Tag: Kannada Conversation

  • ‘ಬೇಡ ಮಗಾ ಬೇಡ, ನಾರ್ಮಲ್ ಆಡು’- ಕಿವೀಸ್ ನೆಲದಲ್ಲಿ ಕನ್ನಡ ಡಿಂಡಿಮ

    ‘ಬೇಡ ಮಗಾ ಬೇಡ, ನಾರ್ಮಲ್ ಆಡು’- ಕಿವೀಸ್ ನೆಲದಲ್ಲಿ ಕನ್ನಡ ಡಿಂಡಿಮ

    – ಕನ್ನಡಿಗರ ಮನಗೆದ್ದ ರಾಹುಲ್-ಪಾಂಡೆ ಮಾತು
    – ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 5 ವಿಕೆಟ್ ಸೋಲು
    – ರಾಹುಲ್ ಶತಕ, ಚಹಲ್ ಉತ್ತಮ ಬೌಲಿಂಗ್ ವ್ಯರ್ಥ

    ಮೌಂಟ್ ಮಾಂಗನುಯಿ: ಟೀಂ ಇಂಡಿಯಾದಲ್ಲಿ ಮತ್ತೆ ಕನ್ನಡಿಗರ ಕಮಾಲ್ ಶುರುವಾಗಿದೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಕೊನೆಯ ಹಾಗೂ ಮೂರನೇ ಪಂದ್ಯದಲ್ಲಿ ಮೂವರು ಕನ್ನಡಿಗರು ಆಡುವ ಇಲೆವೆನ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದರು. ಈ ವೇಳೆ ರನ್ ಓಡುವಾಗ ಕೆ.ಎಲ್.ರಾಹುಲ್ ಹಾಗೂ ಮನೀಶ್ ಪಾಂಡೆ ಕನ್ನಡದಲ್ಲೇ ಮಾತನಾಡಿದ್ದಾರೆ.

    ಇಂದಿನ ಪಂದ್ಯದಲ್ಲಿ ಕೆ.ಎಲ್.ರಾಹುಲ್, ಮಯಾಂಕ್ ಅಗರ್ವಾಲ್ ಹಾಗೂ ಮನೀಶ್ ಪಾಂಡೆ ಆಡಿದರು. ಅದರಲ್ಲೂ ಮನೀಶ್ ಪಾಂಡೆ ಹಾಗೂ ಕೆ.ಎಲ್.ರಾಹುಲ್ ಜೋಡಿ ಮೈದಾನದಲ್ಲಿ ಕಮಾಲ್ ಮಾಡಿತು. ಭಾರತದ ಇನ್ನಿಂಗ್ಸ್ ನ 31ನೇ ಓವರಿನಲ್ಲಿ ಶ್ರೇಯಸ್ ಅಯ್ಯರ್ ವಿಕೆಟ್ ಒಪ್ಪಿಸಿದರು. ಈ ವೇಳೆ ಟೀಂ ಇಂಡಿಯಾ 162 ರನ್ ಗಳಿಸಿತ್ತು. ಬಳಿಕ ಕೆ.ಎಲ್.ರಾಹುಲ್‍ಗೆ ಮನೀಶ್ ಪಾಂಡೆ ಸಾಥ್ ನೀಡಿದರು. ಈ ಜೋಡಿ 5ನೇ ವಿಕೆಟ್‍ಗೆ 107 ರನ್‍ಗಳ ಜೊತೆಯಾಟದ ಕೊಡುಗೆ ನೀಡಿತು.

    ಇನ್ನಿಂಗ್ಸ್ 41 ಓವರಿನಲ್ಲಿ ರಾಹುಲ್, ‘ಮೆತ್ತಗೆ ಆಡಬೇಕಾ ಮಾಮ್ಸ್’ ಎಂದು ಮನೀಶ್ ಪಾಂಡೆ ಅವರನ್ನು ಪ್ರಶ್ನಿಸಿದರು. ಆಗ ಪಾಂಡೆ, ‘ಹೌದು ನಾರ್ಮಲ್ ಆಡು’ ಎಂದು ಹೇಳಿದರು. ಈ ಸಂಭಾಷಣೆ ಸ್ಟಂಪ್ ನಲ್ಲಿರುವ ಮೈಕ್ ನಲ್ಲಿ ದಾಖಲಾಗಿದೆ. ಅಷ್ಟೇ ಅಲ್ಲದೆ 45 ನೇ ಓವರಿನಲ್ಲಿ ಸ್ಟ್ರೈಕ್‍ನಲ್ಲಿದ್ದ ರಾಹುಲ್ ಎರಡು ರನ್ ಕದಿಯಲು ಮುಂದಾದರು. ಆಗ ಇಬ್ಬರು ‘ಬಾ.. ಬಾ.. ಬೇಡ ಬೇಡ’ ಎಂದು ಹೇಳಿದರು. ಬಳಿಕ ಮನೀಶ್ ಪಾಂಡೆ ಒಂಟಿ ರನ್ ಓಡಲು ಯತ್ನಿಸಿದರು. ಆದರೆ ನಾನ್ ಸ್ಟ್ರೈಕ್‍ನಲ್ಲಿದ್ದ ಕೆ.ಎಲ್ ರಾಹುಲ್ ಮನೀಶ್ ಪಾಂಡೆಗೆ ‘ಬೇಡ ಬೇಡ’ ಎಂದು ಜೋರಾಗಿ ಕೂಗಿದರು. ಪಂದ್ಯದಲ್ಲಿ ಕನ್ನಡದ ಮತು ಕೇಳಿದ ಕನ್ನಡಿಗರು ಫುಲ್ ಖುಷ್ ಆಗಿದ್ದಾರೆ.

    ಕೆ.ಎಲ್.ರಾಹುಲ್ 112 ರನ್ (113 ಎಸೆತ, 9 ಬೌಂಡರಿ ಹಾಗೂ 2 ಸಿಕ್ಸರ್) ಸಿಡಿಸಿ ವಿಕೆಟ್ ಒಪ್ಪಿಸಿದರು. ಈ ಬೆನ್ನಲ್ಲೇ ಮನೀಶ್ ಪಾಂಡೆ 42 ರನ್ (48 ಎಸೆತ, 2 ಬೌಂಡರಿ) ಗಳಿಸಿ ವಿಕೆಟ್ ಕಳೆದುಕೊಂಡರು. ಈ ಇಬ್ಬರು ಕರ್ನಾಟಕದ ಆಟಗಾರರು. ಅಷ್ಟೇ ಅಲ್ಲದೆ ಉತ್ತಮ ಸ್ನೇಹಿತರೂ ಹೌದು. ಭಾರತದ ಇನ್ನಿಂಗ್ಸ್ ವೇಳೆ ರಾಹುಲ್ ಮತ್ತು ಮನೀಶ್ ಪಾಂಡೆ ಕನ್ನಡದಲ್ಲಿ ಮಾತನಾಡಿ ಕನ್ನಡಿಗರ ಮನಗೆದ್ದಿದ್ದಾರೆ.

    ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಕೊನೆಯ ಹಾಗೂ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ. ಆರಂಭಿಕ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ಪರಿಣಾಮ ಕೊಹ್ಲಿ ಪಡೆ 300 ಗಡಿ ದಾಟಲು ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲೂ ವಿರಾಟ್ ಕೊಹ್ಲಿ ಎರಡಂಕಿ ದಾಡುವಲ್ಲಿ ವಿಫಲರಾದರು. ಕೆ.ಎಲ್.ರಾಹುಲ್ 112 ರನ್ (113 ಎಸೆತ, 9 ಬೌಂಡರಿ ಹಾಗೂ 2 ಸಿಕ್ಸರ್), ಶ್ರೇಯಸ್ ಅಯ್ಯರ್ 62 ರನ್ (63 ಎಸೆತ, 9 ಬೌಂಡರಿ), ಮನೀಶ್ ಪಾಂಡೆ 42 ರನ್ (48 ಎಸೆತ, 2 ಬೌಂಡರಿ) ಹಾಗೂ ಪೃಥ್ವಿ ಶಾ 40 ರನ್ (42 ಎಸೆತ, 3 ಬೌಂಡರಿ, 2 ಸಿಕ್ಸ್) ಸಹಾಯದಿಂದ ಭಾರತ 7 ವಿಕೆಟ್‍ಗೆ 296 ರನ್ ಪೇರಿಸಿತ್ತು.

    ಟೀಂ ಇಂಡಿಯಾ ನೀಡಿದ್ದ ಸಾಧಾರಣ ರನ್ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ 47.1 ಓವರಿನಲ್ಲಿ 5 ವಿಕೆಟ್‍ಗೆ 300 ರನ್ ಸಿಡಿಸಿ ಭರ್ಜರಿ ಗೆಲುವು ಸಾಧಿಸಿತು. ನ್ಯೂಜಿಲೆಂಡ್ ಭಾರತದ ವಿರುದ್ಧ 3-0 ಅಂತರದಿಂದ ಕ್ಲೀನ್‍ಸ್ವೀಪ್ ಮೂಲಕ ಸರಣಿಯನ್ನು ಗೆದ್ದು ಬೀಗಿದೆ. ನ್ಯೂಜಿಲೆಂಡ್ ಪರ ಮಾರ್ಟಿನ್ ಗಪ್ಟಿಲ್ 66 ರನ್ (46 ಎಸೆತ, 6 ಬೌಂಡರಿ, 4 ಸಿಕ್ಸರ್), ನಿಕೋಲಸ್ 80 ರನ್ (103 ಎಸೆತ, 9 ಬೌಂಡರಿ), ಗ್ಯಾಂಡ್‍ಹೋಮ್ ಔಟಾಗದೆ 58 ರನ್ (28 ಎಸೆತ, 6 ಬೌಂಡರಿ, 3 ಸಿಕ್ಸರ್) ಗಳಿಸಿದರು.