Tag: Kankaria adventure park

  • ಅಡ್ವೆಂಚರ್ ಪಾರ್ಕ್‌ನಲ್ಲಿ ಕುಸಿದು ಬಿದ್ದ ಜಾಯ್ ರೈಡ್- ಮೂವರು ಸಾವು

    ಅಡ್ವೆಂಚರ್ ಪಾರ್ಕ್‌ನಲ್ಲಿ ಕುಸಿದು ಬಿದ್ದ ಜಾಯ್ ರೈಡ್- ಮೂವರು ಸಾವು

    – 31 ಮಂದಿ ಗಂಭೀರ

    ಗಾಂಧಿನಗರ: ಅಡ್ವೆಂಚರ್ ಪಾರ್ಕ್‌ನಲ್ಲಿ ಜಾಯ್ ರೈಡ್ ಕುಸಿದು ಬಿದ್ದು ಮೂವರು ಸಾವನ್ನಪ್ಪಿ ಹಲವರು ಗಾಯಗೊಂಡಿರುವ ಘಟನೆ ಗುಜರಾತ್‍ನ ಅಹಮದಾಬಾದ್ ನಗರದಲ್ಲಿ ನಡೆದಿದೆ.

    ಕಂಕರಿಯಾ ಅಡ್ವೆಂಚರ್ ಪಾರ್ಕ್‌ನಲ್ಲಿನ ಭಾನುವಾರ ಮಧ್ಯಾಹ್ನ ಈ ದುರಂತ ಸಂಭವಿಸಿದೆ. ಪಾರ್ಕ್‌ನಲ್ಲಿದ್ದ `ಡಿಸ್ಕವರಿ’ ಜಾಯ್ ರೈಡ್ ಕುಸಿದು ಬಿದ್ದಾಗ ಅದರಲ್ಲಿ ಸುಮಾರು 40 ಮಂದಿ ಇದ್ದರು ಎನ್ನಲಾಗಿದೆ. ಜಾಯ್ ರೈಡ್ ಆಟ ಆರಂಭವಾಗಿ ಅದು ಮೇಲಕ್ಕೆ ಹೋದ ಬಳಿಕ ದಿಢೀರ್ ಕುಸಿದು ಬಿದ್ದಿದೆ. ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 31 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಈ ದುರಂತ ನಡೆದ ತಕ್ಷಣ ಗಾಯಗೊಂಡವರನ್ನು ಅಹಮದಾಬಾದ್ ಮಹಾನಗರ ಪಾಲಿಕೆ ಎಲ್‍ಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಕನಿಷ್ಠ 15 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ನಗರ ಮುನ್ಸಿಪಲ್ ಕಮಿಷನರ್ ವಿಜಯ್ ನೆಹ್ರಾ ಮತ್ತು ವಲಯ 6ರ ಅಹಮದಾಬಾದ್ ಉಪ ಪೊಲೀಸ್ ಆಯುಕ್ತ ಬಿಪಿನ್ ಅಹೈರ್ ಘಟನೆಯ ಬಗ್ಗೆ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ್ದು, ಅಲ್ಲಿನ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

    ಈ ವೇಳೆ ಗಾಯಗೊಂಡವರಿಗೆ ಸರಿಯಾದ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಮಹಾನಗರ ಪಾಲಿಕೆಯ ಆಯುಕ್ತ ವಿಜಯ್ ನೆಹ್ರಾ ತಿಳಿಸಿದ್ದು, ಎಫ್‍ಎಸ್‍ಎಲ್ ತಂಡದೊಂದಿಗೆ ಪೊಲೀಸರು ಈ ಘಟನೆ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

    ಜಾಯ್ ರೈಡ್ ಹೇಗೆ ಕುಸಿದು ಬಿತ್ತು? ಕಾರಣವೇನು? ತಾಂತ್ರಿಕ ದೋಷವೇ ಅಥವಾ ಸಿಬ್ಬಂದಿ ನಿರ್ಲಕ್ಷ್ಯವೇ? ಎನ್ನುವ ಬಗ್ಗೆ ತನಿಖೆ ಬಳಿಕ ತಿಳಿಯಲಿದ್ದು, ಜಾಲಿ ಮೂಡ್‍ನಲ್ಲಿ ಭಾನುವಾರ ಜಾಯ್ ರೈಡ್‍ಗೆ ಬಂದವರು ಮಸಣ ಸೇರಿದ್ದಾರೆ.