ನಿರೂಪಕಿಯಾಗಿ, ನಟಿಯಾಗಿ ಗುರುತಿಸಿಕೊಂಡ ಶೀತಲ್ ಶೆಟ್ಟಿ ‘ವಿಂಡೋಸೀಟ್’ ಸಿನಿಮಾದಿಂದ ನಿರ್ದೇಶಕಿಯಾಗುತ್ತಿದ್ದಾರೆ. ಇದಾಗಲೇ ಎರಡು ಕಿರುಚಿತ್ರ ಮಾಡಿ ಗೆದ್ದವರು ಶೀತಲ್ ಶೆಟ್ಟಿ. ಆಕರ್ಷಕ ಟೈಟಲ್ ಮೂಲಕ ಸದ್ದು ಮಾಡುತ್ತಿರುವ ವಿಂಡೋಸೀಟ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ.
ಇಷ್ಟು ದಿನ ‘ವಿಂಡೋಸೀಟ್’ ಎಂದಾಕ್ಷಣಾ ವಿಭಿನ್ನ ಟೈಟಲ್ ಅನ್ನಿಸುತ್ತಾ ಇತ್ತು. ಆದರೀಗ ಆ ವಿಂಡೋಸೀಟ್ ನ ಅನುಭವ ಮಾಡಿಕೊಟ್ಟಿದೆ. ಟೀಸರ್. ಟ್ರೈನ್ ಜರ್ನಿ ಮಾಡಿದ ಎಲ್ಲರಿಗೂ ಈ ವಿಂಡೋಸೀಟ್ ಹಿಂದೆ ಒಂದು ಕಥೆ ಇರುತ್ತೆ. ವಿಂಡೋಸೀಟ್ ನಲ್ಲಿ ಕುಳಿತು ಹೊರಗಿನ ಸೌಂದರ್ಯ ಸವಿಯುವುದೇ ಒಂದು ಖುಷಿ. ಆ ಸೌಂದರ್ಯ ಸವಿಯೋದಕ್ಕೆ ಹೋಗಿ.
ವಿಂಡೋಸೀಟ್ ನಲ್ಲಿ ಒಂದು ಮಧುರ ಪ್ರೇಮ ಕಥೆ ಅಡಗಿದೆ. ಇಬ್ಬರು ನಾಯಕಿಯರ ಪ್ರೀತಿಯ ಜಗತ್ತು ಇದರಲ್ಲಿ ತೆರೆದುಕೊಂಡಿದೆ. ತಾನಿಷ್ಟಪಟ್ಟ ಹುಡುಗಿ ಒಂದು ಕಡೆ. ತನ್ನನ್ನು ಇಷ್ಟ ಪಡುತ್ತಿರುವ ಹುಡುಗಿ ಇನ್ನೊಂದು ಕಡೆ. ಹುಟ್ಟಿ ಬೆಳೆದ ಹಳ್ಳಿಯ ಸೊಬಗು, ಊರ ಬಿಟ್ಟು ಬೇರೆಲ್ಲೋ ಸೇರಿ ಅಪ್ಪ-ಅಮ್ಮನ ನೆನಪಿಗಾಗಿ ಉಳಿದ ಆ ಮನೆಯ ನೆನಪುಗಳು ಎಲ್ಲವೂ ಟೀಸರ್ ನಲ್ಲಿ ಹಿಡಿದಿಡುತ್ತದೆ.
ರೊಮ್ಯಾಂಟಿಕ್ ಥ್ರಿಲ್ಲರ್ ಕಥೆಯಲ್ಲಿ ನಾಯಕನ ಹುಡುಗಿ ತೊಂದರೆಗೆ ಸಿಕ್ಕಾಗ ಆಕೆಯನ್ನ ಬಚಾವ್ ಮಾಡುವುದು ಹೇಗೆ, ಇನ್ನೊಬ್ಬಳು ನಾಯಕಿಯ ಕಥೆ ಏನು ಈ ಎಲ್ಲಾ ಪ್ರಶ್ನೆಗಳು ಸಾಕಷ್ಟು ಕುತೂಹಲವನ್ನ ಹುಟ್ಟು ಹಾಕಿವೆ. ಕಥೆಯ ತಿರುಳಂತು ತಿಳಿಯಿತು ಆದ್ರೆ ಮುಂದೇನು, ಕಥೆ ಸಾಗುವ ಮಾರ್ಗದ ಬಗ್ಗೆ ಪ್ರಶ್ನೆಗಳು ಹೆಚ್ಚಾಗಿವೆ. ಇದಕ್ಕೆಲ್ಲಾ ಉತ್ತರ ಸಿನಿಮಾದಲ್ಲಿದೆ.
ಶೀತಲ್ ಶೆಟ್ಟಿಯ ದೊಡ್ಡ ಕನಸು ಈ ವಿಂಡೋಸೀಟ್. ನಿರೂಪ್ ಭಂಡಾರಿಯನ್ನ ನಿರೂಪಿಸಿರುವ ರೀತಿ ಅದ್ಭುತವಾಗಿದೆ. ಸ್ಯಾಂಡಲ್‍ವುಡ್ ನಲ್ಲಿ ಇತ್ತೀಚೆಗೆ ಬ್ಯುಸಿ ಎನಿಸಿಕೊಂಡಿರುವ ಅಮೃತಾ ಅಯ್ಯರ್ ಮತ್ತು ಸಂಜನಾ ಆನಂದ್ ನಾಯಕಿಯರಾಗಿದ್ದಾರೆ. ಸುಂದರ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿದ್ದು, ಟೀಸರ್ ನಲ್ಲಿ ಆ ಸೌಂದರ್ಯವನ್ನು ಕಟ್ಟಿಕೊಟ್ಟಿದ್ದಾರೆ.
ರವಿಶಂಕರ್, ಮಧುಸೂದನ್ ರಾವ್, ಲೇಖಾ ನಾಯ್ಡು, ಸೂರಜ್ ಸೇರಿದಂತೆ ಹಲವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಶೀತಲ್ ಶೆಟ್ಟಿ ನಿರ್ದೇಶನದ ವಿಂಡೋಸೀಟ್ ಗೆ ನಿರ್ಮಾಪಕ ಜಾಕ್ ಮಂಜು ಬಂಡವಾಳ ಹೂಡಿದ್ದಾರೆ. ವಿಘ್ನೇಶ್ ರಾಜ್ ಕ್ಯಾಮೆರಾದಲ್ಲಿ ಸುಂದರ ಸಿನಿಮಾ ಸೆರೆಯಾಗಿದ್ದು, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.
ಒಂದೊಳ್ಳೆ ಸಿನಿಮಾ ಎಂಟ್ರಿ ಕೊಟ್ರೆ ತಿಂಗಳಿಂದೀಚೆಗೆ ಕವುಚಿಕೊಂಡಿರೋ ಕೊರೊನಾ ಗ್ರಹಣ ತಂತಾನೇ ಕಳಚಿಕೊಳ್ಳುತ್ತೆ. ಇದು ಸಿನಿಮಾ ಪ್ರೇಮಿಗಳ ಒಕ್ಕೊರಲಿನ ಅಭಿಪ್ರಾಯ. ಅದರಲ್ಲಿಯೇ ಮತ್ತೆ ಸಿನಿಮಾ ಮಂದಿರಗಳು ಗಿಜಿಗುಡುತ್ತಾ ಕಳೆಗಟ್ಟಿಕೊಳ್ಳಲೆಂಬ ಹಾರೈಕೆಯೂ ಇದೆ. ಅದೆಷ್ಟೋ ಸಿನಿಮಾ ಪ್ರೇಮಿಗಳ ಈ ಮನದಿಂಗಿತವನ್ನು ನಿಜವಾಗಿಸುವಂಥಾ ಗಾಢ ಭರವಸೆ ಹೊತ್ತು ಆಕ್ಟ್-1978 ಚಿತ್ರದ ಟ್ರೇಲರ್ ಲಾಂಚ್ ಆಗಿದೆ.
ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ ಅದಕ್ಕೆ ದಕ್ಕಿರೋ ವೀಕ್ಷಣೆ, ನಾನಾ ದಿಕ್ಕುಗಳಿಂದ ಹರಿದು ಬರುತ್ತಿರೋ ಸದಭಿಪ್ರಾಯಗಳೆಲ್ಲವೂ ಒಂದು ಮಹಾ ಗೆಲುವಿನ ಮುನ್ಸೂಚನೆಯಂತೆಯೂ, ಚಿತ್ರರಂಗದ ಪಾಲಿಗೆ ಸುಗ್ಗಿ ಸಂಭ್ರಮ ಪಡಿಮೂಡಿಕೊಳ್ಳುವ ಶುಭ ಸೂಚನೆಯಂತೆಯೂ ಕಾಣಿಸಲಾರಂಭಿಸಿದೆ.
ಇದು ಹರಿವು ಮತ್ತು ನಾತಿಚರಾಮಿಯಂಥ ಸದಭಿರುಚಿಯ ಸಿನಿಮಾಗಳನ್ನು ಕೊಡಮಾಡಿರುವ ಮಂಸೋರೆ ನಿರ್ದೇಶನದ ಚಿತ್ರ. ಈ ಹಿಂದೆ ಒಂದೇ ಒಂದು ಪೋಸ್ಟರ್ ಮೂಲಕ ಈ ಸಿನಿಮಾ ಸೃಷ್ಟಿಸಿದ್ದ ಕ್ರೇಜ್ ಎಂಥಾದ್ದೆಂಬುದನ್ನ ಯಾರೂ ಮರೆಯಲು ಸಾಧ್ಯವಿಲ್ಲ. ಆ ದೆಸೆಯಿಂದಲೇ ಆಕ್ಟ್-1978 ಬಗ್ಗೆ ವಿಶೇಷವಾದ ಕುತೂಹಲ ಮೂಡಿಕೊಂಡಿತ್ತು. ಈಗ ಪುನೀತ್ ರಾಜ್ ಕುಮಾರ್ ಅವರ ಪಿಆರ್‍ಕೆ ಯೂಟ್ಯೂಬ್ ಚಾನೆಲ್ ಮೂಲಕ ಲಾಂಚ್ ಆಗಿರೋ ಟ್ರೇಲರ್ ಎಲ್ಲ ನಿರೀಕ್ಷೆಗಳನ್ನೂ ಮತ್ತಷ್ಟು ಉದ್ದೀಪಿಸುವಂತೆ ಮೂಡಿ ಬಂದಿದೆ. ನಿರ್ದೇಶಕ ಮಂಸೋರೆ ಈ ಬಾರಿ ಎಲ್ಲರ ಮನಸುಗಳಿಗೂ ಕೌತುಕದ ಬಾಂಬಿಟ್ಟು ಬಿಟ್ಟಿದ್ದಾರೆ.
ಮಂಸೋರೆ ಭಿನ್ನ ಪಥದಲ್ಲಿಯೇ ಸದ್ದು ಮಾಡುತ್ತಾ, ಪ್ರತಿ ಹೆಜ್ಜೆಯಲ್ಲಿಯೂ ಹೊಸಾ ಸಾಧ್ಯತೆಗಳತ್ತ ಕೈ ಚಾಚುತ್ತಾ ಈ ನೆಲದ ಕಥೆಗಳಿಗೆ ದೃಶ್ಯ ರೂಪ ನೀಡೋ ಅಪರೂಪದ ನಿರ್ದೇಶಕ. ಅವರು ಈ ಬಾರಿ ಪಕ್ಕಾ ಥ್ರಿಲ್ಲರ್ ಕಥಾನಕದೊಂದಿಗೆ ಅಡಿಯಿರಿಸುತ್ತಿದ್ದಾರೆ. ಈ ವ್ಯವಸ್ಥೆಯ ವಿರುದ್ಧ ಸಿಡಿದೆದ್ದು ಒಂದು ಸರ್ಕಾರಿ ಕಚೇರಿಯನ್ನೇ ಹೈಜಾಕ್ ಮಾಡೋ ದೃಶ್ಯಾವಳಿಗಳೊಂದಿಗೆ ಈ ಟ್ರೇಲರ್ ಎಲ್ಲರನ್ನೂ ಸೆಳೆದುಕೊಂಡಿದೆ. ಮೈಗೆ ಬಾಂಬು ಕಟ್ಟಿಕೊಂಡಿರೋ ಬಸುರಿ ಹೆಂಗಸಿನ ರೆಬೆಲ್ ಪಾತ್ರದಲ್ಲಿ ಯಜ್ಞ ಶೆಟ್ಟಿ ಅಕ್ಷರಶಃ ಮಿಂಚಿದ್ದಾರೆ. ಮಿಕ್ಕುಳಿದ ಪಾತ್ರಗಳೂ ಕೂಡಾ ಅಷ್ಟೇ ಮಜವಾಗಿ ಮೂಡಿ ಬಂದಿರೋದರ ಸೂಚನೆಗಳೂ ಈ ಟ್ರೇಲರ್‌ನಲ್ಲಿ ಕಾಣಿಸಿವೆ.
ವ್ಯವಸ್ಥೆಯ ವಿರುದ್ಧ ಜನಸಾಮಾನ್ಯರೂ ಕೂಡಾ ಕುದಿತವೊಂದನ್ನು ಒಳಗಿಟ್ಟುಕೊಂಡಿರುತ್ತಾರೆ. ಆದರೆ, ಅದರ ವಿರುದ್ಧದ ಹೋರಾಟ, ಕ್ರಾಂತಿಗೆ ಮತ್ಯಾವುದೋ ಮಹಾ ಶಕ್ತಿಯೇ ಧರೆಗಿಳಿದು ಬರಬೇಕೆಂಬಂತೆ ಎಲ್ಲವನ್ನೂ ಅವುಡುಗಚ್ಚಿ ಸಹಿಸಿಕೊಂಡಿರುತ್ತಾರೆ. ಆದರೆ ಮನಸು ಮಾಡಿದರೆ ಸಾಮಾನ್ಯರ ಕುದಿತ, ಬೇಗುದಿಗಳೂ ಅಸಾಧಾರಣ ರೀತಿಯಲ್ಲಿ ಆಸ್ಫೋಟಗೊಳ್ಳಬಹುದೆಂಬ ಕಥಾ ಹೂರಣ ಈ ಟ್ರೇಲರ್‍ನಲ್ಲಿ ಧ್ವನಿಸಿದೆ. ಅಂತೂ ಪ್ರತಿ ಕ್ಷಣವೂ ಉಸಿರು ಬಿಗಿಹಿಡಿದು ಕಾಯುವಂಥಾ ಬಿಗುವಿನೊಂದಿಗೆ ಈ ಸಿನಿಮಾ ಮೂಡಿಬಂದಿದೆ ಅನ್ನೋ ನಂಬಿಕೆ ಪ್ರತಿಯೊಬ್ಬರಲ್ಲಿಯೂ ಮೂಡಿಕೊಂಡಿದೆ.
ಈ ಹಿಂದಿನ ಸಿನಿಮಾಗಳನ್ನು ನೋಡಿದ ಬಹುತೇಕರು ನಿರ್ದೇಶಕ ಮಂಸೋರೆಯ ಅಗಾಧ ಪ್ರತಿಭೆಯನ್ನು ಮೆಚ್ಚಿಕೊಂಡಿದ್ದರು. ಅವರೀಗ ಪರಭಾಷಾ ಚಿತ್ರರಂಗಗಳ ಮಂದಿಯೇ ನಿಬ್ಬೆರಗಾಗೋ ಕಥಾ ವಸ್ತುವಿನೊಂದಿಗೆ ಕಮಾಲ್ ಮಾಡಲು ಮುಂದಾಗಿದ್ದಾರೆ. ಯಜ್ಞ ಶೆಟ್ಟಿಯನ್ನಂತೂ ಈ ಬಸುರಿ ಹೆಂಗಸಿನ ಪಾತ್ರ ಮತ್ತೊಂದು ಎತ್ತರಕ್ಕೇರಿಸೋದರಲ್ಲಿ, ಈ ಸಿನಿಮಾ ಮೂಲಕವೇ ಅವರ ವೃತ್ತಿ ಬದುಕಿನ ದಿಕ್ಕು ಬದಲಾಗೋದು ಗ್ಯಾರೆಂಟಿ ಅಂತ ನೋಡುಗರೇ ಭವಿಷ್ಯ ನುಡಿಯುತ್ತಿದ್ದಾರೆ. ಒಂದು ಟ್ರೇಲರ್ ಇಂಥಾ ಅಭಿಪ್ರಾಯಗಳನ್ನು ಹೊಮ್ಮಿಸುವಂತೆ ಮಾಡೋದು ಆರಂಭಿಕ ಗೆಲುವು. ಅದು ಆಕ್ಟ್-1978 ಚಿತ್ರಕ್ಕೆ ದಕ್ಕಿದೆ. ಮುಂದೆ ಮಹಾ ಗೆಲುವೊಂದು ಬಾಚಿ ತಬ್ಬಿಕೊಳ್ಳಲು ಕಾದು ನಿಂತಿರುವಂತಿದೆ!
ಬೆಂಗಳೂರು: ಸ್ವರ ಮಾಂತ್ರಿಕ, ಸಂಗೀತ ದಿಗ್ಗಜ ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಚಂದನದ ಗೊಂಬೆ ಲಕ್ಷ್ಮಿ ಅಭಿನಯದ ‘ಮಿಥುನಂ’ ಸಿನಿಮಾ ಕನ್ನಡಕ್ಕೆ ಡಬ್ ಆಗುತ್ತಿದ್ದು, ಕೆಲವೇ ದಿನಗಳಲ್ಲಿ ಸಿನಿಮಾ ಚಿತ್ರಮಂದಿರ ಪ್ರವೇಶಿಸಲಿದೆ. ಕೇವಲ ಗಾಯಕರಾಗಿ ಅಲ್ಲದೇ ಎಸ್‍ಪಿಬಿ ನಟರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಕನ್ನಡ ಸೇರಿದಂತೆ 70ಕ್ಕೂ ಅಧಿಕ ಸಿನಿಮಾಗಳಲ್ಲಿ ಎಸ್‍ಪಿಬಿ ನಟಿಸಿದ್ದಾರೆ.
8 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ತೆಲುಗು ಮಿಥುನಂ ಕನ್ನಡದಲ್ಲಿ ಮಿಥುನನಾಗಿ ತೆರೆಗೆ ಅಪ್ಪಳಿಸಲಿದೆ. 2012ರಲ್ಲಿ ತೆರೆಕಂಡಿದ್ದ ಈ ಸಿನಿಮಾದಲ್ಲಿ ಎಸ್‍ಪಿಬಿ ಮತ್ತು ಲಕ್ಷ್ಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಶ್ರೀರಮಣ ರಚಿತ ಮಿಥುನಂ ಕಾದಂಬರಿಯನ್ನ ನಿರ್ದೇಶಕ ತನಿಕೆಳ್ಳ ಭರಣಿ ತೆರೆಯ ಮೇಲೆ ತಂದು ಮೋಡಿ ಮಾಡಿದ್ದರು. ಕಾದಂಬರಿ ಆಧಾರಿತ ಈ ಸಿನಿಮಾ ನಾಲ್ಕು ರಾಜ್ಯ ಪ್ರಶಸ್ತಿಗಳನ್ನ ತನ್ನದಾಗಿಸಿಕೊಂಡಿತ್ತು.
ಸೌಂಡ್ ಆಫ್ ಮ್ಯೂಸಿಕ್ ಗುರುರಾಜ್ ಸ್ಟುಡಿಯೋದಲ್ಲಿ ಚಿತ್ರದ ಡಬ್ಬಿಂಗ್ ಕಾರ್ಯಗಳು ನಡೆದಿವೆ. ಡಿಸೆಂಬರ್ ಮೊದಲ ಅಥವಾ ಎರಡನೇ ವಾರದಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ರಾಜ್ಯಾದ್ಯಂತ ಚಿತ್ರ ಬಿಡುಗಡೆಗೆ ಪ್ಲಾನ್ ಮಾಡಿಕೊಳ್ಳಲಾಗಿದ್ದು, ರಿಲೀಸ್ ದಿನಾಂಕ ಅಂತಿಮವಾಗಬೇಕಿದೆ.
ಅನ್‍ಲಾಕ್ ಬಳಿಕ ಕಳೆದ 15 ದಿನಗಳಿಂದ ಚಿತ್ರಮಂದಿರಗಳು ತೆರೆದಿವೆ. ಕೊರೊನಾ ಆತಂಕದ ನಡುವೆಯೂ ಜನರು ಸಹ ನಿಧಾನವಾಗಿ ಚಿತ್ರಮಂದಿರಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಪ್ರೇಕ್ಷಕರ ಕೊರತೆ ಹಿನ್ನೆಲೆ ಹೊಸ ಸಿನಿಮಾಗಳನ್ನು ಬಿಡುಗಡೆ ಮಾಡಲು ಚಿತ್ರತಂಡಗಳು ಹಿಂದೇಟು ಹಾಕುತ್ತಿವೆ. ಹಾಗಾಗಿ ಹಳೆಯ ಸೂಪರ್ ಹಿಟ್ ಫಿಲಂಗಳನ್ನ ರೀ ರಿಲೀಸ್ ಮಾಡಲಾಗುತ್ತಿದೆ. ಕೆಲ ಬೇರೆ ಭಾಷೆಯ ಹೊಸ ಸಿನಿಮಾಗಳನ್ನ ಡಬ್ ಮಾಡಿ ಕನ್ನಡಕ್ಕೆ ತರಲಾಗ್ತಿದೆ. ಈ ಎಲ್ಲ ಬೆಳವಣಿಗೆಗಳ ಹಳೆ ತೆಲುಗು ಸಿನಿಮಾ ಕನ್ನಡಕ್ಕೆ ಡಬ್ ಆಗುತ್ತಿದೆ.
ಶೀತಲ್ ಶೆಟ್ಟಿ ನಿರ್ದೇಶನದ ವಿಂಡೋ ಸೀಟ್ ಚಿತ್ರ ಬಿಡುಗಡೆಯ ಹೊಸ್ತಿಲಲ್ಲಿದೆ. ಈಗಾಗಲೇ ಮೋಷನ್ ಪೋಸ್ಟರ್ ಮತ್ತು ಫಸ್ಟ್ ಲುಕ್‍ನಿಂದ ವಿಂಡೋ ಸೀಟ್ ಹಂಗಾಮಾ ಶುರುವಾಗಿದೆ. ವಿಂಡೋ ಸೀಟ್‍ನಲ್ಲಿ ಚೇತೋಹಾರಿಯಾದದ್ದೇನೋ ಇದೆ ಎಂಬ ಭರವಸೆಯನ್ನು ಶೀತಲ್ ಪ್ರೇಕ್ಷಕರ ಮನಸಲ್ಲಿ ಭದ್ರವಾಗಿಯೇ ನೆಲೆಯೂರಿಸಿದ್ದಾರೆ. ಈ ಸಿನಿಮಾದ ಮುಂದಿನ ಅಪ್‍ಡೇಟ್ಸ್ ಗಾಗಿ ಕಾದು ಕೂತಿದ್ದವರಿಗೀಗ ಚಿತ್ರತಂಡ ಡಬಲ್ ಧಮಾಕಾವನ್ನೇ ಕೊಡಮಾಡಿದೆ. ಈ ಮೂಲಕ ಮತ್ತೆ ವಿಂಡೋ ಸೀಟ್ ದೀಪಾವಳಿಯ ಪ್ರಭಾವಳಿಗೆ ಹೊಸ ಮೆರುಗು ನೀಡಲು ಅಣಿಗೊಂಡಿದೆ.
ಇತ್ತೀಚೆಗೆ ಲಾಂಚ್ ಆಗಿದ್ದ ಫಸ್ಟ್ ಲುಕ್‍ನಲ್ಲಿಯೇ ಒಂದಷ್ಟು ಅಂಶಗಳು ಪ್ರೇಕ್ಷಕರನ್ನ ತಲುಪಿಕೊಂಡಿದ್ದವು. ಆ ಘಳಿಗೆಯಲ್ಲಿ ಶೀಘ್ರದಲ್ಲಿಯೇ ಟೀಸರ್ ಲಾಂಚ್ ಮಾಡೋದಾಗಿಯೂ ನಿರ್ದೇಶಕಿ ಶೀತಲ್ ಶೆಟ್ಟಿ ಹೇಳಿಕೊಂಡಿದ್ದರು. ಅದಕ್ಕೀಗ ಅವರು ದೀಪಾವಳಿಯಂದು ಮುಹೂರ್ತ ನಿಗದಿ ಮಾಡಿದ್ದಾರೆ. ಈ ವಿಚಾರವನ್ನು ಚಿತ್ರತಂಡ ಅಧಿಕೃತವಾಗಿಯೇ ಘೋಷಿಸಿದೆ. ಅದಲ್ಲದೇ ಇಂದು ಸಂಜೆ ಆರು ಗಂಟೆಗೆ ಸರಿಯಾಗಿ ಕಿಚ್ಚ ಕ್ರಿಯೇಷನ್ಸ್ ಯೂಟ್ಯೂಬ್ ಚಾನೆಲ್‍ನಲ್ಲಿ ವಿಂಡೋ ಸೀಟ್‍ನ ಮಸ್ತ್ ಆಗಿರೋ ಮೇಕಿಂಗ್ ವೀಡಿಯೋ ಕೂಡಾ ಬಿಡುಗಡೆಗೊಂಡಿದೆ. ಅದರಲ್ಲಿ ಸದರಿ ಸಿನಿಮಾ ಬಗೆಗಿನ ಮತ್ತೊಂದಷ್ಟು ರಸವತ್ತಾದ ಹೊಳಹುಗಳು ಜಾಹೀರಾಗಿದೆ.
ಕೊರೊನೋತ್ತರ ಕಾಲದಲ್ಲಿ ಚಿತ್ರರಂಗಕ್ಕೆ ಹೊಸಾ ಆವೇಗ ನೀಡಬಲ್ಲ ಭರವಸೆ ಮೂಡಿಸಿರುವ ಒಂದಷ್ಟು ಸಿನಿಮಾಗಳಿದ್ದಾವೆ. ಆ ಯಾದಿಯಲ್ಲಿ ಜಾಕ್ ಮಂಜು ನಿರ್ಮಾಣದಲ್ಲಿ ಮೂಡಿ ಬಂದಿರುವ ವಿಂಡೋ ಸೀಟ್ ಕೂಡಾ ಸೇರಿಕೊಂಡಿದೆ. ಇದೀಗ ಲಾಂಚ್ ಆಗಿರೋ ಮೇಕಿಂಗ್ ವೀಡಿಯೋದಲ್ಲಿ ವಿಂಡೋ ಸೀಟ್‍ನ ಕಥಾ ಹಂದರದ ಝಲಕ್‍ಗಳೂ ಕೂಡಾ ಸ್ಪಷ್ಟವಾಗಿ ಕಾಣಿಸಿದೆ. ಒಂದೊಳ್ಳೆ ರೊಮ್ಯಾಂಟಿಕ್ ಕ್ರೈಂ ಥ್ರಿಲ್ಲರ್ ಕಥಾನಕವನ್ನು ಶೀತಲ್ ಶೆಟ್ಟಿ ಕಟ್ಟಿ ಕೊಟ್ಟಿದ್ದಾರೆಂಬುದೂ ಸ್ಪಷ್ಟವಾಗಿದೆ. ಅದಲ್ಲದೇ ನಿರೂಪ್ ಭಂಡಾರಿ ಇಲ್ಲಿ ಯಾವ್ಯಾವ ಗೆಟಪ್ಪುಗಳಲ್ಲಿ ಕಾಣಿಸಿಕೊಂಡಿದ್ದಾರೆಂಬ ಪ್ರೇಕ್ಷಕರ ಕ್ಯೂರಿಯಾಸಿಟಿ ಕೂಡಾ ಕೊಂಚ ತಣಿದಂತಾಗಿದೆ. ಒಟ್ಟಾರೆಯಾಗಿ ಈ ಮೇಕಿಂಗ್ ವೀಡಿಯೋ ಟೀಸರ್ ಆಗಿ ತದೇಕಚಿತ್ತದಿಂದ ಕಾಯುವಂತೆ ಮಾಡುವಷ್ಟು ಶಕ್ತವಾಗಿ ಮೂಡಿ ಬಂದಿದೆ.
ವಿಂಡೋ ಸೀಟ್ ಈ ಪರಿಯಾಗಿ ಪ್ರೇಕ್ಷಕರನ್ನು ಆವರಿಸಿಕೊಳ್ಳಲು, ಅದ್ಯಾವತ್ತು ರಿಲೀಸಾಗುತ್ತೆ ಅಂತ ಜಾತಕ ಪಕ್ಷಿಗಳಂತೆ ಕಾಯುವಂತಾಗಿರಲು ನಿಖರವಾದ ಕಾರಣಗಳಿವೆ. ಮೊದಲನೆಯದಾಗಿ ನಿರ್ದೇಶಕಿ ಶೀತಲ್ ಈವರೆಗಿನ ಕೆಲಸ ಕಾರ್ಯಗಳಲ್ಲಿಯೇ ಆ ರೀತಿಯಲ್ಲೊಂದು ಭರವಸೆ ಮೂಡಿಸಿದ್ದಾರೆ. ಇನ್ನುಳಿದಂತೆ ಕಥೆ, ಪಾತ್ರವರ್ಗ, ಒಂದಿಡೀ ತಂಡವನ್ನು ಅವರು ಬಲು ಜಾಣ್ಮೆಯಿಂದಲೇ ಆಯ್ಕೆ ಮಾಡಿಕೊಂಡಿದ್ದಾರೆ. ಒಂದಿಡೀ ಪಾತ್ರವರ್ಗ ಮತ್ತು ತಂಡ ಅದೆಂಥಾ ಉತ್ಸಾಹದಿಂದ ಈ ಸಿನಿಮಾವನ್ನು ರೂಪಿಸಿದೆ. ಅದರ ಬಗ್ಗೆ ಯಾವ ಥರದ ಭರವಸೆಯಿಟ್ಟುಕೊಂಡಿದೆ ಅನ್ನೋದೂ ಈ ಮೇಕಿಂಗ್ ವೀಡಿಯೋದಲ್ಲಿ ಸ್ಪಷ್ಟವಾಗಿಯೇ ಕಾಣಿಸಿದೆ.
ಬೆಂಗಳೂರು: ಲಾಕ್‍ಡೌನ್ ಬಳಿಕ ಕೊರೊನಾ ವೈರಸ್ ಆತಂಕದ ನಡುವೆ ಚಿತ್ರರಂಗದ ಚಟುವಟಿಕೆಗಳು ಚುರುಕು ಪಡೆದುಕೊಂಡಿವೆ. ಸ್ಥಗಿತಗೊಂಡಿದ್ದ ಚಿತ್ರೀಕರಣ ಸಹ ಆರಂಭಗೊಂಡಿದ್ದು, ಕಲಾವಿದರು ಕಾಯಕಕ್ಕೆ ಹಿಂದಿರುಗಿದ್ದಾರೆ. ಆರು ತಿಂಗಳ ಬಳಿಕ ಶೂಟಿಂಗ್ ಗೆ ಹಾಜರಾಗಿರುವ ಮುಂಗಾರು ಮಳೆ ಹುಡುಗ ಗಣೇಶ್ ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದಾರೆ.
ಕೊರೊನಾ ವೈರಸ್ ಮತ್ತು ಲಾಕ್‍ಡೌನ್ ನಿಂದಾಗಿ ಇಡೀ ಬಣ್ಣದ ಲೋಕ ತೆರೆಯ ಹಿಂದೆ ಸರಿದಿತ್ತು. ಅನ್‍ಲಾಕ್ ಬಳಿಕ ಸರ್ಕಾರ ಮಾರ್ಗಸೂಚಿಗಳನ್ನ ಪಾಲಿಸುವ ಮೂಲಕ ಬಣ್ಣದ ಲೋಕ ಹಿಂದಿರುಗಿದೆ. ಚಿತ್ರಮಂದಿರಗಳು ತೆರೆದಿದ್ದು, ಪ್ರೇಕ್ಷಕರು ಸಹ ಥಿಯೇಟರ್ ನತ್ತ ಹೆಜ್ಜೆ ಹಾಕುತ್ತಿದ್ದಾರೆ. ತ್ರಿಬಲ್ ರೈಡಿಂಗ್ ಸಿನಿಮಾದ ಚಿತ್ರೀಕರಣಕ್ಕೆ ಹಾಜರಾಗಿರುವ ಗೋಲ್ಡನ್ ಸ್ಟಾರ್ ತಮ್ಮ ಮತ್ತು ಕ್ಯಾಮೆರಾ ಜೊತೆಗಿನ ಅವಿನಾಭಾವ ಸಂಬಂಧ ಎಂತಹದ್ದು ಎಂಬುದನ್ನ ಕೆಲ ಸಾಲುಗಳಲ್ಲಿ ವ್ಯಕ್ತಪಡಿಸಿದ್ದಾರೆ.
ಗಣೇಶ್ ಪೋಸ್ಟ್: ನನ್ನ ಆತನ ಜೊತೆಗಿನ ಸಂಬಂಧ ಈ ಜನ್ಮಕ್ಕೆ ದೇವರು ಕೊಟ್ಟ ವರವೇ ಇರಬೇಕು. ನಾ ನಕ್ಕಾಗ ನಕ್ಕು, ಅತ್ತಾಗ ಅತ್ತು ನನ್ನನ್ನು ನಿಮಗೆ ಅದ್ಭುತವಾಗಿ ತೋರಿಸಿದ. ಆ ಸಲುಗೆಗೆ ಅದಾವ ಕಣ್ಣು ತಗುಲಿತ್ತೊ? 6 ತಿಂಗಳ ಕಾಲ ದೂರಾಗಿ ಈಗ ಎದುರಾಗಿದ್ದೇವೆ. ಆತ ಬೇರಾರಲ್ಲ ಬದುಕಿನ ಭಾಗ ‘ಕ್ಯಾಮೆರಾ’. ತ್ರಿಬಲ್ ರೈಡಿಂಗ್ ಸಿನಿಮಾ ಚಿತ್ರೀಕರಣ ಆರಂಭವಾಗಿದೆ ನಿಮ್ಮ ಹಾರೈಕೆ ಇರಲಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.
ನನ್ನ ಆತನ ಜೊತೆಗಿನ ಸಂಬಂಧ ಈ ಜನ್ಮಕ್ಕೆ ದೇವರು ಕೊಟ್ಟ ವರವೇ ಇರಬೇಕು. ನಾ ನಕ್ಕಾಗ ನಕ್ಕು, ಅತ್ತಾಗ ಅತ್ತು, ನನ್ನನ್ನು ನಿಮಗೆ ಅದ್ಭುತವಾಗಿ ತೋರಿಸಿದ ಆ ಸಲುಗೆಗೆ ಅದಾವ ಕಣ್ಣು ತಗುಲಿತ್ತೊ. 6ತಿಂಗಳ ಕಾಲ ದೂರಾಗಿ ಈಗ ಎದುರಾಗಿದ್ದೇವೆ. ಆತ ಬೇರಾರಲ್ಲ ಬದುಕಿನ ಭಾಗ "ಕ್ಯಾಮೆರಾ" "ತ್ರಿಬಲ್ ರೈಡಿಂಗ್" ಚಿತ್ರೀಕರಣ ಶುರು ನಿಮ್ಮ ಹಾರೈಕೆಯಿರಲಿ pic.twitter.com/KCz9VpYJuZ
ನವ ನಟ ದಿಲೀಪ್, ಮಯೂರಿ ಖ್ಯಾತ್ರಿ ನಟನೆಯ ಆದ್ಯಂತ ಚಿತ್ರ ಬಿಡುಗಡೆಯ ಬಾಗಿಲಿಗೆ ಬಂದು ನಿಂತಿದೆ. ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ಮೂಲಕ ಮೆಚ್ಚುಗೆ ಪಡೆದುಕೊಂಡಿದ್ದ ಆದ್ಯಂತ ಚಿತ್ರ ಒಂದು ಮಿಲಿಯನ್ ವೀಕ್ಷಣೆ ಪಡೆದುಕೊಂಡು ಭರವಸೆ ಮೂಡಿಸಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ಬಿಡುಗಡೆ ಹೊಸ್ತಿಲಲ್ಲಿರೋ ಚಿತ್ರತಂಡ ಕುತೂಹಲಕಾರಿ ಟೀಸರ್ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ. ಇದೇ ತಿಂಗಳು ಟೀಸರ್ ಪ್ರೇಕ್ಷಕರ ಮುಂದೆ ಬರಲಿದೆ.
ಪುನೀತ್ ಶರ್ಮಾ ಚಿತ್ರದ ಸೂತ್ರದಾರ. ಹಲವು ಸಿನಿಮಾಗಳಲ್ಲಿ ದುಡಿದ ಅನುಭವವನ್ನು ತಮ್ಮ ಮೊದಲ ಚಿತ್ರದ ಮೂಲಕ ಹೊರತರಲು ಸಿದ್ಧವಾಗಿರೋ ಪುನೀತ್ ಶರ್ಮಾ ಕಥೆ ಬರೆದು ತಾವೇ ನಿರ್ದೇಶನ ಮಾಡಿದ್ದಾರೆ. ಆದ್ಯಂತ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾವಾಗಿದ್ದು, ಹಲವು ಟ್ವಿಸ್ಟ್ ಟರ್ನ್ ಗಳು ಚಿತ್ರದಲ್ಲಿದ್ದು ಸಿನಿರಸಿಕರಿಗೆ ಫುಲ್ ಮನೋರಂಜನೆ ನೀಡೋದರ ಜೊತೆ ರೋಚಕ ಅನುಭವ ನೀಡೋದು ಪಕ್ಕಾ ಅಂತಿದೆ ಚಿತ್ರತಂಡ. ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ.
ಲೇಖನಾ ಕ್ರಿಯೇಷನ್ಸ್ ಹಾಗೂ ಆರ್.ಆರ್ ಮೂವೀಸ್ ಬ್ಯಾನರ್ ನಡಿ ರಮೇಶ್ ಬಾಬು ಆದ್ಯಂತ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಬೆಂಗಳೂರು, ಸಕಲೇಶಪುರ ಮತ್ತು ಕಳಸಾ ಸುತ್ತಾಮುತ್ತ ಸುಂದರ ಲೊಕೇಷನ್ ಗಳಲ್ಲಿ ಚಿತ್ರವನ್ನು ಸೆರೆಹಿಡಿಯಲಾಗಿದ್ದು, ನವೀನ್ ಕುಮಾರ್ ಚೆಲ್ಲಾ ಸಿನಿಮಾಟೋಗ್ರಫಿ, ಕಿಲ್ಲಿಂಗ್ ವೀರಪ್ಪನ್ ಖ್ಯಾತಿಯ ಸಂಗೀತ ನಿರ್ದೇಶಕ ಸ್ಯಾಂಡಿ ಅಡ್ಹಂಕೀ ಮ್ಯೂಸಿಕ್ ಮ್ಯಾಜಿಕ್ ಆದ್ಯಂತ ಚಿತ್ರಕ್ಕಿದೆ. ರಮೇಶ್ ಭಟ್, ಶ್ರೀನಿವಾಸ್, ವಸಿಷ್ಠ, ಪ್ರಶಾಂತ್ ನಟನಾ, ನಿಖಿಲ್ ಚಿತ್ರದ ತಾರಾ ಬಳಗದಲ್ಲಿದ್ದಾರೆ. ಸಾಕಷ್ಟು ಕುತೂಹಲ ಕ್ರಿಯೇಟ್ ಮಾಡಿರೋ ಈ ಚಿತ್ರದ ಟೀಸರ್ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ.
ನಟಿ ಹಾಗೂ ಪ್ರಾಣಿಪ್ರಿಯೆ ಸಂಯುಕ್ತಾ ಹೊರನಾಡು ಲಾಕ್‍ಡೌನ್ ಅವಧಿಯಲ್ಲಿ ಕಳೆದ ಸಮಯ ಹಾಗೂ ಸುನಾಮಿ ಹಾಡಿನ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
• ಹೇಗಿದ್ದೀರಾ? ಲಾಕ್‍ಡೌನ್ ಅವಧಿಯಲ್ಲಿ ತುಂಬಾ ಬ್ಯುಸಿಯಾಗಿದ್ರಿ ನೀವು?
ನಾನು ಚೆನ್ನಾಗಿದ್ದೀನಿ. ಲಾಕ್‍ಡೌನ್ ಅವಧಿಯಲ್ಲಿ ಹೆಚ್ಚಾಗಿ ಸಾಮಾಜಿಕ ಕಾರ್ಯಗಳಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೆ. ಜೊತೆಗೆ ಸರ್ಕಾರದ ಕಾರ್ಯಕ್ರಮಗಳಲ್ಲಿ ಕೈ ಜೋಡಿಸಿದ್ದರಿಂದ ಆ ಕೆಲಸಗಳಲ್ಲಿ ಬ್ಯುಸಿಯಾಗಿದ್ದೆ. ಜನರಲ್ಲಿ ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೆ.
• ಸುನಾಮಿ ವಿಡಿಯೋ ಸಾಂಗ್ ತುಂಬಾ ವೈರಲ್ ಆಗಿದೆ. ಎಲ್ಲರೂ ಇಷ್ಟಪಡುತ್ತಿದ್ದಾರೆ?
ಹೌದು, ಈ ಹಾಡಿಗೆ ತುಂಬಾ ಒಳ್ಳೆಯ ಪ್ರತಿಕ್ರಿಯೆ ಸಿಕ್ತಿದೆ. ಇದನ್ನು ಮಾಡಿರೋ ಉದ್ದೇಶ ಬೀದಿನಾಯಿಗಳ ಬಗ್ಗೆ ಜಾಗೃತಿ ಮೂಡಿಸಲು. ಬೀದಿನಾಯಿಗಳನ್ನ ಅಡಾಪ್ಟ್ ಮಾಡಿಕೊಳ್ಳಲಿ ಎಂಬ ಉದ್ದೇಶದಿಂದ. ಇದರ ಕ್ರೆಡಿಟ್ ರಘು ದೀಕ್ಷಿತ್ ಅವರಿಗೆ ಸೇರಬೇಕು. ಅವರೇ ಈ ಹಾಡನ್ನು ಬರೆದು, ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಡ್ಯುಯೇಟ್ ಕಾನ್ಸೆಪ್ಟ್ ನಲ್ಲಿ ಪ್ರಾಣಿಗಳ ಮೇಲಿನ ಪ್ರೀತಿಯನ್ನು ತೋರಿಸೋ ಒಂದು ಹೊಸ ಪ್ರಯತ್ನ. ನಾವು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ ಇದನ್ನು ಮೆಚ್ಚಿಕೊಂಡಿದ್ದಾರೆ. ಇದರಲ್ಲಿ ನಾನು ಮೊದಲ ಬಾರಿ ಹಿನ್ನೆಲೆ ಗಾಯಕಿಯಾಗಿ ಹಾಡಿದ್ದೀನಿ ಅದೊಂದು ಖುಷಿ ಇದೆ ನನಗೆ.
• ಲಾಕ್‍ಡೌನ್ ಸಮಯದಲ್ಲಿ ಬಿಡುವಿನ ವೇಳೆ ಹೊಸ ಹವ್ಯಾಸ ಏನಾದ್ರು ಬೆಳೆಸಿಕೊಂಡ್ರಾ?
ಹೌದು, ನಂಗೆ ನಿಜಕ್ಕೂ ಖುಷಿ ಆಗುತ್ತೆ ಇದನ್ನ ಹೇಳೋದಕ್ಕೆ. ನನಗೆ ಸಂಗೀತ ಕಲಿಬೇಕು ಅಂತ ಆಸಕ್ತಿ ಇತ್ತು. ರಂಗಭೂಮಿ ಕಲಾವಿದರಿಗೆ ಹಾಡೋಕು ಬರಬೇಕು ತುಂಬಾ ಮುಖ್ಯ ಅದು. ನಾನು ರಂಗಭೂಮಿಯಲ್ಲಿ ನಾಟಕಕ್ಕೋಸ್ಕರ ಕಲಿತಿದ್ದೆ ಆದ್ರೆ ಅಷ್ಟಾಗಿ ಸಂಗೀತದ ಬಗ್ಗೆ ಗೊತ್ತಿರಲಿಲ್ಲ. ಚಿಕ್ಕಂದಿನಲ್ಲೂ ಅಭ್ಯಾಸ ಮಾಡಿರಲಿಲ್ಲ. ಲಾಕ್‍ಡೌನ್ ಅವಧಿಯಲ್ಲಿ ಆ ಆಸೆಯನ್ನು ಈಡೇರಿಸಿಕೊಂಡೆ. ಪೂರ್ಣ ಪ್ರಮಾಣದಲ್ಲಿ ಕಲಿತಿಲ್ಲವಾದ್ರು ಸಂಗೀತದ ಬಗ್ಗೆ ಒಂದಿಷ್ಟು ಅರಿತುಕೊಂಡಿದ್ದೇನೆ, ಪ್ರತಿನಿತ್ಯ ಪ್ರಾಕ್ಟೀಸ್ ಕೂಡ ಮಾಡ್ತಿದ್ದೀನಿ. ಅದನ್ನು ಹೊರತು ಪಡಿಸಿ ಒಂದು ಡಾಕ್ಯುಮೆಂಟರಿ ಮಾಡ್ದೆ. ಬಿಡುವು ಸಿಕ್ಕಾಗ ಪೇಟಿಂಗ್ ಮಾಡ್ತಿದ್ದೆ.
• ನಿಮ್ಮ ಸೋಶಿಯಲ್ ಮೀಡಿಯಾ ಅಕೌಂಟ್‍ನಲ್ಲಿ ಎಲ್ಲಿ ನೋಡಿದ್ರು ನಿಮಗಿಂತ ಪ್ರಾಣಿಗಳ ಫೋಟೋನೇ ಇರುತ್ತೆ?
ನಿಜ, ನಾನು ಪ್ರಾಣಿ ಪ್ರಿಯೆ. ಹಲವು ಸಂಸ್ಥೆಗಳ ಅಂಬಾಸಿಡರ್ ಕೂಡ ಹೌದು, ಹಲವಾರು ರೆಸ್ಕ್ಯೂ ಸಂಸ್ಥೆಗಳ ಜೊತೆ ಕೈ ಜೋಡಿಸಿದ್ದೇನೆ. ಸೋಶಿಯಲ್ ಮೀಡಿಯಾವನ್ನು ನಮಗೋಸ್ಕರ ಬಳಸಿಕೊಳ್ಳೋದ್ರ ಜೊತೆಗೆ ಜಾಗೃತಿ ಮೂಡಿಸಲು ಬಳಸೋದು ಒಳ್ಳೆಯದು ಅನ್ನೋದು ನನ್ನ ಅನಿಸಿಕೆ. ಅದಕ್ಕಾಗಿ ನಾನು ಹೆಚ್ಚಾಗಿ ಪ್ರಾಣಿಗಳ ಪೋಟೋ ಪೋಸ್ಟ್ ಮಾಡುತ್ತೇನೆ. ಅದನ್ನು ನೋಡಿದವ್ರಲ್ಲಿ ಒಬ್ಬರಾದ್ರು ಪ್ರಾಣಿಗಳನ್ನು ಅಡಾಪ್ಟ್ ಮಾಡಿಕೊಳ್ಳಲೋ ಅಥವಾ ಅವುಗಳ ಸಹಾಯಕ್ಕೆ ಕೈ ಚಾಚಿದ್ರೆ ಸಹಾಯವಾಗುತ್ತೆ ಅನ್ನೋದು ನನ್ನ ಉದ್ದೇಶ.
• ನಿಮ್ಮ ಪ್ರಾಣಿ ಪ್ರೀತಿ ಬಗ್ಗೆ ಎಲ್ಲರಿಗೂ ಗೊತ್ತಿದೆ ಆದರೂ ಒಂದು ಕುತೂಹಲ ಇದೆ, ಪ್ರಾಣಿಗಳನ್ನು ಕಂಡರೆ ಯಾಕಿಷ್ಟು ಪ್ರೀತಿ?
ಚಿಕ್ಕವಯಸ್ಸಿನಿಂದಲೂ ಪ್ರಾಣಿಗಳು ಅಂದ್ರೆ ಪಂಚಪ್ರಾಣ. ನಾನು ಚಿಕ್ಕವಳಿದ್ದಾಗ ನಮ್ಮ ಮನೆ ಮುಂದೆ ಮೋರಿಲಿ ಒಂದು ನಾಯಿ ಇತ್ತು. ಅದರ ಜೊತೆ ನಾನು ಕಾಲ ಕಳೆಯುತ್ತಿದ್ದೆ, ಅದಕ್ಕೆ ತಿನ್ನೋಕೆ ಕೊಡ್ತಾ ಇದ್ದೆ. ಅಲ್ಲಿಂದ ಶುರುವಾದ ಪ್ರೀತಿ ಇವತ್ತು ಬೀದಿನಾಯಿಗಳ ಬಗ್ಗೆ ಕಾಳಜಿ ಹಾಗೂ ಪ್ರಾಣಿಗಳ ಬಗ್ಗೆ ಜಾಗೃತಿ ಮೂಡಿಸೋವರೆಗೆ ಬಂದಿದೆ. ಪ್ರಾಣಿಗಳಿಗೆ ನೀವು ಪ್ರೀತಿ ತೋರಿಸಿದ್ರೆ ಅವು ನಿಮಗೆ ಪ್ರೀತಿ ತೋರಿಸುತ್ತೆ. ಅವುಗಳು ತೋರಿಸೋ ಪ್ರೀತಿಯಲ್ಲಿ ಸ್ವಾರ್ಥ ಇರೋದಿಲ್ಲ ನಿಷ್ಕಲ್ಮಶ ಪ್ರೀತಿ ಅವುಗಳದ್ದು. ನಾನು ಯಾವ ಪ್ರಾಣಿನಾದ್ರು ಮುಟ್ಟೋಕೆ ರೆಡಿಯಿದ್ದೀನಿ. ಆ ಪ್ರಾಣಿ ಕಂಡ್ರೆ ಭಯ ಈ ಪ್ರಾಣಿ ಕಂಡ್ರೆ ಭಯ ಆ ರೀತಿ ಏನು ಇಲ್ಲ. ನನ್ನ ಪ್ರಕಾರ ಎಲ್ಲ ಪ್ರಾಣಿಗಳು ಒಂದೇ. ನೀವು ಎಷ್ಟು ಪ್ರೀತಿ, ರಕ್ಷಣೆ ಕೊಡ್ತೀರೋ ಅವು ನಮ್ಮನ್ನು ಅಷ್ಟೇ ಪ್ರೀತಿ ಮಾಡುತ್ತವೆ.ನಾನು ಅವುಗಳಲ್ಲಿ ದೇವರನ್ನು ಕಾಣುತ್ತೇನೆ. ನಿಜವಾಗ್ಲೂ ಹೇಳಬೇಕು ಅಂದ್ರೆ ನನಗೆ ಭಯ ಆಗೋದೇ ಮನುಷ್ಯರನ್ನ ಕಂಡ್ರೆ.
• ಲಾಕ್‍ಡೌನ್ ಅವಧಿಯಲ್ಲಿ ನಿಮ್ಮ ಕೆಲಸ ಶ್ಲಾಘನೀಯ. ಸಾವಿರಾರು ಬೀದಿನಾಯಿಗಳಿಗೆ ಆಹಾರ ನೀಡ್ತಿದ್ರಿ, ಜಾಗೃತಿ ಮೂಡಿಸಿದ್ರಿ. ನಿಮ್ಮ ಕೆಲಸ ಮೆಚ್ಚುಗೆ ಪಡೆದುಕೊಂಡಿತ್ತು.
ಹೌದು, ಲಾಕ್‍ಡೌನ್ ನಿಂದ ಸಾವಿರಾರು ಜನರ ಬದುಕು ಬೀದಿಗೆ ಬಂತು. ಮನುಷ್ಯರಿಗೇ ಊಟ ಸಿಗ್ತಾ ಇರ್ಲಿಲ್ಲ ಇನ್ನು ಬೀದಿ ನಾಯಿಗಳ ಪಾಡೇನು ಅಲ್ವಾ!? ಅವುಗಳ ಕಷ್ಟ ನೋಡೋಕಾಗದೇ ಬೀದಿ ನಾಯಿಗಳಿಗೆ ಊಟ ನೀಡಲು ಶುರು ಮಾಡಿದೆ. ಇದೆಲ್ಲದರ ಜೊತೆಗೆ ನಾಯಿಗಳಿಂದ ಕೊರೊನಾ ಹರಡುತ್ತೆ ಎಂದು ಸುಳ್ಳು ಸುದ್ಧಿ ಹರಡಿ ಬೆಂಗಳೂರಲ್ಲಿ ಎಷ್ಟೋ ಜನ ತಮ್ಮ ನಾಯಿಗಳನ್ನ ಬೀದಿ ಪಾಲು ಮಾಡಿದ್ರು. ಇದು ನನಗೆ ತುಂಬಾ ನೋವು ಕೊಡ್ತು. ಇದಕ್ಕೆಲ್ಲ ಏನಾದ್ರು ಮಾಡಲೇಬೇಕು ಎಂದು ‘ಕೇರ್’ ಎಂಬ ಸಂಸ್ಥೆ ಜೊತೆ ಸೇರಿ ಜಾಗೃತಿ ಮೂಡಿಸಲು ಆರಂಭಿಸಿದೆ. ಸಾವಿರಾರು ನಾಯಿಗಳು ಇದ್ವು ನನ್ನೊಬ್ಬಳಿಂದ ಇವುಗಳಿಗೆ ಆಹಾರ ಪೂರೈಕೆ ಮಾಡೋಕೆ ಸಾದ್ಯವಿಲ್ಲ ಎಂದು ಗೊತ್ತಾದಾಗ ನಾನು ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಿದೆ ಜೊತೆಗೆ ಫಂಡ್ ರೈಸ್‍ಗೆ ಮುಂದಾದೆ. ನನ್ನ ಈ ಕೆಲಸಕ್ಕೆ ಉತ್ತಮ ಪ್ರತಿಕ್ರಿಯೇ ಸಿಕ್ತು. ಸುಮಾರು 150 ಜನರು ವಾಟ್ಸಾಪ್ ಗ್ರೂಪ್‍ನಲ್ಲಿ ಕೈ ಜೋಡಿಸಿದ್ರು. ಹಲವಾರು ಜನರು ಫಂಡ್ ನೀಡಲು ಮುಂದಾದ್ರು. ಇವರೆಲ್ಲರ ಸಹಕಾರದಿಂದ ಪ್ರತಿನಿತ್ಯ 4000 ಬೀದಿನಾಯಿಗಳಿಗೆ ಲಾಕ್‍ಡೌನ್ ಅವಧಿಯಲ್ಲಿ ಆಹಾರ ನೀಡಲು ಸಾಧ್ಯವಾಯ್ತು. ಅದನ್ನು ಅಲ್ಲಿಗೆ ಕೈ ಬಿಡಲಿಲ್ಲ, ಈಗಲೂ ಮುಂದುವರೆಸಿಕೊಂಡು ಹೋಗುತ್ತಿದ್ದೇನೆ.
• ನಿಮ್ಮ ಸೋಶೀಯಲ್ ಸರ್ವಿಸ್ ಹಾಗೂ ಪ್ರಾಣಿಗಳ ಮೇಲಿನ ಕಳಕಳಿಗೆ ತುಂಬಾ ಮೆಚ್ಚುಗೆ ಸಿಕ್ತಿದೆ ಎಷ್ಟೋ ಜನಕ್ಕೆ ನೀವು ಪ್ರೇರಣೆ ಕೂಡ ಆಗಿದ್ದೀರ?
ನನ್ನಿಂದ ನಾಲ್ಕು ಜನ ಬದಲಾಗ್ತಾರೆ ಅಂದ್ರೆ ಅದಕ್ಕಿಂತ ದೊಡ್ಡ ಖುಷಿ ಮತ್ತೊಂದಿಲ್ಲ. ಎಲ್ಲರೂ ಮೆಚ್ಚುಗೆ, ಪ್ರೀತಿ ವ್ಯಕ್ತಪಡಿಸೋದ್ರಿಂದ ಇನ್ನೊಂದಿಷ್ಟು ಕೆಲಸ ಮಾಡಲು ಸಹಾಯ ಆಗುತ್ತೆ. ಇನ್ನು ಕೆಲವರು ಕೆಲವು ಕಾರ್ಯಕ್ರಮಗಳಿಗೆ ನನ್ನ ಜೊತೆ ಕೈ ಜೋಡಿಸುತ್ತಾರೆ. ನನ್ನ ಕೆಲಸ ನನಗೆ ತುಂಬಾ ತೃಪ್ತಿ ನೀಡಿದೆ. ನನ್ನ ಕೆಲಸ ನನಗೆ ಪ್ರೇರಣೆ ಮತ್ತು ಸ್ಪೂರ್ತಿ ನೀಡಿದೆ.
• ಹಲವಾರು ಸಂಘ, ಸಂಸ್ಥೆಗಳ ರಾಯಭಾರಿ ಕೂಡ ಆಗಿ ಕಾರ್ಯ ನಿರ್ವಹಿಸುತ್ತಿದ್ದೀರ ಎಷ್ಟು ಖುಷಿ ಅನಿಸುತ್ತೆ?
ನಾನು ಸಾಮಾಜಿಕ ಸೇವೆಯನ್ನ ನನ್ನ ಖುಷಿಗೆ ಮಾಡುತ್ತಿದ್ದೇನೆ. ನನ್ನ ಕೆಲಸವನ್ನು ಗುರುತಿಸಿ ದೊಡ್ಡ ಜವಾಬ್ದಾರಿಯನ್ನು ನನಗೆ ಹಲವು ಸಂಸ್ಥೆಗಳು ನೀಡಿರೋದು ಸಂತಸ ತಂದಿದೆ. ಪೀಪಲ್ ಫಾರ್ ಅನಿಮಲ್ ಫೌಡೇಷನ್ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದೆ. ಈ ಸಂಸ್ಥೆ ನಗರದಲ್ಲಿ ತೊಂದರೆಗೆ ಒಳಗಾಗೋ ಸಾವಿರಾರು ಪ್ರಾಣಿಗಳ ರಕ್ಷಣೆ ಮಾಡುತ್ತಾ ಬಂದಿದೆ. ಈ ಸಂಸ್ಥೆಯ ಬೆಂಗಳೂರು ರಾಯಭಾರಿಯಾಗಿ ನನನ್ನು ನೇಮಿಸಿದ್ದಾರೆ. ಇದಲ್ಲದೆ ಯುನೆಸೆಫ್‍ನವರ ಮೈನರ್ ಪ್ರಾಜೆಕ್ಟ್, ಚೈಲ್ಡ್ ವಯೋಲೆನ್ಸ್ ರಾಯಭಾರಿಯಾಗಿಯೂ ಕಾರ್ಯ ನಿರ್ವಹಿಸೋ ಅವಕಾಶ ನನಗೆ ಸಿಕ್ಕಿದೆ. ಕೇರ್ ಎಂಬ ಸಂಸ್ಥೆ ಸಾವಿರಾರು ಬೀದಿನಾಯಿಗಳ ರಕ್ಷಣೆ ಮಾಡುತ್ತಿದೆ ಜೊತೆಗೆ ಅವುಗಳಿಗೆ ಆಹಾರ ಒದಗಿಸುತ್ತಿದೆ ಆ ಸಂಸ್ಥೆಯ ರಾಯಭಾರಿಯಾಗಿದ್ದೇನೆ. ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಳ್ಳಲು ಅರಿವು ಮೂಡಿಸಲು ವೇದಿಕೆ ಸಿಗುತ್ತಿರೋದು ತುಂಬಾ ಹೆಮ್ಮೆ ಇದೆ.
• ಏಳು ವರ್ಷದ ಸಿನಿಮಾ ಜರ್ನಿ ಎಷ್ಟು ಖುಷಿ ಕೊಟ್ಟಿದೆ?
ನಾನು ಚಿತ್ರರಂಗಕ್ಕೆ ಬಂದು ಏಳು ವರ್ಷ ಆಯ್ತು, ನಂಗೆ ಸಕ್ಸಸ್, ಸೋಲು ಇದ್ಯಾವುದರ ಯೋಚನೆ ಇಲ್ಲ. ಯಾವ ಪಾತ್ರ ಖುಷಿ ಕೊಡುತ್ತೋ, ಯಾವ ಸಬ್ಜೆಕ್ಟ್ ಖುಷಿ ಕೊಡುತ್ತೋ ಆ ಪಾತ್ರಗಳನ್ನ ಒಪ್ಪಿಕೊಳ್ತೀನಿ. ಚಿತ್ರರಂಗದಲ್ಲಿ ಎಲ್ಲರೂ ನನ್ನ ಪ್ರೀತಿಯಿಂದ ಕಾಣುತ್ತಾರೆ. ಬೇರೆ ಚಿತ್ರರಂಗದಲ್ಲೂ ಒಳ್ಳೆಯ ಸಿನಿಮಾಗಳು ಸಿಕ್ತಿವೆ. ಏಳು ವರ್ಷದ ಜರ್ನಿ ಖುಷಿ ಕೊಟ್ಟಿದೆ. ನಾನು ತುಂಬಾ ಖುಷಿಯಾಗಿದ್ದೇನೆ. ನನಗೆ ಯಾವುದೇ ರಿಗ್ರೇಟ್ ಇಲ್ಲ.
• ಹೊಸ ಸಿನಿಮಾಗಳಿಗೆ ಸಹಿ ಮಾಡಿದ್ರಾ?
ಹೊಸ ಪ್ರಾಜೆಕ್ಟ್ ಗಳು ಬರ್ತಿವೆ. ಸದ್ಯಕ್ಕೆ ಕನ್ನಡದಲ್ಲಿ ಹೊಂದಿಸಿ ಬರೆಯಿರಿ, ಅರಿಷಡ್ವರ್ಗ, ಮೈಸೂರು ಮಸಾಲ ಚಿತ್ರಗಳಿವೆ. ತೆಲುಗಿನಲ್ಲಿ ಲಾಕ್ಡ್, ಗಾಡ್ ಸೀಕ್ವೆಲ್ 2 ವೆಬ್ ಸಿರೀಸ್ ಶೂಟಿಂಗ್ ಬಾಕಿ ಇದೆ. ತಮಿಳಿನಲ್ಲಿ ರೆಡ್ ರ್ಯಾಂಮ್ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಹೊಸ ಪ್ರಾಜೆಕ್ಟ್ ಬರ್ತಾ ಇವೆ ಇಲ್ಲಿವರೆಗೆ ಯಾವುದೂ ಒಪ್ಪಿಕೊಂಡಿಲ್ಲ.
• ಟ್ರಾವೆಲ್ಲಿಂಗ್ ನಿಮಗೆ ತುಂಬಾ ಇಷ್ಟ ಅನ್ಸುತ್ತೆ?
ಹೌದು, ನಂಗೆ ಟ್ರಾವೆಲ್ ಮಾಡೋದು ಅಂದ್ರೆ ತುಂಬಾ ಇಷ್ಟ. ಫ್ರೆಂಡ್ಸ್ ಫ್ಯಾಮಿಲಿ ಜೊತೆ ಟ್ರಾವೆಲ್ ಮಾಡೋದು, ಹೊಸ ಊರು ನೋಡೋದು ತುಂಬಾ ಖುಷಿ ಕೊಡುತ್ತೆ ನನಗೆ. ಟ್ರಾವೆಲ್‍ನಿಂದ ಮನಸ್ಸಿಗೂ ನೆಮ್ಮದಿ ಸಿಗುತ್ತೆ ಹೊಸದನ್ನು ಕಲಿಯೋಕೆ, ತಿಳಿದುಕೊಳ್ಳೋಕೆ ಸಾಧ್ಯವಾಗುತ್ತೆ. ಲಾಕ್‍ಡೌನ್ ಟೈಂನಲ್ಲಿ ಟ್ರಾವೆಲ್ ಮಾಡೋಕೆ ಆಗಲಿಲ್ಲ ಅದೊಂದು ಬೇಸರ ಇದೆ.
• ನಿಮ್ಮ ಫೇವರೇಟ್ ಫುಡ್ ಯಾವುದು?
ನಾನು ಪ್ಯೂರ್ ವೆಜಿಟೇರಿಯನ್, ವೆಜ್‍ನಲ್ಲಿ ಎಲ್ಲ ಬಗೆಯೂ ಇಷ್ಟವಾಗುತ್ತೆ. ಫೇವರೇಟ್ ಅಂದ್ರೆದಹಿ ಪೂರಿ, ಆಂಬೊಡೆ, ಸಾಬುದಾನ ಕಿಚಡಿ, ಮೊಸರು ಅಂದ್ರೆ ತುಂಬಾ ಇಷ್ಟ. ನಾನು ಕಾಫಿ ಪ್ರಿಯೆ, ಏನ್ ಬೇಕಾದ್ರು ಬಿಟ್ಟು ಇರ್ತೀನಿ ಆದ್ರೆ ಕಾಫಿ ಕುಡಿಯದೇ ಇರೋಕೆ ಆಗೋದೇ ಇಲ್ಲ. ಕಾಫಿ ಬೇಕೇ ಬೇಕು.
ಬೆಂಗಳೂರು: ಎಸ್‍ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ತೆಲುಗು, ಹಿಂದಿಯಲ್ಲಿ ರಾಷ್ಟ್ರಪ್ರಶಸ್ತಿ ಬಂದಿತ್ತು. ಆದರೆ ಅವರು ಪ್ರೀತಿಸುತ್ತಿದ್ದ ಕನ್ನಡ ಭಾಷೆಯ ಹಾಡಿಗೆ ರಾಷ್ಟ್ರಪ್ರಶಸ್ತಿ ಸಿಕ್ಕಿರಲಿಲ್ಲ. ಈ ವಿಚಾರದ ಬಗ್ಗೆ ಅವರಿಗೆ ಬಹಳ ಕೊರಗಿತ್ತು. ಆದರೆ ಕೊನೆಗೂ ಕನ್ನಡ ಚಿತ್ರಕ್ಕೂ ಅವರಿಗೆ ಪ್ರಶಸ್ತಿ ಸಿಕ್ಕಿತ್ತು. ಆದರೆ ಪ್ರಶಸ್ತಿ ಪಡೆಯಲು ಕಾರಣವಾಗಿದ್ದ ಹಾಡನ್ನು ಅಭ್ಯಾಸ ಮಾಡಲು ಅವರು ಎಷ್ಟು ಪ್ರಯತ್ನ ಪಟ್ಟಿದ್ದರು ಎಂಬುದನ್ನು ಸಂಗೀತಾ ನಿರ್ದೇಶಕ ಹಂಸಲೇಖ ಇಂದು ಹಂಚಿಕೊಂಡಿದ್ದಾರೆ.
ಎಸ್‍ಪಿಬಿ ಕರ್ನಾಟಕಕ್ಕೆ ನಮಸ್ಕಾರ. ಅವರ ಹಾಡು ಅವರ ಜಗತ್ತು ದೊಡ್ಡದು. ಹಿಮಾಲಯ ಯಾವತ್ತೂ ಕರಗಲ್ಲ ಅನ್ನುತ್ತಿದ್ವಿ. ಆದರೆ ಕರಗಿ ಬಿಡ್ತು. ನಾವೆಲ್ಲ ಭಾವನೆ ಮೂಲಕವೇ ಬದುಕಿದ್ದೀವಿ. ಎಸ್‍ಪಿಬಿ ಪ್ರತಿಭೆ ಕಂಡು ಹಿಡಿದಿದ್ದು ಜಾನಕಮ್ಮ. ಸಂಗೀತದ ಭಾವನಾತ್ಮಕತೆ ಎಲ್ಲರಿಗೂ ಬರಲ್ಲ. ಇಂದು ಅವರು ಬಾರದ ಲೋಕಕ್ಕೆ ಹೋಗಿದ್ದಾರೆ ಎಂಬ ಭಾವನೆಯೇ ನಂಬಲು ಆಗುತ್ತಿಲ್ಲ ಎಂದು ಹಂಸಲೇಖ ಭಾವುಕರಾದರು.
ನನಗೆ ತೆಲುಗು, ತಮಿಳು ಬೇರೆ ಎಲ್ಲಾ ಭಾಷೆಗಳಲ್ಲೂ ರಾಷ್ಟ್ರ ಪ್ರಶಸ್ತಿ ಬಂದಿದೆ. ಆದರೆ ನನ್ನ ಪ್ರೀತಿಯ ಭಾಷೆ ಕನ್ನಡಕ್ಕೆ ರಾಷ್ಟ್ರ ಪ್ರಶಸ್ತಿ ಸಿಗಲಿಲ್ಲ ಎಂದು ಯಾವಾಗಲೂ ಕೊರಗುತ್ತಿದ್ದರು. ನಮಗೆ ಅದರ ದಾರಿ ಏನು ಎಂಬುದು ಕೂಡ ಗೊತ್ತಿರಲಿಲ್ಲ. ಯೋಗ ಯೋಗ ಎಂಬಂತೆ ಚಿಂದೋಡಿ ಬಂಗಾರೇಶ್ ನಿರ್ದೇಶನದದಲ್ಲಿ ಚಿಂದೋಡಿ ಲೀಲ ಅವರು ‘ಗಾನಯೋಗಿ ಪಂಚಾಕ್ಷರಿ ಗವಾಯಿ’ ಎಂಬ ಸಿನಿಮಾ ತೆಗೆದರು. ಆ ಸಿನಿಮಾಗೆ ನನ್ನನ್ನು ಸಂಗೀತ ನಿರ್ದೇಶಕನಾಗಿ ಆಯ್ಕೆ ಮಾಡಿದರು. ಹಿಂದೂಸ್ತಾನಿ, ಕರ್ನಾಟಕ ಸಂಗೀತ ಸ್ವಲ್ಪ ಸ್ವಲ್ಪ ಗೊತ್ತಿದ್ದ ನಾನು ಆ ಸಿನಿಮಾಗೆ ಏನು ಮ್ಯೂಸಿಕ್ ಮಾಡಲು ಸಾಧ್ಯ. ನಾನು ಇದಕ್ಕೆ ಯೋಗ್ಯನಲ್ಲ ಎಂದು ಹೇಳಿದೆ. ಆಗ ಅವರು ಅಜ್ಜ ಮಾಡಿಸ್ಕೋತಾನೆ ಸುಮ್ಮನೆ ಹೋಗಿ ಮಾಡಿ ಅಂದರು. ನಾವು ಅಜ್ಜನ ಆಶೀರ್ವಾದಿಂದ ತೋಚಿದ್ದು ಮಾಡಿದ್ವಿ ಎಂದರು.
ಎಸ್‍ಪಿಬಿ ಅವರಿಗೆ ಹಾಡಿ ಎಂದು ಹೇಳಿದ್ವಿ. ಆಗ ಅವರು ನಿಮ್ಮ ತರ ನಾನು ಕೂಡ ಸ್ವಲ್ಪ ಕಲಿತ್ತಿದ್ದೇನೆ. ಹಿಂದೂಸ್ತಾನಿ ಸಂಗೀತ ನನಗೆ ಏನು ಗೊತ್ತು ಎಂದಿದ್ದರು. ಕೊನೆಗೆ ನೀವೇ ಹಾಡಬೇಕು ಎಂದು ಹಠ ಮಾಡಿದೆವು. ಆದರೆ ಅವರು ಆರು ತಿಂಗಳಾದರೂ ದಿನಾಂಕ ಕೊಟ್ಟಿರಲಿಲ್ಲ. ಬೇರೆಯವರ ಕೈಯಲ್ಲಿ ಹಾಡಿಸಲು ನಾನು ಮುಂದಾದೆ. ಆಗ ಬಂಗಾರೇಶ್ ಅವರು ಎಸ್‍ಪಿಬಿನೇ ಬೇಕು ಎಂದು ಹೇಳಿದರು. ಕೊನೆಗೆ ಅವರನ್ನು ಹುಡುಗಿಕೊಂಡು ಹೋದೆವು. ಅವರು ಕಾರಿನಲ್ಲಿ ಏರ್‌ಪೋರ್ಟ್‌ಗೆ ಕರೆದುಕೊಂಡು ಹೋಗುತ್ತಿದ್ದರು. ಆಗ ಒಂದು ಕ್ಯಾಸೆಟ್‍ನಲ್ಲಿ 50 ಲೂಪ್ ರೆಕಾರ್ಡ್ ಮಾಡಿಕೊಂಡ ಅಭ್ಯಾಸ ಮಾಡುತ್ತಿದ್ದರು ಎಂದರು.
ಕೊನೆಗೆ ಬಂದು ಹಾಡಿದರು. ಆದರೆ ನಮ್ಮನ್ನು ಒಳಗೆ ಬಿಟ್ಟಿಲ್ಲ. ನಾನು ಒಬ್ಬನೇ ಹಾಡುತ್ತೇನೆ, ನನಗೆ ತೋಚಿದ್ದು ಹಾಡುತ್ತೇನೆ ಎಂದು ಒಬ್ಬರೇ ಹೋಗಿ ಹಾಡಿದರು. ಬೆಳಗ್ಗೆಯಿಂದ ಸಂಜೆವರೆಗೂ ತಮ್ಮ ತಾಯಿಯನ್ನು ನೆನಪಿಸಿಕೊಂಡು ಹಾಡಿದರು. ಆ ಹಾಡು ಸೀದಾ ಹೃಷಿಕೇಶ್ ಮುಖರ್ಜಿಯ ಪ್ಯಾನಲ್‍ಗೆ ಹೋಗಿದೆ. ಅಲ್ಲಿ ರೆಹಮಾನ್ ಅವರ ಬಾಂಬೆ ಸಿನಿಮಾ ಮೊದಲ ಸ್ಥಾನದಲ್ಲಿದೆ. ಆಗ ಪಿ.ಬಿ.ಶ್ರೀನಿವಾಸ್ ಅವರು, ಕ್ಲಾಸಿಕಲ್ ಸಂಗೀತವನ್ನು ಕಾಪಾಡಬೇಕು ಎನ್ನುತೀರಿ, ಯಾರೋ ಹಳ್ಳಿಯಿಂದ ಮಾಡಿ ಕಳುಹಿಸಿದ್ದಾರೆ. ಅದಕ್ಕೆ ಗೌರವ ಕೊಡಿ ಎಂದು ವಾದ ಮಾಡಿದರು.
ಅಲ್ಲಿ ಬಾಂಬೆ ಸಿನಿಮಾಗೆ ವೋಟ್ ಜಾಸ್ತಿ ಬೀಳುತ್ತಿತ್ತು. ಕೊನೆಗೆ ಹೃಷಿಕೇಶ್ ಮುಖರ್ಜಿ ಏನು ಇಷ್ಟೊಂದು ಒತ್ತಾಯ ಮಾಡುತ್ತೀರಿ, ಯಾರು ಸಂಗೀತ ನಿರ್ದೇಶಕ, ಯಾರು ಹಾಡಿದ್ದು ಎಂದು ಕೇಳಿದರು. ಆಗ ಹಂಸಲೇಖ ಎಂದಾಗ ರಾಷ್ಟ್ರ ಪ್ರಶಸ್ತಿಗೆ ಆಯ್ಕೆ ಮಾಡಿದರು. ಕಡೆಗೂ ಕನ್ನಡಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಾಗ ಎಸ್‍ಪಿಬಿ ಖುಷಿ ಪಟ್ಟರು. ಅವರ ಕನಸು ನನಸಾಯಿತು ಎಂದು ಎಸ್‍ಪಿಬಿ ಜೊತೆಗಿನ ಹಳೆಯ ನೆನಪುಗಳ ಮೆಲುಕು ಹಾಕಿದರು.
ಎಸ್‍ಪಿಬಿ ಅವರು ಯೂನಿವರ್ಸ್ ಗೆ ಒಬ್ಬರು. ಎಲ್ಲ ಗಾಯಕರಲ್ಲೂ ಪ್ರತಿಭೆ ಇರುತ್ತದೆ. ಆದರೆ ಇವರು ಸುಂದರ ಗಾಯಕರು. ಪ್ರತಿಭೆಯನ್ನು ದೇವರು ಕೊಟ್ಟಿದ್ದು, ಆದರೆ ಜಾಣತನವಾಗಿ ಬುದ್ಧಿ ಖರ್ಚು ಮಾಡಿ ಬದುಕಬೇಕಿದೆ. ಲೌಕಿಕ ಜ್ಞಾನದಿಂದ ನಾನು ಬದುಕಿದ್ದೀನಿ. ನಿಮ್ಮ ವಿನಯ, ವಿಧೇಯತೆಯಿಂದ ಬದುಕಿ ಅನ್ನುತ್ತಿದ್ದರು. ಎಚ್ಚರಿಕೆಯಿಂದ ಬದುಕಿದ್ದರು. ನನ್ನ ಸಿನಿಮಾ ಸಂಗಾತಿ ರವಿಚಂದ್ರನ್, ಸಂಗೀತದ ಸಂಗಾತಿ ಎಸ್‍ಪಿಬಿ ಎಂದು ಅವರ ಜೊತೆಗಿನ ನಂಟಿನ ಬಗ್ಗೆ ಮೆಲಕು ಹಾಕಿದರು.
– ಚಿತ್ರರಂಗದ ದೊಡ್ಡವರ ಮಕ್ಕಳು ಡ್ರಗ್ಸ್ ದಂಧೆಯಲ್ಲಿ ಭಾಗಿ
– ಪೊಲೀಸರು ಕೇಳಿದರೆ ಹೆಸರನ್ನು ಬಹಿರಂಗ ಪಡಿಸುವೆ
ಬೆಂಗಳೂರು: ಮೂರನೇ ಪೀಳಿಗೆಯ ಮತ್ತು ಇತ್ತೀಚಿಗೆ ಬಂದ ನಟ-ನಟಿಯರು ಡ್ರಗ್ಸ್ ದಂಧೆಯಲ್ಲಿ ಇದ್ದಾರೆ ಎಂಬುದು ನನಗೆ ಗೊತ್ತಿತ್ತು. ಎಲ್ಲಿ ಎಲ್ಲಿ ಯಾವ ಯಾವ ತೋಟದಲ್ಲಿ, ರೆಸಾರ್ಟಿನಲ್ಲಿ ಮತ್ತು ರಾಜಕಾರಣಿಗಳ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದಾರೆ ಎಂಬುದು ಎಲ್ಲ ಗೊತ್ತಿತ್ತು ಎಂದು ನಟ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
ಇಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾವು, ಹಿರಿಯ ನಟರು ಮತ್ತು ನಿರ್ಮಾಪಕರ ಈ ವಿಚಾರದ ಬಗ್ಗೆ ಮಾತನಾಡಿ ಶಾಕ್ ಆಗಿದ್ದು ಉಂಟು. ಇದರ ಬಗ್ಗೆ ಹಿರಿಯ ನಟರಾದ ನನ್ನ ಸ್ನೇಹಿತರು ನೋವನ್ನು ವ್ಯಕ್ತಪಡಿಸಿದ್ದಾರೆ. ನಾನು ಇವತ್ತು ಮೀಡಿಯಾ ಮುಂದೆ ಬರಲು ಕಾರಣ ಸುದ್ದಿವಾಹಿನಿಯಲ್ಲಿ ಇಡೀ ಚಿತ್ರರಂಗವೇ ಡ್ರಗ್ಸ್ ಮಾಫಿಯಾದಲ್ಲಿ ಇದೆ ಎಂದು ತೋರಿಸುತ್ತಿರುವುದು ನನಗೆ ನೋವಾಗಿದೆ ಎಂದರು.
ಇದರಲ್ಲಿ ಪೂರ್ತಿ ಚಿತ್ರರಂಗವಿಲ್ಲ. ಇದರಲಿಲ್ಲ ಮೂರನೇ ಪೀಳಿಗೆಯ ನಟ-ನಟಿಯರು, ಹಿರಿಯ ನಿರ್ದೇಶಕರ ಮಕ್ಕಳು, ಹಿರಿಯ ನಟರ ಮಕ್ಕಳು ಮತ್ತು ರಾಜಕಾರಣಿಗಳ ಮಕ್ಕಳು ದುಡ್ಡು ಇರುವವರು ಭಾಗಿಯಾಗಿದ್ದಾರೆ. ದೊಡ್ಡ ದೊಡ್ಡ ಶ್ರೀಮಂತರು ಬೆನ್ಜ್, ಜಾಗ್ವಾರ್ ಕಾರಿನಲ್ಲಿ ಹುಡುಗಿಯರನ್ನು ಕರೆತಂದು ಈ ರೀತಿ ಮಾಡುತ್ತಿದ್ದಾರೆ. ಇಡೀ ಚಿತ್ರರಂಗ ಇದರಲ್ಲಿ ಭಾಗಿಯಾಗಿಲ್ಲ. ಇದನ್ನು ಮೀಡಿಯಾ ತೋರಿಸಬೇಕು. ಇತ್ತೀಚೆಗೆ ಖ್ಯಾತಿ ಪಡೆದ ನಟಿಯರು, ಈಗ ಬೆಳೆಯುತ್ತಿರುವ ಕೆಲ ನಟಿಯರು ಪಾರ್ಟಿಯಲ್ಲಿ ಮಾತ್ರವಲ್ಲದೇ ಶೂಟಿಂಗ್ ಸಮಯದಲ್ಲೂ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಿದರು.
ಬಾಲಿವುಡ್ ಮಾದರಿಯಲ್ಲಿ ಇಲ್ಲೂ ಕೂಡ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ. ಪ್ರಚಾರ, ಮೋಜು, ನಶೆಗಾಗಿ ಮತ್ತು ಸಿನಿಮಾ ಅವಕಾಶಕ್ಕಾಗಿ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ. ಇದರ ನಡುವೆ ಹನಿಟ್ಯ್ರಾಪ್ ಕೂಡ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಬೆಂಗಳೂರು ಕಮಿಷನರ್ ಕೂಡ ಇದರ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಕೆಲ ನಟಿಯರು ಏಕಾಏಕಿ ರಾತ್ರೋ ರಾತ್ರಿ ಜಾಗ್ವಾರ್ ಕಾರು, ಮನೆ ಎಲ್ಲವನ್ನು ಖರೀದಿಸಿದ್ದಾರೆ ಎಂದು ಹೇಳಿದ್ದರು. ಆದರೆ ಅವರ ಹೆಸರು ಹೇಳಲಿಲ್ಲ. ಅವರಿಗೆ ಅವರ ಹೆಸರು ಗೊತ್ತಿದೆ. ತನಿಖೆ ಆಗಿದೆ ಆದರೆ ಬಹಿರಂಗಪಡಿಸಿಲ್ಲ. ಇದರಲ್ಲಿ ರಾಜಕೀಯ ಒತ್ತಡವಿದೆ ಎಂದು ಲಂಕೇಶ್ ದೂರಿದ್ದಾರೆ.
ಒಂದು, ಎರಡು ಸಿನಿಮಾ ಮಾಡಿದ ನಟಿಯರು, ಹಿರಿಯ ನಟರ ಮಕ್ಕಳ ಜೊತೆ, ರಾಜಕಾರಣಿಗಳ ಮಕ್ಕಳ ಜೊತೆ ಪಾರ್ಟಿ ಮಾಡುತ್ತಾರೆ. ಇದರಿಂದ ಅವರ ಆರೋಗ್ಯಕ್ಕೂ ತೊಂದರೆಯಿದೆ. ಈ ಹಿಂದೆ ಕೂಡ ಒಬ್ಬ ನಟ ತೀರಿಹೋದರು ಅವರ ಮರಣೋತ್ತರ ಪರೀಕ್ಷೇಯೇ ಆಗಲಿಲ್ಲ. ಯಾಕೇ ಆಗಲಿಲ್ಲ? ರಾಜಕೀಯ ಒತ್ತಡವಿದೆಯೇ, ಪೊಲೀಸರಿಗೆ ಒತ್ತಡವಿತ್ತಾ? ಈ ಹಿಂದಿನಿಂದಲೂ ರೇವ್ ಪಾರ್ಟಿಗಳು ನಡೆಯುತ್ತಿವೆ. ಅದಕ್ಕೆ ತನಿಖೆಯಾಗಬೇಕು ಎಂದು ಹೇಳುತ್ತಿದ್ದೇನೆ ಎಂದರು.
ಇನ್ನೊಂದು ತಮಾಷೆಯ ವಿಚಾರವೆಂದರೆ, ಇದರಲ್ಲಿ ಭಾಗಿಯಾಗಿರುವವರೇ ಇಂದು ಈ ಬಗ್ಗೆ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಪತ್ರಕರ್ತರು ಅವರನ್ನೇ ಪ್ರಶ್ನೆ ಕೇಳುತ್ತಾರೆ. ತನಿಖೆಯಲ್ಲಿ ಪೊಲೀಸ್ ಅಧಿಕಾರಿಗಳ ಬಳಿ ಹೆಸರಿದೆ ಅವರು ಬಹಿರಂಗಪಡಿಸಬೇಕಿದೆ. ಚಿತ್ರರಂಗದ ಕೆಲ ಹಿರಿಯರಿಗೂ ಈ ವಿಚಾರ ಗೊತ್ತಿದೆ. ಆದರೆ ಅವರು ಯಾಕೆ ಮಾತಾನಾಡುತ್ತಿಲ್ಲ. ಇದರ ಬಗ್ಗೆ ನಾನು ಬಹಿರಂಗ ಪಡಿಸಲು ಬೆಂಬಲಬೇಕಿದೆ. ಪೊಲೀಸ್ ಇಲಾಖೆ ಇದರ ಬಗ್ಗೆ ನನ್ನ ಕೇಳಿದರೆ ನಾನು ಹೇಳುತ್ತೇನೆ ಎಂದು ಇಂದ್ರಜಿತ್ ತಿಳಿಸಿದ್ದಾರೆ.
ಕೊರೊನಾ ಕಾಟದಿಂದ ಚಿತ್ರಮಂದಿರಗಳು ಮುಚ್ಚಿಕೊಂಡಿರೋದರ ಬಗ್ಗೆ ಚಿತ್ರ ಪ್ರೇಮಿಗಳಲ್ಲೊಂದು ಕೊರಗಿದೆ. ಅದನ್ನು ಕೊಂಚ ನೀಗಿಸಿ ಮನೆಯೊಳಗೆ ಬಣ್ಣದ ಜಗತ್ತು ಕಣ್ತೆಯುವಂತೆ ಮಾಡುವಲ್ಲಿ ಅಮೆಜಾನ್ ಪ್ರೈಮ್‍ನ ಪಾತ್ರ ದೊಡ್ಡದು. ಈಗಾಗಲೇ ಕನ್ನಡದ ಒಂದಷ್ಟು ಸಿನಿಮಾಗಳು ಅಮೆಜಾನ್ ಪ್ರೈಮ್ ಮೂಲಕ ಲಾಕ್‍ಡೌನ್ ಕಾಲವನ್ನು ಸಹನೀಯವಾಗಿಸಿವೆ. ಅದರಲ್ಲಿಯೇ ಕೆಲ ಚಿತ್ರಗಳು ದೊಡ್ಡ ಮಟ್ಟದಲ್ಲಿ ಗೆದ್ದು ಬೀಗಿವೆ. ಅಂಥಾದ್ದೇ ಆವೇಗದೊಂದಿಗೆ ಇದೀಗ ಪ್ರವೀಣ್ ತೇಜ್ ನಾಯಕನಾಗಿ ನಟಿಸಿರೋ ‘ಸ್ಟ್ರೈಕರ್’ ಚಿತ್ರ ಅಮೆಜಾನ್ ಪ್ರೈಮ್‍ನಲ್ಲಿ ಆಟ ಶುರುವಿಟ್ಟಿದೆ.
ಇದು ಗರುಡಾದ್ರಿ ಫಿಲಮ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡು, ಪವನ್ ತ್ರಿವಿಕ್ರಮ್ ನಿರ್ದೇಶನ ಮಾಡಿದ್ದ ಚಿತ್ರ. ಪ್ರವೀಣ್ ತೇಜ್ ಮತ್ತು ಶಿಲ್ಪಾ ಮಂಜುನಾಥ್ ನಾಯಕ ನಾಯಕಿಯರಾಗಿ ನಟಿಸಿದ್ದ ಸ್ಟ್ರೈಕರ್ ಈ ವರ್ಷದ ಹಿಂದೆ ಬಿಡುಗಡೆಗೊಂಡಿತ್ತು. ಆರಂಭದಲ್ಲಿಯೇ ವಿಭಿನ್ನ ಕಥಾ ಹಂದರದ ಸುಳಿವಿನೊಂದಿಗೆ ಮಿರುಗುತ್ತಾ ಅದೇ ಆವೇಗದಲ್ಲಿ ತೆರೆ ಕಂಡಿತ್ತು. ಆ ಬಳಿಕ ಪ್ರೇಕ್ಷಕರೆಲ್ಲ ಈ ಸೈಕಾಲಾಜಿಕಲ್ ಕ್ರೈಂ ಥ್ರಿಲ್ಲರ್ ಕಥೆಗೆ ಮಾರು ಹೋಗಿದ್ದರು.
ನಿರ್ದೇಶಕ ಪವನ್ ತ್ರಿವಿಕ್ರಮ್ ಈ ಸಿನಿಮಾವನ್ನು ಕಟ್ಟಿ ಕೊಟ್ಟಿದ್ದ ರೀತಿಯೇ ಅಂಥಾದ್ದಿದೆ. ಕ್ರೈಂ ಥ್ರಿಲರ್ ಚಿತ್ರಗಳನ್ನು ಅನುಭವಿಸಿ ನೋಡೋ ದೊಡ್ಡ ಪ್ರೇಕ್ಷಕ ವರ್ಗವೇ ಕನ್ನಡದಲ್ಲಿದೆ. ಹಾಗಿದ್ದ ಮೇಲೆ ಹೊಸ ಪ್ರಯೋಗಗಳೊಂದಿಗೆ ರೂಪುಗೊಂಡಿದ್ದ ಸ್ಟ್ರೈಕರ್ ಅವರಿಗೆ ಇಷ್ಟವಾಗದಿರಲು ಸಾಧ್ಯವೇ? ಈ ಕಾರಣದಿಂದಲೇ ಸ್ಟ್ರೈಕರ್ ಗೆಲುವು ಕಂಡಿತ್ತು. ಇದೀಗ ಆ ಚಿತ್ರ ಕೊರೊನಾ ಕಾಲದಲ್ಲಿ ಮತ್ತಷ್ಟು ಜನರನ್ನು ತಲುಪಿಕೊಳ್ಳುವ ಇರಾದೆಯಿಂದ ಅಮೆಜಾನ್ ಪ್ರೈನಲ್ಲಿ ಕಾರುಬಾರು ಆರಂಭಿಸಿದೆ.
ಮೂವರು ಸ್ನೇಹಿತರು ಮತ್ತು ಅಲ್ಲಿ ನಡೆಯೋ ಒಂದು ಕೊಲೆಯ ಸುತ್ತಲಿನ ಕಥಾ ಹಂದರ ಈ ಸಿನಿಮಾದಲ್ಲಿದೆ. ಹಾಗಂತ ಅಷ್ಟಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಈ ಕಥೆಯ ಕೇಂದ್ರಕ್ಕೆ ಹಲವಾರು ಕವಲುಗಳಿದ್ದಾವೆ. ಅವೆಲ್ಲವನ್ನೂ ಅಪರಿಮಿತವಾದ ರೋಮಾಂಚಕ ಶೈಲಿಯಲ್ಲಿ, ಪಕ್ಕಾ ಕಮರ್ಶಿಯಲ್ ಹಾದಿಯಲ್ಲಿ ರೂಪಿಸಲಾಗಿದೆ. ಹೆಜ್ಜೆ ಹೆಜ್ಜೆಗೂ ಚೇತೋಹಾರಿ ಅನುಭವ ನೀಡುವ, ರೋಮಾಂಚಕ ಕ್ಷಣಗಳನ್ನ ಯಥೇಚ್ಛವಾಗಿ ಕೊಡಮಾಡುವ ಸ್ಟ್ರೈಕರ್ ನಿಮ್ಮೊಳಗಿನ ಏಕತಾನತೆಯನ್ನ ನೀಗಿಸುವಂತಾಗಲಿ.