Tag: kannada cinema

  • ಉತ್ಕರ್ಷ, ನಿಷ್ಕರ್ಷ, ಸಂಘರ್ಷ ಮತ್ತು ಉದ್ಘರ್ಷ!

    ಉತ್ಕರ್ಷ, ನಿಷ್ಕರ್ಷ, ಸಂಘರ್ಷ ಮತ್ತು ಉದ್ಘರ್ಷ!

    ಬೆಂಗಳೂರು: ಮರ್ಮ ಎಂಬ ಚಿತ್ರದಿಂದ ಆರಂಭವಾಗಿ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿಯವರು ಕನ್ನಡದ ಪ್ರೇಕ್ಷಕರಿಗೆ ಕೊಟ್ಟ ಖುಷಿಗಳು ಒಂದೆರಡಲ್ಲ. ಕನ್ನಡ ಚಿತ್ರರಂಗ ಒಂಥರಾ ಏಕತಾನತೆಯಿಂದ ಕೂಡಿದ್ದ ಕಾಲದಲ್ಲಿಯೇ ಹೊಸಾ ಬಗೆಯ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳ ರುಚಿ ಹತ್ತಿಸಿದ್ದವರು ಸುನೀಲ್ ಕುಮಾರ್ ದೇಸಾಯಿ. ಅವರೀಗ ಬಹು ಕಾಲದ ನಂತರ ನಿರ್ದೇಶನ ಮಾಡಿರೋ ಉದ್ಘರ್ಷ ಚಿತ್ರದ ಬಗ್ಗೆ ಕುತೂಹಲ ಹುಟ್ಟದಿರಲು ಹೇಗೆ ಸಾಧ್ಯ?

    ತರ್ಕ, ಉತ್ಕರ್ಷದಂಥಾ ಚಿತ್ರಗಳ ಮೂಲಕ ಹೊಸಾ ಟ್ರೆಂಡಿಂಗ್ ಹುಟ್ಟು ಹಾಕಿದ್ದವರು ದೇಸಾಯಿ. ಅವರು ಬಹು ಕಾಲದದ ನಂತರ ಈ ಕಥೆ ಮಾಡಿಕೊಂಡು ಅಖಾಡಕ್ಕಿಳಿದಾಗ ಅಂಥಾದ್ದೇ ರಗಡ್ ಸೌಂಡಿಂಗ್ ಇರೋ ಶೀರ್ಷಿಕೆಗಾಗಿ ಹುಡುಕಾಟ ನಡೆಸಿದ್ದರಂತೆ. ಕಡೆಗೂ ಅವರೇ ಉದ್ಘರ್ಷ ಅನ್ನೋ ಪದವನ್ನು ಹುಟ್ಟು ಹಾಕಿದ್ದರಂತೆ. ಅದರ ಅರ್ಥ ಅದೇನಿದೆಯೋ… ಆದರೆ ಅದರಲ್ಲೊಂದು ಸೌಂಡಿಂಗ್ ಇದೆ ಎಂಬ ಕಾರಣದಿಂದ ಅವರು ಈ ಟೈಟಲ್ ಅಂತಿಮಗೊಳಿಸಿದ್ದರಂತೆ.

    ಇದು ಪಕ್ಕಾ ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ಚಿತ್ರ. ಈಗಾಗಲೇ ಬಿಡುಗಡೆಗೊಂಡಿರುವ ಟ್ರೈಲರ್ ಮೂಲಕ ಉದ್ಘರ್ಷದ ಅಸಲೀ ಖದರ್ ಏನೆಂಬುದು ಜಾಹೀರಾಗಿದೆ. ಬಿಡುಗಡೆಯಾಗಿ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಈ ಟ್ರೈಲರ್ ಹುಟ್ಟಿಸಿರೋ ಸಂಚಲನ ಸಣ್ಣ ಮಟ್ಟದ್ದೇನಲ್ಲ. ಉದ್ಘರ್ಷ ಎಂಬ ಅನಿರೀಕ್ಷಿತವಾಗಿ ಹುಟ್ಟು ಪಡೆದ ಟೈಟಲ್ಲೀಗ ಎಲ್ಲರ ಬಾಯಲ್ಲೂ ನಲಿದಾಡುತ್ತಿದೆ.

    ಪ್ರೇಕ್ಷಕರನ್ನ ಪ್ರತೀ ಕ್ಷಣವೂ ಕುತೂಹಲದ ಕಾವಲಿಯಲ್ಲಿ ಕೂರಿಸುವಂಥಾ ಉದ್ಘರ್ಷ ಈ ವಾರ ತೆರೆ ಕಾಣುತ್ತಿದೆ, ತಮಿಳು, ತೆಲುಗು, ಮಲೆಯಾಳಂ ಮತ್ತು ಹಿಂದಿ ಭಾಷೆಗಳಲ್ಲಿಯೂ ಉದ್ಘರ್ಷದ ಅಬ್ಬರ ಈ ವಾರವೇ ಶುರುವಾಗಲಿದೆ!

  • ಶ್ರೀ ಅಥರ್ವಣ ಪ್ರಥ್ಯಂಗಿರ ಈ ವಾರ ಬಿಡುಗಡೆ

    ಶ್ರೀ ಅಥರ್ವಣ ಪ್ರಥ್ಯಂಗಿರ ಈ ವಾರ ಬಿಡುಗಡೆ

    ಬೆಂಗಳೂರು: ಶ್ರೀ ಅಂಗಾಳ ಪರಮೇಶ್ವರಿ ಫಿಲಂ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶ್ರೀ ಶ್ರೀ ಶ್ರೀ ಸಪ್ತಗಿರಿ ಅಮ್ಮ (ಏಳುಮಲೈ ಸ್ವಾಮೀಜಿ) ಅವರು ನಿರ್ಮಿಸಿ ನಿರ್ದೇಶಿಸಿರುವ ಶ್ರೀ ಅಥರ್ವಣ ಪ್ರಥ್ಯಂಗಿರ ಚಿತ್ರ ಈ ವಾರ ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು ಸರ್ಟಿಫಿಕೇಟ್ ನೀಡಿದೆ.

    ಈ ಚಿತ್ರದಲ್ಲಿ ಪ್ರಥ್ಯಂಗಿರ ದೇವಿ ಮಹಾ ಶಕ್ತಿ ದೇವತೆ. ಈ ದೇವತೆಯು ಹೊಸೂರಿನಲ್ಲಿ ನೆಲೆಸಿರುತ್ತಾಳೆ. ಹಾಗೆಯೇ ಜನಗಳು ನಿಷ್ಠೆ ಭಕ್ತಿಯಿಂದ ಬೇಡಿದರೆ ಅವರ ಬಯಕೆಗಳು ಈಡೇರುವುದೆಂದು ಜನರು ನಂಬುತ್ತಾರೆ. ಈ ದೇವಿಯ ಪವಾಡಗಳು ನಡೆಯುವ ಕುರಿತಾದ ಚಿತ್ರವಿದು.

    ಚಿತ್ರದ ಛಾಯಾಗ್ರಹಣ – ಹರಿದಾಸ್, ಶ್ರೀಧರ್ ಕೆ, ಸಂಗೀತ & ಸೌಂಡ್ ಎಫೆಕ್ಟ್ – ಕರುಣಾ (ಕೆ.ಜಿ.ಎಫ್), ಸಂಕಲನ – ಅರುಣ್ ವಿಐಎಲ್‍ಸಿ, ನಿರ್ವಹಣೆ – ಕುಮಾರ್, ಗೋವಿಂದರಾಜು.ಕೆ, ತಾರಾಗಣದಲ್ಲಿ ಮೋಹನ್, ಆರ್.ಮರಿಸ್ವಾಮಿ, ಗೀತಾ, ಮೈಸೂರು ಮಂಜು, ರಾಘವ, ರೂಪ, ಗಣೇಶ್, ಮಾಸ್ಟರ್ ರವೀಂದ್ರ (ಪ್ರಹ್ಲಾದ್) ಪ್ರಶಾಂತ್, ಎಸ್. ರಮ್ಯ ಮುಂತಾದವರಿದ್ದಾರೆ.

    https://www.youtube.com/watch?v=wt0ccTltRw0

  • ಹೆಬ್ಬುಲಿಯನ್ನು ಕೊಂದ ಕಥೆ ಹೇಳುತ್ತಲೇ ಬೆವರಾಡಿಸುತ್ತೆ ಚಂಬಲ್!

    ಹೆಬ್ಬುಲಿಯನ್ನು ಕೊಂದ ಕಥೆ ಹೇಳುತ್ತಲೇ ಬೆವರಾಡಿಸುತ್ತೆ ಚಂಬಲ್!

    ಬೆಂಗಳೂರು: ಐಎಎಸ್ ಅಧಿಕಾರಿ ಡಿಕೆ ರವಿ ಸಾವು ಕೊಲೆಯಲ್ಲ ಆತ್ಮಹತ್ಯೆ ಅಂತ ಸರ್ಕಾರಿ ಫರ್ಮಾನು ಹೊರ ಬಿದ್ದು ವರ್ಷಗಳೇ ಕಳೆದಿವೆ. ಆದರೂ ಈ ನೆಲದ ಜನಸಾಮಾನ್ಯರು, ರವಿಯವರನ್ನು ಹತ್ತಿರದಿಂದ ಬಲ್ಲವರು ಮಾತ್ರ ಅದೊಂದು ಆತ್ಮಹತ್ಯೆ ಅನ್ನೋದನ್ನು ಈ ಕ್ಷಣಕ್ಕೂ ಒಪ್ಪಿಕೊಂಡಿಲ್ಲ. ಹೀಗೆ ಜನಸಾಮಾನ್ಯರ ಗುಮಾನಿಗಳಿಗೆ ತಕ್ಕುದಾಗಿಯೇ ಅದ್ಭುತವಾದೊಂದು ಕಥಾನಕ ಹೊಂದಿರೋ ಜೇಕಬ್ ವರ್ಗೀಸ್ ನಿರ್ದೇಶನದ ಚಂಬಲ್ ತೆರೆ ಕಂಡಿದೆ. ಈ ಮೂಲಕವೇ ಸಿನಿಮಾದಾಚೆಗಿನ ಸತ್ಯವೊಂದಕ್ಕೆ ಸೀಮಿತ ಚೌಕಟ್ಟಿನಲ್ಲಿಯೇ ಕನ್ನಡಿ ಹಿಡಿಯೋ ಪರಿಣಾಮಕಾರಿ ಪ್ರಯತ್ನಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

    ಆತ ಯಾವ ಊರಿಗೇ ಅಧಿಕಾರಿಯಾಗಿ ಹೋದರೂ ಜನರ ನಡುವೆಯೇ ಬೆರೆತು, ಜನರ ಒಳಿತನ್ನೇ ಉಸಿರಾಡೋ ಅಪರೂಪದ ಅಧಿಕಾರಿ. ಅವರ ಪ್ರಾಮಾಣಿಕತೆಗೆ ಆಯಾ ಭಾಗದ ಸಾಮಾನ್ಯ ಜನರೂ ಬೆರಗಾಗುತ್ತಾರೆ. ಭ್ರಷ್ಟಾಚಾರವನ್ನ ಬುಡ ಸಮೇತ ಕಿತ್ತು ಹಾಕಿ ಜನಸಾಮಾನ್ಯರ ಜೀವನವನ್ನ ಹಸನಾಗಬೇಕೆನ್ನೋದು ಆತನ ಗುರಿ. ಆದರೆ ಅಧಿಕಾರಸ್ಥರು, ಅವರ ಚೇಲಾಗಳು ಈ ಅಧಿಕಾರಿಯ ವಿರುದ್ಧವೇ ಗುರಾಣಿಯ ಗುರಿಯಿಡುತ್ತಾರೆ. ಅದರ ಫಲವಾಗಿ ಪದೇ ಪದೇ ವರ್ಗಾವಣೆಯ ಅಸ್ತ್ರವೂ ಈ ಅಧಿಕಾರಿಯ ಮೇಲೆ ಪ್ರಯೋಗವಾಗುತ್ತಿರುತ್ತೆ.

    ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಈ ಅಧಿಕಾರಿ ಎಲ್ಲಿಗೇ ಹೋದರೂ, ಯಾವ ಇಲಾಖೆಗೇ ವರ್ಗಾವಣೆ ಆದರೂ ಜನಪರತೆಯನ್ನೇ ಉಸಿರಾಡುತ್ತಾನೆ. ಕಡೆಗೂ ಒಂದಿನ ಈತ ರೇಡು ಮಾಡಿದ ದಾಖಲೆಗಳನ್ನು ಕದಿಯಲು ನಡೆಯೋ ಅಧಿಕಾರಸ್ಥರ ಸಾಹಸ, ಅದಕ್ಕೆ ಸಾಥ್ ನೀಡೋ ಕಿರಾತಕರು… ಅಲ್ಲೊಂದು ಭೀಕರ ಕೊಲೆ ಮತ್ತು ಅದನ್ನು ಆತ್ಮಹತ್ಯೆ ಅಂತ ನಿರೂಪಿಸೋ ಸರ್ಕಸ್ಸು…

    ಇದು ಡಿಕೆ ರವಿ ಸಾವಿನ ಸುತ್ತಲಿನ ಕಥೆ ಅನ್ನೋದಕ್ಕೆ ಇದಕ್ಕಿಂತಲೂ ಯಾವ ಪುರಾವೆಯೂ ಬೇಕಿಲ್ಲ. ಜೇಕಬ್ ವರ್ಗೀಸ್ ರವಿ ಸಾವಿನ ಸುತ್ತಲಿನ ಇಂಚಿಂಚು ಮಾಹಿತಿಯನ್ನು ಕಲೆ ಹಾಕಿ ಈ ಕಥೆ ಸಿದ್ಧಪಡಿಸಿದ್ದಾರೆ. ಯಾವ ಅಬ್ಬರವೂ ಇಲ್ಲದೆ ತಣ್ಣಗೆ ನಿರೂಪಿಸಿದ್ದಾರೆ. ನೀನಾಸಂ ಸತೀಶ್ ಅಂತೂ ಡಿ.ಕೆ.ರವಿಯವರನ್ನೇ ಆವಾಹಿಸಿಕೊಂಡು ನಟಿಸಿದ್ದಾರೆ. ಸೋನು ಗೌಡ ಸೇರಿದಂತೆ ಎಲ್ಲ ಪಾತ್ರಗಳೂ ಕಾಡುವಂತೆ ಮೂಡಿ ಬಂದಿವೆ. ಕಡೆಯ ಕೆಲ ಸೀನುಗಳಲ್ಲಂತೂ ಅವರು ನಟನಾಗಿ ವಿಜೃಂಭಿಸಿದ್ದಾರೆ.

    ಒಟ್ಟಾರೆಯಾಗಿ ಒಂದು ಕಹಿ ಸತ್ಯವನ್ನ ಜೇಕಬ್ ಈ ಸಿನಿಮಾ ಮೂಲಕ ಜಾಹೀರು ಮಾಡಿದ್ದಾರೆ. ಈ ಮೂಲಕ ಸಿನಿಮಾ ಮಾಧ್ಯಮದ ಶಕ್ತಿ ಏನೆಂಬುದನ್ನೂ ಜಾಹೀರು ಮಾಡಿದ್ದಾರೆ. ಈ ಕಾರಣದಿಂದಲೇ ಈ ಸಿನಿಮಾ ಜನರಿಗಿಷ್ಟವಾಗೋದರಲ್ಲಿ ಯಾವ ಅನುಮಾನವೂ ಇಲ್ಲ.

    ರೇಟಿಂಗ್: 4/5 

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಂಬಲ್: ಸೋನುಗೆ ಇದೆಂಥಾ ಅನ್ಯಾಯ?!

    ಚಂಬಲ್: ಸೋನುಗೆ ಇದೆಂಥಾ ಅನ್ಯಾಯ?!

    ಬೆಂಗಳೂರು: ಚಂಬಲ್ ಚಿತ್ರದಲ್ಲಿ ನೀನಾಸಂ ಸತೀಶ್ ಜೊತೆ ಸೋನು ಗೌಡ ನಾಯಕಿಯಾಗಿ ನಟಿಸಿರೋದು ಗೊತ್ತೇ ಇದೆ. ತನಗೆ ಸಿಗೋ ಪಾತ್ರಗಳೆಲ್ಲ ಸವಾಲಿನವುಗಳೇ ಆಗಿರಲಿ ಅನ್ನೋ ಮನಸ್ಥಿತಿ ಹೊಂದಿರುವ ಸೋನು ಚಂಬಲ್ ಬಗ್ಗೆ, ತಮ್ಮ ಪಾತ್ರದ ಬಗ್ಗೆ ಮತ್ತು ನಿರ್ದೇಶಕರ ಬಗ್ಗೆ ಒಂದಷ್ಟು ವಿಚಾರಗಳನ್ನ ಹಂಚಿಕೊಂಡಿದ್ದಾರೆ.

    ನಿರ್ದೇಶಕ ಜೇಕಬ್ ವರ್ಗೀಸ್ ಸಿನಿಮಾ ಅಂದ ಮೇಲೆ ವಿಶೇಷವಾಗಿಯೇ ಇರುತ್ತೆ. ಆ ನಂಬಿಕೆ ಹೊಂದಿರೋ ಸೋನುಗೆ ಅವರ ಕಡೆಯಿಂದಲೇ ನಟಿಸೋ ಆಫರ್ ಬಂದಾಗ ಥ್ರಿಲ್ ಆಗಿತ್ತಂತೆ. ಆದರೆ ಕಥೆ ಕೇಳಿದರೂ ಕೂಡಾ ಒಂದಷ್ಟು ವಿಚಾರಗಳ ಜೊತೆಗೆ ಇದು ಯಾವ ಬಗೆಯ ಸಿನಿಮಾ ಅನ್ನೋದೇ ಅರ್ಥ ಆಗಿರಲಿಲ್ಲವಂತೆ.

    ಸೋನು ಗೌಡಗೆ ಚಂಬಲ್ ಚಿತ್ರದ ಅಂತರಾಳ ಅರ್ಥವಾದದ್ದು ಚಿತ್ರೀಕರಣದ ಹಂತದಲ್ಲಿಯೇ. ಈ ಚಿತ್ರದಲ್ಲಿ ಅವರು ಸರಳ ಸಹಜ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕರು ಮೇಕಪ್ಪನ್ನು ಮುಖಕ್ಕೆ ಸೋಕಿಸಲೂ ಬಿಟ್ಟಿಲ್ಲವಂತೆ. ಹಾಗೆ ಮಾಡಿದರೆ ಈ ಪಾತ್ರದ ಸಹಜ ಗ್ಲಾಮರ್ ಗೆ ಘಾಸಿಯಾಗುತ್ತೆ ಅನ್ನೋದು ಜೇಕಬ್ ವರ್ಗೀಸ್ ಕಾಳಜಿಯಾಗಿತ್ತು.

    ಒಟ್ಟಾರೆಯಾಗಿ ಚಂಬಲ್ ಒಂದು ವಿಶೇಷವಾದ ಚಿತ್ರವಾಗಿ ದಾಖಲಾಗೋದರ ಜೊತೆಗೇ ಭಾರೀ ಗೆಲುವನ್ನೂ ತನ್ನದಾಗಿಸಿಕೊಳ್ಳುತ್ತೆ ಅನ್ನೋ ಭರವಸೆ ಸೋನು ಗೌಡ ಅವರಿಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಂಬಲ್ ನಲ್ಲಿ ಹಳ್ಳಿ ಹೈದ ಸತೀಶ ಸಿಗೋದಿಲ್ಲ!

    ಚಂಬಲ್ ನಲ್ಲಿ ಹಳ್ಳಿ ಹೈದ ಸತೀಶ ಸಿಗೋದಿಲ್ಲ!

    ನೀನಾಸಂ ಸತೀಶ್ ಪಾಲಿಗೆ ಅಯೋಗ್ಯ ಚಿತ್ರ ದೊಡ್ಡ ಮಟ್ಟದಲ್ಲಿ ಬ್ರೇಕ್ ನೀಡಿರೋದು ಗೊತ್ತೇ ಇದೆ. ಈ ದೆಸೆಯಿಂದಲೇ ಅವರೀಗ ಬೇರೆ ಭಾಷೆಗಳಲ್ಲಿಯೂ ಮಿಂಚುತ್ತಿದ್ದಾರೆ. ಇಂಥಾದ್ದೊಂದು ಗೆಲುವಿನ ಶಕೆಯನ್ನು ಮುಂದುವರೆಸೋ ಸ್ಪಷ್ಟ ಸೂಚನೆಯೊಂದಿಗೆ ಬಿಡುಗಡೆಯೇ ತಯಾರಾಗಿರೋ ಚಿತ್ರ ಚಂಬಲ್.

    ಈ ಸಿನಿಮಾವನ್ನು ನಿರ್ದೇಶಕ ಜೇಕಬ್ ವರ್ಗೀಸ್ ಎಂದಿನಂತೆಯೇ ವಿಶಿಷ್ಟವಾಗಿ ರೂಪಿಸಿದ್ದಾರೆ. ಇದು ಟ್ರೈಲರ್ ಮೂಲಕವೇ ಸ್ಪಷ್ಟವಾಗಿದೆ. ಈ ಕಾರಣದಿಂದಲೇ ಭಾರೀ ಕುತೂಹಲಕ್ಕೆ ಕಾರಣವಾಗಿರುವ ಚಂಬಲ್ ನೀನಾಸಂ ಸತೀಶ್ ಅವರ ಈವರೆಗಿನ ಚಿತ್ರಗಳಿಗಿಂತ ತುಂಬಾ ಭಿನ್ನವಾದದ್ದು. ಈ ಹಿನ್ನೆಲೆಯಲ್ಲಿ ಚಂಬಲ್ ನೀನಾಸಂ ಸತೀಶ್ ಪಾಲಿಗೆ ಬಹು ಮುಖ್ಯವಾದ ಚಿತ್ರ.

    ಇದುವರೆಗೂ ನೀನಾಸಂ ಸತೀಶ್ ಪ್ರಸಿದ್ಧಿ ಪಡೆದಿದ್ದೇ ಮಂಡ್ಯ ನೆಲದ ಮಣ್ಣಿನ ಘಮಲು ಹೊಂದಿರೋ ಭಾಷಾ ಸೊಗಡಿನಿಂದ. ಆದರೆ ಚಂಬಲ್ ಚಿತ್ರದಲ್ಲಿ ಅವರು ನಿಷ್ಠಾವಂತ ಅಧಿಕಾರಿ. ಅವರ ಭಾಷೆ, ಹಾವಭಾವಗಳೆಲ್ಲವೂ ಚಂಬಲ್ ನಲ್ಲಿ ಬದಲಾಗಿದೆ.

    ಈ ಸಿನಿಮಾ ತನ್ನ ವೃತ್ತಿ ಬದುಕಲ್ಲಿ ತುಂಬಾ ವಿಶಿಷ್ಟವಾಗಿದೆ ಅಂತ ಖುದ್ದು ಸತೀಶ್ ಅವರೇ ಹೇಳಿಕೊಂಡಿದ್ದಾರೆ. ಆರಂಭದಲ್ಲಿ ಚಂಬಲ್ ಆಫರ್ ಬಂದಾಗ ಸತೀಶ್ ಒಪ್ಪಿಕೊಂಡಿದ್ದೇ ಬೆರಗಾಗಿಸುವಂಥಾ ಚಿತ್ರಕಥೆ ನೋಡಿಯಂತೆ. ಚಂಬಲ್ ಚಿತ್ರದಲ್ಲಿ ತನಗೆ ತಾನೇ ಹೊಸಬ ಅನ್ನಿಸುವಂಥಾ ಪಾತ್ರಕ್ಕೆ ಸತೀಶ್ ಜೀವ ತುಂಬಿದ್ದಾರಂತೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೋಚಕ ಕಥೆಯ ಮೂಲಕ ರೆಟ್ರೋ ಲೋಕ ತೋರಿಸೋ ಬೆಲ್ ಬಾಟಮ್!

    ರೋಚಕ ಕಥೆಯ ಮೂಲಕ ರೆಟ್ರೋ ಲೋಕ ತೋರಿಸೋ ಬೆಲ್ ಬಾಟಮ್!

    ಬೆಂಗಳೂರು: ಎಂಭತ್ತರ ದಶಕದ ಆಚೀಚಿನ ಕಾಲಮಾನದಲ್ಲಿ ಪತ್ತೇದಾರಿ ಸಿನಿಮಾಗಳ ಜಮಾನ ಜೋರಾಗಿತ್ತು. ಆ ಬಳಿಕ ಥರ ಥರದ ಪ್ರಯೋಗಗಳ ಮೂಲಕ ಹೊಸಾ ದಿಕ್ಕಿಗೆ ಹೊರಳಿಕೊಂಡ ಪರಿಣಾಮ ಪತ್ತೇದಾರಿ ಪ್ರಾಕಾರದ ಸಿನಿಮಾಗಳಿಗೆ ವಿರಾಮ ಸಿಕ್ಕಂತಾಗಿತ್ತು. ಆದರೀಗ ಅದೆಷ್ಟೋ ದಶಕದ ನಂತರ ಬೆಲ್ ಬಾಟಮ್ ಚಿತ್ರದ ಮೂಲಕ ಪತ್ತೇದಾರಿಕೆಯ ಮಜಾ ಮತ್ತೆ ಸಿಕ್ಕಿದೆ. ಈ ಸಿನಿಮಾ ಪ್ರೇಕ್ಷಕರನ್ನೆಲ್ಲ ಎಂಭತ್ತರ ದಶಕಕ್ಕೆ ಕರೆದೊಯ್ದು ಬೇರೆಯದ್ದೇ ಅನುಭವ ತುಂಬಿ ಕಳಿಸುವಷ್ಟರ ಮಟ್ಟಿಗೆ ಶಕ್ತವಾಗಿದೆ.

    ಇದು ಕೋಲಾರ ಸೀಮೆಯಲ್ಲಿ ನಡೆದಿದ್ದ ನೈಜ ಕಥೆಯೊಂದರ ಸ್ಫೂರ್ತಿಯಿಂದ ರೂಪುಗೊಂಡಿರೋ ಚಿತ್ರ. ದಯಾನಂದ್ ಬರೆದಿರೋ ಹೊಸತನ ಹೊಂದಿರುವ ಈ ಕಥೆಗೆ ನಿರ್ದೇಶಕ ಜಯತೀರ್ಥ ಅವರೇ ಚಿತ್ರಕಥೆ ಬರೆದಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಇದೂ ಸೇರಿದಂತೆ ಪಾತ್ರವರ್ಗ, ಪಾತ್ರಗಳ ವಿಲಕ್ಷಣ ಹೆಸರುಗಳೆಲ್ಲವೂ ಹೊಸತನದ ಜೊತೆಗೇ ಎಲ್ಲರನ್ನು ರೆಟ್ರೋ ಲೋಕದಲ್ಲಿ ವಿಹರಿಸಿಕೊಂಡು ಬರುವಂತೆ ಮಾಡುತ್ತವೆ.

    ಆತ ದಿವಾಕರ. ಅಕ್ಷರ ಜ್ಞಾನ ಬರುತ್ತಲೇ ಪತ್ತೇದಾರಿ ಕಾದಂಬರಿಗಳನ್ನು ಓದೋ ಗೀಳಿಗೆ ಬಿದ್ದಿದ್ದ ಈತನಿಗೆ ಎಳವೆಯಿಂದಲೂ ಡಿಟೆಕ್ಟಿವ್ ಆಗಬೇಕೆನ್ನೋ ಕನಸು. ಆದರೆ ಅಪ್ಪನ ಒತ್ತಾಸೆಗೆ ಬಿದ್ದು ದಿವಾಕರ ಪೊಲೀಸ್ ಕಾನ್ ಸ್ಟೇಬಲ್ ಆಗಿ ವೃತ್ತಿ ಆರಂಭಿಸುತ್ತಾನೆ. ಹೀಗೆ ಖಾಕಿ ತೊಟ್ಟರೂ ಕೂಡಾ ಈತನೊಳಗಿನ ಪತ್ತೇದಾರಿಕೆಯ ಪ್ರೀತಿ ಮಾತ್ರ ಬತ್ತಿರೋದಿಲ್ಲ. ಹೀಗಿರುವಾಗಲೇ ಪೊಲೀಸ್ ಠಾಣೆಗಳಲ್ಲೇ ಕಳವು ಮಾಡೋ ಖತಾರ್ನಾಕ್ ಕಳ್ಳರು ಹುಟ್ಟಿಕೊಂಡು ಬಿಡುತ್ತಾರೆ., ದಿನ ಬೆಳಗಾದರೆ ಪೊಲೀಸ್ ಠಾಣೆಗಳಲ್ಲಿಯೇ ಕಳ್ಳತನ ನಡೆಯೋ ನಗೆಪಾಟಲಿನ ವಿಚಾರ ಸಾಲು ಸಾಲಾಗಿ ನಡೆಯುತ್ತಿರುತ್ತವೆ. ಇದನ್ನು ದಿವಾಕರ ತನ್ನ ಪತ್ತೇದಾರಿ ಕೈಚಳಕದಿಂದ ಹೇಗೆ ಭೇದಿಸುತ್ತಾನೆ? ಅಷ್ಟಕ್ಕೂ ಪೊಲೀಸ್ ಠಾಣೆಯಲ್ಲಿಯೇ ಕಳ್ಳತನ ಮಾಡುತ್ತಿದ್ದ ಖದೀಮ ರು ಯಾರು ಅಂತೆಲ್ಲ ಕುತೂಹಲಕ್ಕೆ ಥೇಟರಿನಲ್ಲಿ ಮಜವಾದ ಉತ್ತರವಿದೆ.

    ಈವರೆಗೂ ನಿರ್ದೇಶಕರಾಗಿ ಭಿನ್ನ ಕಥೆಗಳಿಂದ ಗಮನ ಸೆಳೆದಿದ್ದ ರಿಷಬ್ ಶೆಟ್ಟಿ ತಾನು ನಟನೆಗೂ ಸೈ ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ. ನಾಯಕಿ ಹರಿಪ್ರಿಯಾ ಕಾಣಿಸಿಕೊಳ್ಳೋ ಸೀನುಗಳೆಲ್ಲವೂ ಪ್ರೇಕ್ಷಕರ ಪಾಲಿಗೆ ಹಬ್ಬ. ರಿಷಬ್ ಮತ್ತು ಹರಿಪ್ರಿಯಾ ಅಷ್ಟೊಂದು ಚೆನ್ನಾಗಿ ನಟಿಸುತ್ತಲೇ ರೆಟ್ರೋ ಲುಕ್ಕಿನಲ್ಲಿ ಇಷ್ಟವಾಗುತ್ತಾರೆ. ಇನ್ನುಳಿದಂತೆ ಸೆಗಣಿ ಪಿಂಟೋ, ಮರಕುಟುಕ ಮುಂತಾದ ಈವರೆಗೆ ಯಾವ ಚಿತ್ರಗಳಲ್ಲಿಯೂ ಕಾಣಿಸಿಕೊಳ್ಳದಿದ್ದ ವಿಲಕ್ಷಣ ಹೆಸರಿನ ಪಾತ್ರಗಳು ಈ ಸಿನಿಮಾದಲ್ಲಿ ಗಮನ ಸೆಳೆಯುತ್ತವೆ. ಮರಕುಟುಕನಾಗಿ ಯೋಗರಾಜ ಭಟ್, ಪ್ರಮೋದ್ ಶೆಟ್ಟಿ ಕೂಡಾ ಅದ್ಭುತವಾಗಿಯೇ ನಟಿಸಿದ್ದಾರೆ.

    ನಿರ್ದೇಶಕ ಜಯತೀರ್ಥ ಚಿತ್ರಗಳೆಂದ ಮೇಲೆ ವಿಶೇಷತೆಗಳು ಇದ್ದೇ ಇರುತ್ತವೆ. ಈ ಚಿತ್ರದ ತುಂಬಾ ಅವರು ಹೊಸಾ ಸವಾಲಿಗೆ ಒಡ್ಡಿಕೊಳ್ಳುತ್ತಲೇ ಸ್ಪಷ್ಟವಾಗಿಯೇ ಗೆಲುವು ದಾಖಲಿಸಿದ್ದಾರೆ. ಒಟ್ಟಾರೆಯಾಗಿ ರೋಚಕ ಪತ್ತೇದಾರಿ ಕಥೆ, ಕಚಗುಳಿ ಇಡೋ ಹಾಸ್ಯ ಮತ್ತು ಇಂಚಿಂಚಾಗಿ ರೆಟ್ರೋ ಲೋಕದ ಒಳಗಿಳಿಸೋ ದೃಶ್ಯ ವೈಭವ. ನೀವೊಂದು ಸಲ ಈ ಚಿತ್ರವನ್ನ ನೋಡದಿದ್ದರೆ ವರ್ಣಿಸಲು ಸಾಧ್ಯವಿಲ್ಲದ ಅದ್ಭುತ ಅವಕಾಶ ವೊಂದನ್ನು ಕಳೆದುಕೊಳ್ಳುತ್ತೀರಿ!

    ರೇಟಿಂಗ್- 4/5

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮತ್ತೆ ಸಿಡಿದ ಶೃತಿ ಹರಿಹರನ್-ಫಿಲ್ಮ್ ಚೇಂಬರ್ ವಿರುದ್ಧ ಪರೋಕ್ಷವಾಗಿ ಆಕ್ರೋಶ ಹೊರ ಹಾಕಿದ ನಟಿ

    ಮತ್ತೆ ಸಿಡಿದ ಶೃತಿ ಹರಿಹರನ್-ಫಿಲ್ಮ್ ಚೇಂಬರ್ ವಿರುದ್ಧ ಪರೋಕ್ಷವಾಗಿ ಆಕ್ರೋಶ ಹೊರ ಹಾಕಿದ ನಟಿ

    ಬೆಂಗಳೂರು: ಅರ್ಜುನ್ ಸರ್ಜಾ ವಿರುದ್ಧ ಮೀಟೂ ಕೇಸ್ ದಾಖಲಿಸಿ ಸ್ಯಾಂಡಲ್‍ವುಡ್ ನಲ್ಲಿ ಸಂಚಲ ಸೃಷ್ಟಿಸಿರುವ ನಟಿ ಶೃತಿ ಹರಿಹರನ್ ಟ್ಟಿಟ್ಟರ್ ನಲ್ಲಿ ಮತ್ತೆ ಗರಂ ಆಗಿದ್ದಾರೆ. ಇಂಗ್ಲಿಷ್ ಪತ್ರಿಕೆಯ ಲೇಖನವನ್ನು ರೀಟ್ವೀಟ್ ಮಾಡಿಕೊಂಡಿರುವ ಶೃತಿ ಹರಿಹರನ್ ಪರೋಕ್ಷವಾಗಿ ಫಿಲ್ಮ್ ಚೇಂಬರ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    ‘ಕನ್ನಡ ಸಿನಿಮಾ ಇಂಡಸ್ಟ್ರಿಗೆ ಸಾಮಾನ್ಯ ಬೆಂಗಳೂರಿಗಳ ಪತ್ರ’ ಶೀರ್ಷಿಕೆಯಲ್ಲಿರುವ ಬೆಂಗಳೂರಿನ ಮಹಿಳೆಯೊಬ್ಬರ ಅಭಿಪ್ರಾಯವನ್ನು ಶೃತಿ ರೀಟ್ವೀಟ್ ಮಾಡಿಕೊಂಡಿದ್ದಾರೆ. ಈ ಪತ್ರದಲ್ಲಿರುವ ಎಲ್ಲ ಮಾತುಗಳು ಶೃತಿ ಸಮ್ಮತಿ ಸೂಚಿಸಿದ್ದು, ನನ್ನ ಮನದಾಳದ ಮಾತಿದು ಎಂಬರ್ಥದಲ್ಲಿಯೇ ರೀಟ್ವೀಟ್ ಮಾಡಿದ್ದಾರೆ ಎನ್ನಲಾಗುತ್ತಿದೆ.

    ಪತ್ರದಲ್ಲಿ ಏನಿದೆ?
    ಸಿನಿಮಾದ ಸೆಟ್ ನಲ್ಲಿ ನೂರಾರು ಜನರು ಇರುತ್ತಾರೆ. ಆದ್ರೆ ಚಿತ್ರದ ಹೀರೋ ಮತ್ತು ವಿಲನ್ ಯಾರು ಎನ್ನುವುದು ಎಲ್ಲರಿಗೂ ಗೊತ್ತಿರುತ್ತದೆ. ಚಿತ್ರದಲ್ಲಿಯ ಹೀರೋ ನಿಜ ಜೀವನದಲ್ಲಿಯೂ ಒಳ್ಳೆಯವನು ಆಗಿರುತ್ತಾನಾ? ಹಾಗಾದ್ರೆ ಜೀವನ ಒಂದು ಸ್ಯಾಂಡಲ್‍ವುಡ್ ಅಥವಾ ಬಾಲಿವುಡ್ ಕಥೆ ಆಗಿ ಹೋಯ್ತಾ ಎಂಬ ಪ್ರಶ್ನೆ ನನ್ನಲ್ಲಿ ಮೂಡಿದೆ.

    ನಮ್ಮದು ಎರಡು ಮುಖಗಳಿರುವ ಮಾನವ ಕುಲ. ಪ್ರತಿಯೊಬ್ಬರ ಪ್ರತಿಯೊಂದು ಅನುಭವ ವಿಭಿನ್ನ ಮತ್ತು ವಿಶಿಷ್ಠವಾಗಿರುತ್ತದೆ. ಪ್ರತಿಯೊಂದು ಹೆಣ್ಣು ಮಾಡುವ ಆರೋಪವನ್ನು ಸುಳ್ಳು ಎಂದು ವಾದಿಸುವುದು ಎಷ್ಟು ಸರಿ? ಹಾಗದರೆ ನೊಂದ ಮಹಿಳೆ ತನ್ನ ನೋವನ್ನು ಹೇಳಿಕೊಳ್ಳುವುದು ತಪ್ಪಾ ಎಂದು ಪ್ರಶ್ನಿಸಲಾಗಿದೆ.

    ಈ ಹಿಂದೆ ಕಥುವಾ ರೇಪ್ ಪ್ರಕರಣದಲ್ಲಿ ಟಿವಿ ಮುಂದೆ ಮಹಿಳೆಯರ ಪರ ವಾದಿಸಿದ್ದ ವ್ಯಕ್ತಿಯೇ ಕೇಸ್ ನಲ್ಲಿ ಸಿಲುಕಿಕೊಂಡಿದ್ದನು. ಅಂತರಾಷ್ಟ್ರೀಯ ಖ್ಯಾತಿಯ ನಿರ್ದೇಶಕರೊಬ್ಬರು ತನ್ನನ್ನು ಗುರು ಎಂದು ನಂಬಿದ್ದ ನಟಿಯ ಮುಂದೆ ಹಸ್ತಮೈಥುನ ಮಾಡಿಕೊಂಡಿದ್ದನು. ಈ ಮೂಲಕ ಎಲ್ಲ ಪುರುಷರು ಅಥವಾ ಮಹಿಳೆಯರು ಒಳ್ಳೆಯವರಾಗಿರುವುದಿಲ್ಲ.

     

    ಕನ್ನಡ ಚಿತ್ರರಂಗದ ದಿಗ್ಗಜರು ಎಂದು ಕರೆಸಿಕೊಳ್ಳುವ ಜಗ್ಗೇಶ್, ಅಂಬರೀಶ್ ಮತ್ತು ತಾರಾ ಸೇರಿದಂತೆ ಹಲವು ಕಲಾವಿದರು ನೊಂದ ಮಹಿಳೆಯ ನೋವನ್ನು ಕೇಳಬೇಕಿತ್ತು. ಈ ಪ್ರಕರಣದಲ್ಲಿ ನೀವು ನೊಂದ ಮಹಿಳೆಯ ನೋವನ್ನು ಕೇಳುತ್ತೇವೆ ಎಂಬುದನ್ನು ಜಗತ್ತಿಗೆ ತೋರಿಸಿ. ನ್ಯಾಯವೇ ದೇವರು ಎನ್ನುವುದು ಸಿನಿಮಾದಲ್ಲಿ ಮಾತ್ರ ಅಲ್ಲ ನಿಜ ಜೀವನದಲ್ಲಿಯೂ ಇರಬೇಕು ಎಂದು ಫಿಲ್ಮ್ ಚೇಂಬರ್ ಬಗ್ಗೆ ಲೇಖನದಲ್ಲಿ ಮಹಿಳೆ ಅಸಮಾಧಾನ ಹೊರಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರುದ್ರಾಕ್ಷಿಪುರ: ಶಿಲೆ ಕೆತ್ತುವ ಮನಸೊಳಗೆ ಮೊಳಕೆಯೊಡೆದ ಸಿನಿಮಾ ಕನಸು!

    ರುದ್ರಾಕ್ಷಿಪುರ: ಶಿಲೆ ಕೆತ್ತುವ ಮನಸೊಳಗೆ ಮೊಳಕೆಯೊಡೆದ ಸಿನಿಮಾ ಕನಸು!

    ಬೆಂಗಳೂರು: ಈಶ್ವರ ಪೋಲಂಕಿ ನಿರ್ದೇಶನದ ರುದ್ರಾಕ್ಷಿಪುರ ಚಿತ್ರದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಎಲ್ಲೆಡೆ ಈ ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಹುಟ್ಟಿಕೊಂಡಿದೆ. ಥ್ರಿಲ್ಲರ್ ಕಥಾನಕ ಹೊಂದಿರೋ ಈ ಚಿತ್ರ ವೀಕ್ಷಣೆಗಾಗಿ ಪ್ರೇಕ್ಷಕರೂ ಕಾತರರಾಗಿದ್ದಾರೆ. ಇಷ್ಟೆಲ್ಲ ಬೆಳವಣಿಗೆಗಳ ಹಿಂದೆ ನಿರ್ಮಾಪಕರಾಗಿ, ಸಿನಿಮಾ ಪ್ರೇಮಿಯಾಗಿ ನಿಂತಿರುವವರು ನಾಗರಾಜ್ ಮುರುಡೇಶ್ವರ!

    ಯಾವ ಮೂಲೆಯಲ್ಲಿ, ಯಾವ ಕೆಲಸ ನೆಚ್ಚಿಕೊಂಡಿರೋ ಜೀವಗಳಿಗೆ ಈ ಸಿನಿಮಾ ಕನಸು ಬೀಳುತ್ತೋ ಹೇಳಲು ಬರೋದಿಲ್ಲ. ಈ ಮಾತಿಗೆ ತಕ್ಕುದಾಗಿಯೇ ಇದೆ ರುದ್ರಾಕ್ಷಿಪುರ ಚಿತ್ರದ ನಿರ್ಮಾಪಕ ನಾಗರಾಜ್ ಮುರುಡೇಶ್ವರ ಅವರ ರಿಯಲ್ ಸ್ಟೋರಿ!

    ಉತ್ತರಕನ್ನಡ ಜಿಲ್ಲೆಯ ಪ್ರಖ್ಯಾತ ಯಾತ್ರಾ ಸ್ಥಳವಾದ ಮುರುಡೇಶ್ವರ ನಾಗರಾಜ್ ಅವರ ಊರು. ತೀರಾ ಹನ್ನೊಂದನೇ ವರ್ಷಕ್ಕೆ ಊರು ಬಿಟ್ಟಿದ್ದ ಅವರು ನಂತರ ಹೋಗಿದ್ದು ದೂರದ ಚೆನ್ನೈಗೆ. ಅಲ್ಲಿ ಏನೇನೋ ಪಡಿಪಾಟಲು ಪಟ್ಟು ವಿವೇಕ್ ಆರ್ಕಿಟೆಕ್ಟ್ ಕಂಪೆನಿಯಲ್ಲಿ ಸಣ್ಣ ಕೆಲಸಕ್ಕೆ ಸೇರಿಕೊಂಡ ನಾಗರಾಜ್ ಶಿಲ್ಪಕಲೆಯ ಸಂಪೂರ್ಣ ಪಾಠ ಕಲಿತದ್ದು ಅಲ್ಲಿಯೇ. ಆ ನಂತರ ಹತ್ತಾರು ವರ್ಷಗಳ ಕಾಲ ಅಲ್ಲಿಯೇ ಕಾರ್ಯನಿರ್ವಹಿಸಿ ಇದೀಗ ಅವರು ಶಿವಮೊಗ್ಗದಲ್ಲಿ ಚೌಡೇಶ್ವರಿ ಶಿಲ್ಪಕಲಾ ಕಂಪೆನಿ ತೆರೆದಿದ್ದಾರೆ. ಇದರಡಿಯಲ್ಲಿ ಮೂವತ್ತಕ್ಕೂ ಹೆಚ್ಚು ದೇವಸ್ಥಾನಗಳನ್ನು ನಿರ್ಮಾಣ ಮಾಡಿದ್ದಾರೆ.

    ಹೀಗೆ ಶಿಲ್ಪಿಯಾಗಿ ಯಶ ಕಂಡಿರೋ ನಾಗರಾಜ್ ಅವರು ಹದಿನೈದು ವರ್ಷಗಳಿಂದಲೂ ನಿರ್ದೇಶಕನಾಗ ಬೇಕೆಂಬ ಕನಸನ್ನು ಸಾಕಿಕೊಂಡಿದ್ದರು. ಆದರೆ ನಿರ್ದೇಶಕ ಈಶ್ವರ್ ಪೋಲಂಕಿ ಹೇಳಿದ ಕಥೆ, ಅದರಲ್ಲಿನ ಹೊಸತನ ಕಂಡಾಗ ಮೊದಲು ನಿರ್ಮಾಪಕನಾಗಿ ಅಖಾಡಕ್ಕಿಳಿಯೋದೇ ಒಳಿತೆನ್ನಿಸಿತ್ತಂತೆ. ಈ ಮೂಲಕ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹಿಸಿ ಒಂದಷ್ಟು ಪಾಠವನ್ನೂ ನಾಗರಾಜ್ ಕಲಿತುಕೊಂಡಿದ್ದಾರೆ.

    ರುದ್ರಾಕ್ಷಿಪುರ ಚಿತ್ರವನ್ನು ಖಂಡಿತಾ ಜನ ಮೆಚ್ಚಿ ಪ್ರೋತ್ಸಾಹಿಸುತ್ತಾರೆಂಬ ನಂಬಿಕೆ ನಾಗರಾಜ್ ಅವರಿಗಿದೆ. ಜೊತೆಗೆ ಮುಂದೆ ತಾವೇ ನಿರ್ದೇಶಕರಾಗಿ ಹೊರ ಹೊಮ್ಮಲು ಬೇಕಾದ ತಯಾರಿಯನ್ನೂ ಅವರು ಆರಂಭಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚುಂಬಕ ಕುತೂಹಲದ ಆದಿಪುರಾಣ!

    ಚುಂಬಕ ಕುತೂಹಲದ ಆದಿಪುರಾಣ!

    ಶಮಂತ್ ನಿರ್ಮಾಣದ, ಮೋಹನ್ ಕಾಮಾಕ್ಷಿ ನಿರ್ದೇಶನದ ಆದಿ ಪುರಾಣ ಚಿತ್ರ ಪೋಸ್ಟರ್ ಒಂದರಿಂದಾಗಿ ಇತ್ತೀಚೆಗೆ ಬಿಸಿಯೇರಿಸಿದೆ. ಇತ್ತೀಚೆಗೆ ಇಂಥಾ ಕಿಸ್ಸಿಂಗ್ ಸೀನ್ ಕ್ರಿಯೇಟ್ ಮಾಡಿ ಒಂದಷ್ಟು ಸಂಚಲನ ಸೃಷ್ಟಿಸಿದ ಚಿತ್ರಗಳ ಸಾಲಿಗೆ ಸೇರಿಕೊಂಡಿರೋ ಈ ಚಿತ್ರ ಅಕ್ಟೋಬರ್ 5ರಂದು ಬಿಡುಗಡೆಯಾಗಲು ಮುಹೂರ್ತ ನಿಗದಿಯಾಗಿದೆ!

    ಮೋಹನ್ ಕಾಮಾಕ್ಷಿ ನಿರ್ದೇಶನದ ಈ ಚಿತ್ರ ಮುಹೂರ್ತ ಕಂಡ ದಿನದಿಂದಲೇ ಟೈಟಲ್ಲಿನಿಂದಾಗಿ ಗಮನ ಸೆಳೆದಿತ್ತು. ಆ ನಂತರದಲ್ಲಿ ಹಂತ ಹಂತವಾಗಿ ಪ್ರೇಕ್ಷಕರನ್ನು ಸೆಳೆಯುತ್ತಾ ಸಾಗಿದ್ದ ಈ ಚಿತ್ರದ ಪೋಸ್ಟರೊಂದು ಇತ್ತೀಚೆಗೆ ಬಿಡುಗಡೆಯಾಗಿತ್ತು. ಅದರಲ್ಲಿದ್ದದ್ದು ನಾಯಕ ನಾಯಕಿಗೆ ಕಿಸ್ಸು ಕೊಡುತ್ತಿರೋ ದೃಶ್ಯ. ಈ ಕಾರಣದಿಂದಲೇ ಈ ಪೋಸ್ಟರ್ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಹರಿದಾಡಿತ್ತು.

    ಇದು ಚಿತ್ರಕ್ಕೆ ಪೂರಕವಾದ ಪೋಸ್ಟರ್. ಹಾಗಂತ ಇಡೀ ಚಿತ್ರದಲ್ಲಿ ವಲ್ಗರ್ ಅನ್ನಿಸುವಂಥಾ ಯಾವ ಸನ್ನಿವೇಶಗಳೂ ಇಲ್ಲ. ಆದರೆ ಇದರೊಳಗೆ ಎಲ್ಲರಿಗೂ ಅಚ್ಚರಿ ಎನ್ನಿಸುವಂಥಾ ನಾನಾ ವಿಚಾರಗಳಿವೆ ಅಂತ ಚಿತ್ರ ತಂಡವೇ ಹೇಳಿಕೊಂಡಿದೆ. ಆದಿ ಪುರಾಣದ ಅಸಲೀ ಕಥೆ ಏನು, ಅದೊಂದು ಪ್ರೇಮ ಕಥಾನಕವಾ ಎಂಬೆಲ್ಲ ಪ್ರಶ್ನೆಗಳು ಪ್ರೇಕ್ಷಕರಲ್ಲಿವೆ. ಅದಕ್ಕೆಲ್ಲ ಮುಂದಿನ ತಿಂಗಳ ಮೊದಲ ವಾರದಲ್ಲಿಯೇ ನಿಖರ ಉತ್ತರ ಸಿಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪೂಜಾ ಗಾಂಧಿಯ ಎಂಟರ್‍ಟೈನ್ಮೆಂಟ್ ಫ್ಯಾಕ್ಟರಿಗೆ ಬೀಗ ಬಿತ್ತಾ?

    ಪೂಜಾ ಗಾಂಧಿಯ ಎಂಟರ್‍ಟೈನ್ಮೆಂಟ್ ಫ್ಯಾಕ್ಟರಿಗೆ ಬೀಗ ಬಿತ್ತಾ?

    ಬೆಂಗಳೂರು: ಕೇವಲ ಒಂದೂವರೆ ವರ್ಷಗಳ ಹಿಂದಷ್ಟೇ ಒಟ್ಟೊಟ್ಟಿಗೇ ಮೂರು ಸಿನಿಮಾ ಶುರು ಮಾಡಿದ್ದರು ಪೂಜಾ ಗಾಂಧಿ… ಎಲ್ಲಿಂದಲೋ ಬಂದು, ಕರ್ನಾಟಕದಲ್ಲಿ ನೆಲೆನಿಂತು, ಸಿನಿಮಾಗಳಲ್ಲಿ ನಟಿಸುತ್ತಲೇ ಕೆಲವಾರು ಉದ್ಯಮಗಳನ್ನೂ ಆರಂಭಿಸಿದರು. ಇವೆಲ್ಲದರ ಜೊತೆಗೆ ರಾಜಕೀಯಕ್ಕೂ ಕಾಲಿಟ್ಟರು. ನಿರ್ಮಾಪಕಿಯಾಗಿ ಅದಾಗಲೇ ಒಂದು ಸಿನಿಮಾವನ್ನು ನಿರ್ಮಿಸಿದ್ದ ಪೂಜಾ ಆಗ ಸಿನಿಮಾ ಫ್ಯಾಕ್ಟರಿಯನ್ನೇ ಆರಂಭಿಸಿದ್ದರು.

    ಹತ್ತು ವರ್ಷಗಳ ಹಿಂದೆ ಅನಿರೀಕ್ಷಿತವಾಗಿ ಕನ್ನಡ ಚಿತ್ರರಂಗದ ದಿಗಂತದಲ್ಲಿ ಉದಯಿಸಿದ ತಾರೆ ಪೂಜಾ ಗಾಂಧಿ. `ಮುಂಗಾರು ಮಳೆ’ ಚಿತ್ರ ಹೇಗೆ ನಾಯಕ ನಟ ಗಣೇಶ್ ಮತ್ತು ನಿರ್ದೇಶಕ ಯೋಗರಾಜ್ ಭಟ್ಟರ ಅದೃಷ್ಟದ ಬಾಗಿಲನ್ನು ತೆರೆಸಿತೋ ಅದೇ ರೀತಿ ಪಂಜಾಬಿನಿಂದ ಬಂದ ನಾಯಕಿ ಪೂಜಾ ಗಾಂಧಿಗೂ ಅದೃಷ್ಟ ಖುಲಾಯಿಸಿತು. ಆದರೆ `ಮುಂಗಾರು ಮಳೆ’ ಚಿತ್ರ ಬಿಡುಗಡೆಯಾದಾಗ ಪೂಜಾ ಗಾಂಧಿ ಬಗ್ಗೆ ಗಾಂಧಿನಗರದ ಜನರಿಗೆ ಒಂದಿಷ್ಟು ಅಲರ್ಜಿ ಇತ್ತು. ಆಕೆ ಕುಳ್ಳಿ ಎಂದರು ಕೆಲವರು. ಆಕೆಯದ್ದು `ಮ್ಯಾನ್ಲಿ ಲುಕ್’ ಎಂದು ಕೆಲವರು ಹೀಯಾಳಿಸಿದರು. ಮತ್ತೆ ಕೆಲವರು `ಆಕೆಗೆ ನಟನೆ ಅಷ್ಟೇನು ಬರೋಲ್ಲ’ ಎಂದರು. ಅಷ್ಟೇ ಏಕೆ, `ಮುಂಗಾರು ಮಳೆ’ ಚಿತ್ರದಲ್ಲಿ ಪೂಜಾ ಗಾಂಧಿಯ ಬದಲು ನಾಯಕಿಯಾಗಿ ರಮ್ಯಾ ಇದ್ದಿದ್ದರೆ ಆ ಚಿತ್ರದ ಖದರೇ ಬೇರೆಯಾಗುತ್ತಿತ್ತು ಎಂದು ಹಲವರು ಭವಿಷ್ಯವನ್ನು ನುಡಿದಿದ್ದರು. ಇವೆಲ್ಲ ಟೀಕೆಗಳನ್ನು ನೋಡಿ ಈ ಪಂಜಾಬಿ ಹುಡುಗಿ ಒಂದೇ ಚಿತ್ರಕ್ಕೆ ವಾಪಸ್ ಹೋಗುತ್ತಾಳೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಯಾವಾಗ ಬಾಕ್ಸ್ ಆಫೀಸ್‍ನಲ್ಲಿ `ಮುಂಗಾರು ಮಳೆ’ ಹಿಟ್ ಆಯಿತೋ ಆಗ ಪೂಜಾಳನ್ನು ಟೀಕೆ ಮಾಡಿದ್ದ ಅದೇ ಗಾಂಧಿನಗರದ ಜನ ಆಕೆಯ ಕಾಲ್‍ಶೀಟ್ ಗಾಗಿ ಆಕೆ ಸುತ್ತ ಗಿರಕಿ ಹೊಡೆಯಲಾರಂಭಿಸಿದರು.

    ಎಷ್ಟಾದರೂ ಗೆದ್ದೆತ್ತಿನ ಬಾಲ ಹಿಡಿಯುವುದು ನಮ್ಮವರ ಸಹಜ ಗುಣ ತಾನೆ? ಹೌದು, ಪೂಜಾ ಗಾಂಧಿ ಲೈಮ್ ಲೈಟಿಗೆ ಬಂದಿದ್ದೇ ತಡ, ಆಕೆ ಮಾಲಾಶ್ರೀಯನ್ನು ನೆನಪಿಸುವ ರೀತಿಯಲ್ಲಿ ಶೈನ್ ಆಗುತ್ತಾಳೋ ಎಂದೆನಿಸಲು ಆರಂಭವಾಯಿತು. ಏಕೆಂದರೆ ಗಾಂಧಿನಗರದ ಬಹುತೇಕ ಎಲ್ಲಾ ನಿರ್ಮಾಪಕರು ಮತ್ತು ನಿರ್ದೇಶಕರು `ಪೂಜಾ ಮಂತ್ರ’ ಪಠಿಸಲು ಆರಂಭಿಸಿದ್ದರು.

    ಪೂಜಾಳ ಯಶಸ್ಸು ಮತ್ತು ನಾಗಾಲೋಟಕ್ಕೆ ಹಲವಾರು ಕಾರಣಗಳು ಇದ್ದವು. ಮೊದಲನೆಯದಾಗಿ, ಈ ಪಂಜಾಬಿ ಹುಡುಗಿ ಮೊದಲ ದಿನದಿಂದಲೇ ತೊದಲು ಕನ್ನಡ ನುಡಿಗಳನ್ನು ಮಾತನಾಡುತ್ತಾ ಕನ್ನಡಿಗರ ಮೆಚ್ಚುಗೆಗೆ ಪಾತ್ರಳಾದಳು. ಹಾಗೆಯೇ ನಮ್ಮ ಕನ್ನಡದ ಹುಡುಗಿಯರ ತರಹ ಬಿಂಕ-ವೈಯ್ಯಾರ ತೋರಿಸದೇ ನಿರ್ಮಾಪಕ ಕೊಟ್ಟಿದ್ದನ್ನು ಪಡೆದದ್ದೂ ಆಕೆಯ ಸುತ್ತ ನಿರ್ಮಾಪಕರು ಮುತ್ತಿಗೆ ಹಾಕಲು ಕಾರಣವಾಯಿತು. ಆಕೆಯ ಮತ್ತೊಂದು ವಿಶೇಷತೆಯೆಂದರೆ ದೊಡ್ಡ ದೊಡ್ಡ ನಟರುಗಳೊಂದಿಗೆ ಮಾತ್ರವಲ್ಲ, ಉದ್ಯಮಕ್ಕೆ ಹೊಸದಾಗಿ ಕಾಲಿಟ್ಟ ಹೊಸ ಹೀರೋಗಳ ಜೊತೆ ಕೂಡಾ ಯಾವುದೆ ಗರ್ವವಿಲ್ಲದೆ ಮರ ಸುತ್ತಲು ಒಪ್ಪಿಕೊಳ್ಳುತ್ತಿದ್ದದ್ದು. ನೋಡುನೋಡುತ್ತಿದ್ದಂತೆ ಪೂಜಾ ಗಾಂಧಿ ಕನ್ನಡದ ಜನಪ್ರಿಯ ನಾಯಕಿಯಾಗಿದ್ದ ರಮ್ಯಾಳನ್ನು ಕೂಡಾ ಓವರ್ ಟೇಕ್ ಮಾಡಿ ಅತ್ಯಂತ ಬೇಡಿಕೆಯ ನಟಿ ಎನ್ನಿಸಲಾರಂಭಿಸಿದಳು.

    ಪಂಜಾಬಿನ ಈ ಹುಡುಗಿ ಕರ್ನಾಟಕದ ಕಲಾಭಿಮಾನಿಗಳ ಮೆಚ್ಚಿನ ತಾರೆಯಾಗಿ ಬೆಳೆದು ನಿಂತಳು. ಆರಂಭದಲ್ಲಿ ಗಣೇಶ್ ಜೊತೆ ನಾಯಕಿಯಾಗಿ ಕಾಣಿಸಿಕೊಂಡ ಪೂಜಾ ಗಾಂಧಿ ಆನಂತರ ಉಪೇಂದ್ರ, ಜಗ್ಗೇಶ್, ಪುನೀತ್ ರಾಜ್‍ಕುಮಾರ್, ಶ್ರೀನಗರ ಕಿಟ್ಟಿ… ಹೀಗೆ ಬಹುತೇಕ ಎಲ್ಲಾ ಹೀರೋಗಳ ಜೊತೆ ನಟಿಸಿ ಮನ ಗೆದ್ದಳು. ಇದೇ ಸಂದರ್ಭದಲ್ಲಿ ಸುನೀಲ್ ಸಮೇತ ಅನೇಕ ಅಪರಿಚಿತ ಮತ್ತು ಉದಯೋನ್ಮುಖ ನಾಯಕರ ಜೊತೆ ಕೂಡಾ ಆಕೆ ನಟಿಸಿದಳು.

    ಇಷ್ಟೆಲ್ಲಾ ಯಾಕೆ ಹೇಳುತ್ತಿದ್ದೇವೆ ಎಂದರೆ, ಪೂಜಾ ಗಾಂಧಿ ನಟನೆಯಿಂದ ನಿರ್ಮಾಣಕ್ಕೆ ಜಾರಿದ್ದು ನಿಮಗೆಲ್ಲಾ ಗೊತ್ತಿರೋ ವಿಚಾರವೇ. ಅಭಿನೇತ್ರಿ ಸಿನಿಮಾವನ್ನು ಪೂಜಾ ನಿರ್ಮಿಸಿದ್ದರು. ನಂತರ ರಾವಣಿ ಎನ್ನುವ ಚಿತ್ರವನ್ನು ಆರಂಭಿಸಿದ್ದರೂ ಅದು ಟೇಕಾಫ್ ಆಗಲಿಲ್ಲ. ನಡುವೆ ಮತ್ತೆ ಬಂದ ಪೂಜಾ ಒಟ್ಟಿಗೇ ಮೂರು ಸಿನಿಮಾ ನಿರ್ಮಿಸುವುದಾಗಿ ಹೇಳಿಕೊಂಡಿದ್ದರು. ಭೂ, ಉದಾಹಿ ಮತ್ತು ಬ್ಲಾಕ್ ಅಂಡ್ ವೈಟ್ ಎನ್ನುವ ಚಿತ್ರಗಳನ್ನು ಆರಂಭಿಸಿದ್ದರು. ತೆಲುಗಿನ ಖ್ಯಾತ ನಟ ಜೆಡಿ ಚಕ್ರವರ್ತಿ ಈ ಮೂರೂ ಸಿನಿಮಾಗಳನ್ನು ನಿರ್ದೇಶಿಸಲಿದ್ದಾರೆ ಅಂತಾ ಹೇಳಿ ಸ್ವತಃ ಪೂಜಾ ಗಾಂಧಿ ಪ್ರೆಸ್ ಮೀಟ್ ಮಾಡಿದ್ದರು. ಇವು ಮೂರು ಸಿನಿಮಾಗಳ ಜೊತೆಗೆ ಇನ್ನೂ ಹತ್ತಾರು ಸಿನಿಮಾಗಳನ್ನು ಆರಂಭಿಸುವ ಪ್ಲಾನು ಮಾಡಿದ್ದೀನಿ ಅಂತಾ ಅಶೋಕ ಹೋಟೇಲಿನಲ್ಲಿ ಹೇಳಿದ್ದರು ಪೂಜಾ ಮೇಡಮ್ಮು.

    ಹತ್ತಾರು ಸಿನಿಮಾ ಇರಲಿ, ಆರಂಭಿಕವಾಗಿ ಶುರು ಮಾಡಿದ ಮೂರು ಸಿನಿಮಾಗಳು ಕೂಡಾ ಈಗ ಪೂರ್ಣ ಪ್ರಮಾಣದಲ್ಲಿ ಕಣ್ಮುಚ್ಚಿದ ಸುದ್ದಿ ಕೇಳಿಬರುತ್ತಿದೆ. ಅಸಲಿಗೆ ಜೆ.ಡಿ. ಚಕ್ರವರ್ತಿಗೂ ಪೂಜಾ ಗಾಂಧಿಗೂ ನಡುವಿನ ಸಂಬಂಧವೇ ಕಿತ್ತು ಹೋಗಿದೆ ಅನ್ನೋ ನ್ಯೂಸು ಕೂಡಾ ದಟ್ಟವಾಗಿ ಹಬ್ಬಿದೆ. ಎಂಟರ್‍ಟೈನ್ಮೆಂಟ್ ಫ್ಯಾಕ್ಟರಿಗೆ ಬೀಗ ಬಿದ್ದಿದ್ದಾರೂ ಯಾಕೆ? ಏನಿದೆಲ್ಲಾ? ಪೂಜಾ ಗಾಂಧಿ ಮೇಲಿಂದ ಮೇಲೆ ಯಾಕೆ ಇಂಥವೇ ಸೋಲುಗಳಿಗೆ ಸಿಲುಕುತ್ತಿದ್ದಾರೆ? ಈ ಪ್ರಶ್ನೆಗಳಿಗೆಲ್ಲಾ ಸ್ವತಃ ಪೂಜಾ ಅವರೇ ಉತ್ತರಿಸಬೇಕು!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv