Tag: Kannada movies

  • ಕಾಂತಾರ ಚಾಪ್ಟರ್‌-1 ಟ್ರೈಲರ್ ರಿಲೀಸ್ – ದೃಶ್ಯ ವೈಭವಕ್ಕೆ ಮನಸೋತ ಫ್ಯಾನ್ಸ್

    ಕಾಂತಾರ ಚಾಪ್ಟರ್‌-1 ಟ್ರೈಲರ್ ರಿಲೀಸ್ – ದೃಶ್ಯ ವೈಭವಕ್ಕೆ ಮನಸೋತ ಫ್ಯಾನ್ಸ್

    ಹೃತಿಕ್ ರೋಷನ್, ಶಿವಕಾರ್ತಿಕೇಯನ್, ಪೃಥ್ವಿರಾಜ್ ಸುಕುಮಾರನ್, ಪ್ರಭಾಸ್ ಅವರಿಂದ, ವಿಶ್ವವೇ ಎದುರು ನೋಡುತ್ತಿರುವ ಕಾಂತಾರ ಚಾಪ್ಟರ್‌-1 (Kantara Chapter 1) ಚಿತ್ರದ ಕನ್ನಡ, ಹಿಂದಿ, ತಮಿಳು, ಮಲಯಾಳಂ ಹಾಗೂ ತೆಲುಗು ಭಾಷೆಯ ಟ್ರೇಲರ್ ಬಿಡುಗಡೆ ಆಗಿದೆ. ಇಡೀ ಟ್ರೈಲರ್‌ನುದ್ದಕ್ಕೂ ದೃಶ್ಯ ವೈಭವನ್ನು ಕಾಣಬಹುದು. ರಾಜ ಮತ್ತು ಕಾಡಿನ ಜನರ ನಡುವಿನ ಕಥೆ ಹಾಗೂ ಕಾಂತಾರ ನೆಲದ ಮಣ್ಣಿಗೆ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲು ಹೊರಟಿರುವುದು ಪ್ರಮುಖ ಅಂಶ.

    ಆರಂಭದಿಂದಲೂ ಸಾಕಷ್ಟು ಕುತೂಹಲ, ಕಾತುರ ಮೂಡಿಸಿರುವ, ಹೊಂಬಾಳೆ ಫಿಲಂಸ್ (Hombale Films) ನಿರ್ಮಾಣ ಹಾಗೂ ರಿಷಬ್ ಶೆಟ್ಟಿ (Rishab Shetty) ಅವರ ನಟನೆ ಹಾಗೂ ನಿರ್ದೇಶನದ, ವಿಶ್ವವೇ ಎದುರು ನೋಡುತ್ತಿರುವ ಬಹು ನಿರೀಕ್ಷಿತ ʻಕಾಂತಾರ ಚಾಪ್ಟರ್ – 1ʼ ಚಿತ್ರವು ಸಪ್ತ ಭಾಷೆಗಳಲ್ಲಿ ಅಕ್ಟೋಬರ್ 2 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದ್ದು, ಅದಕ್ಕೂ ಮುನ್ನ ಸೆ.22ರ ಸೋಮವಾರ ಮಧ್ಯಾಹ್ನ 12:45ಕ್ಕೆ ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳ ಟ್ರೇಲರನ್ನು ಆಯಾ ಭಾಷೆಗಳ ಸ್ಟಾರ್ ನಟರುಗಳು ಬಿಡುಗಡೆ ಮಾಡಿದರು. ಹಿಂದಿ ಟ್ರೇಲರ್‌ನ್ನು ಹೃತಿಕ್ ರೋಷನ್, ತಮಿಳಿನ ಟ್ರೇಲರ್‌ನ್ನು ಶಿವಕಾರ್ತಿಕೇಯನ್, ಮಲಯಾಳಂ ಟ್ರೇಲರ್‌ನ್ನು ಪೃಥ್ವಿರಾಜ್ ಸುಕುಮಾರನ್ ಹಾಗೂ ತೆಲುಗು ಭಾಷೆಯ ಟ್ರೇಲರ್‌ನ್ನು ಪ್ರಭಾಸ್ ಅವರು ಅನಾವರಣ ಮಾಡಿದರು.

    ಕನ್ನಡದ ಕಲಾಭಿಮಾಗಳಿಂದಲೇ ಕನ್ನಡದ ʻಕಾಂತಾರ 1ʼ ಚಿತ್ರದ ಟ್ರೇಲರ್ ಬಿಡುಗಡೆಯಾಗಿರುವುದು ವಿಶೇಷ. ಚಿತ್ರದ ಬಿಡುಗಡೆಗೆ ಕೆಲವೇ ದಿನಗಳು ಬಾಕಿಯಿದ್ದು, ಈಗಾಗಲೇ ರಿಲೀಸಾಗಿರುವ ಚಿತ್ರದ ಮೇಕಿಂಗ್ ವಿಡಿಯೋ, ಪೋಸ್ಟರ್ ಗಳಿಗೆ ಫಿದಾ ಆಗಿರುವ ಅಭಿಮಾನಿಗಳು ಅಕ್ಟೋಬರ್ 2ರಂದು ಕಾಂತಾರ-1 ಚಿತ್ರವನ್ನು ತೆರೆ ಮೇಲೆ ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದಾರೆ.

    ಬಿ. ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನ, ಅರವಿಂದ್ ಎಸ್.ಕಶ್ಯಪ್ ಅವರ ಛಾಯಾಗ್ರಹಣ ಹಾಗೂ ಪ್ರಗತಿ ಶೆಟ್ಟಿ ಅವರ ವಸ್ತ್ರ ವಿನ್ಯಾಸ ʻಕಾಂತಾರ-1ʼ ಚಿತ್ರಕ್ಕಿದೆ. ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಅವರುಗಳು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಕಾಂತಾರ -1. ಕಲೆ, ಭಕ್ತಿ ಮತ್ತು ಶಕ್ತಿಯ ಮಹತ್ವವನ್ನು ಒಳಗೊಂಡ ಚಿತ್ರವಾಗಿದ್ದು, ಸದಭಿರುಚಿಯ ಚಿತ್ರಗಳನ್ನೇ ನಿರ್ಮಾಣ ಮಾಡುತ್ತಾ ಬಂದಿರುವ ಹೊಂಬಾಳೆ ಫಿಲಂಸ್ ನಿಂದ ಮತ್ತೊಂದು ಅದ್ಭುತ ಚಿತ್ರ ವಿಶ್ವದ ಸಿನಿಪ್ರೇಮಿಗಳಿಗೆ, ಜನರಿಗೆ ವೀಕ್ಷಿಸಲು ಸಿಗುವುದಂತೂ ಖಂಡಿತ.

  • ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ ನಾಮಿನೇಷನ್ ಪ್ರಕಟ – ಯಾರ ಪಾಲಾಗಲಿದೆ‌ ಅವಾರ್ಡ್?

    ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ ನಾಮಿನೇಷನ್ ಪ್ರಕಟ – ಯಾರ ಪಾಲಾಗಲಿದೆ‌ ಅವಾರ್ಡ್?

    ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ 2025ರ (Chandanavana Film Critics Academy) ಆರನೇ ವರ್ಷದ ಪ್ರಶಸ್ತಿಗಳಿಗೆ ನಾಮ ನಿರ್ದೇಶನಗಳನ್ನು ಘೋಷಿಸಲಾಗಿದ್ದು, 2024ರಲ್ಲಿ ತೆರೆಕಂಡ ಅತ್ಯುತ್ತಮ ಕನ್ನಡ ಚಿತ್ರಗಳನ್ನು ಆಯ್ಕೆ ಮಾಡಿ, ಅವುಗಳಲ್ಲಿ 29 ವಿಭಾಗದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಐವತ್ತಕ್ಕೂ ಹೆಚ್ಚು ಸಿನಿಮಾ ಪತ್ರಕರ್ತರು ಈ ನಾಮ ನಿರ್ದೇಶನದ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು, ಮತದಾನದ ಮೂಲಕ ಆಯ್ಕೆ ಮಾಡಿದ್ದಾರೆ.

    ಈ ವರ್ಷ ಪ್ರಶಸ್ತಿಗಳನ್ನು ಐದು ವಿಭಾಗಗಳಲ್ಲಿ ವಿಂಗಡಿಸಲಾಗಿದ್ದು, ಚೊಚ್ಚಲ ಪ್ರಶಸ್ತಿಗಳು, ತಾಂತ್ರಿಕ ವಿಭಾಗ, ಸಂಗೀತ ವಿಭಾಗ ನಟನೆ ಮತ್ತು ಬರವಣಿಗೆ ಹಾಗೂ ತೀರ್ಪುಗಾರರ ಪ್ರಶಸ್ತಿಗಳನ್ನು ಒಳಗೊಂಡಿವೆ. ಮತ್ತೊಂದು ವಿಶೇಷ ಅಂದರೆ, ಈ ವರ್ಷದಿಂದ ಕನ್ನಡ ಸಿನಿಮಾ ರಂಗಕ್ಕೆ ಗಮನಾರ್ಹ ಕೊಡುಗೆ ನೀಡಿರುವವರಿಗೆ ಹಂಸಲೇಖ ಅವರ ಹೆಸರಿನಲ್ಲಿ ಜೀವಮಾನ ಸಾಧನೆ (ಚಿನ್ನದ ಪದಕ) ಗೌರವವನ್ನು ಪರಿಚಯಿಸಲಾಗುತ್ತಿದೆ. ಇದನ್ನೂ ಓದಿ: ರಿವೀಲ್ ಆಯ್ತು ‘ವಿಶ್ವಂಭರ’ ಚಿತ್ರದಲ್ಲಿನ ತ್ರಿಷಾ ಕೃಷ್ಣನ್ ಲುಕ್

    ಭಾನುವಾರ ಸಂಜೆ ನಡೆದ ಟ್ರೋಫಿ ಅನಾವರಣ ಮತ್ತು ನಾಮ ನಿರ್ದೇಶನಗಳ ಘೋಷಣೆ ಸಮಾರಂಭಕ್ಕೆ ಖ್ಯಾತ ನಟ ಅಜಯ್ ರಾವ್ ಮತ್ತು ನಟಿ ಮೇಘನಾ ಗಾಂವ್ಕರ್ ಅತಿಥಿಯಾಗಿ ಆಗಮಿಸಿದ್ದರು. ಹೊಸದಾಗಿ ವಿನ್ಯಾಸಗೊಳಿಸಿದ್ದ ಆರನೇ ವರ್ಷದ ಟ್ರೋಫಿಯನ್ನು ಅನಾವರಣಗೊಳಿಸಿದರು. 2025ರ ಪ್ರಶಸ್ತಿಗಳಿಗೆ ನಾಮ ನಿರ್ದೇಶನಗಳನ್ನು ಘೋಷಿಸಿದರು. ಅತ್ಯುತ್ತಮ ನಟ ಪ್ರಶಸ್ತಿಗಾಗಿ ಶಿವರಾಜ್ ಕುಮಾರ್ (ಭೈರತಿ ರಣಗಲ್), ಕಿಚ್ಚ ಸುದೀಪ್ (ಮ್ಯಾಕ್ಸ್) ಗಣೇಶ್ (ಕೃಷ್ಣಂ ಪ್ರಣಯ ಸಖಿ), ಶ್ರೀಮುರಳಿ (ಭಗೀರ) ಮತ್ತು ದುನಿಯಾ ವಿಜಯ್ (ಭೀಮಾ) ನಾಮನಿರ್ದೇಶನಗೊಂಡಿದ್ದಾರೆ.

    ಅತ್ಯುತ್ತಮ ನಟಿ ಪ್ರಶಸ್ತಿಗಾಗಿ ಬಿಂದು ಶಿವರಾಮ್ (ಕೆರೆಬೇಟೆ), ರೋಶನಿ ಪ್ರಕಾಶ್ (ಮರ್ಫಿ), ಚೈತ್ರಾ ಆಚಾರ್ (ಬ್ಲಿಂಕ್), ರುಕ್ಮಿಣಿ ವಸಂತ್ (ಬಘೀರ) ಮತ್ತು ನಿಶ್ವಿಕಾ ನಾಯ್ಡು (ಕರಟಕ ದಮನಕ) ಪಾತ್ರಗಳ ನಟನೆಗಾಗಿ ನಾಮನಿರ್ದೇಶನಗೊಂಡಿದ್ದಾರೆ. ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಭೀಮಾ ಹದಿನೇಳೆಂಟು, ಫೋಟೋ, ಮ್ಯಾಕ್ಸ್ ಮತ್ತು ಶಾಖಾಹಾರಿ ಚಿತ್ರಗಳು ನಾಮನಿರ್ದೇಶನಗೊಂಡಿವೆ.

    ಅತ್ಯುತ್ತಮ ಚೊಚ್ಚಲ ನಟ ಪ್ರಶಸ್ತಿಗಾಗಿ ಯುವರಾಜ್ ಕುಮಾರ್, ಸಮರ್ಜಿತ್ ಲಂಕೇಶ್, ಅಜಯ್ ಪೃಥ್ವಿ, ರೋಹಿತ್ ಮತ್ತು ರಾಕೇಶ್ ದಳವಾಯಿ ಪೈಪೋಟಿ ನಟಿಸಿದ್ದಾರೆ. ಅತ್ಯುತ್ತಮ ಸಂಗೀತ ನಿರ್ದೇಶನ ವಿಭಾಗದಲ್ಲಿ ಅರ್ಜುನ್ ಜನ್ಯ (ಕೃಷ್ಣಂ ಪ್ರಣಯ ಸಖಿ), ಚರಣ್ ರಾಜ್ (ಭೀಮ), ಬಿ. ಅಜನೀಶ್ ಲೋಕನಾಥ್ (ಮ್ಯಾಕ್ಸ್), ವೀರ್ ಸಮರ್ಥ (ಒಂದು ಸರಳ ಪ್ರೇಮಕಥೆ) ಮತ್ತು ವಿ.ಹರಿಕೃಷ್ಣ (ಕರಟಕ ದಮನಕ) ನಾಮನಿರ್ದೇಶನಗೊಂಡಿದ್ದಾರೆ.

    ಈ ಪ್ರಶಸ್ತಿ ಪ್ರದಾನ ಸಮಾರಂಭವು 11 ಮೇ 2025ರಂದು ಸಂಜೆ ನಡೆಯಲಿದ್ದು, ಸಿನಿಮಾ ರಂಗದ ಸಾಕಷ್ಟು ಕಲಾವಿದರು, ತಂತ್ರಜ್ಞರು ಭಾಗಿಯಾಗಲಿದ್ದಾರೆ. 2025ನೇ ಸಾಲಿನ ಪ್ರಶಸ್ತಿ ಸಮಾರಂಭಕ್ಕೆ ಮುಖ್ಯ ಪ್ರಾಯೋಜಕರಾಗಿ ಯುಮಿ ವೆಂಚರ್ಸ್ಮ ಸಹ ಪ್ರಯೋಜಕರಾಗಿ ಟರ್ಬೋಸ್ಟಿಲ್ ಮತ್ತು ಕಾವೇರಿ ಹಾಸ್ಪಿಟಲ್ ಜೊತೆಯಾಗಿದ್ದಾರೆ. ಇದನ್ನೂ ಓದಿ: ಮತ್ತೆ ವಿಜಯ್ ದೇವರಕೊಂಡಗೆ ರಶ್ಮಿಕಾ ಮಂದಣ್ಣ ಜೋಡಿ?

  • ‘ಗಂಟುಮೂಟೆ’ಯೊಂದಿಗೆ ಕನ್ನಡದ ಘನತೆ ಎತ್ತಿಹಿಡಿದ ರೂಪಾ ರಾವ್!

    ‘ಗಂಟುಮೂಟೆ’ಯೊಂದಿಗೆ ಕನ್ನಡದ ಘನತೆ ಎತ್ತಿಹಿಡಿದ ರೂಪಾ ರಾವ್!

    ಬೆಂಗಳೂರು: ಸದ್ದೇ ಇಲ್ಲದೆ ಚಿತ್ರೀಕರಣಗೊಂಡು ಬಿಡುಗಡೆಯ ಹೊಸ್ತಿಲಲ್ಲಿ ನಿಂತ ಕೆಲ ಚಿತ್ರಗಳು ತನ್ನ ತಾಜಾತನದಿಂದಲೇ ಎಲ್ಲರೂ ತಿರುಗಿ ನೋಡುವಂತೆ ಸದ್ದು ಮಾಡೋದಿದೆ. ಆದರೆ ರೂಪಾ ರಾವ್, ನಿರ್ದೇಶನ ಮಾಡಿರೋ ‘ಗಂಟುಮೂಟೆ’ ಎಂಬ ಚಿತ್ರದ ಮೂಲಕ ಬಿಡುಗಡೆ ಪೂರ್ವದಲ್ಲಿಯೇ ದೇಶ ವಿದೇಶಗಳಲ್ಲಿಯೂ ಕನ್ನಡದ ಘನತೆಯನ್ನು ಮಿನುಗಿಸಿದ್ದಾರೆ. ಮುಂದಿನ ತಿಂಗಳು ಬಿಡುಗಡೆಗೆ ರೆಡಿಯಾಗಿರೋ ಈ ಸಿನಿಮಾ ಈಗಾಗಲೇ ಅಂತಾರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳನ್ನೂ ಬಾಚಿಕೊಂಡಿದೆ. ಆ ಮಟ್ಟಕ್ಕೆ ಸಂಚಲನಕ್ಕೆ ಕಾರಣವಾಗಿರೋ ಗಂಟುಮೂಟೆಯ ಹೂರಣ ಕಂಡ ಪ್ರಖ್ಯಾತ ನಿರ್ದೇಶಕರುಗಳೇ ಅಚ್ಚರಿಗೀಡಾಗಿದ್ದಾರೆ. ಹಲವರು ಸಿನಿಮಾ ಒಂದನ್ನು ಹೀಗೂ ರೂಪಿಸಬಹುದಾ ಎಂಬ ಪ್ರಶ್ನೆಯೊಂದಿಗೆ ಥ್ರಿಲ್ ಆಗಿದ್ದಾರೆ!

    ಅಂತಾರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪಡೆದುಕೊಂಡಿದೆ, ಪ್ರದರ್ಶನಗೊಂಡಿದೆ ಅಂದ ಮಾತ್ರಕ್ಕೆ ಇದನ್ನು ಆರ್ಟ್ ಮೂವಿ ಅಂದುಕೊಳ್ಳಬೇಕಿಲ್ಲ. ಈಗಾಗಲೇ ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ವೆಬ್ ಸೀರೀಸ್‍ಗಳ ಮೂಲಕ ಗಮನ ಸೆಳೆದಿರುವ, ಹಲವಾರು ಸಿನಿಮಾಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿ ಅನುಭವ ಹೊಂದಿರುವ ರೂಪಾ ರಾವ್ ಗಂಟುಮೂಟೆಯನ್ನು ರೂಪಿಸಿರೋ ರೀತಿಯೇ ಅಂಥಾದ್ದಿದೆ. ಅದಾಗ ತಾನೇ ಟೀನೇಜು ಪ್ರವೇಶಿಸೋ ಅಂಚಿನಲ್ಲಿ ನಿಂತು, ಅದರ ಮನೋದೈಹಿಕ ತೊಳಲಾಟಗಳಿಗೆ ಪಕ್ಕಾಗಿರುವ ಮನಸುಗಳ ವಿಚಾರಗಳನ್ನೊಳಗೊಂಡಿರೋ ಪ್ರೇಮಕಥೆಯಾಧಾರಿತವಾದ ಚಿತ್ರ.

    ಮಾಮೂಲಿಯಾಗಿ ಇಂಥಾ ಕಥೆಗಳನ್ನು ಹುಡುಗನ ದಿಕ್ಕಿನಿಂದ ನಿರೂಪಣೆ ಮಾಡಲಾಗುತ್ತದೆ. ಆದರೆ ಗಂಟುಮೂಟೆ ಹುಡುಗಿಯ ಕಡೆಯಿಂದಲೇ ಬಿಚ್ಚಿಕೊಳ್ಳುತ್ತದೆ. ಹಾಗಂತ ಇದೇನು ಹೆಣ್ಣುಮಕ್ಕಳ ಶೋಷಣೆಯಂಥಾ ಕಥೆಯನ್ನು ಹೊಂದಿರೋ ಚಿತ್ರ ಅಂದುಕೊಳ್ಳುವಂತಿಲ್ಲ. ಇಲ್ಲಿ ಹೈಸ್ಕೂಲು ದಿನಗಳಲ್ಲಿ ಚಿಗಿತುಕೊಳ್ಳುವ ಮೊದಲ ಪ್ರೇಮದ ನವಿರಾದ ಪುಳಕಗಳಿವೆ. ಹುಡುಗಿಯೊಳಗಿನ ಅನೇಕ ತುಮುಲ, ತೊಳಲಾಟಗಳ ಹೃದಯಸ್ಪರ್ಶಿ ಕಥಾನಕವನ್ನು ಈ ಚಿತ್ರ ಒಳಗೊಂಡಿದೆಯಂತೆ. ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟ ಪ್ರಕಾಶ್ ಬೆಳವಾಡಿಯವರ ಮಗಳು ತೇಜು ಬೆಳವಾಡಿ ನಿರ್ವಹಿಸಿದ್ದಾರೆ. ತೀರ್ಥಹಳ್ಳಿಯ ಹಳ್ಳಿಯೊಂದರ ಹುಡುಗ ನಿಶ್ವಿತ್ ಮತ್ತೊಂದು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ನಡೆದ ವಿಶೇಷ ಪ್ರದರ್ಶನದಲ್ಲಿ ಈ ಚಿತ್ರವನ್ನು ನೋಡಿದ ಖ್ಯಾತ ನಿರ್ದೇಶಕರೊಬ್ಬರು ಈ ಥರದ ಕಥೆ ಹೊಂದಿರುವ, ನಿರೂಪಣಾ ಶೈಲಿಯ ಚಿತ್ರಗಳನ್ನು ಈವರೆಗೆ ನೋಡಿಲ್ಲ ಎಂಬಂಥಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರಂತೆ. ಇದನ್ನು ನೋಡಿದ ವಿತರಕರೂ ಕೂಡಾ ಇಂಥಾದ್ದೇ ಉದ್ಘಾರವೆತ್ತಿದ್ದಾರೆ.

    ಕನ್ನಡದಲ್ಲಿ ಮಹಿಳಾ ನಿರ್ದೇಶಕಿಯರ ಸಂಖ್ಯೆ ಕಡಿಮೆಯಿದೆ. ಎತ್ತಲಿಂದ ಹುಡುಕಿದರೂ ಮಹಿಳಾ ನಿರ್ದೇಶಕಿಯರ ಸಂಖ್ಯೆ ಚಿಕ್ಕದಿದೆ. ಆದರೆ ಆ ಸಾಲಿನಲ್ಲಿ ಗಂಟುಮೂಟೆಯ ನಿರ್ದೇಶಕಿ ರೂಪಾ ರಾವ್ ವಿಶಿಷ್ಟವಾದ ಸ್ಥಾನ ಪಡೆದುಕೊಳ್ಳೋ ಎಲ್ಲ ಸಾಧ್ಯತೆಗಳೂ ಇವೆ. ಯಾಕೆಂದರೆ, ಅವರು ಈ ಸಿನಿಮಾವನ್ನು ರೂಪಿಸಿರೋ ರೀತಿಯೇ ಅಂಥಾದ್ದಿದೆ. ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಕನ್ನಡ ಚಿತ್ರಗಳು ಪ್ರವೇಶ ಪಡೆಯೋದೇ ಸವಾಲಿನ ಸಂಗತಿ. ಅಂಥಾದ್ದರಲ್ಲಿ ನ್ಯೂಯಾರ್ಕ್ ಇಂಡಿಯನ್ ಫಿಲಂ ಫೆಸ್ಟಿವಲ್‍ನ ಪ್ರೀಮಿಯರ್‍ನಲ್ಲಿ ಪ್ರದರ್ಶನ ಕಂಡಿರೋ ಈ ಚಿತ್ರ ಬೆಸ್ಟ್ ಸ್ಕ್ರೀನ್ ಪ್ಲೇ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಕೆನಡಾದಲ್ಲಿ ನಡೆದ ಒಟ್ಟಾವಾ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶನ ವಿಭಾಗದಲ್ಲಿಯೂ ಗಂಟುಮೂಟೆ ಸ್ಪರ್ಧಿಸಿದೆ.

    ಇದು ತೊಂಭತ್ತರ ದಶಕದಲ್ಲಿ ನಡೆಯೋ ಕಥೆ ಹೊಂದಿರೋ ಚಿತ್ರ. ಇದರಲ್ಲಿ ಹುಡುಗಿಯ ಪರಿಧಿಯಲ್ಲಿಯೇ ಬಿಚ್ಚಿಕೊಳ್ಳುತ್ತಾ ಆಕೆಯ ಮನೋ ತೊಳಲಾಟಗಳ ಸುತ್ತ ಹೆಣೆದ ವಿಶಿಷ್ಟವಾದ ಪ್ರೇಮ ಕಥೆಯನ್ನೊಳಗೊಂಡಿರೋ ಚಿತ್ರ. ವಿಷ್ಣುವರ್ಧನ ಚಿತ್ರದಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದ ರೂಪಾ ರಾವ್ ಈ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕಿಯಾಗಿದ್ದಾರೆ. ಇವರು ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ನಿರ್ದೇಶನ ಮಾಡಿರೋ ದ ಅದರ್ ಲವ್ ಸ್ಟೋರಿ ವೆಬ್ ಸೀರೀಸ್ ತುಂಬಾನೇ ಪ್ರಸಿದ್ಧಿ ಪಡೆದುಕೊಂಡಿದೆ. ಈ ವೆಬ್ ಸೀರೀಸ್ ರೂಪಾ ರಾವ್ ಅವರ ಪ್ರತಿಭೆಗೆ, ಭಿನ್ನ ಒಳನೋಟಕ್ಕೆ ಕನ್ನಡಿಯಂತೆಯೂ ಇದೆ.

    ಕನ್ನಡ ಚಿತ್ರವೊಂದು ಹೊಸತನದೊಂದಿಗೆ ಬಿಡುಗಡೆಗೆ ಮುನ್ನವೇ ಈ ಪಾಟಿ ಪ್ರಸಿದ್ಧಿ ಪಡೆದುಕೊಂಡಿರೋದು ನಿಜಕ್ಕೂ ಅಪರೂಪದಲ್ಲೇ ಅಪರೂಪದ ಬೆಳವಣಿಗೆ. ಪಕ್ಕಾ ಕಮರ್ಶಿಯಲ್ ಸ್ವರೂಪದ ಈ ಚಿತ್ರ ಪ್ರತೀ ಪ್ರೇಕ್ಷಕರನ್ನೂ ಬೆರಗಾಗಿಸಲಿದೆ ಅನ್ನೋ ಗಾಢವಾದ ಭರವಸೆ ರೂಪಾ ರಾವ್ ಅವರಲ್ಲಿದೆ. ದೇಶಾದ್ಯಂತ ಹೆಸರಾಗಬಲ್ಲ ಮಹಿಳಾ ನಿರ್ದೇಶಕಿಯಾಗಿ ಗುರುತಿಸಿಕೊಳ್ಳೋ ಎಲ್ಲ ಲಕ್ಷಣಗಳನ್ನೂ ಹೊಂದಿರೋ ರೂಪಾ ರಾವ್ ಬಿಡುಗಡೆ ಪೂರ್ವದಲ್ಲಿಯೇ ಕೇಳಿ ಬರುತ್ತಿರೋ ಸದಭಿಪ್ರಾಯಗಳಿಂದ ಮತ್ತಷ್ಟು ಖುಷಿಗೊಂಡಿದ್ದಾರೆ. ಮುಂದಿನ ತಿಂಗಳು ಈ ಸಿನಿಮಾ ತೆರೆಕಾಣಲಿದೆ. ಆ ಮೂಲಕ ಕನ್ನಡಕ್ಕೆ ಏಕಕಾಲದಲ್ಲಿಯೇ ಒಂದೊಳ್ಳೆ ಚಿತ್ರ ಮತ್ತು ಕ್ರಿಯೇಟಿವ್ ನಿರ್ದೇಶಕಿಯ ಆಗಮನವೂ ಆಗಲಿದೆ.

  • ಲಂಡನ್ ನಲ್ಲಿ ಲಂಬೋದರ: ವಿದೇಶಿ ವ್ಯಾಮೋಹದಿಂದ ದೇಶ ಮರೆತವರ ಮರ್ಮರ!

    ಲಂಡನ್ ನಲ್ಲಿ ಲಂಬೋದರ: ವಿದೇಶಿ ವ್ಯಾಮೋಹದಿಂದ ದೇಶ ಮರೆತವರ ಮರ್ಮರ!

    ಬೆಂಗಳೂರು: ಯಾವುದೇ ಸಿನಿಮಾ ರೂಪಿಸಿದವರೂ ತಮ್ಮ ಚಿತ್ರವನ್ನು ಯಾಕೆ ಜನ ನೋಡಲೇ ಬೇಕು ಅನ್ನೋದಕ್ಕೆ ಬೇಕಾದಷ್ಟು ಕಾರಣಗಳನ್ನ ಕೊಡುತ್ತಾರೆ. ಆದರೆ ಲಂಡನ್ ನಲ್ಲಿ ಲಂಬೋದರ ಚಿತ್ರದ ನಿರ್ದೇಶಕ ರಾಜ್ ಸೂರ್ಯ ಕೊಡೋ ಕಾರಣ ಮಾತ್ರ ತುಸು ಭಿನ್ನ. ಇನ್ನೇನು ಇದೇ ತಿಂಗಳ ಇಪ್ಪತ್ತೊಂಬತ್ತರಂದು ಬಿಡುಗಡೆಗೊಳ್ಳಲಿರೋ ಈ ಚಿತ್ರದ ವಿಶೇಷತೆಗಳು ಎಲ್ಲ ವರ್ಗದ ಪ್ರೇಕ್ಷಕರನ್ನೂ ಸೆಳೆಯುವಂತಿದೆ.

    ಈಗ ಹೇಳಿಕೇಳಿ ಥಳುಕು ಬಳುಕಿಗೆ ಬೇಗನೆ ಮಾರು ಹೋಗುವ ಕಾಲ. ಹುಟ್ಟಿದ ನೆಲವನ್ನು ಹಳಹಳಿಸುತ್ತಾ ಹೇಗಾದರೂ ಮಾಡಿ ವಿದೇಶಕ್ಕೆ ಹಾರಿ ಸೆಟಲ್ ಆಗಬೇಕೆಂಬ ಮನಸ್ಥಿತಿಯೇ ಬಹುತೇಕರನ್ನು ಆಳುತ್ತಿದೆ. ಹೀಗೆ ಹುಟ್ಟಿದೂರನ್ನು ತೊರೆದು ವಿದೇಶದಲ್ಲಿ ಬೇರಿಳಿಸಿಕೊಂಡು ತಾಯಿ ಬೇರನ್ನು ಸಂಪೂರ್ಣವಾಗಿ ಮರೆತರೆ ಏನಾಗುತ್ತೆ ಅನ್ನೋದಕ್ಕೆ ಖಂಡಿತವಾಗಿಯೂ ಈ ಚಿತ್ರದಲ್ಲಿ ವಿಶೇಷವಾದ ಉತ್ತರಗಳು ಜಾಹೀರಾಗಲಿವೆ!

    ಇನ್ನು ಪಾತ್ರಗಳ ಬಗ್ಗೆ ಹೇಳೋದಾದರೆ ನಿರ್ದೇಶಕರು ಪ್ರತೀ ಪಾತ್ರವನ್ನೂ ಕೂಡಾ ಟ್ರೆಂಡ್ ಸೆಟ್ ಮಾಡುವಂಥಾ ರೀತಿಯಲ್ಲಿ ರೂಪಿಸಿದ್ದಾರಂತೆ. ಸಂಪತ್ ರಾಜ್ ಅವರದ್ದಿಲ್ಲಿ ವಿಶಿಷ್ಟವಾದ ಪಾತ್ರ. ಸಾಧು ಕೋಕಿಲಾ ಕೂಡಾ ಈವರೆಗಿನದಕ್ಕಿಂತಲೂ ಪಕ್ಕಾ ವಿಶೇಷವಾದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರಂತೆ. ನಮ್ಮ ನಡುವೆಯೇ ಇರುವಂತೆ ಭಾಸವಾಗೋ ಈ ಪಾತ್ರಗಳೆಲ್ಲವೂ ತಮ್ಮದೇ ರೀತಿಯಲ್ಲಿ ಕಚಗುಳಿ ಇಡಲಿವೆ ಅನ್ನೋದು ಚಿತ್ರತಂಡದ ಭರವಸೆ.

    ಈಗಾಗಲೇ ಲಂಡನ್ ನಲ್ಲಿ ಲಂಬೋದರ ಚಿತ್ರ ಬಹು ನಿರೀಕ್ಷಿತ ಸಿನಿಮಾವಾಗಿ ಹೊರಹೊಮ್ಮಿದೆ. ತಾಂತ್ರಿಕವಾಗಿಯೂ ಶ್ರೀಮಂತಿಕೆಯಿಂದ ಕೂಡಿರೋ ಈ ಸಿನಿಮಾದಲ್ಲಿ ಸ್ಕ್ರೀನ್ ಪ್ಲೇ, ಎಡಿಟಿಂಗ್, ಹಾಡುಗಳು, ಛಾಯಾಗ್ರಹಣ ಸೇರಿದಂತೆ ಎಲ್ಲದರಲ್ಲಿಯೂ ಹೊಸಾ ಪ್ರಯೋಗಗಳನ್ನು ಮಾಡಲಾಗಿದೆ. ಅದರ ಮುದ ಏನೆಂಬುದು ಈ ತಿಂಗಳ ಇಪ್ಪತ್ತೊಂಬತ್ತರಂದು ಜಾಹೀರಾಗಲಿದೆ.

  • ದಿವಂಗತ ಮಂಜುನಾಥನ ಗೆಳೆಯರು ಮೋಸ ಮಾಡೋದಿಲ್ಲ!

    ದಿವಂಗತ ಮಂಜುನಾಥನ ಗೆಳೆಯರು ಮೋಸ ಮಾಡೋದಿಲ್ಲ!

    ಬೆಂಗಳೂರು: ದಿವಂಗತ ಮಂಜುನಾಥನ ಗೆಳೆಯರ ದರ್ಶನವಾಗಿದೆ. ಒಂದು ಯೂಥ್ ಫುಲ್ ಕಥೆಯನ್ನು ಲವಲವಿಕೆಯಿಂದಲೇ ಹೇಳುತ್ತಾ ಕಡೆಗೆ ಯುವ ಸಮುದಾಯಕ್ಕೊಂದು ಎಚ್ಚರಿಕೆಯ ಸಂದೇಶವನ್ನೂ ರವಾನಿಸುವ ಈ ಚಿತ್ರ ಪ್ರೇಕ್ಷಕರಿಗೆಲ್ಲ ಹೊಸಾ ಅನುಭವ ತುಂಬುವಲ್ಲಿ ಸಫಲವಾಗಿದೆ.

    ಎಸ್.ಡಿ ಅರುಣ್ ನಿರ್ದೇಶನದ ಈ ಚಿತ್ರ ಪೋಸ್ಟರುಗಳಲ್ಲಿನ ಫ್ರೆಶ್ ಅನುಭೂತಿಯನ್ನು ಹಾಗೆಯೇ ಕಾಪಿಟ್ಟುಕೊಂಡು ಪ್ರೇಕ್ಷಕರನ್ನು ತಲುಪಿಕೊಂಡಿದೆ. ಸಂಭಾಷಣೆಯಿಂದ ಹಿಡಿದು ಪ್ರತಿಯೊಂದರಲ್ಲಿಯೂ ಸಹಜತೆಗೆ ಹೆಚ್ಚು ಒತ್ತು ಕೊಟ್ಟಿದ್ದರಿಂದ ತಮ್ಮನ ನಡುವಿನ ಪಾತ್ರಗಳೇ ಎಂಬಂಥಾ ಫೀಲು ಹುಟ್ಟಿಸುವಂತೆ ಈ ಚಿತ್ರದ ಪ್ರತೀ ಪಾತ್ರಗಳನ್ನೂ ನಿರ್ದೇಶಕರು ಕಟ್ಟಿ ಕೊಟ್ಟಿದ್ದಾರೆ. ಯಾವ ಭಾವಗಳೂ ಭಾರ ಅನ್ನಿಸದಂತೆ, ಯಾವ ದೃಶ್ಯಗಳೂ ಬೋರು ಹೊಡೆಸದಂತೆ ಅತ್ಯಂತ ಎಚ್ಚರಿಕೆಯಿಂದ ತಿದ್ದಿ ತೀಡಿದ ಕಲಾಕೃತಿಯಂತೆ ಈ ಚಿತ್ರ ಮೂಡಿ ಬಂದಿದೆ.

    ಸಂಜಯ್, ನವೀನ್, ರಾಜ್ ಕಿರಣ್ ಮತ್ತು ಶ್ರೀನಿವಾಸುಲು ಒಟ್ಟಿಗೇ ಓದಿದ್ದ ಗೆಳೆಯರು. ಅವರೆಲ್ಲರೂ ಇಂಜಿನಿಯರಿಂಗ್ ಓದಿ ಕೆಲಸ ಕಾರ್ಯ ಅಂತ ಒಬ್ಬೊಬ್ಬರೂ ಒಂದೊಂದು ದಿಕ್ಕುಗಳಾಗಿರುವಾಗಲೇ ಅವರ ಮತ್ತೋರ್ವ ಗೆಳೆಯ ದಿವಂಗತನಾದ ದುರ್ವಾರ್ತೆ ಬಂದೆರಗುತ್ತೆ. ಹೇಗೋ ಆ ಸಾವಿನ ನೆಪದಲ್ಲಿ ಮತ್ತೆ ಈ ನಾಲ್ವರು ಒಂದೆಡೆ ಸೇರಿತ್ತಾರೆ. ಆದರೆ ಮಂಜುನಾಥ ದಿವಂಗತನಾಗಿದ್ದು ಆತ್ಮಹತ್ಯೆಯಿಂದಲ್ಲ, ಬದಲಾಗಿ ಇದು ಕೊಲೆ ಅಂತ ಪೊಲೀಸ್ ಅಧಿಕಾರಿ ಕೆಂಪಯ್ಯ ಅದಾಗಲೇ ಫೀಲ್ಡಿಗಿಳಿದಿರುತ್ತಾನೆ. ಅದು ನಿಜಕ್ಕೂ ಕೊಲೆಯಾ? ಅದರಲ್ಲಿ ಈ ಗೆಳೆಯರು ತಗುಲಿಕೊಳ್ತಾರಾ ಅಂತೆಲ್ಲ ಪ್ರಶ್ನೆಗಳಿಗೆ ಥೇಟರಿನಲ್ಲಿ ಉತ್ತರ ಹುಡುಕಿದರೆ ಮಜವಾದೊಂದು ಅನುಭವವಾಗೋದು ಖಾತರಿ!

    ಸಹಜ ಸಂಭಾಷಣೆಯಲ್ಲಿಯೇ ಲವಲವಿಕೆ, ಹಾಸ್ಯವನ್ನೂ ಬೆರೆಸಿರುವ ನಿರ್ದೇಶಕರು ಪರಿಣಾಮಕಾರಿಯಾಗಿಯೇ ದೃಶ್ಯ ಕಟ್ಟಿದ್ದಾರೆ. ತನ್ನ ಮಗನಿಗೆ ಏನೂ ಕಡಿಮೆಯಾಗದಂತೆ ಪೊರೆದ ತಂದೆ ರಿಟೈರ್ಡು ಸ್ಟೇಜಿಗೆ ಬಂದರೂ ಅಪ್ಪನನ್ನು ನೋಡಿಕೊಳ್ಳಲಾರದ ಮಗ. ಆ ವಯಸ್ಸಲ್ಲಿಯೂ ಮಗನ ನೆರವಿಗಾಗಿ ಸೆಕ್ಯೂರಿಟಿ ಕೆಲಸಕ್ಕೆ ಹೊರಡೋ ಅಪ್ಪನನ್ನು ನೋಡಿ ಮಾನಸಿಕ ವೇದನೆಗೆ ಬೀಳೋ ಪುತ್ರ… ಒಟ್ಟಾರೆಯಾಗಿ ಇಲ್ಲಿ ಸಾವೊಂದರ ಸುತ್ತ ಬದುಕಿನ ಸೂಕ್ಷ್ಮಗಳನ್ನು ಅರಳಿಸುವ ಕುಸುರಿಯಂಥಾದ್ದನ್ನು ನಿರ್ದೇಶಕರು ಮಾಡಿದ್ದಾರೆ.

    ಆರಂಭದಿಂದ ಅಂತ್ಯದವರೆಗೂ ಕುತೂಹಲ ಕಾಯ್ದಿಟ್ಟುಕೊಂಡೇ ಈ ಚಿತ್ರ ಯುವ ಸಮೂಹಕ್ಕೆ, ಅದರಲ್ಲಿಯೂ ವಿಶೇಷವಾಗಿ ಗಂಡು ಮಕ್ಕಳಿಗೊಂದು ಸ್ಪಷ್ಟವಾದ, ಪರಿಣಾಮಕಾರಿಯಾದ ಎಚ್ಚರಿಕೆಯ ಸಂದೇಶ ರವಾನಿಸುತ್ತದೆ. ಅದರ ಜೊತೆ ಜೊತೆಗೇ ಒಂದೊಳ್ಳೆ ಚಿತ್ರ ನೋಡಿದ ತೃಪ್ತ ಬಾವವೂ ಪ್ರೇಕ್ಷಕರನ್ನು ತುಂಬಿಕೊಳ್ಳುತ್ತದೆ. ಯುವ ಸಮುದಾಯ, ಪೋಷಕರು ಸೇರಿದಂತೆ ಎಲ್ಲರೂ ನೋಡಬಹುದಾದ ಚಿತ್ರ ದಿವಂಗತ ಮಂಜುನಾಥನ ಗೆಳೆಯರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv