Tag: kannada cinema

  • ಪುರಾತನ ದೆವ್ವಕ್ಕೆ ಪುಳ್ಚಾರು ಎಡೆಯಿಟ್ಟ ಅಮವಾಸೆ!

    ಪುರಾತನ ದೆವ್ವಕ್ಕೆ ಪುಳ್ಚಾರು ಎಡೆಯಿಟ್ಟ ಅಮವಾಸೆ!

    ಪ್ರಶಾಂತ್ ನಿರ್ದೇಶನದ ಅಮವಾಸೆ ಚಿತ್ರ ಒಂದಷ್ಟು ನಿರೀಕ್ಷೆ ಹುಟ್ಟಿಸಿತ್ತು. ಇದು ಹೇಳಿ ಕೇಳಿ ಹೊಸಾ ಅಲೆಯ ಚಿತ್ರಗಳ ಜಮಾನ. ಹುಮ್ಮಸ್ಸಿನ ಹುಡುಗರು ಸದ್ದೇ ಇಲ್ಲದೆ ಎಂಟ್ರಿ ಕೊಟ್ಟು ಸೆನ್ಸೇಷನ್ ಕ್ರಿಯೇಟ್ ಮಾಡಿ ಬಿಡುತ್ತಾರೆ. ಅಮವಾಸೆಯಲ್ಲೂ ಕೂಡಾ ಇಂಥಾದ್ದೇ ಕಮಾಲ್ ನಡೆದಿರಬಹುದೆಂಬ ನಿರೀಕ್ಷೆ ಹೊತ್ತು ಥೇಟರು ಹೊಕ್ಕವರಿಗೆ ಸಿಕ್ಕಿದ್ದು ನಿರಾಸೆಯ ಅನುಭವ!

    ಯಾವ್ಯಾವುದೋ ಕಾರಣಕ್ಕೆ ಸತ್ತು ಹೋದವರು ದೆವ್ವವಾಗೋದು, ಅದಕ್ಕೆ ಕಾರಣರಾದವರನ್ನು ಥರ ಥರದಲ್ಲಿ ಕಾಡೋದು… ಹುಡುಕಿದರೆ ಈ ಥರದ ಕಥೆ ಹೊಂದಿರೋ ಚಿತ್ರಗಳಿಗೆ ದಂಡಿ ದಂಡಿ ಉದಾಹರಣೆಗಳು ಸಿಗುತ್ತವೆ. ಇಂಥವುಗಳಿಗೆ ಹೊಸಾ ಉದಾಹರಣೆಯಂಥಾ, ಹಳೇ ಟ್ರ್ಯಾಕಿನ ಚಿತ್ರವಾಗಿ ಅಮವಾಸೆ ದಾಖಲಾಗಿದೆ.

    ಈ ಚಿತ್ರದ್ದು ಸಾಧಾರಣ ಕಥೆ. ನಾಲ್ವರು ಆತ್ಮೀಯ ಸ್ನೇಹಿತರಲ್ಲೊಬ್ಬನಿಗೆ ಹುಡುಗಿಯೊಬ್ಬಳ ಮೇಲೆ ಲವ್ವಾಗುತ್ತೆ. ಆಗ ಆತನ ಮುಂದೆ ಸ್ನೇಹ ಅಥವಾ ಪ್ರೀತಿಯನ್ನು ಆಯ್ಕೆ ಮಾಡಿಕೊಳ್ಳುವಂಥಾ ಭಯಾನಕ ಸಂದರ್ಭ ಸೃಷ್ಟಿಯಾಗುತ್ತೆ. ಆತ ಸ್ನೇಹವನ್ನೇ ಆಯ್ದುಕೊಂಡಿದ್ದರ ಫಲವಾಗಿ ಹುಡುಗಿಯ ದುರಂತ ಅಂತ್ಯ. ನಂತರ ಈತನೂ ಆತ್ಮಹತ್ಯೆ ಮಾಡಿಕೊಂಡೇಟಿಗೆ ಕಥೆಗೊಂದು ತಿರುವು. ಅದರಾಚೆಗೆ ಪ್ರೀತಿ ಕೈ ತಪ್ಪಿ ಸತ್ತ ಹುಡುಗಿ ಪ್ರೇತಾತ್ಮವಾಗಿ ಕಾಡುತ್ತಾಳಾ ಎಂಬುದು ಕುತೂಹಲ.

    ಆದರೆ ಈ ಚಿತ್ರದುದ್ದಕ್ಕೂ ಅಂಥಾ ಯಾವ ಕುತೂಹಲಕರವಾದ ವಿಚಾರಗಳೂ ಇಲ್ಲ. ನಿರ್ದೇಶಕ ಪ್ರಶಾಂತ್ ಉಲ್ಟಾ ಸ್ಕ್ರೀನ್ ಪ್ಲೇ ಕೂಡಾ ವರ್ಕೌಟ್ ಆಗಿಲ್ಲ. ಇಡೀ ಚಿತ್ರ ಹಾರರ್ ಕಥೆ ಹೊಂದಿದ್ದರೂ ಪುರಾತನ ದೆವ್ವಕ್ಕೆ ಪುಳ್ಚಾರು ಎಡೆಯಿಟ್ಟಂತಾಗಿದೆ. ಸಿದ್ಧಸೂತ್ರದ ಆಚೀಚೆಗೆ ಕದಲದ ಅಮವಾಸೆಯ ಬೂತಚೇಷ್ಟೆಗಳು ಯಾವ ರೀತಿಯಿಂದಲೂ ಕಾಡೋದಿಲ್ಲ. ಕತೆ ಸಾಧಾರಣವಾದದ್ದೇ ಆದರೂ ಒಂದಷ್ಟುಯ ಶ್ರಮ ವಹಸಿದ್ದರೆ ತಕ್ಕಮಟ್ಟಿಗೆ ಎಫೆಕ್ಟಿವ್ ಆಗಬಹುದಾಗಿದ್ದ ಅವಕಾಶವನ್ನೂ ಕೂಡಾ ನಿರ್ದೇಶಕರು ಕೈ ತಪ್ಪಿಸಿಕೊಂಡಿದ್ದಾರೆ.

    ಹೊಸಬರು ಚಿತ್ರ ಮಾಡಿದಾಗ ಒಂದಷ್ಟು ನಿರೀಕ್ಷೆಗಳಿರುತ್ತವೆ. ಹೊಸಾ ಬಗೆಯ ಕಥೆಯೊಂದಿಗೆ ಏನೋ ಮೋಡಿ ಮಾಡಿರುತ್ತಾರೆಂಬ ನಂಬಿಕೆಯೂ ಪ್ರೇಕ್ಷಕರಲ್ಲಿರುತ್ತೆ. ಆದರೆ ಅಮವಾಸೆಯಂಥಾ ಚಿತ್ರಗಳು ಕೊಡಮಾಡೋದು ಅಪಾದಮಸ್ತಕ ನಿರಾಸೆಯನ್ನಷ್ಟೇ. ಇದರ ಪರಿಣಾಮವಾಗಿ ಕೆಲ ಒಳ್ಳೆ ಚಿತ್ರಗಳನ್ನೂ ಸೋಲಿನ ಬಾಧೆ ಆವರಿಸಿಕೊಳ್ಳುವಂತಾಗುತ್ತದೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮತ್ತೊಂದು ವಿವಾದದಲ್ಲಿ `ದಿ ವಿಲನ್’ – ಸಿನಿಮಾ ನೋಡಿ ಆಮೇಲೆ ಮಾತ್ನಾಡಿ ಅಂದ್ರು ನಿರ್ದೇಶಕ ಪ್ರೇಮ್

    ಮತ್ತೊಂದು ವಿವಾದದಲ್ಲಿ `ದಿ ವಿಲನ್’ – ಸಿನಿಮಾ ನೋಡಿ ಆಮೇಲೆ ಮಾತ್ನಾಡಿ ಅಂದ್ರು ನಿರ್ದೇಶಕ ಪ್ರೇಮ್

    ಬೆಂಗಳೂರು: “ಸಿನಿಮಾ ನೋಡಿ ಆಮೇಲೆ ಮಾತನಾಡಿ, ಇಲ್ಲವೇ ಶಿವಣ್ಣಾವ್ರೇ ನನಗೆ ಇದು ತಪ್ಪು ಅನ್ನೋದನ್ನು ಹೇಳಲಿ, ಆಗ ನೀವೆಲ್ಲಾ ಹೇಳಿದಂತೆ ಕೇಳ್ತೀನಿ “ಎಂದು ನಿರ್ದೇಶಕ ಪ್ರೇಮ್ ಹೇಳಿದ್ದಾರೆ.

    ವಾರದ ಹಿಂದೆ ರಿಲೀಸ್ ಆಗಿದ್ದ `ದಿ ವಿಲನ್’ ಸಿನಿಮಾದ ಟೀಸರ್ ಜೊತೆ ವಿವಾದವೂ ಹುಟ್ಟಿಕೊಂಡಿತ್ತು. ಅನೇಕ ಕಾರಣಗಳನ್ನ ಮುಂದಿಟ್ಟು ಶಿವಣ್ಣ ಅವರಿಗೆ ಈ ಚಿತ್ರದಲ್ಲಿ ಅವಮಾನ ಮಾಡಲಾಗಿದೆ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅಭಿಮಾನಿಗಳು `ದಿ ವಿಲನ್’ ಸಿನಿಮಾ ಬಹಿಷ್ಕಾರ ಹಾಕುತ್ತೇವೆ ಎಂದು ಹಠ ಹಿಡಿದು, ಅನೇಕ ಷರತ್ತುಗಳನ್ನ ಮುಂದಿಟ್ಟಿದ್ದರು.

    ಸದ್ಯ ವಿಷ್ಯವಾಗಿ ಇದೀಗ `ದಿ ವಿಲನ್’ ಚಿತ್ರ ನಿರ್ದೇಶಕ ಪ್ರೇಮ್ ಪ್ರತಿಕ್ರಿಯಿಸಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಕೆಲ ಮಾಧ್ಯಮಗಳಲ್ಲಿ ಶಿವಣ್ಣ ಅವರ ವಿಚಾರವಾಗಿ ಪ್ರೇಮ್ ಅವರಿಗೆ ಅಸಮಾಧಾನವಿದೆ ಎಂದು ವರದಿಯಾಗಿತ್ತು. ಆದರೆ ಈ ಕುರಿತು ನಿರ್ಧಾರ ಮಾಡಬೇಕಾಗಿದ್ದು ಶಿವಣ್ಣ ಅವರು, ಒಂದೊಮ್ಮೆ ಶಿವಣ್ಣ ಅವರು ಪ್ರಶ್ನೆ ಮಾಡಿದರೆ ಅದಕ್ಕೆ ಉತ್ತರಿಸುತ್ತೇನೆ. ಸಿನಿಮಾ ಬಿಡುಗಡೆಗೂ ಮೊದಲೇ ಅಸಮಾಧಾನ ವ್ಯಕ್ತಪಡಿಸಿದರೆ ನಾನು ಏನು ಮಾಡಲು ಸಾಧ್ಯ. ಅದ್ದರಿಂದ ಸಿನಿಮಾ ಬಂದರೆ ನಿಮಗೆ ಈ ಕುರಿತು ಸಂಪೂರ್ಣ ಮಾಹಿತಿ ಲಭಿಸಲಿದೆ. ಅದ್ದರಿಂದ ತಾಳ್ಮೆವಹಿಸಿ, ಆತೀ ಶೀಘ್ರದಲ್ಲಿ ನಿಮ್ಮ ಮುಂದೇ ಸಿನಿಮಾ ತರುತ್ತೇನೆ ಎಂದು ಹೇಳಿದ್ದಾರೆ.

    ಈ ಹಿಂದೆಯೂ ದಿ ವಿಲನ್ ಸಿನಿಮಾ ವಿವಾದಕ್ಕೆ ಕಾರಣವಾಗಿತ್ತು. `ನಿನ್ನೆ ಮೊನ್ನೆ ಬಂದೋರೆಲ್ಲ ನಾನೇ ನಂಬರ್ ಒನ್ ಅಂತಾರೋ’ ಎಂದು ಸಾಹಿತ್ಯವಿರುವ ಹಾಡಿಗೆ ಶಿವಣ್ಣ ಸಖತ್ ಡಾನ್ಸ್ ಮಾಡಿದ್ದರು. 

  • ಮುಂದಿನ ವಾರ ಹೈಪರ್ ಎಂಟ್ರಿ!

    ಮುಂದಿನ ವಾರ ಹೈಪರ್ ಎಂಟ್ರಿ!

    ಬೆಂಗಳೂರು: ಶೀರ್ಷಿಕೆಗೆ ತಕ್ಕುದಾಗಿಯೇ ಟ್ರೈಲರ್, ಹಾಡು ಸೇರಿದಂತೆ ಪ್ರತಿಯೊಂದರಲ್ಲಿಯೂ ಅಬ್ಬರಿಸುತ್ತಾ ಬಂದಿದ್ದ ಹೈಪರ್ ಚಿತ್ರ ಇದೇ 29ರಂದು ತೆರೆ ಕಾಣಲಿದೆ. ಎಂ ಕಾರ್ತಿಕ್ ನಿರ್ಮಾಣದ, ಗಣೇಶ್ ವಿನಾಯಕ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಚಿತ್ರ ಬಿಡುಗಡೆಯ ಸರದಿಯಲ್ಲಿರುವ ಸಿನಿಮಾಗಳಲ್ಲಿ ಬಹು ನಿರೀಕ್ಷಿತ ಚಿತ್ರವಾಗಿ ಮುಂಚೂಣಿ ಕಾಯ್ದುಕೊಂಡಿದೆ.

    ಈ ಚಿತ್ರದ ಮೂಲಕ ಕಟ್ಟುಮಸ್ತಾದ ಮತ್ತೋರ್ವ ನಾಯಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಂತಾಗಿದೆ. ಈಗಾಗಲೇ ಹೈಪರ್ ನಾಯಕ ಅರ್ಜುನ್ ಆರ್ಯ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಫಲರಾಗಿದ್ದಾರೆ. ಟ್ರೈಲರ್‍ನಲ್ಲಿನ ದೃಷ್ಯಾವಳಿಗಳಲ್ಲಿಯೇ ಫಿಟ್ನೆಸ್ ಮೂಲಕ ಒಂದಷ್ಟು ಕ್ರೇಜನ್ನೂ ಹುಟ್ಟು ಹಾಕಿದ್ದಾರೆ. ಅಂದಹಾಗೆ ಈ ಚಿತ್ರದ ಕಥೆಯನ್ನೂ ಕೂಡಾ ಅರ್ಜುನ್ ಆರ್ಯ ಅವರೇ ರಚಿಸಿದ್ದಾರೆ.

    ಎಂ ಬಿ ಪಿಕ್ಚರ್ಸ್ ಲಾಂಛನದಡಿಯಲ್ಲಿ ಎಂ ಕಾರ್ತಿಕ್ ನಿರ್ಮಾಣ ಮಾಡಿರುವ ಈ ಚಿತ್ರ ನಿರ್ದೇಶಕ ಗಣೇಶ್ ವಿನಾಯಕ ಅವರಿಗೆ ಮೊದಲ ಚಿತ್ರ. ಆದರೆ ಅವರು ಈಗಾಗಲೇ ತಮಿಳಿನಲ್ಲಿ ಮೂರು ಚಿತ್ರಗಳನ್ನು ನಿರ್ದೇಶನ ಮಾಡಿದ ಅನುಭವ ಹೊಂದಿದ್ದಾರೆ. ಈ ಚಿತ್ರ ಪ್ರೇಕ್ಕರಲ್ಲಿ ನಿರೀಕ್ಷೆ ಮೂಡಿಸಿರೋದೇ ಟ್ರೈಲರ್‍ನಿಂದ. ಆ ನಂತರ ಬಿಡುಗಡೆಯಾದ ಹಾಡುಗಳಂತೂ ಎಲ್ಲರ ಮೆಚ್ಚುಗೆ ಗಳಿಸಿಕೊಂಡಿವೆ.

    ಇಮ್ಮಾನ್ ಡಿ ಮತ್ತು ಎಲ್ವಿನ್ ಸಂಗೀತ ನೀಡಿರೋ ಹಾಡುಗಳೇ ಹೈಪರ್ ಚಿತ್ರದ ಗೆಲುವಿನ ಮುನ್ಸೂಚನೆಯನ್ನೂ ನೀಡಿವೆ. ಕಾಲೇಜಿನ ಸುತ್ತಾ ನಡೆಯುವ ಥ್ರಿಲ್ಲರ್ ಕಥಾನಕ ಹೊಂದಿರುವ ಹೈಪರ್ ಬದುಕಿನ ಬೇರೆ ಬೇರೆ ಹಾದಿಗಳತ್ತಲೂ ಹೊರಳಿಕೊಳ್ಳುವ ಮೂಲಕ ಎಲ್ಲ ವರ್ಗದ ಪ್ರೇಕ್ಷಕರನ್ನೂ ಖುಷಿಪಡಿಸುವಂತಿದೆ ಎಂಬುದು ಚಿತ್ರ ತಂಡದ ಭರವಸೆ.

    ರಂಗಾಯಣ ರಘು, ಶೋಭರಾಜ್, ಅಚ್ಯುತ ಕುಮಾರ್, ಬುಲ್ಲೆಟ್ ಪ್ರಕಾಶ್ ಸೇರಿದಂತೆ ಬಹು ದೊಡ್ಡ ತಾರಾಗಣ ಹೊಂದಿರೋ ಈ ಚಿತ್ರ ಇದೇ 29ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.

  • ಈ ವಾರ ಥೇಟರುಗಳನ್ನು ಆವರಿಸಿಕೊಳ್ಳಲಿದೆ ‘ವೆನಿಲ್ಲಾ’ ಫ್ಲೇವರ್!

    ಈ ವಾರ ಥೇಟರುಗಳನ್ನು ಆವರಿಸಿಕೊಳ್ಳಲಿದೆ ‘ವೆನಿಲ್ಲಾ’ ಫ್ಲೇವರ್!

    ಬೆಂಗಳೂರು: ವೆನಿಲ್ಲಾ ಅಂದಾಕ್ಷಣ ಬಹುತೇಕರಿಗೆ ನೆನಪಾಗೋದು ಐಸ್‍ಕ್ರೀಮು. ಅಂಥಾ ನಯವಾದ ಹೆಸರಿನ ಸುತ್ತಾ ಅಪ್ಪಟ ಸಸ್ಪೆನ್ಸ್ ಥ್ರಿಲ್ಲರ್ ಮರ್ಡರ್ ಮಿಸ್ಟರಿಯ ಕಥೆ ಅನಾವರಣಗೊಳ್ಳುತ್ತದೆ ಎಂದಾದರೆ ಖಂಡಿತಾ ಆ ಬಗೆಗೊಂದು ಕುತೂಹಲ ಹುಟ್ಟಿಕೊಳ್ಳುತ್ತದೆ. ಈಗಾಗಲೇ ಹಲವು ಕಾರಣಗಳಿಂದ ಕ್ಯೂರಿಯಾಸಿಟಿಗೆ ಕಾರಣವಾಗಿರುವ ‘ವೆನಿಲ್ಲಾ’ ಈ ವಾರ ರಾಜ್ಯಾದ್ಯಂತ ತೆರೆ ಕಾಣಲಿದೆ.

    ಅವಿನಾಶ್ ಮೊದಲ ಬಾರಿಗೆ ವೆನಿಲ್ಲಾ ಚಿತ್ರದ ಮೂಲಕ ನಾಯಕನಾಗಿ ಚಂದನವನಕ್ಕೆ ಕಾಲಿಡುತ್ತಿದ್ದಾರೆ. ಅವಿನಾಶ್‍ಗೆ ನಾಯಕಿಯಾಗಿ ಸ್ವಾತಿ ಬಣ್ಣ ಹಚ್ಚಿದ್ದಾರೆ. ವೆನಿಲ್ಲಾ ಚಿತ್ರದ ಕಥೆ ಏನೆಂಬವುದು ಸಿನಿಮಾ ಸೆಟ್ಟೇರಿದಾಗಿನಿಂದಲೂ ಅಭಿಮಾನಿಗಳಲ್ಲಿ ಕಾಡುತ್ತಿರುವ ಪ್ರಶ್ನೆ. ನಯವಾದ, ನಾಲಗೆಗೆ ಹಿತವೆನಿಸುವ ವೆನಿಲ್ಲ ಚಿತ್ರದ ಕಥೆಗೆ ಮರ್ಡರ್ ಮಿಸ್ಟರಿಯ ಫ್ಲೇವರ್ ಅಂಟಿಕೊಂಡಿರುವುದೇ ಈ ಚಿತ್ರದ ಅಸಲೀ ವೈಶಿಷ್ಟ್ಯ.

    ಬ್ಯೂಟಿಫುಲ್ ಮನಸುಗಳು ಚಿತ್ರದ ಯಶಸ್ಸಿನಲ್ಲಿರುವ ನಿರ್ದೇಶಕ ಜಯತೀರ್ಥ ವೆನಿಲ್ಲಾವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಅನ್ನುವ ನಿರೀಕ್ಷೆಯಲ್ಲಿದ್ದಾರೆ. ಜಯತೀರ್ಥ ಹೊಸೆದಿರುವ ಈ ಥ್ರಿಲ್ಲರ್ ಕಥಾನಕವನ್ನು ಕಣ್ತುಂಬಿಕೊಳ್ಳಲು ಇನ್ನೊಂದು ದಿನವಷ್ಟೇ ಬಾಕಿ ಉಳಿದುಕೊಂಡಿದೆ.

    ಒಂದು ಮರ್ಡರ್, ಒಂದು ಭಯಾನಕ ರೋಗ ಮತ್ತು ಎಂಥಾ ಕಾಯಿಲೆಗಳನ್ನೂ ವಾಸಿ ಮಾಡಬಲ್ಲ ಪ್ರಾಂಜಲ ಪ್ರೀತಿಯ ಸುತ್ತಾ ಸುತ್ತುವ ಈ ಕಥೆಯಲ್ಲಿ ನಾಯಕ ಮತ್ತು ನಾಯಕಿ ಬಾಲ್ಯ ಸ್ನೇಹಿತರು. ಈ ನಡುವೆ ನಾಯಕಿಯ ಕಡೆಯಿಂದ ಅಚಾನಕ್ಕಾಗುವ ಒಂದು ಆಕ್ಸಿಡೆಂಟ್, ಅದಕ್ಕೆ ತಲೆ ಕೊಟ್ಟು ಸೆಣೆಸಾಡುವ ಹೀರೋ. ಇದ್ದಕ್ಕಿದ್ದಂತೆ ನಾಪತ್ತೆಯಾಗೋ ನಾಯಕಿಗೆ ಅಪರೂಪದಲ್ಲೇ ಅಪರೂಪವಾದ ಮಾರಣಾಂತಿಕ ಅಡೇನೋ ಕಾಪ್ನೋಫೋಬಿಯಾ ಕಾಯಿಲೆ… ಇಂಥಾ ಭಿನ್ನವಾದ ಕಥಾ ಹಂದರ ಪ್ರೇಕ್ಷಕರನ್ನು ಸೆಳೆದುಕೊಳ್ಳದಿರಲು ಸಾಧ್ಯವೇ?

    ಅವಿನಾಶ್ ಮತ್ತು ಸ್ವಾತಿ ಕೊಂಡೆ ನಾಯಕ ನಾಯಕಿಯರಾಗಿ ಅಭಿನಯಿಸಿರುವ ಈ ಚಿತ್ರದಲ್ಲಿ ಪಯಣ ರವಿಶಂಕರ್ ಪೊಲೀಸ್ ಆಫಿಸರ್ ಆಗಿ ಕಾಣಿಸಿಕೊಂಡಿದ್ದಾರೆ. ಪ್ರತೀ ಪಾತ್ರಗಳೂ ಕಾಡುವಂತೆ ಮೂಡಿ ಬಂದಿದೆ ಎಂಬ ಭರವಸೆ ಹೊಂದಿರೋ ಚಿತ್ರ ತಂಡ ಡಿಫರೆಂಟಾದ ವೆನಿಲ್ಲಾ ಫ್ಲೇವರಿಗೆ ಪ್ರೇಕ್ಷಕರು ಫಿದಾ ಆಗುವ ಭರವಸೆ ಹೊಂದಿದೆ!

    ಈ ಹಿಂದೆ ಸಿನಿಮಾದ ಆಡಿಯೋ ರಿಲೀಸ್ ಮಾಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಸಿನಿಮಾ ಮತ್ತು ಕಲಾವಿದರಿಗೆ ಶುಭ ಕೋರಿದ್ದರು. ನನಗೆ ಮೊದಲು ಬಣ್ಣ ಹಚ್ಚಿದ ಗುರು ಮಂಡ್ಯ ರಮೇಶ್. ಈಗ ಅವರ ಗರಡಿಯಲ್ಲೇ ಬೆಳೆದ ಅವಿನಾಶ್ ಈ ಚಿತ್ರದ ನಾಯಕ. ಆತ ಕೂಡ ನಾಯಕ ನಟನಾಗಿ ಪರಿಚಯ ಆಗುತ್ತಿರೋದು ನನಗೆ ನಿಜಕ್ಕೂ ಸಂತಸ ತಂದಿದೆ.ಪ್ರತಿ ಸಿನಿಮಾದಲ್ಲೂ ನಾನು ಹೊಸಬ ಅಂತಾನೇ ಕೆಲಸದಲ್ಲಿ ಮಗ್ನರಾಗಬೇಕಿರೋದು ಬಹಳ ಮುಖ್ಯ ಎಂದು ಹೊಸ ನಟರಿಗೆ ದರ್ಶನ್ ಕಿವಿಮಾತು ಹೇಳಿದ್ದರು.

  • ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎನ್ನುತ್ತ ಯಂಗ್ ಜನರೇಷನ್‍ಗೆ ಅನಂತನಾಗ್ ಟಕ್ಕರ್ !

    ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎನ್ನುತ್ತ ಯಂಗ್ ಜನರೇಷನ್‍ಗೆ ಅನಂತನಾಗ್ ಟಕ್ಕರ್ !

    ಬೆಂಗಳೂರು: ಅನಂತ ನಾಗ್ ಸ್ಯಾಂಡಲ್‍ವುಡ್ ಕಂಡ ಮೇರು ಕಲಾವಿದ. ಇಂದಿಗೂ ಸಿನಿಮಾಗಳಲ್ಲಿ ನಟಿಸುತ್ತ ತಮ್ಮದೇ ಆದ ಫ್ಯಾನ್ ಫಾಲೋವರ್ಸ್ ಗಳನ್ನು ಅನಂತನಾಗ್ ಹೊಂದಿದ್ದಾರೆ. ಹಿಂದೆಯೆಲ್ಲಾ ಲವ್ವರ್ ಬಾಯ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಅನಂತನಾಗ್ ಇಂದು ಪೋಷಕ ಪಾತ್ರಗಳಿಗೆ ತಮ್ಮ ಅನುಭವದ ಮೂಲಕ ಜೀವ ತುಂಬುತ್ತಿದ್ದಾರೆ. ಕಥೆಯನ್ನು ನೋಡಿ ಒಪ್ಪಿಕೊಳ್ಳುವ ಅನಂತನಾಗ್ ಇಂದಿಗೂ ತಮ್ಮ ಅಮೋಘ ನಟನೆಯ ಮೂಲಕ ಅಭಿಮಾನಿಗಳನ್ನು ಮಂತ್ರ ಮುಗ್ಧರನ್ನಾಗಿಸುತ್ತಾರೆ.

    ಸದ್ಯ ನರೇಂದ್ರ ಬಾಬು ನಿರ್ದೇಶನದ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ವಿಶೇಷ ಸಿನಿಮಾದ ಮೂಲಕ ತೆರೆಯ ಮೇಲೆ ಬರಲಿದ್ದಾರೆ. ‘ಸಂತೆಯಲ್ಲಿ ನಿಂತ ಕಬೀರ’ ಎಂಬ ಪ್ರಯೋಗಾತ್ಮಕ ಸಿನಿಮಾ ನೀಡಿದ್ದ ನರೇಂದ್ರ ಬಾಬು ಅವರ ಮೂರನೇ ಚಿತ್ರ ಇದಾಗಿದ್ದು, ಸಾಕಷ್ಟು ಭರವಸೆಗಳನ್ನು ಮೂಡಿಸಿದೆ.

    ಸ್ವಂತ ವ್ಯವಹಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಇಳಿ ವಯಸ್ಸಿನ ವ್ಯಕ್ತಿಗೆ ಅನಿವಾರ್ಯ ಕಾರಣಗಳಿಂದಾಗಿ ಬೇರೆ ಕಂಪೆನಿಯಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ಬರುತ್ತದೆ. ಪರಿಸ್ಥಿತಿ ಅನುಗುಣವಾಗಿ ಹೊಟ್ಟೆಗಾಗಿ ಮತ್ತು ಗೇಣು ಬಟ್ಟೆಗಾಗಿ ಬೇರೆ ವ್ಯಕ್ತಿಯ ಕೆಳಗೆ ಕೆಲಸ ಮಾಡಲು ಮುಂದಾಗುತ್ತಾರೆ. ಕಂಪೆನಿಯಲ್ಲಿ ಕೆಲಸ ಮಾಡುವ ಯಂಗ್ ಜನರೇಷನ್‍ನ್ನು ಎದುರಿಸುವ ಪ್ರಸಂಗ ಬರುತ್ತದೆ. ಈ ಎಲ್ಲ ತಳಮಳ, ಒತ್ತಡ, ಸವಾಲುಗಳನ್ನು ಕಥಾ ನಾಯಕ ಹೇಗೆ ಎದುರಿಸುತ್ತಾನೆ ಎಂಬುವುದು ಚಿತ್ರದ ತಿರುಳು.

    ರಂಗಿತರಂಗ ಖ್ಯಾತಿಯ ರಾಧಿಕಾ ಚೇತನ್ ಸಹ ಸಿನಿಮಾದಲ್ಲಿ ನಟಿಸಿದ್ದಾರೆ. ಸ್ಮಿತಾ ಪಾಟೀಲ್, ಅನಿಲ್ ಹುಲಿಯಾ, ಸಂದೀಪ್ ಅರಸ್ ಪ್ರಧಾನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಭಜನ್ ಲೋಕದ ಧೃವತಾರೆ ಗೀತಾಂಜಲಿ ರೈ ಕೂಡಾ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

    ಹಿಂದೂಸ್ಥಾನಿ ಗಾಯಕ ರಾಮಚಂದ್ರ ಹಡಪದ ಚಿತ್ರದ ಮೂರು ಹಾಡುಗಳಿಗೆ ಸಂಗೀತ ನೀಡಿದ್ದು, ರೇಬಿನ್ ಬ್ರದರ್‍ಹುಡ್ ಹಿನ್ನೆಲೆ ಸಂಗೀತವನ್ನು ಹೊಂದಿದೆ. ಪಿಕೆಹೆಚ್ ದಾಸ್ ಛಾಯಾಗ್ರಹಣ, ಹರೀಶ್ ಶೇರಿಗಾರ್, ರಾಮಮೂರ್ತಿ ಮತ್ತು ಸುದರ್ಶನ್ ಜೊತೆಯಾಗಿ ಬಂಡವಾಳ ಹಾಕಿದ್ದಾರೆ.

  • ಈ ವಾರ ಗ್ರಾಮೀಣ ಸೊಗಡಿನ ಡೇಸ್ ಆಫ್ ಬೋರಾಪುರ

    ಈ ವಾರ ಗ್ರಾಮೀಣ ಸೊಗಡಿನ ಡೇಸ್ ಆಫ್ ಬೋರಾಪುರ

    ಬೆಂಗಳೂರು: ಅಪ್ಪಟ ಗ್ರಾಮೀಣ ಕಥಾಹಂದರ ಹೊಂದಿರುವ ಡೇಸ್ ಆಫ್ ಬೋರಾಪುರ ಈ ವಾರ ಬಿಡುಗಡೆಯಾಗುತ್ತಿದೆ. ಚಿತ್ರದ ಬಿಡುಗಡೆಪೂರ್ವ ಪತ್ರಿಕಾಗೋಷ್ಠಿ ಮೊನ್ನೆ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ಚಿತ್ರದ ಕಲಾವಿದರು ಹಾಗೂ ತಂತ್ರಜ್ಞರೆಲ್ಲ ಹಾಜರಿದ್ದು ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. ತುಂಬಾ ಸುಭಿಕ್ಷವಾಗಿದ್ದ ಒಂದು ಕುಗ್ರಾಮದಲ್ಲಿ ಹೊಸ ವಸ್ತುವೊಂದು ಬಂದಾಗ ಅಲ್ಲಿನ ಜನರಲ್ಲಿ ಏನೇನೆಲ್ಲ ಬದಲಾವಣೆಗಳಾದವು ಎಂಬ ವಿಷಯವನ್ನು ಇಟ್ಟುಕೊಂಡು ಮಾಡಿದಂಥ ಕಥಾನಕವಿದು.

    ಆದಿತ್ಯ ಕುಣಿಗಲ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಕಲಾನಿರ್ದೇಶಕ ದಿನೇಶ್ ಮಂಗಳೂರು ಬೆಟ್ಟೇಗೌಡ ಎಂಬ ಪಾತ್ರವನ್ನು ಮಾಡಿದ್ದರೆ, ಅವರ ಪುತ್ರ ಸೂರ್ಯ ಸಿದ್ದಾರ್ಥ ನಾಯಕನಾಗಿ ನಟಿಸಿದ್ದಾರೆ. ಪ್ರಶಾಂತ್ ಸಿ.ಎಂ., ಅನಿತಾ ಭಟ್, ಪ್ರಕೃತಿ ಮತ್ತು ಅಮಿತಾ ರಂಗನಾಥ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಂಡ್ಯ ಬಳಿಯ ಹಳ್ಳಿಯೊಂದರಲ್ಲಿ 35 ದಿನಗಳ ಕಾಲ ಇಡೀ ಚಿತ್ರದ ಚಿತ್ರೀಕರಣವನ್ನು ನಡೆಸಲಾಗಿದೆ.

    ನಾಯಕ ಸೂರ್ಯ ಮಾತನಾಡಿ ಇದೊಂದು ಸಸ್ಪೆನ್ಸ್, ಥ್ರಿಲರ್, ಕಾಮಿಡಿ ಸಿನಿಮಾ. 10 ದಿನಗಳ ಹಿಂದಷ್ಟೇ ಬಿಟ್ಟಿದ್ದ ಟ್ರೈಲರ್‍ಗೆ ಅದ್ಭುತ ರೆಸ್ಪಾನ್ಸ್ ಸಿಕ್ತು. ಈ ಚಿತ್ರದಲ್ಲಿ ನನ್ನದು ಒಬ್ಬ ಹಳ್ಳಿ ಹುಡುಗನ ಪಾತ್ರ. ಸುಮಾರು ಷೇಡ್ಸ್ ಈ ಪಾತ್ರದಲ್ಲಿದೆ. ಈ ಹಿಂದೆ ನಾನು ಮಾಡಿದ್ದ ಚಿತ್ರದಲ್ಲಿ ಲವರ್ ಬಾಯ್ ಆಗಿದ್ದೆ ಎಂದು ಹೇಳಿದರು. ಮತ್ತೊಬ್ಬ ನಾಯಕ ಪ್ರಶಾಂತ್ ಮಾತನಾಡುತ್ತ ನಾನೊಬ್ಬ ಭಗ್ನ ಪ್ರೇಮಿಯ ಪಾತ್ರವನ್ನು ನಿರ್ವಹಿಸಿದ್ದೇನೆ. ಇಡೀ ಸಿನಿಮಾದಲ್ಲಿ ನಾಯಕಿಯನ್ನು ಟಚ್ ಮಾಡುವುದಿಲ್ಲ. ಚಿತ್ರದ ಡೈಲಾಗ್ ಗಳನ್ನು ಅರ್ಥ ಮಾಡಿಕೊಂಡರೆ ಮಾತ್ರ ಇಡೀ ಸಿನಿಮಾ ಅರ್ಥವಾಗುತ್ತದೆ ಎಂದು ಹೇಳಿದರು.

    ನಾಯಕಿಯಾದ ಅಮಿತಾ ರಂಗನಾಥ್ ಮಾತನಾಡಿ, ಭಾಗ್ಯ ಎಂಬ ಹಳ್ಳಿಯ ವಿದ್ಯಾವಂತೆ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ಮೆಚೂರ್ಡ್ ಹೆಣ್ಣಿನ ಪಾತ್ರ. ನಾನು ಮಾಡುವ ಒಂದು ಕೆಲಸದಿಂದ ಇಡೀ ಹಳ್ಳಿಯ ಚಿತ್ರಣವೇ ಬದಲಾಗುತ್ತದೆ ಎಂದು ಹೇಳಿದರು. ಮತ್ತೊಬ್ಬ ನಟಿ ಅನಿತಾ ಭಟ್ ಮಾತನಾಡಿ, ಒಬ್ಬ ಡ್ರಾಮಾ ಆರ್ಟಿಸ್ಟ್ ಆಗಿ ನಾನು ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು. ಮತ್ತೊಬ್ಬ ನಾಯಕಿ ಪ್ರಕೃತಿ, ನನ್ನಲ್ಲಿನ ಟ್ಯಾಲೆಂಟನ್ನು ತೋರಿಸುವಂಥ ಅವಕಾಶ ಈ ಚಿತ್ರದಲ್ಲಿ ಸಿಕ್ಕಿತು. ಲಕ್ಷ್ಮಿ ಎಂಬ ಇನ್ನೋಸೆಂಟ್ ಹುಡುಗಿಯ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು.

    ಈ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ಅವರು ಒಂದು ಹಾಡನ್ನು ಹಾಡಿದ್ದಾರೆ. ನಟ ಶಿವರಾಜ ಕುಮಾರ್ ಅಭಿಮಾನಿಗಳಾದ ಮಧು ಬಸವರಾಜ ಹಾಗೂ ಅಜಿತ್ ಕುಮಾರ್ ಸೇರಿ ನಿರ್ಮಿಸಿರುವ ಈ ಚಿತ್ರಕ್ಕೆ ಎನ್.ಆದಿತ್ಯ ಕುಣಿಗಲ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಮನು ಮಂಡ್ಯ ಈ ಚಿತ್ರಕ್ಕೆ ಸಂಭಾಷಣೆಗಳನ್ನು ರಚಿಸಿ ಸಹನಿರ್ದೇಶನ ಮಾಡಿದ್ದಾರೆ. ಹೈದರಾಬಾದ್ ಮೂಲದ ನಟ ಶಫಿ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ರಘು ಪಾಂಡೇಶ್ವರ, ಮಹದೇವ ಲಾಲಿಪಾಳ್ಯ ಉಳಿದ ಪಾತ್ರಗಳಲ್ಲಿದ್ದಾರೆ.

  • ಎಟಿಎಂ ಭರ್ಜರಿ ಪ್ರದರ್ಶನ!

    ಎಟಿಎಂ ಭರ್ಜರಿ ಪ್ರದರ್ಶನ!

    ಕನ್ನಡದಲ್ಲಿ ಸತ್ಯಕಥೆಗಳನ್ನಾಧರಿಸಿದ ಸಿನಿಮಾಗಳು ಆಗಾಗ ತೆರೆ ಕಾಣುತ್ತಿರುತ್ತವೆ. ಇದೀಗ ಅದೇ ಸಾಲಿನಲ್ಲಿ ಸೇರ್ಪಡೆಯಾಗಿರುವ ಚಿತ್ರ ಎಟಿಎಂ (ಅಟೆಂಪ್ಟ್ ಟು ಮರ್ಡರ್). 5 ವರ್ಷಗಳ ಹಿಂದೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದಂಥ ಬೆಂಗಳೂರಿನ ಎಟಿಎಂವೊಂದರಲ್ಲಿ ಮಹಿಳೆ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಹಿನ್ನೆಲೆಯಾಗಿಟ್ಟುಕೊಂಡು ನಿರ್ಮಾಣವಾಗಿರುವ ಚಿತ್ರ ಇದಾಗಿದ್ದು, ಕಳೆದ ವಾರ ರಾಜ್ಯಾದ್ಯಂತ ತೆರೆಗೆ ಬಂದಿತ್ತು. ನೈಜ ಘಟನೆ ಆಧರಿಸಿ ಅಚ್ಚುಕಟ್ಟಾಗಿ ಸಿನಿಮಾ ಮಾಡಿರುವ ಕಾರಣಕ್ಕೆ ವಿಮರ್ಶಕರು ಮಾತ್ರವಲ್ಲದೆ ಪ್ರೇಕ್ಷಕರೂ ಎಟಿಎಂಗೆ ಫುಲ್ ಮಾರ್ಕ್ ನೀಡಿದ್ದಾರೆ. ಇದರ ಪ್ರತಿಫಲವೆಂಬಂತೆ ಎಟಿಎಂ ಬಿಡುಗಡೆಯಾದ ಸ್ಥಳಗಳಲ್ಲೆಲ್ಲಾ ಭರ್ಜರಿ ಪ್ರದರ್ಶನ ಕಾಣುತ್ತಿದೆ.

    ಈ ಚಿತ್ರಕ್ಕೆ ಅಮರ್ ಕಥೆ, ಚಿತ್ರಕಥೆ, ಸಂಭಾಷಣೆಗಳನ್ನು ಬರೆದು ನಿರ್ದೇಶನ ಮಾಡಿದ್ದಾರೆ, ಎಸ್.ವಿ. ನಾರಾಯಣ್ ಈ ಚಿತ್ರಕ್ಕೆ ಬಂಡವಾಳ ಹಾಕಿ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಅಮರ್ ಮಾಡಿಕೊಂಡಿದ್ದ ಈ ಕಥೆ ಕೇಳಿದಾಗ ಅದರಲ್ಲಿನ ವಿಶೇಷ ಅಂಶವನ್ನು ಗ್ರಹಿಸಿ, ಆ ಕಥೆಯಲ್ಲಿ ಏನೋ ಹೊಸತನವಿರುವುದನ್ನು ಕಂಡುಕೊಂಡು ಸಹೋದರ ಕೃಷ್ಣಮೂರ್ತಿ ಅವರ ಜೊತೆ ಚರ್ಚಿಸಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಎಟಿಎಂ ಚಿತ್ರದಲ್ಲಿ ಪ್ರಮುಖವಾಗಿ ಐದು ಜನ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರೂ ಚಿತ್ರದಲ್ಲಿ ಬರುವ ಎಲ್ಲಾ ಪಾತ್ರಗಳೂ ಅದರದೇ ಆದ ಪ್ರಾಮುಖ್ಯತೆ ಹೊಂದಿವೆ. ಚಿತ್ರದಲ್ಲಿರುವ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಂಟೆಂಟ್ ಪ್ರೇಕ್ಷಕರನ್ನು ಹಿಡಿದು ಕೂರಿಸುವಂತಿದೆ.

    ನಿರ್ದೇಶಕ ಅಮರ್ ಒಂದಷ್ಟು ಕಿರುಚಿತ್ರಗಳನ್ನು ನಿರ್ದೇಶನ ಮಾಡಿದ್ದು, ಇದೇ ಮೊದಲ ಬಾರಿಗೆ ಕಮರ್ಷಿಯಲ್ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಇನ್ನು ಈ ಚಿತ್ರದ ನಾಯಕನಟ ವಿನಯ್ ಒಬ್ಬ ಪೊಲೀಸ್ ಅಧಿಕಾರಿಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಹೇಮಲತಾ ಅವರು ಒಬ್ಬ ಜರ್ನಲಿಸ್ಟ್ ಪಾತ್ರವನ್ನು ನಿರ್ವಹಿಸಿದ್ದಾರೆ.

  • ಅನ್‍ಕಟ್ ಮೂವಿ ‘ಹೀಗೊಂದ್ ದಿನ’ ಬರ್ತಿದೆ ನೋಡಿ!

    ಅನ್‍ಕಟ್ ಮೂವಿ ‘ಹೀಗೊಂದ್ ದಿನ’ ಬರ್ತಿದೆ ನೋಡಿ!

    ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಹೊಸಾ ಆಲೋಚನೆ, ಹೊಸಾ ಪ್ರಯೋಗಗಳ ಪರ್ವ ಕಾಲವೊಂದು ಶುರುವಾಗಿದೆಯಲ್ಲಾ? ಅದರ ಕೊಂಡಿಯಂತೆ ತಯಾರಾಗಿ ಈ ವಾರ ರಾಜ್ಯಾದ್ಯಂತ ತೆರೆಗೆ ಬರುತ್ತಿರುವ ಚಿತ್ರ `ಹೀಗೊಂದ್ ದಿನ’!

    ಸದಭಿರುಚಿಯ ಸಿನಿಮಾಸಕ್ತರ ವಲಯದಲ್ಲಿ ಸಣ್ಣಗೆ ಈ ಸಿನಿಮಾ ಕುರಿತಾಗಿ ನಿರೀಕ್ಷೆ ಜೀವ ಪಡೆದುಕೊಳ್ಳುತ್ತಿದೆ. ಯಾವುದೇ ಚಿತ್ರದ ಪಾಲಿಗಾದರೂ ತಾನೇ ತಾನಾಗಿ ಹುಟ್ಟಿಕೊಳ್ಳುವ ಇಂಥಾ ನಿರೀಕ್ಷೆಯೇ ಗೆಲುವಿನ ಮೊದಲ ಮೆಟ್ಟಿಲು. ಅಂಥಾದ್ದೊಂದು ಮೆಟ್ಟಿಲೇರಿ ನಿಂತಿರುವ ಖುಷಿಯಲ್ಲಿ ನಿರ್ಮಾಪಕ ದಿವ್ಯದೃಷ್ಟಿ ಚಂದ್ರಶೇಖರ್ ಸೇರಿದಂತೆ ಚಿತ್ರತಂಡ ಈ ವಾರ ತೆರೆಗೆ ಬರುತ್ತಿರುವ ಸಿನಿಮಾದ ಫಲಿತಾಂಶಕ್ಕಾಗಿ ಕಾದಿದ್ದಾರೆ.

    ಹಾಗೆ ನೋಡಿದರೆ, ಹೀಗೊಂದು ದಿನ ಹೆಚ್ಚು ಸೌಂಡ್ ಮಾಡಲು ಕಾರಣ ಇದು ಅನ್ ಕಟ್ ಮೂವಿ ಅನ್ನೋದಕ್ಕೆ. ಅಂದಹಾಗೆ ಅನ್ ಕಟ್ ಮೆಥಡ್ಡಿನಲ್ಲಿ ಒಂದು ಚಿತ್ರವನ್ನು ರೂಪಿಸೋದು ನಿಜಕ್ಕೂ ಸವಾಲಿನ ಕೆಲಸ. ಅದನ್ನು ನಿರ್ದೇಶಕರು ಸೇರಿದಂತೆ ಇಡೀ ಚಿತ್ರತಂಡ ಸಮರ್ಥವಾಗಿ ನಿಭಾಯಿಸಿದ ಖುಷಿಯಲ್ಲಿದೆ. ಇದು ಎರಡು ಗಂಟೆಯಲ್ಲಿ ನಡೆಯೋ ಕಥಾ ಹಂದರ ಹೊಂದಿರೋ ಚಿತ್ರ. ಒಂದ್ಯಾವುದೋ ಗುರಿಯಿಟ್ಟುಕೊಂಡು ಮನೆಯಿಂದ ಹೊರ ಬೀಳೋ ಹುಡುಗಿಯ ಸುತ್ತಾ ಎರಡು ಘಂಟೆಗಳ ಕಾಲ ನಡೆಯುವ ವಿದ್ಯಮಾನ ಈ ಚಿತ್ರದ ಮುಖ್ಯ ವಿಚಾರ.

    ಇದಕ್ಕಾಗಿ ದಿನಾ ಬೆಳಗ್ಗೆ ಆರರಿಂದ ಎಂಟು ಘಂಟೆವರೆಗೆ ಶೂಟ್ ಮಾಡಲಾಗುತ್ತಿತ್ತಂತೆ. ಅಷ್ಟೂ ಜನ ಕಲಾವಿದರು ಹೊಸಾ ಪ್ರಯೋಗವೆಂಬ ಕಾರಣದಿಂದ ಸಾಥ್ ನೀಡಿದ್ದಾರೆಂಬ ತೃಪ್ತಿ ನಿರ್ಮಾಪಕ ದಿವ್ಯದೃಷ್ಟಿ ಚಂದ್ರಶೇಖರ್ ಅವರದ್ದು.

    ಸಿಂಧು ಲೋಕನಾಥ್ ಮುಖ್ಯಭೂಮಿಕೆಯಲ್ಲಿರುವ ಹೀಗೊಂದು ದಿನ ಪಕ್ಕಾ ಮಹಿಳಾ ಪ್ರಧಾನವಾದ ಚಿತ್ರ. ಕಥಾ ಹಂದರವೂ ಸೇರಿದಂತೆ ಎಲ್ಲ ವಿಚಾರಗಳಲ್ಲಿಯೂ ಹೊಸತನ ಹೊಂದಿದೆ. ಈವರೆಗೆ ಒಂದಷ್ಟು ಪಾತ್ರಗಳಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದ ಸಿಂಧು ಲೋಕನಾಥ್ ಈ ಚಿತ್ರದಲ್ಲಿ ಇಲ್ಲಿವರೆಗಿನ ಅಷ್ಟೂ ಪಾತ್ರಗಳಿಗಿಂತಲೂ ಭಿನ್ನವಾದ, ಸವಾಲಾದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರಂತೆ.

    ಅಂದಹಾಗೆ ವಿಕ್ರಂ ಯೋಗಾನಂದ್ ನಿರ್ದೇಶನದ ಈ ಚಿತ್ರವನ್ನು ನಿರ್ಮಾಣ ಮಾಡಿರುವವರು ದಿವ್ಯದೃಷ್ಟಿ ಚಂದ್ರಶೇಖರ್. ಕನ್ನಡ ಚಿತ್ರರಂಗದಲ್ಲಿ ಹತ್ತು ವರ್ಷಗಳಿಂದ ಸಕ್ರಿಯರಾಗಿರುವ ಚಂದ್ರಶೇಖರ್ ಅಭಿರುಚಿಯ ಚಿತ್ರ ಮಾಡಬೇಕೆಂಬ ಉದ್ದೇಶದಿಂದ ಎರಡ್ಮೂರು ವರ್ಷಗಳಿಂದಲೂ ತಯಾರಿ ನಡೆಸಿದ್ದರು. ಕಡೆಗೂ ‘ಹೀಗೊಂದು ದಿನ’ ಚಿತ್ರದ ಮೂಲಕ ಆ ಕನಸು ನನಸಾಗಿಸಿಕೊಂಡಿದ್ದಾರೆ. ನಿರ್ಮಾಪಕರೂ ಸೇರಿದಂತೆ ಇಡೀ ಚಿತ್ರ ತಂಡ ಟ್ರೈಲರ್‍ಗೆ ಸಿಕ್ಕ ವ್ಯಾಪಕ ಪ್ರತಿಕ್ರಿಯೆ ಕಂಡು ಖುಷಿಗೊಂಡಿದ್ದಾರೆ. ಯಾರೇ ಯಶಸ್ವೀ ಪುರುಷರ ಹಿಂದೆ ಒಬ್ಬಳು ಹೆಣ್ಣಿರುತ್ತಾಳೆಂಬುದು ಲೋಕ ರೂಢಿಯ ಮಾತು. ಯಶಸ್ವೀ ಪುರುಷರ ಹಿಂದಿರುವ ಇಂಥಾ ಹೆಣ್ಣಿನ ತ್ಯಾಗವನ್ನು, ಕಷ್ಟವನ್ನು ಯಾರೂ ಮುನ್ನೆಲೆಗೆ ತಂದು ಮಾತಾಡೋದಿಲ್ಲ. ಆದರೆ ಈ ಚಿತ್ರದಲ್ಲಿ ಅಂಥಾ ಹೆಣ್ಣಿನ ಸೂಕ್ಷ್ಮ ಸಂಗತಿಗಳನ್ನು ರೋಚಕವಾದ ತಿರುವುಗಳ ಮೂಲಕ, ಚೆಂದದ ಕಥಾ ಹಂದರದ ಮೂಲಕ ವಿವರಿಸಲಾಗಿದೆಯಂತೆ. ಇನ್ನುಳಿದಂತೆ ಈ ಚಿತ್ರದಲ್ಲಿ ಘಟಾನುಘಟಿಗಳಾದ ನಟ ನಟಿಯರೇ ಅಭಿನಯಿಸಿದ್ದಾರೆ. ಶೋಭರಾಜ್, ಪದ್ಮಜಾ ರಾವ್, ಮಿತ್ರಾ ಮುಂತಾದ ನಟ ನಟಿಯರ ದಂಡೇ ಈ ಚಿತ್ರದಲ್ಲಿದೆ. ಈಗಾಗಲೇ ಟ್ರೈಲರ್ ಕೂಡಾ ಚಿತ್ರದ ಬಗ್ಗೆ ಕೌತುಕ ಹುಟ್ಟಿಸುವಲ್ಲಿ ಯಶ ಕಂಡಿದೆ. ಈ ಚಿತ್ರವನ್ನು ಪ್ರೇಕ್ಷಕರು ಯಾವ ರೀತಿ ಸ್ವೀಕರಿಸುತ್ತಾರೆಂಬುದಷ್ಟೇ ಸದ್ಯದ ಕುತೂಹಲ.

    ವಿಕಾಸ್ ಅವರ ಕಥೆಗೆ, ನಿರ್ದೇಶಕ ವಿಕ್ರಮ್ ಯೋಗಾನಂದ್ ಅವರೇ ಛಾಯಾಗ್ರಹಕರು, ಸಂಕಲನಕಾರರು ಹಾಗೂ ವಿಷುವಲ್ ಎಫ್ಫೆಕ್ಟ್ ಸಹ ನೀಡಿದ್ದಾರೆ, ಅಭಿಲಾಷ್ ಗುಪ್ತ ಸಂಗೀತ, ರಾಮಕೃಷ್ಣ ರಣಗಟ್ಟಿ ಗೀತ ಸಾಹಿತ್ಯ ನೀಡಿದ್ದಾರೆ.

  • ರಾಜ್ ಕುಮಾರ್ ರಸ್ತೆಯಲ್ಲಿ ಏನು ನಡೆಯುತ್ತೆ ಗೊತ್ತಾ?

    ರಾಜ್ ಕುಮಾರ್ ರಸ್ತೆಯಲ್ಲಿ ಏನು ನಡೆಯುತ್ತೆ ಗೊತ್ತಾ?

    ರಾಜಕುಮಾರ, ನಟ ಸಾರ್ವಭೌಮ, ಕನಕ-ಅಣ್ಣಾವ್ರ ಅಭಿಮಾನಿ…. ಹೀಗೆ ಡಾ. ರಾಜ್ ಕುಮಾರ್ ಅವರಿಗೆ ಸಂಬಂಧಿಸಿದ ಸಿನಿಮಾಗಳು ಬಿಡುಗಡೆಯಾಗೋದು, ಸೆಟ್ಟೇರೋದು ಮಾಮೂಲಾಗಿಬಿಟ್ಟಿದೆ. ಈಗ ಮತ್ತೊಂದು ಕುತೂಹಲಭರಿತ ಸಿನಿಮಾವೊಂದು ಆರಂಭವಾಗುತ್ತಿದೆ. ಈ ಚಿತ್ರದ ಹೆಸರೇ `ಡಾ. ರಾಜ್ ಕುಮಾರ್ ರಸ್ತೆ’!

    ಪತ್ರಕರ್ತರಾಗಿ ನಂತರ ರಿಯಾಲಿಟಿ ಶೋಗಳ ಸ್ಕ್ರಿಪ್ಟ್ ರೈಟರ್ ಆಗಿ ಹೆಸರು ಮಾಡಿರುವ ವಿನಾಯಕ ರಾಮ್ ಕಲಗಾರು ನಿರ್ದೇಶನದ ಚೊಚ್ಚಲ ಸಿನಿಮಾ ಡಾ. ರಾಜ್ ಕುಮಾರ್ ರಸ್ತೆ! ರಾತ್ರಿ ಆರಂಭವಾಗಿ ಬೆಳಗ್ಗೆಯ ಹೊತ್ತಿಗೆ ಮುಗಿಯುವ ಕಥೆ ಈ ಸಿನಿಮಾದ್ದಂತೆ. ಅಂದಹಾಗೆ ಈ ಚಿತ್ರದ ಹೆಸರಲ್ಲಿ ರಾಜ್ ಕುಮಾರ್ ಅವರ ಹೆಸರು ಇರೋದರ ಜೊತೆಗೆ ಚಿತ್ರದ ನಾಯಕನಟ ಕೂಡಾ ಡಾ. ರಾಜ್ ಅವರ ಅಭಿಮಾನಿಯಾಗಿರುತ್ತಾನಂತೆ. ಕನ್ನಡದಲ್ಲಿ ಈಗಾಗಲೇ ಹೆಸರು ಮಾಡಿರುವ ಸ್ಟಾರ್ ನಟ ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅದು ಯಾರು ಅನ್ನೋದನ್ನು ನಿರ್ದೇಶಕ ಕಲಗಾರು ಇನ್ನೂ ಗುಟ್ಟಾಗಿಟ್ಟಿದ್ದಾರೆ. ಅಂದಹಾಗೆ ಈ ಸಿನಿಮಾದ ಶೀರ್ಷಿಕೆ ಅನಾವರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಮಿಸಲಿದ್ದಾರಂತೆ!

  • ಶುಕ್ರವಾರ ಕರ್ನಾಟಕದ ಸಿನಿಮಾ ಮಂದಿರಗಳು ಬಂದ್

    ಶುಕ್ರವಾರ ಕರ್ನಾಟಕದ ಸಿನಿಮಾ ಮಂದಿರಗಳು ಬಂದ್

    ಬೆಂಗಳೂರು: ಶುಕ್ರವಾರ ಬಂದ್ರೆ ಸಾಕು ಸ್ಯಾಂಡಲ್‍ವುಡ್ ರಂಗೇರಿಬಿಡುತ್ತೆ. ಆದರೆ ನಾಳೆ ಕರ್ನಾಟಕದಲ್ಲಿ ಚಿತ್ರ ರಸಿಕರ ಪಾಲಿಗೆ ನಿರಾಶೆಯ ದಿನ. ನಾಳೆ ಇಡೀ ದಿನ ಕರ್ನಾಟಕದಲ್ಲಿ ಯಾವುದೇ ಸಿನಿಮಾ ಪ್ರದರ್ಶನ ಇರುವುದಿಲ್ಲ. ಹೊಸ ಸಿನಿಮಾಗಳು ರಿಲೀಸ್ ಆಗಲ್ಲ. ಹಳೆಯ ಸಿನಿಮಾಗಳ ಪ್ರದರ್ಶನವೂ ಇರಲ್ಲ.

    ಸಿಂಗಲ್‍ಸ್ಕ್ರೀನ್ ಚಿತ್ರಮಂದಿರಗಳ ಜೊತೆ ಮಲ್ಟಿಪ್ಲೆಕ್ಸ್ ಗಳಲ್ಲೂ ಚಿತ್ರ ಪ್ರದರ್ಶನ ಇರಲ್ಲ. ಸಂಸ್ಥೆಗಳ ಶುಲ್ಕ ಹೆಚ್ಚಳ ಸಂಬಂಧ ಯುಎಫ್‍ಓ, ಕ್ಯೂಬ್ ನಡುವಿನ ಬಿಕ್ಕಟ್ಟಿನ ಕುರಿತಾಗಿ ದಕ್ಷಿಣ ಭಾರತ ವಾಣಿಜ್ಯ ಮಂಡಳಿ ಈ ತೀರ್ಮಾನಕ್ಕೆ ಬಂದಿದ್ದು ನಾಳೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಸಾಂಕೇತಿಕವಾಗಿ ಪ್ರದರ್ಶನ ರದ್ಧುಗೊಳಿಸಿ ಹೋರಾಟಕ್ಕಿಳಿದಿದೆ.

    ಶನಿವಾರದಿಂದ ಹಳೆಯ ಸಿನಿಮಾಗಳ ಪ್ರದರ್ಶನ ಶುರುವಾಗಲಿದೆ. ಈ ನಡುವೆ ಯುಎಫ್‍ಓ ಕ್ಯೂಬ್ ಸಂಧಾನಕ್ಕೆ ಬರದಿದ್ದ ಪಕ್ಷದಲ್ಲಿ ದಕ್ಷಿಣ ಭಾರತೀಯ ಚಿತ್ರೋದ್ಯಮ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ತೀರ್ಮಾನಿಸಿದೆ. ಈ ವಿಚಾರವಾಗಿ ನಿರ್ಮಾಪಕರ ವಲಯ, ಪ್ರದರ್ಶಕರ ವಲಯ ಮತ್ತು ವಿತರಕರ ವಲಯ ಸಾಥ್ ನೀಡಿದೆ.