ಅಂದು `ದಂಡು ಪಾಳ್ಯ’ ಸಿನಿಮಾದಲ್ಲಿ ನಿರ್ಭಯವಾಗಿ ಅಭಿನಯಿಸಿದ್ದವರು ಪೂಜಾ ಗಾಂಧಿ. ಈಗ ಪೂಜಾ ಗಾಂಧಿ `ಸಂಹಾರಿಣಿ’ ಎಂಬ ಸಾಹಸ ಪ್ರಧಾನ ಸಿನಿಮಾದಲ್ಲಿ ಅಭಿನಯಿಸಿದ್ದು, ಈ ಚಿತ್ರದ ಚಿತ್ರೀಕರಣವೀಗ ಸಂಪೂರ್ಣಗೊಂಡಿದೆ.
2 ಎಂ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ, ಕೆ ವಿ ಶಭರೀಶ್ ನಿರ್ಮಾಣ ಮಾಡಿರುವ, ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿರುವ ಈ ಚಿತ್ರವನ್ನು ಕೆ ಜವಾಹರ್ ನಿರ್ದೇಶನ ಮಾಡಿದ್ದಾರೆ.
ಬಾಲಿವುಡ್ ಸಿನಿಮಾಗಳ ಪ್ರಸಿದ್ಧ ಖಳ ನಟ ರಾಹುಲ್ ದೇವ್, ರವಿ ಕಾಳೆ, ಹ್ಯಾರಿ ಜೋಶ್ ಈ ಚಿತ್ರದಲ್ಲಿ ಖಳನಟರಾಗಿ ಪಾತ್ರ ನಿರ್ವಹಿಸಿದ್ದಾರೆ. ನಟ ಕಿಶೋರ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಚಿನ್ ಹಾಗೂ ಅರುಣ್ ಪೋಷಕ ಕಲಾವಿದರಾಗಿ ಅಭಿನಯಿಸಿದ್ದಾರೆ.
ಮಾಸ್ ಮಾದ ಸಾಹಸ, ಡಾ. ವಿ.ನಾಗೇಂದ್ರ ಪ್ರಸಾದ್ ಗೀತ ಸಾಹಿತ್ಯ, ಅಖಿಲ್ ಸಂಕಲನ, ವಿ 2 ಸಂಗೀತ ನಿರ್ದೇಶನ, ರಾಜೇಶ್ ಕುಮಾರ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಗಂಗಾಧರ್ ನಿರ್ಮಾಣ ನಿರ್ವಹಣೆ ಇರುವ ಈ ಚಿತ್ರದ ಪ್ರಚಾರ ಕಲೆ ಲಕ್ಕಿ, ಸ್ಥಿರ ಛಾಯಾಗ್ರಹಣ ಸುರೇಶ್ ಮೆರ್ಲಿನ್ ಅವರು ಮಾಡಿದ್ದಾರೆ.
ಬೆಂಗಳೂರು: ವಿಶಿಷ್ಟವಾದ ಶೀರ್ಷಿಕೆಯ ಕಾರಣದಿಂದಲೇ ಗಮನ ಸೆಳೆದು ಆ ನಂತರ ತನ್ನದೇ ಆದ ರೀತಿಯಲ್ಲಿ ಸದ್ದು ಮಾಡುತ್ತಾ ಬಂದಿದ್ದ ಖನನ ಚಿತ್ರ ತೆರೆ ಕಂಡಿದೆ. ಆರಂಭಿಕವಾಗಿ ಈ ಟೈಟಲ್ಲಿನ ಮೇಲೊಂದು ಕುತೂಹಲ ಹುಟ್ಟಿಕೊಂಡಿತ್ತಲ್ಲಾ? ಅದನ್ನು ನೂರ್ಮಡಿಸುವಂಥಾ ಅಮೋಘವಾದ ಕಥೆ, ಹೊಸಾ ಶೈಲಿಯ ನಿರೂಪಣೆ ಮತ್ತು ಕ್ಷಣ ಕ್ಷಣವೂ ಬೆರಗಾಗಿಸುವಂಥಾ ಕಸುಬುದಾರಿಕೆಯೊಂದಿಗೆ ಖನನ ನೋಡುಗರನ್ನೆಲ್ಲ ಮೋಡಿಗೀಡು ಮಾಡುವಲ್ಲಿ ಯಶ ಕಂಡಿದೆ.
ಸಸ್ಪೆನ್ಸ್ ಥ್ರಿಲ್ಲರ್ ಮತ್ತು ರಿವೆಂಜ್ ಕಥನಗಳೇನು ಕನ್ನಡಕ್ಕೆ ಹೊಸತಲ್ಲ. ಆದರೆ ಹೊಸಾ ಆಲೋಚನೆ, ಕ್ರಿಯೇಟಿವಿಟಿ ಮತ್ತು ಹೊಸತೇನನ್ನೋ ಸೃಷ್ಟಿಸಬೇಕೆಂಬ ಇಂಗಿತವೇ ಮಾಮೂಲಾಗಿ ದಾಖಲಾಗ ಬಹುದಾದ ಕಥೆಯನ್ನು ಡಿಫರೆಂಟಾಗಿಸುತ್ತದೆ. ಇದೇ ರೀತಿ ನಿರ್ದೇಶಕ ರಾಧಾ ಅವರು ಖನನವನ್ನು ಮಾಮೂಲಿ ಜಾಡಿನಲ್ಲಿ ಕಳೆದು ಹೋಗದಂತೆ ಪ್ರತೀ ಕ್ಷಣವೂ ಎಚ್ಚರ ವಹಿಸುತ್ತಲೇ ರೂಪಿಸಿದ್ದಾರೆ. ನಾಯಕ ಆರ್ಯವರ್ಧನ್ ಸೇರಿದಂತೆ ತಾರಾ ಬಳಗ ಮತ್ತು ತಾಂತ್ರಿಕ ವರ್ಗವೂ ರಾಧಾರ ಕನಸಿಗೆ ಸಾಥ್ ನೀಡಿದ್ದಾರೆ. ಈ ಕಾರಣದಿಂದಲೇ ಖನನ ಪ್ರೇಕ್ಷಕರನ್ನೆಲ್ಲ ಹೊಸ ಜಾಡಿನಲ್ಲಿಯೇ ತಾಕಿ ಮುದಗೊಳಿಸಿದೆ.
ಆರ್ಯವರ್ಧನ್ ಅಜಯ್ ಎಂಬ ಪಾತ್ರಕ್ಕೆ ಜೀವ ತುಂಬಿದರೆ, ನಾಯಕಿ ಕರಿಷ್ಮಾ ಬರುಹಾ ನೈನಾ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಕಥೆ ಆರಂಭದಲ್ಲಿ ರೊಮ್ಯಾಂಟಿಕ್ ಮೂಡಿನಲ್ಲಿಯೇ ಬಿಚ್ಚಿಕೊಳ್ಳುತ್ತೆ. ನಾಯಕ ಅಜೇಯ್ ಚಿಕ್ಕ ವಯಸ್ಸಿನಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡು ಅನಾಥ ಪ್ರಜ್ಞೆ ತುಂಬಿಕೊಂಡು ಬೆಳೆದ ಹುಡುಗ. ಆತನಿಗೆ ನೈನಾ ಜೊತೆಯಾಗಿ ಎಲ್ಲವೂ ಸುಂದರವಾಗಿರುತ್ತೆ. ನಾಯಕನ ಪಾಲಿಗೆ ತನ್ನನ್ನು ಆರ್ಥಿಕವಾಗಿ ತಲೆ ಎತ್ತಿ ನಿಲ್ಲುವಂತೆ ಮಾಡಿದ ಬ್ಯುಸಿನೆಸ್ ಮತ್ತು ಮುದ್ದಿನ ಮಡದಿಯೇ ಪ್ರಪಂಚ. ಆದರೆ ಹೆಂಡತಿ ಮಾತ್ರ ಮೆಲ್ಲಗೆ ಗಂಡನಿಂದ ದೂರ ಸರಿಯಲಾರಂಭಿಸುತ್ತಾಳೆ. ಆಕೆ ಗಂಡನ ಪ್ರಾಂಜಲ ಪ್ರೀತಿಯೂ ಉಸಿರುಗಟ್ಟಿಸಿದಂತಾಗಿ ಕೊಸರಾಡಲಾರಂಭಿಸುತ್ತಾಳೆ.
ಇದಕ್ಕೆ ಕಾರಣ ಆಕೆಯ ಪ್ರಪಂಚಕ್ಕೆ ಎಂಟ್ರಿ ಕೊಟ್ಟ ಪರ ಪುರುಷ. ಈ ಅನೈತಿಕ ಸಂಬಂಧದಿಂದಲೇ ಕಥೆಯ ದಿಕ್ಕು ದೆಸೆಗಳೇ ಬದಲಾಗುತ್ತೆ. ಆ ಪರಪುರುಷನಿಗೆ ಕೇವಲ ನೈನಾ ಮೇಲಷ್ಟೇ ಮೋಹವಿರೋದಿಲ್ಲ, ಆಕೆಯ ಗಂಡ ಅಂದರೆ ನಾಯಕನ ಆಸ್ತಿಯ ಮೇಲೂ ಕಣ್ಣಿರುತ್ತೆ. ಆದ್ದರಿಂದಲೇ ಆತನನ್ನು ಕೊಲ್ಲುವಂತೆ ಪ್ರೇಯಸಿಗೆ ದುಂಬಾಲು ಬೀಳುತ್ತಿರುತ್ತಾನೆ. ಮೋಹಕ್ಕೆ ಬಿದ್ದ ಈಕೆ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸೋ ಗಂಡನನ್ನು ಕೊಲೆ ಮಾಡಲೂ ಮುಂದಾಗುತ್ತಾಳೆ. ಆ ನಂತರ ಏನಾಗುತ್ತೆ ಎಂಬ ಕುತೂಹಲವನ್ನು ಥೇಟರಿನಲ್ಲಿಯೇ ಶಮನ ಮಾಡಿಕೊಂಡರೊಳಿತು. ಈ ಕುತೂಹಲವಿಟ್ಟುಕೊಂಡು ಥೇಟರು ಹೊಕ್ಕವರನ್ನೆಲ್ಲ ಖನನದ ಕಥೆ ಬೇರೆಯದ್ದೇ ರೀತಿಯಲ್ಲಿ ಕಾಡುತ್ತದೆ. ಮೋಹದ ಮಬ್ಬಿನಲ್ಲಿ ಕಡೆಯಾದರೂ ಮನುಷ್ಯತ್ವ ಬದುಕಿಕೊಳ್ಳುತ್ತಾ ಅನ್ನೋದು ಪ್ರಧಾನ ಆಕರ್ಷಣೆ.
ಈ ಮೂಲಕ ರಾಧಾ ಅವರು ನಿರ್ದೇಶಕರಾಗಿಯೂ ಗಮನ ಸೆಳೆದಿದ್ದಾರೆ. ನಾಯಕ ಆರ್ಯವರ್ಧನ್ ಮೊದಲ ಚಿತ್ರದಲ್ಲಿಯೇ ಚೆಂದದ ನಟನೆ ಕೊಟ್ಟಿದ್ದಾರೆ. ಹೀರೋ ಆಗಿ ನೆಲೆ ನಿಲ್ಲುವ ಸೂಚನೆಯನ್ನೂ ರವಾನಿಸಿದ್ದಾರೆ. ನಿರ್ಮಾಪಕ ಶ್ರೀನಿವಾಸ ರಾವ್ ಅವರ ಶ್ರಮವೂ ಸಾರ್ಥಕವಾದಂತಾಗಿದೆ. ಒಟ್ಟಾರೆಯಾಗಿ ಖನನ ಬೇರೆಯದ್ದೇ ರೀತಿಯ ಥ್ರಿಲ್ಲರ್ ಅನುಭವವೊಂದನ್ನು ನೋಡುಗರಿಗೆ ದಾಟಿಸುತ್ತೆ. ಅಪ್ಪಟ ಮನರಂಜನಾತ್ಮಕ ಚಿತ್ರವಾಗಿ ಗಮನ ಸೆಳೆಯುತ್ತೆ.
ಸಾಮಾಜಿಕ ಕಳಕಳಿ ಇರುವ ಚಿತ್ರ `ಜಕಣಾಚಾರಿ ಅವನ ತಮ್ಮ ಶುಕ್ಲಾಚಾರಿ’ ಮೇ 10ಕ್ಕೆ ಬಿಡುಗಡೆಯಾಗಲಿದೆ. ವಿಶೇಷ ಚೇತನರು ಸೇರಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ನಿರ್ಮಾಪಕ ಎಚ್ ಸೋಮಶೇಖರ್ ಅವರ ಹೆತ್ತವರು ಅಂಗವೈಕಲ್ಯ ಹೊಂದಿದವರು. ನಿರ್ದೇಶಕ ರಾಜ ರವಿ ವರ್ಮಾ ಸಹಾ ವಿಕಲಚೇತನರಾಗಿದ್ದಾರೆ. ಚಿತ್ರದ ಪ್ರಮುಖ ಪಾತ್ರಧಾರಿಗಳಲ್ಲಿ ಭೋಗಪುರದ ಅಂಧ ಬಾಲಕ ಮಾಸ್ಟರ್ ಮಹೇಶ್ ಶುಕ್ಲಾಚಾರಿ ಪಾತ್ರಧಾರಿಯಾಗಿದ್ದಾನೆ. ಜಕಣಾಚಾರಿ ಪಾತ್ರಧಾರಿಯಾಗಿರುವ ಲಿಂಗರಾಜಪುರದ ಹುಡುಗ ಮಾಸ್ಟರ್ ಜಯ್ಯದ್ ಕೂಡಾ ವಿಶೇಷಚೇತನರಾಗಿದ್ದಾರೆ.
ನಿರ್ದೇಶಕ ರಾಜ ರವಿ ವರ್ಮಾ ಈ ಚಿತ್ರಕ್ಕೆ `ಎಂಡೋಸಲ್ಫಾನ್’ ವಿಷ ರಾಸಾಯನಿಕದಿಂದ ಅಂಗವೈಕಲ್ಯಕ್ಕೆ ತುತ್ತಾಗಿರುವವರ ಗಂಭೀರ ವಿಚಾರವನ್ನು ಪ್ರಧಾನವಾಗಿಟ್ಟುಕೊಂಡು ಕಥೆ, ಚಿತ್ರಕಥೆ ರಚಿಸಿದ್ದಾರೆ. ಮಾಸ್ಟರ್ ವಿನಯ್ ಸೂರ್ಯ, ಮಾಸ್ಟರ್ ಕಿರಣ್, ಮುನಿ, ಮೂಗು ಸುರೇಶ್, ನೀನಾಸಮ್ ಅಶ್ವಥ್, ಮನದೀಪ್ ರಾಯ್, ಗಿರೀಶ್ ಶೆಟ್ಟಿ, ಶಿವು, ಮೀನ, ಪಂಕಜ ರವಿಶಂಕರ್, ಮಂಜು ಸೂರ್ಯ ಹಾಗೂ ಇತರರು ತಾರಾಗಣದಲ್ಲಿದ್ದಾರೆ.
ರಾಜ್ ಪ್ರಿಯ ಪ್ರೊಡಕ್ಷನ್ ಅಡಿಯಲ್ಲಿ ತಯಾರಾಗಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಎ ರಾಮು. ಸಾಮ್ರಾಟ್ ಎಸ್ ಛಾಯಾಗ್ರಹಣ, ಸಿ ಜೆ ಅನಿಲ್ ಸಂಗೀತ, ಡಾ ವಿ.ನಾಗೇಂದ್ರ ಪ್ರಸಾದ್ ಮತ್ತು ರಾಜ ರವಿ ವರ್ಮ ಗೀತ ಸಾಹಿತ್ಯ ಒದಗಿಸಿದ್ದಾರೆ.
ಎರಡು ವರ್ಷದ ಹಿಂದೆ ಮುಹೂರ್ತ ಆಚರಿಸಿಕೊಂಡಿದ್ದ ‘ಸುವರ್ಣ ಸುಂದರಿ’ ಚಿತ್ರ ಬಿಡುಗಡೆ ಹಂತಕ್ಕೆ ಬಂದಿದೆ. ಕ್ರಿ.ಶ. 1508 ರಿಂದ 2018ರವರೆಗಿನ ನಾಲ್ಕು ತಲೆಮಾರಿನ ಕತೆ ಈ ಚಿತ್ರದಲ್ಲಿದೆ. ಶ್ರೀ ಕೃಷ್ಣದೇವರಾಯರ ಅವಧಿಯಲ್ಲಿ ರಾಜಾ ಮಹಾದೇವರೆಡ್ಡಿ ಸಾಮ್ರಾಜ್ಯದಲ್ಲಿ ನಡೆದ ಘಟನೆಗಳನ್ನು ಈ ಚಿತ್ರದ ಸನ್ನಿವೇಶಗಳಿಗೆ ವಿಶೇಷವಾಗಿ ಬಳಸಲಾಗಿದೆ.
ಮೈ ನವಿರೇಳಿಸುವ ರೋಚಕ ಸ್ಟಂಟ್ಸ್ ಗಳು ಈ ಚಿತ್ರದಲ್ಲಿರಲಿವೆ. ಸುವರ್ಣ ಸುಂದರಿಗಾಗಿ ಕೇರಳ, ಹೈದರಾಬಾದ್, ಬೀದರ್, ವಿಧಾನಸೌಧ ರಸ್ತೆ, ನೈಸ್ ರೋಡ್‍ಗಳಲ್ಲಿ 90 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಕತೆಗೆ ಪೂರಕವಾಗಿ 50 ನಿಮಿಷ ಗ್ರಾಫಿಕ್ಸ್ ಬಳಸಲಾಗಿದೆ. ನಾಯಕಿಯಾಗಿ ಡೆಹರಾಡೂನ್ ಮೂಲದ ಸಾಕ್ಷಿ ಎರಡು ಗೆಟಪ್‍ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಾರಂಭದ ಅವಧಿಯಲ್ಲಿ ಸಾಯಿಕುಮಾರ್ ಪಾತ್ರವಿರುತ್ತದೆ. ಹಾಗೆಯೇ 1960ರ ಕಲೆಕ್ಟರ್ ಪಾತ್ರದಲ್ಲಿ ತಿಲಕ್ ನಟಿಸಿದ್ದಾರೆ. ಮತ್ತೊಬ್ಬ ನಾಯಕಿ ಪೂರ್ಣ ಮತ್ತು ಜಯಪ್ರದಾ ಪಾತ್ರದ ವಿವರವನ್ನು ಚಿತ್ರತಂಡ ಇನ್ನೂ ಜಾಹೀರು ಮಾಡಿಲ್ಲ. ಈ ಚಿತ್ರದಲ್ಲಿರುವ ಎರಡು ಹಾಡುಗಳಿಗೆ ಸಾಯಿಕಾರ್ತಿಕ್ ಸಂಗೀತ ಸಂಯೋಜಿಸಿದ್ದಾರೆ.
ಇತಿಹಾಸ ವಿಷಯದಲ್ಲಿ ಪದವಿ ಪಡೆದುಕೊಂಡಿರುವ ಎಂ.ಎಸ್.ಎನ್.ಸೂರ್ಯ ಕತೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಅವರ ಸಹೋದರಿ ನಿರ್ಮಾಪಕಿಯಾಗಿದ್ದಾರೆ. ಬಾಹುಬಲಿ-2 ಚಿತ್ರದ ಸೆಕೆಂಡ್ ಕ್ಯಾಮರಾಮೆನ್ ಯಲ್ಲಮಹಂತಿ ಈಶ್ವರ್ ಛಾಯಾಗ್ರಹಣವಿದ್ದು, ರಾಮ್ ಸುಂಕರ ಸಾಹಸ ಸಂಯೋಜಿಸಿದ್ದಾರೆ.
ಅನುಷ್ಕಾ ಶೆಟ್ಟಿ ಅಭಿನಯದ ಆರುಂಧತಿ ನಿರ್ಮಾಣದ ಸಂದರ್ಭದಲ್ಲಿ ತಂತ್ರಜ್ಞಾನ ಈಗಿನಷ್ಟು ಮುಂದುವರಿದಿರಲಿಲ್ಲ. ಆದರೆ ಸುವರ್ಣ ಸುಂದರಿಗೆ ಈಗಿನ ಅಪ್‍ಡೇಟೆಡ್ ಟೆಕ್ನಾಲಜಿಯನ್ನು ಬಳಸಿಕೊಂಡಿರುವುದರಿಂದ ದೃಶ್ಯಗಳು ಮತ್ತಷ್ಟು ನೈಜವಾಗಿ ಮೂಡಿಬಂದಿವೆ. ಇದೆಲ್ಲದರ ಪರಿಣಾಮವೆನ್ನುವಂತೆ ಆರು ಕೋಟಿಯಲ್ಲಿ ನಿರ್ಮಾಣಗೊಳ್ಳಬೇಕಿದ್ದ ಸುವರ್ಣ ಸುಂದರಿ ಪ್ರಚಾರದ ಹಂತಕ್ಕೆ ಬರುವ ಹೊತ್ತಿಗೆ ಹತ್ತು ಕೋಟಿಗೆ ಬಂದು ನಿಂತಿದೆಯಂತೆ. ಆದರೂ ಇದಕ್ಕೆಲ್ಲಾ ಚಿಂತೆ ಮಾಡದೆ ಎಂ.ಎನ್.ಲಕ್ಷೀ ಖರ್ಚು ಮಾಡಿದ್ದಾರೆ. ಈ ಚಿತ್ರವು ಇದೇ 31ರಂದು ರಾಜ್ಯದ್ಯಂತ ತೆರೆ ಕಾಣುವ ಸಾಧ್ಯತೆ ಇದೆ.
ಬೆಂಗಳೂರು: ಇದೀಗ ಖನನ ಎಂಬ ವಿಶಿಷ್ಟವಾದ ಟೈಟಲ್ ಹೊಂದಿರೋ ಚಿತ್ರವೊಂದು ಎಲ್ಲೆಡೆ ಸದ್ದು ಮಾಡುತ್ತಿದೆ. ಹೆಸರು ಕೇಳಿದಾಕ್ಷಣವೇ ಇದು ಯಾವ ಬಗೆಯ ಚಿತ್ರ, ಆರ್ಟ್ ಮೂವಿಯಾ ಅಂತೆಲ್ಲ ನಾನಾ ಪ್ರಶ್ನೆಗಳಿಗೆ ಕಾರಣವಾಗೋ ಖನನ ಅಪ್ಪಟ ಕಮರ್ಶಿಯಲ್ ಸೂತ್ರಗಳೊಂದಿಗೆ ಬಿಡುಗಡೆಗೆ ಸಜ್ಜಾಗಿರೋ ಚಿತ್ರ. ಇದೇ ಮೇ ತಿಂಗಳಲ್ಲಿ ರಿಲೀಸ್ ಆಗಲಿರುವ ಖನನ ತನ್ನೊಳಗೆ ಅನೇಕ ನಿಗೂಢಗಳನ್ನು ಬಚ್ಚಿಟ್ಟುಕೊಂಡಿದೆ.
ರಾಧಾ ನಿರ್ದೇಶನ ಮಾಡಿರೋ ಖನನ ಮೂಲಕ ಹೀರೋ ಆಗಿ ಎಂಟ್ರಿ ಕೊಡಲು ಆರ್ಯವರ್ಧನ್ ಸಜ್ಜಾಗಿದ್ದಾರೆ. ಈಗಾಗಲೇ ಮಾರ್ಚ್ 22 ಚಿತ್ರದ ಸಲ್ಮಾನ್ ಎಂಬ ಪಾತ್ರದ ಮೂಲಕ ಪ್ರತಿಭಾವಂತ ನಟನಾಗಿ ಗುರುತಿಸಿಕೊಂಡಿರೋ ಆರ್ಯವರ್ಧನ್ ಪಾಲಿಗೆ ಹೀರೋ ಆಗಿ ಇದು ಮೊದಲ ಚಿತ್ರ. ತಾನು ಹೀರೋ ಆಗಿ ಲಾಂಚ್ ಆಗೋ ಚಿತ್ರ ವಿಶೇಷ ಕಥೆ ಹೊಂದಿರಬೇಕು ಮತ್ತು ಅದು ಸಂದೇಶವನ್ನೂ ಕೂಡಾ ರವಾನಿಸುವಂತಿರಬೇಕು ಅನ್ನೋದು ಆರ್ಯವರ್ಧನ್ ಅವರ ಆಳದ ಕನಸು. ಅದಕ್ಕೆ ತಕ್ಕುದಾದ ಕಥೆಯನ್ನು ಖನನ ಒಳಗೊಂಡಿದೆಯಂತೆ.
ಇದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ನೋಡಿದವರನ್ನೆಲ್ಲ ಅಚ್ಚರಿಗೀಡು ಮಾಡಲಿರೋ ಇದರಲ್ಲಿ ಆರ್ಯವರ್ಧನ್ ಹಲವಾರು ಶೇಡುಗಳಿರೋ ಪಾತ್ರದಲ್ಲಿ ನಟಿಸಿದ್ದಾರೆ. ಈ ಪಾತ್ರವೇ ಎಲ್ಲರಿಗೂ ಬದುಕಿನ ಕೆಲ ಗುಟ್ಟುಗಳನ್ನು ಹೇಳುವಂತಿದೆ. ಪ್ರತಿಕ್ಷಣವೂ ಕುತೂಹಲ ಆಚೀಚೆ ಆಗದಂತೆ ಬಿಚ್ಚಿಕೊಳ್ಳುತ್ತಾ ಸಾಗಲಿರೋ ಈ ಚಿತ್ರದಲ್ಲಿ ಹೀರೋ ಪ್ರೇಕ್ಷಕರೊಂದಿಗೆ ನೇರಾ ನೇರ ಕನೆಕ್ಟ್ ಆಗುತ್ತಾನೆ. ಅದೇ ಹೊತ್ತಲ್ಲಿ ಪ್ರೇಕ್ಷಕರಿಗೇನೋ ಹೇಳಲಿದ್ದಾನೆ. ಆ ರೋಚಕ ವಿಚಾರವೇನು ಅನ್ನೋದು ಇದೇ ಮೇ 10ರಂದು ಜಾಹೀರಾಗಲಿದೆ.
ಬೆಂಗಳೂರು: ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪೆನಿಯಲ್ಲಿ ಗೌರವಾನ್ವಿತ ಕೆಲಸ. ತಿಂಗ ತಿಂಗಳು ಕೈ ಸೇರೋ ದೊಡ್ಡ ಮೊತ್ತದ ಸಂಬಳ. ಆರ್ಥಿಕವಾಗಿ ಬದುಕಿಗೆ ಯಾವ ತತ್ವಾರವೂ ಇಲ್ಲ ಎಂಬಂಥಾ ನಿರಾಳ ಸ್ಥಿತಿಗತಿ… ಇದು ಬಹುತೇಕರು ಕಲ್ಪಿಸಿಕೊಳ್ಳುವ ಸ್ವರ್ಗದಂಥಾ ಬದುಕಿನ ಚಿತ್ರ. ಆದರೆ ಅದೆಲ್ಲವೂ ದಕ್ಕಿದರೂ ಕೂಡಾ ಬೇರೇನನ್ನೋ ಧ್ಯಾನಿಸುವಂಥಾ ಮನಸುಗಳೂ ನಮ್ಮ ನಡುವಲ್ಲಿವೆ. ಈ ಥರದ ಧ್ಯಾನವೆಲ್ಲ ಬಹುಪಾಲು ಸಿನಿಮಾ ಕೇಂದ್ರಿತವಾದದ್ದೆಂಬುದು ಗೊತ್ತಿರೋ ವಿಚಾರವೇ. ಹಾಗೆ ಸಾಫ್ಟ್‌ವೇರ್ ಲೋಕದಿಂದ ಬಂದು ಚಿತ್ರರಂಗಕ್ಕೆ ಹೊಸಾ ಆಲೋಚನೆಯನ್ನು ಹೊತ್ತುತಂದ ಅನೇಕರಿದ್ದಾರೆ. ಆ ಸಾಲಿನಲ್ಲಿ ಇದೀಗ ಬಿಡುಗಡೆಗೆ ಸಜ್ಜುಗೊಂಡಿರುವ ರತ್ನಮಂಜರಿ ಚಿತ್ರದ ನಿರ್ದೇಶಕ ಪ್ರಸಿದ್ಧ್ ಕೂಡಾ ಅನಾಯಾಸವಾಗಿಯೇ ಸೇರ್ಪಡೆಗೊಳ್ಳುತ್ತಾರೆ.
ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದಿರುವ ಪ್ರಸಿದ್ಧ್ ಅವರ ಪಾಲಿಗೆ ಆರಂಭದಿಂದಲೂ ಸಿನಿಮಾ ಅಂದರೆ ಅದೇನೋ ಆಸಕ್ತಿ. ಆದರೆ ಅಲ್ಲಿ ಇಂಥಾದ್ದೇ ಕೆಲಸ ಮಾಡಬೇಕೆಂಬ ಇರಾದೆಯೇನೂ ಇರಲಿಲ್ಲ. ಕರಾಟೆಪಟುವೂ ಆಗಿರೋ ಅವರು ಅದರಲ್ಲಿ ಬ್ಲಾಕ್ ಬೆಲ್ಟ್ ಹಂತವನ್ನೂ ತಲುಪಿಕೊಂಡಿದ್ದವರು. ಅವರು ಡ್ಯಾನ್ಸ್ ಕೊರಿಯೋಗ್ರಾಫರ್ ಕೂಡಾ ಹೌದು. ಅನೇಕರಿಗೆ ನೃತ್ಯ ಹೇಳಿಕೊಟ್ಟ ತೃಪ್ತಿಯೂ ಅವರಲ್ಲಿದೆ. ಸಾಫ್ಟ್ ವೇರ್ ವಲಯದಲ್ಲಿಯೂ ಅವರಿಗೆ ಗ್ರಾಫಿಕ್ಸ್, ಆನಿಮೇಷನ್ ವಿಭಾಗದ ಕೆಲಸವೇ ಸಿಕ್ಕಿತ್ತು. ಇದು ಅವರೊಳಗೆ ಸುಪ್ತವಾಗಿದ್ದ ಸಿನಿಮಾ ಕನಸನ್ನು ಮತ್ತಷ್ಟು ನಿಗಿ ನಿಗಿಸುವಂತೆ ಮಾಡಿದ್ದದ್ದು ಸುಳ್ಳಲ್ಲ.
ಹೀಗೆಯೇ ಒಳಗೊಳಗೆ ಸಿನಿಮಾ ಕನಸನ್ನು ಸಾಕಿಕೊಂಡಿದ್ದ ಅವರು ಕಡೆಗೂ ದೃಢ ನಿರ್ಧಾರ ಮಾಡಿ ಸ್ಟೋರಿ ರೈಟರ್ ಅವತಾರದಲ್ಲಿ ಚಿತ್ರರಂಗದ ಪಡಸಾಲೆಗೆ ಅಡಿಯಿರಿಸಿದ್ದರು. ಅದಾಗಲೇ ಸಾಕಷ್ಟು ಕಥೆಗಳನ್ನು ಸಿದ್ಧಪಡಿಸಿಕೊಂಡಿದ್ದ ಅವರು ಮೊದಲು ಕಥೆ ಹೇಳಿದ್ದು ನಾದಬ್ರಹ್ಮ ಹಂಸಲೇಖಾ ಅವರ ಮುಂದೆ. ಹಂಸಲೇಖಾ ಕೂಡಾ ಪ್ರಸಿದ್ಧ್ ಒಳಗಿರೋ ಕಥೆಯ ಕಸುವನ್ನು ಗುರುತಿಸಿ ಪ್ರೋತ್ಸಾಹಿಸಿದ್ದರು. ಅವರೇ ಶಿವರಾಜ್ ಕುಮಾರ್ ಅವರಲ್ಲಿಗೂ ಕಳಿಸಿದ್ದರು. ಪ್ರಸಿದ್ಧ್ ಶಿವಣ್ಣನಿಗೂ ಕಥೆ ಹೇಳಿದ್ದರಾದರೂ ಕಾರಣಾಂತರಗಳಿಂದ ಆ ಕನಸು ಕೈಗೂಡಿರಲಿಲ್ಲ.
ಆ ನಂತರವೂ ಸಿನಿಮಾ ಮಾಡೋ ಗುಂಗಲ್ಲಿ ಅನೇಕರನ್ನು ಸಂಪರ್ಕಿಸಿದ್ದರಾದರೂ ಅದಕ್ಕೆ ಕಾಲ ಕೂಡಿ ಬಂದಿರಲಿಲ್ಲ. ಹೀಗೆಯೇ ನಿರಾಸೆಯಾದರೂ ಸೈರಿಸಿಕೊಂಡು ಮುಂದುವರೆಯುತ್ತಿದ್ದ ಪ್ರಸಿದ್ಧ ಅವರಿಗೆ ಕಡೆಗೂ ಸಿಕ್ಕಿದ್ದವರು ಎನ್ ಆರ್ ಐ ನಟರಾಜ್ ಹಳೆಬೀಡು. ಅವರೊಂದಿಗೆ ಸಿನಿಮಾ ಬಗ್ಗೆ ಚರ್ಚಿಸುತ್ತಾ ರತ್ನಮಂಜರಿ ಕಥೆ ಹುಟ್ಟಿಕೊಂಡಿತ್ತು. ತದನಂತರ ಡಾ. ನವೀನ್ ಮತ್ತು ಸಂದೀಪ್ ಕೂಡಾ ನಿರ್ಮಾಣಕ್ಕೆ ಜೊತೆಯಾಗೋ ಮೂಲಕ ಪ್ರಸಿದ್ಧ್ ಕನಸಿಗೆ ದೊಡ್ಡ ಮಟ್ಟದಲ್ಲಿಯೇ ಶುಭಾರಂಭ ದೊರೆತಿತ್ತು.
ಆ ನಂತರದಲ್ಲಿ ಛಾಯಾಗ್ರಾಹಕ ಪ್ರೀತಂ ತೆಗ್ಗಿನ ಮನೆ ಸೇರಿದಂತೆ ತಮ್ಮ ಕನಸಿಗೆ ಪೂರಕವಾದ ತಂತ್ರಜ್ಞರ ತಂಡವೇ ಪ್ರಸಿದ್ಧ್ ಅವರಿಗೆ ಸಿಕ್ಕಿತ್ತು. ನೋಡ ನೋಡುತ್ತಲೇ ಸಿನಿಮಾವನ್ನೇ ಉಸಿರಾಡೋ ಅಚ್ಚುಕಟ್ಟಾದೊಂದು ತಂಡವೂ ಸಾಥ್ ನೀಡಿತ್ತು. ಇದರಿಂದಾಗಿಯೇ ಯಾವ ಅಡೆತಡೆಯೂ ಇಲ್ಲದೇ ಈ ಚಿತ್ರ ಅಂದುಕೊಂಡಂತೆಯೇ ರೂಪುಗೊಂಡಿದೆಯಂತೆ. ಈ ಮೂಲಕ ಪ್ರಸಿದ್ಧ್ ಬಹುಕಾಲದ ಕನಸೊಂದು ಮೋಹಕವಾಗಿಯೇ ನನಸಾದ ಖುಷಿಯಲ್ಲಿದ್ದಾರೆ. ಕಥೆಯ ವಿಚಾರದಲ್ಲಿ, ತಾಂತ್ರಿಕವಾಗಿ ಹೊಸತನ ಹೊಂದಿರೋ ಈ ಚಿತ್ರ ಇದೇ ಮೇ ತಿಂಗಳಲ್ಲಿ ಅದ್ಧೂರಿಯಾಗಿಯೇ ಬಿಡುಗಡೆಯಾಗುತ್ತಿದೆ.
ಬೆಂಗಳೂರು: ಅಚ್ಚುಕಟ್ಟಾದ ಕಂಟೆಂಟ್ ಹೊಂದಿರುವ ಹೊಸತನದ ಚಿತ್ರಗಳನ್ನು ಕನ್ನಡದ ಪ್ರೇಕ್ಷಕರು ಯಾವತ್ತಿದ್ದರೂ ಗೆಲ್ಲಿಸಿಯೇ ತೀರುತ್ತಾರೆ. ಅದರಲ್ಲಿಯೂ ಹೊಸಾ ಪ್ರಯೋಗಗಳಿಗಂತೂ ಪ್ರೇಕ್ಷಕರ ಪ್ರೋತ್ಸಾಹ ಸದಾ ಇದ್ದೇ ಇರುತ್ತದೆ. ಈ ನಿಟ್ಟಿನಲ್ಲಿ ನೋಡ ಹೋದರೆ ಆರ್ಯವರ್ಧನ್ ನಾಯಕರಾಗಿ ನಟಿಸಿರುವ ಖನನ ಚಿತ್ರದ ಗೆಲುವು ನಿಚ್ಚಳವಾಗಿದೆ!
ಶೀರ್ಷಿಕೆಯ ಬಗ್ಗೆಯೇ ಪ್ರೇಕ್ಷಕರು ಆಕರ್ಷಿತರಾಗಿ ತಲೆ ಕೆಡಿಸಿಕೊಳ್ಳುವಂತೆ ಮಾಡುವಂಥಾ ಟ್ರೆಂಡ್ ಇತ್ತೀಚೆಗೆ ಶುರುವಾಗಿದೆ. ಹುಡುಕಿದರೆ ಬಹಳಷ್ಟು ಅರ್ಥವತ್ತಾದ ವಿಚಾರಗಳನ್ನು ಹೊಮ್ಮಿಸುವಂಥಾ ಶೀರ್ಷಿಕೆಗಳೂ ಹಲವಾರಿವೆ. ಖನನ ಕೂಡಾ ಅದೇ ಥರದ ಸಮ್ಮೋಹಕ ಶೀರ್ಷಿಕೆ ಹೊಂದಿರುವ ಚಿತ್ರ.
ಖನನ ಎಂಬುದು ಸಂಸ್ಕೃತ ಪದ. ಇದರ ಅರ್ಥಕ್ಕೆ ತಕ್ಕುದಾದ ಕಥೆಯನ್ನೂ ಈ ಚಿತ್ರ ಹೊಂದಿದೆ. ಸಸ್ಪೆನ್ಸ್ ಥ್ರಿಲ್ಲರ್ ಜಾನರಿನ ಖನನ ಪಕ್ಕಾ ಕಮರ್ಶಿಯಲ್ ಮಾದರಿಯಲ್ಲಿಯೇ ತಯಾರಾಗಿದೆ. ನಿರ್ದೇಶಕ ರಾಧಾ ಹೇಳಿ ಕೇಳಿ ತೆಲುಗು ಚಿತ್ರರಂಗದಲ್ಲಿ ಪಳಗಿಕೊಂಡಿರುವವರು. ಭಾರೀ ಬಜೆಟ್ಟಿನ ಸೂಪರ್ ಹಿಟ್ ಚಿತ್ರಗಳಿಗೂ ಕೆಲಸ ಮಾಡಿರುವವರು. ಆದ್ದರಿಂದಲೇ ಕನ್ನಡಕ್ಕೆ ತುಂಬಾ ಅಪರೂಪವಾಗಿರೋ ಖನನ ಕಥೆಯನ್ನವರು ಕಮರ್ಶಿಯಲ್ ರೂಪದಲ್ಲಿಯೇ ಕಟ್ಟಿ ಕೊಟ್ಟಿದ್ದಾರಂತೆ.
ಇಲ್ಲಿಯ ಕಥೆ ಬರೀ ಕಲ್ಪನೆಯ ಮೂಸೆಯಲ್ಲಿ ಅರಳಿಕೊಂಡಿರೋದಲ್ಲ. ಬದುಕಿಗೆ ಹತ್ತಿರವಾದ, ಗೊಂದಲದ ಸಿಕ್ಕು ಬಿಡಿಸುತ್ತಲೇ ಥರ ಥರದ ಸಾಕ್ಷಾತ್ಕಾರ ಮಾಡಿಸುವಂಥಾ ತಿರುಳನ್ನು ಹೊಂದಿದೆಯಂತೆ. ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂಥಾ ಈ ಕಥೆ ಥೇಟರಿನಿಂದ ಹೊರಬಂದ ನಂತರವೂ ಪ್ರೇಕ್ಷಕರನ್ನು ಬಿಟ್ಟೂ ಬಿಡದಂತೆ ಕಾಡುವಂತಿದೆಯಂತೆ.
ಖನನ ಚಿತ್ರದಲ್ಲಿ ಅಂಥಾದ್ದೇನಿದೆ ಅನ್ನೋದು ಮುಂದಿನ ತಿಂಗಳು ಖಂಡಿತಾ ಜಾಹೀರಾಗಲಿದೆ. ಯಾಕೆಂದರೆ ಮೇ ತಿಂಗಳಲ್ಲಿ ಈ ಚಿತ್ರ ಕನ್ನಡವೂ ಸೇರಿದಂತೆ ಮೂರು ಭಾಷೆಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.
ಬೆಂಗಳೂರು: ಬೇಗನೆ ಹೆಚ್ಚು ಹೆಚ್ಚು ಚಿತ್ರಗಳಲ್ಲಿ ನಟಿಸುತ್ತಾ ಮುಖ್ಯ ನಾಯಕಿಯಾಗಿ ನೆಲೆನಿಲ್ಲಬೇಕೆಂಬ ಆಸೆ ಇದೀಗ ತಾನೇ ಬಣ್ಣ ಹಚ್ಚಿದ ಹೊಸಾ ಹುಡುಗಿಯರಲ್ಲೂ ಇರುತ್ತೆ. ಆದರೆ ನಟಿಸೋ ಚಿತ್ರಗಳ ಸಂಖ್ಯೆ ಕಡಿಮೆಯಾದರೂ, ತೀರಾ ಕಮರ್ಷಿಯಲ್ ಸಿನಿಮಾಗಳಲ್ಲದೇ ಹೋದರೂ ನಟಿಸೋ ಪಾತ್ರದ ಮೂಲಕವೇ ಗುರುತಾಗ ಬೇಕೆಂಬ ಹಂಬಲ ಹೊಂದಿರುವವರು ವಿರಳ. ಅಂಥಾ ವಿರಳ ಮನಸ್ಥಿತಿ ಹೊಂದಿರೋ ಅಪರೂಪದ ನಟಿ ಪಲ್ಲವಿ ರಾಜು. ಅವರೀಗ ಈ ವಾರ ತೆರೆ ಕಾಣಲಿರುವ ರವಿ ಹಿಸ್ಟರಿ ಚಿತ್ರದ ನಾಯಕಿಯಾಗಿ ವಿಶೇಷ ಗೆಟಪ್ಪೊಂದರ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿದ್ದಾರೆ.
ಸಿನಿಮಾ ಯಾವ ಜಾನರಿನದ್ದೇ ಆಗಿದ್ದರೂ ತನ್ನ ಪಾತ್ರ ಸವಾಲಿನದ್ದಾಗಿರಬೇಕೆಂಬ ಹಂಬಲ ಹೊಂದಿರುವವರು ಪಲ್ಲವಿ ರಾಜು. ಆ ಕಾರಣದಿಂದಲೇ ಅವರಿಂದು ವಿಶಿಷ್ಟ ನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ‘ಕ’ ಎಂಬ ಚಿತ್ರದ ಮೂಲಕವೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅವರು ಈಗ ಬಿಡುಗಡೆಗೆ ಸಜ್ಜಾಗಿರೋ ರವಿ ಹಿಸ್ಟರಿ ಸಿನಿಮಾದ ನಾಯಕಿ. ಈ ಪಾತ್ರದ ಬಗ್ಗೆ ಅವರಿಗೆ ಈ ಹಿಂದೆಂದಿಗಿಂತಲೂ ಹೆಚ್ಚಿನ ಭರವಸೆ ಇದೆ.
ಇದುವರೆಗೂ ಪಲ್ಲವಿ ಸವಾಲಿನ ಪಾತ್ರಗಳಿಗೇ ಜೀವ ತುಂಬಿದ್ದಾರೆ. ಈ ಹಿಂದೆ ತೆರೆ ಕಂಡಿದ್ದ ಮಂತ್ರಂ ಚಿತದಲ್ಲಿನ ಇವರ ನಟನೆಯೇ ಪಲ್ಲವಿ ಓರ್ವ ಅಸಾಮಾನ್ಯ ನಟಿ ಅನ್ನೋದಕ್ಕೆ ಸ್ಪಷ್ಟ ಉದಾಹರಣೆ. ಅವರೊಳಗಿನ ನಟನಾ ಚಾತುರ್ಯಕ್ಕೆ ಸವಾಲಿನಂಥಾ ಪಾತ್ರವೇ ರವಿ ಹಿಸ್ಟರಿ ಚಿತ್ರದಲ್ಲಿ ಸಿಕ್ಕಿದೆಯಂತೆ. ಅಂದಹಾಗೆ ಇಲ್ಲವರು ಎಸ್‍ಐ ಅನಿತಾ ಎಂಬ ಪಾತ್ರದಲ್ಲಿ ನಟಿಸಿದ್ದಾರೆ.
ಆರಂಭದಲ್ಲಿ ನಿರ್ದೇಶಕ ಮಧು ಚಂದ್ರ ಕಥೆ ಹೇಳಿದ್ದಾಗ ಪಲ್ಲವಿ ರಾಜು ಅವರ ಪಾತ್ರದ ಒಂದು ಪದರವನ್ನಷ್ಟೇ ಬಿಚ್ಚಿಟ್ಟಿದ್ದರಂತೆ. ಆದರೆ ರಿಹರ್ಸಲ್ ಸಂದರ್ಭದಲ್ಲಿ ಇವರ ಪಾತ್ರದ ಎರಡು ಪುಟ ತಿರುವುತ್ತಲೇ ಅಚ್ಚರಿ ಕಾದಿತ್ತಂತೆ. ಅದಕ್ಕೆ ಕಾರಣ ಅವರ ಪಾತ್ರಕ್ಕಿರೋ ಸಮ್ಮೋಹಕವಾದ ತಿರುವು ಮತ್ತು ಶೇಡುಗಳು!
ರವಿ ಹಿಸ್ಟರಿ ಎಂಬುದೇ ಈಗ ವಿಭಿನ್ನ ಜಾಡಿನ ಚಿತ್ರವಾಗಿ ಪ್ರೇಕ್ಷಕರನ್ನ ಸೆಳೆದುಕೊಂಡಿದೆ. ಅದರಲ್ಲಿ ನಾಯಕಿಯಾಗಿರೋ ಪಲ್ಲವಿ ಎಸ್‍ಐ ಅನಿತ ಆಗಿ ಕಾಣಿಸಿಕೊಂಡಿದ್ದಾರೆ. ಎಸ್‍ಐ ಅಂದಾಕ್ಷಣ ಗಾಗಲ್ಸ್ ಹಾಕಿಕೊಂಡು ಬಿಲ್ಡಪ್ಪು ಕೊಡೋ ಪಾತ್ರದ ಕಲ್ಪನೆ ಬರೋದು ಸಹಜ. ಆದರೆ ಈ ಪಾತ್ರ ವಾಸ್ತವಕ್ಕೆ ಹತ್ತಿರವಾಗಿದೆಯಂತೆ. ಮಧ್ಯಮವರ್ಗದಿಂದ ಬಂದ ಹುಡುಗಿಯಾಗಿ, ಕಷ್ಟಪಟ್ಟು ಎಸ್‍ಐ ಆಗೋ ಶೇಡಿನ ಪಾತ್ರ ಪಲ್ಲವಿ ರಾಜು ವೃತ್ತಿ ಬದುಕಿಗೆ ಹೊಸಾ ದಿಕ್ಕು ತೋರಿಸೋ ಸಾಧ್ಯತೆಗಳೇ ಢಾಳಾಗಿವೆ.
ಪಲ್ಲವಿ ರಾಜು ಇದುವರೆಗೂ ಒಂದಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಅವೆಲ್ಲವೂ ಪ್ರಯೋಗಾತ್ಮಕ ಚಿತ್ರಗಳೇ. ಆದರೆ ರವಿ ಹಿಸ್ಟರಿ ಪ್ರಯೋಗಗಳನ್ನ ಹೊಂದಿರೋ ಕಮರ್ಷಿಯಲ್ ಮೂವಿ. ಇದರ ಮೂಲಕವೇ ಎಸ್.ಐ. ಅನಿತಾ ಆಗಿ ಹೊಸ ಕಮಾಲ್ ಸೃಷ್ಟಿಸೋ ಭರವಸೆ ಪಲ್ಲವಿ ರಾಜು ಅವರದ್ದು.
ಬೆಂಗಳೂರು: ಶ್ರುತಿ ಪ್ರಕಾಶ್ ಮೂಲತಃ ಕನ್ನಡತಿಯೇ ಆಗಿದ್ದರೂ ಈ ಬಿಗ್ ಬಾಸ್ ಶೋ ಮೂಲಕವೇ ಕನ್ನಡಿಗರಿಗೆ ಪರಿಚಯವಾದ ಹುಡುಗಿ. ಕಳೆದ ಸೀಸನ್ನಿನ ಈ ಶೋನಲ್ಲಿ ಮುಖ ಮುಖವಾಡಗಳ ಸಂತೆಯ ನಡುವೆಯೂ ನೈಜ ವ್ಯಕ್ತಿತ್ವ ಮರೆಮಾಚದೆ ಕನ್ನಡಿಗರ ಮನ ಗೆದ್ದಿದ್ದವರು ಶ್ರುತಿ. ಈ ಶೋ ಮುಗಿದ ನಂತರ ತನ್ನೆದುರು ಅವಕಾಶಗಳ ಮೆರವಣಿಗೆಯೇ ನೆರೆದಿದ್ದರೂ ಕೂಡಾ ಅವರು ಪ್ರೀತಿಯಿಂದ ಆರಿಸಿಕೊಂಡಿದ್ದು ಲಂಡನ್ ನಲ್ಲಿ ಲಂಬೋದರ ಚಿತ್ರವನ್ನು. ಈ ಬಗ್ಗೆ ಒಂದಷ್ಟು ಮಜವಾದ ವಿಚಾರಗಳನ್ನ ಶ್ರುತಿ ಪಬ್ಲಿಕ್ ಟಿವಿಯ ಜೊತೆ ಹಂಚಿಕೊಂಡಿದ್ದಾರೆ.
ಶ್ರುತಿ ಪ್ರಕಾಶ್ ಮೂಲತಃ ಕರ್ನಾಟಕದ ಗಡಿ ಪ್ರದೇಶವಾದ ಬೆಳಗಾವಿಯವರು. ಹಿಂದಿ ಭಾಷೆಯಲ್ಲಿ ನಾನಾ ಹಿಟ್ ಧಾರಾವಾಹಿಗಳ ಮೂಲಕ, ಮ್ಯೂಸಿಕ್ ಆಲ್ಬಂಗಳ ಮೂಲಕ ಪ್ರಸಿದ್ಧಿ ಹೊಂದಿದ್ದರೂ ಈ ಕನ್ನಡತಿಯ ಪರಿಚಯ ಕನ್ನಡಿಗರಿಗೇ ಇರಲಿಲ್ಲ. ಬೆಳಗಾವಿಯ ಕನ್ನಡತನದ ಕುಟುಂಬದಲ್ಲಿಯೇ ಹುಟ್ಟಿ ಬೆಳೆದು ಮುಂಬೈನಲ್ಲಿ ತಮ್ಮ ಕನಸಿನ ಆರಂಭ ಮಾಡಿದ್ದ ಶ್ರುತಿಗೆ ಅಲ್ಲಿ ಅಗಾಧವಾದ ಪ್ರಸಿದ್ಧಿ ಸಿಕ್ಕರೂ ಕೂಡಾ ಅದೊಂದು ಕೊರಗು ಮಾತ್ರ ಅವರನ್ನು ಬೆಂಬಿಡದೆ ಕಾಡುತ್ತಿತ್ತಂತೆ. ಅದು ತಮ್ಮ ತಾಯಿಭಾಷೆಯಾದ ಕನ್ನಡ ಚಿತ್ರದ ಮೂಲಕ ನಾಯಕಿಯಾಗಿ ಅಡಿಯಿರಿಸಿ ಕನ್ನಡಿಗರನ್ನೆಲ್ಲ ತಲುಪಿಕೊಳ್ಳುವ ಹಂಬಲ!
ಮೊದಲು ತನ್ನನ್ನು ತಾನು ಕನ್ನಡಿಗರೆಂದು ಪರಿಚಯ ಮಾಡಿಕೊಂಡು ಮತ್ತೆ ಮುಂದುವರೆಯಬೇಕು ಅಂದುಕೊಂಡಿದ್ದ ಶ್ರುತಿ ಅವರಿಗೆ ಬಿಗ್ ಬಾಸ್ ಶೋ ವರದಾನವಾಗಿದೆ. ಈ ಮೂಲಕ ಕನ್ನಡಿಗರ ಮನೆಮಗಳಂತೆ ಆಗಿಹೋಗಿರೋ ಶ್ರುತಿ ಅವರು ರಾಜ್ ಸೂರ್ಯ ಹೇಳಿದ ಲಂಡನ್ ನಲ್ಲಿ ಲಂಬೋದರ ಚಿತ್ರವನ್ನು ಪ್ರೀತಿಯಿಂದಲೇ ಒಪ್ಪಿಕೊಂಡಿದ್ದಾರಂತೆ. ಅದಕ್ಕೆ ಕಾರಣ ಗಂಭೀರವಾದ ಕಥೆ ಮತ್ತು ಮಜವಾದ ನಿರೂಪಣೆ.
ಈ ಚಿತ್ರದ ಮೂಲಕವೇ ಶ್ರುತಿ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಶ್ರುತಿ ಅವರದ್ದು ನಾನಾ ಶೇಡುಗಳಿರೋ ಪಾತ್ರವಂತೆ. ಇಲ್ಲವರು ಪ್ರತಿಯೊಂದು ವಿಚಾರವನ್ನೂ ಕೂಡಾ ಅಳೆದೂ ತೂಗಿ ಆಲೋಚಿಸಿಯೇ ಮುಂದಡಿ ಇಡುವ ಪ್ರಾಕ್ಟಿಕಲ್ ಹುಡುಗಿಯಾಗಿ ಮಿಂಚಿದ್ದಾರಂತೆ. ಇವರ ಜೋಡಿ ಲಂಬೋದರ ಪ್ರತೀ ನಿತ್ಯ ಎದ್ದೇಟಿಗೆ ದಿನಭವಿಷ್ಯ ನೋಡಿ ಅದರಂತೆಯೇ ಮುಂದುವರೆಯುವಾತ. ಅಂಥಾ ಕ್ಯಾರೆಕ್ಟರ್ ಮತ್ತು ಈ ಪ್ರಾಕ್ಟಿಕಲ್ ಹುಡುಗಿಯ ಕಾಂಬಿನೇಷನ್ನೇ ಈ ಸಿನಿಮಾದ ಪ್ರಧಾನ ಆಕರ್ಷಣೆ.
ಈ ಚಿತ್ರದ ಮೂಲಕವೇ ತಮಗೆ ಕನ್ನಡದಲ್ಲಿ ನಾಯಕಿಯಾಗಿ ಗಟ್ಟಿ ನೆಲೆ ಕೊಡಲಿದೆ ಅನ್ನೋ ಭರವಸೆ ಶ್ರುತಿ ಪ್ರಕಾಶ್ ಅವರಿಗಿದೆ. ಲಂಬೋದರನ ಕಾರಣದಿಂದಲೇ ಇನ್ನೂ ಒಂದಷ್ಟು ಅವಕಾಶಗಳು ಅವರ ಮುಂದಿವೆ. ಆದರೆ ಈ ಚಿತ್ರ ಬಿಡುಗಡೆಯಾದ ನಂತರವೇ ಆ ಬಗ್ಗೆ ಆಲೋಚಿಸುವ ನಿರ್ಧಾರ ಶ್ರುತಿ ಅವರದ್ದು. ಈ ನಡುವೆ ಹಿಂದಿ ಸೀರಿಯಲ್ಲುಗಳ ಅವಕಾಶ ಬಂದರೂ ನಿರಾಕರಿಸುತ್ತಿರೋ ಅವರ ಪಾಲಿಗೆ ಕನ್ನಡದಲ್ಲಿಯೇ ನೆಲೆಗೊಳ್ಳೋ ಆಸೆಯಿದೆ. ಲಂಡನ್ ನಲ್ಲಿ ಲಂಬೋದರ ಸೃಷ್ಟಿಸಿರೋ ಕ್ರೇಜ್ ನೋಡಿದರೆ ಅದು ಸಾಧ್ಯವಾಗೋ ಎಲ್ಲ ಲಕ್ಷಣಗಳೂ ದಟ್ಟವಾಗಿವೆ.
ಬೆಂಗಳೂರು: ಹೊನ್ನಾದೇವಿ ಕ್ರೀಯೆಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಹನಿಗಳು ಏನನ್ನು ಹೇಳಲು ಹೊರಟಿವೆ ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಹಳ್ಳಿ ಹುಡುಗನೊಬ್ಬ ವಿದ್ಯಾಭ್ಯಾಸಕ್ಕಾಗಿ ಪಟ್ಟಣಕ್ಕೆ ಬರುತ್ತಾನೆ. ಹಾಗೆ ಕಾಲೇಜು ಸೇರಿದ ಹುಡುಗ ಪ್ರೀತಿಯ ಬಲೆಗೆ ಬಿದ್ದು, ಮನೆಯವರ ವಿರೋಧದ ನಡುವೆಯೂ ಮದುವೆಯಾಗುತ್ತಾನೆ. ಆ ನಂತರ ಆತನ ಬದುಕಿನಲ್ಲಿ ಏನೆಲ್ಲಾ ತಿರುವುಗಳು ಎದುರಾಗುತ್ತವೆ ಅನ್ನೋದು ಈ ಚಿತ್ರದ ಸಾರಾಂಶ.
ಈ ಚಿತ್ರಕ್ಕೆ ನಾಗರಾಜ್.ಬಿ.ಹೆಚ್. ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ನಿರ್ಮಾಣದ ಜೊತೆ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ದಿನೇಶ್ ಕುಮಾರ್ ಸಂಗೀತ, ಅರುಣ್ ಗೂಳೂರು ಛಾಯಾಗ್ರಹಣ, ಅಜಯ್, ನಾಗೇಶ್ ಸಾಹಿತ್ಯ, ಅವಿನಾಶ್ ಶರತ್ ಬೈಂದೂರು, ಚಿರು ಸಂಕಲನವಿದೆ, ನಾಗೇಶ್, ಪಲ್ಲವಿ, ಚಂದ್ರ, ಅರುಣ್ ಶಿವಲಿಂಗೇಗೌಡ ಪಾಂಡವಪುರ, ಮಧು, ಬಸವರಾಜ್, ಜೀವನ್, ಅಭಿಷೇಕ್ ಮುಂತಾದವರ ತಾರಾಬಳಗವಿದೆ.