಕ್ಕಳಿಗೆ ಇಂಗ್ಲಿಷ್ ಶಿಕ್ಷಣ ನೀಡುವುದರ ಹಿಂದೆ ಬಡಮಕ್ಕಳ ಬಡತನ ಹೋಗಲಾಡಿಸುವ ಉದ್ದೇಶ ಇದೆ. ಐದಾರು ದಿನಗಳಲ್ಲಿ ಸಮಸ್ಯೆ ಬಗ್ಗೆ ಸಭೆ ಕರೆಯುತ್ತೇನೆ ಎಂದು ಹೇಳಿದರು.

    11 ಗಂಟೆಗೆ ಬರಬೇಕಿದ್ದ ಸಿಎಂ 3 ಗಂಟೆ ತಡವಾಗಿ ಆಗಮಿಸಿದರು. ಇದಕ್ಕೆ ಸಂಸದ ಪ್ರಹ್ಲಾದ್ ಜೋಷಿ ಆಕ್ಷೇಪ ವ್ಯಕ್ತಪಡಿಸಿದ್ರು. ಉದ್ಘಾಟನೆಗೆ ಮುನ್ನ ಸಮ್ಮೇಳನದ ಅಧ್ಯಕ್ಷರಾದ ಚಂದ್ರಶೇಖರ ಕಂಬಾರ ದಂಪತಿ, ಕಸಾಪ ಅಧ್ಯಕ್ಷ ಮನು ಬಳಿಗಾರ್ ಅವರನ್ನು ಸಾರೋಟಿನಲ್ಲಿ ಮೆರವಣಿಗೆ ಮಾಡಲಾಯಿತು. ಸುಳ್ವಾಡಿ ವಿಷ ಪ್ರಸಾದ ದುರಂತದಿಂದ ಎಚ್ಚೆತ್ತಿರುವ ಸರ್ಕಾರ ಸಮ್ಮೇಳನದಲ್ಲಿ ಊಟದ ವ್ಯವಸ್ಥೆಯ ಬಗ್ಗೆ ನಿಗಾ ವಹಿಸಿದೆ. ಅಕ್ಷರ ಜಾತ್ರೆಗೆ ಬರುವ ಹೊಸ ಸಾಹಿತ್ಯಾಸಕ್ತರಿಗೆ ನೋಂದಣಿ ಬಂದ್ ಮಾಡಲಾಗಿತ್ತು. ಈ ವಿಚಾರಕ್ಕೆ ಸಾಹಿತ್ಯ ಆಸಕ್ತರು ಪ್ರತಿಭಟಿಸಿದರು.

    ಈ ಮಧ್ಯೆ, ಒಂದು ಸಾವಿರ ಇಂಗ್ಲೀಷ್ ಮಾಧ್ಯಮ ಶಾಲೆ ತೆರೆಯುವ ಪ್ರಸ್ತಾಪ ಸರ್ಕಾರದ ಮುಂದಿದೆ. ಇದಕ್ಕೆ ಸಾಹಿತಿಗಳ ವಿರೋಧ ಇದೆ. ಈ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಾಗಲಕೋಟೆಯಲ್ಲಿ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಂದಿದ್ದಕ್ಕೆ ಸಂತೋಷವು ಇದೆ, ಖೇದವೂ ಆಗ್ತಿದೆ: ಚಂದ್ರಶೇಖರ್ ಕಂಬಾರ

    ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಂದಿದ್ದಕ್ಕೆ ಸಂತೋಷವು ಇದೆ, ಖೇದವೂ ಆಗ್ತಿದೆ: ಚಂದ್ರಶೇಖರ್ ಕಂಬಾರ

    ಹುಬ್ಬಳ್ಳಿ: ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿ ಧಾರವಾಡಕ್ಕೆ ಬರುತ್ತಿರುವದಕ್ಕೆ ಸಂತೋಷವೂ ಅನಿಸುತ್ತೆ, ಇನ್ನೊಂದೆಡೆ ಖೇದವೂ ಆಗುತ್ತಿದೆ ಎಂದು ಸಾಹಿತಿ ಡಾ. ಚಂದ್ರಶೇಖರ್ ಕಂಬಾರ ಹೇಳಿದ್ದಾರೆ.

    ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, 84 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿ ನಮ್ಮೂರಿಗೆ ನಾನು ಬರುತ್ತಿರೋದು ಸಂತೋಷ ಆಗುತ್ತಿದೆ. ಆದ್ರೆ ಎಂ.ಎಂ.ಕಲಬುರ್ಗಿ ಹಾಗೂ ಗಿರಡ್ಡಿಯಂತ ಸ್ನೇಹಿತರನ್ನ ಕಳೆದುಕೊಂಡಿದ್ದೇನೆ. ಈ ಬಗ್ಗೆ ನನಗೆ ತುಂಬಾ ಖೇದ ಇದೆ. ಕಲಬುರ್ಗಿ ಹಾಗೂ ಗಿರಡ್ಡಿಯವರು ನನಗೆ ಬಹಳ ಆತ್ಮೀಯ ಸ್ನೇಹಿತರು. ಅವರು ಇಂದು ನಮ್ಮ ಮಧ್ಯೆ ಇಲ್ಲ ಎಂಬುವುದೇ ಬೇಸರದ ಸಂಗತಿ ಎಂದು ಹೇಳಿದರು.

    ಈ ಬಾರಿ ಸಮ್ಮೇಳನದಲ್ಲಿ ಸಂಸ್ಕೃತಿ, ಭಾಷೆ, ಗಡಿಗಳ ಬಗ್ಗೆ ಪ್ರಮುಖವಾಗಿ ಚರ್ಚೆಯಾಗಬೇಕು. ಅಲ್ಲದೆ ಈ ಭಾಗದ ಸಮಸ್ಯೆಯಾದ ಮಹದಾಯಿಯ ಬಗ್ಗೆಯೂ ಚರ್ಚೆಯಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಪತ್ನಿ ಸತ್ಯಬಾಮಾ, ಮಗಳು ಜಯಶ್ರೀ ಕಂಬಾರ ಹಾಗೂ ಮೊಮ್ಮಗಳು ಪ್ರೀತಿ ಅವರೊಂದಿಗೆ ಡಾ. ಚಂದ್ರಶೇಖರ ಕಂಬಾರ ಅವರು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಂದಿದ್ದಾರೆ.

    ಕುಟುಂಬ ಸಮೇತರಾಗಿ ಆಗಮಿಸಿದ ಡಾ. ಚಂದ್ರಶೇಖರ ಕಂಬಾರ ಅವರನ್ನು ಜಿಲ್ಲಾಧಿಕಾರಿ ದೀಪಾ ಚೋಳನ್, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಲಿಂಗರಾಜ್ ಅಂಗಡಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ನಂತರ ಎಲ್ಲರು ಜೊತೆಗೂಡಿ ಧಾರವಾಡದತ್ತ ಪಯಣ ಬೆಳೆಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೈಸೂರು ಸಾಹಿತ್ಯ ಸಮ್ಮೇಳನದಲ್ಲಿ ರಾಜ ಮನೆತನಕ್ಕೆ ಅಗೌರವ!

    ಮೈಸೂರು ಸಾಹಿತ್ಯ ಸಮ್ಮೇಳನದಲ್ಲಿ ರಾಜ ಮನೆತನಕ್ಕೆ ಅಗೌರವ!

    ಮೈಸೂರು: ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪಕರಾದ ಮೈಸೂರು ರಾಜವಂಶಸ್ಥರಿಗೆ ಸಮ್ಮೇಳನದಲ್ಲಿ ಅಗೌರವ ನೀಡಲಾಗಲಿದೆ ಎನ್ನುವ ಆರೋಪ ಕೇಳಿಬಂದಿದೆ.

    ಹೌದು, ಈ ಬಾರಿಯ 83ನೇ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನದಲ್ಲಿ ಮೈಸೂರು ರಾಜವಂಶದ ಮನೆತನಕ್ಕೆ ಆಹ್ವಾನವನ್ನೇ ನೀಡಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.

    ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪಕರ ಊರಿನಲ್ಲೇ ಸಮ್ಮೇಳನ ನಡೆಯುತ್ತಿದ್ದರೂ, ಸಾಹಿತ್ಯ ಪರಿಷತ್‍ನ ಸ್ವಾಗತ ಸಮಿತಿ ರಾಜವಂಶಸ್ಥರಿಗೆ ಆಹ್ವಾನವನ್ನು ನೀಡದೇ ನಿರ್ಲಕ್ಷ್ಯವಹಿಸಿದೆ. ಮೈಸೂರು ಒಡೆಯರ್ ರಾಜಮನೆತನದ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರಿಗೂ ಸಮಿತಿ ಆಹ್ವಾನವನ್ನು ನೀಡಿಲ್ಲ.

    ಈಗಲೂ ಮೈಸೂರಿನ ಸಾಹಿತ್ಯ ಪರಿಷತ್ ಮೂಲ ಕಚೇರಿ ಅರಮನೆಯ ಉತ್ತರದ್ವಾರದಲ್ಲಿದೆ. ಅರಮನೆ ಆವರಣದಲ್ಲೇ ಪರಿಷತ್ ಕಚೇರಿ ಇದ್ದರೂ ರಾಜಮನೆತನದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

    ಸಾಹಿತ್ಯ ಸಮ್ಮೇಳನದಲ್ಲಿ ಹೆಸರಿಗಷ್ಟೇ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾಮಂಟಪ ನಿರ್ಮಾಣ ಮಾಡಿರುವ ಸಮಿತಿ ಸಂಪ್ರಾದಾಯಕ್ಕಾದರೂ ರಾಜವಂಶಸ್ಥರಿಗೆ ಆಹ್ವಾನ ನೀಡದೇ ಅಪಮಾನ ಮಾಡಿದ್ದಕ್ಕೆ ಸಾರ್ವಜನಿಕ ವಲಯದಿಂದ ಟೀಕೆ ಕೇಳಿಬಂದಿದೆ.

    ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ 1915ರಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತು ಸ್ಥಾಪನೆಯಾಯಿತು. ಆಗ ಮೈಸೂರು ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪರಿಷತ್ತಿನ ಸ್ಥಾಪನೆಗೆ ಚಾಲನೆ ನೀಡಿದರು. ಮುಂದೆ 1938ರಲ್ಲಿ ಈ ಹೆಸರನ್ನು ಕನ್ನಡ ಸಾಹಿತ್ಯ ಪರಿಷತ್ತು ಎಂದು ಬದಲಾಯಿಸಿದ್ದರು.

  • ಸುತ್ತೂರು ತೇರಿಗೆ ಬಣ್ಣ ಬಳಿದು ಮೋಸ – ಸಾಹಿತ್ಯ ಸಮ್ಮೇಳನದಲ್ಲಿ 5 ಲಕ್ಷ ರೂ. ಗುಳುಂ?

    ಸುತ್ತೂರು ತೇರಿಗೆ ಬಣ್ಣ ಬಳಿದು ಮೋಸ – ಸಾಹಿತ್ಯ ಸಮ್ಮೇಳನದಲ್ಲಿ 5 ಲಕ್ಷ ರೂ. ಗುಳುಂ?

    ಮೈಸೂರು: ಜಿಲ್ಲೆಯಲ್ಲಿ ಇದೇ ತಿಂಗಳು ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರಕ್ಕೆ ಬಳಸುತ್ತಿರುವ ಕನ್ನಡ ತೇರು ನಕಲಿ ಅನ್ನೋ ಮಾತು ಕೇಳಿ ಬರುತ್ತಿದ್ದು, ಹಳೆ ರಥಕ್ಕೆ ಹೊಸ ಬಣ್ಣ ಬಳಿದು ಬಳಕೆ ಮಾಡಲಾಗುತ್ತಿದೆ ಎಂಬ ಆರೋಪ ಮಾಡಲಾಗಿದೆ.

    ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರಕ್ಕೆ ಬಳಸುವ ಹಿನ್ನೆಲೆಯಲ್ಲಿ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ರಥ ನಿರ್ಮಾಣ ಮಾಡಲಾಗಿತ್ತು. ಆದರೆ ಈ ರಥವು ಸುತ್ತೂರು ಮಠದ ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳ ಶತಮಾನೋತ್ಸವಕ್ಕೆ ತಯಾರಿಸಲಾಗಿದ್ದ ರಥ ಎನ್ನಲಾಗಿದೆ. ಸುತ್ತೂರು ಮಠದ ರಥ ರೂಪಿಸಿದ ಕಲಾವಿದರೇ ಕನ್ನಡ ರಥ ರೂಪಿಸಿದ್ದು ತಾವು ಈ ಹಿಂದೆ ಮಾಡಿದ್ದ ರಥವನ್ನು ಬದಲಾಯಿಸಿ ಹೊಸ ಬಿಲ್ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

    ಸುತ್ತೂರು ಮಠಕ್ಕೆ ರೂಪಿಸಲಾಗಿದ್ದ ರಥವನ್ನು ಕನ್ನಡ ರಥವಾಗಿ ಬದಲಾಯಿಸಲಾಗಿದೆ. ಹಳೆಯ ರಥದಲ್ಲಿ ಮುಂಭಾಗದಲ್ಲಿದ್ದ ನಂದಿಗಳು ಹೊಸ ರಥದಲ್ಲಿ ಹಿಂಭಾಗಕ್ಕೆ ಸ್ಥಳಾಂತರ ಮಾಡಲಾಗಿದೆ. ಅಲ್ಲದೇ ಹಿಂದೆ ಇದ್ದ ಜೋಡಿ ಆನೆಗಳು ಮುಂದಕ್ಕೆ ಸ್ಥಳಾಂತರವಾಗಿವೆ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಪ್ರತಿಮೆ ಇದ್ದ ಸ್ಥಳಕ್ಕೆ ಪರದೆ ಬಿಟ್ಟು ಎರಡೂ ಕಡೆ ತಾಯಿ ಭುವನೇಶ್ವರಿಯ ಪ್ರತಿಮೆ ಹಾಕಿ ಹೊಸ ಬಣ್ಣ ಲೇಪಿಸಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ.

    ನವೆಂಬರ್ 24ರಿಂದ ಮೂರು ದಿನಗಳ ಕಾಲ ಮೈಸೂರಿನಲ್ಲಿ ನಡೆಯಲಿರುವ ಸಮ್ಮೇಳನದ ಪ್ರಚಾರಾರ್ಥವಾಗಿ ಮೂರು ದಿನಗಳಿಂದ ರಥ ಯಾತ್ರೆ ನಡೆಯುತ್ತಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ರಥಯಾತ್ರೆ ಆಯೋಜನೆ ಆಗಿದೆ.