Tag: kannada cinema

  • ಕೋಟಿಗೊಬ್ಬ-3 ಸಿನ್ಮಾದ ಕಿಚ್ಚನ ಫೋಟೋ ರಿವೀಲ್

    ಕೋಟಿಗೊಬ್ಬ-3 ಸಿನ್ಮಾದ ಕಿಚ್ಚನ ಫೋಟೋ ರಿವೀಲ್

    ಬೆಂಗಳೂರು: ಚಂದನವನದ ಪೈಲ್ವಾನ ಸುದೀಪ್ ನಟನೆಯ ಕೋಟಿಗೊಬ್ಬ-3 ಸಿನಿಮಾದ ಫೋಟೋಗಳು ರಿವೀಲ್ ಆಗಿದೆ. ಕಿಚ್ಚನ ಸ್ಟೈಲಿಶ್ ಲುಕ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.

    ಕ್ಲಬ್ ನಲ್ಲಿ ಹಾಡಿನ ಚಿತ್ರೀಕರಣ ನಡೆದಿದ್ದು, ಕಪ್ಪು ಬಣ್ಣದ ಹ್ಯಾಟ್ ಜೊತೆಗೆ ರೌನೆಲ್ ಸನ್‍ಗ್ಲಾಸ್ ಧರಿಸಿರುವ ಕಿಚ್ಚನ ಫೋಟೋಗಳು ಟ್ವಿಟ್ಟರ್ ನಲ್ಲಿ ಹರಿದಾಡುತ್ತಿವೆ. ಈ ಹಿಂದೆ ಮಾಣಿಕ್ಯ ಸಿನಿಮಾದಲ್ಲಿಯೂ ಕ್ಲಬ್ ಹಾಡಿತ್ತು. ಸಿನಿಮಾದ ಹಾಡಿನ ದೃಶ್ಯದ ಕೆಲ ಫೋಟೋಗಳನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.

    ಕೋಟಿಗೊಬ್ಬ-2 ಸಿನಿಮಾ ಸ್ಯಾಂಡಲ್‍ವುಡ್‍ನಲ್ಲಿ ಸಖತ್ ಸದ್ದು ಮಾಡಿತ್ತು. ಇದರ ಮುಂದುವರಿದ ಭಾಗವೇ ಕೋಟಿಗೊಬ್ಬ-3 ಎನ್ನಲಾಗುತ್ತಿದೆ. ಆದ್ರೆ ಚಿತ್ರತಂಡ ಸಿನಿಮಾದ ಕಥೆಯ ಸಣ್ಣ ಎಳೆಯನ್ನು ಬಿಟ್ಟುಕೊಡದೇ ಗೌಪ್ಯವಾಗಿ ಕಾಯ್ದುಕೊಂಡು ಬಂದಿದೆ. ಸಿನಿಮಾದ ಮೇಕಿಂಕ್ ಫೋಟೋ ಹೊರತು ಪಡಿಸಿದ್ರೆ ಚಿತ್ರದ ಬಗೆಗಗಿ ಇನ್ನಿತರ ಅಂಶಗಳನ್ನು ರಿವೀಲ್ ಗೊಳಿಸಿಲ್ಲ. ಸುದೀಪ್ ಅಭಿಮಾನಿಗಳು ಕೋಟಿಗೊಬ್ಬನ ದರ್ಶನಕ್ಕಾಗಿ ತುದಿಗಾಲಲ್ಲಿ ಕಾಯುತ್ತಿದ್ದಾರೆ.

    ಶಿವ ಕಾರ್ತಿಕ್ ನಿರ್ದೇಶನ, ಸೂರಪ್ಪ ಬಾಬು ನಿರ್ಮಾಣದಲ್ಲಿ ಸಿನಿಮಾ ಮೂಡಿಬರುತ್ತಿದೆ. ಮಾಡೋನ ಸೆಬಾಸ್ಟಿಯನ್ ಮತ್ತು ಶ್ರದ್ಧಾ ದಾಸ್ ಕೋಟಿಗೊಬ್ಬನಿಗೆ ನಾಯಕಿಯರಾಗಿದ್ದಾರೆ. ಇನ್ನು ಬಾಲಿವುಡ್ ನಟ ಅಫ್ತಾಬ್ ಶಿವದಾಸನಿ ಇದೇ ಮೊದಲ ಬಾರಿಗೆ ಕನ್ನಡಕ್ಕೆ ಕೋಟಿಗೊಬ್ಬ ಚಿತ್ರದ ಮೂಲಕ ಎಂಟ್ರಿ ನೀಡುತ್ತಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಅಫ್ತಾಬ್ ಕಾಣಿಸಿಕೊಳ್ಳಲಿದ್ದಾರೆ ಎಂದು ಮಾತ್ರ ಚಿತ್ರತಂಡ ಹೇಳಿಕೊಂಡಿದ್ದು, ಯಾವ ಪಾತ್ರ ಎಂಬ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಪೈಲ್ವಾನ ಸಿನಿಮಾದ ಮೂಲಕ ಸುನಿಲ್ ಶೆಟ್ಟಿ ಚಂದನವನ ಪ್ರವೇಶಿಸಿದ್ದಾರೆ.

  • ಮನಸ್ಸಿನ ಕದ ತಟ್ಟಿದ ‘ಕೊನೆಯಿರದಂತ ಪ್ರೀತಿಗೆ’ ಹಾಡು

    ಮನಸ್ಸಿನ ಕದ ತಟ್ಟಿದ ‘ಕೊನೆಯಿರದಂತ ಪ್ರೀತಿಗೆ’ ಹಾಡು

    ಕಾಣದಂತೆ ಮಾಯಾವಾದನು ಸಿನಿಮಾದ ಟೈಟಲ್ ಕೇಳಿದಾಕ್ಷಣ ಪುನೀತ್ ರಾಜ್‍ಕುಮಾರ್ ಬಾಲ ನಟನಾಗಿ ನಟಿಸಿದ್ದ ‘ಚಲಿಸುವ ಮೋಡಗಳು’ ಸಿನಿಮಾ ನೆನಪಾಗುತ್ತೆ. ಆ ಸಿನಿಮಾದಲ್ಲಿ ಕಾಣದಂತೆ ಮಾಯಾವಾದನು, ನಮ್ಮ ಶಿವ ಕೈಲಾಸ ಸೇರಿಕೊಂಡನು ಅನ್ನೋ ಹಾಡು ಈಗಲೂ ಚಾಲ್ತಿಯಲ್ಲಿದೆ. ಆ ಹಾಡಿನ ಒಂದು ಎಳೆಯನ್ನೇ ಸಿನಿಮಾದ ಶೀರ್ಷಿಕೆ ಮಾಡಿರುವುದು ವಿಶೇಷ. ಸಿನಿಮಾಗೆ ಹಾರಾರ್ ಟಚ್ ಇದ್ರು ಕೂಡ ಫೆಂಟಾಸ್ಟಿಕ್ ಲವ್ ಸ್ಟೋರಿ ಇದೆ. ಹಿಂದೆಂದೂ ಈ ರೀತಿಯ ಕಥೆಯನ್ನ ನೋಡಿಲ್ಲ ಎಂಬ ಫೀಲ್ ಈಗಾಗಲೇ ಟ್ರೇಲರ್ ನೋಡಿದವರಿಗೆ ಅನ್ನಿಸಿದೆ. ಇದೀಗ ಸಿನಿಮಾದ ಲಿರಿಕಲ್ ಸಾಂಗ್ ರಿಲೀಸ್ ಆಗಿದ್ದು, ಎಲ್ಲರ ಮನಸ್ಸನ್ನು ತಣಿಸುವಂತಿದೆ. ‘ಕೊನೆಯಿರದಂತ ಪ್ರೀತಿಗೆ’ ಹಾಡು ಮತ್ತೆ ಮತ್ತೆ ಕೇಳಬೇಕೆನ್ನಿಸುತ್ತಿದೆ. ಅನಿರುದ್ಧ್ ಶಾಸ್ತ್ರಿ ಬರೆದಿರುವ ಹಾಡಿಗೆ ವಿಜಯ್ ಪ್ರಕಾಶ್ ಧ್ವನಿಯಾಗಿದ್ದಾರೆ.

    ಸಿನಿಮಾ ಆರಂಭವಾದಾಗಿನಿಂದ ಒಂದಲ್ಲ ಒಂದು ರೀತಿಯಲ್ಲಿ ಸದ್ದು ಮಾಡುತ್ತಿದೆ. ಸಿನಿಮಾದ ಟೈಟಲ್ ಕೊಟ್ಟು ಇದಕ್ಕೊಂದು ಟ್ಯಾಗ್‍ಲೈನ್ ಕೊಟ್ಟವರಿಗೊಂದು ಬಹುಮಾನ ಅಂತ ಚಿತ್ರತಂಡ ಪ್ರಚಾರ ಮಾಡಿತ್ತು. ಹೀಗಾಗಿ ಸಾಕಷ್ಟು ಮಂದಿ ಟೈಟಲ್ ಕೊಡುವಲ್ಲಿ ನಿರತರಾಗಿದ್ದರು. ಕಡೆಗೆ ‘ಗೋರಿಯಾದ್ಮೇಲ್ ಹುಟ್ಟಿದ್ ಸ್ಟೋರಿ’ ಕೊಟ್ಟವರಿಗೆ ಬಹುಮಾನವನ್ನು ಕೊಟ್ಟು ಸಿನಿಮಾದ ಮೇಲೆ ಜನರಿಗೆ ಮತ್ತಷ್ಟು ನಿರೀಕ್ಷೆ ಹುಟ್ಟಿಸಿದೆ.

    ಸಿನಿಮಾದ ಮತ್ತೊಂದು ವಿಶೇಷತೆ ಎಂದರೆ ‘ಕಳೆದೋದಾ ಕಾಳಿದಾಸ’ ಎಂಬ ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಡಿದ್ದಾರೆ. ಈ ಹಾಡು ಕೂಡ ಈಗಾಗಲೇ ಹಿಟ್ ಆಗಿದೆ. ನಿರ್ದೇಶಕರಾಗಿಯೂ ಹೆಸರು ಮಾಡಿದ್ದ ವಿಕಾಸ್ ಮೊದಲ ಬಾರಿಗೆ ನಟನಾಗಿ ಬೆಳ್ಳಿತೆರೆಗೆ ಜಿಗಿದಿದ್ದಾರೆ. ವಿಕಾಸ್ ಗೆ ಸಿಂಧು ಲೋಕನಾಥ್ ನಾಯಕಿಯಾಗಿದ್ದಾರೆ.

    ರಾಜ್ ಪತ್ತಿಪಾಟಿ ನಿರ್ದೇಶನ ಮಾಡಿದ್ದು, ಚಂದ್ರಶೇಖರ್ ನಾಯ್ಡು, ಸೋಮಸಿಂಗ್, ಪುಷ್ಪಾ ಸೋಮಸಿಂಗ್ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಗುಮ್ಮಿನೇನಿ ವಿಜಯ್ ಸಂಗೀತವಿದ್ದು, ವಿ. ನಾಗೇಂದ್ರ ಪ್ರಸಾದ್, ಅನಿರುದ್ಧ್ ಶಾಸ್ತ್ರಿ, ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದಾರೆ. ಅಚ್ಯತ್ ಕುಮಾರ್, ರಾಘವ್ ಉದಯ್, ಭಜರಂಗಿ ಲೋಕಿ ಸೇರಿದಂತೆ ಅನೇಕರು ತಾರಾಬಳಗದಲ್ಲಿದ್ದಾರೆ.

  • 2019ರಲ್ಲಿ ಚಂದನವನವನ್ನ ತಿರುಗಿ ನೋಡಿತು ಭಾರತೀಯ ಸಿನಿಲೋಕ

    2019ರಲ್ಲಿ ಚಂದನವನವನ್ನ ತಿರುಗಿ ನೋಡಿತು ಭಾರತೀಯ ಸಿನಿಲೋಕ

    2019 ಕನ್ನಡ ಸಿನಿಮಾಗಳಿಗೆ ಹೊಸ ರೂಪು ನೀಡಿತು ಎಂದ್ರೆ ಸುಳ್ಳಾಗಲ್ಲ. ಕರ್ನಾಟಕದ ಮಾರುಕಟ್ಟೆಗೆ ಸೀಮಿತಗೊಂಡಿದ್ದ ಚಂದನವನನ್ನ ಇಂದು ಇಡೀ ಭಾರತವೇ ತಿರುಗಿ ನೋಡುತ್ತಿದೆ. ಇಂದು ಕನ್ನಡ ಸಿನಿಮಾಗಳಿಗೆ ಹೊರ ರಾಜ್ಯದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಕನ್ನಡ ಸ್ಟಾರ್ ಗಳನ್ನು ಇಂದು ಗುರುತಿಸುವಂತಾಗಿದೆ. ಇದೆಕ್ಕೆಲ್ಲಾ ಕಾರಣ ಪ್ಯಾನ್ ಇಂಡಿಯಾ ಕಾನ್ಸೆಪ್ಟ್.

    ಹೌದು, ಮೊದಲಿಗೆ ಕನ್ನಡದ ಯಾವುದೇ ಸಿನಿಮಾ ಬಿಡುಗಡೆ ಆದ್ರೆ ಅದು ಕೇವಲ ಕರ್ನಾಟಕದ ಮಾರುಕಟ್ಟೆಗೆ ಮಾತ್ರ ಸೀಮಿತವಾಗಿತ್ತು. ಇಂದು ಕನ್ನಡದ ಸಿನಿಮಾಗಳು ಗಡಿಯನ್ನು ದಾಟಿ ವಿದೇಶದಲ್ಲಿ ನಮ್ಮ ಚಂದನವನದ ಪರಿಮಳವನ್ನು ಪಸರಿಸಿವೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ 2018 ಡಿಸೆಂಬರ್ 21ರಂದು ತೆರೆಕಂಡಿತ್ತು. ಈ ಕನ್ನಡದ ಸಿನಿಮಾವನ್ನು ಇಡೀ ಭಾರತೀಯ ಚಿತ್ರರಂಗ ಒಪ್ಪಿ, ಅಪ್ಪಿಕೊಂಡು ಮುದ್ದಾಡಿದೆ. ಕೆಜಿಎಫ್ ಎಂಬ ದೈತ್ಯ ಸಿನಿಮಾ ಕನ್ನಡದ ಮಾರುಕಟ್ಟೆಯನ್ನು ವಿಸ್ತರಿಸಿತು. ಕೆಜಿಎಫ್ ಬಳಿಕ ಕನ್ನಡದ ಸಿನಿಮಾಗಳು ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ನ್ನು ಅಳವಡಿಸಿಕೊಳ್ಳಲು ಮುಂದಾದವು.

    ಸೆಪ್ಟೆಂಬರ್ 12ರಂದ ಬಿಡುಗಡೆಯಾದ ಸ್ಯಾಂಡಲ್‍ವುಡ್ ಸ್ವಾತಿಮುತ್ತು ಸುದೀಪ್ ಅಭಿನಯದ ‘ಪೈಲ್ವಾನ್’ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ನಲ್ಲಿ ತೆರೆಕಂಡಿತು. ಕನ್ನಡ ಮಾತ್ರವಲ್ಲದೇ ತೆಲಗು ಮತ್ತು ಹಿಂದಿ ಭಾಷೆಗಳಲ್ಲಿಯೂ ಪೈಲ್ವಾನ್ ಹೊಡೆದ ಸೆಡ್ಡು ಎಲ್ಲರನ್ನು ನಡಗುವಂತೆ ಮಾಡಿತ್ತು. ಬಾಲಿವುಡ್ ಸ್ಟಾರ್ ಸುನಿಲ್ ಶೆಟ್ಟಿ ಮೊದಲ ಬಾರಿಗೆ ಪೈಲ್ವಾನ್ ನಲ್ಲಿ ನಟಿಸುವ ಮೂಲಕ ಚಂದನವನಕ್ಕೆ ಪಾದರ್ಪಣೆ ಮಾಡಿದ್ದು ಈ ಚಿತ್ರದ ಮತ್ತೊಂದು ವಿಶೇಷ. 50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಪೈಲ್ವಾನ್ ಅಂದಾಜು 113 ಕೋಟಿಗೂ ಅದಿಕ ಹಣವನ್ನು ತನ್ನ ಗಲ್ಲಾ ಪೆಟ್ಟಿಗೆಯಲ್ಲಿ ತುಂಬಿಕೊಂಡಿತ್ತು.

    ಇದಾದ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಮುನಿರತ್ನ ಕುರುಕ್ಷೇತ್ರ’ ಸಿನಿಮಾ ಸಹ ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಆಗಸ್ಟ್ 9ರಂದು ಬಿಡುಗಡೆಗೊಂಡಿತು. ಸಿನಿಮಾ ಸೆಟ್ಟೇರಿದಾಗಿನಿಂದಲೂ ಒಂದಿಲ್ಲೊಂದು ವಿಷಯಗಳಿಗೆ ಚಿತ್ರ ಗಾಂಧಿನಗರದಲ್ಲಿ ಸದ್ದು ಮಾಡುತ್ತಿತ್ತು. ದರ್ಶನ್, ಅಂಬರೀಶ್, ನಿಖಿಲ್ ಕುಮಾರಸ್ವಾಮಿ, ಶಶಿಕುಮಾರ್, ಅರ್ಜುನ್ ಸರ್ಜಾ, ಭಾರತಿ ವಿಷ್ಣುವರ್ಧನ್, ಶ್ರೀನಾಥ್, ಸೋನು ಸೂದ್ ದೊಡ್ಡ ತಾರಾಬಳಗವನ್ನೇ ಸಿನಿಮಾ ಹೊಂದಿತ್ತು. ಮುನಿರತ್ನ ಕುರುಕ್ಷೇತ್ರ ಸಿನಿಮಾ ಸಹ 100 ಕೋಟಿ ಕ್ಲಬ್ ಸೇರುವ ಮೂಲಕ ದಾಖಲೆ ಬರೆದಿದೆ.

    ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮೂರು ವರ್ಷಗಳ ಬಳಿಕ ಬೆಳ್ಳಿ ಪರದೆಗೆ ಎಂಟ್ರಿ ಕೊಡುತ್ತಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾ ಯಶಸ್ಸಿನ ಬಳಿಕ ಅವನೇ ಶ್ರೀಮನ್ನಾರಾಯಣನಾಗಿ ರಕ್ಷಿತ್ ಶೆಟ್ಟಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಟೀಸರ್, ಟ್ರೈಲರ್ ಮತ್ತು ಹಾಡುಗಳ ಮೂಲಕ ಕ್ರೇಜ್ ಹುಟ್ಟಿಸಿರೋ ಅವನೇ ಶ್ರೀಮನ್ನಾರಾಯಣ ಸಹ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಥೀಮ್ ನಲ್ಲಿ ರಿಲೀಸ್ ಆಗಲು ಭರ್ಜರಿ ತಯಾರಿ ನಡೆಸಿದೆ. ಕನ್ನಡ, ತಮಿಳು, ತೆಲಗು ಮತ್ತು ಮಲಯಾಳಂ ಭಾಷೆಗಳಲ್ಲಿ ಅವನೇ ಶ್ರೀಮನ್ನಾರಾಯಣ ರಿಲೀಸ್ ಆಗಲಿದೆ.

  • 2019ರಲ್ಲಿ ಬಿಡುಗಡೆಯಾದ ಡಬ್ಬಿಂಗ್ ಚಿತ್ರಗಳು

    2019ರಲ್ಲಿ ಬಿಡುಗಡೆಯಾದ ಡಬ್ಬಿಂಗ್ ಚಿತ್ರಗಳು

    ರ್ನಾಟಕದಲ್ಲಿ ಡಬ್ಬಿಂಗ್ ಚಿತ್ರಗಳ ಬಿಡುಗಡೆಗೆ ಭಾರೀ ವಿರೋಧ ವ್ಯಕ್ತವಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಕ್ರಮೇಣ ವಿವಾದ ತಣ್ಣಗಾಗಿ ಬೇರೆ ಭಾಷೆಯ ಸಿನಿಮಾಗಳು ಕನ್ನಡಕ್ಕೆ ಡಬ್ಬಗೊಂಡು ಅದೃಷ್ಟ ಪರೀಕ್ಷೆಯನ್ನು ಎದುರಿಸಿದವು. ಅವುಗಳ ಪಟ್ಟಿ ಈ ಕೆಳಗಿನಂತಿದೆ.

    1. ಓರು ಅಡಾರ್ ಲವ್: ಫೆಬ್ರವರಿ 14ರಂದು ಕಣ್ಣ ಸನ್ನೆಯ ಮೂಲಕ ದೇಶದ ಗಮನ ಸೆಳೆದಿದ್ದ ಮಲಯಾಳಂ ಭಾಷೆಯ ಓರು ಅಡಾರ್ ಲವ್ ಕನ್ನಡಕ್ಕೆ ಡಬ್ಬ ಮಾಡಲಾಗಿತ್ತು. ಕಿರಿಕ್ ಲವ್ ಸ್ಟೋರಿ ಟೈಟಲ್ ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಓರು ಅಡಾರ್ ಲವ್ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಚಿತ್ರದಲ್ಲಿ ರೋಶನ್ ಅಬ್ದುಲ್ ಮತ್ತು ಪ್ರಿಯಾ ಪ್ರಕಾಶ್ ವಾರಿಯರ್ ಜೊತೆಯಾಗಿ ನಟಿಸಿದ್ದಾರೆ.

    2. ವಿಶ್ವಾಸಂ: ಅಜಿತ್ ಕುಮರ್ ಮತ್ತು ನಯನತಾರಾ ನಟನೆಯ ತಮಿಳು ಸಿನಿಮಾ ‘ವಿಶ್ವಾಸಂ’ ಕನ್ನಡದಲ್ಲಿ ‘ಜಗಮಲ್ಲಾ’ ಟೈಟಲ್ ನಲ್ಲಿ ರಿಲೀಸ್ ಆಯ್ತು. ಮಾರ್ಚ್ 8ರಂದು ಈ ಸಿನಿಮಾ ತೆರೆಕಂಡಿತ್ತು.

    3. ಕಾಂಚಣಾ-3: ಈ ವರ್ಷ ದಕ್ಷಿಣ ಭಾರತದಲ್ಲಿ ಸದ್ದು ಮಾಡಿದ್ದ ಚಿತ್ರಗಳಲ್ಲಿ ‘ಕಾಂಚಣಾ-3’ ಸಹ ಒಂದಾಗಿದೆ. ವಿಭಿನ್ನ ಮತ್ತು ವಿಶೇಷ ಕಥಾ ಹಂದರವುಳ್ಳ ಕಾಂಚಾಣ-3 ತಮಿಳುನಾಡಿನಲ್ಲಿ ತನ್ನ ಮುದ್ರೆಯನ್ನು ಒತ್ತಿತ್ತು. ಅದೇ ಟೈಟಲ್ ನಲ್ಲಿಯೇ ಕನ್ನಡ ಭಾಷೆಗೆ ಡಬ್ಬಗೊಂಡ ಕಾಂಚಾಣ-3, ಮೇ 1ರಂದು ರಿಲೀಸ್ ಆಗಿತ್ತು. ರಾಘವ್ ಲಾರೆನ್ಸ್, ವೇದಿಕಾ ನಟನೆ ಸಿನಿಮಾದಲ್ಲಿ ನಟಿಸಿದ್ದರು.

    4. ರಂಗಸ್ಥಳಂ: ರಾಮಚರಣ್ ನಟನೆಯ ರಂಗಸ್ಥಳಂ ಜೂನ್ 12ರಂದು ಕನ್ನಡದಲ್ಲಿ ಕರ್ನಾಟಕ ಚಿತ್ರಮಂದಿರವನ್ನ ಪ್ರವೇಶಿಸಿತು. ಚಿತ್ರದಲ್ಲಿ ರಾಮಚರಣ್ ತೇಜ, ಸಮಂತ ಅಕ್ಕಿನೇನಿ, ಆದಿ ಪಿನಿಶೆಟ್ಟಿ, ಪ್ರಕಾಶ್ ರೈ, ಅನಸೂಯ ಭಾರಧ್ವಜ್ ಸೇರಿದಂತೆ ರಂಗಸ್ಥಲಂ ದೊಡ್ಡ ತಾರಾಗಣವನ್ನೇ ಹೊಂದಿತ್ತು.

    5. ಡಿಯರ್ ಕಾಮ್ರೆಡ್: ಕನ್ನಡದ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಅಭಿನಯದ ತೆಲುಗಿನ ಡಿಯರ್ ಕಾಮ್ರೆಡ್ ಸಿನಿಮಾ ಕನ್ನಡಕ್ಕೆ ಡಬ್ಬ ಆಗಿತ್ತು. ಗೀತಾಗೋವಿಂದಂ ಯಶಸ್ಸಿನ ಬಳಿಕ ರಶ್ಮಿಕಾ ಮಂದಣ್ಣ ಮತ್ತು ವಿಜಯದೇವರಕೊಂಡ ಜೋಡಿ ಎರಡನೇ ಬಾರಿ ತೆರೆಯ ಮೇಲೆ ಒಂದಾಗಿತ್ತು. ಜುಲೈ 26 ರಂದು ಈ ಸಿನಿಮಾ ಅದೇ ಟೈಟಲ್ ಮೇಲೆ ಕನ್ನಡದಲ್ಲಿ ತೆರೆ ಕಂಡಿತ್ತು.

    6. ಸೈರಾ ನರಸಿಂಹ ರೆಡ್ಡಿ: ಈ ವರ್ಷ ತೆರೆಕಂಡಿರುವ ದಕ್ಷಿಣ ಭಾರತದ ದೊಡ್ಡ ಬಜೆಟ್ ಸಿನಿಮಾ ತೆಲುಗಿನ ಸೈರಾ ನರಸಿಂಹ ರೆಡ್ಡಿ ಅಕ್ಟೋಬರ್ 2ರಂದು ಬಿಡುಗಡೆಯಾಗಿತ್ತು. ದಕ್ಷಿಣ ಭಾರತದ ಎಲ್ಲ ಭಾಷೆಗಳ ಸ್ಟಾರ್ ಗಳ ಸಂಗಮಕ್ಕೆ ಸೈರಾ ನರಸಿಂಹ ರೆಡ್ಡಿ ಸಾಕ್ಷಿಯಾಗಿತ್ತು. ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ, ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್, ಕನ್ನಡದ ಮಾಣಿಕ್ಯ ಸುದೀಪ್ ಸೇರಿದಂತೆ ದೊಡ್ಡ ಕಲಾಬಳಗವನ್ನ ಚಿತ್ರ ಹೊಂದಿತ್ತು.

    7. ಟರ್ಮಿನೇಟರ್ ಡಾರ್ಕ್ ಫೇಟ್: ಹಾಲಿವುಡ್ ಸಿನಿಮಾವೊಂದು ಇದೇ ಮೊದಲ ಬಾರಿಗೆ ಕನ್ನಡಕ್ಕೆ ಡಬ್ಬಗೊಂಡು ಕಿಚ್ಚ ಸುದೀಪ್ ಸಾರಥ್ಯದಲ್ಲಿ ಬಿಡುಗಡೆಗೊಂಡಿತ್ತು. ನವೆಂಬರ್ 1ರಂದು ಇಂಗ್ಲಿಷ್ ನ ‘ಟರ್ಮಿನೇಟರ್ ಡಾರ್ಕ್ ಫೇಟ್’ ರಿಲೀಸ್ ಆಗಿತ್ತು.

    7. ದಬಾಂಗ್ 3: ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ನಟನೆಯ ದಬಾಂಗ್-3 ಸಿನಿಮಾ ಈ ಬಾರಿ ಕನ್ನಡದಲ್ಲಿಯೂ ಡಿಸೆಂಬರ್ 21ರಂದು ರಿಲೀಸ್ ಆಗಿದೆ. ಮೊದಲ ಬಾರಿಗೆ ಕಿಚ್ಚ ಸುದೀಪ್ ಮತ್ತು ಸಲ್ಮಾನ್ ತೆರೆಯ ಮೇಲೆ ಒಂದಾಗಿದ್ದು, ಅಭಿಮಾನಿಗಳನ್ನು ಮೋಡಿ ಮಾಡುತ್ತಿದೆ. ಸುದೀಪ್ ಖಳನಾಯಕನಾಗಿ ಸಿನಿಮಾದಲ್ಲಿ ನಟಿಸಿದ್ದಾರೆ.

  • ಮೋಡಿ ಮಾಡಿತು ‘ಖಾಕಿ’ ಹಾಡಿನ ಲಿರಿಕಲ್ ಕಂ ಮೇಕಿಂಗ್ ವೀಡಿಯೋ!

    ಮೋಡಿ ಮಾಡಿತು ‘ಖಾಕಿ’ ಹಾಡಿನ ಲಿರಿಕಲ್ ಕಂ ಮೇಕಿಂಗ್ ವೀಡಿಯೋ!

    ತರುಣ್ ಶಿವಪ್ಪ ನಿರ್ಮಾಣ ಮಾಡಿರುವ ಖಾಕಿ ಚಿತ್ರ ಹಂತ ಹಂತವಾಗಿ ತನ್ನ ಕ್ರಿಯೇಟಿವಿಟಿಯಿಂದಲೇ ಪ್ರೇಕ್ಷಕರನ್ನು ಸೆಳೆದುಕೊಳ್ಳುತ್ತಾ ಬರುತ್ತಿದೆ. ಈಗಾಗಲೇ ಟೀಸರ್ ಮೂಲಕ ಸಖತ್ ಆಗಿಯೇ ಸೌಂಡು ಮಾಡುತ್ತಿರೋ ಖಾಕಿ ಇದೀಗ ಪ್ರತೀ ಪಡ್ಡೆ ಹುಡುಗರ ಆತ್ಮ ನಿವೇದನೆಯಂಥಾ ಮಜವಾದ ಹಾಡೊಂದರ ಮೂಲಕ ಮತ್ತೆ ಸುದ್ದಿ ಕೇಂದ್ರಕ್ಕೆ ಬಂದಿದೆ. ಈ ಮೂಲಕವೇ ಯೋಗರಾಜ ಭಟ್ ಮತ್ತೆ ತಮ್ಮ ಲವಲವಿಕೆಯ ಶೈಲಿಯ ಹಾಡಿನ ಮೋಡಿ ಹಾಕಿದ್ದಾರೆ. ಈ ಹಾಡಿನ ಲಿರಿಕಲ್ ಕಂ ಮೇಕಿಂಗ್ ವೀಡಿಯೋವನ್ನು ಇದೀಗ ಚಿತ್ರತಂಡ ಬಿಡುಗಡೆಗೊಳಿಸಿದೆ.

    ಇದೀಗ ‘ಪ್ರತ್ರಿಯೊಬ್ಬ ಹುಡುಗನ ಹಿಂದೆ ಹುಡುಗಿ ಇರ್ತಾಳಂತೆ, ಅವರಿಂದ ಹುಡುಗರ ಜೀವ್ನ ಚೆನ್ನಾಗಿರ್ತಾದಂತೆ’ ಎಂಬ ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆಯಾಗಿದೆ. ಒಂದೇ ಸಲಕ್ಕೆ ಇಷ್ಟವಾಗಿ ಬಿಡುವಂಥಾ ಈ ಹಾಡನ್ನು ಯೋಗರಾಜ್ ಭಟ್ ಬರೆದಿದ್ದಾರೆ. ಯುವ ಸಮುದಾಯದ ತವಕ ತಲ್ಲಣಗಳನ್ನು ತೆಳು ಉಡಾಫೆಯ ಧಾಟಿಯಲ್ಲಿ ಅಕ್ಷರವಾಗಿಸೋದು ಯೋಗರಾಜ್ ಭಟ್ ಅವರಿಗೆ ಒಲಿದಿರುವ ಕಲೆ. ಈ ಹಾಡಿನ ಮೂಲಕ ಅದು ಮತ್ತೊಮ್ಮೆ ಮಿರುಗಿದೆ. ನವೀನ್ ಸಜ್ಜು ಹಾಡಿರುವ ಈ ಹಾಡು ರಿತ್ವಿಕ್ ಮುರಳೀಧರ್ ಅವರ ಸಂಗೀತ ಸಂಯೋಜನೆಯಲ್ಲಿ ಚೆಂದಗೆ ಮೂಡಿ ಬಂದಿದೆ.

    ಎಲ್ಲರಿಗೂ ಇಷ್ಟವಾಗುವಂಥಾ ಈ ಹಾಡು ರೂಪುಗೊಂಡಿರೋ ರೀತಿಯನ್ನು ಜಾಹೀರು ಮಾಡುವಂಥಾ ಈ ಮೇಕಿಂಗ್ ಕಂ ಲಿರಿಕಲ್ ವೀಡಿಯೋಗೆ ಪ್ರೇಕ್ಷಕರ ಕಡೆಯಿಂದಲೂ ವ್ಯಾಪಕ ಪಾಸಿಟಿವ್ ಪ್ರತಿಕ್ರಿಯೆಗಳೇ ಕೇಳಿ ಬರುತ್ತಿವೆ. ಈ ವೀಡಿಯೋದಲ್ಲಿ ಸದರಿ ಹಾಡಿಗೆ ಅದು ಹೇಗೆ ದೃಷ್ಯ ರೂಪ ಕೊಡಲಾಗಿದೆ ಎಂಬ ಮಜವಾದ ಝಲಕ್‍ಗಳಿದ್ದಾವೆ. ಈ ಮೂಲಕವೇ ಚಿರಂಜೀವಿ ಸರ್ಜಾ ಮತ್ತು ತಾನ್ಯಾ ಹೋಪ್ ರೊಮ್ಯಾಂಟಿಕ್ ಕಾಗಿ ಕಾಣಿಸಿಕೊಂಡಿರೋ ರೀತಿಯ ತುಣುಕುಗಳೂ ಕಾಣಿಸಿಕೊಂಡಿವೆ. ಇದೆಲ್ಲವೂ ಖಾಕಿಯತ್ತ ಹೊತ್ತಿಕೊಂಡಿರೋ ಕುತೂಹಲ ಮತ್ತಷ್ಟು ಕಾವಿಗೊಡ್ಡಿಕೊಳ್ಳುವಂತೆ ಮಾಡುವಂತಿದೆ.

    ಇದು ತರುಣ್ ಟಾಕೀಸ್ ಮೂಲಕ ತರುಣ್ ಶಿವಪ್ಪ ನಿರ್ಮಾಣ ಮಾಡಿರುವ ಚಿತ್ರ. ಖಾಕಿ ಅಂದಾಕ್ಷಣ ಇದು ಪೊಲೀಸ್ ಕಥೆ ಇರಬಹುದಾ ಎಂಬ ಕುತೂಹಲ ಹುಟ್ಟಿಕೊಂಡಿತ್ತು. ಅದೀಗ ನಾನಾ ದಿಕ್ಕುಗಳಲ್ಲಿ ಚದುರಿಕೊಂಡಿದೆ. ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಈ ವರೆಗೆ ನಟಿಸಿರದಂಥಾ ಹೈ ವೋಲ್ಟೋಜ್ ಆಕ್ಷನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆಂಬ ಮಾಹಿತಿ ಈ ಹಿಂದೆಯೇ ಜಾಹೀರಾಗಿತ್ತು. ನವೀನ್ ರೆಡ್ಡಿ ನಿರ್ದೇಶನ ಮಾಡಿರೋ ಈ ಚಿತ್ರದಲ್ಲಿ ಚಿರು ಮತ್ತು ತಾನ್ಯಾ ಜೋಡಿ ಅದೆಷ್ಟು ರೊಮ್ಯಾಂಟಿಕ್ ಮೂಡಲ್ಲಿ ಮುದ್ದು ಮುದ್ದಾಗಿ ನಟಿಸಿದ್ದಾರೆಂಬುದನ್ನು ಈ ಹಾಡಿನ ಲಿರಿಕಲ್ ಕಂ ಮೇಕಿಂಗ್ ವೀಡಿಯೋ ಅನಾವರಣಗೊಳಿಸಿದೆ. ಹೀಗೆ ಪ್ರತೀ ಹೆಜ್ಜೆಯಲ್ಲಿಯೂ ಗಮನ ಸೆಳೆಯುತ್ತಾ ಸಾಗುತ್ತಿರೋ ಈ ಚಿತ್ರವೀಗ ಬಿಡುಗಡೆಯತ್ತ ಮುಖ ಮಾಡಿದೆ.

  • ಸಾರ್ವಜನಿಕರಿಗೆ ಮಜವಾದ ಟ್ರೇಲರ್ ನೋಡೋ ಸುವರ್ಣಾವಕಾಶ!

    ಸಾರ್ವಜನಿಕರಿಗೆ ಮಜವಾದ ಟ್ರೇಲರ್ ನೋಡೋ ಸುವರ್ಣಾವಕಾಶ!

    ಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿ ನಾಯಕನಾಗಿ ನಟಿಸಿರುವ ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರ ಬಿಡುಗಡೆಯ ಹೊಸ್ತಿಲಲ್ಲಿದೆ. ಇತ್ತೀಚಿನ ದಿನಗಳಲ್ಲಿ ಭಿನ್ನಾತಿ ಭಿನ್ನ ಶೀರ್ಷಿಕೆಗಳ ಜಮಾನವೊಂದು ಶುರುವಾಗಿದೆಯಲ್ಲಾ? ಅದನ್ನು ಮತ್ತಷ್ಟು ಮಿರುಗಿಸುವಂಥಾ ಗುಣ ಲಕ್ಷಣಗಳನ್ನು ಈ ಚಿತ್ರ ದಟ್ಟವಾಗಿಯೇ ಹೊಮ್ಮಿಸುತ್ತಿದೆ. ಈಗಾಗಲೇ ಎಲ್ಲಾ ರೀತಿಯಿಂದಲೂ ಟಾಕ್ ಕ್ರಿಯೇಟ್ ಮಾಡಿರೋ ಈ ಸಿನಿಮಾ ತಂಡ ಇದೀಗ ಟ್ರೇಲರ್ ಲಾಂಚ್ ಮಾಡಿದೆ. ಈ ಮೂಲಕ ಮಜವಾದ ಟ್ರೇಲರ್ ಒಂದನ್ನು ಕಣ್ತುಂಬಿಕೊಳ್ಳುವ ಸುವರ್ಣಾವಕಾಶ ಸಾರ್ವಜನಿಕರಿಗೆ ಸಿಕ್ಕಂತಾಗಿದೆ.

    ಅನೂಪ್ ರಾಮಸ್ವಾಮಿ ಕಶ್ಯಪ್ ನಿರ್ದೇಶನ ಮಾಡಿರೋ ಈ ಸಿನಿಮಾದ ಟ್ರೇಲರ್ ನಿಜಕ್ಕೂ ಮಜವಾಗಿದೆ. ಅದಕ್ಕೆ ತಕ್ಕುದಾದ ಕಥಾ ಹಂದರದ ಸುಳಿವಿನೊಂದಿಗೆ ಪ್ರೇಕ್ಷಕರನ್ನೆಲ್ಲ ಖುಷಿಗೊಳಿಸಿದೆ. ಪ್ರೀತಿ, ಪ್ರೇಮ, ಭರ್ಜರಿ ಮನೋರಂಜನೆ, ಒಂದು ಕಾಯಿಲೆ, ಮತ್ಯಾವುದೋ ನಿಗೂಢ ಮತ್ತು ಖದರ್ ಹೊಂದಿರುವಂಥಾ ಮಾಸ್ ಸನ್ನಿವೇಶ. ಇಷ್ಟಿದ್ದು ಬಿಟ್ಟರೆ ಯಾವುದೇ ಸಿನಿಮಾವಾದರೂ ಪ್ರೇಕ್ಷಕರಿಗೆ ಇಷ್ಟವಾಗಲು ಮತ್ತೇನು ಬೇಕಿದ್ದೀತು? ಈಗ ಹೊರ ಬಂದಿರುವ ಸಾರ್ವಜನಿಕರಿಗೆ ಸುವರ್ಣಾವಕಾಶ ಟ್ರೇಲರಿನಲ್ಲಿ ಅಷ್ಟೆಲ್ಲ ಅಂಶಗಳಿವೆ. ಈ ಕಾರಣದಿಂದಲೇ ಅದು ಪ್ರೇಕ್ಷಕರಿಗೆಲ್ಲ ಇಷ್ಟವಾಗಿದೆ.

    ಈ ಚಿತ್ರವನ್ನು ದೇವರಾಜ್, ಪ್ರಶಾಂತ್ ರೆಡ್ಡಿ ಮತ್ತು ಜನಾರ್ದನ್ ಚಿಕ್ಕಣ್ಣ ನಿರ್ಮಾಣ ಮಾಡಿದ್ದಾರೆ. ಇದನ್ನು ಅನೂಪ್ ರಾಮಸ್ವಾಮಿ ಕಶ್ಯಪ್ ನಿರ್ದೇಶನ ಮಾಡಿದ್ದಾರೆ. ಇದು ಹೊಸ ಅಲೆಯ ಚಿತ್ರಗಳ ಸಾಲಿನಲ್ಲಿಯೇ ಹೊಸಾ ಛಾಪು ಮೂಡಿಸುವಂಥಾ ಗುಣಲಕ್ಷಣಗಳನ್ನು ಒಳಗೊಂಡಿರುವ ಚಿತ್ರ. ಆರಂಭದಿಂದಲೇ ಸುದ್ದಿ ಮಾಡುತ್ತಾ ಬಂದಿದ್ದ ಈ ಸಿನಿಮಾದತ್ತ ಈಗಂತೂ ಎಲ್ಲರೂ ಆಕರ್ಷಿತರಾಗಿದ್ದಾರೆ. ಈ ಟ್ರೇಲರ್ ನೋಡಿದ ಮೇಲಂತೂ ಯಾರಿಗೇ ಆದರೂ ಆದಷ್ಟು ಬೇಗನೆ ಸಿನಿಮಾವನ್ನು ಕಣ್ತುಂಬಿಕೊಳ್ಳುವ ಕಾತರ ಮೂಡಿಕೊಳ್ಳದಿರುವುದಿಲ್ಲ. ಪ್ರೇಕ್ಷಕರಲ್ಲಿಯೂ ಕೂಡಾ ಈ ಸಿನಿಮಾದಲ್ಲೇನೋ ಇದೆ ಎಂಬಂಥಾ ಗಾಢವಾದ ನಂಬಿಕೆ ಹುಟ್ಟಿಕೊಂಡಿದೆ. ದತ್ತಣ್ಣ, ರಿಷಿ, ರಂಗಾಯಣ ರಘು, ಮಿತ್ರಾ ಸೇರಿದಂತೆ ಹಲವರ ಪಾತ್ರ ಪರಿಚಯ ಮಾಡಿಸುತ್ತಲೇ ಈ ಟ್ರೇಲರ್ ಸಖತ್ ಕ್ರೇಜ್ ಹುಟ್ಟುಹಾಕಿದೆ.

  • ಶಿಷ್ಯನ ಬಂಪರ್ ಕನಸಿಗೆ ಕ್ಲಾಪ್ ಮಾಡಲಿದ್ದಾರೆ ಒಡೆಯ!

    ಶಿಷ್ಯನ ಬಂಪರ್ ಕನಸಿಗೆ ಕ್ಲಾಪ್ ಮಾಡಲಿದ್ದಾರೆ ಒಡೆಯ!

    ಸಿಂಪಲ್ ಸುನಿ ನಿರ್ದೇಶನದ ಬಜಾರ್ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟಿದ್ದವರು ಧನ್ವೀರ್. ಅದರಲ್ಲಿ ಶೋಕ್ದಾರ್ ಪಾತ್ರ ನಿರ್ವಹಿಸಿ ಅದರ ಮೂಲಕವೇ ಒಂದಷ್ಟು ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡು ಇದೀಗ ಬಂಪರ್ ಚಿತ್ರಕ್ಕೆ ಅಣಿಯಾಗುತ್ತಿದ್ದಾರೆ. ಧನ್ವೀರ್ ಎರಡನೇ ಸಿನಿಮಾ ಬಂಪರ್ ಟೈಟಲ್ ಅನೌನ್ಸ್ ಆದ ಕ್ಷಣದಿಂದಲೇ ಸದ್ದು ಮಾಡಲಾರಂಭಿಸಿತ್ತು. ಆ ನಂತರದಲ್ಲಿ ದೀಪಾವಳಿ ಸ್ಪೆಷಲ್ ಎಂಬಂತೆ ಪೋಸ್ಟರ್ ಲಾಂಚ್ ಮಾಡಿದ ನಂತರವಂತೂ ಪ್ರೇಕ್ಷಕರ ನಡುವೆ ‘ಬಂಪರ್’ ಚರ್ಚೆ ಆರಂಭವಾಗಿತ್ತು. ಆ ನಂತರದಲ್ಲಿ ಇದರ ಬಗ್ಗೆ ಯಾವ ಮಾಹಿತಿಗಳೂ ಹೊರ ಬಿದ್ದಿರಲಿಲ್ಲ. ಆದರೀಗ ಇದೇ ತಿಂಗಳ 12ರಂದು ಬಂಪರ್ ಮುಹೂರ್ತ ನಡೆಸಲು ಚಿತ್ರತಂಡ ಮುಂದಾಗಿದೆ. ವಿಶೇಷವೆಂದರೆ, ಈ ಸಂದರ್ಭದಲ್ಲಿ ಒಡೆಯ ದರ್ಶನ್ ಹಾಜರಿದ್ದು ತಮ್ಮ ಶಿಷ್ಯನ ಚಿತ್ರಕ್ಕೆ ಕ್ಲಾಪ್ ಮಾಡೋ ಮೂಲಕ ಚಾಲನೆ ನೀಡಲಿದ್ದಾರೆ.

    ಹೊಸ ಹುಡುಗರಿಗೆ ಸದಾ ಸಹಕಾರ, ಬೆಂಬಲ ನೀಡುತ್ತಾ ಬಂದಿರುವವರು ಚಾಲೆಂಜಿಂಗ್ ಸ್ಟಾರ್ ದರ್ಶನ್. ಈ ಹಿಂದೆ ಸಿಂಪಲ್ ಸುನಿ ನಿರ್ದೇಶನದ ಬಜಾರ್ ಚಿತ್ರದ ಸಂದರ್ಭದಲ್ಲಿಯೂ ಅವರು ಧನ್ವೀರ್ ಗೆ ಸಾಥ್ ನೀಡಿದ್ದರು. ಇದೀಗ ಬಂಪರ್ ಗಂತೂ ದರ್ಶನ್ ಅಭೂತಪೂರ್ವವಾದ ಬೆಂಬಲವನ್ನೇ ನೀಡುತ್ತಿದ್ದಾರೆ. ಇದೇ ತಿಂಗಳ ಹನ್ನೆರಡನೇ ತಾರೀಕಿನಂದು ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ನಡೆಯಲಿರೋ ಮುಹೂರ್ತ ಸಮಾರಂಬದಲ್ಲಿ ಅತಿಥಿಯಾಗಿ ಹಾಜರಿರಲಿರುವ ದರ್ಶನ್ ತಮ್ಮ ಮೆಚ್ಚಿನ ಶಿಷ್ಯನ ಚಿತ್ರಕ್ಕೆ ಕ್ಲ್ಯಾಪ್ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿರುವ ಒಡೆಯ ಚಿತ್ರ ಕೂಡಾ ಡಿಸೆಂಬರ್ ಹನ್ನೆರಡರಂದು ಬಿಡುಗಡೆಯಾಗುತ್ತಿದೆ. ಆ ದಿನವೇ ಧನ್ವೀರ್ ನಾಯಕನಾಗಿ ನಟಿಸಲಿರೋ ಬಂಪರ್ ಚಿತ್ರಕ್ಕೆ ಅದ್ದೂರಿಯಾಗಿಯೇ ಮುಹೂರ್ತ ಸಮಾರಂಭ ನೆರವೇರೋ ಮೂಲಕ ಸೆಟ್ಟೇರಲಿದೆ. ಧನ್ವೀರ್ ಆರಂಭ ಕಾಲದಿಂದಲೂ ದರ್ಶನ್ ಅವರ ಅಭಿಮಾನಿಯಾಗಿದ್ದವರು. ದರ್ಶನ್ ಸಾಗಿ ಬಂದಿರೋ ಕಷ್ಟದ ಹಾದಿಯನ್ನು ಅರಿತುಕೊಂಡು ಅದರಿಂದ ಸ್ಫೂರ್ತಿ ಪಡೆದುಕೊಂಡಿರುವ ಧನ್ವೀರ್ ಅಂಥಾ ಕಷ್ಟದ ಹಾದಿಯಲ್ಲಿಯೇ ಮುಂದುವರೆದು ಬಂದಿದ್ದಾರೆ. ದರ್ಶನ್ ಅವರ ಸ್ಫೂರ್ತಿಯಿಂದಲೇ ನಾಯಕನಾಗಿ ಅವತರಿಸಿರೋ ಧನ್ವೀರ್ ಇದೀಗ ತನ್ನ ಆರಾಧ್ಯ ದೈವದಂತಿರೋ ದರ್ಶನ್ ಅವರ ಸಮ್ಮುಖದಲ್ಲಿಯೇ ಎರಡನೇ ಚಿತ್ರದ ಯಾನವನ್ನು ಆರಂಭಿಸುತ್ತಿದ್ದಾರೆ.

  • ಇನ್ಮುಂದೆ ಹುಚ್ಚನ ರೀತಿ ಆಡಲ್ಲ, ಗಲಾಟೆಯೂ ಮಾಡಲ್ಲ: ಹುಚ್ಚ ವೆಂಕಟ್

    ಇನ್ಮುಂದೆ ಹುಚ್ಚನ ರೀತಿ ಆಡಲ್ಲ, ಗಲಾಟೆಯೂ ಮಾಡಲ್ಲ: ಹುಚ್ಚ ವೆಂಕಟ್

    -ಆರ್ಥಿಕವಾಗಿ ಕಷ್ಟದಲ್ಲಿದ್ದೀನಿ, ಅಪ್ಪನ ದುಡ್ಡು ಹಾಳು ಮಾಡಿದೆ

    ಬೆಂಗಳೂರು: ಇನ್ಮುಂದೆ ಹುಚ್ಚನ ರೀತಿ ಆಡಲ್ಲ. ಯಾರ ಜೊತೆಯೂ ಗಲಾಟೆ ಮಾಡಿಕೊಳ್ಳಲ್ಲ ಎಂದು ನಟ ಹುಚ್ಚ ವೆಂಕಟ್ ಹೇಳಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹುಚ್ಚ ವೆಂಕಟ್, ಜನರು ನನ್ನ ಹತ್ತಿರ ಬರೋದಕ್ಕೂ ಹೆದರುತ್ತಿದ್ದಾರೆ. ಹಾಗಾಗಿ ಮನಸ್ಸಿಗೆ ನೋವಾಗಿದ್ದು, ಯಾರೊಂದಿಗೆ ಗಲಾಟೆ ಮಾಡಿಕೊಳ್ಳಲ್ಲ. ಶೂಟಿಂಗ್ ಹೋದ ವೇಲೆ ಕೆಲ ದುರ್ಘಟನೆಗಳು ನಡೆದಿದ್ದರಿಂದ ಗಲಾಟೆ ಮಾಡಿದೆ. ಅಪ್ಪನ ದುಡ್ಡು ಹಾಳು ಮಾಡಿ, ಆರ್ಥಿಕವಾಗಿ ಸಂಕಷ್ಟದಲ್ಲಿದ್ದೇನೆ. ಇನ್ನು ಮೇಲೆ ಸಂಪಾದನೆ ಮಾಡುತ್ತೇನೆ. ಈ ಹಿಂದೆ ಹಲವು ತಪ್ಪುಗಳನ್ನು ಮಾಡಿದ್ದು, ನನ್ನನ್ನು ಕ್ಷಮಿಸಿ ಎಂದು ಕೇಳಿಕೊಂಡರು.

    ನನ್ನ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಹೆದರುತ್ತಿದ್ದಾರೆ. ನನ್ನ ಬಳಿ ಬಂದ್ರೆ ನಾನು ಹೊಡ್ತೀನಿ ಅಂತ ಹೇಳುವದನ್ನು ಕೇಳಿಸಿಕೊಂಡಿದ್ದೇನೆ. ತಪ್ಪು ನೋಡಿದ್ರೆ ಕೋಪ ಬರುತ್ತೆ. ಈಗ ಯಾರ ಮೇಲೆಯೂ ಕೋಪವಿಲ್ಲ. ಬಿಗ್‍ಬಾಸ್ ಮನೆಗೆ ಪ್ರವೇಶ ನೀಡಿದ್ರೂ ಹೋಗ್ತೀನಿ. ಒಂದು ದಿನ ಅಥವಾ ಒಂದು ಗಂಟೆಯ ಅವಕಾಶ ನೀಡಿದ್ರೆ, ಸ್ಪರ್ಧಿಗಳಿಗೆಲ್ಲ ಶುಭಾಶಯ ತಿಳಿಸುತ್ತೇನೆ ಎಂದರು.

    ಸಿನಿಮಾ ಆಫರ್, ಅತಿಥಿ ಪಾತ್ರ, ಯಾವುದಾದ್ರೂ ರಿಯಾಲಿಟಿ ಶೋ ಇದ್ದರೂ ಬಂದು ಕೆಲಸ ಮಾಡುತ್ತೇನೆ. ಹಳೆಯ ಹುಚ್ಚ ವೆಂಕಟ್ ನನ್ನು ಮರೆತು ಬಿಡಿ. ನಾನು ಬದಲಾಗಿದ್ದು, ಎಲ್ಲ ಘಟನೆಗಳು ನಡೆದಿದ್ದು ಆಕಸ್ಮಿಕ. ಸಿನಿಮಾ ಮಾಡೋದಕ್ಕೆ ಅಪ್ಪ ದುಡ್ಡು ಕೊಡ್ತೀನಿ ಅಂದಿದ್ದವರು ಕೊಡಲಿಲ್ಲ. ಹಾಗಾಗಿ ನನ್ನ ಕಾರ್ ಗ್ಲಾಸ್ ನನ್ನು ಒಡೆದಿದ್ದೇನೆ. ಯಾವುದೇ ಖಾಸಗಿ ಕಾರ್ಯಕ್ರಮ, ಮದುವೆಗಳು ಬಂದರೂ ಬರುತ್ತೇನೆ. ಬಿಗ್‍ಬಾಸ್ ಮನೆಗೆ ಹೋಗಿ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಮಾನಸಿಕ ಮತ್ತು ದೈಹಿಕವಾಗಿಯೂ ಫಿಟ್ ಆಗಿದ್ದೇನೆ. ಯಾವಾಗ ಔಟ್ ಆಗ್ತೀನಿ ಎಂಬುವುದು ಗೊತ್ತಿಲ್ಲ. ಜನರ ಪ್ರೀತಿಗಾಗಿ ನಾನು ಕೆಲಸ ಮಾಡಿಕೊಂಡು ಬಂದಿದ್ದೇನೆ. ಸಮಾಜ ನನ್ನನ್ನು ಸ್ವೀಕರಿಸಿದ್ದು, ನಿಂತಿರುವ ಸಿನಿಮಾಗಳನ್ನು ಆರಂಭಿಸುತ್ತೇನೆ ಎಂದು ತಿಳಿಸಿದರು.

  • ರಾಹುಲ್ ಐನಾಪುರರ ಫಸ್ಟ್ ಲುಕ್ ‘ಗತ್ತು’!

    ರಾಹುಲ್ ಐನಾಪುರರ ಫಸ್ಟ್ ಲುಕ್ ‘ಗತ್ತು’!

    ಹಿಂದೆ ತ್ರಾಟಕ ಎಂಬ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಅಬ್ಬರಿಸಿದ್ದವರು ರಾಹುಲ್ ಐನಾಪುರ. ಶಿವಗಣೇಶ್ ನಿರ್ದೇಶನ ಮಾಡಿದ್ದ ಆ ಚಿತ್ರದಲ್ಲಿ ವಿಚಿತ್ರ ಕಾಯಿಲೆ ಇರೋ ಅಧಿಕಾರಿಯ ಪಾತ್ರದಲ್ಲಿ ಅವರು ನಟಿಸಿದ್ದ ರೀತಿ ಕಂಡ ಪ್ರೇಕ್ಷಕರೆಲ್ಲ ಕನ್ನಡಕ್ಕೋರ್ವ ಖಡಕ್ ವಿಲನ್ ಎಂಟ್ರಿ ಆಯಿತೆಂದು ನಿರ್ಧರಿಸಿದ್ದರು. ಹೀಗೆ ಮೊದಲ ಸಿನಿಮಾದಲ್ಲಿಯೇ ಭರವಸೆ ಮೂಡಿಸಿದ್ದ ರಾಹುಲ್ ಇದೀಗ ಗತ್ತು ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಫಸ್ಟ್ ಲುಕ್ ಪೋಸ್ಟರ್ ಈಗ ಬಿಡುಗಡೆಯಾಗಿದೆ.

     

    ಈ ಶೀರ್ಷಿಕೆಗೆ ತಕ್ಕುದಾದ ಗತ್ತಿನ ಲುಕ್ಕಿನಲ್ಲಿಯೇ ರಾಹುಲ್ ಮಿಂಚಿದ್ದಾರೆ. ಇದೀಗ ಲಾಂಚ್ ಆಗಿರುವ ಗತ್ತು ಫಸ್ಟ್ ಲುಕ್ ಪೋಸ್ಟರ್‍ನಲ್ಲಿ ರಾಹುಲ್ ಐನಾಪುರ ಅವರ ಗೆಟಪ್ಪಿನ ಒಂದಷ್ಟು ಝಲಕ್‍ಗಳಿವೆ. ಅವುಗಳಲ್ಲಿ ಅವರು ಸ್ಟೈಲಿಶ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಒಂದು ಸಿನಿಮಾ ಜೊತೆಯಾಗಿ ಮಾಡಿದ ಮೇಲೆ ಮತ್ತದೇ ತಂಡ ಮತ್ತೆ ಜೊತೆಯಾಗೋದು ಅಪರೂಪ. ಆದರೆ ರಾಹುಲ್ ಐನಾಪುರ ಮತ್ತು ನಿರ್ದೇಶಕ ಶಿವ ಗಣೇಶ್ ವಿಚಾರದಲ್ಲಿ ಮೊದಲ ಕಾಂಬಿನೇಷನ್ನು ಹ್ಯಾಟ್ರಿಕ್ ಬಾರಿಸಿದೆ. ತ್ರಾಟಕ ಗೆಲುವು ಕಾಣುತ್ತಲೇ ಶಿವಗಣೇಶ್ ನಿರ್ದೇಶನ ಮಾಡಿದ್ದ ‘ಅದೃಶ್ಯ’ ಎಂಬ ಚಿತ್ರದಲ್ಲಿ ರಾಹುಲ್ ನಟಿಸಿದ್ದರು ಗತ್ತು ಮೂಲಕ ಈ ಜೋಡಿ ಮೂರನೇ ಬಾರಿ ಒಂದಾಗಿದೆ.

    ರಾಹುಲ್ ಐನಾಪುರ ರಾಜಕಾರಣದ ಹಿನ್ನೆಲೆಯಿಂದ ಬಂದವರಾದರೂ ಅವರ ಪ್ರಧಾನ ಆಸಕ್ತಿ ಕೇಂದ್ರೀಕರಿಸಿಕೊಂಡಿದ್ದದ್ದು ಸಿನಿಮಾದತ್ತ. ಸಿನಿ ತೆಕ್ಕೆಗೆ ಬಿದ್ದ ಅವರು ತ್ರಾಟಕ ಮೂಲಕ ನಾಯಕನಾಗಿ ಹೊರ ಹೊಮ್ಮಿದ್ದರು. ಓರ್ವ ನಿರ್ದೇಶಕರಾಗಿ ರಾಹುಲ್ ಐನಾಪುರರ ಕಸುವೇನೆಂಬುದನ್ನು ನಿಖರವಾಗಿಯೇ ಅರಿತುಕೊಂಡಿರುವವರು ಶಿವಗಣೇಶ್. ಈ ಬಾರಿ ಗತ್ತು ಚಿತ್ರದ ಮೂಲಕ ನಾನಾ ಕೊಂಬೆಕೋವೆ, ವಿಸ್ತಾರಗಳಿರುವ ರಗಡ್ ಕಥೆಯನ್ನೇ ಅವರು ಸಿದ್ಧಪಡಿಸಿಕೊಂಡಂತಿದೆ. ಕಥೆಯ ವಿಚಾರವೂ ಸೇರಿದಂತೆ ಉಳಿದ ಅಂಶಗಳೆಲ್ಲ ಇನ್ನಷ್ಟೇ ಜಾಹೀರಾಗಬೇಕಿವೆ. ಆದರೆ ಗತ್ತು ಚಿತ್ರದ ಫಸ್ಟ್ ಲುಕ್ ಮಾತ್ರ ಮಸ್ತಾಗಿದೆ.

  • ಹತ್ತೊಂಬತ್ತರ ಉನ್ಮಾದದ ಕಥೆಯಿಲ್ಲಿದೆ!

    ಹತ್ತೊಂಬತ್ತರ ಉನ್ಮಾದದ ಕಥೆಯಿಲ್ಲಿದೆ!

    ರಾಜೇಶ್ವರಿ ಫಿಲಂಸ್ ಲಾಂಛನದಲ್ಲಿ ಲೋಕೇಶ್ ನಿರ್ಮಾಣ ಮಾಡಿರುವ 19 ಏಜ್ ಈಸ್ ನಾನ್ಸೆನ್ಸ್ ಚಿತ್ರ ಡಿಸೆಂಬರ್ 6ರಂದು ಬಿಡುಗಡೆಯಾಗಲಿದೆ. ಸಾಮಾನ್ಯವಾಗಿ ಯುವ ಆವೇಗದ ಸಿನಿಮಾ ಬಗ್ಗೆ ಪ್ರೇಕ್ಷಕರೊಂದು ಬೆರಗಿಟ್ಟುಕೊಂಡಿರುತ್ತಾರೆ. ಈ ಸಿನಿಮಾದತ್ತ ಒಲವು ಮೂಡಿಕೊಂಡಿರುವುದೂ ಆ ಕಾರಣಕ್ಕಾಗಿಯೇ. ಆರಂಭದಲ್ಲಿ ಇದೊಂದು ಬರೀ ಯುವ ಹುಮ್ಮಸ್ಸಿನ ಕಥನ ಅಂದುಕೊಂಡಿದ್ದವರಿಗೆ ಟ್ರೇಲರ್ ನಲ್ಲಿ ಘನ ಗಂಭೀರವಾದ ವಿಚಾರಗಳೇ ಕಾಣಿಸಿವೆ. ಈ ಸಿನಿಮಾದೊಳಗೆ ಗಹನವಾದೊಂದು ಕಥೆ ಇದೆ ಎಂಬ ವಿಚಾರವನ್ನು ಇತ್ತೀಚೆಗೆ ಬಿಡುಗಡೆಯಾಗಿದ್ದ ಟ್ರೇಲರ್ ಎಲ್ಲರಿಗೂ ತಲುಪಿಸಿದೆ.

    19 ಏಜ್ ಈಸ್ ನಾನ್ಸೆನ್ಸ್ ಎಂಬ ಈ ಸಿನಿಮಾ ತನ್ನ ಶೀರ್ಷಿಕೆಯ ಕಾರಣದಿಂದಲೇ ಆರಂಭಿಕವಾಗಿ ಗಮನ ಸೆಳೆದಿತ್ತು. ಆದರೆ ಅದರ ಬಗ್ಗೆ ಪ್ರೇಕ್ಷಕರೆಲ್ಲ ಚರ್ಚೆ ನಡೆಸಲಾರಂಭಿಸಿದ್ದು ಟ್ರೇಲರ್ ಹೊರ ಬಂದ ನಂತರವೇ. ಯಾಕೆಂದರೆ ಅದರಲ್ಲಿ ಬೇರೆಯದ್ದೇ ಹಾದಿಯಲ್ಲಿರುವಂತೆ ಭಾಸವಾಗುವ ಗಟ್ಟಿ ಕಥೆಯ ಹೊಳಹೊಂದು ಸಿಕ್ಕಿತ್ತು.

    ಹತ್ತೊಂಬತ್ತರ ಹರೆಯದ ನಿರ್ಧಾರಗಳ ಆಚೀಚೆಗೆ ಸಮಾಜಕ್ಕೆ ಸಂದೇಶ ನೀಡುವಂಥಾ, ನಮಗೆಲ್ಲ ಮುಖ್ಯವೆನಿಸದಿದ್ದರೂ ಜ್ವಲಂತ ಸಮಸ್ಯೆಯಾಗಿ ಕಾಡುತ್ತಿರುವಂಥಾ ಒಂದಷ್ಟು ವಿಚಾರಗಳು ಈ ಮೂಲಕ ಹರಡಿಕೊಂಡಿತ್ತು. ಮೇಕಿಂಗ್ ಸೇರಿದಂತೆ ಎಲ್ಲದರಲ್ಲಿಯೂ ಗಮನ ಸೆಳೆದಿದ್ದ ಈ ಸಿನಿಮಾವನ್ನು ಸುರೇಶ್ ಎಂ ಗಿಣಿ ನಿರ್ದೇಶನ ಮಾಡಿದ್ದಾರೆ. ಇಲ್ಲಿ ಮನುಷ್ ನಾಯಕನಾಗಿ ನಟಿಸಿದ್ದಾರೆ.

    ಹತ್ತೊಂಬತ್ತರ ಹರೆಯದ ಕಥೆ ಎಂದಾಕ್ಷಣ ಇದು ಯುವ ಸಮುದಾಯಕ್ಕೆ ಸೀಮಿತವಾದ ಕಥೆ ಅನ್ನಿಸೋದು ಸಹಜವೇ. ಇಲ್ಲಿರುವುದೂ ಕೂಡಾ ಯೂಥ್‍ಫುಲ್ ಕಥೆಯಾಗಿದ್ದರೂ ಸಹ ಅದು ಕೌಟುಂಬಿಕ ಸನ್ನಿವೇಶಗಳನ್ನು ಬಳಸಿಕೊಂಡೇ ಸಾಗುತ್ತದೆ. ಚಿತ್ರರಂಗ ಹೇಳಿಕೊಂಡಿರೋ ಪ್ರಕಾರ ನೋಡೋದಾದರೆ ಇಲ್ಲಿ ಫ್ಯಾಮಿಲಿ ಕಥನವೇ ಪ್ರಧಾನ ಪಾತ್ರ ವಹಿಸುತ್ತದೆಯಂತೆ.

    ಇದು ಯುವ ಸಮುದಾಯದೊಂದಿಗೆ ಪೋಷಕರಿಗೂ ಒಂದು ಸಂದೇಶವನ್ನು ಹೊತ್ತು ತಂದಿದೆ. ಇದರೊಂದಿಗೆ ಲವ್, ಮಾಸ್ ಕಥನವನ್ನೂ ಒಳಗೊಂಡಿರುವ 19 ಏಜ್ ಈಸ್ ನಾನ್ಸೆನ್ಸ್ ಕಮರ್ಶಿಯಲ್ ಸೂತ್ರದೊಂದಿಗೆ ತಯಾರಾಗಿರುವ ಚಿತ್ರ.