Tag: kannada cinema

  • ಕನ್ನಡ ಚಿತ್ರರಂಗ ಇರುವವರೆಗೂ ವಿಷ್ಣು ಸರ್ ಜೀವಂತವಾಗಿ ಇರುತ್ತಾರೆ: ಕಿಚ್ಚ

    ಕನ್ನಡ ಚಿತ್ರರಂಗ ಇರುವವರೆಗೂ ವಿಷ್ಣು ಸರ್ ಜೀವಂತವಾಗಿ ಇರುತ್ತಾರೆ: ಕಿಚ್ಚ

    ಬೆಂಗಳೂರು: ಕನ್ನಡ ಚಿತ್ರರಂಗ ಇರುವವರೆಗೂ ಸಾಹಸ ಸಿಂಹ ವಿಷ್ಣುವರ್ಧನ್ ಅವರು ಜೀವಂತವಾಗಿ ಇರುತ್ತಾರೆ ಎಂದು ಕಿಚ್ಚ ಸುದೀಪ್ ಅವರು ಟ್ವೀಟ್ ಮಾಡಿದ್ದಾರೆ.

    ಕಿಚ್ಚ ಸದಾ ಟ್ವಿಟ್ಟರ್ ನಲ್ಲಿ ಸಕ್ರಿಯವಾಗಿ ಇರುತ್ತಾರೆ. ಅಭಿಮಾನಿಗಳ ಜೊತೆ ಚಾಟ್ ಮಾಡುತ್ತಾರೆ. ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡುತ್ತಿರುತ್ತಾರೆ. ಈಗ ಕಳೆದ ಮೇ 23ಕ್ಕೆ ಡಾ. ವಿಷ್ಣುವರ್ಧನ್ ಅವರು ಬಣ್ಣ ಹಚ್ಚಿ 48 ವರ್ಷಗಳು ಕಳೆದಿವೆ. ಈ ವಿಚಾರವಾಗಿಯೂ ಕೂಡ ಕಿಚ್ಚ ಟ್ವೀಟ್ ಮಾಡಿದ್ದಾರೆ.

    ಈ ಸುಂದರವಾದ ಕ್ಷಣಗಳನ್ನು ಸೆರೆಹಿಡಿಯಲು ಆ ಕ್ಯಾಮೆರಗಳು ಅದೃಷ್ಟ ಮಾಡಿದ್ದವು. ಅವುಗಳಿಗೆ ಅಂದು ಗೊತ್ತಿರಲಿಲ್ಲ ಇಂದು ನಾವು ಸೆರೆಹಿಡಿಯುತ್ತಿರುವ ವ್ಯಕ್ತಿ ಮುಂದೇ ಒಂದು ದಿನ ಲೆಜೆಂಡ್ ಆಗಿ ಬೆಳೆಯುತ್ತಾರೆ ಎಂದು. ನಾಗರಹಾವು ಸಿನಿಮಾ, ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ಹಾಗೂ ವಿಷ್ಣು ಸರ್ ಅವರು ಕನ್ನಡ ಚಿತ್ರರಂಗ ಇರುವವರೆಗೂ ಜೀವಂತವಾಗಿ ಇರುತ್ತಾರೆ ಎಂದು ಕಿಚ್ಚ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.

    ಈ ವಿಚಾರವಾಗಿ ವಿಷ್ಣುವರ್ಧನ್ ಅವರ ಟ್ವಿಟ್ಟರ್ ಫ್ಯಾನ್ಸ್ ಪೇಜ್ ಒಂದು ಯಾಜಮಾನರು ನಾಗರಹಾವು ಚಿತ್ರಕ್ಕಾಗಿ ಬಣ್ಣಹಚ್ಚಿ ಕ್ಯಾಮೆರಾ ಎದುರು ನಿಂತಿದಕ್ಕೆ ಇಂದಿಗೆ 48 ವರ್ಷ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಕಿಚ್ಚ ರೀಟ್ವೀಟ್ ಮಾಡಿದ್ದಾರೆ. ಇದಕ್ಕೆ ಸಂತಸ ವ್ಯಕ್ತಪಡಿಸಿರುವ ಕಿಚ್ಚ ಮತ್ತು ವಿಷ್ಣುವರ್ದನ್ ಅಭಿಮಾನಿಗಳು, ನೀವು ಕೂಡ ದಾದನ ಹಾಗೇ ಅಣ್ಣ ಎಂದು ಕಮೆಂಟ್ ಮಾಡಿದ್ದಾರೆ.

    ನಾಗರಹಾವು ಚಿತ್ರ 1972ರಲ್ಲಿ ಬಿಡುಗಡೆಯಾಗಿತ್ತು. ಇದರಲ್ಲಿ ಮೊದಲ ಬಾರಿಗೆ ವಿಷ್ಣುವರ್ದನ್ ಅವರು ನಾಯಕ ನಟನಾಗಿ ಅಭಿನಯಿಸಿದ್ದರು. ಈ ಸಿನಿಮಾವನ್ನು ಪುಟ್ಟಣ್ಣ ಕಣಗಾಲ್ ನಿರ್ದೇಶನ ಮಾಡಿದ್ದು, ಎನ್ ವೀರಸ್ವಾಮಿ ಅವರು ನಿರ್ಮಾಣ ಮಾಡಿದ್ದರು. ಓರ್ವ ವಿದ್ಯಾರ್ಥಿ ಮತ್ತು ಶಿಕ್ಷರ ನಡುವಿನ ಬಾಂಧವ್ಯವನ್ನು ಈ ಸಿನಿಮಾದಲ್ಲಿ ಚೆನ್ನಾಗಿ ತೋರಿಸಲಾಗಿತ್ತು. ವಿಜಯ್ ಭಾಸ್ಕರ್ ಅವರ ಸಂಗೀತದಲ್ಲಿ ಮೂಡಿ ಬಂದಿದ್ದ ಹಾವಿನ ದ್ವೇಷ 12 ವರುಷ ಎಂಬ ಹಾಡು, ಚಿಗರು ಮೀಸೆ ಹುಡುಗ ರಾಮಾಚಾರಿಯನ್ನು ಕನ್ನಡಿಗರು ಒಪ್ಪಿ ಅಪ್ಪಿ ಮುದ್ದಾಡಿದ್ದರು.

    ಸುದೀಪ್ ಅವರು ವಿಷ್ಣವರ್ಧನ್ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ. ಸದ್ಯ ಕಿಚ್ಚನ `ಕೋಟಿಗೊಬ್ಬ-3′ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಈ ಕೊರೊನಾ ವೈರಸ್ ಲಾಕ್‍ಡೌನ್ ನಿಂದ ಮುಂದಕ್ಕೆ ಹೋಗಿದೆ. ಈ ಸಿನಿಮಾದ ನಂತರ ಸುದೀಪ್ ಅವರು ಅನೂಪ್ ಭಂಡಾರಿ ನಿರ್ದೇಶನದ `ಫ್ಯಾಂಟಮ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕಿಚ್ಚ ವಿಕ್ರಾಂತ್ ರೋಣ ಎಂಬ ಖಡಕ್ ಅಧಿಕಾರಿಯ ಪಾತ್ರ ಮಾಡಲಿದ್ದಾರೆ. ಚಿತ್ರದ ಮೊದಲ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿದೆ.

  • ಓಂ: ಉಪ್ಪಿ ಮತ್ತು ರಾಜ್ ಫ್ಯಾಮಿಲಿಗೆ ಕೊಂಡಿಯಾದದ್ದು ಹೊನ್ನವಳ್ಳಿ!

    ಓಂ: ಉಪ್ಪಿ ಮತ್ತು ರಾಜ್ ಫ್ಯಾಮಿಲಿಗೆ ಕೊಂಡಿಯಾದದ್ದು ಹೊನ್ನವಳ್ಳಿ!

    ಒಂದು ಗೆದ್ದ ಸಿನಿಮಾದ ಸುತ್ತ ಹತ್ತು ಹಲವು ಕಥೆ, ರೋಚಕ ಸಂಗತಿಗಳ ಪಕಳೆಗಳು ಚೆದುರಿಕೊಂಡಿರುತ್ತವೆ. ಅವುಗಳನ್ನು ಕಾಲ ಕಾಲಕ್ಕೆ ಬೊಗಸೆಗಿಟ್ಟುಕೊಂಡು ಸಂಭ್ರಮಿಸೋದಕ್ಕಿಂತಲೂ ಬೇರೆ ಖುಷಿಗಳು ಸಿನಿಮಾ ಪ್ರೇಮಿಗಳ ಪಾಲಿಗೆ ಸಿಗಲಿಕ್ಕಿಲ್ಲ. ಅದರಲ್ಲಿಯೂ ಅಂತಹ ಸಿನಿಮಾಗಳು ಸಿಲ್ವರ್ ಜ್ಯುಬಿಲಿಯಂಥ ಮೈಲಿಗಲ್ಲು ದಾಟಿಕೊಳ್ಳುವಂತಹ ಸಂದರ್ಭವಂತೂ ಅಂತಹ ಭಾವಗಳನ್ನು ಮತ್ತಷ್ಟು ತೀವ್ರವಾಗಿಸುತ್ತೆ. ಸದ್ಯ 1995ರಲ್ಲಿ ತೆರೆ ಕಂಡು ಕನ್ನಡ ಸಿನಿಮಾ ರಂಗದ ದಿಕ್ಕು ದೆಸೆಗಳನ್ನು ಬದಲಿಸಿದ್ದ ಓಂ ಚಿತ್ರ ಕೂಡ ಕನ್ನಡದ ಸಿನಿಮಾಸಕ್ತರ ಪಾಲಿಗೆ ಅಂಥದ್ದೊಂದು ಸಂಭ್ರಮವನ್ನು ಕೊಡಮಾಡಿದೆ.

    ಇದೇ ತಿಂಗಳ 18ರಂದು ಓಂ ಬಿಡುಗಡೆಯಾಗಿ 25 ವರ್ಷ ತುಂಬುತ್ತಿರೋದು ಅದಕ್ಕೆ ಕಾರಣ. ಈ ಹೊತ್ತಿನಲ್ಲಿ ಹಿದಿರುಗಿ ನೋಡಿದರೆ, ಮಾರುಕಟ್ಟೆ, ತಾಂತ್ರಿಕತೆ ಸೇರಿದಂತೆ ಎಲ್ಲದರಲ್ಲಿಯೂ ಹಿಂದುಳಿದ ಕಾಲದಲ್ಲಿ ಈ ಸಿನಿಮಾ ಮಾಡಿದ್ದ ದಾಖಲೆಗಳ ಬಗ್ಗೆ ಯಾರಿಗಾದರೂ ಅಚ್ಚರಿ ಮತ್ತು ಹೆಮ್ಮೆಯ ಭಾವ ಮೂಡಿಕೊಳ್ಳದಿರಲು ಸಾಧ್ಯವೇ ಇಲ್ಲ. ಇಂತಹದ್ದೊಂದು ಸಿನಿಮಾ ಸಿದ್ಧಗೊಂಡಿದ್ದರ ಹಿಂದೆ ನಾನಾ ಕಥೆಗಳಿದ್ದಾವೆ. ಅದರಲ್ಲಿ ಒಂದೊಳ್ಳೆ ಕಥೆ ರೆಡಿ ಮಾಡಿಕೊಂಡು, ಅದಕ್ಕೆ ಶಿವಣ್ಣನನ್ನೇ ನಾಯಕನಾಗಿಯೂ ನಿಕ್ಕಿ ಮಾಡಿಕೊಂಡಿದ್ದ ಉಪ್ಪಿ ರಾಜ್ ಕುಟುಂಬದ ಸಂಪರ್ಕ ಸಾಧಿಸಿದ್ದು ಮತ್ತೊಂದು ರೋಚಕ ಕಥೆ!

    ಅದು ಶಿವಣ್ಣ ಗೆಲುವಿನ ಓಟದಲ್ಲಿದ್ದ ಕಾಲ. ಆರಂಭದಲ್ಲಿ ಈ ಕಥೆಗೆ ನಾಯಕ ಯಾರಾಗಬೇಕೆಂಬ ಬಗ್ಗೆ ಉಪ್ಪಿ ನಾನಾ ನಿಟ್ಟಿನಲ್ಲಿ ಆಲೋಚಿಸಿದ್ದರು. ಅವರ ಮನಸಲ್ಲಿ ಒಂದಷ್ಟು ನಟರ ಚಿತ್ರಗಳೂ ಕೂಡ ಕದಲಿ ಹೋಗಿದ್ದವು. ಆದರೆ ಆ ಪಾತ್ರಕ್ಕೆ ಅವರೇ ಆಗಬೇಕೆಂಬಂತೆ ಸ್ಥಿರವಾಗಿದ್ದ ಚಿತ್ರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರದ್ದು. ಆದರೆ ಅದಕ್ಕಾಗಿ ಡಾ ರಾಜ್ ಫ್ಯಾಮಿಲಿಯನ್ನು ಭೇಟಿಯಾಗಿ ಕಥೆ ಹೇಳಿ ಒಪ್ಪಿಸುವ ಬಗೆ ಯಾವುದೆಂಬುದು ಮಾತ್ರ ಉಪ್ಪಿ ಪಾಲಿಗೆ ಯಕ್ಷಪ್ರಶ್ನೆಯಾಗುಳಿದಿತ್ತು.

    ಅದಕ್ಕೆ ಯಾವ ದಾರಿಯೆಂಬ ಹುಡುಕಾಟದಲ್ಲಿದ್ದಾಗ ಉಪೇಂದ್ರ ಅವರಿಗೆ ನೆನಪಾದದ್ದು ಹಿರಿಯ ನಟ ಹೊನ್ನವಳ್ಳಿ ಕೃಷ್ಣ. ರಾಜ್ ಪಾಲಿಗೆ ಆಪ್ತ ವಲಯದಲ್ಲಿದ್ದ ಹೊನ್ನವಳ್ಳಿ ಕೃಷ್ಣರನ್ನು ಮಾತಾಡಿಸಿದರೆ ತನ್ನ ಹಾದಿ ಸುಗಮವಾದೀತೆಂಬ ಇರಾದೆಯಿಂದ ಉಪ್ಪಿ ಅವರನ್ನು ಸಂಧಿಸಿದ್ದರು. ಉಪ್ಪಿಯ ಉತ್ಸಾಹ, ಆ ಕಥೆಯ ಹೊಸತನಗಳನ್ನೆಲ್ಲ ಕಂಡ ಹೊನ್ನವಳ್ಳಿ ಕೃಷ್ಣ ಕಡೆಗೂ ಅದೊಂದು ದಿನ ಉಪ್ಪಿಯನ್ನು ಡಾ.ರಾಜ್ ಮನೆಗೆ ಕರೆದೊಯ್ದಿದ್ದರಂತೆ.

    ಹಾಗೆ ಹೋದವರೇ ಹೊನ್ನವಳ್ಳಿ ಕೃಷ್ಣ ವರದಪ್ಪನವರನ್ನು ಭೇಟಿಯಾಗಿ ವಿಚಾರವನ್ನೆಲ್ಲ ತಿಳಿಸಿ ರಾಜ್‍ಕುಮಾರ್ ಅವರೊಂದಿಗೆ ಭೇಟಿಗೆ ಅವಕಾಶ ಕಲ್ಪಿಸುವಂತೆ ಕೇಳಿಕೊಂಡಿದ್ದರಂತೆ. ಕೆಲವೇ ಸಮಯದಲ್ಲಿ ಆ ಸಂದರ್ಭವೂ ಕೂಡಿ ಬಂದಿತ್ತು. ಸಾವಧಾನದಿಂದ ಕಥೆ ಕೇಳಿದ ಅಣ್ಣಾವ್ರು ಬಲು ಖುಷಿಯಿಂದ ಒಪ್ಪಿಕೊಂಡಿದ್ದರಂತೆ. ಅದರ ಬಲದಿಂದಲೇ ಉಪ್ಪಿಗೆ ಸಲೀಸಾಗಿ ಶಿವಣ್ಣನ ಕಾಲ್‍ಶೀಟ್ ಸಿಗುವಂತಾಗಿತ್ತು. ಆ ಕಥೆ ರಾಜ್‍ಕುಮಾರ್ ಅವರಿಗೆ ಅದೆಷ್ಟು ಇಷ್ಟವಾಗಿತ್ತೆಂದರೆ, ಓಂ ಆರಂಭವಾಗಿ ಕಡೇಯವರೆಗೂ ಅವರು ಅದರಲ್ಲಿ ಒಂದಲ್ಲ ಒಂದು ರೀತಿಯಲ್ಲಿ ತೊಡಗಿಸಿಕೊಂಡಿದ್ದರು. ಕಡೆಗೂ ರಾಜಣ್ಣ ಆ ಕಥೆಯ ಮೇಲಿಟ್ಟಿದ್ದ ನಂಬಿಕೆ ಸುಳ್ಳಾಗಲಿಲ್ಲ.

  • ಪರಭಾಷೆಗಳಲ್ಲಿ ಮಿನುಗಿದ ಮೊದಲ ಚಿತ್ರ ‘ಓಂ’!

    ಪರಭಾಷೆಗಳಲ್ಲಿ ಮಿನುಗಿದ ಮೊದಲ ಚಿತ್ರ ‘ಓಂ’!

    ಶಕಗಳಿಂದೀಚೆಗೆ ಕನ್ನಡ ಸಿನಿಮಾಗಳ ಬಗ್ಗೆ ಪರಭಾಷಾ ನೆಲದಲ್ಲಿ ಅದೆಂತಹ ತಾತ್ಸಾರದ ಭಾವವಿತ್ತೆಂಬುದನ್ನು ಒಮ್ಮೆ ನೆನಪಿಸಿಕೊಳ್ಳಿ. ಇಲ್ಲಿ ಬರೀ ರಿಮೇಕ್ ಮಾಡ್ತಾರೆಂಬುದರಿಂದ ಮೊದಲ್ಗೊಂಡು, ಗುಣಮಟ್ಟದವರೆಗೂ ಕನ್ನಡ ಸಿನಿಮಾಗಳ ಬಗ್ಗೆ ಕಂಪ್ಲೇಂಟುಗಳ ಸರಮಾಲೆಗಳೇ ಇದ್ದವು. ಅದಕ್ಕೆ ಕಾರಣ ಸೀಮಿತ ಮಾರುಕಟ್ಟೆ ಎಂಬಂಥ ಸಮಜಾಯಿಷಿಗಳೂ ಈ ದಿಕ್ಕಿನಿಂದ ಕೇಳಿ ಬರುತ್ತಿದ್ದವು. ಅಂತಹ ಕಾಲಘಟ್ಟದಲ್ಲಿ ಎಲ್ಲ ಇಲ್ಲಗಳನ್ನು ಮೀರಿಕೊಂಡು ಪರಭಾಷೆಗಳಲ್ಲಿಯೂ ಅಚ್ಚರಿ ಮೂಡುವಂಥ ಸಿನಿಮಾ ಮಾಡೋದೆಂದರೆ ಅದೊಂದು ಸಾಹಸ. ಅದನ್ನು ಸಾಧ್ಯವಾಗಿಸಿದ್ದು ಉಪ್ಪಿ ನಿರ್ದೇಶನದ `ಓಂ’ ಚಿತ್ರ!

    ಅದಾಗಲೇ ‘ತರ್ಲೆ ನನ್ಮಗ’ ಮತ್ತು ‘ಶ್’ ಎಂಬೆರಡು ಸಿನಿಮಾ ನಿರ್ದೇಶನದ ಬಳಿಕ ಉಪೇಂದ್ರ ಅವರ ಮೂರನೇ ಸಿನಿಮಾ ಓಂ. ಅದೆಷ್ಟೋ ವರ್ಷಗಳಿಂದ ಈ ಕಥೆಯನ್ನು ಹದಗೊಳಿಸಿಕೊಂಡು ಕಾಯುತ್ತಿದ್ದ ಉಪೇಂದ್ರ, ಭೂಗತ ಜಗತ್ತಿನ ಕಥೆ ಹೇಳುತ್ತಿದ್ದಾರೆಂಬ ಸುಳಿವು ಸಿಕ್ಕಾಗ ಅದೆಷ್ಟು ಮಂದಿ ಅಚ್ಚರಿಗೊಂಡಿದ್ದರೋ ಗೊತ್ತಿಲ್ಲ. ಆದರೆ ತುಂಬಾ ಜನ ಇದು ವರ್ಕೌಟ್ ಆಗೋ ಸಂಗತಿ ಅಲ್ಲ ಎಂಬರ್ಥದಲ್ಲಿ ಮೂಗು ಮುರಿದಿದ್ದದ್ದಂತೂ ಸತ್ಯ. ಆದರೆ ಅದು ಬಿಡುಗಡೆಯಾದ ನಂತರದಲ್ಲಿ ಎಲ್ಲ ಚಿತ್ರಣವೂ ಬದಲಾಗಿ ಹೋಗಿತ್ತು.

    ಇದರಲ್ಲಿನ ಕಥೆ, ನಿರೂಪಣಾ ಶೈಲಿಗೆ ಕನ್ನಡದ ಪ್ರೇಕ್ಷಕರೆಲ್ಲ ಫಿದಾ ಆಗಿದ್ದರು. ಆ ಕಾಲಕ್ಕೆ ಮಾಧ್ಯಮಗಳು ಈ ಪಾಟಿ ಬೆಳೆದಿಲ್ಲವಾದರೂ ಕೂಡ ತಾನೇ ತಾನಾಗಿ ‘ಓಂ’ ಪ್ರಭೆ ಕನ್ನಡದ ಗಡಿ ದಾಟಿ ಪರಭಾಷೆಗಳತ್ತಲೂ ಹಬ್ಬಿಕೊಂಡಿತ್ತು. ಯಾವ ಜನ ಕನ್ನಡ ಚಿತ್ರಗಳೆಂದರೆ ಅಸಡ್ಡೆ ತೋರುತ್ತಿದ್ದರೋ ಅದೇ ಜನ ‘ಓಂ’ ಅನ್ನು ನೋಡಬೇಕೆಂದು ಕಾತರರಾಗಿದ್ದರು. ನಂತರದಲ್ಲಿ ಅದರ ರಿಮೇಕ್ ಹಕ್ಕುಗಳಿಗಾಗಿ ಪರಭಾಷಾ ನಿರ್ಮಾಪಕರ ಕಡೆಯಿಂದ ಪೈಪೋಟಿಯೂ ಆರಂಭವಾಗಿತ್ತು.

    ‘ಓಂ’ 1997ರಲ್ಲಿ ಓಂಕಾರಂ ಎಂಬ ಹೆಸರಲ್ಲಿ ರಿಮೇಕ್ ಆಗಿತ್ತು. ಅದರಲ್ಲಿ ರಾಜಶೇಖರ್ ಮತ್ತು ಕನ್ನಡದ ಪ್ರೇಮಾ ನಾಯಕ ನಾಯಕಿಯರಾಗಿ ನಟಿಸಿದ್ದರು. ವಿಶೇಷವೆಂದರೆ, ತೆಲುಗಿನಲ್ಲಿಯೂ ಉಪೇಂದ್ರ ಅವರೇ ನಿರ್ದೇಶನ ಮಾಡಿದ್ದರು. ಅದು ಅಲ್ಲಿಯೂ ದಾಖಲೆಯ ಪ್ರದರ್ಶನವನ್ನೇ ಕಂಡಿತ್ತು. ಇದರಿಂದಾಗಿಯೇ ಬೇರೆ ಭಾಷೆಗಳಲ್ಲಿಯೂ ಕನ್ನಡ ಸಿನಿಮಾದತ್ತ ಬೆರಗಿನ ಮಾತುಗಳು ಕೇಳಿ ಬರಲು ಕಾರಣವಾಗಿತ್ತು. ಆ ನಂತರದಲ್ಲಿ ಓಂ ಅರ್ಜುನ್ ಪಂಡಿತ್ ಎಂಬ ಶೀರ್ಷಿಕೆಯಲ್ಲಿ ಹಿಂದಿಗೂ ರೀಮೇಕ್ ಆಗಿ ತೆರೆಗಂಡಿತ್ತು.

    ಆ ಬಳಿಕ ‘ಓಂ’ನ ಸ್ಫೂರ್ತಿಯಿಂದಲೇ ಪರಭಾಷೆಗಳಲ್ಲಿ ಒಂದಷ್ಟು ಸಿನಿಮಾಗಳು ತಯಾರುಗೊಂಡಿದ್ದವು. ಸೂಪರ್ ಹಿಟ್ ಚಿತ್ರಗಳೇ ಕನ್ನಡದ ‘ಓಂ’ನಿಂದ ಸ್ಫೂರ್ತಿಗೊಂಡಂತೆ ಅಣಿಗೊಳ್ಳಲಾರಂಭಿಸಿದವು. ಹಾಗೆ ಮೊದಲ ಸಲ ದೊಡ್ಡ ಮಟ್ಟದಲ್ಲಿ ಕನ್ನಡದ ಘನತೆಯನ್ನು ಪರಭಾಷಾ ಚಿತ್ರರಂಗಗಳಲ್ಲಿಯೂ ಹಬ್ಬಿಕೊಳ್ಳುವಂತೆ ಮಾಡಿದ ಹೆಗ್ಗಳಿಕೆ ನಿಸ್ಸಂದೇಹವಾಗಿ ‘ಓಂ’ಗೆ ಸಲ್ಲುತ್ತದೆ. ಹೀಗೆ ಕೆದಕುತ್ತಾ ಹೋದರೆ, ‘ಓಂ’ನ ದಾಖಲೆಗಳು ದಂಡಿ ದಂಡಿಯಾಗಿಯೇ ಕಾಣಸಿಗುತ್ತವೆ. ಇಂದಿಗೆ ಆ ಸಿನಿಮಾ ಬಿಡುಗಡೆಯಾಗಿ 25 ವರ್ಷ ತುಂಬುತ್ತಿರೋದರ ಹಿನ್ನೆಲೆಯಲ್ಲಿ ಚಿತ್ರರಂಗದಲ್ಲೊಂದು ಸಂಭ್ರಮ ಮಡುಗಟ್ಟಿದೆಯಲ್ಲಾ? ಅದು ಸಿನಿಮಾ ಸೃಷ್ಟಿಕರ್ತರ ಆಲೋಚನಾ ಕ್ರಮವನ್ನೇ ಬದಲಾಯಿಸಿಬಿಟ್ಟ `ಓಂ’ಕಾರದ ಅಸಲೀ ಖದರ್ ಅನ್ನಲಡ್ಡಿಯಿಲ್ಲ!.

  • ಓಂ ಶೀರ್ಷಿಕೆಯ ಹಿಂದಿದೆ ರಾಜಣ್ಣನ ಪ್ರೇರಣೆ!

    ಓಂ ಶೀರ್ಷಿಕೆಯ ಹಿಂದಿದೆ ರಾಜಣ್ಣನ ಪ್ರೇರಣೆ!

    ಯಾವುದೇ ಒಂದು ಯಶಸ್ವೀ ದೃಷ್ಯಕಾವ್ಯದ ಹಿಂದೆಯೂ ಮೈ ನವಿರೇಳಿಸುವಂತಹ ನೈಜ ಘಟನಾವಳಿಗಳಿರುತ್ತವೆ. ಸಕಾರಾತ್ಮಕವಾದ ಅಂಶಗಳೆಲ್ಲವೂ ಹಾಗೆ ಒಗ್ಗೂಡದೇ ಹೋದರೆ ಹೊಸತನದ ಸಿನಿಮಾಗಳು ಹುಟ್ಟು ಪಡೆಯೋದು ಕಷ್ಟಸಾಧ್ಯ. ಹಾಗಿದ್ದ ಮೇಲೆ ಕನ್ನಡ ಚಿತ್ರರಂಗದ ಪಾಲಿಗೆ ಹೊಸತನದ ಬಿರುಗಾಳಿ ಬೀಸುವಂತೆ ಮಾಡಿದ್ದ `ಓಂ’ ಚಿತ್ರದ ಹಿಂದೆ ಇಂತಹ ಕಥೆಗಳು ಇಲ್ಲದಿರಲು ಸಾಧ್ಯವೇ? ಈ ಸಿನಿಮಾಗೆ ಸಿಲ್ವರ್ ಜ್ಯುಬಿಲಿ ಸಂಭ್ರಮ ಎದುರುಗೊಂಡಿರೋ ಈ ಘಳಿಗೆಯಲ್ಲಿ ಹುಡುಕುತ್ತಾ ಹೋದರೆ ಅದರ ಕಥೆಯಂತದ್ದೇ ವಿಶಿಷ್ಟ ಕಥಾನಕಗಳು ಎದುರುಗೊಳ್ಳುತ್ತವೆ.

    ಇದು ರಿಯಲ್ ಸ್ಟಾರ್ ಉಪೇಂದ್ರ ಸೃಷ್ಟಿಸಿದ ದೃಶ್ಯವೈಭವ. ಕೌಟುಂಬಿಕ ಕಥಾನಕಗಳು, ಒಂದಷ್ಟು ಸಸ್ಪೆನ್ಸ್ ಥ್ರಿಲ್ಲರ್ ಪಥದತ್ತ ಹೊರಳಿಕೊಂಡಿದ್ದ ಕಾಲವದು. ಅಂತಹ ಸಮಯದಲ್ಲಿ ಹೊರಜಗತ್ತಿನಲ್ಲಿ ಗುಟುರು ಹಾಕುತ್ತಿದ್ದ ಭೂಗತದ ಕಥೆಯನ್ನು ಸಿನಿಮಾ ಚೌಕಟ್ಟಿಗೆ ಒಗ್ಗಿಸುವಂತಹ ಸಾಹಸವನ್ನು ಉಪ್ಪಿ ತಣ್ಣಗೆ ಮಾಡಿ ಮುಗಿಸಿದ್ದರು. ಇಂತಹ ಬದಲಾವಣೆಗಳಿವೆಯಲ್ಲಾ? ಅದಕ್ಕೆ ಮುಂದಾಗುವಾಗ ಎಲ್ಲದಕ್ಕೂ ಎದೆಗೊಡುವಂತಹ ಗಟ್ಟಿತನ ಮತ್ತು ಬಂದದ್ದನ್ನು ಬಂದಂತೆ ಸ್ವೀಕರಿಸುವ ಅಚಲ ಮನೋಧರ್ಮವೂ ಇರಬೇಕಾಗುತ್ತದೆ.

    ಯಾಕೆಂದರೆ, ಒಂದು ಬಗೆಯ ಸಿನಿಮಾಗಳಿಗೆ ಒಗ್ಗಿಕೊಂಡ ಪ್ರೇಕ್ಷಕರನ್ನು, ಅದರಲ್ಲಿಯೂ ಕೌಟುಂಬಿಕ ಪ್ರೇಕ್ಷಕರನ್ನು ರೌಡಿಸಂನಂತಹ ರಾ ಸಬ್ಜೆಕ್ಟಿನಲ್ಲಿಯೂ ತೃಪ್ತಗೊಳಿಸೋದೆಂದರೆ ಸಾಮಾನ್ಯದ ಸಂಗತಿಯೇನಲ್ಲ. ಅದನ್ನು ಸಲೀಸಾಗಿಯೇ ಉಪ್ಪಿ ಸಾಧ್ಯವಾಗಿಸಿದ್ದರು. ಈ ಎಲ್ಲದಕ್ಕಿಂತಲೂ ಮಿಗಿಲಾಗಿ ಸದರಿ ಸಿನಿಮಾದ ಸುತ್ತಾ ವರನಟ ಡಾ.ರಾಜ್‍ಕುಮಾರ್ ಅವರ ಇರುವಿಕೆ ಇರೋದು ನಿಜಕ್ಕೂ ದಾಖಲಾರ್ಹವಾದ ವಿಚಾರ. ಈ ಸಿನಿಮಾಗೆ ಶಿವರಾಜ್‍ಕುಮಾರ್ ನಾಯಕ ಅಂತ ನಿಕ್ಕಿಯಾಗಿ, ಅದನ್ನು ಖುದ್ದು ಪಾರ್ವತಮ್ಮ ರಾಜ್‍ಕುಮಾರ್ ಅವರೇ ನಿರ್ಮಾಣ ಮಾಡಲು ಒಪ್ಪಿಕೊಂಡ ನಂತರದಲ್ಲಿ ಎಂದಿನಂತೆ ರಾಜ್ ಅವರು ಎಲ್ಲದರ ಬಗ್ಗೆಯೂ ವಿಶೇಷವಾದ ಆಸ್ಥೆ ವಹಿಸಿ ಗಮನಿಸಲಾರಂಭಿಸಿದ್ದರು.

    ಈ ಕಥೆಯನ್ನು ಉಪ್ಪಿ ರಾಜ್ ಅವರ ಕೈಗಿಟ್ಟಾಗ ಅದರ ಪುಟವೊಂದರಲ್ಲಿ ಅವರು ಓಂ ಎಂದು ಬರೆದಿದ್ದರಂತೆ. ಆ ಘಳಿಗೆಯವರೆಗೂ ಉಪ್ಪಿ ಈ ಸಿನಿಮಾಗೆ `ಸತ್ಯ’ ಎಂಬ ಶೀರ್ಷಿಕೆಯನ್ನೇ ನಿಗಧಿ ಮಾಡಿಕೊಂಡಿದ್ದರು. ಯಾವಾಗ ರಾಜಣ್ಣ ಓಂ ಎಂದು ಬರೆದರೋ ಆ ಘಳಿಗೆಯಲ್ಲಿಯೇ ಉಪ್ಪಿ ಅದನ್ನೇ ಶೀರ್ಷಿಕೆಯಾಗಿಟ್ಟರೆ ಚೆನ್ನಾಗಿರುತ್ತದೆಂಬ ಗುಂಗೀಹುಳವನ್ನು ಮನಸಿಗೆ ಬಿಟ್ಟುಕೊಂಡಿದ್ದರಂತೆ. ಕಡೆಗೂ ಅದರಿಂದ ತಪ್ಪಿಸಿಕೊಳ್ಳಲಾಗದೆ ಅದನ್ನೇ ಶೀರ್ಷಿಕೆಯಾಗಿ ನಿಕ್ಕಿ ಮಾಡಿದ್ದರು. ಆ ನಂತರದಲ್ಲಿ ರಾಜ್‍ಕುಮಾರ್ ಅವರು ಈ ಚಿತ್ರಕ್ಕೆ ಎರಡು ಹಾಡುಗಳನ್ನು ಹಾಡಿದ್ದು, ಅವೆರಡೂ ಕೂಡ ಹಂಸಲೇಖಾರ ಮಾಂತ್ರಿಕ ಸಂಗೀತ ಸ್ಪರ್ಶದೊಂದಿಗೆ ಅಜರಾಮರವಾಗುಳಿದಿದ್ದೆಲ್ಲವೂ ಈಗ ಇತಿಹಾಸ.

  • ಡಿಂಪಲ್ ಕ್ವೀನ್ ಸಿನಿ ಪ್ರಯಣಕ್ಕೆ 7 ವರ್ಷ – ನಡೆದು ಬಂದ ಹಾದಿ ನೆನೆದ ರಚ್ಚು

    ಡಿಂಪಲ್ ಕ್ವೀನ್ ಸಿನಿ ಪ್ರಯಣಕ್ಕೆ 7 ವರ್ಷ – ನಡೆದು ಬಂದ ಹಾದಿ ನೆನೆದ ರಚ್ಚು

    ಬೆಂಗಳೂರು: ಡಿಂಪಲ್ ಕ್ವೀನ್ ರಚಿತಾ ರಾಮ್ ಸ್ಯಾಂಡಲ್‍ವುಡ್‍ಗೆ ಕಾಲಿಟ್ಟು 7 ವರ್ಷಗಳು ಕಳೆದಿದೆ. ಈ ಖುಷಿಯನ್ನು ತಾವು ಬೆಳ್ಳುತೆರೆಗೆ ಎಂಟ್ರಿ ಕೊಟ್ಟ ‘ಬುಲ್‍ಬುಲ್’ ಚಿತ್ರದ ಪೋಸ್ಟರ್ ಶೇರ್ ಮಾಡುವ ಮೂಲಕ ರಚ್ಚು ಹಂಚಿಕೊಂಡಿದ್ದಾರೆ.

    ಸ್ಯಾಂಡಲ್‍ವುಡ್‍ಗೆ ಕಾಲಿಟ್ಟು 7 ವರ್ಷ ತುಂಬಿದೆ. ನನ್ನನ್ನು ಸಿನಿಮಾ ರಂಗಕ್ಕೆ ಪರಿಚಯಿಸಿದ ತೂಗುದೀಪ ಪ್ರೊಡಕ್ಷನ್ಸ್ ಗೆ ಎಂದೂ ನಾನು ಚಿರಋಣಿ. ಸಿನಿ ಬದುಕಿನಲ್ಲಿ ನನಗೆ ಪ್ರೋತ್ಸಾಹಿ ಬೆಳೆಸಿದ ನನ್ನ ಹೆತ್ತವರು ಹಾಗೂ ಅಭಿಮಾನಿಗಳಿಗೆ ಧನ್ಯವಾದ ಎಂದು ರಚಿತಾ ಖುಷಿಯಿಂದ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

    https://www.instagram.com/p/CACnTP0AsAq/

    ಪೋಸ್ಟ್ ನಲ್ಲಿ ಏನಿದೆ?
    ನನ್ನ ಈ ಕಲಾ ಬದುಕಿಗೆ 7 ವರ್ಷಗಳು ತುಂಬಿದೆ ಅಂದ್ರೇ ನಂಬಕ್ಕೇ ಆಗ್ತಿಲ್ಲ. ನನ್ನನ್ನ ಸಿನಿಮಾ ರಂಗಕ್ಕೆ ಪರಿಚಯ ಮಾಡಿಸಿದ ತೂಗುದೀಪ ಪ್ರೊಡಕ್ಷನ್ಸ್ ಗೆ ಸದಾ ಚಿರಋಣಿಯಾಗಿರ್ತೀನಿ. ‘ಬುಲ್ ಬುಲ್’ನಿಂದ ಬೆಳ್ಳಿತೆರೆಗೆ ಇಟ್ಟ ಹೆಜ್ಜೆ ಇಂದಿಗೂ ಮಾಸಿಲ್ಲ ಇದಕ್ಕೆ ಕಾರಣ ನನ್ನ ತಂದೆ ತಾಯಿಯ ನಂಬಿಕೆ, ದೇವರ ಅನುಗ್ರಹ ಹಾಗೂ ನನ್ನ ಪ್ರೀತಿಯ ಅಭಿಮಾನಿಗಳ ಆಶೀರ್ವಾದ. ಈ ಪಯಣದಲ್ಲಿ ಕಲಿತ ಪಾಠಗಳು, ಅರಿತ ಮನಸುಗಳು, ಪ್ರತಿಯೊಂದು ಸಿನಿಮಾದ ನೆನಪುಗಳು ನೆನೆಸಿಕೊಂಡ್ರೆ ಕಣ್ತುಂಬಿ ಬರುತ್ತೆ. ನನ್ನ ಸಿನಿ ಬದುಕಿನಲ್ಲಿ ನನಗೆ ಮಾರ್ಗದರ್ಶಿಗಳಾಗಿ ನಿಂತ ಪ್ರತಿಯೊಬ್ಬರಿಗೂ ತುಂಬು ಹೃದಯದ ಕೃತಜ್ಞತೆಗಳನ್ನ ಸಲ್ಲಿಸ್ತೀನಿ. ನಿಮ್ಮೆಲ್ಲರ ಪ್ರೀತಿ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ. ನಿಮ್ಮ ರಚಿತರಾಮ್ ಎಂದು ಬರೆದು ಬುಲ್‍ಬುಲ್ ಚಿತ್ರದ ಪೋಸ್ಟರ್ ಶೇರ್ ಮಾಡಿದ್ದಾರೆ.

    ಬುಲ್‍ಬುಲ್ ಚಿತ್ರದ ಮೂಲಕ ಸಿನಿ ಪಯಣ ಆರಂಭಿಸಿದ ರಚಿತಾ ರಾಮ್, ಒಂದರ ಮೇಲೊಂದು ಹಿಟ್ ಸಿನಿಮಾಗಳನ್ನು ಕೊಡುತ್ತಾ ಸ್ಯಾಂಡಲ್‍ವುಡ್‍ನ ಬಹುಬೇಡಿಕೆ ನಟಿಯರಲ್ಲಿ ಒಬ್ಬರಾಗಿದ್ದಾರೆ. ಕಿರುತೆರೆಯಿಂದ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಗುಳಿಕೆನ್ನೆ ಚಲುವೆ ಈಗ ಸ್ಯಾಂಡಲ್‍ವುಡ್‍ನ ಡಿಂಪಲ್ ಕ್ವೀನ್ ಆಗಿ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಕಿಚ್ಚ ಸುದೀಪ್, ರಿಯಲ್ ಸ್ಟಾರ್ ಉಪೇಂದ್ರ, ಧ್ರುವ ಸರ್ಜಾ ಸೇರಿದಂತೆ ಅನೇಕ ಹಿಟ್ ಹೋರೋಗಳ ಜೊತೆ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. ತಮ್ಮ ಅದ್ಭುತ ಅಭಿನಯ, ಕ್ಯೂಟ್ ಲುಕ್ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ.

    ಬುಲ್‍ಬುಲ್, ಅಂಬರೀಶ, ರನ್ನ, ಚಕ್ರವ್ಯೂಹ, ಭರ್ಜರಿ, ಅಯೋಗ್ಯ, ಐ ಲವ್ ಯು ಹೀಗೆ ಸುಮಾರು 15 ಸಿನಿಮಾಗಳಲ್ಲಿ ನಾಯಕಿಯಾದ ರಚಿತಾ ಅಭಿನಯಿಸಿದ್ದಾರೆ. ರಚಿತಾ ರಾಮ್ ಈವರೆಗೆ ಎರಡು ಬಾರಿ ಸೈಮಾ ಅವಾರ್ಡ್, ಒಂದು ಬಾರಿ ಫಿಲಂ ಫೇರ್ ಅವಾರ್ಡ್ ಲಭಿಸಿದೆ. ಸದ್ಯ ‘ಏಕ್ ಲವ್ ಯಾ’ ಸಿನಿಮಾದಲ್ಲಿ ಬ್ಯೂಸಿಯಾಗಿರುವ ನಟಿ ಕೈಯಲ್ಲಿ ಸಾಲು ಸಾಲು ಸಿನಿಮಾಗಳ ಅವಕಾಶಗಳು ಇವೆ.

  • ಬಬ್ರುವಾಹನ ಸಿನಿಮಾ ಖ್ಯಾತಿಯ ಹಿರಿಯ ಛಾಯಾಗ್ರಾಹಕ ಇನ್ನಿಲ್ಲ

    ಬಬ್ರುವಾಹನ ಸಿನಿಮಾ ಖ್ಯಾತಿಯ ಹಿರಿಯ ಛಾಯಾಗ್ರಾಹಕ ಇನ್ನಿಲ್ಲ

    ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಛಾಯಾಗ್ರಾಹಕರಾದ ಎಸ್.ವಿ ಶ್ರೀಕಾಂತ್(87) ಅವರು ಗುರುವಾರ ಸಂಜೆ ಬೆಂಗಳೂರಿನ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ.

    “ಟ್ರಿಕ್ ಫೋಟೋಗ್ರಫಿ ಎಕ್ಸ್‌ಪರ್ಟ್” ಎಂದೇ ಹೆಸರಾಗಿದ್ದ ಎಸ್.ವಿ ಶ್ರೀಕಾಂತ್ ಅವರು ದ್ವಿಪಾತ್ರ ಪ್ರಯೋಗಗಳನ್ನು ಮಾಡಿ ಸೈ ಎನಿಸಿಕೊಂಡಿದ್ದರು. ‘ಗೆಜ್ಜೆ ಪೂಜೆ’, ‘ಉಪಾಸನೆ’ ಹಾಗೂ ‘ಮಾರ್ಗದರ್ಶಿ’ ಚಿತ್ರಗಳ ಛಾಯಾಗ್ರಾಹಣಕ್ಕೆ ಶ್ರೀಕಾಂತ್ ಅವರಿಗೆ ರಾಜ್ಯ ಪ್ರಶಸ್ತಿ ಸಹ ಒಲಿದಿದೆ.

    1960ರಿಂದ 40 ವರ್ಷಗಳ ಕಾಲ 60 ಕ್ಕೂ ಹೆಚ್ಚು ಚಿತ್ರಗಳಿಗೆ ಶ್ರೀಕಾಂತ್ ಅವರು ಕೆಲಸ ಮಾಡಿದ್ದಾರೆ. ವರನಟ ಡಾ. ರಾಜಕುಮಾರ್ ಅವರ ಅನೇಕ ಚಿತ್ರಗಳಿಗೆ ಶ್ರೀಕಾಂತ್ ಅವರು ಛಾಯಾಗ್ರಾಹಣ ಮಾಡಿದ್ದಾರೆ. ಅದರಲ್ಲಿ ‘ಬಬ್ರುವಾಹನ’ ಸಿನಿಮಾ ಸದಾ ಮನಸಿನಲ್ಲಿ ಉಳಿಯುಯುವುದು. ಯಾಕೆಂದರೆ ಆಗಿನ ಕಾಲದಲ್ಲಿಯೇ ಟ್ರಿಕ್ ಶಾಟ್ಸ್ ಬಳಸಿ ಶ್ರೀಕಾಂತ್ ಅವರು ಛಾಯಾಗ್ರಾಹಣ ಮಾಡಿದ್ದರು.

    ‘ಸಾಕ್ಷಾತ್ಕಾರ’, ‘ಗೆಜ್ಜೆಪೂಜೆ’, ‘ಬಬ್ರುವಾಹನ’, ‘ಮಾರ್ಗದರ್ಶಿ’, ‘ಉಪಾಸನೆ’, ‘ಜೀವನ ಚೈತ್ರ’, ‘ತ್ರಿಮೂರ್ತಿ’ ಮುಂತಾದವರು ಅವರ ಪ್ರಮುಖ ಸಿನಿಮಾಗಳಿಗೆ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ‘ಸ್ವರ್ಣ ಗೌರಿ’, ‘ಪ್ರೇಮಮಯಿ’, ‘ಮನಸಿದ್ದರೆ ಮಾರ್ಗ’, ‘ಬಹಾದ್ದೂರ್ ಗಂಡು’, ‘ನಾ ನಿನ್ನ ಬಿಡಲಾರೆ’, ‘ಹಣ್ಣಲೇ ಚಿಗುರಿದಾಗ’, ‘ಅದೇ ಕಣ್ಣು’, ‘ಶ್ರಾವಣ ಬಂತು’, ‘ರಾಣಿ ಮಹಾರಾಣಿ’, ‘ವಿಜಯ್ ವಿಕ್ರಮ್’, ‘ಎಡಕಲ್ಲು ಗುಡ್ಡದ ಮೇಲೆ’ ಹಾಗೂ ಇನ್ನಿತರ ಸಿನಿಮಾಗಳು ಶ್ರೀಕಾಂತ್ ಅವರ ಛಾಯಾಗ್ರಾಹಣದಲ್ಲಿ ಮೂಡಿಬಂದಿದೆ.

  • ಭಿನ್ನ-ವಿಭಿನ್ನತೆಯಿಂದ ಕೂಡಿದೆ ‘ತೋತಾಪುರಿ’

    ಭಿನ್ನ-ವಿಭಿನ್ನತೆಯಿಂದ ಕೂಡಿದೆ ‘ತೋತಾಪುರಿ’

    ಸೀಕ್ವೆನ್ಸ್ ಅನ್ನೋದು ಹಾಲಿವುಡ್, ಬಾಲಿವುಡ್ ಗಳಲ್ಲಿ ಹೆಚ್ಚಾಗಿತ್ತು. ಆದ್ರೆ ಇತ್ತೀಚೆಗೆ ಕನ್ನಡದಲ್ಲೂ ಸೀಕ್ವೆನ್ಸ್ ಹಾವಳಿ ಹೆಚ್ಚಾಗಿದೆ. ಅದೆಷ್ಟೋ ಸಿನಿಮಾಗಳಲ್ಲಿ ಕಥೆಯ ಗಡಸುತನ ಒಂದೇ ಭಾಗದಲ್ಲಿ ತೋರಿಸಲು ಆಗಲ್ಲ. ಹಾಗೇ ಒಂದೇ ಸಿನಿಮಾದಲ್ಲಿ ಇರುವಷ್ಟು ಮ್ಯಾಟರ್ ನ್ನು ತುರಿಕಿದರೆ ಪ್ರೇಕ್ಷಕನ ತಲೆಗೆ ಹೋಗಲ್ಲ. ಹೀಗಾಗಿ ನೋಡುಗರಿಗೂ ಮನರಂಜನೆಯಾಗಿ ನೀಡುವ ಮೆಸೇಜ್ ನ್ನು ಮನಸ್ಸಿಗೆ ಮುಟ್ಟುವ ಹಾಗೇ ಸಿನಿಮಾ ಕೊಡಬೇಕೆಂದರೆ ಒಂದಷ್ಟು ಫಿಲ್ಟರ್ ಇರಬೇಕಾಗುತ್ತದೆ. ಕಥೆಯ ಆಳವನ್ನು ಜನರಿಗೆ ಮುಟ್ಟಿಸಲೇಬೇಕಾದಂತ ಸಂದರ್ಭಗಳಲ್ಲಿ ಸೀಕ್ವೇನ್ಸ್ ದಾರಿ ಹಿಡಿಯಬೇಕಾಗುತ್ತದೆ. ಅದೇ ದಾರಿಯಲ್ಲಿ ಸಾಗುತ್ತಿರುವುದೇ ‘ತೋತಾಪುರಿ’ ಸಿನಿಮಾ.

    ಹೌದು ನವರಸ ನಾಯಕ ಜಗ್ಗೇಶ್ ಅಭಿನಯದ ‘ತೋತಾಪುರಿ’ ಬಗ್ಗೆ ಎಲ್ಲರಿಗೂ ಗೊತ್ತೆ ಇದೆ. ಈಗಾಗಲೇ ಸಿನಿಮಾದ ಶೂಟಿಂಗ್ ಕೂಡ ಕಂಪ್ಲೀಟ್ ಮಾಡಿಕೊಂಡಿದೆ ಚಿತ್ರತಂಡ. ಕಥೆ ತುಂಬಾ ಸ್ಟ್ರಾಂಗ್ ಆಗಿದ್ದು, ಭಾಗ 1 ಮತ್ತು 2 ರಲ್ಲಿ ಬರ್ತಾ ಇದೆ. ಸೀಕ್ವೆನ್ಸ್ ಸಿನಿಮಾಗಳು ಹೊಸತೇನಲ್ಲ. ಆದ್ರೆ ಸದ್ಯ ಬಂದು ಹೋಗಿರುವ ಬರುತ್ತಿರುವ ಸೀಕ್ವೆನ್ಸ್ ಸಿನಿಮಾಗಳಿಗೂ ‘ತೋತಾಪುರಿ’ ಗೂ ಕೊಂಚ ಭಿನ್ನ ಸಂಬಂಧವಿದೆ.

    ಹೌದು, ಕತೆ ಚೆನ್ನಾಗಿದ್ರೆ ಅಥವಾ ಪ್ರೇಕ್ಷಕರಿಂದ ರೆಸ್ಪಾನ್ಸ್ ಚೆನ್ನಾಗಿ ಬಂದ್ರೆ ಆ ಸಿನಿಮಾದೊಳಗಿನ ಪಾತ್ರಗಳ ಎಳೆಯನ್ನು ಹಿಡಿದು ಸಿನಿಮಾವನ್ನು ಮುಂದುವರೆಸಲಾಗುತ್ತೆ. ಸಿನಿಮಾ ಹಿಟ್ ಆಗುವವರೆಗೂ ಅದರ ಸೀಕ್ವೇನ್ಸ್ ಬರಲಿದೆ ಎಂಬುದು ಪ್ರೇಕ್ಷಕನಿಗೆ ಗೊತ್ತಿರಲ್ಲ. ವಿಜಯ್ ಪ್ರಸಾದ್ ಪ್ರೇಕ್ಷಕನ ನರನಾಡಿಗಳನ್ನು ಅರಿತಿರುವವರಾಗಿರುವುದರಿಂದ, ಇವತ್ತಿನ ಪ್ರೇಕ್ಷಕ ಏನನ್ನ ಬಯಸುತ್ತಾನೆಂಬುದು ಅವರಿಗೆ ಗೊತ್ತು. ಹೀಗಾಗಿ ‘ತೋತಾಪುರಿ’ ಯನ್ನು ಎರಡು ಭಾಗಗಳಾಗಿ ಸೀಳಿದ್ದಾರೆ. ಇಡೀ ಭಾರತೀಯ ಚಿತ್ರರಂಗದಲ್ಲೇ ಎರಡು ಭಾಗಗಳನ್ನು ಒಮ್ಮೆಗೆ ಸಿದ್ಧಪಡಿಸಿದ ಉದಾಹರಣೆಯೆ ಇಲ್ಲ. ಅಂತದ್ದೊಂದು ದಾಖಲೆಯನ್ನು ಈಗಾಗಲೇ ‘ತೋತಾಪುರಿ’ ಸಿನಿಮಾ ಮಾಡಿದೆ. ಸದ್ಯ ಎರಡು ಭಾಗದ ಚಿತ್ರೀಕರಣವನ್ನು ಪೂರ್ಣಗೊಳಿಸಿ, ಉಳಿದ ಕೆಲಸಕ್ಕೆ ಕೈ ಹಾಕಿದೆ. ಒಟ್ಟಾರೆ ಸದ್ಯ ಪ್ರಪಂಚದಲ್ಲಿರುವ ವೈರಸ್ ಎಂಬ ರೋಗ ಮಾಯವಾದ ನಂತರ, ಉಪ್ಪು, ಖಾರ ಹಾಕಿ ರೆಡಿ ಮಾಡುತ್ತಿರುವ ‘ತೋತಾಪುರಿ’ಯನ್ನು ಪ್ರೇಕ್ಷಕನಿಗೆ ಸವಿಯಲು ನೀಡಲಿದ್ದಾರೆ.

    ನವರಸ ನಾಯಕ ಜಗ್ಗೇಶ್, ಸುಮನ್ ರಂಗನಾಥ್, ವೀಣಾ, ಅದಿತಿ ಪ್ರಭುದೇವ, ಡಾಲಿ ಧನಂಜಯ್ ಸೇರಿದಂತೆ ಇನ್ನು ಅನೇಕರು ತಾರಾಬಳಗದಲ್ಲಿದ್ದಾರೆ.

  • ಹಣ ಬೇಡ, ‘ದಿಯಾ’ ಇಷ್ಟವಾಗಿದ್ದಕ್ಕೆ ಧನ್ಯವಾದ ಎಂದ ನಿರ್ಮಾಪಕ ಕೃಷ್ಣ ಚೈತನ್ಯ

    ಹಣ ಬೇಡ, ‘ದಿಯಾ’ ಇಷ್ಟವಾಗಿದ್ದಕ್ಕೆ ಧನ್ಯವಾದ ಎಂದ ನಿರ್ಮಾಪಕ ಕೃಷ್ಣ ಚೈತನ್ಯ

    ದಿಯಾ… ಹೆಸರು ಹೇಳಿದಾಕ್ಷಣ ಕಿವಿ, ಮನಸ್ಸು ಎರಡು ಅಲರ್ಟ್ ಆಗಿಬಿಡ್ತಿದೆ. ಸದ್ಯ ಜಗತ್ತಿನಲ್ಲಿ ಕೊರೊನಾ ವೈರಸ್ ದಾಳಿ ಭಯ ಹುಟ್ಟಿಸಿದೆ. ಆದ್ರೆ ಸೋಶಿಯಲ್ ಮೀಡಿಯಾದಲ್ಲಿ ಅದಕ್ಕಿಂತ ‘ದಿಯಾ’ ಕ್ರೇಜ್ ಹೆಚ್ಚಾಗಿದೆ. ಯಾರ ಸೋಶಿಯಲ್ ಮೀಡಿಯಾ ಪ್ರೊಫೈಲ್ ನಲ್ಲಿ ನೋಡಿದ್ರು ‘ದಿಯಾ’ ಸಿನಿಮಾ ಬಗ್ಗೆ ಸ್ಟೇಟ್ ಮೆಂಟ್ ಇದೆ. ವಾಟ್ಸಾಪ್ ಸ್ಟೇಟಸ್ ನಲ್ಲಿ ‘ದಿಯಾ’ ಡೈಲಾಗ್ ಗಳೇ ತುಂಬಿವೆ. ಕೊರೊನಾ ವೈರಸ್ ನಿಂದ ಚಿತ್ರಪ್ರದರ್ಶನ ರದ್ದಾಗಿ, ಲಾಸ್ ಆಗ್ತಾ ಇದ್ರು, ‘ದಿಯಾ’ನಾ ಕೊರೊನಾಗಿಂತ ಸ್ಟ್ರಾಂಗ್ ಅಂತಿದ್ದಾರೆ. ಈ ಸಿನಿಮಾ ಜನರ ಮನಸ್ಸನ್ನ ಅಷ್ಟು ಕದಡಿದೆ.

    ‘ದಿಯಾ’ ರಿಲೀಸ್ ಆದ ಒಂದೇ ವಾರದಲ್ಲಿ ಥಿಯೇಟರ್ ಸಮಸ್ಯೆ ಎದುರಾಯ್ತು. ಒಂದು ಸಿನಿಮಾ ಚೆನ್ನಾಗಿದ್ರೆ ಅದಕ್ಕೆ ಬೇರೆ ಯಾವ ರೀತಿಯ ಪ್ರಮೋಷನ್ ಅಗತ್ಯ ಇರಲ್ಲ. ಕೇವಲ ಜನರ ಮೌತ್ ಟಾಕ್, ಸೋಶಿಯಲ್ ಮೀಡಿಯಾ ರೆಸ್ಪಾನ್ಸ್ ಸಾಕಾಗುತ್ತೆ. ‘ದಿಯಾ’ಗೆ ಉಪಯೋಗ ಆಗ್ತಾ ಇದ್ದದ್ದು ಅದೇ. ಆದ್ರೆ ‘ದಿಯಾ’ ರಿಲೀಸ್ ಆದ ವಾರದಲ್ಲೆ 8-9 ಸಿನಿಮಾಗಳು ಒಟ್ಟಿಗೆ ರಿಲೀಸ್ ಆದ್ವು. ಅಷ್ಟು ಸಿನಿಮಾಗಳ ಪೈಕಿ ‘ದಿಯಾ’ ನೋಡಿ ರೀಚ್ ಆಗುವುದರೊಳಗೆ ಕೊರೊನಾ ಸಮಸ್ಯೆ ಎದುರಾಯ್ತು. ಕಳೆದ ವಾರದಿಂದ ಡಿಜಿಟಲ್ ನಲ್ಲಿ ಸಿಕ್ಕ ‘ದಿಯಾ’ ನೋಡಿ ಜನ ಹುಚ್ಚೆದ್ದು ಕುಣಿತಾ ಇದ್ದಾರೆ. ಇಂತ ಸಿನಿಮಾವನ್ನ ಥಿಯೇಟರ್ ನಲ್ಲಿ ಮಿಸ್ ಮಾಡಿಕೊಂಡ್ವಾ ಅಂತ ಕೊರಗ್ತಾ ಇದ್ದಾರೆ. ಡಿಜಿಟಲ್ ನಲ್ಲಿ ನೋಡಿದ್ರು ಸಹ ಟಿಕೆಟ್ ಹಣವನ್ನ ಕೊಡ್ತೇವೆ ಅಕೌಂಟ್ ಡಿಟೈಲ್ ಶೇರ್ ಮಾಡ್ಕೊಳಿ ಅಂತ ಸೋಶಿಯಲ್ ಮೀಡಿಯಾದಲ್ಲಿ ನಿರ್ದೇಶಕ ಮತ್ತು ನಿರ್ಮಾಪಕರಿಗೆ ಟ್ಯಾಗ್ ಮಾಡ್ತಾ ಇದ್ದಾರೆ. ಅಷ್ಟು ಕ್ರೇಜ್ ಹುಟ್ಟು ಹಾಕಿದೆ ‘ದಿಯಾ’.

    ಇನ್ನು ಪ್ರೇಕ್ಷಕರು ಹಣ ನೀಡುವ ವಿಚಾರದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದು ಗೊಂದಲಗಳು ಸೃಷ್ಠಿಯಾಗಿವೆ. ‘ದಿಯಾ’ ಸಿನಿಮಾ ಟ್ಯಾಗ್ ಮಾಡಿ ಗೂಗಲ್ ಪೇ ನೀಡಿರುವಂತ ಘಟನೆಗಳು ನಡೆದಿವೆ. ಇದಕ್ಕೆ ‘ದಿಯಾ’ ನಿರ್ಮಾಪಕ ಕೃಷ್ಣ ಚೈತನ್ಯ ಸ್ಪಷ್ಟನೆ ನೀಡಿದ್ದಾರೆ. ‘ಸಿನಿಮಾವನ್ನು ಥಿಯೇಟರ್ ನಲ್ಲಿ ನೋಡಲು ಸಾಧ್ಯವಾಗಿಲ್ಲ ಎಂಬ ಕಾರಣಕ್ಕೆ ನಿಮ್ಮಲ್ಲಿ ಹಲವರು ಟಿಕೆಟ್ ದರವನ್ನು ಪಾವತಿಸಲು ಮುಂದಾಗಿದ್ದೀರಾ. ನಿಮ್ಮ ಪ್ರೀತಿಗೆ ಧನ್ಯವಾದಗಳು. ನಾವೂ ಗೂಗಲ್ ಪೇ ಅಥವಾ ಯಾವುದೇ ಆನ್ ಲೈನ್ ನಲ್ಲಿ ಹಣ ಸ್ವೀಕರಿಸುತ್ತಿಲ್ಲ. ಅಧಿಕೃತ ಖಾತೆಗಳಿಂದ ಈ ಬಗ್ಗೆ ಸ್ಟೇಟ್ ಮೆಂಟ್ ಬಾರದೆ ಇದ್ದಲ್ಲಿ, ಅಂತಹ ವದಂತಿಗಳಿಗೆ ಕಿವಿಗೊಡಬೇಡಿ. ಹಣ ಹಾಕಿ ಬೇಸರ ಮಾಡಿಕೊಳ್ಳಬೇಡಿ. ಇದನ್ನು ಓದಿ, ಶೇರ್ ಮಾಡಿ’ ಅಂತ ಕೃಷ್ಣ ಚೈತನ್ಯ ಅವರು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ನಲ್ಲಿ ಬರೆದುಕೊಂಡಿದ್ದಾರೆ.

    ಒಂದು ಸಿನಿಮಾ ಹಣಗಳಿಸಿದರೆ ಅದು ನಿರ್ಮಾಪಕನಿಗೆ ತೃಪ್ತಿ ಎನ್ನಿಸುತ್ತೆ ನಿಜ. ಆದ್ರೆ ‘ದಿಯಾ’ ಸಿನಿಮಾದಲ್ಲಿ ಹಾಕಿದ ಬಂಡವಾಳ ಕೈಸೇರದೆ ಹೋದರು ಬಹಳಷ್ಟು ಖುಷಿ ಇದೆ ಅಂತಾರೆ ನಿರ್ಮಾಪಕರು. ‘ದಿಯಾ’ ಬಗೆಗಿನ ಜನರ ಇವತ್ತಿನ ಮಾತುಗಳು ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಮತ್ತೊಂದು ಸಿನಿಮಾ ಮಾಡಲು ಸ್ಪೂರ್ತಿಯಾಗಿದೆ. ಇಂತ ಅದ್ಭುತ ಸಿನಿಮಾಗಳು ಅವರ ಬೊಕ್ಕಸದಿಂದ ಇನ್ನಷ್ಟು ಬರಲಿ ಎಂಬುದು ಪ್ರೇಕ್ಷಕರ ಹಾರೈಕೆಯಾಗಿದೆ.

  • ‘ಆನೆಬಲ’ಕ್ಕೆ ಸಿಕ್ತು ಕಾಲೇಜು ವಿದ್ಯಾರ್ಥಿಗಳ ಬಲ!

    ‘ಆನೆಬಲ’ಕ್ಕೆ ಸಿಕ್ತು ಕಾಲೇಜು ವಿದ್ಯಾರ್ಥಿಗಳ ಬಲ!

    ಮಂಡ್ಯ, ಅಲ್ಲಿನ ಪರಿಸರ, ಅದರ ಸೌಂದರ್ಯ, ಮಾತು, ಜನ, ಬದುಕಿನ ಶೈಲಿ ಎಲ್ಲವೂ ‘ಆನೆಬಲ’ ಸಿನಿಮಾದಲ್ಲಿ ಕಣ್ಣಿಗೆ ಕಟ್ಟುವಂತೆ ರೂಪುಗೊಂಡಿದೆ. ರಾಗಿಮುದ್ದೆ ಸ್ಪರ್ಧೆ, ಸ್ಪರ್ಧಿಗಳು, ಅದರ ಸುತ್ತ ಒಂದಷ್ಟು ಕ್ಯಾರೆಕ್ಟರುಗಳು, ಇವುಗಳ ಜೊತೆಗೆ ತೆರೆದುಕೊಳ್ಳುವ ‘ಆನೆಬಲ’ ಸಿನಿಮಾ ಈಗಾಗಲೇ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾದಲ್ಲಿರುವ ಗ್ರಾಮೀಣ ಸೊಗಡಿನ ಕಥೆಗೆ ಜನ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲ ವಿದ್ಯಾರ್ಥಿಗಳು ಕೂಡ ಸಿನಿಮಾವನ್ನು ನೋಡಿ ಕೊಂಡಾಡಿದ್ದಾರೆ.

    ಸಿನಿಮಾಗಳಿಗೆ ಪ್ರಮೋಷನ್ ತುಂಬಾ ಮುಖ್ಯವಾಗುತ್ತೆ. ಒಂದು ಸಿನಿಮಾ ರಿಲೀಸ್ ಆಗುವುದಕ್ಕೂ ಮುನ್ನ ಅದರ ಜವಾಬ್ದಾರಿ ಚಿತ್ರತಂಡದ ಮೇಲಿರುತ್ತೆ. ನಂತರ ಆ ಸಿನಿಮಾ ರಿಲೀಸ್ ಆಗಿ, ಕಥೆ ಪ್ರೇಕ್ಷಕರಿಗೆ ಇಷ್ಟವಾದ್ರೆ ಪ್ರಮೋಷನ್ ಅಗತ್ಯವೇ ಇರುವುದಿಲ್ಲ. ಯಾಕಂದ್ರೆ ನಮ್ಮ ಕನ್ನಡಿಗರು ಯಾವತ್ತಿಗೂ ಉತ್ತಮವಾದ ಸಿನಿಮಾವನ್ನ ಕೈಬಿಟ್ಟ ಉದಾಹರಣೆಯೇ ಇಲ್ಲ. ಒಬ್ಬ ನೋಡಿದ ಸಿನಿಮಾ ಕಥೆಯನ್ನ ಹತ್ತು ಜನಕ್ಕೆ ಹಂಚಿ ಅವರು ಕೂಡ ಆ ಸಿನಿಮಾವನ್ನು ನೋಡುವಂತೆ ಮಾಡುವುದು ನಮ್ಮ ಕನ್ನಡಿಗರ ಗುಣ. ಇದೀಗ ಅಂತದ್ದೇ ಒಂದು ಸನ್ನಿವೇಶ ಮುಂದುವರೆದಿದೆ. ಅದು ‘ಆನೆಬಲ’ ಸಿನಿಮಾಗೆ. ಹೌದು ವಿದ್ಯಾರ್ಥಿಗಳು ಈ ಸಿನಿಮಾವನ್ನು ನೋಡಿ, ಪ್ರಚಾರ ಕೂಡ ಆರಂಭಿಸಿದ್ದಾರೆ. ಎಲ್ಲಿ ಅಂತೀರಾ..? ಮುಂದೆ ಓದಿ.

    ನಾಗಮಂಗಲ ಸೇರಿದಂತೆ ಅನೇಕ ಕಾಲೇಜುಗಳಲ್ಲಿ ಈ ರೀತಿ ವಿದ್ಯಾರ್ಥಿಗಳ ಸಪೋರ್ಟ್ ಸಿನಿಮಾಗೆ ಸಿಕ್ಕಿದೆ. ತಾವೂ ನೋಡಿದ್ದಲ್ಲದೇ, ಸ್ನೇಹಿತರಿಗೂ ಈ ಸಿನಿಮಾ ನೋಡಿ, ಇಲ್ಲಂದ್ರೆ ಒಂದೊಳ್ಳೆ ಕನ್ನಡ ಸಿನಿಮಾವನ್ನು ಮಿಸ್ ಮಾಡಿಕೊಳ್ತೀರಾ ಅಂತ ಸಲಹೆ ನೀಡುತ್ತಿದ್ದಾರೆ. ಈ ಸಿನೆಮಾದಲ್ಲಿರುವ ಹಾಡು ಮತ್ತು ಕಾಮಿಡಿಗೆ ಫಿದಾ ಆಗಿರುವ ವಿದ್ಯಾರ್ಥಿಗಳು ವಾಲಂಟರಿಯಾಗಿ ಸಿನೆಮಾ ಪ್ರಮೋಷನ್ ಮಾಡುತ್ತಿದ್ದಾರೆ. ಇದರಿಂದ ಚಿತ್ರತಂಡಕ್ಕೆ ಮತ್ತಷ್ಟು ಹೊಸ ಹುರುಪು ಸಿಕ್ಕಂತಾಗಿದೆ.

    ಪದವಿ ತರಗತಿಯ ಪರೀಕ್ಷೆಗಳು ಇನ್ನೂ ಎರಡು ತಿಂಗಳಿರುವ ಕಾರಣ ವಿದ್ಯಾರ್ಥಿಗಳು ‘ಆನೆಬಲ’ ಸಿನೆಮಾ ನೋಡಿ ಮೆಚ್ಚಿಕೊಂಡಿದ್ದಾರೆ. ತಮ್ಮ ಸಹಪಾಠಿಗಳಿಗೆ, ಸಿಕ್ಕವರಿಗೆಲ್ಲ ‘ಆನೆಬಲ’ ಸಿನಿಮಾ ನೋಡಲು ಹೇಳುತ್ತಿದ್ದಾರೆ. ವಿದ್ಯಾರ್ಥಿಗಳ ಈ ಪ್ರೀತಿಗೆ ಚಿತ್ರತಂಡ ಕೃತಜ್ಞತೆ ಸಲ್ಲಿಸಿದ್ದು, ಅವರ ಪ್ರೀತಿ ಸಹಕಾರಕ್ಕೆ ಅಪಾರ ಸಂತಸ ವ್ಯಕ್ತಪಡಿಸಿದೆ.

  • ರೆಗ್ಯೂಲರ್ ಮೂವಿ ಅಲ್ಲ ‘ಆನೆಬಲ’

    ರೆಗ್ಯೂಲರ್ ಮೂವಿ ಅಲ್ಲ ‘ಆನೆಬಲ’

    ಸಿದ್ಧ ಸೂತ್ರವ ಬಿಟ್ಟು ಮಾಡಿದ ಆನೆಬಲ ಈ ವರ್ಷಗಳನ್ನ ಬಂದಿರುವ ಕಲ್ಟ್ ಚಿತ್ರ. ಯಾವುದೇ ಸಿನಿಮಾ ಆಗ್ಲಿ ಕಂಪ್ಲೀಟ್ ಸಿನಿಮಾ ಮುಗಿಯುವವರೆಗೂ ಎಲ್ಲಿಯೂ ಬೋರ್ ಆಗದಂತೆ ನೋಡಿಕೊಂಡರೆ ಪ್ರೇಕ್ಷಕನಿಗೆ ಬಹಳ ಹತ್ತಿರವಾಗಿಬಿಡುತ್ತೆ. ಅದೇ ಸಾಲಿಗೆ ಸೇರಿರುವಂತ ಸಿನಿಮಾ ಅಂದ್ರೆ ಅದು ‘ಆನೆ ಬಲ’. ಸಿನಿಮಾ ಕಂಪ್ಲಿಟ್ ಆಗುವವರೆಗೂ ಬಹಳ ಕ್ಯೂರಿಯಾಸಿಟಿ ಮತ್ತು ಇಂಟ್ರೆಸ್ಟ್ ಕ್ರಿಯೇಟ್ ಮಾಡೋ ಶಕ್ತಿಯನ್ನ ಆನೆಬಲ ಸಿನಿಮಾ ಹೊಂದಿದೆ.

    ಇದೊಂದು ವಿಭಿನ್ನ ಕಥೆಯನ್ನ ಹೊಂದಿರುವ ಸಿನಿಮಾ. ಊರಿನ ಬಗ್ಗೆ ಅಪಾರ ಗೌರವ ಹೊಂದಿರುವ ಯುವಕರ ತಂಡದ ಸಿನಿಮಾ. ಕಾಮಿಡಿ ಜೊತೆಯಲ್ಲಿ ಊರಿನ ಹೆಸರನ್ನು ಉಳಿಸಲು ಸ್ನೇಹಿತರನ್ನ ಬಿಡದೇ ಜೊತೆಯಲ್ಲೇ ಸಾಗುತ್ತಾನೆ. ಸಿನಿಮಾದಲ್ಲಿ ದೋಷಗಳು ಇಲ್ಲವೆಂದೆನಿಲ್ಲ. ಆದರೆ ಅದಕ್ಕೂ ಮೀರಿ ಒಳ್ಳೆಯ ಅಂಶಗಳೇ ಹೆಚ್ಚಾಗಿ ಚಿತ್ರದುದ್ದಕ್ಕೂ ಸಿಗುತ್ತವೆ.

    ಸಿನಿಮಾದಲ್ಲಿ ಕೇಳ ಸಿಗುವ ‘ನಾವು ಚೆಂಗ್ಲು ಹುಡುಗರೇ ಇರಬಹುದು ಆದ್ರೆ ಊರಿನ ವಿಷಯಕ್ಕೆ ಬಂದರೇ ನಾವು ಒಳ್ಳೆಯವರೇ’ ಎಂಬ ಡೈಲಾಗ್ ಇಡೀ ಸಿನಿಮಾದ ಕಥೆಯನ್ನು ಸಾರುತ್ತಿದೆ. ಹಾಗೇ ಸಿನಿಮಾದುದ್ದಕ್ಕೂ ಹೆಣ್ಣಿನ ಮಹತ್ವವನ್ನು ಸಾರಲಾಗಿದೆ. ಜಿಲ್ಲಾ ಮಟ್ಟದ ರಾಗಿ ಮುದ್ದೆ ಸ್ವರ್ಧೆ ಮಾಡಬೇಕೆನ್ನುವ ಶಿವನ ಮಾತಿನಿಂದ ಇಡೀ ಸಿನೆಮಾ ಬೇರೊಂದು ತಿರುವು ಪಡೆದುಕೊಂಡು ಚಿತ್ರಕ್ಕೆ ಒಂದು ಶಕ್ತಿಯನ್ನ ತುಂಬುತ್ತದೆ.

    ಸಿನಿಮಾದಲ್ಲಿ ಪ್ರೀತಿ ವಿಚಾರವನ್ನು ಎಷ್ಟು ಬೇಕು ಅಷ್ಟನ್ನ ಹೇಳಿರುವ ನಿರ್ದೇಶಕ ರಾಜು, ಚಿತ್ರದುದ್ದಕ್ಕೂ ಹಳ್ಳಿಯ ಹುಡುಗರಿಗೆ ಇರಬೇಕಾದ ಜವಾಬ್ದಾರಿಯನ್ನ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಗ್ರಾಮೀಣ ಬದುಕಿನ ಒಟ್ಟು ಹೂರಣವನ್ನ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಅದಕ್ಕೆ ತಕ್ಕಂತೆ ಬೆಟ್ಟೆಗೌಡ ಅದ್ಧೂರಿಯಾಗಿ ದೃಶ್ಯ ಸೆರೆ ಹಿಡಿದಿದ್ದಾರೆ. ಪೂರ್ಣ ಚಂದ್ರ ತೇಜಸ್ವಿ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಸೂಪರ್ ಆಗಿದ್ದು ಹಾಡುಗಳು ಇಂಪಾಗಿವೆ. ಸಾಗರ್ ಸೇರಿದಂತೆ ಬಹುತೇಕ ನಟರು ಸಹಜವಾಗಿ ಅಭಿನಯಿಸಿದ್ದಾರೆ, ಅದು ಇಡೀ ಸಿನೆಮಾದ ಪ್ಲಸ್ ಪಾಯಿಂಟ್. ಸಂಭಾಷಣೆ ಚುರುಕಾಗಿದೆ ಹೆಚ್ಚಾಗಿ ಸಂದರ್ಭೋಚಿತವಾಗಿವೆ. ಆನೆಬಲ ಎಲ್ಲರೂ ಕುಳಿತು ನೋಡಬಹುದಾದ ಚಿತ್ರ.