Tag: Kanchanjunga Express

  • ಪ್ರಯಾಣಿಕರ ಮೂಲ ಸೌಕರ್ಯ ಕಡೆಗಣಿಸಿ, ವಂದೇ ಭಾರತ್‌ ಮಾತ್ರ ಪಬ್ಲಿಸಿಟಿ ಮಾಡ್ತಿದ್ದಾರೆ: ದೀದಿ ಕೆಂಡಾಮಂಡಲ

    ಪ್ರಯಾಣಿಕರ ಮೂಲ ಸೌಕರ್ಯ ಕಡೆಗಣಿಸಿ, ವಂದೇ ಭಾರತ್‌ ಮಾತ್ರ ಪಬ್ಲಿಸಿಟಿ ಮಾಡ್ತಿದ್ದಾರೆ: ದೀದಿ ಕೆಂಡಾಮಂಡಲ

    ಕೋಲ್ಕತ್ತಾ: ಕೇಂದ್ರ ಸರ್ಕಾರ ರೈಲ್ವೆ ಇಲಾಖೆ ಹಾಗೂ ರೈಲುಗಳಲ್ಲಿ ಮೂಲ ಸೌಕರ್ಯಗಳನ್ನು ಕಡೆಗಣಿಸಿ, ವಂದೇ ಭಾರತ್‌ ರೈಲುಗಳ ಬಗ್ಗೆ ಮಾತ್ರ ಪಬ್ಲಿಸಿಟಿ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಕಿಡಿ ಕಾರಿದ್ದಾರೆ.

    ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ನಡೆದ ರೈಲು ದುರಂತದ ಕುರಿತು ಮಾತನಾಡಿದ ಸಿಎಂ, ರೈಲ್ವೆ ಸುರಕ್ಷತೆಗಾಗಿ ನಾನು ಅನೇಕ ಕೆಲಸಗಳನ್ನು ಪ್ರಾರಂಭಿಸಿದ್ದೇನೆ. ಆದ್ರೆ ಬಿಜೆಪಿಯವರು ವಂದೇ ಭಾರತ್‌ (Vande Bharat) ಬಗ್ಗೆ ಪಬ್ಲಿಸಿಟಿ ಮಾಡ್ತಿದ್ದಾರೆ. ರಾಜಧಾನಿ ಎಕ್ಸ್‌ಪ್ರೆಸ್ ನಂತರ ದುರೊಂತೊ ಎಕ್ಸ್‌ಪ್ರೆಸ್‌ (Duronto Express) ಅತ್ಯಂತ ವೇಗದ ರೈಲು, ಈಗ ಅದು ಎಲ್ಲಿದೆ? ಇದೆಲ್ಲವು ರೈಲ್ವೆ ಇಲಾಖೆಯ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ. ಇದನ್ನೂ ಓದಿ: ರಾಜಧಾನಿಗೆ ಅಮರಾವತಿಯನ್ನೇ ಚಂದ್ರಬಾಬು ನಾಯ್ಡು ಆಯ್ದುಕೊಂಡಿದ್ದು ಏಕೆ..?

    ಕೇಂದ್ರ ಸರ್ಕಾರ ಬಣ್ಣ ಬಣ್ಣದ ಮಾತುಗಳನ್ನಾಡುತ್ತಾ ಪ್ರಯಾಣಿಕರ ಮೂಲ ಸೌಕರ್ಯಗಳನ್ನು ನಿರ್ಲಕ್ಷಿಸುತ್ತಿದೆ. ಸ್ಲೀಪರ್‌ ಕೋಚ್‌ಗಳಲ್ಲಿ ರಾತ್ರಿ ಪ್ರಯಾಣಿಸುವವರಿಗೆ ಕಳಪೆ ಹಾಸಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೇ ಕೋಚ್‌ಗಳಲ್ಲಿ ಶೌಚಾಲಯಗಳಲ್ಲಿ ಶುಚಿತ್ವವೂ ಇರುವುದಿಲ್ಲ. ಕೇಂದ್ರ ಸರ್ಕಾರ ರೈಲ್ವೆ ಇಲಾಖೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಯೋಜನೆಗಳನ್ನು ಉದ್ಘಾಸಿಟುವ ವೇಳೆ ಮಾತ್ರ ಆ ಇಲಾಖೆಗಳನ್ನು ನೋಡುವಂತಾಗಿದೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಕಳೆದ 3 ದಶಕಗಳಲ್ಲಿ ದೇಶ ಕಂಡ ಡೆಡ್ಲಿ ರೈಲು ದುರಂತಗಳ ಬಗ್ಗೆ ನಿಮಗೆ ಗೊತ್ತಾ?

    ರೈಲ್ವೆ ಇಲಾಖೆ (Railway Department) ಈಗ ಹೆಸರಿಗೆ ಮಾತ್ರ ಅಸ್ತಿತ್ವದಲ್ಲಿದೆ. ಬಜೆಟ್‌ ಕೊರತೆಯಿಂದ ಪೋಷಣೆ ಮಾಡುವವರೇ ಇಲ್ಲದಂತಾಗಿದೆ. ನಾನೂ ಈ ಹಿಂದೆ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಿರುವುದರಿಂದ ಅಲ್ಲಿನ ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ. ಈಗಿನ ಸರ್ಕಾರ ರೈಲ್ವೆ ಅಧಿಕಾರಿಗಳು, ಎಂಜಿನಿಯರ್‌ಗಳು, ತಾಂತ್ರಿಕ ಸಿಬ್ಬಂದಿ, ಸುರಕ್ಷತಾ ಅಧಿಕಾರಿಗಳು ಮತ್ತು ಕಾರ್ಮಿಕರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ರೈಲ್ವೆ ಸಿಬ್ಬಂದಿಗೆ ನೀಡಲಾಗಿದ್ದ ಹಳೆಯ ಪಿಂಚಣಿ ವ್ಯವಸ್ಥೆಯನ್ನೂ ಹಿಂಪಡೆಯಲಾಗಿದೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಅಲ್ಲದೇ ಈ ಹಿಂದೆ ರೈಲುಗಳ ಸುರಕ್ಷತೆಗಾಗಿ ನಮ್ಮ ಸರ್ಕಾರ ವ್ಯವಸ್ಥೆಗೊಳಿಸಿದ್ದ ಆಂಟಿ-ಕೊಲ್ಯೂಷನ್ ಸಾಧನವನ್ನು ಬಿಜೆಪಿ ʻಕವಚʼ ಎಂದು ಮರುನಾಮಕರಣ ಮಾಡಿದೆ. ಈ ವ್ಯವಸ್ಥೆಯು ಚಾಲಕ ನಿದ್ರಿಸುತ್ತಿದ್ದರೆ ಅಲಾರಂ ನಿಂದ ಎಚ್ಚರಿಸುತ್ತದೆ. ಎರಡೂ ರೈಲುಗಳು ಒಂದೇ ಟ್ರ್ಯಾಕ್‌ನಲ್ಲಿ ಬಂದರೆ ನಿಲ್ಲುತ್ತದೆ. ಬಿಜೆಪಿ ಇದನ್ನು ಮರುನಾಮಕರಣ ಮಾಡಿದರೂ ಪರವಾಗಿಲ್ಲ, ಆದ್ರೆ ಜನರಿಗೆ ಅದು ರಕ್ಷಾಕವಚವಾಗಿರುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    ಕಾಂಜನಜುಂಗಾ ಎಕ್ಸ್‌ರೈಲು (Kanchanjunga Express Train) ಅಪಘಾತ ನಡೆದ ಸ್ಥಳಕ್ಕೆ ಸದ್ಯ ವೈದ್ಯಕೀಯ ತಂಡಗಳು ಹಾಗೂ ವಿಪತ್ತು ನಿರ್ವಹಣಾ ತಂಡಗಳನ್ನು ಕಳುಹಿಸಲಾಗಿದೆ. ಅಪಘಾತದಲ್ಲಿ ಸಂತ್ರಸ್ತರನ್ನ ರಕ್ಷಣೆ ಮಾಡಲಾಗಿದೆ. ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಹಿಂದಿನಿಂದ ಎಕ್ಸ್‌ಪ್ರೆಸ್ ರೈಲಿಗೆ ಗುದ್ದಿದ ಗೂಡ್ಸ್ ರೈಲು – ಐವರು ದುರ್ಮರಣ, 25 ಮಂದಿಗೆ ಗಾಯ

    ಡಾರ್ಜಿಲಿಂಗ್‌ ಘಟನೆ ಏನು?
    ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ಗೂಡ್ಸ್ ರೈಲೊಂದು ಹಿಂಬದಿಯಿಂದ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಸಾವಿನ ಸಂಖ್ಯೆ 9ಕ್ಕೆ ಏರಿದ್ದು, ಸುಮಾರು 60 ಮಂದಿ ಗಾಯಗೊಂಡಿದ್ದಾರೆ. ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ಸಿಲ್ಚಾರ್‌ನಿಂದ ಕೋಲ್ಕತ್ತಾದ ಸೀಲ್ದಾಗೆ ಚಲಿಸುತ್ತಿದ್ದ ಸಂದರ್ಭ ನ್ಯೂ ಜಲ್ಪೈಗುರಿ ಸಮೀಪದ ರಂಗಪಾಣಿ ನಿಲ್ದಾಣದ ಬಳಿ ಗೂಡ್ಸ್ ರೈಲು ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ನ ಎರಡು ಬೋಗಿಗಳು ಹಳಿತಪ್ಪಿವೆ. ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

  • ಕಳೆದ 3 ದಶಕಗಳಲ್ಲಿ ದೇಶ ಕಂಡ ಡೆಡ್ಲಿ ರೈಲು ದುರಂತಗಳ ಬಗ್ಗೆ ನಿಮಗೆ ಗೊತ್ತಾ?

    ಕಳೆದ 3 ದಶಕಗಳಲ್ಲಿ ದೇಶ ಕಂಡ ಡೆಡ್ಲಿ ರೈಲು ದುರಂತಗಳ ಬಗ್ಗೆ ನಿಮಗೆ ಗೊತ್ತಾ?

    ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ಭೀಕರ ರೈಲು ದುರಂತದಲ್ಲಿ (West Bengal Train Accident) ಮೃತಪಟ್ಟವರ ಸಂಖ್ಯೆ 9ಕ್ಕೆ ಹಾಗೂ ಗಾಯಾಳುಗಳ ಸಂಖ್ಯೆ 60ಕ್ಕೆ ಏರಿಕೆಯಾಗಿದೆ. ಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ (PM Modi), ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಗಣ್ಯಾತಿಗಣ್ಯರು ಸಂತಾಪ ಸೂಚಿಸಿದ್ದಾರೆ.

    ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಹಾಗೂ ಗಾಯಗೊಂಡವರಿಗೆ 50,000 ರೂ. ನೆರವು ನೀಡುವುದಾಗಿ ಪ್ರಧಾನಿ ಕಾರ್ಯಾಲಯ ಘೋಷಿಸಿದೆ. ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ (Darjeeling) ನಡೆದ ರೈಲು ದುರಂತವು ಕಳೆದ ವರ್ಷ ಒಡಿಶಾದ ಬಾಲಸೋರ್‌ನಲ್ಲಿ ನಡೆದ ರೈಲು ದುರಂತವನ್ನೇ ನೆನಪಿಸಿದೆ. ಈ ಹೊತ್ತಿನಲ್ಲಿ ಕಳೆದ ಮೂರು ದಶಕಗಳಲ್ಲಿ ದೇಶದಲ್ಲಿ ಸಂಭವಿಸಿದ ಭೀಕರ ರೈಲು ದುರಂತಗಳ ಬಗ್ಗೆ ತಿಳಿಯುವುದು ಮುಖ್ಯವಾಗಿದೆ. ಇದನ್ನೂ ಓದಿ: ಯಾತ್ರಾರ್ಥಿಗಳಿದ್ದ ಬಸ್ ಮೇಲೆ ಉಗ್ರರ ದಾಳಿ ಪ್ರಕರಣ – ತನಿಖೆ ಎನ್‍ಐಎ ಹೆಗಲಿಗೆ

    ಡೆಡ್ಲಿ ರೈಲು ದುರಂತಗಳು:
    2023: ಒಡಿಶಾದ ಬಾಲಸೋರ್‌ನಲ್ಲಿ ಟ್ರಿಪಲ್ ರೈಲು ಅಪಘಾತದಲ್ಲಿ ಸುಮಾರು 300 ಜನ ಸಾವನ್ನಪ್ಪಿದರು ಮತ್ತು 1,000ಕ್ಕೂ ಹೆಚ್ಚು ಜನರು ಗಾಯಗೊಂಡರು.

    2016: ಉತ್ತರ ಪ್ರದೇಶದ ಕಾನ್ಪುರ ಬಳಿ ಇಂದೋರ್-ಪಾಟ್ನಾ ಎಕ್ಸ್‌ಪ್ರೆಸ್ ರೈಲು ಹಳಿತಪ್ಪಿ ಕನಿಷ್ಠ 150 ಪ್ರಯಾಣಿಕರು ಸಾವನ್ನಪ್ಪಿದರು.

    2010: ಪಶ್ಚಿಮ ಬಂಗಾಳದಲ್ಲಿ ಜ್ಞಾನೇಶ್ವರಿ ಎಕ್ಸ್‌ಪ್ರೆಸ್ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು 146 ಜನರು ಸಾವನ್ನಪ್ಪಿದರು.

    2002: ಕೋಲ್ಕತ್ತಾ-ನವದೆಹಲಿ ರಾಜಧಾನಿ ಧಬಿ ನದಿಯಲ್ಲಿ ಮುಳುಗಿ ಕನಿಷ್ಠ 120 ಜನರು ಸಾವನ್ನಪ್ಪಿದರು.

    1999: ಪಶ್ಚಿಮ ಬಂಗಾಳದಲ್ಲಿ ಎರಡು ರೈಲುಗಳ ನಡುವೆ ಡಿಕ್ಕಿ ಸಂಭವಿಸಿ ಕನಿಷ್ಠ 285 ಜನರು ಸಾವನ್ನಪ್ಪಿದರು.

    1998: ಪಂಜಾಬ್‌ನಲ್ಲಿ ಹಳಿ ತಪ್ಪಿದ ರೈಲಿಗೆ ಸೀಲ್ದಾ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದು ಕನಿಷ್ಠ 210 ಜನರು ಸಾವನ್ನಪ್ಪಿದರು.

    1995: ಆಗ್ರಾ ಬಳಿಯ ಫಿರೋಜಾಬಾದ್‌ನಲ್ಲಿ ಪುರುಷೋತ್ತಮ್ ಎಕ್ಸ್‌ಪ್ರೆಸ್‌ಗೆ ಕಾಳಿಂದಿ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದು 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.

    ಡಾರ್ಜಿಲಿಂಗ್‌ ಘಟನೆ ಏನು?
    ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ಗೂಡ್ಸ್ ರೈಲೊಂದು ಹಿಂಬದಿಯಿಂದ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಸಾವಿನ ಸಂಖ್ಯೆ 9ಕ್ಕೆ ಏರಿದ್ದು, ಸುಮಾರು 60 ಮಂದಿ ಗಾಯಗೊಂಡಿದ್ದಾರೆ. ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ಸಿಲ್ಚಾರ್‌ನಿಂದ ಕೋಲ್ಕತ್ತಾದ ಸೀಲ್ದಾಗೆ ಚಲಿಸುತ್ತಿದ್ದ ಸಂದರ್ಭ ನ್ಯೂ ಜಲ್ಪೈಗುರಿ ಸಮೀಪದ ರಂಗಪಾಣಿ ನಿಲ್ದಾಣದ ಬಳಿ ಗೂಡ್ಸ್ ರೈಲು ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ನ ಎರಡು ಬೋಗಿಗಳು ಹಳಿತಪ್ಪಿವೆ. ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಹಿಂದಿನಿಂದ ಎಕ್ಸ್‌ಪ್ರೆಸ್ ರೈಲಿಗೆ ಗುದ್ದಿದ ಗೂಡ್ಸ್ ರೈಲು – ಐವರು ದುರ್ಮರಣ, 25 ಮಂದಿಗೆ ಗಾಯ

    ಇಲ್ಲಿಯವರೆಗೆ ದೊರೆತ ಮಾಹಿತಿಯ ಪ್ರಕಾರ, ಗೂಡ್ಸ್ ರೈಲು ಸಿಗ್ನಲ್ ಅನ್ನು ಮೀರಿದ ಪರಿಣಾಮ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ತಂಡಗಳು ಮತ್ತು ಅಂಬುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೋಡಗಿಕೊಂಡಿವೆ. ಜನರು ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆಯಲು ರೈಲ್ವೆ ಇಲಾಖೆ ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ. ಇದನ್ನೂ ಓದಿ: ಪಶ್ಚಿಮ ಬಂಗಾಳ ರೈಲು ದುರಂತ – ವಿಷಾದ ವ್ಯಕ್ತಪಡಿಸಿದ ಪ್ರಧಾನಿ ಮೋದಿ

  • ಪಶ್ಚಿಮ ಬಂಗಾಳ ರೈಲು ದುರಂತ – ವಿಷಾದ ವ್ಯಕ್ತಪಡಿಸಿದ ಪ್ರಧಾನಿ ಮೋದಿ

    ಪಶ್ಚಿಮ ಬಂಗಾಳ ರೈಲು ದುರಂತ – ವಿಷಾದ ವ್ಯಕ್ತಪಡಿಸಿದ ಪ್ರಧಾನಿ ಮೋದಿ

    – ಮೃತರ ಕುಟುಂಬಕ್ಕೆ ತಲಾ 2 ಲಕ್ಷ, ಗಾಯಳುಗಳಿಗೆ 50,000 ರೂ. ಪರಿಹಾರ ಘೋಷಣೆ

    ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ (West Bengal Train Accident) ಸಂಭವಿಸಿದ ಭೀಕರ ರೈಲು ದುರಂತದ ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ವಿಷಾದ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅವರು, ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ರೈಲು ಅಪಘಾತ ದುಃಖಕರವಾಗಿದೆ. ಘಟನೆಯಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

    ಘಟನೆಯ ಕುರಿತು ಅಧಿಕಾರಿಗಳೊಂದಿಗೆ ಮಾತನಾಡಿ ಪರಿಸ್ಥಿತಿ ಅವಲೋಕಿಸಿದ್ದೇನೆ. ಸಂತ್ರಸ್ತರ ನೆರವಿಗಾಗಿ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅಪಘಾತ ನಡೆದ ಸ್ಥಳಕ್ಕೆ ತೆರಳಿದ್ದಾರೆ ಎಂದು ತಿಳಿಸಿದರು.

    ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಹಾಗೂ ಗಾಯಗೊಂಡವರಿಗೆ 50,000 ರೂ. ನೆರವು ನೀಡುವುದಾಗಿ ಪ್ರಧಾನಿ ಕಾರ್ಯಾಲಯ ಘೋಷಿಸಿದೆ. ಇನ್ನು ಈ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಕೂಡ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

    ಘಟನೆ ಏನು?
    ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ಗೂಡ್ಸ್ ರೈಲೊಂದು ಹಿಂಬದಿಯಿಂದ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ (Kanchanjunga Express) ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಸಾವಿನ ಸಂಖ್ಯೆ 8ಕ್ಕೆ ಏರಿದ್ದು, 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

    ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ಸಿಲ್ಚಾರ್‌ನಿಂದ ಕೋಲ್ಕತ್ತಾದ ಸೀಲ್ದಾಗೆ ಚಲಿಸುತ್ತಿದ್ದ ಸಂದರ್ಭ ನ್ಯೂ ಜಲ್ಪೈಗುರಿ ಸಮೀಪದ ರಂಗಪಾಣಿ ನಿಲ್ದಾಣದ ಬಳಿ ಗೂಡ್ಸ್ ರೈಲು ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ನ ಎರಡು ಬೋಗಿಗಳು ಹಳಿತಪ್ಪಿವೆ. ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

    ಇಲ್ಲಿಯವರೆಗೆ ದೊರೆತ ಮಾಹಿತಿಯ ಪ್ರಕಾರ, ಗೂಡ್ಸ್ ರೈಲು ಸಿಗ್ನಲ್ ಅನ್ನು ಮೀರಿದ ಪರಿಣಾಮ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್‌ಗೆ ಡಿಕ್ಕಿ ಹೊಡೆದಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ತಂಡಗಳು ಮತ್ತು ಅಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿವೆ ಎಂದು ವರದಿಗಳು ತಿಳಿಸಿವೆ. ಜನರು ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆಯಲು ರೈಲ್ವೆ ಇಲಾಖೆ ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ.