Tag: kannada cinema

  • ಬಟರ್ ಫ್ಲೈ ಪಾರುಲ್ ಯಾದವ್‍ಗೆ ಬರ್ತ್ ಡೇ ಸಂಭ್ರಮ!

    ಬಟರ್ ಫ್ಲೈ ಪಾರುಲ್ ಯಾದವ್‍ಗೆ ಬರ್ತ್ ಡೇ ಸಂಭ್ರಮ!

    ಬೆಂಗಳೂರು: ಉತ್ತರಭಾರತದಿಂದ ಬಂದು ಕನ್ನಡದಲ್ಲಿ ನಟಿಯರಾಗಿ ನೆಲೆ ನಿಂತವರದ್ದೊಂದು ದೊಡ್ಡ ದಂಡೇ ಇದೆ. ಆದರೆ ಅದರಲ್ಲಿ ಕೆಲವೇ ಕೆಲವರು ಮಾತ್ರವೇ ಪ್ರೀತಿ ಕೊಟ್ಟ ಕನ್ನಡತನವನ್ನೂ ಮೈ ಮನಸುಗಳಲ್ಲಿ ತುಂಬಿಕೊಂಡು ಕನ್ನಡಿಗರೆಲ್ಲರ ಪ್ರೀತಿಪಾತ್ರರಾಗಿ ಕಂಗೊಳಿಸುತ್ತಾರೆ. ಅಂಥದ್ದೊಂದು ಅಪ್ಪಟ ಕನ್ನಡ ಪ್ರೇಮ ಹೊಂದಿರೋ ನಟಿ ಪಾರುಲ್ ಯಾದವ್. ಇದೀಗ ಅವರು ಮುಖ್ಯ ಪಾತ್ರದಲ್ಲಿ ನಟಿಸಿರುವ ಬಟರ್ ಫ್ಲೈ ಕೂಡಾ ಬಿಡುಗಡೆಗೆ ರೆಡಿಯಾಗಿದೆ. ಇಂಥಾ ಪಾರುಲ್ ಯಾದವ್ ಅವರಿಂದು ಹುಟ್ಟುಹಬ್ಬದ ಸಂಭ್ರಮದಲ್ಲಿ ಮಿಂದೇಳುತ್ತಿದ್ದಾರೆ.

    ಪಾರುಲ್ ಯಾದವ್ ಮೂಲತಃ ಉತ್ತರ ಭಾರತದವರು. ಪವನ್ ಒಡೆಯರ್ ನಿರ್ದೇಶನದ ಗೋವಿಂದಾಯ ನಮಃ ಚಿತ್ರದ ಮೂಲಕ ಕನ್ನಡಕ್ಕೆ ಆಗಮಿಸಿದ್ದ ಇವರು ಪ್ಯಾರ್ ಗೇ ಆಗ್ಬಿಟ್ಟೈತೆ ಎಂಬ ಹಾಡಿನ ಮೂಲಕವೇ ವ್ಯಾಪಕ ಮನ್ನಣೆ ಗಳಿಸಿಕೊಂಡಿದ್ದರು. ಹೀಗೆ ಆರಂಭಿಕವಾಗಿಯೇ ಸಿಕ್ಕ ಯಶಸ್ಸಿನಿಂದಾಗಿ ಕನ್ನಡದಲ್ಲಿಯೇ ನೆಲೆ ನಿಂತಿರುವ ಪಾರುಲ್ ಇದೀಗ ಕನ್ನಡದ ಹುಡುಗಿಯಂತೆಯೇ ಆಗಿ ಹೋಗಿದ್ದಾರೆ.

    ಪಾರುಲ್ ಯಾದವ್ ಇದೀಗ ಓರ್ವ ನಟಿಯಾಗಿ ಒಂದು ಮಟ್ಟದ ಯಶ ಕಂಡಿದ್ದಾರೆ. ಹಲವಾರು ಹಿಟ್ ಚಿತ್ರಗಳೂ ಅವರ ಖಾತೆಗೆ ಜಮೆಯಾಗಿವೆ. ತಾನು ಉತ್ತರ ಭಾರತದವರಾದರೂ ಯಾವುದೇ ಭಾಷಾ ತಾರತಮ್ಯ ಮಾಡದೇ ಮುಖ್ಯ ನಟಿಯಾಗಿ ನೆಲೆ ನಿಲ್ಲಿಸಿದ ಕನ್ನಡಿಗರ ಮೇಲೆ ಪಾರುಲ್‍ಗೆ ಅಪಾರ ಪ್ರೀತಿಯಿದೆ. ಸಾಮಾನ್ಯವಾಗಿ ಕನ್ನಡದ ನಟಿಯರ ಮೇಲೆಯೇ ಆಗಾಗ ಪರಭಾಷಾ ವ್ಯಾಮೋಹದ ಆರೋಪಗಳು ಕೇಳಿ ಬರುತ್ತಿರುತ್ತವೆ. ಆದರೆ ಪಾರುಲ್ ಈ ವಿಚಾರದಲ್ಲಿ ಭಿನ್ನ.

    ಯಾಕೆಂದರೆ ಸ್ಪಷ್ಟವಾಗಿ ಕನ್ನಡ ಮಾತಾಡಲು ಬಾರದೇ ಇದ್ದರೂ ಸಾರ್ವಜನಿಕ ಸಮಾರಂಭಗಳಲ್ಲಿಯೇ ಕನ್ನಡದಲ್ಲಿ ಮಾತಾಡಲು ಪ್ರಯತ್ನಿಸುತ್ತಾರೆ. ಎದುರು ಸಿಕ್ಕ ಅಭಿಮಾನಿಗಳಲ್ಲಿಯೂ ಕನ್ನಡದಲ್ಲಿಯೇ ಸಂವಹನ ನಡೆಸುತ್ತಾರೆ. ಪಾರುಲ್ ಕನ್ನಡಿಗರಿಗೆಲ್ಲ ಇಷ್ಟವಾಗಿರೋದೇ ಈ ಕಾರಣದಿಂದ. ಇಂಥಾ ಪಾರುಲ್ ನಟಿಸಿರೋ ಬಟರ್ ಫ್ಲೈ ಚಿತ್ರವೀಗ ಬಿಡುಗಡೆಗೆ ರೆಡಿಯಾಗಿದೆ. ಈ ಪಾತ್ರದಲ್ಲಿ ಪಾರ್ವತಿ ಎಂಬ ಹುಡುಗಿಯ ಪಾತ್ರಕ್ಕೆ ಅವರು ಜೀವ ತುಂಬಿದ್ದಾರೆ. ಇನ್ನೇನು ಬಟರ್‍ಫ್ಲೈ ಆಗಿ ಪ್ರೇಕ್ಷಕರ ಮನಸಿಗೆ ಹಾರಿ ಕೂರೋ ಸನ್ನಾಹದಲ್ಲಿರುವ ಪಾರುಲ್ ಅವರಿಗೆ ಹ್ಯಾಪಿ ಬರ್ತಡೇ.

  • ತಪ್ತ ಮನಸಿನ ನಿರ್ದೇಶಕ ಪ್ರಕಾಶ್ ಹೆಬ್ಬಾಳರ ಚೊಚ್ಚಲ ‘ಹಫ್ತಾ’!

    ತಪ್ತ ಮನಸಿನ ನಿರ್ದೇಶಕ ಪ್ರಕಾಶ್ ಹೆಬ್ಬಾಳರ ಚೊಚ್ಚಲ ‘ಹಫ್ತಾ’!

    ಬೆಂಗಳೂರು: ಈಗ ಎಲ್ಲೆಡೆ ಟೀಸರ್ ಮತ್ತು ಹಾಡುಗಳ ಮೂಲಕ ಪ್ರೇಕ್ಷಕರ ನಡುವೆ ಚರ್ಚೆ ಹುಟ್ಟುಹಾಕಿರೋ ಚಿತ್ರ ಹಫ್ತಾ. ಈಗಾಗಲೇ ಹಲವಾರು ಚಿತ್ರಗಳಲ್ಲಿ ಖಳನಟನಾಗಿ ಅಬ್ಬರಿಸಿರೋ ಯುವ ನಟ ವರ್ಧನ್ ತೀರ್ಥಹಳ್ಳಿ ಈ ಸಿನಿಮಾ ಮೂಲಕ ನಾಯಕನಾಗಿ ಹೊರಹೊಮ್ಮುವ ಖುಷಿಯಲ್ಲಿದ್ದಾರೆ. ಈವರೆಗೂ ಹೊರಬಂದಿರೋ ಪೋಸ್ಟರ್ ಗಳಲ್ಲಿನ ವಿಭಿನ್ನ ಛಾಯೆಯ ಮೂಲಕವೇ ಭರವಸೆ ಹುಟ್ಟಿಸಿವೆ. ಕರಾವಳಿ ತೀರದ ಭೂಗತ ಮಜಲೊಂದನ್ನು ತೆರೆದಿಡುವ ಮಜವಾದ ಕಥಾ ಹಂದರ ಹೊಂದಿರೋ ಈ ಚಿತ್ರ ನಿರ್ದೇಶಕ ಪ್ರಕಾಶ್ ಹೆಬ್ಬಾಳ ಅವರ ಮೊದಲ ಕನಸು.

    ಇಂಥಾ ಪ್ರತೀ ಮೊದಲ ಹೆಜ್ಜೆಯ ಹಿಂದೆಯೂ ಅದೆಷ್ಟೋ ವರ್ಷಗಳ ತಪನೆಯಿರುತ್ತದೆ. ಕಷ್ಟ ಕಾರ್ಪಣ್ಯಗಳನ್ನು ದಾಟಿಕೊಂಡು ಗುರಿಯತ್ತ ಸಾಗಿ ಬಂದ ಸ್ಫೂರ್ತಿದಾಯಕ ಕಹಾನಿಯೂ ಇರುತ್ತದೆ. ಇದೀಗ ಹಫ್ತಾ ಎಂಬ ಅಪರೂಪದ ಚಿತ್ರವೊಂದರ ಮೂಲಕವೇ ನಿರ್ದೇಶಕನಾಗುವ ಕನಸನ್ನು ನನಸು ಮಾಡಿಕೊಂಡಿರುವ ಪ್ರಕಾಶ್ ಹೆಬ್ಬಾಳ ಅವರ ಹಿಂದೆಯೂ ಅಂಥಾದ್ದೇ ಒಂದು ಕಥೆಯಿದೆ. ಏಳೆಂಟು ವರ್ಷಗಳಿಂದ ಸಿನಿಮಾ ಕ್ಷೇತ್ರದಲ್ಲಿ ಅವುಡುಗಚ್ಚಿ ಶ್ರದ್ಧೆಯಿಂದ ಕಾರ್ಯ ನಿರ್ವಹಿಸುತ್ತಾ ಕಡೆಗೂ ಒಂದೊಳ್ಳೆ ಸಿನಿಮಾ ನಿರ್ದೇಶನ ಮಾಡಿದ ಆತ್ಮತೃಪ್ತಿಯೂ ಅವರ ಮಾತುಗಳಲ್ಲಿ ಹಣಕಿ ಹಾಕುತ್ತವೆ.

    ಪ್ರಕಾಶ್ ಹೆಬ್ಬಾಳ ರಮೇಶ್ ಅರವಿಂದ್, ದಯಾಳ್ ಪದ್ಮನಾಭನ್ ಮುಂತಾದವರ ಗರಡಿಯಲ್ಲಿ ಪಳಗಿಕೊಂಡವರು. ಬೆಂಗಳೂರಿನಂಥಾ ಸಿಟಿಯಲ್ಲಿ ಹುಟ್ಟಿದರೂ ಬೇರೆ ಭಾಗಗಳತ್ತ, ಅಲ್ಲಿನ ಆಗು ಹೋಗುಗಳತ್ತ ಬೆರಗುಗಣ್ಣಿನ ನೋಟ ಹೊಂದಿದ್ದ ಅವರ ಪಾಲಿಗೆ ಕಾಲೇಜು ದಿನಗಳಲ್ಲಿಯೇ ಸಿನಿಮಾ ನಿರ್ದೇಶಕನಾಗಬೇಕೆಂಬ ಕನಸು ತೀವ್ರವಾಗಿತ್ತು. ಓದೆಲ್ಲವೂ ಮುಗಿದಾಕ್ಷಣವೇ ತನ್ನ ಕನಸಿನ ಕ್ಷೇತ್ರದ ಕಕ್ಷೆ ತಲುಪಿಕೊಳ್ಳಲು ಇನ್ನಿಲ್ಲದಂತೆ ಪ್ರಯತ್ನಿಸಲಾರಂಭಿಸಿದ್ದ ಅವರು ಕಡೆಗೂ ಜೋಕಾಲಿ ಎಂಬ ಚಿತ್ರದ ಮೂಲಕ ಅದನ್ನು ಸಾಕಾರಗೊಳಿಸಿಕೊಂಡಿದ್ದರು. ಈ ಚಿತ್ರದಲ್ಲವರು ಅಸಿಸ್ಟೆಂಟ್ ಡೈರೆಕ್ಟರ್ ಆಗಿಯೂ ಕಾರ್ಯ ನಿರ್ವಹಿಸಿದ್ದರು.

    ಈ ಮೂಲಕವೇ ನಿರ್ದೇಶನದ ಪಟ್ಟುಗಳ ಮೊದಲ ಪಾಠ ಅರಿತುಕೊಂಡ ಪ್ರಕಾಶ್ ಪಾಲಿಗೆ ಮತ್ತೊಂದು ಅಯಾಮವನ್ನು ಅನಾವರಣಗೊಳಿಸಿದ್ದು ದಯಾಳ್ ಪದ್ಮನಾಭನ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಹಗ್ಗದ ಕೊನೆ ಸಿನಿಮಾ. ಈ ನಡುವೆಯೇ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚುವ ಸಲುವಾಗಿ ಪೀಕ್ ಅವರ್ ಎಂಬೊಂದು ಕಿರು ಚಿತ್ರವನ್ನೂ ನಿರ್ದೇಶನ ಮಾಡಿದ್ದರು. ಇದು ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿತ್ತು.

    ಇದರಿಂದಲೇ ಭರವಸೆ ತುಂಬಿಕೊಂಡ ಪ್ರಕಾಶ್ ಹೆಬ್ಬಾಳ, ಒಂದು ವಿಭಿನ್ನವಾದ ಕಥೆಯೊಂದಿಗೇ ನಿರ್ದೇಶಕನಾಗಿ ಪಾದಾರ್ಪಣೆ ಮಾಡಬೇಕೆಂಬ ನಿರ್ಧಾರದೊಂದಿಗೆ ಮುಂದುವರೆಯಲಾರಂಭಿಸಿದ್ದರು. ಆಗ ಅವರಿಗೆ ಆಕರ್ಷಣೆಯಾಗಿ ಕಂಡದ್ದು ಕರಾವಳಿ ತೀರದ ಭೂಗತ ಜಗತ್ತು. ಈಗಾಗಲೇ ಆ ಭಾಗದ ಕೆಲವರು ಕೋಸ್ಟಲ್ ಏರಿಯಾದ ಕತ್ತಲ ಲೋಕದ ಹಲವಾರು ಮಜಲುಗಳನ್ನು ತೆರೆ ಮೇಲೆ ತಂದಿದ್ದಾರೆ. ಆದರೆ ಅದರಾಚೆಯ ಗುರುತಿರದ ಮಜಲುಗಳನ್ನು ದಕ್ಕಿಸಿಕೊಳ್ಳೋದು ತಪ್ತ ಮನಸುಗಳಿಗೆ ಮಾತ್ರವೇ ಸಾಧ್ಯ. ಅಂಥಾದ್ದೊಂದು ಮನಸ್ಥಿತಿ ಇರೋದರಿಂದಲೇ ಅದೆಲ್ಲಕ್ಕಿಂತಲೂ ಭಿನ್ನ ನೋಟದೊಂದಿಗೇ ಮಜವಾದೊಂದು ಕಥೆ ಹೆಣೆದ ಪ್ರಕಾಶ್ ಕಡೆಗೂ ಅಂದುಕೊಂಡಂತೆಯೇ ಅದಕ್ಕೆ ದೃಶ್ಯ ರೂಪ ನೀಡಿದ್ದಾರೆ.

    ಪ್ರತಿಯೊಂದರಲ್ಲಿಯೂ ಬಹಳ ಎಚ್ಚರಿಕೆಯಿಂದ, ಶ್ರದ್ಧೆಯಿಂದಲೇ ಪ್ರಕಾಶ್ ಹಫ್ತಾ ಚಿತ್ರವನ್ನು ರೂಪಿಸಿದ್ದಾರೆ. ಆ ಕಾರಣದಿಂದಲೇ ಬಿಡುಗಡೆಯ ಹಂತದಲ್ಲಿರೋ ಹಫ್ತಾ ದೊಡ್ಡ ಮಟ್ಟದಲ್ಲಿಯೇ ಸೌಂಡ್ ಮಾಡುತ್ತಿದೆ. ಯಾರಿಗೇ ಆದರೂ ಮೊದಲ ಪ್ರಯತ್ನಕ್ಕೇ ಈ ಪಾಟಿ ಪಾಸಿಟಿವ್ ವಾತಾವರಣ ಸೃಷ್ಟಿಯಾದರೆ ಖುಷಿಯಾಗುತ್ತದೆ. ಪ್ರಕಾಶ್ ಹೆಬ್ಬಾಳ್ ಕೂಡಾ ಇದೀಗ ಅಂಥಾದ್ದೊಂದು ತುಂಬು ಖುಷಿಯ ವಾರಸೂದಾರರಾಗಿದ್ದಾರೆ. ಈ ಮೂಲಕ ತಮ್ಮ ಚೊಚ್ಚಲ ಪ್ರಯತ್ನಕ್ಕೆ ಗೆಲುವಾಗುವ ತುಂಬು ಭರವಸೆಯೂ ಅವರಲ್ಲಿದೆ.

  • ರೋಚಕ ಕಥೆಯೊಂದಿಗೆ ಮೋಹಕ ಅನುಭವ ನೀಡೋ `ವೀಕೆಂಡ್’!

    ರೋಚಕ ಕಥೆಯೊಂದಿಗೆ ಮೋಹಕ ಅನುಭವ ನೀಡೋ `ವೀಕೆಂಡ್’!

    ಬೆಂಗಳೂರು: ಶೃಂಗೇರಿ ಸುರೇಶ್ ನಿರ್ದೇಶನದ ವೀಕೆಂಡ್ ಚಿತ್ರ ತೆರೆ ಕಂಡಿದೆ. ಬಿಡುಗಡೆಯ ಕಡೆಯ ಕ್ಷಣದಲ್ಲಿ ಈ ಸಿನಿಮಾ ಬಗ್ಗೆ ಗಾಢವಾದೊಂದು ಕುತೂಹಲ ಹುಟ್ಟಿಕೊಂಡಿತ್ತಲ್ಲಾ? ಅದನ್ನು ಎಲ್ಲ ದಿಕ್ಕುಗಳಿಂದಲೂ ತಣಿಸುವಂಥಾ ಎಲಿಮೆಂಟುಗಳೊಂದಿಗೆ, ಆರಂಭದಿಂದ ಕ್ಲೈಮ್ಯಾಕ್ಸ್ ವರೆಗೂ ನೋಡುಗರನ್ನು ಸೆಳೆದಿಟ್ಟುಕೊಂಡು ಸಾಗುವ ವೀಕೆಂಡ್ ಒಂದೊಳ್ಳೆ ಚಿತ್ರವಾಗಿ ಎಲ್ಲರನ್ನೂ ತಾಕಿದೆ. ಸಾಮಾನ್ಯವಾಗಿ ಸಾಮಾಜಿಕ ಸಂದೇಶವನ್ನು ಕಮರ್ಶಿಯಲ್ ಜಾಡಿನಲ್ಲಿಯೇ ಹೇಳೋದು ಅಪರೂಪ. ಆದರೆ ಭರ್ಜರಿ ಕಾಮಿಡಿ, ಆಕ್ಷನ್, ಲವ್ ಸೇರಿದಂತೆ ಎಲ್ಲ ಅಂಶಗಳನ್ನೂ ಒಳಗೊಂಡಿರೋ ವೀಕೆಂಡಿನಲ್ಲಿ ನಮ್ಮ ನಡುವಿದ್ದೂ ನಾವ್ಯಾರೂ ಹೆಚ್ಚಾಗಿ ತಲೆ ಕೆಡಿಸಿಕೊಳ್ಳದ ವಿಚಾರಗಳನ್ನು ಪರಿಣಾಮಕಾರಿಯಾಗಿಯೇ ದೃಷ್ಯೀಕರಿಸಲಾಗಿದೆ.

    ಹೊರ ಜಗತ್ತಿನಲ್ಲಿ ಇವರಿಗೇನೂ ಕಮ್ಮಿ ಇಲ್ಲ ಎಂಬಂಥಾ ಇಮೇಜು, ಅದಕ್ಕೆ ಸರಿಯಾಗಿ ರೂಢಿಸಿಕೊಂಡ ಥಳುಕು ಬಳುಕಿನ ಲೈಫ್ ಸ್ಟೈಲ್… ಆದರೆ ಬದುಕಿನ ನೆತ್ತಿಯ ಮೇಲೆ ಸದಾ ನೇತಾಡುತ್ತಲೇ ಇರುವ ಅನಿಶ್ಚಿತತೆಯ ತೂಗುಗತ್ತಿ. ಯಾವುದೇ ಕ್ಷಣದಲ್ಲಿಯಾದರೂ ನೆಚ್ಚಿಕೊಂಡ ಕೆಲಸವನ್ನು ಬಿಟ್ಟು ಬೀದಿಯಲ್ಲಿ ನಿಲ್ಲಬಹುದಾದ ಬದುಕು… ಇದು ಐಟಿ ಬಿಟ ವಲಯದಲ್ಲಿ ಕೆಲಸ ಮಾಡೋರ ಸಾಮಾನ್ಯ ಗೋಳು. ಇಂಥಾ ಅಕ್ಷರಸ್ಥರೇ ಬದುಕಿನ ಅನಿವಾರ್ಯತೆಗೆ ಸಿಕ್ಕಿ ಅಡ್ಡ ದಾರಿ ಹಿಡಿದರೆ, ಕ್ರಿಮಿನಲ್ಲುಗಳಾದರೆ ಅದರ ಪರಿಣಾಮ ಘೋರ. ಇಂಥಾ ವಾಸ್ತವವನ್ನು ಸವರಿಕೊಂಡು ಹೋದಂತೆ ಭಾಸವಾಗುವ ರೋಚಕ ಕಥೆಯನ್ನು ವೀಕೆಂಡ್ ಚಿತ್ರ ಹೊಂದಿದೆ.

    ನಾಯಕ ಅಜೆಯ್ ಸಾಫ್ಟ್‍ವೇರ್ ಕ್ಷೇತ್ರದಲ್ಲಿಯೇ ಕಾರ್ಯ ನಿರ್ವಹಿಸುವಾತ. ಈತನ ಮೇಲೆ ಸಹೋದ್ಯೋಗಿಯೊಬ್ಬಳು ಮೋಹಗೊಂಡಿದ್ದರೆ ಈತ ಮಾತ್ರ ನಾಯಕಿಯ ಹಿಂದೆ ಬಿದ್ದಿರುತ್ತಾನೆ. ಈ ಪ್ರೇಮದ ಹಿನ್ನೆಲೆಯಲ್ಲಿಯೇ ನಿರ್ದೇಶಕರು ಐಟಿ ಬಿಟಿ ಕ್ಷೇತ್ರದ ಅಷ್ಟೂ ವಿಚಾರಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸುವ ಜಾಣ್ಮೆ ತೋರಿದ್ದಾರೆ. ಅಲ್ಲಿನ ಕೆಲಸದೊತ್ತಡ, ಸಂಬಳ ಪಡೆಯಲು ಮಾಡಬೇಕಾದ ಅನಿವಾರ್ಯ ಸರ್ಕಸ್ಸುಗಳೆಲ್ಲವನ್ನು ಕೂಡಾ ಮನ ಮುಟ್ಟುವಂತೆ ದೃಷ್ಯದ ಚೌಕಟ್ಟಿಗೆ ಒಗ್ಗಿಸಲಾಗಿದೆ.

    ಇಂಥಾ ಎಲ್ಲ ಸರ್ಕಸ್ಸುಗಳಾಚೆಗೂ ಕೆಲಸ ಕಳೆದುಕೊಂಡಾಗ ಈ ಐಟಿ ಉದ್ಯೋಗಿಗಳ ಬದುಕು ಹೇಗಿರುತ್ತೆ? ಎಂಥೆಂಥಾ ಅವಘಡಗಳು ಸಂಭವಿಸಬಹುದೆಂಬುದನ್ನು ನಿರ್ದೇಶಕರು ರುಚಿಕಟ್ಟಾಗಿಯೇ ನಿರೂಪಿಸಿದ್ದಾರೆ. ಹಾಗಂತ ಈ ಸಿನಿಮಾ ಇಂಥಾ ಒಳತೋಟಿ, ತಲ್ಲಣಗಳಲ್ಲಿಯೇ ಕಳೆದು ಹೋಗಿದೆ ಅಂದುಕೊಳ್ಳಬೇಕಿಲ್ಲ. ಕಾಮಿಡಿ, ಪ್ರೀತಿ ಸೇರಿದಂತೆ ಎಲ್ಲೆಲ್ಲಿ ಯಾವುದನ್ನು ಬೆರೆಸಬೇಕೋ ಅದನ್ನು ಅಚ್ಚುಕಟ್ಟಾಗಿಯೇ ಮಾಡಲಾಗಿದೆ. ಆದ್ದರಿಂದಲೇ ವೀಕೆಂಡ್ ಎಂಬುದು ಸಂಪೂರ್ಣ ಎಂಟರ್‍ಟೈನ್ಮೆಂಟ್ ಪ್ಯಾಕೇಜಿನಂತೆ ಮೂಡಿ ಬಂದಿದೆ. ಒಂದಿಡೀ ಚಿತ್ರ ಇಷ್ಟೊಂದು ಪರಿಣಾಮಕಾರಿಯಾಗಿ ಮೂಡಿ ಬರಲು ಬೇರೇನೇ ಕಾರಣಗಳಿದ್ದರೂ ಅನಂತ್ ನಾಗ್ ಎಂಬ ಮೇರು ನಟ ಈ ಚಿತ್ರದ ಪ್ರಧಾನ ಆಕರ್ಷಣೆ. ಅವರಿಲ್ಲಿ ಸಾಫ್ಟ್‍ವೇರ್ ಮೊಮ್ಮಗನ ತಾತನಾಗಿ, ತಪ್ಪಾದಾಗ ತಿದ್ದುವ ಹಿರಿಯನ ಪಾತ್ರವನ್ನು ಎಂದಿನಂತೆಯೇ ಮನಸೂರೆಗೊಳ್ಳುವಂತೆ ನಿರ್ವಹಿಸಿದ್ದಾರೆ.

    ವಿಶೇಷವೆಂದರೆ ಈ ಚಿತ್ರವನ್ನು ನಿರ್ಮಾಣ ಮಾಡಿರುವ ಮಂಜುನಾಥ್ ಡಿ ಅವರೇ ಪೊಲೀಸ್ ಅಧಿಕಾರಿಯಾಗಿಯೂ ಅಬ್ಬರಿಸಿದ್ದಾರೆ. ಈ ಪಾತ್ರವೂ ಸೇರಿದಂತೆ ಗೋಪಿನಾಥ್ ಭಟ್, ರಘು ನೀನಾಸಂ ಸೇರಿದಂತೆ ಎಲ್ಲ ಪಾತ್ರಗಳೂ ಮನಮುಟ್ಟುವಂತಿವೆ. ಮಿಲಿಂದ್ ಮತ್ತು ಸಂಜನಾ ಬುರ್ಲಿ ಕೂಡಾ ತಂತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಶಶಿಧರ್ ಅವರ ಛಾಯಾಗ್ರಹಣ ಕಥೆಗೆ ಹೊಸಾ ಓಘವನ್ನೇ ನೀಡಿದೆ. ಹೀಗೆ ಕಮರ್ಶಿಯಲ್ ವೇನಲ್ಲಿ ರೋಚಕವಾದ ಕಥೆ ಹೇಳೋ ಈ ಚಿತ್ರ ಮನಮಿಡಿಯುವಂಥಾ ಒಂದು ಸಂದೇಶವನ್ನೂ ರವಾನಿಸುತ್ತದೆ. ಇಡೀ ಸಿನಿಮಾ, ಶ್ರಮ ಸಾರ್ಥಕ ಅನ್ನಿಸೋದು ಈ ಕಾರಣದಿಂದಲೇ. ಒಟ್ಟಾರೆಯಾಗಿ ವೀಕೆಂಡ್ ಒಂದೊಳ್ಳೆ ಚಿತ್ರ ನೋಡಿದ ಖುಷಿಯನ್ನು ನೋಡುಗರೆಲ್ಲರ ಮನಸಿಗಿಳಿಯುವಂತೆ ಮಾಡುತ್ತದೆ.

    ರೇಟಿಂಗ್: 3.5/5 

  • ಟೆಕ್ಕಿಗಳ ಮನೋಲೋಕ ಅನಾವರಣಗೊಳಿಸಲಿರೋ ವೀಕೆಂಡ್!

    ಟೆಕ್ಕಿಗಳ ಮನೋಲೋಕ ಅನಾವರಣಗೊಳಿಸಲಿರೋ ವೀಕೆಂಡ್!

    ಸುರೇಶ್ ಶೃಂಗೇರಿ ನಿರ್ದೇಶನ ಮಾಡಿರುವ ವೀಕೆಂಡ್ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಮಿಲಿಂದ್ ಮತ್ತು ಸಂಜನಾ ಬುರ್ಲಿ ನಾಯಕ ನಾಯಕಿಯರಾಗಿ ನಟಿಸುತ್ತಿರೋ ಈ ಚಿತ್ರದಲ್ಲಿ ಅನಂತ್ ನಾಗ್ ಪ್ರಧಾನ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಈ ಸಿನಿಮಾ ಬಗ್ಗೆ ಈ ಪಾಟಿ ಕ್ರೇಜ್ ಹುಟ್ಟಿಕೊಂಡಿರೋದರ ಹಿಂದೆ ಅನಂತ್ ಪಾತ್ರದ ವೈಶಿಷ್ಟ್ಯವೂ ಸೇರಿಕೊಂಡಿದೆ.

    ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರಿನಡಿಯಲ್ಲಿ ಮಂಜುನಾಥ್ ಡಿ ಅವರು ನಿರ್ಮಾಣ ಮಾಡಿರೋ ಚಿತ್ರ ವೀಕೆಂಡ್. ಇದೊಂದು ಯುವ ಆವೇಗವನ್ನು ಒಳಗೊಂಡಿರುವ, ಈ ಮೂಲಕವೇ ಸಾಮಾಜಿಕ ಕಾಳಜಿಯನ್ನೂ ಕೂಡಾ ಪ್ರಚುರಪಡಿಸೋ ಪಕ್ಕಾ ಕಮರ್ಶಿಯಲ್ ಚಿತ್ರ. ಹೊಸ ತಂತ್ರಜ್ಞಾನ, ಹೊಸ ಬಗೆಯ ನಿರೂಪಣೆಯೊಂದಿಗೆ ವೀಕೆಂಡ್ ಬೇರೆಯದ್ದೇ ರೀತಿಯಲ್ಲಿ ಪ್ರೇಕ್ಷಕರಿಗೆಲ್ಲ ಮಜಾ ಕೊಡುವಂತೆ ಮೂಡಿ ಬಂದಿದೆಯಂತೆ.

    ಇಲ್ಲಿ ಸಾಫ್ಟ್‍ವೇರ್ ಉದ್ಯೋಗಿಗಳ ಜಗತ್ತನ್ನು ಕಣ್ಣಿಗೆ ಕಟ್ಟಿದಂತೆ ಅನಾವರಣಗೊಳಿಸಲಾಗಿದೆಯಂತೆ. ಹೇಳಿ ಕೇಳಿ ಐಟಿ ವಲಯದ ಮಂದಿಗೆ ಈ ವೀಕೆಂಡ್ ಮೋಜು ಮಸ್ತಿ ಅನ್ನೋದು ಫೇವರಿಟ್ ಅಂಶ. ಆದರೆ ಅಳತೆ ಮೀರಿದರೆ ವೀಕೆಂಡ್ ಮಸ್ತಿ ಎಂಬುದು ಭೀಕರ ಅನಾಹುತಗಳಿಗೂ ಕಾರಣವಾಗಿ ಬಿಡುತ್ತದೆ. ಅಂಥಾ ಅಂಶಗಳನ್ನು ಫ್ಯಾಮಿಲಿ ಸೆಂಟಿಮೆಂಟಿನ ಸುತ್ತ ಬೆಸೆದು ರೋಚಕವಾದ ಕಥೆಯ ಮೂಲಕ ಈ ಚಿತ್ರವನ್ನು ಅಣಿಗೊಳಿಸಲಾಗಿದೆ.

    ಈ ಚಿತ್ರದಲ್ಲಿ ಅನಂತ್ ನಾಗ್ ನಾಯಕನ ತಾತನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅವರದ್ದು ಯುವ ಸಮೂಹವನ್ನು ಸರಿ ದಾರಿಗೆ ತರುವ, ತನ್ನ ಮೊಮ್ಮಗನನ್ನು ಎಲ್ಲ ಎಡವಟ್ಟುಗಳಿಂದ ಪಾರುಗಾಣಿಸೋ ಪಾತ್ರ. ಮಿಲಿಂದ್ ಮತ್ತು ಸಂಜನಾ ಬುರ್ಲಿ ಈ ಚಿತ್ರದಲ್ಲಿ ನಾಯಕ ನಾಯಕಿಯರಾಗಿ ನಟಿಸಿದ್ದಾರೆ.

  • ಪಾರ್ವತಮ್ಮನ ಮಗಳು ಇನ್ವೆಸ್ಟಿಗೇಟಿವ್ ಆಫೀಸರ್ ವೈದೇಹಿ!

    ಪಾರ್ವತಮ್ಮನ ಮಗಳು ಇನ್ವೆಸ್ಟಿಗೇಟಿವ್ ಆಫೀಸರ್ ವೈದೇಹಿ!

    ಬೆಂಗಳೂರು: ದಿಶಾ ಎಂಟರ್ ಪ್ರೈಸಸ್ ಮೂಲಕ ಕೆ.ಎಂ ಶಶಿಧರ್ ನಿರ್ಮಾಣ ಮಾಡಿರುವ ಡಾಟರ್ ಆಫ್ ಪಾರ್ವತಮ್ಮ ಚಿತ್ರ ಇದೇ ತಿಂಗಳ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಹರಿಪ್ರಿಯಾ ನಾಯಕಿಯಾಗಿ ನಟಿಸಿರೋ ಈ ಚಿತ್ರವೀಗ ಎಲ್ಲ ದಿಕ್ಕಿನಲ್ಲಿಯೂ ಪ್ರೇಕ್ಷಕರನ್ನು ಮೋಡಿಗೀಡು ಮಾಡಿದೆ. ಅದುವೇ ಪ್ರೇಕ್ಷಕರನ್ನು ಕೈ ಹಿಡಿದು ಥೇಟರಿಗೆ ಕೈ ಹಿಡಿದು ಕರೆ ತರುವ ನಿರೀಕ್ಷೆಗಳೂ ದಟ್ಟವಾಗಿವೆ.

    ಇದು ಶಂಕರ್ ಜೆ ನಿರ್ದೇಶನದ ಚೊಚ್ಚಲ ಚಿತ್ರ. ಮೊದಲ ಪ್ರಯತ್ನದಲ್ಲಿಯೇ ಅವರು ಹೊಸಾ ಥರದ ಕಥೆಯೊಂದನ್ನು ಕಮರ್ಶಿಯಲ್ ಶೈಲಿಯಲ್ಲಿಯೇ ಹೇಳಲು ಮುಂದಾಗಿದ್ದಾರೆ. ಈ ಚಿತ್ರ ಆರಂಭ ಕಾಲದಿಂದಲೂ ಹರಿಪ್ರಿಯಾ ಅವರ ಗೆಟಪ್ಪುಗಳ ಝಲಕ್ಕಿನಿಂದಲೇ ಟಾಕ್ ಕ್ರಿಯೇಟ್ ಮಾಡುತ್ತಾ ಸಾಗಿ ಬಂದಿತ್ತು. ಟಾಮ್ ಬಾಯ್ ಲುಕ್ ಅಂತೂ ಎಲ್ಲರನ್ನೂ ಸೆಳೆದುಕೊಂಡಿತ್ತು. ಇದನ್ನೂ ಓದಿ: ಡಾಟರ್ ಆಫ್ ಪಾರ್ವತಮ್ಮ ಮತ್ತು ಟಗರು ಕಾಕ್ರೋಚ್!

    ಈ ಚಿತ್ರದಲ್ಲಿ ಹರಿಪ್ರಿಯಾ ಎರಡು ಶೇಡುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಫ್ಲ್ಯಾಷ್‍ಬ್ಯಾಕ್‍ನಲ್ಲಿ ಕಾಲೇಜು ಹುಡುಗಿಯಾಗಿ ಟಾಮ್ ಬಾಯ್ ಲುಕ್‍ನಲ್ಲಿ ಅವರು ಕಂಗೊಳಿಸಿದ್ದಾರೆ. ಇನ್ನುಳಿದಂತೆ ಎಂಥಾದ್ದೇ ಪ್ರಕರಣವನ್ನಾದರೂ ಲೀಲಾಜಾಲವಾಗಿ ಬೆಂಬೀಳುವ ಖಡಕ್ ಸಿಐಡಿ ಅಧಿಕಾರಿಯಾಗಿಯೂ ಅವರು ನಟಿಸಿದ್ದಾರೆ. ಈ ಚಿತ್ರದಲ್ಲಿ ಅವರ ಪಾತ್ರದ ಹೆಸರೇನೆಂಬ ಕುತೂಹಲ ಅಭಿಮಾನಿಗಳಲ್ಲಿತ್ತು. ಹರಿಪ್ರಿಯಾ ಪಾತ್ರದ ಹೆಸರು ವೈದೇಹಿ ಎಂಬ ಗುಟ್ಟನ್ನು ಚಿತ್ರತಂಡ ಬಿಟ್ಟುಕೊಟ್ಟಿದೆ. ಇದನ್ನೂ ಓದಿ: ಸುಮಲತಾ ಅಂಬರೀಶ್ ಪಾರ್ವತಮ್ಮನಾದ ವಿಸ್ಮಯ!

    ಇಲ್ಲಿ ಕ್ರೈಂ ಥ್ರಿಲ್ಲರ್ ಕಥೆಯ ಜೊತೆ ಜೊತೆಗೇ ತಾಯಿ ಮಗಳ ಸೆಂಟಿಮೆಂಟ್ ದೃಶ್ಯಗಳೂ ಪ್ರಧಾನವಾಗಿರಲಿದೆ. ಸಾಮಾನ್ಯವಾಗಿ ಪೊಲೀಸ್ ಪಾತ್ರವೆಂದಾಕ್ಷಣ ಅಬ್ಬರ ಅರಚಾಟಗಳಿರುತ್ತವೆಂಬ ವಾತಾವರಣವಿದೆ. ಆದರೆ ಸೂಕ್ಷ್ಮ ಸಂವೇದನೆ ಹೊಂದಿರೋ ಈ ಪಾತ್ರ ಎಲ್ಲಕ್ಕಿಂತಲೂ ಭಿನ್ನವಾಗಿ ನೋಡುಗರೆಲ್ಲರ ಆಳಕ್ಕಿಳಿಯುವಷ್ಟು ಸಶಕ್ತವಾಗಿದೆ ಎಂಬುದು ಚಿತ್ರತಂಡದ ಭರವಸೆ.

  • ಈ ವಾರ ಬಿಚ್ಚಿಕೊಳ್ಳಲಿದೆ ವೀಕೆಂಡ್ ವೈಚಿತ್ರ್ಯ!

    ಈ ವಾರ ಬಿಚ್ಚಿಕೊಳ್ಳಲಿದೆ ವೀಕೆಂಡ್ ವೈಚಿತ್ರ್ಯ!

    ಅನಂತ್ ನಾಗ್ ಯಾವ ಚಿತ್ರದಲ್ಲಿಯೇ ಆದರೂ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆಂದರೇನೇ ಅದರೆಡೆಗೆ ಜನ ಆಕರ್ಷಿತರಾಗುತ್ತಾರೆ. ಹಾಗಿರೋವಾಗ ಅವರು ಪ್ರಧಾನ ಪಾತ್ರ ನಿರ್ವಹಿಸಿದ್ದಾರೆಂದರೆ ಕುತೂಹಲ ಹುಟ್ಟದಿರಲು ಸಾಧ್ಯವೇ ಇಲ್ಲ. ಇಂಥಾದ್ದೊಂದು ಕಾರಣದಿಂದಲೇ ಎಲ್ಲ ಪ್ರೇಕ್ಷಕರನ್ನೂ ಸೆಳೆದುಕೊಂಡಿರೋ ಚಿತ್ರ ವೀಕೆಂಡ್. ಇದೀಗ ಇದು ಬಿಡುಗಡೆಯಾಗೋ ದಿನಾಂಕ ಫಿಕ್ಸಾಗಿದೆ.

    ಶೃಂಗೇರಿ ಸುರೇಶ್ ನಿರ್ದೇಶನದ ಈ ಚಿತ್ರ ಈ ವಾರವೇ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರಿನಡಿಯಲ್ಲಿ ಮಂಜುನಾಥ್ ಡಿ ನಿರ್ಮಾಣ ಮಾಡಿರೋ ವೀಕೆಂಡ್ ಚಿತ್ರ ಈಗಾಗಲೇ ಭರ್ಜರಿಯಾಗಿ ಸೌಂಡ್ ಮಾಡಿದೆ. ಟ್ರೈಲರ್ ಮೂಲಕವೇ ಈ ಸಿನಿಮಾದಲ್ಲೇನೋ ಇದೆ ಎಂಬಂಥಾ ಸುಳಿವನ್ನು ಕುತೂಹಲವಾಗಿ ಪ್ರೇಕ್ಷಕರತ್ತ ದಾಟಿಸುವಲ್ಲಿಯೂ ಚಿತ್ರತಂಡ ಯಶ ಕಂಡಿದೆ.

    ಅಖಂಡ ಮೂರು ದಶಕಗಳ ಕಾಲ ಚಿತ್ರರಂಗದಲ್ಲಿ ಚಾಲ್ತಿಯಲ್ಲಿದ್ದು ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿರುವವರು ಶೃಂಗೇರಿ ಸುರೇಶ್. ಶಂಕರ್ ನಾಗ್ ಅವರಂಥಾ ಮೇರು ನಟರ ಚಿತ್ರಗಳಿಗೂ ಕೆಲಸ ಮಾಡಿದ್ದ ಅವರು ಹಲವಾರು ಹಿರಿಯ ನಟರೊಂದಿಗೂ ಆತ್ಮೀಯ ಸಖ್ಯ ಹೊಂದಿರುವವರು. ಸುರೇಶ್ ತೀರಾ ಈಗಿನ ಜನರೇಷನ್ನಿನ ಆವೇಗಗಳನ್ನು ಆವಾಹಿಸಿಕೊಂಡೇ ಈ ಚಿತ್ರದ ಕಥೆಯನ್ನು ಸಿದ್ಧಪಡಿಸಿದ್ದಾರೆ.

    ವೀಕೆಂಡ್ ಅಂದರೆ ಐಟಿ ವಲಯದಲ್ಲಿರುವವರೂ ಸೇರಿದಂತೆ ಎಲ್ಲರಿಗೂ ಅಚ್ಚುಮೆಚ್ಚು. ಅದರಲ್ಲಿಯೂ ಐಟಿ ವಲಯದವರಿಗೆ ವೀಕೆಂಡ್ ಮೋಜು ಮಸ್ತಿಯಿಲ್ಲದಿದ್ದರೆ ಕಾಲವೆಂಬುದು ರುಚಿಸೋದಿಲ್ಲ. ಆದರೆ ಕೊಂಚ ಎಚ್ಚರ ತಪ್ಪಿದರೂ ಕೂಡಾ ಈ ಮೋಜು ಮಸ್ತಿ ಬದುಕನ್ನೇ ಅಲ್ಲಾಡಿಸಿ ಹಾಕಿ ಬಿಡುತ್ತದೆ. ಇಂಥಾ ಸೂಕ್ಷ್ಮವಾದ ಕಥಾ ಹಂದರವನ್ನು ಥ್ರಿಲ್ಲರ್ ಶೈಲಿಯಲ್ಲಿ ನಿರೂಪಿಸಲಾಗಿದೆಯಂತೆ.

    ಈ ಚಿತ್ರದಲ್ಲಿ ಮಿಲಿಂದ್ ಮತ್ತು ಸಂಜನಾ ಬುರ್ಲಿ ನಾಯಕ ನಾಯಕಿಯರಾಗಿ ಅಭಿನಯಿಸಿದ್ದಾರೆ. ಶಶಿಧರ್ ಛಾಯಾಗ್ರಹಣ, ಬಾಬು ಖಾನ್ ಕಲಾ ನಿರ್ದೇಶನ, ಮಂಜುನಾಥ್ ಜಂಬೆ ಸಹ ನಿರ್ದೇಶನ, ಮನೋಜ್ ಸಂಗೀತ ಹಾಗೂ ಅನಂತ್ ನಾಗ್, ಮಂಜುನಾಥ್, ನೀನಾಸಂ ರಘು, ಬ್ಯಾಂಕ್ ಸತೀಶ್, ನೀತು ಬಾಲಾ, ವೀಣಾ ಜಯಶಂಕರ್, ಸಂಜಯ್ ನಾಗೇಶ್, ಮಂಜುನಾಥ ಶಾಸ್ತ್ರಿ, ಗೋಪಿನಾಥ್ ಭಟ್, ನಾಗಭೂಷಣ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.

  • ಸುಮಲತಾ ಅಂಬರೀಶ್ ಪಾರ್ವತಮ್ಮನಾದ ವಿಸ್ಮಯ!

    ಸುಮಲತಾ ಅಂಬರೀಶ್ ಪಾರ್ವತಮ್ಮನಾದ ವಿಸ್ಮಯ!

    ಬೆಂಗಳೂರು: ಅಪಾರ ಅಭಿಮಾನಿ ಬಳಗವನ್ನು ಹೊಂದಿರುವವರು ಸುಮಲತಾ ಅಂಬರೀಶ್. ಇತ್ತೀಚಿನ ದಿನಗಳಲ್ಲಿ ಪೋಷಕ ಪಾತ್ರಗಳಲ್ಲಿ ಬ್ಯುಸಿಯಾಗಿರೋ ಅವರು ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಅಜೇಯ್ ರಾವ್ ತಾಯಿಯಾಗಿ ನಟಿಸಿದ್ದರು. ಇದೀಗ ಡಾಟರ್ ಆಫ್ ಪಾರ್ವತಮ್ಮ ಚಿತ್ರದಲ್ಲಿ ನಾಯಕಿ ಹರಿಪ್ರಿಯಾ ಅಮ್ಮನಾಗಿ ಭಾವನಾತ್ಮಕವಾದ ಪಾತ್ರವೊಂದರಲ್ಲಿ ನಟಿಸಿದ್ದಾರೆ.

    ನಿರ್ದೇಶಕ ಶಂಕರ್ ಜೆ ಕಥೆ ಬರೆಯೋ ಸಂದರ್ಭದಲ್ಲಿ ತಾವು ಸೃಷ್ಟಿಸಿದ ಪಾತ್ರಗಳಿಗೆ ಯಾವುದೇ ಕಲಾವಿದರನ್ನು ಕಲ್ಪಿಸಿಕೊಂಡಿರಲಿಲ್ಲವಂತೆ. ಕಥೆ ಬರೆದು, ಸ್ಕ್ರಿಪ್ಟ್ ರೆಡಿಯಾದ ನಂತರವಷ್ಟೇ ಪಾತ್ರಗಳಿಗೆ ಕಲಾವಿದರ ಆಯ್ಕೆಯ ಬಗ್ಗೆ ತಲೆ ಕೆಡಿಸಿಕೊಂಡಿದ್ದರಂತೆ. ಈ ಸಂದರ್ಭದಲ್ಲಿ ಇಡೀ ಕಥೆಯ ಜೀವಾಳದಂತಿರೋ ತಾಯಿಯ ಪಾತ್ರಕ್ಕೆ ಸುಮಲತಾ ಅಂಬರೀಶ್ ಅವರೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದು ಆ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದರಂತೆ.

    ನಿರ್ದೇಶಕರು ಇಂಥಾದ್ದೊಂದು ನಿರ್ಧಾರ ಕೈಗೊಳ್ಳುವ ಸಂದರ್ಭದಲ್ಲಿ ಸುಮಲತಾ ಅವರು ಬ್ಯುಸಿಯಾಗಿ ಬಿಟ್ಟಿದ್ದರು. ಆಗ ಚಿತ್ರವೊಂದರ ಚಿತ್ರೀಕರಣದಲ್ಲಿ ಅವರು ತೊಡಗಿಸಿಕೊಂಡಿದ್ದರಂತೆ. ಈ ನಡುವೆಯೇ ಶಂಕರ್ ಕಥೆ ಮತ್ತು ಅಮ್ಮನ ಪಾತ್ರದ ಮಹತ್ವವನ್ನು ವಿವರಿಸಿ ಹೇಳಿದ್ದರಂತೆ. ಕಥೆ ಕೇಳಿ ಥ್ರಿಲ್ ಆದ ಸುಮಲತಾ ತಮ್ಮ ಪಾತ್ರವನ್ನೂ ಮೆಚ್ಚಿಕೊಂಡು ಆಗಲೇ ಒಪ್ಪಿಗೆ ಸೂಚಿಸಿದ್ದರಂತೆ. ಹೀಗೆ ತುಂಬಾ ಇಷ್ಟಪಟ್ಟು ಒಪ್ಪಿಕೊಂಡ ಈ ಚಿತ್ರದಲ್ಲವರು ತಾಯಿಯ ಪಾತ್ರವನ್ನು ಆವಾಹಿಸಿಕೊಂಡು ನಟಿಸಿದ್ದಾರೆಂಬ ಮೆಚ್ಚುಗೆ ಚಿತ್ರತಂಡದಲ್ಲಿದೆ.

    ಇದೀಗ ಸುಮಲತಾ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಕಣಕ್ಕಿಳಿದಿದ್ದಾರೆ. ಇದೇ ತಿಂಗಳ ಇಪ್ಪತ್ಮೂರರಂದು ಚುನಾವಣಾ ಫಲಿತಾಂಶ ಹೊರ ಬೀಳಲಿದೆ. ಅದಾದ ಮಾರನೇ ದಿನವೇ ಡಾಟರ್ ಆಫ್ ಪಾರ್ವತಮ್ಮ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಸುಮಲತಾ ಅಂಬರೀಶ್ ಅವರ ಪಾತ್ರ ನಿಜಕ್ಕೂ ಹೇಗಿದೆ ಎಂಬ ಕುತೂಹಲವಂತೂ ಎಲ್ಲರಲ್ಲಿಯೂ ಇದ್ದೇ ಇದೆ.

  • ವೀಕೆಂಡ್ ಬಗ್ಗೆ ಅನಂತ್ ನಾಗ್ ಹೇಳಿದ್ದೇನು?

    ವೀಕೆಂಡ್ ಬಗ್ಗೆ ಅನಂತ್ ನಾಗ್ ಹೇಳಿದ್ದೇನು?

    ಹಿರಿಯ ನಟ ಅನಂತ್ ನಾಗ್ ಒಂದು ಸಿನಿಮಾವನ್ನು ಒಪ್ಪಿಕೊಳ್ಳಲು ಅನುಸರಿಸೋ ರೀತಿ ರಿವಾಜುಗಳ ಬಗ್ಗೆ ಚಿತ್ರರಂಗದ ಮಂದಿಗೆ ಸ್ಪಷ್ಟವಾದ ಅಂದಾಜಿರುತ್ತದೆ. ತಮ್ಮ ಪಾತ್ರ ಮಾತ್ರವಲ್ಲ, ಇಡೀ ಕಥೆಯ ಇಂಚಿಂಚನ್ನೂ ಅಳೆದೂ ತೂಗಿದ ನಂತರವಷ್ಟೇ ಅವರು ಒಪ್ಪಿಗೆ ಸೂಚಿಸುತ್ತಾರೆ. ಆದರೆ ಅದು ತುಂಬಾ ಕಷ್ಟದ ಕೆಲಸ. ಅಂಥಾದ್ದರಲ್ಲಿ ಸ್ಕ್ರಿಪ್ಟ್ ನೋಡಿಯೇ ಅನಂತ್ ನಾಗ್ ಮೆಚ್ಚಿಕೊಳ್ಳುತ್ತಾರೆಂದರೆ ಅದು ಯಾವ ಚಿತ್ರಕ್ಕಾದರೂ ಗೆಲುವಿನ ಸ್ಪಷ್ಟ ಸೂಚನೆ. ಈ ವಾರ ಬಿಡುಗಡೆಗೆ ಅಣಿಯಾಗಿರುವ ವೀಕೆಂಡ್ ಚಿತ್ರ ಖುದ್ದು ಅನಂತ್ ನಾಗ್ ಅವರಿಂದಲೇ ಮೆಚ್ಚಿಗೆ ಗಳಿಸಿಕೊಂಡಿತ್ತೆಂಬುದು ನಿಜವಾದ ವಿಶೇಷ.

    ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರಿನಡಿಯಲ್ಲಿ ಮಂಜುನಾಥ್ ಡಿ ನಿರ್ಮಾಣ ಮಾಡಿರೋ, ಶೃಂಗೇರಿ ಸುರೇಶ್ ನಿರ್ದೇಶನದ ವೀಕೆಂಡ್ ಟೆಕ್ಕಿಗಳ ಜಗತ್ತಿನ ಸುತ್ತ ನಡೆಯೋ ಕಥಾ ಹಂದರ ಹೊಂದಿರೋ ಚಿತ್ರ. ಇದರಲ್ಲಿ ಅನಂತ್ ನಾಗ್ ಟೆಕ್ಕಿಯ ತಾತನಾಗಿ ನಟಿಸಿದ್ದಾರೆ. ಸಾಮಾನ್ಯವಾಗಿ ಎಲ್ಲವನ್ನೂ ನೇರ ನಿಷ್ಠುರವಾಗಿಯೇ ಹೇಳಿ ಬಿಡುವ ಸ್ವಭಾವದ ಅನಂತ್, ವೀಕೆಂಡ್ ಬಗ್ಗೆ ಮಾತ್ರ ಮೆಚ್ಚಿಕೊಂಡು ಭೇಷ್ ಅಂದಿದ್ದಾರೆಂದರೆ ಈ ಚಿತ್ರದ ಬಗ್ಗೆ ಯಾರಿಗಾದರೂ ಒಲವು ಮೂಡದಿರಲು ಸಾಧ್ಯವಿಲ್ಲ.

    ಆರಂಭದಲ್ಲಿ ಈ ಚಿತ್ರದ ಸ್ಕ್ರಿಪ್ಟ್ ಪಡೆದು ಎರಡೆರಡು ಸಲ ಓದಿಕೊಂಡಿದ್ದ ಅನಂತ್ ನಾಗ್ ಖುಷಿಯಿಂದಲೇ ಡೇಟ್ಸ್ ಕೊಟ್ಟಿದ್ದರಂತೆ. ಜೊತೆಗೆ ಕಥೆ ತುಂಬಾ ಚೆನ್ನಾಗಿದೆ ಎಂಬ ಮೆಚ್ಚುಗೆಯ ಮಾತುಗಳನ್ನೂ ಆಡಿದ್ದರಂತೆ. ಬಳಿಕ ಹಿರಿಯರಾಗಿ ಚಿತ್ರತಂಡಕ್ಕೆ ಹುರುಪು ತುಂಬುತ್ತಲೇ ಚಿತ್ರೀಕರಣ ಮುಗಿಸಿಕೊಂಡ ಕ್ಷಣದಲ್ಲಿ ಸ್ಕ್ರಿಪ್ಟ್‍ಗಿಂತಲೂ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ ಅಂತ ನಿರ್ದೇಶಕರ ಬೆನ್ತಟ್ಟಿದ್ದರಂತೆ. ಅನಂತ್ ನಾಗ್ ಅವರ ಮೆಚ್ಚುಗೆಯ ಮಾತುಗಳೇ ಈ ಚಿತ್ರದ ಗೆಲುವಿನ ಮುನ್ಸೂಚನೆಯಂತೆ ಕಾಣಿಸುತ್ತಿದೆ.

    ಹೀಗೆ ಆರಂಭಿಕವಾಗಿಯೇ ಅನಂತ್ ನಾಗ್ ಅವರಿಂದ ಮೆಚ್ಚಿಗೆ ಗಳಿಸಿಕೊಂಡಿದ್ದ ವೀಕೆಂಡ್ ಈ ವಾರ ಬಿಡುಗಡೆಗೊಳ್ಳುತ್ತಿದೆ. ಯುವ ಮನಸುಗಳ ವೀಕೆಂಡ್ ಎಂಬ ಆವೇಗದ ಸುತ್ತಾ ಹೊಸೆದಿರೋ ಚೆಂದದ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಇದುವರೆಗೂ ಈ ಚಿತ್ರದ ಬಗ್ಗೆ ಹಬ್ಬಿಕೊಂಡಿರೋ ಕುತೂಹಲಗಳಿಗೆಲ್ಲ ಈ ವಾರವೇ ಸ್ಪಷ್ಟ ಉತ್ತರ ಸಿಗಲಿದೆ.

  • ಥ್ರಿಲ್ಲರ್ ಅನುಭವ ನೀಡುವ ರೋಚಕ ರತ್ನಮಂಜರಿ!

    ಥ್ರಿಲ್ಲರ್ ಅನುಭವ ನೀಡುವ ರೋಚಕ ರತ್ನಮಂಜರಿ!

    ಬೆಂಗಳೂರು: ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ಅಪ್ಪಟ ಸಿನಿಮಾ ಪ್ರೇಮದಿಂದ ರೂಪಿಸಿರುವ ಚಿತ್ರ ರತ್ನಮಂಜರಿ. ರಾಜ್ ಚರಣ್ ನಾಯಕನಾಗಿ ನಟಿರೋ ಈ ಚಿತ್ರದ ಬಗ್ಗೆ ಆರಂಭದಿಂದಲೂ ಕುತೂಹಲವಿತ್ತು. ಅದಕ್ಕೆ ತಕ್ಕುದಾದ ರೋಚಕ ವಿಚಾರಗಳೇ ಚಿತ್ರತಂಡದ ಕಡೆಯಿಂದ ಹೊರ ಬೀಳುತ್ತಾ ಸಾಗಿ ಬಂದಿತ್ತು. ಇದೀಗ ಈ ಚಿತ್ರ ತೆರೆ ಕಂಡಿದೆ. ವಿಶಿಷ್ಟವಾದ ಕಥೆ, ವಿಭಿನ್ನ ನಿರೂಪಣೆ, ಎದೆ ಝಲ್ಲೆನ್ನಿಸುವಂಥಾ, ಕಣ್ಣಿಗೆ ಹಬ್ಬದಂಥಾ ದೃಷ್ಯ ಶ್ರೀಮಂತಿಕೆಯಿಂದ ಪ್ರೇಕ್ಷಕರ ಮನಸು ತಾಕಿದೆ.

    ಪ್ರಸಿದ್ಧ್ ನಿರ್ದೇಶನದ ಚೊಚ್ಚಲ ಚಿತ್ರವಾದ ರತ್ನಮಂಜರಿಯನ್ನು ವಿದೇಶದಲ್ಲಿ ನೆಲೆಸಿರುವ ಕನ್ನಡಿಗರಾದ ಸಂದೀಪ್, ನಟರಾಜ್ ಹಳೇಬೀಡು ಮತ್ತು ಸಂದೀಪ್ ಹಳೇಬೀಡು ನಿರ್ಮಾಣ ಮಾಡಿದ್ದಾರೆ. ಪ್ರೇಮಸಲ್ಲಾಪದೊಂದಿಗೇ ವಿದೇಶದಲ್ಲಿ ತೆರೆದುಕೊಂಡು, ಅಲ್ಲಿನ ಕಾರ್ಪೋರೇಟ್ ಕಾರಿಡಾರುಗಳ ತುಂಬಾ ಅಡ್ಡಾಡಿ, ಒಂದು ನಿಗೂಢ ಕೊಲೆಯ ಚುಂಗು ಹಿಡಿದು ಸೀದಾ ಕೊಡಗಿನ ಪಥದತ್ತ ಹೊರಳಿಕೊಳ್ಳೋ ಕಥೆ ಪಕ್ಕಾ ಕಮರ್ಷಿಯಲ್ ಪಟ್ಟುಗಳೊಂದಿಗೆ ಎಲ್ಲರ ಗಮನ ಸೆಳೆಯುವಂತೆ ಮೂಡಿ ಬಂದಿದೆ.

    ರಾಜ್ ಚರಣ್ ನಾಯಕನಾಗಿ ಸಿದ್ಧಾರ್ಥ್ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸಿದ್ಧಾರ್ಥ್ ಎಳವೆಯಿಂದಲೂ ಸೂಕ್ಷ್ಮ ಸ್ವಭಾವದ ಹುಡುಗ. ಬೆಳೆದು ದೊಡ್ಡವನಾದ ನಂತರವೂ ಅದೇ ಮನಸ್ಥಿತಿ ಹೊಂದಿರೋ ಆತ ಅಮೆರಿಕಾದಲ್ಲಿ ಸಸ್ಯಶಾಸ್ತ್ರಜ್ಞನಾಗಿ ಕಾರ್ಯ ನಿರ್ವಹಿಸುತ್ತಿರುತ್ತಾನೆ. ಅವನ ಮನೆ ಪಕ್ಕದಲ್ಲಿಯೇ ಕೊಡಗು ಮೂಲದ ದಂಪತಿಯೂ ವಾಸವಾಗಿರುತ್ತಾರೆ. ಆದರೆ ಅದೊಂದು ದಿನ ಆ ದಂಪತಿ ಕೊಲೆಯಾಗಿ ಬಿಡುತ್ತಾರೆ. ಸಸ್ಯಶಾಸ್ತ್ರಜ್ಞ ನಾಯಕ ಈ ಕೊಲೆಯ ಬೆಂಬಿದ್ದು ಕೊಡಗಿಗೆ ಬಂದಿಳಿಯೋ ಮೂಲಕ ಅಲ್ಲಿ ಕಥೆಯ ಓಟ ಆರಂಭವಾಗುತ್ತೆ. ಆ ನಂತರದ ಜರ್ನಿಯ ಪ್ರತಿ ತಿರುವುಗಳೂ ಕೂಡಾ ರೋಚಕ ಅನುಭವವನ್ನೇ ನೋಡುಗರಿಗೆ ದಾಟಿಸುತ್ತದೆ.

    ಅಮೆರಿಕದಲ್ಲಿ ಕೊಲೆಯಾದ ನಾಣಯ್ಯ ಒಡೆತನದ ರತ್ನಮಂಜರಿ ಎಂಬ ಎಸ್ಟೇಟಿನ ನಿಗೂಢದ ಸುತ್ತ ಕಥೆ ರೋಚಕವಾಗಿ ಚಲಿಸುತ್ತದೆ. ಆ ವಾತಾವರಣದ ಇಂಚಿಂಚು ಸೌಂದರ್ಯವನ್ನೂ ಪ್ರೀತಂ ತೆಗ್ಗಿನಮನೆ ತಮ್ಮ ಕ್ಯಾಮೆರಾದಲ್ಲಿ ಸೆರೆಯಾಗಿಸಿದ್ದಾರೆ. ನಿರ್ದೇಶಕ ಸಿದ್ಧಾರ್ಥ್ ಅಂಥಾ ಪ್ರಾಕೃತಿಕ ಸೌಂದರ್ಯದ ನಡುವೆಯೂ ಪ್ರೇಕ್ಷಕರು ಬೆಚ್ಚಿ ಬೀಳುವಂಥಾ ಆವೇಗದೊಂದಿಗೆ ದೃಶ್ಯ ಕಟ್ಟಿದ್ದಾರೆ. ಒಟ್ಟಾರೆಯಾಗಿ ಅಮೆರಿಕಾದಲ್ಲಿ ನಾಣಯ್ಯ ದಂಪತಿ ಕೊಲೆಯಾಗಲು ಕಾರಣವೇನು ಅನ್ನೋದರಿಂದ ಮೊದಲ್ಗೊಂಡು ರೋಚಕ ಕಥನವೇ ಈ ಚಿತ್ರದಲ್ಲಿದೆ.

    ನಿರ್ದೇಶಕ ಪ್ರಸಿದ್ಧ್ ಈ ಮೂಲಕ ಮೊದಲ ಹೆಜ್ಜೆಯಲ್ಲಿಯೇ ಭರವಸೆ ಮೂಡಿಸಿದ್ದಾರೆ. ನಾಯಕ ರಾಜ್ ಚರಣ್ ಕೂಡಾ ನಾಯಕನಾಗಿ ನೆಲೆಗೊಳ್ಳೋ ಲಕ್ಷಣಗಳನ್ನು ನಟನೆಯ ಮೂಲಕ ಹೊಮ್ಮಿಸಿದ್ದಾರೆ. ಅಖಿಲಾ ಪ್ರಕಾಶ್ ಮುದ್ದಾಗಿ ಪ್ರೇಕ್ಷಕರನ್ನು ಆವರಿಸಿಕೊಂಡಿದ್ದಾರೆ. ಇನ್ನುಳಿದಂತೆ ಈಗಾಗಲೇ ಪ್ರತಿಭಾವಂತ ನಟಿಯಾಗಿ ಗುರುತಿಸಿಕೊಂಡಿರುವ ಪಲ್ಲವಿ ರಾಜು ಕೂಡಾ ಚೆಂದಗೆ ನಟಿಸಿದ್ದಾರೆ. ವಿದೇಶದ ಕಾರ್ಪೋರೇಟ್ ಜಗತ್ತಿನಲ್ಲಿ ಸುತ್ತಾಡಿಸಿ ಕೊಡಗಿನ ನಿಗೂಢದಲ್ಲಿ ಕಥೆ ಸಾಗುವ ಈ ಚಿತ್ರ ಪ್ರತಿ ವರ್ಗದ ಪ್ರೇಕ್ಷಕರಿಗೂ ಮಜವಾದ ಅನುಭವ ನೀಡುವಂತೆ ಮೂಡಿ ಬಂದಿದೆ.

    ರೇಟಿಂಗ್: 4/5

  • ಮೇ 31ರಂದು ‘ಸುವರ್ಣ ಸುಂದರಿ’ ಬಿಡುಗಡೆ

    ಮೇ 31ರಂದು ‘ಸುವರ್ಣ ಸುಂದರಿ’ ಬಿಡುಗಡೆ

    ಎಸ್.ಟೀಂ ಪಿಕ್ಚರ್ಸ್ ಲಾಂಛನದಲ್ಲಿ ಎಂ.ಎಲ್ ಲಕ್ಷ್ಮೀ ನಿರ್ಮಿಸುತ್ತಿರುವ ನ್ಯಾಚುರಲ್, ಥ್ರಿಲ್ಲರ್ ಜಾನರ್ ನ ಹೊಸಬರ ಸಿನಿಮಾ ಸುವರ್ಣ ಸುಂದರಿ. ಚರಿತ್ರೆ ಭವಿಷ್ಯತ್ತನ್ನು ಹಿಂಬಾಲಿಸುತ್ತದೆ ಎಂಬ ಅಡಿ ಬರಹವನ್ನು ಸುವರ್ಣ ಸುಂದರಿ ಹೊಂದಿದೆ. ಈ ಸಿನಿಮಾವನ್ನು ಎಂ.ಎಸ್.ಎನ್ ಸೂರ್ಯ ನಿರ್ದೇಶನ ಮಾಡುತ್ತಿದ್ದು, ಇದೇ ಮೇ 31ರಂದು ಸಿನಿಮಾ ರಿಲೀಸ್ ಆಗಲಿದೆ.

    ಇತ್ತೀಚಿಗೆ ಸುವರ್ಣ ಸುಂದರಿ ಚಿತ್ರತಂಡ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ಡೈರೆಕ್ಟರ್ ಸೂರ್ಯ ಮಾತಾಡುತ್ತಾ, ಸುವರ್ಣಸುಂದರಿ ಚಿತ್ರದಲ್ಲಿ ವಿಎಫ್‍ಎಕ್ಸ್ ಗಾಗಿ ಒಂದು ವರ್ಷದವರೆಗೂ ಕೆಲಸ ನಡೆಯಿತು. ಟೈಂ ತೆಗೆದುಕೊಂಡರು. ಔಟ್ ಪುಟ್ ಅದ್ಭುತವಾಗಿ ಬಂದಿದೆ. ಈಗಿನ ಕನ್ನಡ ಚಿತ್ರಗಳಲ್ಲಿ ಸ್ಕ್ರೀನ್ ಪ್ಲೇ ಬೇಸ್ಡ್ ಚಿತ್ರಗಳಲ್ಲಿ ಒಳ್ಳೆಯ ಪ್ರಶಂಸೆಗಳಿವೆ. ಅದೇ ರೀತಿಯಲ್ಲಿ ಸುವರ್ಣಸುಂದರಿ ಮೂರು ಜನ್ಮಗಳ ಕಾನ್ಸೆಪ್ಟ್ ನಿಂದ ಇಂಟ್ರೆಸ್ಟಿಂಗ್ ಸ್ಕ್ರೀನ್ ಪ್ಲೇಯೊಂದಿಗೆ ಮಾಡಿದ್ದೇವೆ. ಪ್ರೇಕ್ಷಕರನ್ನು ಆಕರ್ಷಿಸುವುದರೊಂದಿಗೆ ಕಮರ್ಷಿಯಲ್ ಆಗಿ ಪಕ್ಕಾ ಹಿಟ್ ಆಗಬಹುದೆಂಬ ನಂಬಿಕೆಯಲ್ಲಿದ್ದೇವೆ ಎಂದಿದ್ದಾರೆ.

    ನಿರ್ಮಾಪಕಿ ಲಕ್ಷ್ಮೀ ಮಾತನಾಡಿ, ಸುವರ್ಣ ಸುಂದರಿ ಚಿತ್ರದ ಟ್ರೇಲರ್ ಸಾಧಾರಣ ಪ್ರೇಕ್ಷಕರಿಂದ ಹಿಡಿದು ಸೆಲೆಬ್ರೆಟಿಗಳವರೆಗೂ ಎಲ್ಲರಿಗೂ ಇಷ್ಟವಾಗಿದೆ. ಬಜೆಟ್ ಹೆಚ್ಚಾದರೂ ಕ್ವಾಲಿಟಿ ಔಟ್ ಪುಟ್ ನೋಡಿದ ಮೇಲೆ ಸಿನಿಮಾ ಗೆಲ್ಲುವುದರ ಬಗ್ಗೆ ತುಂಬಾ ಕಾನ್ಫಿಡೆಂಟ್ ಆಗಿ ಇದ್ದೀವಿ. ಶೀಘ್ರದಲ್ಲಿ ಧ್ವನಿ ಸುರುಳಿ ಬಿಡುಗಡೆ ಮಾಡಿ ಮೇ 31ರಂದು ಚಿತ್ರವನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದೇವೆ ಎಂದರು.

    ಸುವರ್ಣ ಸುಂದರಿಯಲ್ಲಿ ಜಯಪ್ರದ, ಪೂರ್ಣ, ಸಾಕ್ಷಿ, ಇಂದ್ರ, ರಾಮ್ ಮುದ್ದು ಕುಮಾರಿ, ಸಾಯಿ ಕುಮಾರ್, ತಿಲಕ್, ಅವಿನಾಶ್, ಜಯ ಜಗದೀಶ್, ಸತ್ಯ ಪ್ರಕಾಶ್ ಇನ್ನಿತರರು ನಿಟಿಸಿದ್ದಾರೆ. ಸಾಯಿ ಕಾರ್ತಿಕ್ ಸಂಗೀತ ಸಂಯೋಜನೆ ಈ ಚಿತ್ರಕ್ಕಿದ್ದು, ರಾಮ ಸುಂಕರ ಸಾಹಸ ಸಂಯೋಜನೆಯನ್ನು ಮಾಡುತ್ತಿದ್ದಾರೆ. ಯುವ ಮಹಂತಿ ಛಾಯಾಗ್ರಹಣ, ನಾಗು ಕಲಾ ನಿರ್ದೇಶನ, ಪ್ರವೀಣ್ ಪುಡಿ ಸಂಕಲನ ಈ ಚಿತ್ರಕ್ಕಿದೆ.