Tag: Kannada organizations

  • ನೆಲ, ಜಲಕ್ಕಾಗಿ ಮಾ.22ರಂದು ಅಖಂಡ ಕರ್ನಾಟಕ ಬಂದ್ – ಏನಿರುತ್ತೆ? ಏನಿರಲ್ಲ? ಗಮನಿಸಿ..

    ನೆಲ, ಜಲಕ್ಕಾಗಿ ಮಾ.22ರಂದು ಅಖಂಡ ಕರ್ನಾಟಕ ಬಂದ್ – ಏನಿರುತ್ತೆ? ಏನಿರಲ್ಲ? ಗಮನಿಸಿ..

    – ಕರಾವಳಿಯಲ್ಲಿ ಬಂದ್‌ಗಿಲ್ಲ ಬೆಂಬಲ

    ಬೆಂಗಳೂರು: ಎಂಇಎಸ್‌ (MES) ಪುಂಡಾಟಿಕೆಗೆ ಕಡಿವಾಣ ಹಾಕಬೇಕು, ವಿವಿಧ ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು, ಕನ್ನಡಿಗರ ಮೇಲೆ ಪರಭಾಷಿಕರ ದಾಳಿ ನಿಲ್ಲಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಗಳು ಶನಿವಾರ (ಮಾ.22) ಕರ್ನಾಟಕ ಬಂದ್‌ (karnataka bandh) ಮಾಡಲು ಮುಂದಾಗಿವೆ.

    ಕರ್ನಾಟಕದಲ್ಲಿ ಎಂಇಎಸ್ ನಿಷೇಧ, ಮೇಕೆದಾಟು, ಕಳಸ ಬಂಡೂರಿ ಯೋಜನೆಗೆ ಶೀಘ್ರ ಅನುಮತಿ ಸೇರಿದಂತೆ ನಾಡು-ನುಡಿ, ನೆಲ-ಜಲ ವಿಷಯವಾಗಿ ಕನ್ನಡ ಒಕ್ಕೂಟಗಳು ಶನಿವಾರ ಕರ್ನಾಟಕ ಬಂದ್ ಹಮ್ಮಿಕೊಂಡಿವೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಅಖಂಡ ಕರ್ನಾಟಕ ಬಂದ್ ಕೈಗೊಂಡಿವೆ. ಬೆಳಗ್ಗೆ 10:30ಕ್ಕೆ ಬೆಂಗಳೂರಿನ (Bengaluru) ಟೌನ್ ಹಾಲ್‌ನಿಂದ ಫ್ರೀಡಂ ಪಾರ್ಕ್ ತನಕ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಇದನ್ನೂ ಓದಿ: ಮಾರ್ಚ್ 22ರ ಕರ್ನಾಟಕ ಬಂದ್‌ಗೆ ಸರ್ಕಾರದ ಬೆಂಬಲ ಇಲ್ಲ: ಡಿಕೆಶಿ

    ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕೂಡ. ನಮ್ಮ ಯೂನಿಯನ್‌ನವರು ಬೆಂಬಲ ಕೊಟ್ರೆ ಬಸ್ ಓಡಲ್ಲ ಅಂದಿದ್ದಾರೆ. ಆದರೆ, ಸರ್ಕಾರದ ನಡೆಯನ್ನು ಕನ್ನಡ ಹೋರಾಟಗಾರರು ಉಗ್ರವಾಗಿ ಖಂಡಿಸಿದ್ದಾರೆ. 20 ದಿನಗಳಿಂದ ಬಂದ್‌ಗೆ ಕರೆ ಕೊಟ್ಟಿದ್ದೇವೆ. ಆದರೂ, ಬಂದ್ ಬೇಡ ಅಂತಿರೋದು ಸರಿನಾ..? ಅಂತ ಕಿಡಿಕಾರಿದ್ದಾರೆ.

    ಅಖಂಡ ಕರ್ನಾಟಕ ಬಂದ್‌ಗೆ ಬೆಂಗಳೂರಿನ ಪ್ರಮುಖ ಮಾಲ್‌ಗಳಾದ ಒರಾಯನ್ ಮಾಲ್, ಮಂತ್ರಿ ಮಾಲ್, ಯಶವಂತಪುರದ ಮೆಟ್ರೋ ಹೋಲ್ ಸೇಲ್ ಮಾರ್ಕೆಟ್, ರಾಜಾಜಿನಗರದ ರಾಮೇಶ್ವರ ಕೆಫೆಯ ಜೊತೆ ಕನ್ನಡ ಒಕ್ಕೂಟ ಮಾತುಕತೆ ನಡೆಸಿದ್ದು, ಬಂದ್‌ಗೆ ಬೆಂಬಲ ಯಾಚಿಸಿವೆ.  ಇದನ್ನೂ ಓದಿ: ರಾಷ್ಟ್ರಗೀತೆ ಗಾಯನದ ವೇಳೆ ನಿತೀಶ್ ಕುಮಾರ್ ಮಾತುಕತೆ – ಬಿಹಾರ ಅಸೆಂಬ್ಲಿಯಲ್ಲಿ ಗದ್ದಲ, ಸಿಎಂ ಸ್ಥಾನಕ್ಕೆ ರಾಜೀನಾಮೆಗೆ ಒತ್ತಾಯ

    ಏನಿರುತ್ತೆ?
    * ಆಸ್ಪತ್ರೆ, ಮೆಡಿಕಲ್, ಹಾಲು, ಅಗತ್ಯವಸ್ತುಗಳು
    * ಮೆಟ್ರೋ, ಪೆಟ್ರೋಲ್ ಬಂಕ್, ಹೋಟೆಲ್,
    * ಎಪಿಎಂಸಿ
    * ಪೀಣ್ಯ ಕೈಗಾರಿಕಾ ಪ್ರದೇಶ ಓಪನ್ (13 ಸಾವಿರ ಕೈಗಾರಿಕೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ..)

    ಏನಿರಲ್ಲ?
    ಓಲಾ, ಉಬರ್ ಟ್ಯಾಕ್ಸಿ & ಆಟೋ

    50:50 ಬೆಂಬಲ:
    ಮಧ್ಯಾಹ್ನದ ಬಳಿಕ ಥಿಯೇಟರ್, ಮಾಲ್, ಬೇಕರಿ, ಬಾರ್ ಅಂಡ್ ರೆಸ್ಟೋರೆಂಟ್, ಅಂಗಡಿ ಮುಂಗಟ್ಟು, ಬೀದಿ ಬದಿ ವ್ಯಾಪಾರ

    17 ಜಿಲ್ಲೆಗಳಲ್ಲಿ ಬಂದ್‌ಗೆ ಬೆಂಬಲ ನಿರಾಕರಣೆ:
    ಇನ್ನೂ ಎಂಇಎಸ್ ಪುಂಡಾಟ ಖಂಡಿಸಿ ಕರೆ ನೀಡಿರುವ ಬಂದ್‌ಗೆ 17 ಜಿಲ್ಲೆಗಳು ಬೆಂಬಲ ನೀಡಿಲ್ಲ. 11 ಜಿಲ್ಲೆಗಳಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. 2 ಜಿಲ್ಲೆಗಳು ಮಾತ್ರ ಸಂಪೂರ್ಣ ಬೆಂಬಲ ನೀಡಿವೆ. ಕರ್ನಾಟಕ ಬಂದ್‌ಗೆ ಬೆಳಗಾವಿ, ಮಂಡ್ಯದಲ್ಲಿ
    ಮಾತ್ರ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಉಳಿದಂತೆ ಬಾಗಲಕೋಟೆ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ಉಡುಪಿ, ಯಾದಗಿರಿ ಜಿಲ್ಲೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಳ್ಳಾರಿ, ಬೀದರ್‌, ವಿಜಯಪುರ, ಚಿಕ್ಕಬಳ್ಳಾಪುರ, ಚಿಕ್ಕೋಡಿ, ಕಲಬುರಗಿ, ಹಾಸನ, ಹಾವೇರಿ, ಹುಬ್ಬಳ್ಳಿ, ಕಾರವಾರ, ಮಡಿಕೇರಿ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು, ಉಡುಪಿ ಹಾಗೂ ಯಾದಗಿರಿ ಜಿಲ್ಲೆಗಳು ಬಂದ್‌ಗೆ ಬೆಂಬಲ ನಿರಾಕರಿಸಿವೆ.

  • ಮಾ.22ರಂದು ಅಖಂಡ ಕರ್ನಾಟಕ ಬಂದ್‌; ʻಕಾಂತಾರʼ ನಟನ ಶಿವಾಜಿ ಚಿತ್ರ ಬಂದ್ರೆ ಬಹಿಷ್ಕಾರ – ವಾಟಾಳ್‌ ನಾಗರಾಜ್‌ ಎಚ್ಚರಿಕೆ

    ಮಾ.22ರಂದು ಅಖಂಡ ಕರ್ನಾಟಕ ಬಂದ್‌; ʻಕಾಂತಾರʼ ನಟನ ಶಿವಾಜಿ ಚಿತ್ರ ಬಂದ್ರೆ ಬಹಿಷ್ಕಾರ – ವಾಟಾಳ್‌ ನಾಗರಾಜ್‌ ಎಚ್ಚರಿಕೆ

    – ಇದು ಚಾಲಕರ ಮಾನ, ಮರ್ಯಾದೆ ಪ್ರಶ್ನೆ
    – ನಮ್ಮ ಮೆಟ್ರೋ, ಮಾಲ್‌ಗಳೂ ಬಂದ್‌ ಆಗ್ಬೇಕು; ಆಗ್ರಹ

    ಬೆಂಗಳೂರು: ಎಂಇಎಸ್‌ ಪುಂಡಾಟಿಕೆಗೆ ಕಡಿವಾಣ ಹಾಕಬೇಕು, ವಿವಿಧ ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು, ಕನ್ನಡಿಗರ ಮೇಲೆ ಪರಭಾಷಿಕರ ದಾಳಿ ನಿಲ್ಲಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಆಗ್ರಹಿಸಿ ಇದೇ ಮಾ.22ರಂದು ಕರ್ನಾಟಕ ಬಂದ್‌ (Karnataka Bandh) ಮಾಡುವುದಾಗಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಘೋಷಿಸಿದರು.

    ಕರ್ನಾಟಕ ಬಂದ್‌ಗೆ ಸಂಬಂಧಿಸಿದಂತೆ ಬೆಂಗಳೂರಿನ (Bengaluru) ಖಾಸಗಿ ಹೋಟೆಲ್‌ನಲ್ಲಿಂದು ಸಭೆ ನಡೆಸಲಾಯಿತು. ಹಲವು ಕನ್ನಡಪರ ಸಂಘಟನೆಯ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಾಟಾಳ್‌ ನಾಗರಾಜ್‌, ಅಂದು ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೂ ಕರ್ನಾಟಕ ಬಂದ್‌ ನಡೆಸಲಾಗುವುದು. ಬೆಳಗ್ಗೆ 10:30ಕ್ಕೆ ಟೌನ್ ಹಾಲ್‌ನಿಂದ ಫ್ರೀಡಂ ಪಾರ್ಕ್ ತನಕ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕೊಂಕಣ ರೈಲ್ವೆ ವಿಲೀನ, ಮಂಗಳೂರು ರೈಲು ವ್ಯಾಪ್ತಿ ಪುನರ್ ರಚನೆ – ಲೋಕಸಭೆಯಲ್ಲಿ ಧ್ವನಿಯೆತ್ತಿದ ಕ್ಯಾ.ಬ್ರಿಜೇಶ್ ಚೌಟ

    ನೈತಿಕ ಬೆಂಬಲ ಅನ್ನೋರು ಮನೆಯಲ್ಲಿರಿ:
    ಯಾವುದೇ ಕಾರಣಕ್ಕೂ ಬಂದ್‌ ಹಿಂಪಡೆಯುವುದಿಲ್ಲ. ಮಹಾರಾಷ್ಟ್ರದಲ್ಲಿ (Maharashtra) ಕನ್ನಡಿಗರ ಮೇಲೆ ಪದೇ ಹಲ್ಲೆ ನಡೆಯುತ್ತಿದೆ. ಈ ಬಂದ್‌ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆಯಲು ನಿರ್ಧರಿಸಲಾಗಿದೆ. ಬಹುತೇಕ ಕನ್ನಡ ಪರ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ. ಆಟೋ ಚಾಲಕರ ಸಂಘಟನೆಗಳು, ಕ್ಯಾಬ್, ಒಲಾ, ಉಬರ್‌, ಹೋಟೆಲ್ ಮಾಲೀಕರು ಸೇರಿ ಎಲ್ಲರೂ ಬಂದ್‌ಗೆ ಬೆಂಬಲ ನೀಡಬೇಕು. ನಮ್ಮ ಮೆಟ್ರೋ, ಮಾಲ್‌ಗಳೂ ಬಂದ್‌ ಆಗಬೇಕು. ಇಲ್ಲದಿದ್ದರೇ ನಾವೇ ಬಂದ್‌ ಮಾಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದರಲ್ಲದೇ ಕರ್ನಾಟಕ ಬಂದ್‌ಗೆ ನಮ್ಮದು ನೈತಿಕ ಬೆಂಬಲ ಅನ್ನುವವರು ಮನೆಯಲ್ಲೇ ಕುಳಿತುಕೊಳ್ಳಿ ಎಂದು ಹೇಳಿದರು.  ಇದನ್ನೂ ಓದಿ: ಒತ್ತುವರಿ ಆಗಿದ್ರೆ ತೆರವು ಮಾಡಿಕೊಳ್ಳಿ, ನಮ್ಮ ಜಮೀನು ಹುಡುಕಿಕೊಡಿ – ಭೂ ದಾಖಲೆಗಳ ಇಲಾಖೆಗೆ ಹೆಚ್‌ಡಿಕೆ ಪತ್ರ

    ರಾಜ್ಯದಲ್ಲಿ ದಿನೇ ದಿನೇ ಕನ್ನಡಿಗರ ಮೇಲೆ ಪರಭಾಷಿಗರ ದಾಳಿ ಹೆಚ್ಚಾಗುತ್ತಿದೆ. ಬೆಂಗಳೂರು, ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ಹಲ್ಲೆ ನಡೆಯುತ್ತಿದೆ. ಬಿಹಾರ, ಬಂಗಾಳ, ತಮಿಳು, ತೆಲುಗು, ಮಾರ್ವಾಡಿಯವರು ರಾಜ್ಯದಲ್ಲಿ ಸುಮಾರು 2 ಕೋಟಿ ಜನ ಇದ್ದಾರೆ. ತಲೆಬೋಳಿಸೋದ್ರಿಂದ ಹಿಡಿದು ಪಾನಿಪುರಿ ಮಾರೋನು ಕೂಡ ಅನ್ಯರಾಜ್ಯದವರಿದ್ದಾರೆ. ಇದನ್ನೆಲ್ಲ ಯಾರು ಕೇಳೋದು? ಇದೆಲ್ಲದರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ಅಲ್ಲದೇ ಎಂಇಎಸ್, ಶಿವಸೇನೆಯನ್ನು ನಿಷೇಧ ಮಾಡಬೇಕು. ಬೆಳಗಾವಿ ನಮ್ಮದು. ಬೆಳಗಾವಿಯಲ್ಲಿ ಶಿವಾಜಿ, ಸಂಭಾಜಿ ಪ್ರತಿಮೆ ಬೇಕಾ? ಪರಭಾಷಿಗರು ಕನ್ನಡಿಗರ ಮೇಲೆ ದೌರ್ಜನ್ಯ ನಡೆಸುವುದನ್ನು ನಿಲ್ಲಿಸಬೇಕು. ಕರ್ನಾಟಕದಲ್ಲಿದ್ದು ಕನ್ನಡಿಗರ ಮೇಲೆ ಹಲ್ಲೆ ನಡೆಸುವವರು ರಾಜ್ಯ ಬಿಟ್ಟು ಹೋಗಬೇಕು ಎಂದು ಆಗ್ರಹಿಸಿದರು.  ಇದನ್ನೂ ಓದಿ: ಅಂಬೇಡ್ಕರ್ ಸೋಲಿಸುವುದಕ್ಕೆ ಸಾವರ್ಕರ್ ಕಾರಣ – ಪ್ರಿಯಾಂಕ್ ಖರ್ಗೆ, ಅಶ್ವಥ್ ನಾರಾಯಣ್ ನಡುವೆ ದಾಖಲೆ ಜಟಾಪಟಿ

    ಮಾ.22ರಂದು ಯಾರೂ ನಮ್ಮ ಮೆಟ್ರೋ ಹತ್ತಬೇಡಿ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರೊಂದಿಗೆ ಮಾತನಾಡಿದ್ದು, ಅಂದು ಬಸ್ ಓಡಿಸಬಾರದು ಅಂತ ಹೇಳಿದ್ದೇವೆ. ಇನ್ನೂ ಒಂದು ಸಲ ಹೇಳುತ್ತೇವೆ, ಅವತ್ತು ಬಸ್ ಓಡಿಸಬಾರದು. ಮಂತ್ರಿ, ಸಿಎಂ ಕಾರಿನ ಚಾಲಕರೇ ಆಗಿರಲಿ, ಮಾನ, ಮರ್ಯಾದೆ, ಗೌರವ, ಕನ್ನಡ ಅಭಿಮಾನ, ಸ್ವಾಭಿಮಾನಕ್ಕೆ ಅಂದು ಗಾಡಿ ಹತ್ತಬೇಡಿ.‌ ಚಾಲಕರು ಯಾರೇ ಇರಲಿ ಬಸ್, ಆಟೋ, ಕಾರು ಚಾಲಕರಿಗೂ ಇದು ಸ್ವಾಭಿಮಾನ, ಮರ್ಯಾದೆ ಪ್ರಶ್ನೆಯಾಗಿದೆ ಎಂದು ನುಡಿದರು.

    ರಿಷಬ್‌ ಶೆಟ್ಟಿಗೆ ಪರೋಕ್ಷ ವಾರ್ನಿಂಗ್‌:
    ಮುಂದುವರಿದು… ಶಿವಾಜಿ ಕುರಿತಾದ ಜೀವನ ಚರಿತ್ರೆ ಆಧಾರಿತ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ವಾಟಾಳ್‌ ನಾಗರಾಜ್‌ ಪರೋಕ್ಷ ಎಚ್ಚರಿಕೆ ನೀಡಿದರು. ಕಾಂತಾರ ಚಿತ್ರದ ನಟ ‘ಛತ್ರಪತಿ ಶಿವಾಜಿ’ ಸಿನಿಮಾ ಮಾಡೋದಕ್ಕೆ ಮುಂದಾಗಿದ್ದಾರೆ. ಅವರು ಸಿನಿಮಾ ಮಾಡಕೂಡದು, ಶಿವಾಜಿ ಚಿತ್ರ ಬಂದರೆ ಬಹಿಷ್ಕಾರ ಹಾಕ್ತೇವೆ ಎಂದು ರಿಷಬ್‌ ಶೆಟ್ಟಿ ಹೆಸರು ಹೇಳದೇ ಎಚ್ಚರಿಕೆ ಕೊಟ್ಟರು.

  • ಇಂದು ಬಂದ್‌ ಬದಲಿಗೆ ಬೃಹತ್‌ ರ‍್ಯಾಲಿ – MES ನಿಷೇಧಕ್ಕೆ ಸರ್ಕಾರಕ್ಕೆ ಗಡುವು

    ಇಂದು ಬಂದ್‌ ಬದಲಿಗೆ ಬೃಹತ್‌ ರ‍್ಯಾಲಿ – MES ನಿಷೇಧಕ್ಕೆ ಸರ್ಕಾರಕ್ಕೆ ಗಡುವು

    ಬೆಂಗಳೂರು: ರಾಜ್ಯದಲ್ಲಿ ನಡೆಯಬೇಕಿದ್ದ ಕರ್ನಾಟಕ ಬಂದ್ ಹಿಂಪಡೆದ ಕನ್ನಡಪರ ಸಂಘಟನೆಗಳು ಬದಲಾಗಿ ಇಂದು ಬೃಹತ್ ರ್‍ಯಾಲಿ ನಡೆಸಲಿವೆ.

    ರಾಜ್ಯದಲ್ಲಿ ಎಂಇಎಸ್ ನಿಷೇಧಗೊಳಿಸುವಂತೆ ಕನ್ನಡಪರ ಸಂಘಟನೆಗಳು ಆಗ್ರಹಿಸಿದ್ದರು. ಇಂದು ಕರ್ನಾಟಕ ಬಂದ್‍ಗೆ ಕರೆ ನೀಡಿದ್ದರು. ಆದರೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಎಂಇಎಸ್ ನಿಷೇಧಗೊಳಿಸುವುದಾಗಿ ಭರವಸೆ ನೀಡಿರುವುದರಿಂದ ಕನ್ನಡಪರ ಸಂಘಟನೆಗಳು ಬಂದ್ ಕರೆಯನ್ನು ಹಿಂಪಡೆದಿದೆ. ಇದನ್ನೂ ಓದಿ: ನಾಳೆಯ ಕರ್ನಾಟಕ ಬಂದ್ ವಾಪಸ್

    ಗುರುವಾರ ಬೊಮ್ಮಾಯಿ ಅವರೊಂದಿಗೆ ಸಭೆ ನಡೆಸಿದ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್, ಬಂದ್ ಬೇಡ ಎಂದು ಸಿಎಂ ಎರಡು ಬಾರಿ ಮಾತಾಡಿದರು. ಎಂಇಎಸ್ ನಿಷೇಧ ಮಾಡುವ ಭರವಸೆ ನೀಡಿದರು. ಕಾನೂನು ಪ್ರಕಾರ ನಿಷೇಧ ಮಾಡಲು ಪ್ರಯತ್ನ ಮಾಡ್ತೀವಿ. ಬಂದ್ ಹಿಂಪಡೆಯಲು ಸಿಎಂ ಮನವಿ ಮಾಡಿದರು. ಅವರ ಮಾತಿಗೆ ಗೌರವ ಕೊಟ್ಟು ಬಂದ್ ವಾಪಸ್ ಪಡೆಯುವುದಾಗಿ ತಿಳಿಸಿದ್ದರು.

    ಇಂದು ಕರ್ನಾಟಕ ಬಂದ್ ಇದೆ ಎಂದು ಗೊಂದಲಗೊಂಡಿದ್ದ ಜನರಿಗೆ ಬಂದ್ ಇಲ್ಲ ಎಂಬ ವಿಚಾರ ಇದೀಗ ರಿಲೀಫ್ ನೀಡಿದೆ. ಅಲ್ಲದೇ ರಾಜ್ಯದಲ್ಲಿ ಎಂದಿನಂತೆ ಬಸ್ ಸಂಚಾರ, ವ್ಯಾಪಾರ ವಹಿವಾಟುಗಳು ನಡೆಯಲಿವೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ವರುಣನ ಆರ್ಭಟಕ್ಕೆ 3 ಬಲಿ – ರಾಜಧಾನಿ ಜಲಾವೃತ

    ರಾಜ್ಯದಲ್ಲಿ ಬಂದ್ ಹಿಂಪಡೆದ ಕನ್ನಡ ಸಂಘಟನೆಗಳು ಇಂದು ಬೆಳಗ್ಗೆ 10.30ಕ್ಕೆ ಟೌನ್‍ಹಾಲ್‍ನಿಂದ ಫ್ರೀಡಂಪಾರ್ಕ್‍ವರೆಗೆ ಬೃಹತ್ ರ್‍ಯಾಲಿ ನಡೆಸಲಿದೆ. ಮೈಸೂರು ಬ್ಯಾಂಕ್ ಸಿಗ್ನಲ್ ಮೂಲಕ ತೆರಳಲಿರುವ ಈ ರ್‍ಯಾಲಿಯಲ್ಲಿ ಸುಮಾರು 500 ಮಂದಿ ಭಾಗಿಯಾಗುವ ನಿರೀಕ್ಷೆಯಿದೆ ಮತ್ತು ಜನವರಿ 22ರೊಳಗೆ ರಾಜ್ಯದಲ್ಲಿ ಎಂಇಎಸ್ ನಿಷೇಧಿಸಬೇಕು. ಇಲ್ಲವಾದರಲ್ಲಿ ಜನವರಿ 22ಕ್ಕೆ ಮತ್ತೆ ಬಂದ್ ಮಾಡುವುದಾಗಿ ಕನ್ನಡ ಸಂಘಟನೆಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

  • ಕರ್ನಾಟಕ ಬಂದ್‍ಗೆ ಎರಡೇ ದಿನ ಬಾಕಿ – ಹಲವು ವಲಯಗಳಿಂದ ಇನ್ನು ಸಿಕ್ಕಿಲ್ಲ ಪರಿಪೂರ್ಣ ಬೆಂಬಲ

    ಕರ್ನಾಟಕ ಬಂದ್‍ಗೆ ಎರಡೇ ದಿನ ಬಾಕಿ – ಹಲವು ವಲಯಗಳಿಂದ ಇನ್ನು ಸಿಕ್ಕಿಲ್ಲ ಪರಿಪೂರ್ಣ ಬೆಂಬಲ

    ಬೆಂಗಳೂರು: ಕರ್ನಾಟಕ ಬಂದ್‍ಗೆ ಎರಡೇ ದಿನ ಬಾಕಿ ಉಳಿದಿದ್ದು, ಹಲವು ವಲಯಗಳಿಂದ ಇನ್ನೂ ಪರಿಪೂರ್ಣ ಬೆಂಬಲ ಸಿಕ್ಕಿಲ್ಲ. ಈ ಪರಿಣಾಮ ಬಂದ್ ಯಶಸ್ವಿಗೊಳಿಸೋಕೆ ಕನ್ನಡಪರ ಸಂಘಟನೆಗಳು ಹರಸಾಹಸ ಪಡುತ್ತಿವೆ.

    ಡಿ.31ರ ಕರ್ನಾಟಕ ಬಂದ್ ಗೆ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದವು. ಆದರೆ ಅದಕ್ಕೆ ಎಲ್ಲ ಕಡೆಯಿಂದ ಸಂಪೂರ್ಣ ಬೆಂಬಲ ಸಿಕ್ಕಿಲ್ಲ. ಪರಿಣಾಮ ಕನ್ನಡಪರ ಸಂಘಟನೆಗಳು ಬಂದ್ ಯಶಸ್ವಿಗೊಳಿಸೋಕೆ ಪಣತೊಟ್ಟಿವೆ. ಬಂದ್ ಗೆ ಬೆಂಬಲ ಕೋರಿ ಕೆಲ ಸಂಘಟನೆಗಳಿಂದ ರ‍್ಯಾಲಿ ಮಾಡುತ್ತಿವೆ. ಮತ್ತೆ ಕೆಲ ಸಂಘಟನೆಗಳಿಂದ ಬಂದ್ ಗೆ ಬೆಂಬಲ ಬೇಡ ಎಂದು ತೀರ್ಮಾನಿಸಲು ಇಂದು ಸಭೆ ಕರೆಯಲಾಗಿದೆ. ಇದನ್ನೂ ಓದಿ: ಪಂಜಾಬ್ ಚುನಾವಣೆಗೂ ಮುನ್ನ ಬಿಜೆಪಿ ಸೇರಿದ ಮಾಜಿ ಕ್ರಿಕೆಟಿಗ ದಿನೇಶ್ ಮೊಂಗಿಯಾ 

    ಬಂದ್ ಗೆ ಬೆಂಬಲ ಬೇಡ ಎಂದು ಸರ್ವ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಸಂಘಟನೆಗಳಿಂದ ಡಿ.30ಕ್ಕೆ ನಗರದಲ್ಲಿ ರ‍್ಯಾಲಿ ಮಾಡಲು ನಿರ್ಧರಿಸಲಾಗಿದೆ. ಇನ್ನು ಹಲವು ಸಂಘಟನೆಗಳು ನೈತಿಕ ಬೆಂಬಲ ನೀಡುವುದಾಗಿ ಘೋಷಿಸಿವೆ. ನೈತಿಕ ಬೆಂಬಲ ಬೇಡ ಸಂಪೂರ್ಣ ಬೆಂಬಲ ಬೇಕು ಎಂದು ಕನ್ನಡಪರ ಸಂಘಟನೆಗಳು ಒತ್ತಾಯಿಸಿವೆ.

    ಹೋಟೆಲ್, ಪಬ್, ಬಾರ್ ಮಾಲೀಕರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಾವು ನೈತಿಕ ಬೆಂಬಲ ನೀಡುತ್ತೇವೆ ಎಂದು ತಿಳಿಸಿವೆ. ಹೀಗಾಗಿ ಕನ್ನಡಪರ ಸಂಘಟನೆಗಳು ನೈತಿಕ ಬೆಂಬಲಕ್ಕೆ ಅಸಮಾಧಾನ ವ್ಯಕ್ತಪಡಿಸಿವೆ.

    ಹಲವು ಗೊಂದಲಗಳ ನಡುವೆ ಬಂದ್ ನ್ನು ಯಶಸ್ವಿಗೊಳಿಸಲೇಬೇಕಾದ ಒತ್ತಡದಲ್ಲಿ ಕನ್ನಡಪರ ಸಂಘಟನೆಗಳು ಇದ್ದು, ರಾಜ್ಯದಲ್ಲಿ ತಮ್ಮ ಶಕ್ತಿ ಸಾಬೀತಾಗಬೇಕಾದರೆ ಬಂದ್ ಯಶಸ್ವಿಯಾಗಲೇಬೇಕು ಎಂದು ಪಣತೊಟ್ಟಿವೆ. ಇದನ್ನೂ ಓದಿ: ಗ್ರಾಪಂ ಸದಸ್ಯ 15 ಲಕ್ಷ ಲಂಚ ಪಡೆಯುವುದು ಭ್ರಷ್ಟಾಚಾರವಲ್ಲ: ಬಿಜೆಪಿ ಸಂಸದ

    ಮೊನ್ನೆ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಸತ್ಯಾಗ್ರಹ, ಕಾಲ್ನಡಿಗೆ ಜಾಥಾದ ಮೂಲಕ ಸಾರ್ವಜನಿಕರಲ್ಲಿ ಮನವಿ, ಮಾಲ್ ಗಳಲ್ಲಿ ರ‍್ಯಾಲಿ, ಮಲ್ಲೇಶ್ವರಂನಲ್ಲಿ ಉರುಳು ಸೇವೆ ಮಾಡಿ ಬಂದ್ ಗೆ ಕನ್ನಡಪರ ಸಂಘಟನೆಗಳು ಬೆಂಬಲ ಕೋರಿವೆ. ಈ ವೇಳೆ 100 ಕ್ಕೂ ಹೆಚ್ಚು ಹೋರಾಟಗಾರರಿಂದ ಉರುಳು ಸೇವೆ ಮೂಲಕ ಮನವಿ ಮಾಡಲಾಯಿತು. ಇದು ಕನ್ನಡಿಗರ ಸ್ವಾಭಿಮಾನದ ಪ್ರಶ್ನೆಯಾಗಿರುವುದರಿಂದ ಬಂದ್ ಮಾಡಲೇಬೇಕು ಎಂದು ಸಂಘಟನೆಗಳು ಪಣತೊಟ್ಟಿವೆ.

  • MES ಪುಂಡರನ್ನು ಬಗ್ಗು ಬಡಿಯಬೇಕು: ಕರವೇ ನಾರಾಯಣಗೌಡ

    MES ಪುಂಡರನ್ನು ಬಗ್ಗು ಬಡಿಯಬೇಕು: ಕರವೇ ನಾರಾಯಣಗೌಡ

    ಧಾರವಾಡ: ಹಲವು ವರ್ಷಗಳಿಂದ ಎಂಇಎಸ್ ಪುಂಡಾಟಿಕೆ ನೋಡುತ್ತಾ ಬಂದಿದ್ದೇನೆ. ಅವರನ್ನು ಬಗ್ಗು ಬಡಿಯಬೇಕು ಎಂದು ಕರವೇ ಅಧ್ಯಕ್ಷ ಟಿಎ ನಾರಾಯಣಗೌಡ ಹೇಳಿದ್ದಾರೆ.

    ಧಾರವಾಡದಲ್ಲಿ ಮಾತನಾಡಿದ ಅವರು, ನಮ್ಮ ಎಲ್ಲ ಕಾರ್ಯಕರ್ತರು ರಾತ್ರೋರಾತ್ರಿ ಬೆಳಗಾವಿಗೆ ಬಂದಿದ್ದಾರೆ, ಇನ್ನು ಹಲವು ಕಾರ್ಯಕರ್ತರು ಬರುತ್ತಿದ್ದಾರೆ. ಮೊದಲು ಬೆಳಗಾವಿ ನಗರದ ಕಿತ್ತೂರು ಚೆನ್ನಮ್ಮ ವೃತ್ತದ ಚನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿ, ನಂತರ 12 ಗಂಟೆಗೆ ಸುವರ್ಣ ಸೌಧಕ್ಕೆ ಪಾದಯಾತ್ರೆ ಮೂಲಕ ಹೋಗುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: MES ಗಲಾಟೆ ಮಾಡಿದೆ ಅಂತ ನಾನು ಹೇಳಲ್ಲ: ಡಿ.ಕೆ ಶಿವಕುಮಾರ್

    ಹಲವು ವರ್ಷಗಳಿಂದ ಎಂಇಎಸ್ ಪುಂಡಾಟಿಕೆ ನೋಡುತ್ತಾ ಬಂದಿದ್ದೇನೆ. ಅವರು ಈಗ ಕನ್ನಡದ ಬಾವುಟ ಸುಡುವುದು, ಸಂಗೋಳ್ಳಿ ರಾಯಣ್ಣನ ಮೂರ್ತಿ ಭಗ್ನ ಮಾಡುವುದು, ಕನ್ನಡಿಗರ ವಾಹನ ಸುಡುವ ಪುಂಡಾಟಿಕೆ ಮಾಡುತ್ತಲೇ ಬಂದಿದ್ದಾರೆ. ಒಂದು ಕಡೆ ಶಿವಸೇನೆ ಮತ್ತೊಂದು ಕಡೆ ಎಂಇಎಸ್ ಪುಂಡರಿದ್ದಾರೆ. ರಾಜ್ಯ ಸರ್ಕಾರಕ್ಕೆ ನಾವು ಎಂಇಎಸ್ ನಿಷೇಧ ಮಾಡಲು ಒತ್ತಾಯಿಸಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಬೆಳಗಾವಿ ಪ್ರಕರಣದಲ್ಲಿ MESನ ಪ್ರಮುಖರನ್ನು ಬಂಧಿಸಲಾಗಿದೆ: ಬೊಮ್ಮಾಯಿ

    ನಮ್ಮ ಸರ್ಕಾರಗಳು ಎಂಇಎಸ್ ಒಲೈಸುತ್ತಲೇ ಬಂದಿದ್ದಾರೆ. ಇದರಿಂದ ಅವರು ಮಿತಿಮೀರಿ ಗುಂಡಾಗಿರಿ ದಾದಾಗಿರಿ ಮಾಡುತ್ತಿದ್ದಾರೆ. ಸಿಎಂಗೆ ಹಾಗೂ ಗೃಹ ಸಚಿವರಿಗೆ ಭೇಟಿ ಮಾಡಿ ಹೇಳಲು ಈಗ ಬಂದಿದ್ದೇವೆ. 1999 ರಿಂದ ಇದನ್ನು ಎದುರಿಸಿಕೊಂಡೇ ಬಂದಿದ್ದೇವೆ. ಬೆಳಗಾವಿಗೆ 7 ಜನ ಎಂಇಎಸ್ ಶಾಸಕರು ಆಯ್ಕೆ ಆಗುತ್ತಿದ್ದರು, ಪಾಲಿಕೆಯಲ್ಲಿ ಸದಸ್ಯರು ಇರುತ್ತಿದ್ದರು. ಈಗ ಅವರು ಯಾರೂ ಇಲ್ಲ, ನೆಲಕಚ್ಚಿದ್ದಾರೆ. ಅದನ್ನು ಸಹಿಸಿಕೊಳ್ಳಲು ಆಗದೇ ಅವರು ಗುಡಾಗಿರಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ MES ಪುಂಡರ ಅಟ್ಟಹಾಸ – ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ, ಬಸ್ ಮೇಲೆ ಕಲ್ಲು ತೂರಾಟ

    ಇವರನ್ನು ಬೇರು ಸಮೇತ ಕಿತ್ತು ಹಾಕಬೇಕು. ನಮ್ಮ ಸರ್ಕಾರ ರಣ ಹೇಡಿ ಸರ್ಕಾರ ಆಗಬಾರದು. ನಮ್ಮ ಪೊಲೀಸ್ ವ್ಯವಸ್ಥೆ ರಣಹೇಡಿ ಅಲ್ಲ, ಇವರು ಪಾಕಿಸ್ತಾನದ ಭಯೋತ್ಪಾದಕರಂತೆ ಶಿವಸೇನೆ ಹಾಗೂ ಎಂಇಎಸ್‍ನವರು ಮಾಡುತ್ತಿದ್ದಾರೆ. ಅದಕ್ಕೆ ಇವರನ್ನು ಬಗ್ಗು ಬಡಿಯ ಬೇಕು. ಪೊಲೀಸರು ಏನಾದರೂ ಮಾಡಲಿ ನಾನು ಅಂಜಲ್ಲ, ಹಿಂದೆ ಸರಿಯಲ್ಲ, ಉದ್ದೇಶದಂತೆ ಬೆಳಗಾವಿಗೆ ಹೋಗಿ ಮುತ್ತಿಗೆ ಹಾಕುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • MES ಗಲಾಟೆ ಮಾಡಿದೆ ಅಂತ ನಾನು ಹೇಳಲ್ಲ: ಡಿ.ಕೆ ಶಿವಕುಮಾರ್

    MES ಗಲಾಟೆ ಮಾಡಿದೆ ಅಂತ ನಾನು ಹೇಳಲ್ಲ: ಡಿ.ಕೆ ಶಿವಕುಮಾರ್

    ಬೆಳಗಾವಿ: ಎಂಇಎಸ್ ಗಲಾಟೆ ಮಾಡಿದೆ ಅಂತ ನಾನು ಹೇಳಲ್ಲ ಎಂದು ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

    ಶುಕ್ರವಾರ ತಡರಾತ್ರಿ ಅನಗೋಳದ ಕನಕದಾಸ ಕಾಲೋನಿಯಲ್ಲಿ ನಗರದಲ್ಲಿ ಎಂಇಎಸ್ ಕಾರ್ಯಕರ್ತರು ನಡೆಸಿದ ಧಾಂದಲೆ ಕುರಿತಂತೆ ಇದೀಗ ಕನ್ನಡ ಪರ ಸಂಘಟನೆಗಳು ರೊಚ್ಚಿಗೆದ್ದಿದ್ದು, ಇದೀಗ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನೂ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಹಾಸ ಪಡುತ್ತಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ MES ಪುಂಡರ ಅಟ್ಟಹಾಸ – ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ, ಬಸ್ ಮೇಲೆ ಕಲ್ಲು ತೂರಾಟ

    ಸದ್ಯ ಈ ಕುರಿತಂತೆ ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ರಾಜ್ಯದಲ್ಲಿ ಶಾಂತಿ ಕಾಪಾಡುವುದು ಕಾಂಗ್ರೆಸ್ ಪಕ್ಷದ ಸಂಕಲ್ಪವಾಗಿದೆ. ನಾನು ಯಾವುದೋ ಸಂಘನೆ ಈ ಕೆಲಸ ಮಾಡಿದೆ ಎಂದು ಹೆಸರು ಹೇಳುವುದಿಲ್ಲ. ಅದು ಎಂಇಎಸ್ ಇದ್ದರೂ ಇರಬಹುದು. ಆದರೆ ಯಾರೋ ಕಿಡಿಗೇಡಿಗಳು ಶಾಂತಿ ಕದಡುವ ಕೆಲಸವನ್ನು ಮಾಡುತ್ತಿದ್ದಾರೆ. ಮೊದಲಿನಿಂದಲೂ ಬಿಜೆಪಿ ಸರ್ಕಾರ ನೈತಿಕ ಪೊಲೀಸ್ ಗಿರಿಗೆ ಬೆಂಬಲ ನೀಡಿತು. ಇದು ಈ ಘಟನೆಗೆ ಪ್ರಮುಖ ಕಾರಣವಾಗಿದೆ. ಆರೋಪಿಗಳು ಯಾರೇ ಆಗಿದ್ದರೂ ಸರ್ಕಾರ ಕೂಡಲೇ ಈ ಕುರಿತಂತೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ:  ಬೆಳಗಾವಿ ಪ್ರಕರಣದಲ್ಲಿ MESನ ಪ್ರಮುಖರನ್ನು ಬಂಧಿಸಲಾಗಿದೆ: ಬೊಮ್ಮಾಯಿ

    ಕನ್ನಡ ಸಂಘಟನೆಗಳು ಕಾನೂನನ್ನು ಕೈಗೆತೆಗೆದುಕೊಳ್ಳಬಾರದು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಲಿ, ಬೇರೆ ಪಕ್ಷದ ಕಾರ್ಯಕರ್ತರಾಗಲಿ ಯಾರು ಸಹ ಕಾನೂನನನು ಕೈಗೆ ತೆಗೆದುಕೊಳ್ಳಬಾರದು. ಪೊಲೀಸರು ನಿರ್ಧಾಕ್ಷಿಣ್ಯಾವಾಗಿ ರಾಜಕಾರಣಿಗಳ ಮಾತನ್ನು ಬಿಟ್ಟು ಅವರ ಕರ್ತವ್ಯವನ್ನು ನಿಭಾಯಿಸಬೇಕು.

    ಅಧಿವೇಶನದಲಿ ಕಾನೂನು ವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ರಾಜ್ಯದಲ್ಲಿಯೇ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಪೊಲೀಸ್ ಸ್ಟೇಷನ್ ಮುಂದೆ ಕಾಕಿ ಬಟ್ಟೆಯನ್ನು ಕಿತ್ತು ಹಾಕಿ, ಕಾವಿ ಬಟ್ಟೆ ಹಾಕಿಕೊಂಡು ಕುಳಿತುಕೊಂಡರೆ ಹೇಗಪ್ಪಾ? ಎಂದಿದ್ದಾರೆ.

  • ಶಿವಸೇನೆ ಪುಂಡಾಟಿಕೆ ಖಂಡಿಸಿ ಚಾಮರಾಜನಗರದಲ್ಲಿ ಪೊರಕೆ ಚಳವಳಿ

    ಶಿವಸೇನೆ ಪುಂಡಾಟಿಕೆ ಖಂಡಿಸಿ ಚಾಮರಾಜನಗರದಲ್ಲಿ ಪೊರಕೆ ಚಳವಳಿ

    ಚಾಮರಾಜನಗರ: ಬೆಳಗಾವಿ ಗಡಿಯಲ್ಲಿ ಶಿವಸೇನೆ ಪುಂಡಾಟಿಕೆ ಖಂಡಿಸಿ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಪೊರಕೆ ಚಳವಳಿ ನಡೆಸಿದರು.

    ನಗರದ ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ ಕನ್ನಡ ಸಂಘಟನೆಗಳ ಕಾರ್ಯಕರ್ತರು, ಚಪ್ಪಲಿ ಹಾಗೂ ಪೊರಕೆ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ಗಡಿಗೆ ನುಗ್ಗಲು ಯತ್ನಿಸಿರುವ ಶಿವಸೇನೆ ಕಾರ್ಯಕರ್ತರನ್ನು ಬಂಧಿಸಿ ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸಿದರು. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಗಡಿ ವಿವಾದಕ್ಕೆ ತುಪ್ಪ ಸುರಿಯುತ್ತಿದ್ದಾರೆಂದು ಆರೋಪಿಸಿ ಅವರ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ನಿನ್ನೆ ಬೆಳಗಾವಿಯಲ್ಲಿ ಶಿವಸೇನೆ ಕಾರ್ಯಕರ್ತರು ಪುಂಡಾಟಿಕೆ ಮೆರೆದಿದ್ದರು. ಬೆಳಗಾವಿ ನಗರ ಪಾಲಿಕೆ ಮುಂಭಾಗವಿರುವ ಕನ್ನಡ ಧ್ವಜಸ್ತಂಭ ತೆರವುಗೊಳಿಸಿ ಇಲ್ಲವೆ ಭಗವಾಧ್ವಜವನ್ನು ಹಾಕಿ ಎಂದು ಆಗ್ರಹಿಸಿದ್ದರು. ಅಲ್ಲದೆ ಬೆಳಗಾವಿ ಮಹಾರಾ಼ಟ್ರಕ್ಕೆ ಸೇರಿದ್ದು ಎಂಬ ಘೋಷಣೆಯನ್ನು ಸಹ ಕೂಗಿದ್ದರು. ಇದರ ಬೆನ್ನಲ್ಲೇ ಕನ್ನಡಪರ ಸಂಘಟನೆ ಗಳು ಸಹ ಹೋರಾಟ ನಡೆಸಿದ್ದರು. ಇದೀಗ ಚಾಮರಾಜನಗರದಲ್ಲಿ ಸಹ ಆಕ್ರೋಶ ವ್ಯಕ್ತವಾಗಿದೆ.

  • ಪ್ರತಿಭಟನೆಗಷ್ಟೇ ಸೀಮಿತವಾದ ಕರ್ನಾಟಕ ಬಂದ್- ಬಸ್, ಆಟೋ, ಟ್ಯಾಕ್ಸಿ ಇದ್ರೂ ಜನ ಸಂಚಾರ ವಿರಳ

    ಪ್ರತಿಭಟನೆಗಷ್ಟೇ ಸೀಮಿತವಾದ ಕರ್ನಾಟಕ ಬಂದ್- ಬಸ್, ಆಟೋ, ಟ್ಯಾಕ್ಸಿ ಇದ್ರೂ ಜನ ಸಂಚಾರ ವಿರಳ

    – ಬಂದ್ ಫೇಲ್ ಅಂತ ಮರಾಠಿಗರ ವಿಜಯೋತ್ಸವ

    ಬೆಂಗಳೂರು: ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಕರೆ ನೀಡಿದ್ದ ಕರ್ನಾಟಕ ಬಂದ್ ಬಿಸಿ ಜೋರಾಗಿತ್ತು. ಬೆಳಗ್ಗೆ 8 ಗಂಟೆಯಿಂದ ಕಾವೇರಿದ್ದ ಬಂದ್ ಬಿಸಿ, ಮಧ್ಯಾಹ್ನ ವೇಳೆಗೆ ತಣ್ಣಗಾಗಿತ್ತು. ಬೆಂಗಳೂರಿನ ರಸ್ತೆಗಳೆಲ್ಲ ಜನರಿಲ್ಲದೆ ಬಣಗುಟ್ಟುತ್ತಿದ್ವು. ಬೆಂಗಳೂರಿನಲ್ಲಿ ಎಂದಿನಂತೆ ಬಸ್ ಸಂಚಾರ, ಆಟೋ ಸಂಚಾರ ಇತ್ತು. ಬಿಎಂಟಿಸಿ ಬಸ್ ಓಡಾಟ ಇದ್ದರೂ ಪ್ರಯಾಣಿಕರ ಸಂಖ್ಯೆ ಮಾತ್ರ ವಿರಳವಾಗಿತ್ತು.

    ಗ್ರಾಹಕರಿಲ್ಲದೆ ಹೋಟೆಲ್, ಅಂಗಡಿಗಳು, ಮಾರುಕಟ್ಟೆಗಳು ಖಾಲಿ ಖಾಲಿ ಆಗಿದ್ದವು. ಮೆಟ್ರೋ ಸಂಚಾರ ಎಂದಿನಂತೆ ಇದ್ದರೂ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿತ್ತು. ಓಲಾ-ಊಬರ್, ಆಟೋ ಸಂಘ ಬಂದ್‍ಗೆ ಬೆಂಬಲ ನೀಡಿದ್ದರೂ ಎಂದಿನಂತೆ ರಸ್ತೆಗೆ ವಾಹನಗಳು ಇಳಿದಿದ್ದವು. ಮೈಸೂರು ರಸ್ತೆ, ಸುಮನಹಳ್ಳಿ ಜಂಕ್ಷನ್, ನಾಯಂಡಳ್ಳಿ ಜಂಕ್ಷನ್‍ಗಳಲ್ಲಿ ಎಂದಿನಂತೆ ವಾಹನಗಳ ಸಂಚಾರ ಇತ್ತು. ಇನ್ನು ಬೆಂಗಳೂರಿನಲ್ಲಿ ರ‍್ಯಾಲಿ ಪರಿಣಾಮ ಅರಮನೆ ಮೈದಾನ ರಸ್ತೆ, ಕಾವೇರಿ ಜಂಕ್ಷನ್, ಕಾರ್ಪೋರೇಷನ್ ಸರ್ಕಲ್, ಮೆಜೆಸ್ಟಿಕ್ ಸುತ್ತಾಮುತ್ತಾ ಕಿ.ಮೀಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು.

    ಪ್ರತಿಭಟನಾಕಾರರು ಪೊಲೀಸರ ವಶಕ್ಕೆ: ಮರಾಠ ನಿಗಮ ಖಂಡಿಸಿ ರಸ್ತೆಗಿಳಿದ ಕನ್ನಡಪರ ಸಂಘಟನೆಗಳ ರ‍್ಯಾಲಿಗೆ ಪೊಲೀಸರು ಮಾರ್ಗ ಮಧ್ಯೆಯೇ ಬ್ರೇಕ್ ಹಾಕಿದ್ದರು. ಅನುಮತಿ ನಿರಾಕರಣೆ ಮಧ್ಯೆಯು ಟೌನ್‍ಹಾಲ್ ಬಳಿ 12ಕ್ಕೂ ಹೆಚ್ಚು ಸಂಘಟನೆಗಳು ಪ್ರತಿಭಟನೆ ನಡೆಸಿದವು. ಟೌನ್‍ಹಾಲ್ ಮುಂದೆ ಜಮಾಯಿಸುತ್ತಿದ್ದಂತೆ ಪ್ರತಿಭಟನೆಗೆ ಪೊಲೀಸರು ಅವಕಾಶ ಕೊಡ್ಲಿಲ್ಲ. ವಾಟಾಳ್ ನಾಗರಾಜ್, ಸಾರಾ ಗೋವಿಂದು & ಕಾರ್ಯಕರ್ತರನ್ನ ವಶಕ್ಕೆ ಪಡೆದರು.

    ಸರ್ಕಾರದ ವಿರುದ್ಧ ಕಿಡಕಾರಿದ ವಾಟಾಳ್, ಯಡಿಯೂರಪ್ಪ ಮರಾಠಿ ಏಜೆಂಟ್, ಹಿಟ್ಲರ್ ವರ್ತನೆ ಅಂತ ಗುಡುಗಿದರು. ಬುಧವಾರ ಸಭೆ ಮಾಡಿ ಮತ್ತೆ ಹೋರಾಟದ ಚರ್ಚೆ ಮಾಡ್ತೇವೆ ಅಂತ ಎಚ್ಚರಿಸಿದರು. ಮತ್ತೊಂದ ಕಡೆ, ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ತೆರಳ್ತಿದ್ದ ಕರವೇ ನಾರಾಯಣಗೌಡ ಬಣವನ್ನ ರೇಸ್‍ಕೋರ್ಸ್ ಬಳಿ ಪೊಲೀಸರು ವಶಕ್ಕೆ ಪಡೆದ್ರು. ಈ ವೇಳೆ ನಾರಾಯಣಗೌಡ & ಪೊಲೀಸರ ಮಧ್ಯೆ ವಾಗ್ವಾದ ನಡೆಯಿತು.

    ಬಂದ್‍ಗೆ ನೈತಿಕ ಬೆಂಬಲ ಕೊಟ್ಟಿದ್ದ ಕರವೇ ಪ್ರವೀಣ್ ಶೆಟ್ಟಿ ಬಣ ಮೇಖ್ರಿ ಸರ್ಕಲ್‍ನಿಂದ ಮೌರ್ಯ ಸರ್ಕಲ್‍ವರೆಗೆ ರ‍್ಯಾಲಿ ನಡೆಸಿದರು. ಮರಾಠ ಪ್ರಾಧಿಕಾರ ವಿರೋಧಿಸಿ ನಗರದ ಸಿಟಿ ಸಿವಿಲ್ ಕೋರ್ಟ್ ಮುಂಭಾಗದಲ್ಲಿ ವಕೀಲರ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

    ನೋ ಬಂದ್: ಜಿಲ್ಲೆಗಳಲ್ಲಿ ಬಂದ್ ಬಿಸಿ ತಟ್ಟಿಲ್ಲ. ಮಾಮೂಲಿನಂತೆ ಜನಜೀವನ ಇತ್ತು. ಆದರೆ ಕೆಲ ಸಂಘಟನೆ ಕಾರ್ಯಕರ್ತರು ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ರು. ರಾಮನಗರದಲ್ಲಿ ಪ್ರತಿಭಟನೆ ವೇಳೆ ರೈತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೀತು. ಗದಗನಲ್ಲಿ ಶಾಸಕ ಬಸನಗೌಡ ಯತ್ನಾಳ ಪ್ರತಿಕೃತಿ ದಹಿಸಲು ಕರವೇ ಕಾರ್ಯಕರ್ತರು ಯತ್ನಿಸಿದರು. ಇದಕ್ಕೆ ಪೊಲೀಸರು ಅವಕಾಶ ಕೊಡ್ಲಿಲ್ಲ. ವಾಗ್ವಾದ ನಡೀತು. ಆದರೂ ಕರವೇ ಕಾರ್ಯಕರ್ತನೊಬ್ಬ ಬೆಂಕಿ ಹಚ್ಚೇಬಿಟ್ಟ. ತಕ್ಷಣವೇ ಅಲ್ಲಿದ್ದ ಎಲ್ಲರೂ ದಿಕ್ಕಾಪಾಲಾಗಿ ಓಡಿದರು.

    ಕೊಪ್ಪಳದ ಗಂಗಾವತಿಯಲ್ಲಿ ಉಪ್ಪಿ 2 ಶೈಲಿಯಲ್ಲಿ ಉಲ್ಟಾ ನಿಂತು ಪ್ರತಿಭಟನೆ ನಡೆಸಿದ್ರು. ಯಾದಗಿರಿಯಲ್ಲಿ ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ಕೆಂಪು ಮೆಣಸಿನಕಾಯಿ ತಿನ್ನುವ ಮೂಲಕ ಪ್ರತಿಭಟನೆ ನಡೆಸಿದರು. ರಾಯಚೂರಲ್ಲಿ ತಲೆ ಮೇಲೆ ಇಟ್ಟಿಗೆ ಹೊತ್ತುಕೊಂಡು ಅರೆಬೆತ್ತಲೆ ಪ್ರತಿಭಟನೆ ನಡೆಸಲಾಯ್ತು. ಸರ್ಕಾರ ಸತ್ತಿದೆ ಎಂದು ರಸ್ತೆಯಲ್ಲಿ ಕುಳಿತು ಗಳಗಳನೇ ಅಳುತ್ತ ಶ್ರದ್ದಾಂಜಲಿ ಸಲ್ಲಿಸಿದ್ರು. ಚಿತ್ರದುರ್ಗದ ಓಬವ್ವ ವೃತ್ತದಲ್ಲಿ ಕರವೇ ಕಾರ್ಯಕರ್ತರು ಬಾಯಿ ಬಡಿದುಕೊಂಡು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.

    ಮರಾಠಿಗರಿಂದ ವಿಜಯೋತ್ಸವ: ಮರಾಠ ನಿಗಮ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ವಿಫಲ ಅಂತ ಧಾರವಾಡದಲ್ಲಿ ಮರಾಠಿಗರು ವಿಜಯೋತ್ಸವ ಮಾಡಿದ್ದಾರೆ. ಸರ್ಕಾರದ ಮರಾಠ ನಿಗಮ ಅಭಿವೃದ್ಧಿ ಸ್ವಾಗತಿಸಿ ಪೊಲೀಸರ ವಿರೋಧದ ನಡುವೆಯೂ ಧಾರವಾಡದಲ್ಲಿ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದಾರೆ.

    ಬೆಳಗಾವಿಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಕರ್ನಾಟಕ ಬಂದ್‍ಗೆ ಜನರು ಬೆಂಬಲ ನೀಡಿಲ್ಲ. ಮರಾಠಿ ಸಮುದಾಯದ ಬಡವರ ಅಭಿವೃದ್ಧಿಗಾಗಿ ನಿಗಮ ಸ್ಥಾಪನೆ ಮಾಡಲಾಗಿದೆ. ನಿಗಮ ಸ್ಥಾಪನೆ ಮಾಡಿರುವುದು ಮರಾಠಿ ಭಾಷೆಯ ಸಲುವಾಗಿ ಅಲ್ಲ, ಮರಾಠ ಸಮುದಾಯದ ಅಭಿವೃದ್ಧಿಗಾಗಿ ಎಂದರು.

  • ಕರ್ನಾಟಕ ಬಂದ್ – ಟೈರ್‌ಗೆ ಬೆಂಕಿ ಹಚ್ಚಿ ಅಂಗಡಿ ಮುಂಗಟ್ಟುಗಳನ್ನ ಮುಚ್ಚಿಸಿದ ಕನ್ನಡಿಗರು

    ಕರ್ನಾಟಕ ಬಂದ್ – ಟೈರ್‌ಗೆ ಬೆಂಕಿ ಹಚ್ಚಿ ಅಂಗಡಿ ಮುಂಗಟ್ಟುಗಳನ್ನ ಮುಚ್ಚಿಸಿದ ಕನ್ನಡಿಗರು

    ಬೆಂಗಳೂರು: ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ತರುವಂತೆ ಒತ್ತಾಯಿಸಿ ಇಂದು ಕರ್ನಾಟಕ ಬಂದ್‍ಗೆ ವಿವಿಧ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ. ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬಂದ್‍ಗೆ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಹೊಸೂರು ರಸ್ತೆಯಲ್ಲಿ ಪ್ರತಿಭಟನಾಕಾರರು ಟೈರ್‌ಗೆ  ಬೆಂಕಿ ಹಚ್ಚಿ ಪ್ರತಿಭಟನೆ ಇಳಿದಿದ್ದಾರೆ.

    ಕಳೆದ 101 ದಿನಗಳಿಂದ ಮೌರ್ಯ ಸರ್ಕಲ್‍ನಲ್ಲಿ ಕನ್ನಡ ಪರ ಸಂಘಟನೆಗಳು ಧರಣಿ ಮಾಡುತ್ತಿದ್ದು, ಇಂದು ಬಂದ್‍ಗೆ ಕರೆಕೊಟ್ಟಿದ್ದಾರೆ. ಈ ಹಿನ್ನೆಲೆ ಇಂದು ರಸ್ತೆಯಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ, ರಸ್ತೆ ತಡೆದು ಕನ್ನಡಿಗರಿಗೆ ಉದ್ಯೋಗ ನೀಡುವಂತೆ ಒತ್ತಾಯಿಸಿ, ಸರ್ಕಾರ ಡಾ. ಸರೋಜಿನಿ ಮಹಿಷಿ ವರದಿಯನ್ನ ಜಾರಿಗೆ ತರಬೇಕೆಂದು ಕನ್ನಡ ಪರ ಸಂಘಟನೆಗಳು ಪ್ರತಿಭಟಿಸುತ್ತಿವೆ.

    ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಬೇಕು ಎಂದು 400ಕ್ಕೂ ಹೆಚ್ಚು ಕನ್ನಡ ಪರ ಸಂಘಟನೆಗಳು ಬಂದ್ ಮಾಡುತ್ತಿದ್ದು, ಇತ್ತ ಬೆಳಗ್ಗೆಯೇ ಮಾಗಡಿ ರಸ್ತೆಯಲ್ಲಿ ಅಂಗಡಿ ಮುಂಗಟ್ಟುಗಳನ್ನ ಕನ್ನಡ ಪರ ಸಂಘಟನೆಗಳು ಮುಚ್ಚಿಸೋ ಮೂಲಕ ಬಂದ್‍ಗೆ ಸಹಕಾರ ನೀಡುವಂತೆ ಕೇಳಿವೆ.

    ಇಂದು ಕರ್ನಾಟಕ ಬಂದ್ ಇರುವುದರಿಂದ ಅಂಗಡಿ ತರೆಯದಂತೆ ಅಂಗಡಿ ಮಾಲೀಕರಿಗೆ ಪ್ರತಿಭಟನಾಕಾರರು ಮನವರಿಕೆ ಮಾಡಿಕೊಟ್ಟು, ಅಂಗಡಿ ಮುಂಗಟ್ಟುಗಳನ್ನ ಮುಚ್ಚಿಸಿದ್ದಾರೆ.

  • ಕರುನಾಡಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ – 81ನೇ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹ

    ಕರುನಾಡಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ – 81ನೇ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹ

    ಬೆಂಗಳೂರು: ಕನ್ನಡಿಗರಿಗೆ ಕರ್ನಾಟಕದ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡಿ ಎಂದು ಕನ್ನಡ ಪರ ಸಂಘಟನೆಗಳು ಮಾಡುತ್ತಿರೋ ಧರಣಿ ಸತ್ಯಾಗ್ರಹ 81ನೇ ದಿನಕ್ಕೆ ಕಾಲಿಟ್ಟಿದೆ.

    ಕಳೆದ ನವಂಬರ್ ಒಂದರಿಂದ ಕನ್ನಡ ಸಂಘಟನೆಗಳ ಒಕ್ಕೂಟ ವತಿಯಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ಪ್ರಾರಂಭವಾಗಿದೆ. 80 ದಿನ ಧರಣಿ ಮಾಡಿದರು ಸರ್ಕಾರದಿಂದ ಡಾ. ಸರೋಜಿನಿ ಮಹಿಷಿ ವರದಿಯನ್ನು ಅನುಷ್ಠಾನಗೊಳಿಸುವ ಯಾವುದೇ ಭರವಸೆಗಳು ಸಿಕಿಲ್ಲ.

    ಡಾ. ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತಂದರೆ ಕನ್ನಡಿಗರಿಗೆ ಉದ್ಯೋಗಾವಕಾಶಗಳು ಹೆಚ್ಚಾಗುತ್ತದೆ. ಆ ಹಿನ್ನೆಲೆಯಲ್ಲಿ ಕನ್ನಡ ಪರ ಸಂಘಟನೆಗಳು ಕನ್ನಡ ರಾಜ್ಯೋತ್ಸವದ ದಿನದಿಂದ ಹೋರಾಟವನ್ನು ಮಾಡಿಕೊಂಡು ಬಂದಿದ್ದಾರೆ. ವರದಿ ಜಾರಿಗೆ ತರಲೇಬೇಕು ಇಲ್ಲವಾದಲ್ಲಿ ಫೆಬ್ರವರಿ 13 ಕ್ಕೆ ಕರ್ನಾಟಕ ಬಂದ್ ಕರೆ ನೀಡಲಾಗುತ್ತದೆ ಎಂದು ಸಂಘಟನೆಗಳು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿವೆ. ಇಂದು 81 ನೇ ದಿನದ ಧರಣಿ ಸತ್ಯಾಗ್ರಹ ಮುಂದುವರಿದಿದೆ.