Tag: kannada cinema
-

ನಾಳೆ ಬಿಡುಗಡೆಗೊಳ್ಳಲಿದೆ ನಟಭಯಂಕರನ ಮತ್ತೊಂದು ಹಾಡು!
ಬೆಂಗಳೂರು: ಪ್ರಥಮ್ ನಿರ್ದೇಶನ ಮಾಡೋದರ ಜೊತೆಗೆ ನಾಯಕನಾಗಿಯೂ ನಟಿಸಿರುವ ಚಿತ್ರ ‘ನಟ ಭಯಂಕರ’. ನಿರ್ದೇಶನವನ್ನೇ ಪ್ರಧಾನ ಆಸಕ್ತಿಯಾಗಿಸಿಕೊಂಡಿದ್ದರೂ ನಟನೆಯನ್ನು ನೆಚ್ಚಿಕೊಂಡಿದ್ದ ಪ್ರಥಮ್ ಈ ಸಿನಿಮಾ ಮೂಲಕ ತಮ್ಮ ಪ್ರತಿಭೆಯನ್ನು ಸಾಣೆ ಹಿಡಿಯಲು ಮುಂದಾಗಿದ್ದಾರೆ. ಈ ಸಿನಿಮಾ ಆರಂಭವಾದಾಗಿಂದ ಚಿತ್ರಮಂದಿರದ ಹೊಸ್ತಿಲು ತಲುಪಿಕೊಳ್ಳೋವರೆಗೆ ಪ್ರತೀ ಹೆಜ್ಜೆಯೂ ಹೊಸತನದಿಂದ ಕೂಡಿರಬೇಕೆಂಬ ಇಂಗಿತ ಅವರಲ್ಲಿದೆ. ಆದ್ದರಿಂದಲೇ ಹಂತ ಹಂತವಾಗಿ ನಟ ಭಯಂಕರ ಸದ್ದು ಮಾಡುತ್ತಾ ಬಂದಿದ್ದಾನೆ.

ಇತ್ತೀಚೆಗಷ್ಟೇ ರಿಯಲ್ ಸ್ಟಾರ್ ಉಪೇಂದ್ರ ಹಾಡಿದ್ದ ಟೈಟಲ್ ಟ್ಯ್ರಾಕ್ ಲಾಂಚ್ ಆಗಿತ್ತು. ಅದು ಟ್ರೆಂಡ್ ಸೆಟ್ ಮಾಡಿರುವಾಗಲೇ ಪ್ರಥಮ್ ಮತ್ತೊಂದು ಹಾಡು ಬಿಡುಗಡೆಗೊಳಿಸಲು ತಯಾರಾಗಿದ್ದಾರೆ. ನಾಳೆ ನಟಭಯಂಕರ ಚಿತ್ರದ ಎರಡನೇ ಹಾಡು ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಪ್ರತಿಯೊಂದನ್ನೂ ಕಣ್ಣಲ್ಲಿ ಕಣ್ಣಿಟ್ಟು ಮುಂದಡಿ ಇಡುತ್ತಿರೋ ಪ್ರಥಮ್ ಈ ಹಾಡನ್ನೂ ಕೂಡಾ ಟ್ರೆಂಡ್ ಸೆಟ್ ಮಾಡುವಂತೆಯೇ ರೂಪಿಸಿದ್ದಾರಂತೆ. ಆದರೆ ಅದರ ರೂಪುರೇಷೆಗಳನ್ನು ಮಾತ್ರ ಗೌಪ್ಯವಾಗಿಟ್ಟಿದ್ದಾರೆ. ಅದೆಲ್ಲವೂ ನಾಳೆ ಎಲ್ಲರೆದುರು ಅನಾವರಣಗೊಳ್ಳಲಿದೆ.

ಪ್ರಥಮ್ ಪಾಲಿಗೆ ಇದು ನಾಯಕನಾಗಿ ಅನ್ನೋದಕ್ಕಿಂತಲೂ ನಿರ್ದೇಶಕನಾಗಿ ಅತ್ಯಂತ ಮಹತ್ವದ ಚಿತ್ರ. ಈ ಕಾರಣದಿಂದಲೇ ಎಲ್ಲ ನೀಲ ನಕ್ಷೆಯನ್ನು ರೆಡಿ ಮಾಡಿಕೊಂಡೇ ಅವರು ನಟಭಯಂಕರನ ಸಾರಥ್ಯ ವಹಿಸಿಕೊಂಡಿದ್ದರು. ಎಲ್.ಕೆ.ಅಡ್ವಾಣಿ ಅವರಿಂದ ಕ್ಲಾಪ್ ಮಾಡಿಸೋ ಮೂಲಕ ನಟಭಯಂಕರನಿಗೆ ಚಾಲನೆ ಕೊಟ್ಟಿದ್ದ ಪ್ರಥಮ್ ಈ ವರೆಗೂ ತಿರುಗಿ ನೋಡಿಯೇ ಇಲ್ಲ. ಅಷ್ಟಕ್ಕೂ ಈ ಸಿನಿಮಾ ಸುಖಾ ಸುಮ್ಮನೆ ಸದ್ದು ಮಾಡುತ್ತಿಲ್ಲ. ಇದರಲ್ಲಿ ಮಹತ್ವದ್ದೇನೋ ಕಂಟೆಂಟ್ ಇದೆ ಎಂಬ ಸುಳಿವು ಗಾಂಧಿನಗರದ ಗುಂಟ ಪಸರಿಸಿಕೊಂಡಿದೆ. ಆದ್ದರಿಂದಲೇ ಸ್ಟಾರ್ ನಟರೆಲ್ಲರೂ ಪ್ರಥಮ್‍ರನ್ನು ಬೆನ್ತಟ್ಟಿ ಪ್ರೋತ್ಸಾಹಿಸುತ್ತಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ ಟೈಟಲ್ ಟ್ರ್ಯಾಕ್ ಹಾಡಿ ಸಾಥ್ ಕೊಡುವ ಮೂಲಕ ನಟ ಭಯಂಕರನಿಗೆ ಮತ್ತಷ್ಟು ಮೈಲೇಜು ಸಿಕ್ಕಿತ್ತು. ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಕೂಡಾ ಪ್ರಥಮ್ ಕಸುಬುದಾರಿಕೆ ಕಂಡು ಬೆರಗಾಗಿದ್ದಾರೆ. ಇನ್ನು ಹೆಚ್ಚಾಗಿ ಯಾವ ಸಿನಿಮಾ ಸೆಟ್‍ಗಳಿಗೂ ಭೇಟಿ ನೀಡದ ಗೋಲ್ಡನ್ ಸ್ಟಾರ್ ಗಣೇಶ್ ನಟ ಭಯಂಕರ ಸೆಟ್ಟಿಗಾಗಮಿಸಿ ಎಲ್ಲ ಕೆಲಸ ಕಾರ್ಯಗಳ ಮಾಹಿತಿ ಪಡೆದುಕೊಂಡಿದ್ದರು. ಪ್ರಥಮ್‍ಗೆ ಬೆನ್ತಟ್ಟಿ ಪ್ರೋತ್ಸಾಹಿಸುತ್ತಲೇ ಸಿನಿಮಾ ಮೂಡಿ ಬಂದಿರೋ ರೀತಿಯನ್ನು ಮೆಚ್ಚಿಕೊಂಡಿದ್ದರು. ಒಟ್ಟಾರೆಯಾಗಿ ಚಿತ್ರಂಗವೇ ನಟಭಯಂಕರನ ಬೆನ್ನಿಗೆ ನಿಂತಿದೆ. ನಾಳೆ ಬಿಡುಗಡೆಯಾಗಲಿರೋ ಹಾಡು ಈ ಸಿನಿಮಾದ ಕ್ರೇಜ್ ಅನ್ನು ಮತ್ತಷ್ಟು ಮಿರುಗಿಸಲಿದೆ.
-

ಮನೆ ಮಾರಾಟಕ್ಕಿದೆ: ಕಾಡುವ ದೆವ್ವಕ್ಕೂ ನಗುವಿನ ಕಚಗುಳಿಯಿಡೋ ಚಿತ್ರ!
ಬೆಂಗಳೂರು: ಪ್ರತಿ ಪ್ರೇಕ್ಷಕರೂ ಕೂಡಾ ಸಿನಿಮಾ ನೋಡೋ ಪ್ರಧಾನ ಉದ್ದೇಶ ಮನೋರಂಜನೆ. ಅದರಲ್ಲಿಯೂ ಹಾಸ್ಯ ಸನ್ನಿವೇಶಗಳಿಗೆ ಮನಸೋಲದವರೇ ಇಲ್ಲ. ಹಾಗಿರುವಾಗ ಒಂದಿಡೀ ಚಿತ್ರವೇ ಕಾಮಿಡಿಮಯವಾಗಿದ್ದರೆ ಅದರತ್ತ ಪ್ರೇಕ್ಷಕರು ಆಕರ್ಷಿತರಾಗದಿರಲು ಸಾಧ್ಯವೇ ಇಲ್ಲ. ಈ ಕಾರಣದಿಂದಲೇ ಅಗಾಧ ನಿರೀಕ್ಷೆ ಮೂಡಿಸಿದ್ದ ‘ಮನೆ ಮಾರಾಟಕ್ಕಿದೆ’ ಚಿತ್ರವೀಗ ಬಿಡುಗಡೆಯಾಗಿದೆ. ಮಾರಾಟಕ್ಕಿರೋ ಮನೆ, ಅದಕ್ಕೆ ಥರ ಥರದ ಅನಿವಾರ್ಯತೆ, ವ್ಯಕ್ತಿತ್ವದ ಪೋಷಾಕು ತೊಟ್ಟು ಎಂಟ್ರಿ ಕೊಡುವ ಆಸಾಮಿಗಳೊಂದಿಗೆ ಭರಪೂರ ನಗುವಿನ ಮ್ಯಾಜಿಕ್ಕನ್ನು ನಿರ್ದೇಶಕ ಮಂಜು ಸ್ವರಾಜ್ ಮಾಡಿದ್ದಾರೆ. ಇದರಲ್ಲಿನ ಕಾಮಿಡಿ ಕಿಕ್ ಎಂಥಾದ್ದಿದೆಯೆಂದರೆ, ಅದು ಪ್ರೇಕ್ಷಿಕರಿಗೆ ಮಾತ್ರವಲ್ಲದೇ ಕಾಟ ಕೊಡಲು ಬಂದ ದೆವ್ವಗಳಿಗೂ ನಗೆಯ ಕಚಗುಳಿ ಇಡುವಂತಿದೆ!

ಸಾಧು ಕೋಕಿಲಾ, ಚಿಕ್ಕಣ್ಣ, ಕುರಿ ಪ್ರತಾಪ್ ಮತ್ತು ರವಿಶಂಕರ್ ಗೌಡ ಒಂದೆಡೆ ಸೇರಿದ್ದಾರೆಂದರೆ ಅಲ್ಲಿ ನಗುವಿನ ಒರತೆ ಹುಟ್ಟಿಕೊಳ್ಳೋದು ಗ್ಯಾರೆಂಟಿ ಎಂಬ ನಂಬಿಕೆ ಎಲ್ಲರಲ್ಲಿಯೂ ಇತ್ತು. ಅದನ್ನು ನಿಜವಾಗಿಸುವಂತೆಯೇ ನಿರ್ದೇಶಕರು ಪಾತ್ರಗಳನ್ನು ರೂಪಿಸಿದ್ದಾರೆ. ಮನೋರಂಜನೆಯೇ ಪ್ರಧಾನವಾಗಿರುವ ಕಥೆ, ಅದಕ್ಕೆ ಪೂಕವಾದ ಪಾತ್ರಗಳು ಮತ್ತು ಕ್ಷಣ ಕ್ಷಣವೂ ನಗೆಯುಕ್ಕಿಸುವಂತೆ ಪೋಣಿಸಿರುವ ಹಾಸ್ಯ ಸನ್ನಿವೇಶಗಳೊಂದಿಗೆ ಮಾರಾಟಕ್ಕಿರೋ ಮನೆ ತುಂಬಾ ನಗು ಹರಿಡಿಕೊಂಡಿದೆ. ಅದು ಪ್ರತಿ ನೋಡುಗರ ಮೈ ಮನಸುಗಳನ್ನೂ ವ್ಯಾಪಿಸಿಕೊಂಡು ಮುದಗೊಳಿಸುವಷ್ಟು ಶಕ್ತವಾಗಿದೆ.

ವಿದೇಶದಲ್ಲಿ ನೆಲೆಸಿದವನೊಬ್ಬನಿಗೆ ಊರಲ್ಲಿ ಅಪ್ಪ ಅಮ್ಮನಿರೋ ಮನೆಯನ್ನು ಮಾರಾಟ ಮಾಡೋ ಹಂಬಲ. ಆದರೆ ಅದರೊಳಗಿನ ದೆವ್ವ ಭೂತಗಳ ಕಾಟ ಊರಿಡೀ ತುಂಬಿಕೊಂಡು ಯಾರೆಂದರೆ ಯಾರೂ ಅದನ್ನು ಖರೀದಿ ಮಾಡೋ ಧೈರ್ಯ ತೋರೋದಿಲ್ಲ. ಈ ಕಾರಣದಿಂದಲೇ ಮನೆ ಮಾಲೀಕರು ಇದರೊಳಗಿನ ದೆವ್ವ ಓಡಿಸಿ ಮನೆ ಮಾರಾಟ ಮಾಡಿ ಕೊಟ್ಟವರಿಗೆ ಲಕ್ಷಗಟ್ಟಲೆ ಬಂಪರ್ ಬಹುಮಾನ ಘೋಷಣೆ ಮಾಡುತ್ತಾರೆ. ಬದುಕಿನ ನಾನಾ ಜಂಜಡಗಳಲ್ಲಿ ಮುಳುಗಿದ್ದ ನಾಲ್ಕು ಮಂದಿ ಆ ಸವಾಲನ್ನು ಸ್ವೀಕರಿಸಿ ದೆವ್ವವಿರೋ ಮನೆ ಪ್ರವೇಶಿಸಿದ ನಂತರ ಸಂಭವಿಸೋ ವಿದ್ಯಮಾನಗಳೇ ಈ ಸಿನಿಮಾದ ಜೀವಾಳ.

ಸಾಧು ಕೋಕಿಲಾ, ಚಿಕ್ಕಣ್ಣ, ಕುರಿ ಪ್ರತಾಪ್ ಮತ್ತು ರವಿಶಂಕರ್ ಗೌಡ ಹೇಗಾದರೂ ಮಾಡಿ ಕಾಸು ಹೊಂದಿಸೋ ದರ್ದು ಹೊಂದಿರೋ ಪಾತ್ರಗಳಿಗೆ ಪರಕಾಯ ಪ್ರವೇಶ ಮಾಡಿದಂತೆ ನಟಿಸಿದ್ದಾರೆ. ಅವರೆಲ್ಲರ ಪಾತ್ರಗಳಿಗೂ ಒಂದು ಹಿನ್ನೆಲೆ ಇದೆ. ಅವರಿಗೆ ಬಂದೊದಗಿದ ಕಾಸಿನ ಅನಿವಾರ್ಯತೆಗಳನ್ನು ನಿರ್ದೇಶಕರು ಮಜವಾಗಿಯೇ ತೋರಿಸಿದ್ದಾರೆ. ಇನ್ನುಳಿದಂತೆ ಶ್ರುತಿ ಹರಿಹರನ್ ಮತ್ತು ಕಾರುಣ್ಯಾ ರಾಮ್ ಪಾತ್ರಗಳೂ ಮೋಹಕವಾಗಿವೆ. ಒಂದು ಸಿನಿಮಾದ ಒಂದಷ್ಟು ಕಾಮಿಡಿ ಸನ್ನಿವೇಶಗಳನ್ನೇ ಸಮರ್ಥವಾಗಿ ನಿಭಾಯಿಸೋದು ಕಷ್ಟ. ಆದರೆ ನಿರ್ದೇಶಕ ಮಂಜು ಸ್ವರಾಜ್ ಒಂದಿಡೀ ಚಿತ್ರವನ್ನೇ ಭರಪೂರ ನಗುವಲ್ಲಿ ಮಿಂದೇಳುವಂತೆ ಕಟ್ಟಿ ಕೊಟ್ಟಿರೋದು ಇಡೀ ಸಿನಿಮಾದ ಪ್ಲಸ್ ಪಾಯಿಂಟ್. ನೀವೂ ಒಮ್ಮೆ ಮಾರಾಟಕ್ಕಿರೋ ದೆವ್ವದ ಮನೆಯನ್ನು ಕಣ್ತುಂಬಿಕೊಳ್ಳಿ. ಖಂಡಿತಾ ಭರ್ಜರಿ ಕಾಮಿಡಿ ನಗವಿನಲೆಯಲ್ಲಿ ಮಿಂದೇಳುವಂತೆ ಮಾಡುತ್ತದೆ.
ರೇಟಿಂಗ್: 3.5/5
-

ಕಿಚ್ಚ ಸುದೀಪ್ ಕಂಠಸಿರಿಯಲ್ಲಿ ‘ಕೃಷ್ಣ ಟಾಕೀಸ್’ ಹಾಡು
ಬೆಂಗಳೂರು: ಗೋಕುಲ ಎಂಟರ್ ಟೈನರ್ ಲಾಂಛನದಲ್ಲಿ ಗೋವಿಂದರಾಜು ಎ.ಹೆಚ್ ಅವರು ನಿರ್ಮಿಸುತ್ತಿರುವ ಹಾಗೂ ಅಜಯ್ ರಾವ್ ನಾಯಕರಾಗಿ ನಟಿಸುತ್ತಿರುವ ‘ಕೃಷ್ಣ ಟಾಕೀಸ್` ಚಿತ್ರಕ್ಕಾಗಿ ಅಭಿಷೇಕ್ ಹಾಗೂ ಪ್ರಮೋದ್ ಮರವಂತೆ ಅವರು ಬರೆದಿರುವ ‘ನೈಟಿ ಮಾತ್ರ ಹಾಕೋಬೇಡ ಮೇನಕ, ನಮಗೆ ನೈಂಟಿ ಹೊಡದಂಗೆ ಆಗ್ತದೆ ಜೀವಕ್ಕ` ಎಂಬ ಹಾಡಿನ ಟ್ರ್ಯಾಕ್ ಕೇಳಿರುವ ಕಿಚ್ಚ ಸುದೀಪ್ ಈ ಹಾಡನ್ನು ತಾವೇ ಹಾಡುವುದಾಗಿ ಒಪ್ಪಿಗೆ ಸೂಚಿಸಿದ್ದಾರೆ. ಸದ್ಯದಲ್ಲೇ ಈ ಹಾಡನ್ನು ಹಾಡಲಿದ್ದಾರೆ.
ವಿಜಯಾನಂದ್ ಈ ಚಿತ್ರದ ನಿರ್ದೇಶಕರು. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕರೇ ಬರೆದಿದ್ದಾರೆ. 20 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಚಿತ್ರಗಳಿಗೆ ಸಂಭಾಷಣೆ ಬರೆದು, ಗೀತರಚನೆ ಮಾಡಿರುವ ಆನಂದ ಪ್ರಿಯ ಈ ಚಿತ್ರದ ಮೂಲಕ ತಮ್ಮ ಹೆಸರನ್ನು ವಿಜಯಾನಂದ್ ಎಂದು ಬದಲಾವಣೆ ಮಾಡಿಕೊಂಡಿದ್ದಾರೆ.

ಶ್ರೀಧರ್ ವಿ ಸಂಭ್ರಮ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಅಭಿಷೇಕ್ ಜಿ ಕಾಸರಗೋಡು ಅವರ ಛಾಯಾಗ್ರಹಣವಿದೆ. ಶ್ರೀಕಾಂತ್ ಸಂಕಲನ, ಮದನ್ – ಹರಿಣಿ, ಭೂಷಣ್ ನೃತ್ಯ ನಿರ್ದೇಶನ, ವಿಕ್ರಂ ಸಾಹಸ ನಿರ್ದೇಶನ ಹಾಗೂ ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಅಜಯ್ ರಾವ್, ಅಪೂರ್ವ, ಚಿಕ್ಕಣ್ಣ, ಸಿಂಧೂ ಲೋಕನಾಥ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತೂಮಿನಾಡು, ಶೋಭ್‍ರಾಜ್, ಮಂಡ್ಯ ರಮೇಶ್, ನಿರಂತ್, ಯಶ್ ಶೆಟ್ಟಿ, ಉಮೇಶ್, ಶ್ರೀನಿವಾಸ ಪ್ರಭು, ಶಾಂಭವಿ, ಲಕ್ಷ್ಮೀಗೌಡ, ಯಮುನ, ಧರ್ಮೇಂದ್ರ ಅರಸ್ ಮುಂತಾದವರಿದ್ದಾರೆ. ಲಾಸ್ಯ ನಾಗರಾಜ್ ಅತಿಥಿಪಾತ್ರದಲ್ಲಿ ಅಭಿನಯಿಸಿದ್ದಾರೆ. -

ಹಿಕೋರ ಚಿತ್ರೀಕರಣ ಪೂರ್ಣ
ಬೆಂಗಳೂರು: ಶ್ರೀನೀಲಕಂಠೇಶ್ವರ ಸಿನಿ ಕಂಬೈನ್ಸ್ ಲಾಂಛನದಲ್ಲಿ ತಯಾರಾಗಿರುವ ‘ಹಿಕೋರಾ` ಚಿತ್ರತಂಡ ಚಿತ್ರೀಕರಣ ಮುಗಿಸಿದ ಸಂತಸದಲ್ಲಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಕೊಂಡಿದೆ. ನೀನಾಸಂನಲ್ಲಿ ಸುಮಾರು 18 ವರ್ಷಗಳ ಕಾಲ ವಿದ್ಯಾರ್ಥಿಗಳಿಗೆ ಅನ್ನ ಉಣಬಡಿಸಿದ ರತ್ನಶ್ರೀಧರ್ ಈ ಚಿತ್ರದ ನಿರ್ಮಾಪಕರು. ಬಹುತೇಕ ನೀನಾಸಂನಲ್ಲಿ ತರಬೇತಿ ಪಡೆದು, ತಮ್ಮ ಕೈ ತುತ್ತು ತಿಂದು ಬೆಳೆದವರನ್ನೇ ಈ ಚಿತ್ರದಲ್ಲಿ ಕಲಾವಿದರನ್ನಾಗಿ ಬಳಸಿಕೊಂಡಿದ್ದಾರೆ ನಿರ್ಮಾಪಕರು. ಈ ಚಿತ್ರದ ನಿರ್ದೇಶಕ ಮತ್ತು ನಾಯಕ ಎಂ.ಜಿ.ಕೃಷ್ಣ, ಯಶವಂತ ಶೆಟ್ಟಿ, ಸ್ಪಂದನ ಪ್ರಸಾದ್, ಮಹಾಂತೇಶ್, ಸರ್ದಾರ್ ಸತ್ಯ ಮುಂತದಾವರೆಲ್ಲ ನೀನಾಸಂನವರೇ.

ಚಿತ್ರದ ನಾಯಕರಾಗಿ ನಟಿಸಿರುವ ಕೃಷ್ಣಪೂರ್ಣ ಈ ಚಿತ್ರದ ನಿರ್ದೇಶಕರೂ ಹೌದು. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಕೃಷ್ಣಪೂರ್ಣ ಅವರೇ ಬರೆದಿದ್ದಾರೆ. ಪೂರ್ಣಚಂದ್ರತೇಜಸ್ವಿ ಸಂಗೀತ ನೀಡಿರುವ ಈ ಚಿತ್ರಕ್ಕೆ ಆಪ್ತಮಿತ್ರ, ಸಂಗೊಳ್ಳಿ ರಾಯಣ್ಣ ಖ್ಯಾತಿಯ ರಮೇಶ್‍ಬಾಬು ಅವರ ಛಾಯಾಗ್ರಹಣವಿದೆ. ಕಿರಣ್ ಸಂಕಲನ, ಮದನ್ – ಹರಿಣಿ ನೃತ್ಯ ನಿರ್ದೇಶನ ಹಾಗೂ ಡಾ.ನಾಗರಾಜ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ಸಹ ನಿರ್ಮಾಪಕರು ಕುಮಾರಿ ಆದ್ಯ. ಸುನೀಲ್ ಯಾದವ್ ಹಾಗೂ ವಿನಾಯಕರಾಮ ಕಲಗಾರು ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಪ್ರೊಡಕ್ಷನ್ ಕಂಟ್ರೋಲರ್ ಆಗಿ ಅಭಿರಾಮ್ ಕಾರ್ಯ ನಿರ್ವಹಿಸಿದ್ದಾರೆ. ಅಂದುಕೊಂಡಿದ್ದಕ್ಕಿಂತಲೂ ಅದ್ಭುತವಾಗಿ ಚಿತ್ರ ಮೂಡಿಬಂದಿರುವುದಕ್ಕೆ ಚಿತ್ರತಂಡ ಸಂತಸದಲ್ಲಿದೆ.ಕೃಷ್ಣಪೂರ್ಣ, ಯಶ್ವಂತ್ ಶೆಟ್ಟಿ, ಸ್ಪಂದನಾ ಪ್ರಸಾದ್, ಪ್ರಕಾಶ್ ಬೆಳವಾಡಿ, ಸರ್ದಾರ್ ಸತ್ಯ, ಮಹಾಂತೇಶ್ ರಾಮದುರ್ಗ, ಆನಂದ್ ಮಾಸ್ಟರ್, ಲಾವಂತಿ, ಮುನಾಲಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಖ್ಯಾತ ನಟ ಪ್ರಕಾಶ್ ಬೆಳವಾಡಿ ಅತೀ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ.
-

ಮನೆ ಮಾರಾಟಕ್ಕಿದೆ: ನಿರ್ದೇಶಕ ಮಂಜು ಸ್ವರಾಜ್‍ರ ಮಹಾ ಕನಸು!
ಬೆಂಗಳೂರು: ಒಂದು ಚಿತ್ರದಿಂದ ಇನ್ನೊಂದು ಚಿತ್ರಕ್ಕೆ ಯಾವ ನೆರಳೂ ಇಲ್ಲದಂಥಾ ಶೈಲಿಯಲ್ಲಿ ದೃಶ್ಯ ಕಟ್ಟೋದು ನಿರ್ದೇಶಕನೊಬ್ಬನ ಅಸಲಿ ಕಸುಬುದಾರಿಕೆ. ಹಾಗೆ ಒಂದು ಚಿತ್ರವಾದ ನಂತರ ಮತ್ತೊಂದರಲ್ಲಿ ಭಿನ್ನ ಜಾನರಿನ ಕಥೆಗಳನ್ನು ಆರಿಸಿಕೊಳ್ಳುತ್ತಾ ಸಾಗುವವರು ಮಾತ್ರವೇ ಯಾವುದೇ ಚಿತ್ರರಂಗಗಳಲ್ಲಿ ಚಾಲ್ತಿಯಲ್ಲಿರಲು ಸಾಧ್ಯ. ಈ ನಿಟ್ಟಿನಲ್ಲಿ ನೋಡ ಹೋದರೆ ಯುವ ನಿರ್ದೇಶಕ ಮಂಜು ಸ್ವರಾಜ್ ಅವರ ಯಶಸ್ಸಿನ ಗುಟ್ಟೂ ಕೂಡಾ ಇಂಥಾ ಬದಲಾವಣೆಯಲ್ಲಿಯೇ ಅಡಗಿದೆ. ಶಿಶಿರದಿಂದ ಮೊದಲೊಂಡು ಈವರೆಗೂ ವಿಶೇಷವಾದ ಕಥೆಗಳನ್ನೇ ಮುಟ್ಟುತ್ತಾ ಬಂದಿರುವ ಮಂಜು ಸ್ವರಾಜ್ ಮನೆ ಮಾರಾಟಕ್ಕಿದೆ ಚಿತ್ರದ ಮೂಲಕ ಇದೇ ಮೊದಲ ಬಾರಿ ಸಂಪೂರ್ಣವಾಗಿ ಕಾಮಿಡಿ ಜಾನರ್ ಚಿತ್ರವನ್ನು ರೂಪಿಸಿದ್ದಾರೆ.

ಮಂಜು ಸ್ವರಾಜ್ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಪ್ರತಿಭಾವಂತ ಯುವ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಶಿಶಿರ, ಪಟಾಕಿ, ಶ್ರಾವಣಿ ಸುಬ್ರಹ್ಮಣ್ಯ, ಶ್ರೀಕಂಠ ಮುಂತಾದ ಸಿನಿಮಾಗಳನ್ನು ನಿರ್ದೇಶನ ಮಾಡಿರೋ ಮಂಜು ಅತ್ಯತ್ತಮ ಬರಹಗಾರರಾಗಿ, ಸಿನಿಮಾ ರಂಗದಲ್ಲಿ ನಾನಾ ಅವತಾರಗಳನ್ನು ಎತ್ತಿರುವವರು. ಅತ್ಯಂತ ಕಷ್ಟದ ದಿನಗಳನ್ನು ಕಂಡು ಅದರ ನಡುವೆಯೂ ಚಿತ್ರರಂಗದಲ್ಲಿ ಹಂತ ಹಂತವಾಗಿ ಮೇಲೇರಿ ಬಂದಿರುವ ಮಂಜು ಸ್ವರಾಜ್ ಅವರ ಮಹಾ ಕನಸಿನಂಥಾ ಚಿತ್ರ ಮನೆ ಮಾರಾಟಕ್ಕಿದೆ.

ಮಂಜು ಸ್ವರಾಜ್ ನಿರ್ದೇಶಕ ನಾಗತಿಹಳ್ಳಿ ಚಂದ್ರ ಶೇಖರ್ ಅವರ ಸಮ್ಮುಖದಲ್ಲಿ ಅರಳಿಕೊಂಡಿರೋ ಪ್ರತಿಭೆ. ಇದುವರೆಗೂ ಪ್ರೊಡಕ್ಷನ್ ಬಾಯ್, ಕ್ಯಾಮೆರಾ ಅಸಿಸ್ಟೆಂಟ್ ಸೇರಿದಂತೆ ನಾನಾ ಕಾರ್ಯಗಳನ್ನು ಮಾಡುತ್ತಲೇ ನಿರ್ದೇಶಕನಾಗಬೇಕೆಂಬ ಕನಸನ್ನು ಗಟ್ಟಿಗೊಳಿಸಿಕೊಂಡವರು ಮಂಜು ಸ್ವರಾಜ್. ಆ ನಂತರದಲ್ಲಿ ಮತ್ತೊಂದಷ್ಟು ಸಿನಿಮಾಗಳ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿ ಅನುಭವ ಗಿಟ್ಟಿಸಿಕೊಂಡು ಶಿಶಿರ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದರು. ಈ ಬಾರಿ ಅವರು ಮನೆ ಮಾರಾಟಕ್ಕಿದೆ ಚಿತ್ರದ ಮೂಲಕ ನಿರ್ಮಾಪಕ ಎಸ್ ವಿ ಬಾಬು ಸಾರಥ್ಯದಲ್ಲಿ ಅದ್ಭುತ ಚಿತ್ರವನ್ನು ರೂಪಿಸಿದ ಖುಷಿಯಲ್ಲಿದ್ದಾರೆ.
ಎಸ್ ವಿ ಬಾಬು ಈ ಹಿಂದೆ ಮಂಜು ನಿರ್ದೇಶನ ಮಾಡಿದ್ದ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಆ ಸಿನಿಮಾದಲ್ಲಿ ಮಂಜು ಅವರ ಕಸುಬುದಾರಿಕೆಯನ್ನು ಮೆಚ್ಚಿಕೊಂಡಿದ್ದ ಅವರು ಮನೆ ಮಾರಾಟಕ್ಕಿದೆ ಚಿತ್ರವನ್ನು ನಿರ್ಮಾಣ ಮಾಡಲು ಒಪ್ಪಿಕೊಂಡಿದ್ದರಂತೆ. ಈ ಮೂಲಕವೇ ಮಂಜು ಸ್ವರಾಜ್ ಹೊಸ ಅನುಭವವನ್ನು ಕಾಮಿಡಿ ಜಾನರ್ ಚಿತ್ರದ ಮೂಲಕ ದಕ್ಕಿಸಿಕೊಂಡಿದ್ದಾರೆ. ಇದು ದೊಡ್ಡ ಮಟ್ಟದಲ್ಲಿ ಹಿಟ್ ಆಗಿ ತಮ್ಮ ಸಿನಿ ಜೀವನ ಮತ್ತಷ್ಟು ಮಿಂಚುವಂತೆ ಮಾಡುತ್ತದೆಂಬ ನಂಬಿಕೆ ಮಂಜು ಸ್ವರಾಜ್ ಅವರಲ್ಲಿದೆ.
-

ಕನ್ನಡ ಸಿನಿಮಾದಲ್ಲಿ ನಟಿಸುವ ಆಸೆ ಬಿಚ್ಚಿಟ್ಟ ಸಲ್ಮಾನ್ ಖಾನ್
ಬೆಂಗಳೂರು: ಬಾಲಿವುಡ್‍ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಇದೀಗ ದಬಾಂಗ್ 3 ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ದೇಶಾದ್ಯಂತ ಕಾತರ ಮೂಡಿಸಿರೋ ಈ ಚಿತ್ರವೀಗ ಬಿಡುಗಡೆಗೆ ತಯಾರಾಗಿದೆ. ಇದೀಗ ಈ ಸಿನಿಮಾದ ಟ್ರೇಲರ್ ಕೂಡಾ ಬಿಡುಗಡೆಯಾಗಿದೆ. ಈ ಕುರಿತಾದ ಸಮಾರಂಭದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತಾಡಿರುವ ಸಲ್ಮಾನ್ ಖಾನ್ ಕನ್ನಡದಲ್ಲಿಯೇ ಮಾತಾಡೋ ಮೂಲಕ ಕನ್ನಡಿಗರೆಲ್ಲರ ಮನ ಗೆದ್ದಿದ್ದಾರೆ. ಇದೇ ಸಂದರ್ಭದಲ್ಲಿ ಕನ್ನಡ ಸಿನಿಮಾದಲ್ಲಿ ನಟಿಸಲೂ ಉತ್ಸುಕರಾಗಿರೋದರ ಬಗ್ಗೆಯೂ ಮಾತಾಡಿದ್ದಾರೆ.

ಬೆಂಗಳೂರಿನಲ್ಲಿ ದಬಾಂಗ್ 3 ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತಾಡಿರುವ ಸಲ್ಮಾನ್ ಖಾನ್, ಅವಕಾಶ ಸಿಕ್ಕರೆ ಖಂಡಿತಾ ಕನ್ನಡ ಚಿತ್ರದಲ್ಲಿ ನಟಿಸೋದಾಗಿ ಹೇಳಿಕೊಂಡಿದ್ದಾರೆ. ಇದರ ಲೈವ್ ಸ್ಟ್ರೀಮಿಂಗ್ ಸಂದರ್ಭದಲ್ಲಿ ನಿರ್ದೇಶಕ ಅನೂಪ್ ಭಂಡಾರಿ ಈ ಬಗ್ಗೆ ಸಲ್ಮಾನ್ ಮುಂದೊಂದು ಆಫರ್ ಇಟ್ಟಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಲ್ಮಾನ್ ಖಂಡಿತಾ ನಟಿಸೋದಾಗಿ ಹೇಳಿಕೊಂಡಿದ್ದಾರೆ.

ಈಗಾಗಲೇ ಸುದೀಪ್ ಅವರೊಂದಿಗೆ ನಟಿಸಿಯಾಗಿದೆ. ಕನ್ನಡ ನಿರ್ದೇಶಕರೊಂದಿಗೂ ನಟಿಸೋ ಆಸೆಯಿದೆ. ಇಷ್ಟರಲ್ಲಿಯೇ ಬೆಂಗಳೂರಿಗೆ ಬಂದು ಅಭಿಮಾನಿಗಳನ್ನೆಲ್ಲ ಭೇಟಿಯಾಗೋದಾಗಿಯೂ ಸಲ್ಮಾನ್ ಹೇಳಿಕೊಂಡಿದ್ದಾರೆ. ಕಿಚ್ಚ ಸುದೀಪ್ ದಬಾಂಗ್ 3 ಚಿತ್ರದಲ್ಲಿ ಖಡಕ್ ವಿಲನ್ ಆಗಿ ನಟಿಸಿದ ಮೇಲಂತೂ ಸಲ್ಮಾನ್ ಖಾನ್‍ಗೆ ಕನ್ನಡದೊಂದಿಗಿನ ನಂಟು ಬಲವಾಗಿದೆ. ಅವರು ಮುಂಬರೋ ದಿನಗಳಲ್ಲಿ ಸುದೀಪ್ ಅವರೊಂದಿಗೇ ಕನ್ನಡಕ್ಕೆ ಆಗಮಿಸುವಂತಾದರೂ ಅಚ್ಚರಿಯೇನಿಲ್ಲ. ಹೀಗೆ ಇಂದು ಬಿಡುಗಡೆಗೊಂಡಿರೋ ಟ್ರೇಲರ್‍ಗೆ ಅಭೂತಪೂರ್ವ ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ.
-

‘ಆಮ್ಲೆಟ್’ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ
ಬೆಂಗಳೂರು: ಶೇಖರ್ ಜಯರಾಂ ಅರ್ಪಿಸುವ, ನೈಂತ್ ಎಲಿವೇಷನ್ ಲಾಂಛನದಲ್ಲಿ ಓಂಪ್ರಕಾಶ್ ಮತ್ತು ಪ್ರಸನ್ನ ಅವರು ನಿರ್ಮಿಸುತ್ತಿರುವ ‘ಆಮ್ಲೆಟ್’ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.

‘ಡೇ ಇನ್ ದಿ ಸಿಟಿ’, ‘ಕೆಂಪಿರ್ವೆ’, ‘ಬಬ್ಲೂಷ’ ಹಾಗೂ ತಮಿಳಿನ ‘ಉನರ್ವು’ ಚಿತ್ರಗಳನ್ನು ನಿರ್ದೇಶಿಸಿರುವ ವೆಂಕಟ್ ಭಾರದ್ವಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರ ಕಾಮಿಡಿ ಕಥಾ ಹಂದರ ಹೊಂದಿದೆ. ವಿಶಾಖ್ ರಾಮಪ್ರಸಾದ್ ಸಂಗೀತ ನಿರ್ದೇಶನದ ಈ ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ರಾಕೇಶ್ ಅಡಿಗ, ವಿರಾಜ್ ಹಾಗೂ ಮಹೇಶ್ ಹಾಡುಗಳನ್ನು ಬರೆದಿದ್ದಾರೆ. ಸಿ.ಜಿ ಜೈದೇವನ್ ಛಾಯಾಗ್ರಹಣ ಹಾಗೂ ಚಂದನ್ ಅವರ ಸಂಕಲನ ಈ ಚಿತ್ರಕ್ಕಿದೆ. ಗುರುರಾಜ ದೇಸಾಯಿ ಸಂಭಾಷಣೆ ಬರೆದಿದ್ದಾರೆ. ಲಾರೆನ್ಸ್ ಪ್ರೀತಂ ಅವರ ಸಹ ನಿರ್ದೇಶನ ಈ ಚಿತ್ರಕ್ಕಿದೆ.

ಸಂಯುಕ್ತ ಹೊರನಾಡು, ನವೀನ್, ನಿರಂಜನ್ ದೇಶಪಾಂಡೆ, ಬಿ.ಡಿ ಸತೀಶ್ ಚಂದ್ರ, ಶೋಭ್‍ರಾಜ್, ಶರ್ಮಿತ ಗೌಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
-

ಕಿಸ್ ಅಂದ್ರೆ ನವಿರು ಪ್ರೇಮದ ಮೊದಲ ಆಮಂತ್ರಣ!
ಬೆಂಗಳೂರು: ವಿರಾಟ್ ಮತ್ತು ಶ್ರೀಲೀಲಾ ಜೋಡಿ ನಾಯಕ ನಾಯಕಿಯರಾಗಿ ನಟಿಸಿರೋ ಚಿತ್ರ ಕಿಸ್. ಇದುವರೆಗೂ ಹಾಡುಗಳ ಮೂಲಕವೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಾ ಸಾಗಿ ಬಂದಿರೋ ಈ ಚಿತ್ರ ಇದೇ ತಿಂಗಳ 27ರಂದು ತೆರೆಗಾಣಲಿದೆ. ಅಷ್ಟಕ್ಕೂ ಕಿಸ್ ಅಂದರೇನೇ ಥರ ಥರದ ಭಾವಗಳು ಪ್ರತಿಯೊಬ್ಬರನ್ನೂ ಆವರಿಸಿಕೊಳ್ಳುತ್ತವೆ. ಅದು ಅವರವರ ಭಾವಕ್ಕೆ ಭಕುತಿಗೆ ದಕ್ಕುವಂಥಾದ್ದೂ ಹೌದು. ಈ ಸಿನಿಮಾದ ಕಥೆ ಸಾಗೋದು ಕಿಸ್ ಎಂಬುದರ ಒರಿಜಿನಲ್ ಪರಿಭಾಷೆಗನುಗುಣವಾಗಿಯೇ.

ಇಡೀ ಸಿನಿಮಾದಲ್ಲಿ ಎತ್ತಲಿಂದ ಹುಡುಕಿದರೂ ಒಂದೇ ಒಂದು ವಲ್ಗರ್ ಅನ್ನಿಸೋ ಸೀನು, ಡೈಲಾಗುಗಳು ಸಿಗಲೂ ಸಾಧ್ಯವಿಲ್ಲ ಎಂಬುದನ್ನು ನಿರ್ದೇಶಕರು ಆರಂಭದಿಂದಲೂ ಸ್ಪಷ್ಟೀಕರಿಸಿಕೊಂಡು ಬರುತ್ತಿದ್ದಾರೆ. ಇದುವೇ ಈ ಸಿನಿಮಾದ ಬಗೆಗೆ ಸ್ಪಷ್ಟ ಚಿತ್ರಣವನ್ನೂ ಕಟ್ಟಿಕೊಡುವಂತಿದೆ. ಕಿಸ್ ಎಂಬುದು ಪ್ರೀತಿಯ ಪಾಲಿಗೆ ಮೊದಲ ಆಮಂತ್ರಣವಿದ್ದಂತೆ. ಆ ನಂತರವೇ ಅದರ ಎಲ್ಲ ಭಾವಗಳೂ ಬಿಚ್ಚಿಕೊಳ್ಳಲಾರಂಭಿಸುತ್ತವೆ. ನಿದೇಶಕ ಎ.ಪಿ. ಅರ್ಜುನ್ ಆ ಮೊದಲ ಆಮಂತ್ರಣದ ಕಥೆಯನ್ನು ಮಜವಾಗಿಯೇ ಕಟ್ಟಿ ಕೊಟ್ಟಿದ್ದಾರಂತೆ.

ಇದೀಗ ಬಿಡುಗಡೆಯಾಗಿರೋ ಹಾಡುಗಳ ಮೂಲಕವೇ ಕಿಸ್ ಪ್ರೇಕ್ಷಕರಿಗೂ ಕೂಡಾ ಪರಿಣಾಮಕಾರಿಯಾಗಿಯೇ ಆಮಂತ್ರಣ ಕೊಟ್ಟಿದೆ. ಅಷ್ಟಕ್ಕೂ ಈ ಹಾಡುಗಳು ಪ್ರೇಕ್ಷಕರ ಪಾಲಿಗೆ ಚಿತ್ರಮಂದಿರಕ್ಕೆ ಬರಲು ಕೊಡೋ ಆಮಂತ್ರಣವಿದ್ದಂತೆ. ಅದೆಷ್ಟೋ ಚಿತ್ರಗಳನ್ನು ಈ ಹಾಡುಗಳ ಆಮಂತ್ರಣವೇ ದೊಡ್ಡ ಮಟ್ಟದಲ್ಲಿ ಗೆಲ್ಲಿಸಿಕೊಂಡಿವೆ. ಕಿಸ್ ಚಿತ್ರದ ಹಾಡುಗಳೂ ಕೂಡಾ ಅದರಲ್ಲಿ ಯಶ ಕಾಣೋ ಲಕ್ಷಣಗಳೇ ದಟ್ಟವಾಗಿವೆ. ಈ ಹಾಡಿನ ನವಿರುತನವನ್ನೇ ಹೊದ್ದುಕೊಂಡಂಥಾ ಕಥೆ ಹೊಂದಿರೋ ಕಿಸ್ ನಿಮ್ಮೆಲ್ಲರೆದುರು ಅನಾವರಣಗೊಳ್ಳುವುದಕ್ಕೆ ಕ್ಷಣಗಣನೆ ಶುರುವಾಗಿದೆ.
-

ಎ.ಪಿ ಅರ್ಜುನ್ ಬತ್ತಳಿಕೆಯಲ್ಲಿರೋದು ಫ್ರೆಶ್ ‘ಕಿಸ್’!
ಬೆಂಗಳೂರು: ಕಿಸ್ ಅಂದರೆ ಮಡಿವಂತಿಕೆಯ ಮಂದಿ ಮುಜುಗರ ಪಟ್ಟುಕೊಳ್ಳಬಹುದೇನೋ. ಆದರೆ ಅದು ಕಾಲಮಾನವನ್ನು ಮೀರಿಕೊಂಡು ಸದಾ ತಾಜಾತನ ಉಳಿಸಿಕೊಳ್ಳೋ ಮಧುರಾನುಭೂತಿ. ಹದಿಹರೆಯದ ಮನಸುಗಳಲ್ಲಿ ಸ್ಫುರಿಸೋ ಮೆಲುವಾದ ಕಂಪನ ಮತ್ತು ಪ್ರೇಮವನ್ನು ಮಾತಿಲ್ಲದೆಯೇ ದಾಟಿಸೋ ವಾಹಕ. ಇಂಥಾ ರೊಮ್ಯಾಂಟಿಕ್ ಕಲ್ಪನೆಗಳಿಗೆ ತಕ್ಕುದಾಗಿಯೇ ಒಂದಿನಿತೂ ವಲ್ಗಾರಿಟಿಯ ಸೋಂಕಿಲ್ಲದೆ ನಿರ್ದೇಶಕ ಎ.ಪಿ ಅರ್ಜುನ್ ಬತ್ತಳಿಕೆಯಿಂದ ಹೊರಬಂದು ಪ್ರೇಕ್ಷಕರ ಮುಂದೆ ನಿಲ್ಲೋ ಸನ್ನಾಹದಲ್ಲಿರೋ ಚಿತ್ರ ಕಿಸ್.
ಎ.ಪಿ ಅರ್ಜುನ್ ಯುವ ತುಮುಲಗಳ ಎರಕ ಹೊಯ್ದಂಥಾ ಪ್ರೀತಿ ತುಂಬಿದ ದೃಶ್ಯ ಕಟ್ಟುವಲ್ಲಿ ಸಿದ್ಧಹಸ್ತರೆನ್ನಿಸಿಕೊಂಡಿರೋ ನಿರ್ದೇಶಕ. ಅಂಬಾರಿಯಿಂದ ಆರಂಭವಾಗಿ ಕಿಸ್ ವರೆಗೂ ಅದು ಅನೂಚಾನವಾಗಿಯೇ ಮುಂದುವರೆದುಕೊಂಡು ಬಂದಿದೆ.

ಕಿಸ್ ಎಂಬ ಹೆಸರೇ ಇದೊಂದು ಯುವ ಆವೇಗದ ಪ್ರೇಮಕಥೆ ಹೊಂದಿರೋ ಸಿನಿಮಾ ಅನ್ನೋದನ್ನು ಜಾಹೀರು ಮಾಡುವಂತಿದೆ. ಹಾಗೆಂದ ಮಾತ್ರಕ್ಕೆ ಇದು ಬರೀ ಯುವ ಜನಾಂಗಕ್ಕೆ ಮಾತ್ರವೇ ಸೀಮಿತವಾದ ಸಿನಿಮಾ ಅಲ್ಲ. ಎಲ್ಲ ವರ್ಗದ, ವಯೋಮಾನದವರೂ ನೋಡಿ ಎಂಜಾಯ್ ಮಾಡುವ ರೀತಿಯಲ್ಲಿ ಅರ್ಜುನ್ ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರಂತೆ.
ಕಿಸ್ ಅಂದರೆ ಸದಾ ಫ್ರೆಶ್ ಆಗಿರೋ ಭಾವವೇ ಆದರೂ ಅದಕ್ಕೂ ಒಂದಷ್ಟು ಮುಜುಗರದಂಥಾ ಲೇಪ ಬಳಿಯಲಾಗಿದೆ. ಆದರೆ ಇಲ್ಲಿರೋದು ಸಾವಿರಕ್ಕೊಂದು ಎಂಬಂಥಾ ತಾಜಾ ತಾಜಾ ಲವ್ ಸ್ಟೋರಿ. ಅದು ಎಲ್ಲ ವಯೋಮಾನದವರಲ್ಲಿಯೂ ಆಹ್ಲಾದ ಮೂಡಿಸುವ ರೀತಿಯಲ್ಲಿ ಮೂಡಿ ಬಂದಿದೆಯಂತೆ.

ಈಗಾಗಲೇ ಬಂದಿರೋ ಹಾಡುಗಳು ಮತ್ತು ಟ್ರೇಲರ್ ಮೂಲಕವೇ ಇದರ ತಾಜಾತನದ ಅನುಭೂತಿ ಪ್ರೇಕ್ಷಕರಿಗೆಲ್ಲ ಮುಟ್ಟಿದೆ. ಅದುವೇ ಕಾತರವಾಗಿಯೂ ಪಡಿಮೂಡಿಕೊಂಡಿದೆ. ಕಿಸ್ ಇದೇ ತಿಂಗಳ 27ರಂದು ಬಿಡುಗಡೆಯಾಗಲಿದೆ.
