Tag: Kanchipuram

  • ಸರದಿಯಲ್ಲಿ ಚಪ್ಪಲಿ ಇಟ್ಟು ಗುಂಪುಗೂಡಿ ನಿಂತ ಮದ್ಯ ಪ್ರಿಯರು

    ಸರದಿಯಲ್ಲಿ ಚಪ್ಪಲಿ ಇಟ್ಟು ಗುಂಪುಗೂಡಿ ನಿಂತ ಮದ್ಯ ಪ್ರಿಯರು

    – ಎಣ್ಣೆಗಾಗಿ 1 ಕಿ.ಮೀ.ಗಟ್ಟಲೇ ಕ್ಯೂ
    – ಮದ್ಯದಂಗಡಿಗೆ ದಿನಕ್ಕೆ 500 ಟೋಕನ್ ಮಾತ್ರ

    ಚೆನ್ನೈ: ಸುಪ್ರೀಂಕೋರ್ಟ್ ಮದ್ರಾಸ್ ಹೈಕೋರ್ಟ್ ಆದೇಶವನ್ನು ತಡೆಹಿಡಿದ ಬೆನ್ನಲ್ಲೇ ತಮಿಳುನಾಡು ಸರ್ಕಾರವು ಮದ್ಯದಂಗಡಿಯನ್ನು ಮತ್ತೆ ಓವನ್ ಮಾಡಲು ಆದೇಶ ಹೊರಡಿಸಿದೆ. ಇದರಿಂದಾಗಿ ಫುಲ್ ಖುಷಿಯಾದ ಮದ್ಯ ಪ್ರಿಯರು ಕಿ.ಮೀ.ಗಟ್ಟಲೇ ಕ್ಯೂ ನಿಂತು ಎಣ್ಣೆ ಖರೀದಿಸಿದ್ದಾರೆ. ಕೆಲವಡೆ ಸರದಿಯಲ್ಲಿ ನಿಲ್ಲುವ ಬದಲು ಸಾಲಿನಲ್ಲಿ ಚಪ್ಪಲಿ ಇಟ್ಟು ಗುಂಪುಗೂಡಿ ನಿಂತ ದೃಶ್ಯಗಳು ಕಂಡು ಬಂದವು.

    ತಮಿಳುನಾಡಿನಲ್ಲಿ ಸರ್ಕಾರಿ ಮದ್ಯದಂಗಡಿಗಳನ್ನು ಮುಚ್ಚುವಂತೆ ನಿರ್ದೇಶಿಸಿದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿತ್ತು. ಹೀಗಾಗಿ ರಾಜ್ಯ ಸರ್ಕಾರವು ಇಂದಿನಿಂದ ಸರ್ಕಾರಿ ಸ್ವಾಮ್ಯದ ತಮಿಳುನಾಡು ರಾಜ್ಯ ಮಾರ್ಕೆಟಿಂಗ್ ಕಾರ್ಪೊರೇಷನ್ (ಟ್ಯಾಸ್ಮಾಕ್) ಮದ್ಯದಂಗಡಿಗಳನ್ನು ಮತ್ತೆ ತೆರೆಯುವ ಆದೇಶವನ್ನು ಶುಕ್ರವಾರ ನೀಡಿತ್ತು. ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಆದರೆ ಚೆನ್ನೈ, ತಿರುವಳ್ಳೂರು, ಮಾಲ್‍ಗಳು ಮತ್ತು ಕಂಟೈನ್‍ಮೆಂಟ್ ವಲಯಗಳಲ್ಲಿ ಮದ್ಯ ಮಾರಾಟವನ್ನು ತಮಿಳುನಾಡು ನಿರ್ಬಂಧಿಸಿದೆ.

    ಮದ್ಯದಂಡಿಗಳನ್ನು ತೆರೆಲು ಸರ್ಕಾರ ಆದೇಶ ನೀಡುತ್ತಿದ್ದಂತೆ ಎಣ್ಣೆ ಪ್ರಿಯರು ಫುಲ್ ಖುಷ್ ಆಗಿದ್ದರು. ಇಂದು ಮದ್ಯದಂಗಡಿ ತೆರೆಯುವುದಕ್ಕೂ ಮುನ್ನವೇ ಕುಡುಕರು ಕಿ.ಮೀ.ಗಟ್ಟಲೇ ಕ್ಯೂ ನಿಂತಿದ್ದಾರೆ. ಬಿರು ಬಿಸಿಲಿನಲ್ಲಿ ನಿಲ್ಲಲು ಸಾಧ್ಯವಾಗದೆ ಕೆಲವೆಡೆ ಸರದಿ ಸಾಲಿನಲ್ಲಿ ಚಪ್ಪಲಿ ಬಿಟ್ಟು ಗುಂಪುಗೂಡಿ ನೆರಳಿನಲ್ಲಿ ನಿಂತಿರುವ ದೃಶ್ಯಗಳು ಸಾಮಾನ್ಯವಾಗಿವೆ.

    ತಮಿಳುನಾಡು ಸರ್ಕಾರದ ಆದೇಶದ ಪ್ರಕಾರ, ಮದ್ಯದಂಗಡಿ ಮಾರಾಟಗಾರರು ಟೋಕನ್ ವ್ಯವಸ್ಥೆಯನ್ನು ಅನುಸರಿಸಬೇಕಾಗುತ್ತದೆ. ನಿರ್ದಿಷ್ಟ ಅಂಗಡಿಗೆ ಪ್ರತಿದಿನ 500 ಟೋಕನ್‍ಗಳನ್ನು ಮಾತ್ರ ನೀಡಲಾಗುತ್ತದೆ. ಮದ್ಯವನ್ನು ಖರೀದಿಸಲು ಬಯಸುವ ಜನರು ಮಾಸ್ಕ್ ಧರಿಸವು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಕೋವಿಡ್-19 ಹರಡದಂತೆ ಎಲ್ಲಾ ನಿಯಮಗಳನ್ನು ಅನುಸರಿಸಲು ಬದ್ಧರಾಗಿರಬೇಕು.

    ಕೋವಿಡ್-19 ಹರಡದಂತೆ ಘೋಷಿಸಲಾದ ನಿಯಮಗಳನ್ನು ಮದ್ಯ ಖರೀದಿಯ ವೇಳೆ ಉಲ್ಲಂಘಿಸಲಾಗುತ್ತಿದೆ ಎಂದು ಮದ್ರಾಸ್ ಹೈಕೋರ್ಟ್ ಮದ್ಯದಂಗಡಿಗಳನ್ನು ಮುಚ್ಚಲು ಆದೇಶಿಸಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಟ್ಯಾಸ್ಮಾಕ್ ಸಂಸ್ಥೆ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಸುಪ್ರೀಂಕೋರ್ಟ್ ನ್ಯಾಯಾಧೀಶರಾದ ಎಲ್.ನಾಗೇಶ್ವರ ರಾವ್, ಸಂಜಯ್ ಕಿಶನ್ ಕೌಲ್ ಮತ್ತು ಬಿ.ಆರ್.ಗವಾಯಿ ಅವರ ನೇತೃತ್ವದ ನ್ಯಾಯಪೀಠವು ಶುಕ್ರವಾರ ಮದ್ರಾಸ್ ಹೈಕೋರ್ಟ್ ಆದೇಶವನ್ನು ತಡೆಯಿತು. ಈ ಮೂಲಕ ತಮಿಳುನಾಡಿನಲ್ಲಿ ಸರ್ಕಾರಿ ಸ್ವಾಮ್ಯದ ಮದ್ಯ ಮಾರಾಟವನ್ನು ಪುನಃ ತೆರೆಯಲು ದಾರಿ ಮಾಡಿಕೊಟ್ಟಿದೆ.

  • ಕಂಚಿ ಜಗದ್ಗುರು ಶಂಕರಾಚಾರ್ಯ ಶ್ರೀ ಜಯೇಂದ್ರ ಸರಸ್ವತಿ ವಿಧಿವಶ

    ಕಂಚಿ ಜಗದ್ಗುರು ಶಂಕರಾಚಾರ್ಯ ಶ್ರೀ ಜಯೇಂದ್ರ ಸರಸ್ವತಿ ವಿಧಿವಶ

    ಚೆನ್ನೈ: ಕಂಚಿ ಪೀಠದ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಸ್ವಾಮೀಜಿ ಇಂದು ತಮಿಳುನಾಡಿನ ಕಂಚೀಪುರಂನಲ್ಲಿ ನಿಧನ ಹೊಂದಿದ್ದಾರೆ.

    82 ವರ್ಷದ ಕಂಚಿಶ್ರೀಯವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ವರ್ಷದಿಂದ ಆವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಸ್ವಾಮೀಜಿಯವರು ಈ ಹಿಂದೆ ಅಂದ್ರೆ ಜನವರಿ ತಿಂಗಳಿನಲ್ಲಿ ಆಸ್ಪತ್ರೆಗೆ ದಾಖಲಾಗಿ ಡಿಸ್ಚಾರ್ಜ್ ಕೂಡ ಆಗಿದ್ದರು. ಆ ಬಳಿಕ ಅವರ ಆರೋಗ್ಯ ಹದಗೆಡುತ್ತಾ ಬಂದಿತ್ತು.

    ಶಂಕರಾಚಾರ್ಯರು 8ನೇ ಶತಮಾನದಲ್ಲಿ ಸ್ಥಾಪಿಸಿದ ಪೀಠಗಳಲ್ಲಿ ಕಂಚಿ ಪೀಠ ಕೂಡಾ ಒಂದು. 1994ರಲ್ಲಿ ಚಂದ್ರಶೇಖರ ಸರಸ್ವತಿ ಸ್ವಾಮೀಜಿಯವರ ಉತ್ತರಾಧಿಕಾರಿಯಾಗಿ, ಮಠದ 69ನೇ ಪೀಠಾಧಿಪತಿಯಾಗಿ ಜಯೇಂದ್ರ ಸರಸ್ವತಿ ಸ್ವಾಮೀಜಿ ಅಧಿಕಾರ ಸ್ವೀಕರಿಸಿದ್ದು, ದೇಶಾದ್ಯಂತ ಅಸಂಖ್ಯಾತ ಭಕ್ತರನ್ನು ಹೊಂದಿದ್ದರು.

    ಕಂಚಿ ವರದರಾಜ ಪೆರುಮಾಳ್ ದೇವಸ್ಥಾನದ ಮ್ಯಾನೇಜರ್ ಕೊಲೆ ಪ್ರಕರಣದಲ್ಲಿ 2004ರಲ್ಲಿ ಸ್ವಾಮೀಜಿಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಳಿಕ 2013ರಲ್ಲಿ ಸ್ವಾಮೀಜಿ ಹಾಗೂ ಇತರೆ 22 ಜನರ ಮೇಲಿದ್ದ ಆರೋಪವನ್ನ ತೆರವುಗೊಳಿಸಲಾಗಿತ್ತು.

    ಸ್ವಾಮೀಜಿ ನಿಧನಕ್ಕೆ ಪ್ರಧಾನಿ ಮೋದಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ಹಣಕಾಸು ಸಚಿವ ಅರುಣ್ ಜೇಟ್ಲಿ ಮತ್ತಿತರ ಗಣ್ಯರು ಸಂತಾಪ ಸೂಚಿಸಿದ್ದಾರೆ.

  • ಈ ಗ್ರಾಮದ ಜನರಿಗೆ ಶೌಚಾಲಯ ಕಟ್ಟಿಸಿ ಮಾದರಿಯಾದ ನಟಿ ತ್ರಿಶಾ!

    ಈ ಗ್ರಾಮದ ಜನರಿಗೆ ಶೌಚಾಲಯ ಕಟ್ಟಿಸಿ ಮಾದರಿಯಾದ ನಟಿ ತ್ರಿಶಾ!

    ಕಂಚಿಪುರಂ: ಗ್ರಾಮದ ಜನರಿಗೆ ಶೌಚಾಲಯ ಕಟ್ಟಿಸಿ ಕೊಡುವ ಮೂಲಕ ದಕ್ಷಿಣ ಭಾರತದ ಫೇಮಸ್ ನಟಿ ತ್ರಿಶಾ ಇತರ ನಟ-ನಟಿಯರಿಗೆ ಮಾದರಿಯಾಗಿದ್ದಾರೆ.

    ಕಂಚಿಪುರಂ ಜಿಲ್ಲೆಯ ನೆಮಾಲಿ ಗ್ರಾಮದ ಜನರು ಶೌಚಾಲಯವಿಲ್ಲದೇ ಪರದಾಡುತ್ತಿದ್ದರು. ಹೀಗಾಗಿ ಸ್ವಚ್ಛ ಭಾರತ ಅಭಿಯಾನದ ಮೂಲಕ ನಟಿ ಸ್ವತಃ ತಾವೇ ನಿಂತು ಶೌಚಾಲಯ ಕಟ್ಟಿಸಿಕೊಟ್ಟಿದ್ದಾರೆ. ಹೀಗಾಗಿ ಆ ಭಾಗದ ಗ್ರಾಮದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ನಟಿ ಶೌಚಾಲಯ ನಿರ್ಮಾಣ ಮಾಡಲೆಂದು ಇಟ್ಟಿಗೆಗಳನ್ನು ಜೋಡಿಸಿ ಅದರ ಮಧ್ಯೆ ಸಿಮೆಂಟ್ ಹಾಕುತ್ತಿರೋ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ತಮಿಳು ನಟಿ ತ್ರಿಶಾ ಅವರು ನವೆಂಬರ್ ತಿಂಗಳಿನಿಂದ ಯುನಿಸೆಫ್ (ಯುನೈಟೆಡ್ ನೇಷನ್ಸ್ ಚಿಲ್ಡ್ರನ್ಸ್ ಫಂಡ್) ಜೊತೆ ಸೇರಿಕೊಂಡು ಈ ಕೆಲಸಗಳನ್ನು ಮಾಡುತ್ತಿದ್ದಾರೆ. ಅಲ್ಲದೇ ಅವರು ರಕ್ತಹೀನತೆ, ಬಾಲ್ಯ ವಿವಾಹ, ಬಾಲಕಾರ್ಮಿಕ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ಮುಂತಾದವುಗಳ ಕುರಿತು ತಮಿಳುನಾಡು ಮತ್ತು ಕೇರಳದಲ್ಲಿ ಜಾಗೃತಿ ಮೂಡಿಸುವ ಕೆಲಸಗಳನ್ನೂ ಕೂಡ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಚಿತ್ರರಂಗದ ಸ್ಟಾರ್ ಗಳು ಮತ್ತು ಸೆಲೆಬ್ರಿಟಿಗಳು ಇಂತಹ ಕೆಲಸಗಳನ್ನು ಮಾಡುತ್ತಿರುವುದು ತುಂಬಾ ಅಪರೂಪವಾಗಿದೆ. ಹೀಗಾಗಿ ತ್ರಿಶಾ ಅವರ ಈ ಪರಿಶ್ರಮಕ್ಕೆ ಜನ ಬೆಂಬಲ ಸೂಚಿಸಿದ್ದಾರೆ.