Tag: Kannada Rajyotsava 2018

  • ಕನ್ನಡ ಶಾಲೆಗಳ ಮುಚ್ಚುತ್ತಿರುವುದು ಯಾಕೆ? ನಮ್ಮ ನಿಮ್ಮೆಲ್ಲರ ಕರ್ತವ್ಯ ಏನು?

    ಕನ್ನಡ ಶಾಲೆಗಳ ಮುಚ್ಚುತ್ತಿರುವುದು ಯಾಕೆ? ನಮ್ಮ ನಿಮ್ಮೆಲ್ಲರ ಕರ್ತವ್ಯ ಏನು?

    ಇಂದು ನವೆಂಬರ್ 1 ಕನ್ನಡ ರಾಜ್ಯೋತ್ಸವ. ನಾಡಿನಾದ್ಯಂತ ಆಚರಣೆ ಭರ್ಜರಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆ ಕನ್ನಡದ ಹುಟ್ಟು ಕನ್ನಡ ಮಾಧ್ಯಮ ಶಾಲೆಗಳು ಕಣ್ಮರೆ ಆಗುತ್ತಿರೋದು ಮಾತ್ರ ಕಾಣುತ್ತಿಲ್ಲ. ಕೆಲವರು ಕಂಡರೂ ಕಾಣದಂತೆಯೂ ಇದ್ದಾರೆ. ನವೆಂಬರ್ 1 ರಂದು ಕೇವಲ ಕನ್ನಡ ರಾಜ್ಯೋತ್ಸವ ಆಚರಿಸದೇ ಮಾತ್ರ ಅದು ಕನ್ನಡಾಭಿಮಾನ ಆಗಲಾರದು. ಇಂದು ನಮ್ಮ ನಾಡಿನಲ್ಲಿಯೇ ಕನ್ನಡ ಉಳುವಿಕೆಗಾಗಿ ಹೋರಾಡುವ ಸ್ಥಿತಿ ನಮಗೆ ಬಂದಿದೆ. ಕನ್ನಡ ಉಳಿಯಬೇಕೆಂದರೆ ಸರ್ಕಾರಿ ಕನ್ನಡ ಶಾಲೆಗಳು ಉಳಿಯಬೇಕಿದೆ.

    ಕನ್ನಡ ಎಂದರೆ ಬದುಕು, ಜೀವನ ಕ್ರಮ, ಉಸಿರು ಇಂದಿನ ದಿನದಲ್ಲಿ ಕೇವಲ ತೋರಿಕೆಯಾಗಿದೆ. ಕನ್ನಡ ನಂಬಿದರೆ ಬದುಕು ಕಟ್ಟಿಕೊಳ್ಳುವುದು ಅಸಾಧ್ಯ ಎಂಬ ಪರಿಸ್ಥಿತಿಯಲ್ಲಿದ್ದೇವೆ. ಈ ಎಲ್ಲದರ ಪರಿಣಾಮ ಗ್ರಾಮೀಣ ಭಾಗಗಳಲ್ಲಿಯೂ ಕನ್ನಡ ಶಾಲೆಗಳು ಮುಚ್ಚಿಹೋಗುತ್ತಿವೆ. ಪೋಷಕರು ಸಹ ತಮ್ಮ ಮಕ್ಕಳು ಇಂಗ್ಲಿಷ್ ಕಲಿತರೆ ಮಾತ್ರ ಜಾಣರಾಗುತ್ತಾರೆ. ಭವಿಷ್ಯದಲ್ಲಿ ಉತ್ತಮ ಬದಕುಕಟ್ಟಿಕೊಳ್ಳಲು ಇದು ಸಹಕಾರಿ ಎಂಬ ಆಲೋಚನೆಯಿಂದ ಕಷ್ಟವಾದರೂ ಸರಿಯೇ ದುಬಾರಿ ಶುಲ್ಕ ನೀಡಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಇಂದು ಗ್ರಾಮೀಣ ಭಾಗಗಳಲ್ಲಿಯೂ ಖಾಸಗಿ ಶಾಲೆಗಳು ಹುಟ್ಟಿಕೊಂಡಿವೆ.

    ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ನಗರಗಳಲ್ಲಿ ಖಾಸಗಿ ವಲಯದಲ್ಲಿ ಅನ್ಯ ಭಾಷಿಕರ ಧ್ವನಿ ಮಾರ್ದನಿಸುತ್ತಿದೆ. ಹಾಗಾಗಿ ರಾಜಧಾನಿ ಕನ್ನಡ ಅವಿನಾಶದ ಅಂಚಿಗೆ ತಲುಪಿ ಪರಭಾಷೆಗಳು ಸ್ಥಿರವಾಗುತ್ತಿವೆ. ಕನ್ನಡ ಎನೆ ಕುಣಿದಾಡುವುದೆನ್ನೆದೆಯು, ಕನ್ನಡ ಎನೆ ಕಿವಿ ನಿಮಿರುವುದು ಎನ್ನುವ ಕುವೆಂಪು ಅವರ ಸಾಲುಗಳು ಪುಸ್ತಕದಲ್ಲಿಯೇ ಮಾತ್ರ ಉಳಿದುಕೊಂಡಿವೆ. ಬೆಂಗಳೂರು ಎಂಬ ಮಹಾನಗರದಲ್ಲಿ ಕನ್ನಡ ಮಾತನಾಡುವವರೇ ವಿರಳ ಆಗುತ್ತಿರೋದು ಇಂದು ನಾವೆಲ್ಲ ಕಾಣುತ್ತಿದ್ದೇವೆ. ನಮ್ಮ ಉದಾರತೆ, ಹೃದಯ ವೈಶಾಲ್ಯತೆ ನಮಗೆ ಮುಳುವಾಗುತ್ತಿರುವುದು ಆತಂಕ. ಇಂದಿನ ಕನ್ನಡ ದುಸ್ಥಿತಿಗೆ ಕೇವಲ ಇಷ್ಟು ಮಾತ್ರ ಕಾರಣವಲ್ಲ. ಸಾರ್ವಜನಿಕವಾಗಿ ಕನ್ನಡ ಮಾತನಾಡಲು ಹಿಂಜರಿಕೆ, ಕೀಳರಿಮೆ, ಅನ್ಯಭಾಷಾ ವ್ಯಾಮೋಹವು ಕಾರಣವಾಗಿದೆ.

    ಶಿಕ್ಷಣ ಸೇರಿದಂತೆ ಇತರೆ ಹಲವಾರು ಕ್ಷೇತ್ರಗಳಲ್ಲಿ ಕನ್ನಡವನ್ನು ಸುಧಾರಿಸುವ ಸಾಧ್ಯತೆಗಳಿವೆ. ಆದ್ರೆ ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದಾಗಿ ನಮ್ಮಯ ನಾಡಿನಲ್ಲಿ ಕನ್ನಡಕ್ಕಾಗಿ ಹೋರಾಡುವ ಸ್ಥಿತಿ ಎದುರಾಗಿದೆ. ಪಕ್ಕದ ತಮಿಳುನಾಡಿನಲ್ಲಿ ಎಲ್ಲವೂ ತಮಿಳು. ವ್ಯಾವಹಾರಿಕ ಮತ್ತು ಸರ್ಕಾರಿ ಬಳಕೆಯಲ್ಲಿ ತಮಿಳು ಭಾಷೆಗೆ ಆದ್ಯತೆ ನೀಡಲಾಗಿದೆ.

    ಕನ್ನಡ ಭಾಷೆ ಮತ್ತು ಸಾಹಿತ್ಯದ ದುಸ್ಥಿತಿಯ ಬಗ್ಗೆ ಏನೆಲ್ಲ ಕನ್ನಡ ಕಾರ್ಯಗಾರ ಮತ್ತು ಪುಸ್ತಕಗಳನ್ನು ಪ್ರಕಟಿಸಿದರೆ ಇಂದು ಅವುಗಳನ್ನು ಓದುವುದಕ್ಕೆ ಯಾರು ಮುಂದಾಗುತ್ತಿಲ್ಲ. ಕನ್ನಡ ಮಾಧ್ಯಮದಲ್ಲಿ ಕಲಿತವನ ಜೀವನ ಕೇವಲ ನಾಲ್ಕಂಕಿಯ ಸಂಬಳಕ್ಕೆ ಸೀಮಿತ ಎಂದು ಕನ್ನಡಿಗರು ಹೇಳಿಕೊಂಡು ಕುಹಕವಾಡುವುದರಿಂದಲೂ ಸಮಸ್ಯೆ ಹೆಚ್ಚಾಗಿದೆ. ಇತ್ತ ಕನ್ನಡಕ್ಕಾಗಿ ಹೋರಾಟ ಮಾಡಬೇಕಿದ್ದ ಬಹುತೇಕ ರಾಜಕಾರಣಿಗಳು ತಮ್ಮದೇ ಸ್ವಂತ ಆಂಗ್ಲ ಮಾಧ್ಯಮಗಳನ್ನು ತೆರೆಯುತ್ತಿದ್ದಾರೆ. ಅಲ್ಲಿ ಕನ್ನಡ ಕೇವಲ ಭಾಷೆಯಾಗಿಯೇ ಉಳಿದುಕೊಂಡಿದೆ. ಕೇವಲ ನವೆಂಬರ್ 1ರಂದು ಮಾತ್ರ ಕನ್ನಡ. ಕನ್ನಡ ಎಂದ್ರೆ ಸಾಲದು. ಅದಕ್ಕಾಗಿ ಹೋರಾಡುವ ಇಚ್ಛಾಶಕ್ತಿ ನಮ್ಮಲ್ಲಿರಬೇಕು. ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಮಾತ್ರ ಸರ್ಕಾರಿ ಉದ್ಯೋಗ, ಎಲ್ಲ ರಾಜಕೀಯ ನಾಯಕರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಲ್ಲಿಯೇ ಓದಿಸಬೇಕೆಂಬ ಕಟ್ಟುನಿಟ್ಟಿನ ಕಾನೂನುಗಳು ಜಾರಿಯಾಗಬೇಕಿದೆ.

    ಈ ಹಿಂದೆ ಅಲಹಬಾದ್ ಹೈಕೋರ್ಟ್ ಹಿಂದಿ ಮಾಧ್ಯಮ ದುಸ್ಥಿತಿಯ ಬಗ್ಗೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿತ್ತು. ಅಂದು ರಾಜ್ಯ ಸರ್ಕಾರದ ಪ್ರತಿಯೊಬ್ಬ ಅಧಿಕಾರಿಯಿಂದ ಕೆಳದರ್ಜೆಯ ನೌಕರರು ತಮ್ಮ ಮಕ್ಕಳಿಗೆ ಹಿಂದಿ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಬೇಕು. ಎಲ್ಲ ಚುನಾಯಿತ ಅಭ್ಯರ್ಥಿಗಳು ಮಕ್ಕಳು ಸಹ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಶಿಕ್ಷಣ ಪಡೆಯಬೇಕು. ಅಂದಾಗ ಮಾತ್ರ ಪ್ರಾದೇಶಿಕ ಭಾಷೆಯ ಶಾಲೆ-ಕಾಲೇಜುಗಳು, ಶಿಕ್ಷಣದ ಗುಣಮಟ್ಟ ಹೆಚ್ಚಾಗಲು ಸಾಧ್ಯ ಎಂಬ ಸಲಹೆಯನ್ನು ರಾಜ್ಯ ಸರ್ಕಾರಕ್ಕೆ ನೀಡಿತ್ತು. ಅಲಹಬಾದ್ ಹೈ ಕೋರ್ಟ್ ಸಲಹೆ ಪ್ರಾದೇಶಿಕ ಭಾಷೆಗಳಲ್ಲಿ ಆಶಾಕಿರಣವನ್ನು ಮೂಡಿಸಿತ್ತು.

    ಎಲ್ಲವನ್ನು ನ್ಯಾಯಾಲಯದಿಂದ ಹೇಳಿಸಿಕೊಂಡು ಮಾಡದೇ ನಾವೇ ಕನ್ನಡತನ ಉಳಿಸಲು ಪ್ರಯತ್ನ ನಡೆಸಬೇಕು. ರಾಜ್ಯೋತ್ಸವ ಉತ್ಸವ ಕೇವಲ ಆಚರಣೆಗೆ ಮಾತ್ರ ಸೀಮಿತವಾಗಬಾರದು. ಕನ್ನಡ ಬದುಕು-ಜೀವನ ಕ್ರಮವಾಗಿ ಮರುಹುಟ್ಟು ಪಡೆಯಬೇಕಿದೆ. ಶಾಲಾ ವಿದ್ಯಾರ್ಥಿಗಳನ್ನು ಸೆಳೆಯಲು ಸರ್ಕಾರ ಮತ್ತು ಇತರೆ ಕನ್ನಡ ಪರ ಸಂಘಟನೆಗಳು ವಿವಿಧ ಸಾಹಿತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕನ್ನಡವೇ ನನ್ನ ಉಸಿರು ಅಂತಾ ಬಾಳುತ್ತಿರುವ ಅಪರೂಪದ ಕನ್ನಡ ಅಭಿಮಾನಿ

    ಕನ್ನಡವೇ ನನ್ನ ಉಸಿರು ಅಂತಾ ಬಾಳುತ್ತಿರುವ ಅಪರೂಪದ ಕನ್ನಡ ಅಭಿಮಾನಿ

    ಬೆಳಗಾವಿ: ಪ್ರತಿಯೊಬ್ಬರಿಗೂ ತಾನೂ ಸ್ವಂತ ಮನೆ ಕಟ್ಟಿಸಬೇಕು ಎಂಬ ಹಂಬಲ ಇದ್ದೇ ಇರುತ್ತದೆ. ಮನೆ ಕಟ್ಟಿದ ಮೇಲೆ ಮನೆಗೆ ಏನೂ ಹೆಸರಿಡಬೇಕು ಎಂದು ತಲೆ ಕೆಡಿಸಿಕೊಳ್ಳುವರೇ ಜಾಸ್ತಿ. ಅಂಥದರದಲ್ಲಿ ಚಿಕ್ಕೋಡಿಯ ಕನ್ನಡ ಅಭಿಮಾನಿ ಡಿಫರೆಂಟ್ ಆಗಿ ಗುರುತಿಸಿಕೊಳ್ಳುತ್ತಿದ್ದಾರೆ. ಇಂದಿನ ನಮ್ಮ ಕನ್ನಡಾಭಿಮಾನಿ ತಮ್ಮ ಮನೆಯನ್ನೇ ಕನ್ನಡ ಬಾವುಟಗಳಿಂದ ಸಿಂಗರಿಸಿ, ತಮ್ಮ ಅರಮನೆಗೆ ಭುವನೇಶ್ವರಿ ಎಂಬ ಹೆಸರನ್ನು ಇಟ್ಟಿದ್ದಾರೆ.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿರುವ ಅನಿಲ್ ಕುಮಾರ್ ಮಾಳಗೆ ಎಂಬವರು ಕನ್ನಡ ನಾಡು, ನುಡಿಯ ಮೇಲೆ ಎಲ್ಲಿಲ್ಲದ ಅಭಿಮಾನ ಹೊಂದಿದ್ದಾರೆ. ಕನ್ನಡಕ್ಕಾಗಿಯೇ ಜನನ ಕನ್ನಡಕ್ಕಾಗಿಯೇ ಮರಣ ಎಂದು ಬಾಳುತ್ತಿರೋ ಇವರಿಗೆ ಕನ್ನಡಮ್ಮ ದಿನಪತ್ರಿಕೆ ಸಂಸ್ಥಾಪಕರಾದ ಮಹಾದೇವ ಟೋಪಣ್ಣವರ ಅವರೇ ಪ್ರೇರಣೆ ಎಂದು ಹೇಳುತ್ತಾರೆ.

    ಇವರ ಕನ್ನಡಾಭಿಮಾನ ಮನೆಗೆ ಮಾತ್ರ ಸೀಮಿತವಲ್ಲ. ಶಾಲೆಯಲ್ಲಿ ದಿನನಿತ್ಯ ಇವರು ಕನ್ನಡ ಅಂಕಿಗಳನ್ನೇ ಬಳಸುತ್ತಾರೆ. ಬೇರೆ ಶಿಕ್ಷಕರು ಆಂಗ್ಲ ಭಾಷೆಯಲ್ಲಿ ಶಾಲಾ ದಾಖಲೆಗಳನ್ನು ಬರೆದರೇ ಇವರು ಕನ್ನಡದಲ್ಲಿಯೇ ಬರೆಯೋದು ವಿಶೇಷ. ಜೊತೆಗೆ ಬೈಕ್ ಹಾಗೂ ತನ್ನ ಮನೆ ಮೇಲೆ ಕರ್ನಾಟಕದ ನಕ್ಷೆಯನ್ನು ಬರೆಸಿದ್ದಾರೆ.

    ನಾಡು ನುಡಿಯ ಹೆಸರಿನಲ್ಲಿ ಸಂಘ ಕಟ್ಟಿಕೊಂಡು ಕನ್ನಡದ ಹೆಸರಿನಲ್ಲಿ ಬ್ಲಾಕ್ ಮೇಲ್ ಮಾಡುತ್ತಿರುವ ಕೆಲ ಜನರ ಮಧ್ಯೆ ಕನ್ನಡವೇ ನನ್ನ ಉಸಿರು ಎಂದು ಬಾಳುತ್ತಿರುವ ಇಂಥ ಅಪ್ಪಟ ಕನ್ನಡಾಭಿಮಾನಿಗಳೂ ನಿಜಕ್ಕೂ ಇತರರಿಗೂ ಮಾದರಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv