Tag: kannada

  • ಬೀಟ್ ಪೊಲೀಸ್ ಚಿತ್ರದಲ್ಲಿ ಡಿಸಿಪಿಯಾದ ಭೀಮಾ ಖ್ಯಾತಿಯ ನಟಿ ಪ್ರಿಯಾ

    ಬೀಟ್ ಪೊಲೀಸ್ ಚಿತ್ರದಲ್ಲಿ ಡಿಸಿಪಿಯಾದ ಭೀಮಾ ಖ್ಯಾತಿಯ ನಟಿ ಪ್ರಿಯಾ

    ರ್.ಲಕ್ಷ್ಮಿ ನಾರಾಯಣಗೌಡ್ರು ನಿರ್ಮಿಸುತ್ತಿರುವ, ನೃತ್ಯ ಸಂಯೋಜಕ ಎಂ.ಆರ್. ಕಪಿಲ್ ಅವರ ನಿರ್ದೇಶನದ ಚಿತ್ರ ‘ಬೀಟ್ ಪೊಲೀಸ್’. ನೆಲಮಂಗಲ ಪೊಲೀಸ್ ಠಾಣೆಯ ಬಳಿ ಈ ಬೀಟ್ ಪೊಲೀಸ್ (Beat Police) ಚಿತ್ರದ ಮುಹೂರ್ತ ಸಮಾರಂಭ ನಡೆಯಿತು. ಸಾಹಸ ನಿರ್ದೇಶಕ ಕೌರವ ವೆಂಕಟೇಶ್ ಈ ಚಿತ್ರದ ನಾಯಕನಾಗಿ ನಟಿಸಲಿದ್ದು, ಭೀಮ ಚಿತ್ರದ ಜನಪ್ರಿಯ ನಟಿ ಪ್ರಿಯಾ (Priya) ಅವರು ಚಿತ್ರದಲ್ಲಿ ಪೊಲೀಸ್ (Police) ಅಧಿಕಾರಿಯಾಗಿ ನಟಿಸುತ್ತಿದ್ದಾರೆ, ನಟ ಡ್ರ್ಯಾಗನ್ ಮಂಜು ಕೂಡ ಚಿತ್ರದಲ್ಲಿ ಖಳನಾಯಕನ ಪಾತ್ರ ನಿರ್ವಹಿಸುತ್ತಿದ್ದಾರೆ.

    ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ಆರ್. ಲಕ್ಷ್ಮಿನಾರಾಯಣ ಗೌಡ್ರು, ನಮ್ಮ ಆರ್ಯ ಫಿಲ್ಮ್‌ನ 4ನೇ ಚಿತ್ರವಿದು, ನೈಜ ಘಟನೆಯ ಸುತ್ತ ನಡೆವ ಕಥಾಹಂದರ ಚಿತ್ರದಲ್ಲಿದ್ದು, ಪ್ರಿಯಾ, ಡ್ರ್ಯಾಗನ್ ಮಂಜು, ಸುಚೇಂದ್ರ ಪ್ರಸಾದ್, ಪಾಪ ಪಾಂಡು ಚಿದಾನಂದ್ ಸೇರಿದಂತೆ ಅನೇಕ ಪ್ರತಿಭಾವಂತ ಕಲಾವಿದರು ಚಿತ್ರದಲ್ಲಿದ್ದಾರೆ. 25 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದ್ದು, ನಾಲ್ಕು ಹಾಡು, ನಾಲ್ಕು ಫೈಟ್ಸ್ ನಮ್ಮ ಚಿತ್ರದಲ್ಲಿದೆ. ಈಗಿನ ಕಾಲದ ಎಜುಕೇಶನ್ ಬಗ್ಗೆ ಒಂದು ಗಟ್ಟಿ ಕಥೆಯನ್ನ ಈ ಚಿತ್ರದ ಮೂಲಕ ಹೇಳಲಾಗುತ್ತಿದ್ದು, ಜನರಿಗೆ ಎಚ್ಚರಿಕೆ ಕೊಡುವ ಪ್ರಯತ್ನ ಮಾಡಿದ್ದೇವೆ. ಸಮಾಜದಲ್ಲಿ ನಾವು ಹೇಗೆ ಎಚ್ಚರಿಕೆಯಿಂದ ಇರಬೇಕು, ಅಂತ ಹೇಳೋ ಪ್ರಯತ್ನ ಮಾಡಿದ್ದೇವೆ ಎಂದು ಹೇಳಿದರು.

    ನಾಯಕನಟ ಕೌರವ ವೆಂಕಟೇಶ್ ಮಾತನಾಡಿ, ನಾನು ಗೂರ್ಖಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಈ ಚಿತ್ರದ ಕಥೆ ನಿರ್ಮಾಪಕರದ್ದು. ಅದಕ್ಕೆ ಚಿತ್ರರೂಪ ಕೊಟ್ಟಿದ್ದೇವೆ. ನಿರ್ಮಾಪಕರೂ ಸಹ ಖಳನಾಯನಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಿದ್ದೇವೆ. ಮುಂಜಾನೆ ಮಂಜು ಅವರ ಛಾಯಾಗ್ರಹಣ, ರಾಜೇಶ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ ಎಂದರು. ಇದನ್ನೂ ಓದಿ:  ಒಂದು ತಿಂಗಳಿಗೆ ನಿವೇದಿತಾ ಖರ್ಚು ಕೇಳಿದ್ರೆ ಶಾಕ್ ಆಗ್ತೀರಿ!

    ಬೀಟ್ ಪೋಲೀಸ್ ನೈಜ ಘಟನೆಗಳ ಸುತ್ತ ನಡೆಯುವ ಕಥೆ. ಈಗಿನ ಶಿಕ್ಷಣ ಸ್ಕ್ಯಾಮ್ ಬಗ್ಗೆ ಚಿತ್ರದಲ್ಲಿ ಹೇಳಿದ್ದೇವೆ. ಪ್ರತಿಭಾವಂತ ವಿದ್ಯಾರ್ಥಿಗಳಗೆ ಹೇಗೆ ವಂಚನೆಯಾಗುತ್ತಿದೆ. ಅದರ ಪರಿಣಾಮಗಳೇನು ಎಂಬುದು ನಮ್ಮ ಚಿತ್ರದ ಕಥಾವಸ್ತು. ಇಂದಿನಿಂದ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಿ, 25 ದಿನದಲ್ಲಿ ಶೂಟಿಂಗ್ ಮುಗಿಸುತ್ತೇವೆ ಎಂದರು ನಿರ್ದೇಶಕ ಕಪಿಲ್.

    ನಟ ಡ್ರಾಗನ್ ಮಂಜು ಮಾತನಾಡಿ, ಇದು ನನ್ನ ಹತ್ತನೇ ಚಿತ್ರ. ಎಂದಿನಂತೆ ಖಳನ ಪಾತ್ರವಾದರೂ, ಒಂದು ಹಂತದಲ್ಲಿ ಆತ ಚೇಂಜ್ ಆಗಬಹುದು ಎಂದು ನನ್ನ ಪಾತ್ರದ ಮೂಲಕ ತೋರಿಸಿದ್ದಾರೆ. ನಾಯಕಿ ಪ್ರಿಯಾ ಮಾತನಾಡುತ್ತ ಚಿತ್ರದಲ್ಲಿ ನನ್ನದು ಭಾರ್ಗವಿ ಎಂಬ ಡಿಸಿಪಿ ಪಾತ್ರ. ನಿರ್ಮಾಪಕರು ಈ ಹಿಂದೆಯೇ ನನಗೆ ಕೇಳಿದ್ದರು ಆಗಿರಲಿಲ್ಲ. ಅಲ್ಲದೆ ಈ ಹಿಂದೆ ಕೌರವ ವೆಂಕಟೇಶ್ ಅವರ ಜತೆ ಕೆಲಸ ಮಾಡಿದ್ದೇನೆ ಎಂದು ಹೇಳಿದರು.

  • ನೀವು ಬೆಂಗಳೂರಿಗೆ ಹೋದರೆ, ಕನ್ನಡ ಕಲಿಯಿರಿ: ಝೋಹೊ ಸಂಸ್ಥಾಪಕ ಶ್ರೀಧರ್ ವೆಂಬು

    ನೀವು ಬೆಂಗಳೂರಿಗೆ ಹೋದರೆ, ಕನ್ನಡ ಕಲಿಯಿರಿ: ಝೋಹೊ ಸಂಸ್ಥಾಪಕ ಶ್ರೀಧರ್ ವೆಂಬು

    ಚೆನ್ನೈ: ನೀವು ಬೆಂಗಳೂರಿಗೆ (Bengaluru) ಹೋದರೆ, ಕನ್ನಡ (Kannada) ಕಲಿಯಿರಿ. ಮುಂಬೈಗೆ (Mumbai) ಹೋದರೆ, ಮರಾಠಿ ಕಲಿಯಿರಿ. ಉದ್ಯೋಗಿಗಳು ಭಾರತೀಯ ಭಾಷೆಗಳನ್ನು ಕಲಿಯುವುದನ್ನು  ಉತ್ತೇಜಿಸಬೇಕಿದೆ ಎಂದು ಝೋಹೊ ಸಂಸ್ಥಾಪಕ ಶ್ರೀಧರ್ ವೆಂಬು ( Zoho CEO Sridhar Vembu) ಹೇಳಿದ್ದಾರೆ.

    ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಅನೇಕ ಯುರೋಪಿಯನ್ ದೇಶದಲ್ಲಿರುವ ಜನಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ನಮ್ಮ ರಾಜ್ಯ ಭಾಷೆಗಳನ್ನು ಮಾತನಾಡುತ್ತಾರೆ. ಭಾರತದ ಅಭಿವೃದ್ಧಿಯು ಕೇವಲ ನೀತಿ ಅಥವಾ ಪ್ರೋತ್ಸಾಹದ ಮೇಲೆ ಅವಲಂಬಿತವಾಗಿಲ್ಲ. ಬದಲಾಗಿ ಆಳವಾದ ಸಾಂಸ್ಕೃತಿಕ ಬದ್ಧತೆಯ ಮೇಲೆ ಅವಲಂಬಿತವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಇದನ್ನೂ ಓದಿ:  ಪೊಲಿಟಿಕಲ್‌ ಸೈನ್ಸ್‌ ಪದವಿಯ ಅಗತ್ಯವಿಲ್ಲ, ಇಂದು ಎಲೆಕ್ಟ್ರಿಷಿಯನ್‌ಗಳು, ಪ್ಲಂಬರ್‌ಗಳು ಅಗತ್ಯ ತುಂಬಾ ಇದೆ: ಮಸ್ಕ್‌ ವಾದಕ್ಕೆ Zoho ಸಿಇಒ ಒಪ್ಪಿಗೆ

    ವಿಶೇಷವಾಗಿ ನಮ್ಮ ವಿದ್ಯಾವಂತರಲ್ಲಿ ನಾವು ಈ ರಾಷ್ಟ್ರಕ್ಕೆ ಸೇರಿದವರು ಎಂಬ ಭಾವನೆ ಬರಬೇಕು. ಆ ದೇಶಭಕ್ತಿಯ ಮನೋಭಾವ ಅತ್ಯಗತ್ಯ. ನೀವು ಗ್ರಾಮೀಣ ಭಾರತ ಅಥವಾ ನಮ್ಮ ಸಣ್ಣ ಪಟ್ಟಣಗಳನ್ನು ನೋಡಿದರೆ ರಾಷ್ಟ್ರಕ್ಕೆ ಸೇರಿದ್ದೇವೆ ಎಂಬ ಭಾವನೆ ಇನ್ನೂ ತುಂಬಾ ಜೀವಂತವಾಗಿದೆ. ಆದರೆ ದುರದೃಷ್ಟವಶಾತ್ ನಮ್ಮ ಅತಿಶಿಕ್ಷಿತ ಗಣ್ಯರಲ್ಲಿ ಅದು ಸ್ವಲ್ಪ ಕಾಣೆಯಾಗಿದೆ ಎಂದರು.

    ಬಹುತೇಕ ವಿದ್ಯಾವಂತರಲ್ಲಿ ನಾವು ʼಗ್ಲೋಬಲ್‌ ಸಿಟಿಜನ್‌ʼ ಎಂಬ ಮನಸ್ಥಿತಿಯಿದೆ. ಈ ಮನಸ್ಥಿತಿ ರಾಷ್ಟ್ರದ ಅಭಿವೃದ್ಧಿಯನ್ನು ದುರ್ಬಲಗೊಳಿಸುತ್ತದೆ. ಈ ಅಪಾಯಕಾರಿ ಮನಸ್ಥಿತಿ ಬದಲಾಗಬೇಕು. ಚೀನಾ ಮತ್ತು ಜಪಾನ್‌ನಲ್ಲಿ ಈ ರೀತಿಯ ಮನೋಭಾವ ಇಲ್ಲ. ದೇಶಭಕ್ತಿಯ ಕಾರಣದಿಂದಾಗಿ ಈ ದೇಶಗಳು ಬೆಳವಣಿಗೆ ಸಾಧಿಸಿವೆ ಎಂದು ತಿಳಿಸಿದರು.

  • ರೆಸಾರ್ಟ್‌ನಲ್ಲೂ ಬಿಗ್‌ಬಾಸ್‌ ನಿಯಮ ಅನ್ವಯ!

    ರೆಸಾರ್ಟ್‌ನಲ್ಲೂ ಬಿಗ್‌ಬಾಸ್‌ ನಿಯಮ ಅನ್ವಯ!

    ಬೆಂಗಳೂರು: ಬಿಡದಿಯ ಈಗಲ್‌ಟನ್‌ ರೆಸಾರ್ಟ್‌ನಲ್ಲೂ ಸ್ಪರ್ಧಿಗಳಿಗೆ ಬಿಗ್‌ಬಾಸ್‌ (Bigg Boss) ಮನೆಯ ನಿಯಮಗಳೇ ಅನ್ವಯವಾಗುತ್ತಿದೆ.

    ಸ್ಪರ್ಧಿಗಳಿಗೆ ಜಾಲಿವುಡ್‌ ಸ್ಟುಡಿಯೋ (Jollywood Studios) ಮಾಲಿನ್ಯ ನಿಯಮ ಪಾಲನೆ ಮಾಡದ್ದಕ್ಕೆ ಈ ರೆಸಾರ್ಟ್‌ಗ ನಿಮ್ಮನ್ನು ಕರೆತರಲಾಗಿದೆ ಎಂಬ ವಿಚಾರವನ್ನು ಆಯೋಜಕರು ಸ್ಪರ್ಧಿಗಳಿಗೆ ತಿಳಿಸಿದ್ದಾರೆ. ಹೀಗಾಗಿ ಮರಳಿ ಶೋ ನಡೆಯುವವರೆಗೂ ನೀವು ನಮ್ಮ ಸುಪರ್ದಿಯಲ್ಲೇ ಇರಬೇಕಾಗುತ್ತದೆ ಎಂದು ತಿಳಿಸಿದ್ದು ಸ್ಪರ್ಧಿಗಳು ಒಪ್ಪಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ.

    ಇಂದು ಬೆಳಗ್ಗೆ ರೆಸಾರ್ಟ್ ಒಳಗಡೆಯೇ ಸ್ಪರ್ಧಿಗಳು ವಾಕಿಂಗ್, ಜಾಗಿಂಗ್, ಬ್ರೇಕ್ ಫಾಸ್ಟ್ ಮಾಡಿದ್ದಾರೆ. ಬಿಗ್‌ಬಾಸ್ ಮನೆಯಂತೆ ರೆಸಾರ್ಟ್‌ನಲ್ಲೂ ಕುಟುಂಬಸ್ಥರು, ಸ್ನೇಹಿತರ ಸಂಪರ್ಕಕ್ಕೆ ಸ್ಪರ್ಧಿಗಳು ಬರುವಂತಿಲ್ಲ. ಆಯೋಜಕರ ತಂಡದವರಿಗೆ ಮಾತ್ರ ಸ್ಪರ್ಧಿಗಳ ಭೇಟಿಗೆ ಅವಕಾಶ ನೀಡಲಾಗಿದೆ. ಇದನ್ನೂ ಓದಿ:  ಬಿಗ್‌ ಬಾಸ್‌ ಮನೆಗೆ ಬೀಗ – ರಕ್ಷಿತಾ ಡೈಲಾಗ್‌ ವೈರಲ್‌

     

    ಈತನಕ ಸ್ಪರ್ಧಿಗಳಿಗೆ ಮೊಬೈಲ್, ಇಂಟರ್ನೆಟ್, ಟಿವಿ ಯಾವ ಸೌಲಭ್ಯಗಳನ್ನು ಒದಗಿಸಿಲ್ಲ ಎನ್ನುವ ಮಾಹಿತಿ ಸಿಕ್ಕಿದೆ. ರೆಸಾರ್ಟ್‌ನ ಭದ್ರತಾ ಸಿಬ್ಬಂದಿ ನಿಗಾದಲ್ಲಿ ಸ್ಪರ್ಧಿಗಳು ಇದ್ದಾರೆ. ಇದನ್ನೂ ಓದಿ: ಕಲಾವಿದರ ಮೇಲೆ ಸೇಡು ತೀರಿಸಿದ ನಟ್ಟು ಬೋಲ್ಟ್‌ ಮಿನಿಸ್ಟರ್‌- ಜೆಡಿಎಸ್‌ ಕಿಡಿ

    ಯಾರ ಜೊತೆಯೂ ಸಂಪರ್ಕ ಇಟ್ಟುಕೊಳ್ಳುವಂತಿಲ್ಲ. ರೆಸಾರ್ಟ್ ಸಿಬ್ಬಂದಿಯ ಜೊತೆಯೂ ಮಾತುಕತೆ ಆಡುವಂತಿಲ್ಲ, ಊಟ, ತಿಂಡಿ ಇತ್ಯಾದಿಗಳನ್ನು ಕೋಣೆಗೆ ಕಳುಹಿಸಲಾಗುತ್ತಿದೆ ಎಂದು ಆಯೋಜಕರು ಸ್ಪರ್ಧಿಗಳಿಗೆ ಸೂಚಿಸಿದ್ದಾರೆ.

    ಸ್ಪರ್ಧಿಗಳು ಎಲ್ಲಿಯವರೆಗೆ ರೆಸಾರ್ಟ್‌ನಲ್ಲಿ ಇರುತ್ತಾರೆ ಎನ್ನುವುದು ಖಚಿತವಾಗಿಲ್ಲ. ಬಿಗ್‌ ಬಾಸ್‌ ಶೋ ನಡೆಸಲು ಕೋರ್ಟ್‌ ಅನುಮತಿ ನೀಡಬಹುದು ಎಂಬ ವಿಶ್ವಾಸದಲ್ಲಿ ಆಯೋಜಕರು ಇದ್ದಾರೆ. ಕೋರ್ಟ್‌ ಪ್ರಕ್ರಿಯೆ ತಡವಾದರೆ ಸ್ಪರ್ಧಿಗಳನ್ನು ಖಾಸಗಿ ಹೋಟೆಲಿಗೆ ಶಿಫ್ಟ್‌ ಮಾಡಲು ವಾಹಿನಿ ಸಿದ್ಧತೆ ನಡೆಸಿದೆ ಎನ್ನಲಾಗುತ್ತಿದೆ.

  • ಕನ್ನಡ ಸಿನಿಮಾಗೆ WWE ಸೂಪರ್ ಸ್ಟಾರ್ ಸುಖ್ವಿಂದರ್ ಸಿಂಗ್ ಗ್ರೆವಾಲ್ ಎಂಟ್ರಿ

    ಕನ್ನಡ ಸಿನಿಮಾಗೆ WWE ಸೂಪರ್ ಸ್ಟಾರ್ ಸುಖ್ವಿಂದರ್ ಸಿಂಗ್ ಗ್ರೆವಾಲ್ ಎಂಟ್ರಿ

    ಶಿವರಾಜ್‌ಕುಮಾರ್‌ (ShivarajKumar) ಮತ್ತು ಧನಂಜಯ (Dhananjay) ಅಭಿನಯಿಸುತ್ತಿರುವ ಬಹು ನಿರೀಕ್ಷಿತ 666 ಆಪರೇಷನ್ ಡ್ರೀಮ್ ಥಿಯೇಟರ್ (666 Operation Dream Theatre) ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿ ಸೆಟ್ ಹಾಕಿ ನಿರ್ದೇಶಕ ಎಂ ಹೇಮಂತ್ ರಾವ್ ಚಿತ್ರೀಕರಣ ನಡೆಸುತ್ತಿದ್ದಾರೆ. ಇದೀಗ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಅಂಗಳಕ್ಕೆ WWE ಸೂಪರ್ ಸ್ಟಾರ್ ಸುಖ್ವಿಂದರ್ ಸಿಂಗ್ ಗ್ರೆವಾಲ್ (Sukhwinder Singh Grewal) ಎಂಟ್ರಿ ಕೊಟ್ಟಿದ್ದಾರೆ. ಶಾರುಖ್ ಖಾನ್ ನಟನೆಯ ಜವಾನ್ ಹಾಗೂ ಆರ್ಯನ್ ಖಾನ್ ನಿರ್ದೇಶನದ ‘ಬ್ಯಾಡ್ಸ್ ಆಫ್ ಬಾಲಿವುಡ್’ ನಲ್ಲಿ ನಟಿಸಿರುವ ಸುಖಿ ಗ್ರೆವಾಲ್ ಈಗ ಸ್ಯಾಂಡಲ್‌ವುಡ್ ಗೆ ಪದಾರ್ಪಣೆ ಮಾಡಿದ್ದಾರೆ.

    ಸದ್ಯ 666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಬಿರುಸಿನಿಂದ ನಡೆಯುತ್ತಿದೆ. ಸುಖಿ ಎಂಟ್ರಿ ಬಗ್ಗೆ ಮಾತನಾಡಿದ ನಿರ್ದೇಶಕ ಹೇಮಂತ್ ಎಂ ರಾವ್, ‘ನಮಗೆ ಭಯಾನಕವಾಗಿ ಕಾಣುವ ವ್ಯಕ್ತಿತ್ವದ ಪಾತ್ರಧಾರಿ ಬೇಕಿತ್ತು. ದೊಡ್ಡ ಪರದೆಯನ್ನೂ ಚಿಕ್ಕದಾಗಿ ಕಾಣುವಂತೆ ಮಾಡಿದ ವ್ಯಕ್ತಿ. ಸುಖಿ ಪಾತ್ರವು ಒಂದು ರೀತಿಯ ಪಾತ್ರಕ್ಕೆ ಸರಿಹೊಂದುತ್ತದೆ. ನಾನು ಸೆಟ್‌ನಲ್ಲಿ ಭೇಟಿಯಾದ ಅತ್ಯಂತ ಸೌಮ್ಯ ವ್ಯಕ್ತಿಗಳಲ್ಲಿ ಅವರು ಒಬ್ಬರು. ಇದು ಅವರ ದೈತ್ಯ ವ್ಯಕ್ತಿತ್ವಕ್ಕೆ ಸಾಕಷ್ಟು ಭಿನ್ನವಾಗಿದೆ. ಅವರ ವ್ಯಕ್ತಿತ್ವವನ್ನು ಸರಿಹೊಂದಿಸಲು ನಾವು ಸೆಟ್‌ ಎತ್ತರವನ್ನು ಹೆಚ್ಚಿಸಬೇಕಾಗಿತ್ತು ಎಂದು ನಾನು ಹೇಳಿದಾಗ ಅದು ಉತ್ಪ್ರೇಕ್ಷೆಯಾಗುವುದಿಲ್ಲ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:  ಭಾನುವಾರವೂ ಹೌಸ್‌ಫುಲ್‌ – ಬೆಂಗಳೂರಿನಲ್ಲಿ ದಾಖಲೆ ಬರೆದ ಕಾಂತಾರ

    7 ಅಡಿ 2 ಇಂಚು ಎತ್ತರವಿರುವ ಸುಖ್ವಿದರ್ ಸಿಂಗ್ ಗ್ರೆವಾಲ್ ಮಾತನಾಡಿ, ದಕ್ಷಿಣ ಚಲನಚಿತ್ರೋದ್ಯಮದ ಬಗ್ಗೆ ನಾನು ಬಹಳಷ್ಟು ಕೇಳಿದ್ದೇನೆ, ಕನ್ನಡ ಚಲನಚಿತ್ರೋದ್ಯಮದ ಭಾಗವಾಗುವುದು ಅದ್ಭುತವಾಗಿದೆ. ಧನಂಜಯ ಮತ್ತು ಡಾ. ಶಿವರಾಜ್ ಕುಮಾರ್ ಇರುವ ಯೋಜನೆಯಲ್ಲಿ ಕೆಲಸ ಮಾಡುವುದು ಒಂದು ಗೌರವ. ನಾನು ಸೆಟ್‌ನಲ್ಲಿ ಇರಲು ಇಷ್ಟಪಡುತ್ತೇನೆ, ಇಲ್ಲಿನ ಜನರು ತುಂಬಾ ಪ್ರೀತಿಯಿಂದ ಇದ್ದಾರೆ. ನನ್ನ ಅಭಿನಯಕ್ಕೆ ಕನ್ನಡ ಪ್ರೇಕ್ಷಕರ ಪ್ರತಿಕ್ರಿಯೆಯನ್ನು ನಾನು ಎದುರು ನೋಡುತ್ತಿದ್ದೇನೆ ಮತ್ತು ಹೆಚ್ಚಿನ ಪ್ರಾಜೆಕ್ಟ್ ಗಳಲ್ಲಿ ಕೆಲಸ ಮಾಡಲು ಬಯಸುತ್ತೇನೆ. ಸೆಟ್ನಲ್ಲಿ ವಾತಾವರಣ ಮತ್ತು ಮುಖ್ಯವಾಗಿ ಬೆಂಗಳೂರಿನ ವಾತಾವರಣ ನಾನು ಹೆಚ್ಚು ಆನಂದಿಸಿದೆ. ನಾನು ನಗರವನ್ನು ಹೆಚ್ಚು ಅನ್ವೇಷಿಸಿಲ್ಲ, ಆದರೆ ಇಲ್ಲಿನ ಆಹಾರವನ್ನು ನಾನು ಆನಂದಿಸಿದೆ. ಅದಕ್ಕಾಗಿಯೇ ನಾನು ಜಿಮ್‌ನಲ್ಲಿ ಹೆಚ್ಚು ಸಮಯ ಕಳೆಯಬೇಕಾಯಿತು ಎಂದರು. ಇದನ್ನೂ ಓದಿ:  ಕೇರಳದಲ್ಲಿ ‌ಕಾಂತಾರ ಭರ್ಜರಿ ಪ್ರದರ್ಶನ – ಅತಿ ಹೆಚ್ಚು ಗಳಿಕೆ ಮಾಡಿದ 2ನೇ ಕನ್ನಡ ಸಿನಿಮಾ ದಾಖಲೆ

    ಈಗಾಗಲೇ ತಮ್ಮ ಭಾಗದ ಆಕ್ಷನ್ ಸೀಕ್ವೆನ್ಸ್ ನ್ನು ಸುಖಿ ಮುಕ್ತಾಯಗೊಳಿದ್ದಾರೆ.  ವೈಶಾಕ್ ಜೆ. ಗೌಡ ಅವರ ‘ವೈಶಾಕ್ ಜೆ. ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾ ನಿರ್ಮಿಸಲಾಗುತ್ತಿದೆ. ಹೇಮಂತ್ ಎಂ. ರಾವ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಚರಣ್ ರಾಜ್ ಸಂಗೀತ ನಿರ್ದೇಶನ, ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ ಈ ಸಿನಿಮಾಗಿದೆ.

    ರೆಟ್ರೋ ಲುಕ್‌ನಲ್ಲಿ ಶಿವರಾಜ್‌ಕುಮಾರ್‌ ಹಾಗೂ ಧನಂಜಯ್ ಕಾಣಿಸಿಕೊಂಡಿದ್ದು, ಪೋಸ್ಟರ್ ಈಗಾಗಲೇ ರಿಲೀಸ್ ಆಗಿದೆ. ಈ ಲುಕ್ ಡಾ. ರಾಜ್‌ಕುಮಾರ್‌ ಅವರ ಬಾಂಡ್ ಸಿನಿಮಾಗಳಾದ ಜೇಡರ ಬಲೆ, ಆಪರೇಷನ್ ಡೈಮಂಡ್ ರಾಕೆಟ್, ಗೋವಾದಲ್ಲಿ CID 999 ನೆನಪಿಸುತ್ತದೆ.

  • ಖ್ಯಾತ ಸಾಹಿತಿ ಡಾ. ಮೊಗಳ್ಳಿ ಗಣೇಶ್ ನಿಧನ

    ಖ್ಯಾತ ಸಾಹಿತಿ ಡಾ. ಮೊಗಳ್ಳಿ ಗಣೇಶ್ ನಿಧನ

    ಬೆಂಗಳೂರು: ಖ್ಯಾತ ಸಾಹಿತಿ, ಹಿರಿಯ ಕತೆಗಾರ ಪ್ರೊ.ಮೊಗಳ್ಳಿ ಗಣೇಶ್ (64) ಭಾನುವಾರ ಅನಾರೋಗ್ಯದಿಂದ ಮನೆಯಲ್ಲಿ ನಿಧನರಾದರು. ಇವರು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ.

    ಹಂಪಿ ಕನ್ನಡ ವಿಶ್ವವಿದ್ಯಾಲಯ (Hampi Kannada University) ಸುಮಾರು 28 ವರ್ಷ ಪ್ರಾಧ್ಯಾಪಕರಾಗಿದ್ದ ಮೊಗಳ್ಳಿ ಗಣೇಶ್ (Mogalli Ganesh) ತಮ್ಮ ವಿಶಿಷ್ಟ ಶೈಲಿಯ ಕಥೆಗಳ ಮೂಲಕ ಅವರು ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದವರು. ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸಿದ್ದ ಅವರು ‘ಸೂರ್ಯನನ್ನು ಬಚ್ಚಿಡಬಹುದೆ?’ ಮತ್ತು ‘ಅನಾದಿ’ ಕಾವ್ಯ ಸಂಕಲನಗಳ ಮೂಲಕ ಹೆಸರು ಮಾಡಿದರು.

    ಪ್ರಬಲ ದಲಿತ (Dalit) ಚಿಂತಕರಾಗಿದ್ದ ಅವರು ದೇಶದ ಪ್ರತಿಷ್ಠತ ವಿಶ್ವವಿದ್ಯಾಲಯಗಳಿಗೆ ಆಹ್ವಾನಿತರಾಗಿ ಹೋಗುತ್ತಿದ್ದರು. ಹಂಪಿ ವಿಶ್ವವಿದ್ಯಾಲಯದಲ್ಲಿ ಜಾನಪದ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿದ್ದ ಇವರು ಸದ್ಯ ಹಾವೇರಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರಾಗಿದ್ದರು. ಇದನ್ನೂ ಓದಿ: ಭಾರತಕ್ಕೆ ಏಷ್ಯಾ ಕಪ್‌ ನೀಡದ ಸಚಿವ ನಖ್ವಿಗೆ ಪಾಕ್‌ನಲ್ಲಿ ಚಿನ್ನದ ಪದಕ ನೀಡಿ ಸನ್ಮಾನಕ್ಕೆ ನಿರ್ಧಾರ

     

    ಬುಗುರಿ, ಮಣ್ಣು, ಅತ್ತೆ, ಭೂಮಿ, ಕನ್ನೆಮಳೆ, ದೇವರ ದಾರಿ, ಮೊಗಳ್ಳಿ ಕಥೆಗಳು (ಆವರೆಗಿನ ಬಹುಪಾಲು ಕಥೆಗಳ ಸಂಕಲನ) ಮುಂತಾದವು ಮೊಗಳ್ಳಿ ಗಣೇಶ್ ಅವರ ಕಥಾ ಸಂಕಲನಗಳು. ತೊಟ್ಟಿಲು, ಕಿರೀಟ ಅವರ ಕಾದಂಬರಿಗಳು. ‘ಬೇರು’ ಅವರ ಬೃಹತ್ ಕಾದಂಬರಿ. ‘ಕಥನ’ ಅವರ ಪ್ರಬಂಧ ಸಂಕಲನ. ‘ಸೊಲ್ಲು’, ‘ವಿಮರ್ಶೆ’, ‘ಶಂಬಾ ಭಾಷಿಕ ಸಂಶೋಧನೆ’, ‘ತಕರಾರು’ ಅವರ ವಿಮರ್ಶಾ ಕೃತಿಗಳು. ‘ವಿಶ್ಲೇಷಣೆ’ ಎಂಬ ಅಂಕಣ ಕೂಡಾ ಜನಪ್ರಿಯ. ‘ಅಂಬೇಡ್ಕರ್ ಎಂಬ ಮಹಾನದಿ ಮತ್ತು ದಲಿತೀಕರಣಗೊಂಡ ಗಾಂಧೀಜಿ’ ಅವರ ಚಿಂತನ ಕೃತಿ. ಗಣೇಶ್ ಇತರ ಭಾಷೆಗಳ ಕೃತಿಗಳನ್ನು ಕನ್ನಡಕ್ಕೆ ತಂದರೆ, ಅವರ ಅನೇಕ ಬರಹಗಳು ಇತರ ಭಾಷೆಗಳಿಗೆ ಅನುವಾದಗೊಂಡಿದೆ.

    ಮೊಗಳ್ಳಿ ಗಣೇಶ್ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ವರನಟ ಡಾ.ರಾಜಕುಮಾರ್ ಹೆಸರಿನಲ್ಲಿರುವ ಅಧ್ಯಯನ ಪೀಠಕ್ಕೆ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

    ಕನ್ನಡದ ಖ್ಯಾತ ಕಥೆಗಾರ ,ವಿಮರ್ಶಕ ಡಾ. ಮೊಗಳ್ಳಿ ಗಣೇಶ್ ಅವರ ನಿಧನಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರೂ ಆಗಿದ್ದ ಮೊಗಳ್ಳಿ ಗಣೇಶ್ ಅವರ ನಿಧನದಿಂದ ಕನ್ನಡ ಸಾಹಿತ್ಯ ಒಬ್ಬ ಅತ್ಯುತ್ತಮ ಬರಹಗಾರನನ್ನ ಕಳೆದುಕೊಂಡಿದೆ ಎಂದು ಸಚಿವ ಶಿವರಾಜ ತಂಗಡಗಿ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

  • ಮೊದಲ ದಿನವೇ ಬುಕ್‌ಮೈಶೋದಲ್ಲಿ ದಾಖಲೆ ಬರೆದ ಕಾಂತಾರ

    ಮೊದಲ ದಿನವೇ ಬುಕ್‌ಮೈಶೋದಲ್ಲಿ ದಾಖಲೆ ಬರೆದ ಕಾಂತಾರ

    ರಿಷಭ್‌ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿದ ಕಾಂತಾರ: ಚಾಪ್ಟರ್ 1 (Kantara: Chapter 1) ಟಿಕೆಟ್‌ ಬುಕ್ಕಿಂಗ್‌ ಮಾಡುವ ಬುಕ್‌ಮೈಶೋದಲ್ಲಿ (BookMyShow) ದಾಖಲೆ ಬರೆದಿದಿದೆ.

    24 ಗಂಟೆಯಲ್ಲಿ 1.28 ಮಿಲಿಯನ್‌(12.8 ಲಕ್ಷ) ಟಿಕೆಟ್‌ ಮಾರಾಟವಾಗಿದೆ. ಈ ಮೂಲಕ 2025ರಲ್ಲಿ ಬುಕ್‌ಮೈ ಶೋದಲ್ಲಿ ಅತಿ ಹೆಚ್ಚು ಟಿಕೆಟ್‌ ಮಾರಾಟವಾದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಸಿನಿಮಾ ತಯಾರಿಸಿದ ಹೊಂಬಾಳೆ ಸಂಸ್ಥೆ ಹೇಳಿಕೊಂಡಿದೆ.

    ಇದು ಕೇವಲ ಒಂದು ದಿನದ ಟಿಕೆಟ್‌ ಮಾರಾಟದ ಲೆಕ್ಕ ಆಗಿದ್ದು, ಶುಕ್ರವಾರ ಮತ್ತು ಶನಿವಾರದ ಟಿಕೆಟ್‌ಗಳು ಭರ್ಜರಿಯಾಗಿ ಮಾರಾಟವಾಗಿದೆ. ಹೀಗಾಗಿ ಎರಡನೇ ದಿನದಲ್ಲಿ ಕಾಂತಾರ 100 ಕೋಟಿ ರೂ. ಕ್ಲಬ್‌ ಸೇರುವ ಸಾಧ್ಯತೆಯಿದೆ. ಇದನ್ನೂ ಓದಿ: Kantara: Chapter 1ಗೆ ಭರ್ಜರಿ ರೆಸ್ಪಾನ್ಸ್ ಮೊದಲ ದಿನವೇ 55 ಕೋಟಿ ಗಳಿಕೆ

    ಭಾರತದಲ್ಲಿ ಒಟ್ಟು 6,500 ಚಿತ್ರ ಮಂದಿರಗಳಲ್ಲಿ ಸುಮಾರು 12,511ಕ್ಕೂ ಹೆಚ್ಚು ಶೋಗಳು ಪ್ರದರ್ಶನಗೊಂಡಿದ್ದವು. ರಿಲೀಸ್‌ಗೂ ಒಂದು ದಿನ ಮೊದಲೇ ಅಂದರೆ ಅ.1ರಂದು ದೇಶದ ವಿವಿಧೆಡೆ ಪ್ರೀಮಿಯರ್ ಶೋಗಳು ನಡೆದಿದ್ದು, ಈ ಶೋಗಳೆಲ್ಲ ಹೌಸ್‌ಫುಲ್ ಪ್ರದರ್ಶನ ಕಂಡಿದ್ದವು. ಇದರಿಂದ ಸಿನಿಮಾಗೆ ಉತ್ತಮ ಪ್ರಚಾರ ಸಿಕ್ಕಿದ್ದು, ಬಿಡುಗಡೆ ದಿನ ಉತ್ತಮ ಪ್ರದರ್ಶನ ಕಂಡಿದೆ.

    ಬುಕ್‌ಮೈಶೋದಲ್ಲಿ 47 ಸಾವಿರಕ್ಕೂ ಹೆಚ್ಚು ಜನ ಸಿನಿಮಾಗೆ ಕಮೆಂಟ್‌ ಮಾಡಿದ್ದರೆ 72 ಸಾವಿರ ಜನ ವೋಟ್‌ ಮಾಡಿದ್ದು 10ಕ್ಕೆ 9.4 ಅಂಕ ನೀಡಿ ಬಹಳ ಚೆನ್ನಾಗಿದ್ದು, ಥಿಯೇಟರ್‌ನಲ್ಲಿ ನೋಡಿ ಕನ್ನಡ ಸಿನಿಮಾವನ್ನು ಪ್ರೋತ್ಸಾಹಿಸಿ ಎಂದು ಹೇಳುತ್ತಿದ್ದಾರೆ.

     

  • ಬರದಿರುವ ಭಾಷೆ ಮಾತಾಡಿ ಅಗೌರವ ತೋರಿಸೋದು ಬೇಡ – ಹೈದ್ರಾಬಾದ್‌ನಲ್ಲಿ ಕನ್ನಡ ಮಾತಾಡಿದ್ದಕ್ಕೆ ರಿಷಬ್ ಸ್ಪಷ್ಟನೆ

    ಬರದಿರುವ ಭಾಷೆ ಮಾತಾಡಿ ಅಗೌರವ ತೋರಿಸೋದು ಬೇಡ – ಹೈದ್ರಾಬಾದ್‌ನಲ್ಲಿ ಕನ್ನಡ ಮಾತಾಡಿದ್ದಕ್ಕೆ ರಿಷಬ್ ಸ್ಪಷ್ಟನೆ

    ಕಾಂತಾರ ಬಿಡುಗಡೆ ಹೊತ್ತಲ್ಲಿ ಭಾಷೆಯ ವಿಚಾರಕ್ಕೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಆಂಧ್ರ ಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಭಾನುವಾರ ಹೈದ್ರಾಬಾದ್‌ನಲ್ಲಿ ನಡೆದ ಪ್ರೀ-ರಿಲೀಸ್ ಇವೆಂಟ್‌ನಲ್ಲಿ ವೇದಿಕೆ ಮೇಲೆ ರಿಷಬ್ ಶೆಟ್ಟಿ ಕನ್ನಡದಲ್ಲೇ ಮಾತನಾಡಿದ್ರು. ಬಳಿಕ ಜನರಿಗೆ ರಿಷಬ್ “ನನ್ನ ಮಾತು ಅರ್ಥವಾಗದಿದ್ದರೆ ತಾರಕ್ ಟ್ರಾನ್ಸ್‌ಲೇಟ್‌ ಮಾಡ್ತಾರೆ” ಎಂದು ನಗುತ್ತಾ ಹೇಳಿದ್ದರು.

    ರಿಷಬ್‌ಗೆ ಸರಿಯಾಗಿ ತೆಲುಗು ಭಾಷೆ ಮಾತನಾಡಲು ಬರದೆ ಇರುವುದಕ್ಕೆ ಕನ್ನಡದಲ್ಲಿ ಮಾತನಾಡಿದ್ದರು. ಆದರೆ ಇದನ್ನೇ ತಪ್ಪಾಗಿ ಅರ್ಥೈಸಿಕೊಂಡ ಕೆಲವರು ರಿಷಬ್‌ರನ್ನ ಟ್ರೋಲ್ ಮಾಡಲಾರಂಭಿಸಿದ್ರು. ಬೇರೆಲ್ಲಾ ಸ್ಥಳದಲ್ಲಿ ಆಯಾ ಭಾಷೆಯಲ್ಲಿ ಮಾತನಾಡುವ ರಿಷಬ್ ತೆಲುಗು ನಾಡಿದಲ್ಲಿ ತೆಲುಗು ಭಾಷೆ ಮಾತನಾಡದೇ ಇರುವುದಕ್ಕೆ ವಿರೋಧ ವ್ಯಕ್ತವಾಗಿತ್ತು. ಇದೀಗ ಈ ವಿಚಾರದ ಕುರಿತು ಮುಂಬೈನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ರಿಷಬ್ ಶೆಟ್ಟಿ ಸ್ಪಷ್ಟನೆ ಕೊಟ್ಟಿದ್ದಾರೆ.ಇದನ್ನೂ ಓದಿ: ನೋವಿನ ಸಂದರ್ಭದಲ್ಲಿ ಸಂಭ್ರಮ ಬೇಡವೆಂದು ಹಿಂದೆ ಸರಿದ ರಿಷಬ್ ಶೆಟ್ಟಿ

    ಮುಂಬೈನಲ್ಲಿ ಹಿಂದಿ ಭಾಷೆ ಮಾತನಾಡುವ ರಿಷಬ್ ಹೈದ್ರಾಬಾದ್‌ನಲ್ಲಿ ತೆಲುಗು ಮಾತನಾಡಿಲ್ಲವೆಂದು ವಿರೋಧ ಬಂದ ಹಿನ್ನೆಲೆ ಸ್ಪಷ್ಟನೆ ಕೊಟ್ಟಿದ್ದಾರೆ. “ನನ್ನ ಭಾಷೆ ಕನ್ನಡ , ನಾನು ಹೆಮ್ಮೆಯ ಕನ್ನಡಿಗ, ನಾನು ಕನ್ನಡದಲ್ಲೇ ಯೋಚಿಸುವುದು ಹೀಗಾಗಿ ಕನ್ನಡ ಮಾತಾಡ್ತೀನಿ, ಮಾತನಾಡಲು ಬರದೇ ಇರೋ ಭಾಷೆಯನ್ನ ಮಾತನಾಡಿ ಆ ಭಾಷೆಗೆ ಅಗೌರವ ತೋರಿಸುವುದು ಬೇಡವೆಂದು ಕನ್ನಡದಲ್ಲಿ ಮಾತನಾಡಿದ್ದೇನೆ” ಎಂದಿದ್ದಾರೆ ರಿಷಬ್. ಜೊತೆಗೆ ಎಲ್ಲ ಭಾಷೆಯನ್ನೂ ಕಲಿಯೋದಕ್ಕೆ ಖುಷಿ ಇದೆ. ಇತ್ತೀಚಿಗೆ ಬೇರೆ ಬೇರೆ ಭಾಷೆಯಲ್ಲಿ ಸಂದರ್ಶನ ಕೊಡುತ್ತಾ ಬಂದಿರೋದ್ರಿಂದ ಎಲ್ಲಾ ಭಾಷೆಯನ್ನ ಈಗೀಗ ಕಲಿಯುತ್ತಿದ್ದೇನೆ”. ಎಂದು ಮುಂಬೈನಲ್ಲಿ ಹೇಳುವ ಮೂಲಕ ತೆಲುಗು ಭಾಷೆ ಮಾತನಾಡದಿರುವ ವಿವಾದಕ್ಕೆ ರಿಷಬ್ ಸ್ಪಷ್ಟನೆ ಕೊಟ್ಟಿದ್ದಾರೆ.

  • S L Bhyrappa | ಶುಕ್ರವಾರ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಅಂತ್ಯಕ್ರಿಯೆ

    S L Bhyrappa | ಶುಕ್ರವಾರ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಅಂತ್ಯಕ್ರಿಯೆ

    ಬೆಂಗಳೂರು: ಶುಕ್ರವಾರ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಸಾಹಿತಿ ಎಸ್‌ಎಲ್‌ ಭೈರಪ್ಪನವರ (S L Bhyrappa) ಅಂತ್ಯಕ್ರಿಯೆ ನಡೆಯಲಿದೆ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ (Pratap Simha) ಹೇಳಿದ್ದಾರೆ.

    ಗುರುವಾರ ಬೆಳಗ್ಗೆ 8 ಗಂಟೆಗೆ ರವೀಂದ್ರ ಕಲಾಕ್ಷೇತ್ರಕ್ಕೆ ಆಸ್ಪತ್ರೆಯಿಂದ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಿ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ.  ಮಧ್ಯಾಹ್ನ 1 ಘಂಟೆಯ ನಂತರ ಪಾರ್ಥಿವ ಶರೀರವನ್ನು ಮೈಸೂರಿಗೆ (Mysuru) ತೆಗೆದುಕೊಂಡು ಹೋಗಲಾಗುತ್ತದೆ. ಮಧ್ಯಾಹ್ನ 3 ಗಂಟೆಗೆ ಮೈಸೂರಿನ ಕಲಾಮಂದಿರಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.

     

    ಶುಕ್ರವಾರ ಬೆಳಗ್ಗೆ ಸಕಾಲ ಸರ್ಕಾರಿ ಗೌರವದೊಂದಿಗೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಸಿಎಂ ಸಿದ್ದರಾಮಯ್ಯನವವರು ಮೈಸೂರು ಜಿಲ್ಲಾಡಳಿತಕ್ಕೆ ಈ ಬಗ್ಗೆ ಸೂಚನೆ ನೀಡಿದ್ದಾರೆ ಎಂದು ಹೇಳಿದರು.

    ಮೈಸೂರು ಮತ್ತು ಇತರ ಕಡೆಯಲ್ಲಿರುವ ಕುಟುಂಬ ಸದಸ್ಯರು ಈಗ ರಾಜರಾಜೇಶ್ವರಿ ನಗರದಲ್ಲಿರುವ ರಾಷ್ಟ್ರೋತ್ಥಾನ ಆಸ್ಪತ್ರೆಗೆ ಬರುತ್ತಿದ್ದಾರೆ. ವಿದೇಶದಲ್ಲಿರುವ ಕುಟುಂಬ ಸದಸ್ಯರು ಬಂದರ ನಂತರ ಮೈಸೂರಿನಲ್ಲಿ ಅಂತ್ಯಸಂಸ್ಕಾರ ನಡೆಸಲು ಕುಟುಂಬದವರು ತೀರ್ಮಾನಿಸಿದ್ದಾರೆ.

  • ಭೈರಪ್ಪನವರ ಬದುಕು ಕೊನೆಯಿಲ್ಲದ ʻಯಾನʼ – ನಟ ಅನಂತನಾಗ್‌ ಭಾವುಕ

    ಭೈರಪ್ಪನವರ ಬದುಕು ಕೊನೆಯಿಲ್ಲದ ʻಯಾನʼ – ನಟ ಅನಂತನಾಗ್‌ ಭಾವುಕ

    ʻʻಭೈರಪ್ಪನವರ (SL Bhyrappa) ಬದುಕು ಕೊನೆಯಿಲ್ಲದ ʻಯಾನʼ, ಹಿಮಾಲಯದಷ್ಟೇ ಎತ್ತರದ ವ್ಯಕ್ತಿತ್ವ ಅವರದ್ದು, ತಮ್ಮ ಕಾದಂಬರಿಯ ಮೂಲಕವೇ ವಿಜ್ಞಾನಿಗಳು ಯೋಚಿಸಲೂ ಸಾಧ್ಯವಾಗದ ಪಾತ್ರಗಳನ್ನು ಸೃಷ್ಟಿಸಿದವರು. ಈ ನವರಾತ್ರಿಯ ಸಂದರ್ಭದಲ್ಲಿ ಅವರನ್ನು ಕಳೆದುಕೊಂಡಿದ್ದು ಬಹಳ ದುಃಖ ತಂದಿದೆ…ʼʼ ಚಿರನಿದ್ರೆಗೆ ಜಾರಿದ್ದ ಭೈರಪ್ಪನವರಿಗೆ ಹಿರಿಯ ನಟ ಅನಂತ್ ನಾಗ್ (Ananta nag) ಅರ್ಪಿಸಿದ ಭಾವಪೂರ್ಣ ನುಡಿಗಳಿವು.

    ಹೌದು.. ಕನ್ನಡದ ಹಿರಿಯ ಸಾಹಿತಿ ಹಾಗೂ ಕನ್ನಡದ ಸಾಕ್ಷಿಪ್ರಜ್ಞೆ ಎಸ್.ಎಲ್ ಭೈರಪ್ಪ (91) ಅವರಿಂದು ಇಹಲೋಕ ತ್ಯಜಿಸಿದ್ದಾರೆ. ತಮ್ಮ ಕಾದಂಬರಿಗಳಿಂದಲೇ ಹಲವಾರು ಪೀಳಿಗೆಗೆ ಚಿಂತನೆ ಹಚ್ಚಿದ ʻಅಕ್ಷರ ಮಾಂತ್ರಿಕʼ ಬದುಕಿನ ಯಾನ ಮುಗಿಸಿ ಹೊರಟಿದ್ದಾರೆ. ಈ ಕುರಿತು ನಟ ಅನಂತ್‌ ನಾಗ್‌ ಅವರು ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿದ್ದಾರೆ. ಇದನ್ನೂಓದಿ: ಕನ್ನಡ ಸಾಹಿತ್ಯ ಲೋಕದ ಅಕ್ಷರ ಮಾಂತ್ರಿಕ ಎಸ್‌ಎಲ್‌ ಭೈರಪ್ಪ ಇನ್ನಿಲ್ಲ

    ಈ ನವರಾತ್ರಿಯ ಸಂದರ್ಭದಲ್ಲಿ ಅವರು ಹೋಗಬಾರದಿತ್ತು. ಪರ್ವತಪ್ರಾಯ, ಹಿಮಾಲಯದಷ್ಟು ಎತ್ತರದ ವ್ಯಕ್ತಿಯನ್ನ ಕಳೆದುಕೊಂಡದ್ದು ದುಃಖ ತಂದಿದೆ. ನಾವೆಲ್ಲರೂ ಭೈರಪ್ಪನವರ ಕಾದಂಬರಿ ಓದಿ ಮೆಚ್ಚಿದವರು. ಅವರ ʻನಾಯಿ ನೆರಳುʼ ಕಾದಂಬರಿ ಸಿನಿಮಾ ಆಗಿ ಪರಿವರ್ತನೆ ಆಯಿತು. ನನಗೆ ಮುಖ್ಯಪಾತ್ರದಲ್ಲಿ ಅವಕಾಶ ಮಾಡಿಕೊಟ್ಟರು ಅಲ್ಲಿಂದಲೇ ನನ್ನ ನಟನೆ ಆರಂಭವಾಯಿತು ಎಂದು ತಿಳಿಸಿದರು. ಇದನ್ನೂಓದಿ: ಬಾಲ್ಯದಲ್ಲೇ ಪ್ಲೇಗ್‌ಗೆ ತುತ್ತು, ತಮ್ಮನ ಶವ ಹೊತ್ತು ಅಂತ್ಯಸಂಸ್ಕಾರ ಮಾಡಿದ್ದ ಭೈರಪ್ಪ

    ಭೈರಪ್ಪನವರ ಯಾವುದೇ ಕಾದಂಬರಿಯನ್ನು ಬಿಟ್ಟಿಲ್ಲ, ಏಕೆಂದ್ರೆ ಅವರ ಬರಹ ನನಗೆ ಪ್ರಿಯವಾದದ್ದು, ಯಾವಾಗಲೂ ರೆಫರೆನ್ಸ್‌ಗೆ ಅಂತ ಜೊತೆಯಲ್ಲೇ ಇಟ್ಟುಕೊಳ್ತಿದೆ. ಅದ್ರಲ್ಲೂ ʻಯಾನʼ ನನ್ನ ನೆಚ್ಚಿನ ಕಾದಂಬರಿ. ಇಡೀ ವಿಶ್ವದಲ್ಲೇ ಆ ರೀತಿಯ ಸ್ಪೇಸ್‌ (ಬಾಹ್ಯಾಕಾಶ) ಸೃಷ್ಟಿಸಿ ಯಾರೂ ಬರೆದಿಲ್ಲ. ವಿಜ್ಞಾನಿಗಳಿಗೂ ಯೋಚನೆ ಮಾಡಲು ಸಾಧ್ಯವಾಗದಂತಹ ಸ್ಪೇಸ್‌ ಅದು. ನಮ್ಮ ಹಿಂದೂ ತತ್ವಶಾಸ್ತ್ರವನ್ನ ಯಾರು ಅಭ್ಯಾಸ ಮಾಡಿದ್ದಾರೋ ಅವರು ಮಾತ್ರ ಅರ್ಥ ಮಾಡಿಕೊಳ್ಳೋದಕ್ಕೆ ಸಾಧ್ಯ. ಇದನ್ನೂಓದಿ: ಖ್ಯಾತ ಕಾದಂಬರಿಕಾರ ಎಸ್‌.ಎಲ್.ಭೈರಪ್ಪ ನಿಧನಕ್ಕೆ ಸಿದ್ದರಾಮಯ್ಯ, ಯಡಿಯೂರಪ್ಪ ಸೇರಿ ಗಣ್ಯರಿಂದ ಸಂತಾಪ

    ಒಂದು ಕಾದಂಬರಿಯಲ್ಲಿ ಮಹಿಳೆ, ಪುರುಷನ ಪಾತ್ರ ಸೃಷ್ಟಿಸಿದ ರೀತಿ.. ಅದನ್ನ ಓದಿದ್ರೆ ರಾತ್ರಿ ನಿದ್ರೆ ಬರಲ್ಲ. ಆಕಾಶ ಹೇಗೆ ಕೊನೆಯಿಲ್ಲದೇ ಇನ್ನು ಮುಂದೆ.. ಇನ್ನು ಮುಂದೆ ಅಂತ ಸಾಗುತ್ತದೋ, ಹಾಗೇ ಕೊನೆಯಿಲ್ಲದ ಯಾನಕ್ಕೆ ಸ್ಪೇಸ್‌ ಶಿಪ್ಪನ್ನ ಕಳಿಸಿದ್ರು. ಕಲ್ಪನೆ ಮಾಡಿದ್ರೂ ಸಹ ಪೃಥ್ವಿ, ಜಗತ್ತು, ಕುರುಕ್ಷೇತ್ರ, ಮಹಾಭಾರತ ಎಲ್ಲವೂ ಇರುತ್ತಿತ್ತು. ಆಕಾಶಕ್ಕಿಂತಲೂ ಎತ್ತರ, ಹಿಮಾಲಕ್ಕಿಂತಲೂ ದೊಡ್ಡ ಮನುಷ್ಯ ಅವರು. ಅವರನ್ನ ಕಳೆದುಕೊಂಡು ನಾವಿಂದು ಬಡವಾಗಿದ್ದೇವೆ ಎಂದು ಭಾವುಕರಾದರು.

    ಭೈರಪ್ಪನವರ ಕುರಿತು ಚುಟುಕು ಮಾಹಿತಿ
    ಭೈರಪ್ಪನವರ ಪೂರ್ತಿ ಹೆಸರು ಸಂತೇವರ ಲಿಂಗಣ್ಣಯ್ಯ ಭೈರಪ್ಪ. ಆಧುನಿಕ ಕನ್ನಡ ಸಾಹಿತ್ಯದಲ್ಲಿ ದೊಡ್ಡ ಹೆಸರು ಮಾಡಿದರು. ಹಲವಾರು ವೈಚಾರಿಕ ಸಾಹಿತ್ಯವನ್ನು ರಚಿಸಿದವರು. ಅವರ ಹಲವಾರು ಪುಸ್ತಕಗಳು ಭಾರತೀಯ ಭಾಷೆಗಳು ಮಾತ್ರವಲ್ಲದೆ ವಿದೇಶಗಳ ಭಾಷೆಗಳಿಗೂ ತರ್ಜುಮೆಯಾಗಿದೆ. ಅವರ ಹಲವಾರು ಕಾದಂಬರಿಗಳು ಹಲವಾರು ಬಾರಿ ಮರುಮುದ್ರಣಗಳನ್ನು ಕಂಡಿದ್ದು ಅವರ ಕಾದಂಬರಿಗಳ ಜನಪ್ರಿಯತೆಗೆ ಸಾಕ್ಷಿ. ಇವರ ಸಾಹಿತ್ಯ ಕೃಷಿಯನ್ನು ಗಮನಿಸಿ ಇವರಿಗೆ 2022ರಲ್ಲಿ ಕೇಂದ್ರ ಸರ್ಕಾರ, ಪದ್ಮಭೂಷಣ ಗೌರವ ನೀಡಿತ್ತು.

  • ಬಾಲ್ಯದಲ್ಲೇ ಪ್ಲೇಗ್‌ಗೆ ತುತ್ತು, ತಮ್ಮನ ಶವ ಹೊತ್ತು ಅಂತ್ಯಸಂಸ್ಕಾರ ಮಾಡಿದ್ದ ಭೈರಪ್ಪ

    ಬಾಲ್ಯದಲ್ಲೇ ಪ್ಲೇಗ್‌ಗೆ ತುತ್ತು, ತಮ್ಮನ ಶವ ಹೊತ್ತು ಅಂತ್ಯಸಂಸ್ಕಾರ ಮಾಡಿದ್ದ ಭೈರಪ್ಪ

    – ತಾಯಿ, ಅಣ್ಣ, ಅಕ್ಕ, ತಂಗಿ ಪ್ಲೇಗ್‌ಗೆ ಬಲಿ

    ಭೈರಪ್ಪನವರು (SL Bhyrappa) ಬಾಲ್ಯದಲ್ಲೇ ಪ್ಲೇಗ್‌ಗೆ ತುತ್ತಾಗಿದ್ದರು. ಆದರೆ ಹೇಗೋ ಇದರಿಂದ ಪಾರಾಗಿದ್ದರೂ ಅವರ ಕುಟುಂಬ ಸದಸ್ಯರು ಪ್ಲೇಗ್‌ ಬಲಿಯಾಗಿದ್ದರು.

    ಅವರೇ ಹೇಳುವಂತೆ, ನನಗೆ 11ನೇ ವಯಸ್ಸು ಇದ್ದಾಗ ತಾಯಿ ಪ್ಲೇಗ್‌ಗೆ ತುತ್ತಾಗಿದ್ದರು. ಇದಕ್ಕೂ ಮೊದಲು ಅಣ್ಣ, ಅಕ್ಕ ಪ್ಲೇಗ್‌ ಬಂದು ಒಂದೇ ದಿವಸ ಒಂದು ಗಂಟೆಯ ಒಳಗಡೆ ಮೃತಪಟ್ಟರು. ತಾಯಿ ಮೃತಪಟ್ಟು  3 ವರ್ಷದ ನಂತರ ತಂಗಿ ಮೃತಪಟ್ಟಳು. ಒಂದು ವರ್ಷದ ಬಳಿಕ ತಮ್ಮ ಸಾವನ್ನಪ್ಪಿದ್ದ. ತಮ್ಮನ ಹೆಣವನ್ನು ನಾನು ಹೊತ್ತುಕೊಂಡು ಹೋಗಿ ಸುಟ್ಟು ಬಂದಿದ್ದೆ. ನನಗೂ ಪ್ಲೇಗ್‌ ಬಂದಿತ್ತು. ಆದರೆ ನನು ಹೇಗೂ ಪಾರಾಗಿದ್ದೆ ಎಂದು ಹೇಳಿದ್ದರು.

    ಶಾಲೆ ಓದುವ ಸಮಯದಲ್ಲಿ ಭೈರಪ್ಪ ಅವರ ತಾಯಿ  ಇವರನ್ನು ಸೋದರ ಮಾವನ ಮನೆಯಲ್ಲಿ ಬಿಟ್ಟಿದ್ದರು. ಸ್ಥಳೀಯ ದೇವಾಲಯದಲ್ಲಿ ಸೋದರ ಮಾವ ಅರ್ಚಕರಾಗಿದ್ದರು. ಸ್ವತಃ ಭೈರಪ್ಪ ಅವರೇ ಹೇಳಿಕೊಂಡಿದ್ದ ಹಾಗೆ ಸೋದರ ಮಾವನ ಮನೆಯಲ್ಲಿದ್ದ ದಿನಗಳು ಅತ್ಯಂತ ಕಷ್ಟವಾಗಿದ್ದವು. ಆತನ ಬೈಗುಳಗಳಿಂದ ನಾನು ಹೆದರಿ ಹೋಗಿದ್ದೆ ಎಂದು ತಮ್ಮ ಆತ್ಮಚರಿತ್ರೆ ʼಭಿತ್ತಿʼಯಲ್ಲಿ ಬರೆದಿದ್ದಾರೆ.

     

    ತಮ್ಮ ಪ್ಲೇಗ್‌ನಿಂದ ಮೃತಪಟ್ಟಾಗ ಅಂತ್ಯಸಂಸ್ಕಾರ ಮಾಡಲು ಯಾರೂ ಸಹಾಯ ಮಾಡಿರಲಿಲ್ಲ. ಆಗ ಭೈರಪ್ಪ ಅವರೇ ತಮ್ಮನ ಶವವನ್ನು ಹೆಗಲ ಮೇಲೆ ಹೊತ್ತು ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಿ ಬಂದಿದ್ದರು.

    “ಆಗ ತಾನೆ ಟೆಂಟ್‌ನಲ್ಲಿ ಕೆಲಸ ಮುಗಿಸಿ ಮನೆಗೆ ಬಂದಿದ್ದೆ. ಆಗ ಅಲ್ಲಿಗೆ ಬಂದ ವ್ಯಕ್ತಿ ಭೈರಪ್ಪ ಅಂದ್ರೆ ನೀನೇ ಏನೋ, ನಿನ್ನ ತಮ್ಮ ತೀರೀಹೋದ್ನಂತೆ ಎಂದರು. ಆತ ಸತ್ತು ಬಿದ್ದಿದ್ದಾನೆ. ನಮ್ಮ ಜಾತಿಯವರು ಕೂಡ ಯಾರೂ ಬರಲಿಲ್ಲ. ‘ಸ್ಮಶಾನಕ್ಕೆ ಹೊತ್ತುಕೊಂಡು ಹೋಗಬೇಕು. ತಿಥಿ ಮಾಡಬೇಕು..’ ನಮಗೆ ಯಾಕೆ ಬೇಕು ಇದು ಅಂತಾ ಹೇಳ್ತಿದ್ದರು. ನನ್ನ ಅಪ್ಪ ಸಾಲ ತೆಗೆದುಕೊಂಡ್ರೆ ಯಾರಿಗೂ ವಾಪಾಸ್‌ ನೀಡುತ್ತಿರಲಿಲ್ಲ. ಹಾಗಾಗಿ ಹೆಣ ಹೆತ್ತುಕೊಂಡು ಹೋಗಲು ಯಾರೂ ಬರಲಿಲ್ಲ. ಅವ 6 ವರ್ಷದ ಮಗು. ನನಗೆ 16 ವರ್ಷ. ಅವನ ಹೆಣವನ್ನು ಹೆಗಲ ಮೇಲೆ ಹಾಕ್ಕೊಂಡು ಸ್ಮಶಾನಕ್ಕೆ ಹೋಗಿದ್ದೆ. ಅದರೊಂದಿಗೆ ಮಡಿಕೆಯನ್ನು ಕೈಯಲ್ಲಿ ಹಿಡಿದಿದ್ದೆ. ಸ್ಮಶಾನದಲ್ಲಿ ನಾನೇ ಅವನ ಮೃತದೇಹಕ್ಕೆ ಬೆಂಕಿ ಇಟ್ಟೆ. ಸಾಮಾನ್ಯವಾಗಿ ಶವ ಸಂಸ್ಕಾರ ಮಾಡೋವಾಗ ಬುರುಡೆ ಒಡಿಯೋತನಕ ಇರಬೇಕು. ಅಲ್ಲಿಯವರೆಗೂ ಜೀವ ಇರುತ್ತೆ ಅಂತಾರೆ. ನನ್ನ ಜೊತೆಗಿದ್ದ ವ್ಯಕ್ತಿ ಅದನ್ನ ಹೇಳಿಕೊಟ್ಟ.ನಾನು ಅದನ್ನು ಮಾಡಿ ಅಲ್ಲಿಂದ ಬಂದಿದ್ದೆ. ಆದರೆ, ಮನಗೆ ಬಂದರೆ ತಿನ್ನೋಕೆ ಏನೂ ಇಲ್ಲ” ಎಂದು  ಭೈರಪ್ಪ ಅವರು ಹೇಳಿದ್ದರು.