Tag: Kananda News

  • ಆ.15ರ ನಂತರ ಲಾಕ್ ಆಗುತ್ತಾ ಬೆಂಗಳೂರು? – ಟಫ್ ರೂಲ್ಸ್ ಬಗ್ಗೆ ಅಶೋಕ್ ಸುಳಿವು

    ಆ.15ರ ನಂತರ ಲಾಕ್ ಆಗುತ್ತಾ ಬೆಂಗಳೂರು? – ಟಫ್ ರೂಲ್ಸ್ ಬಗ್ಗೆ ಅಶೋಕ್ ಸುಳಿವು

    – ಆ.15ರ ಬಳಿಕ ಬೆಂಗಳೂರಿನಲ್ಲಿ ಟಫ್ ರೂಲ್ಸ್
    – ಹಬ್ಬದ ವೇಳೆ ದೇವಸ್ಥಾನಗಳಿಗೂ ನಿರ್ಬಂಧ?
    – ಅಪಾರ್ಟ್ ಮೆಂಟ್ ಗಳ ಸ್ವಿಮ್ಮಿಂಗ್ ಪೂಲ್, ಜಿಮ್ ಕ್ಲೋಸ್

    ಬೆಂಗಳೂರು: ಆಗಸ್ಟ್ 15ರವರೆಗೆ ಬೆಂಗಳೂರಿನಲ್ಲಿ ಯಾವುದೇ ಕಠಿಣಕ್ರಮ ಇರುವುದಿಲ್ಲ, ಕರ್ಫ್ಯೂ ಇರುವುದಿಲ್ಲ. ಅದಾದ ಬಳಿಕ ಪರಿಸ್ಥಿತಿ ನೋಡಿಕೊಂಡು ಕ್ರಮ ಕೈಗೊಳ್ಳಲಾಗುವುದು. ನಂತರ ಕರ್ಫ್ಯೂ ಆಗಲೂಬಹುದು, ಆಗದೆಯೂ ಇರಬಹುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

    ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಬಿಬಿಎಂಪಿ ಅಧಿಕಾರಿಗಳ ಜೊತೆ ಕಂದಾಯ ಸಚಿವ ಆರ್ ಅಶೋಕ್ ಕೋವಿಡ್ ನಿಯಂತ್ರಣ ಸಂಬಂಧ ಸಭೆ ನಡೆಸಿ, ಹಲವು ತೀರ್ಮಾನಗಳನ್ನು ಕೈಗೊಂಡರು.

    ಆಗಸ್ಟ್ 15ರ ಬಳಿಕ ಹಲವು ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಈ ತಿಂಗಳಲ್ಲಿ ಸಾಲು ಸಾಲು ಹಬ್ಬಗಳು ಬರಲಿವೆ. ದೇವಸ್ಥಾನಗಳಿಗೆ ಹೆಚ್ಚು ಜನ ಬರುವ ಸಾಧ್ಯತೆ ಇದೆ. ಹೀಗಾಗಿ ದೇವಸ್ಥಾನಗಳಿಗೆ ನಿಬರ್ಂಧ ಮಾಡುವ ಬಗ್ಗೆ ಹೆಚ್ಚಿನ ಗಮನ ಕೊಡಲಾಗುವುದು ಎಂದರು. ನಿರಂತರ ಹಬ್ಬ ಬರುವುದರಿಂದ ಮುಂಜಾಗ್ರತ ಕ್ರಮ ಕೈಗೊಳ್ಳಬೇಕಿದೆ. ಈ ತಿಂಗಳು ಪೂರ್ತಿ ನಿಯಮ ತರುವ ಬಗ್ಗೆ ಆಡಳಿತ ಮಂಡಳಿಯ ಬಗ್ಗೆ ಚರ್ಚೆ ಮಾಡಲಾಗುವುದು ಎಂದರು.

    ಶಾಲೆಗಳನ್ನು ಆರಂಭಿಸಲು ತಜ್ಞರು ಅಭಿಪ್ರಾಯ ಕೊಟ್ಟಿದ್ದಾರೆ. ಹೀಗಾಗಿ ಹಂತಹಂತವಾಗಿ ಆರಂಭಿಸಲಾಗುವುದು. ಪಾಸಿಟಿವಿಟಿ ಶೇ.2-3 ಹೆಚ್ಚಾದರೆ ಹೆಚ್ಚಾದರೆ ಕರ್ಫ್ಯೂ ಬಗ್ಗೆ ಚಿಂತಿಸಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ : ನನಗೆ ಝೀರೋ ಟ್ರಾಫಿಕ್ ಸೌಲಭ್ಯ ಬೇಡ: ಅರಗ ಜ್ಞಾನೇಂದ್ರ

    ಜಿಮ್ ಬಂದ್:
    ಕೋವಿಡ್ ಹೆಚ್ಚಾಗಿ ಅಪಾರ್ಟ್ ಮೆಂಟ್ ಗಳಲ್ಲೇ ಕಂಡುಬರುತ್ತಿರುವುದರಿಂದ ಕೋವಿಡ್ ಸೋಂಕು ಕಂಡುಬರುವ ಅಪಾರ್ಟ್ ಮೆಂಟ್ ಗಳ ಜಿಮ್, ಸ್ವಿಮ್ಮಿಂಗ್ ಪೂಲ್ ಬಂದ್ ಮಾಡಿಸಲಾಗುವುದು. ಮಾರ್ಷಲ್ಸ್ ಕೂಡಾ ಭೇಟಿ ನೀಡಿ ಪರಿಶೀಲಿಸಬಹುದು. ಯಾರೂ ತಡೆಯುವಂತಿಲ್ಲ. ಜೊತೆಗೆ ಕೋವಿಡ್ ಸೋಂಕು ಕಂಡು ಬಂದ ಅಪಾರ್ಟ್ ಮೆಂಟ್ ಸದಸ್ಯರ ಆರೋಗ್ಯ ಪರಿಶೀಲಿಸಬೇಕು. ಆ ಒಂದು ಮಳಿಗೆಯನ್ನು ಸೀಲ್ ಡೌನ್ ಮಾಡಲಾಗುವುದು ಎಂದರು.

    ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸದಾಗಿ, ನಗರದ ಪ್ರತಿ ಮನೆಗೂ ಭೇಟಿ ನೀಡಲು ವೈದ್ಯಾಧಿಕಾರಿಗಳ 108 ತಂಡ ಆಗಸ್ಟ್ 16 ರಿಂದ ಕೆಲಸ ಆರಂಭಿಸಲಿದೆ. ಮನೆ ಬಾಗಿಲಿಗೆ ಪಾಲಿಕೆಯ ವೈದ್ಯರು ಎಂಬ ಯೋಜನೆಯಡಿ, ಪ್ರತೀ ಮನೆಗೂ ಹೋಗಿ ಮನೆಯ ಎಲ್ಲಾ ಸದಸ್ಯರ ಆರೋಗ್ಯ ಪರಿಸ್ಥಿತಿಯ ಚೆಕ್ ಲಿಸ್ಟ್ ಮಾಡಿಕೊಳ್ಳಬೇಕು. ಲಸಿಕೆ ಮಾಹಿತಿಯನ್ನೂ ಪಡೆದು ಎಲ್ಲವನ್ನೂ ಮೊಬೈಲ್ ನಲ್ಲಿ ಅಪ್ಲೋಡ್ ಮಾಡುವ ಕೆಲಸ ಆರಂಭವಾಗಲಿದೆ ಎಂದು ತಿಳಿಸಿದರು.

    ಕೋವಿಡ್ ಪಾಸಿಟಿವ್ ಎಂದು ಗೊತ್ತಾದ ಆರು ಗಂಟೆಯ ಒಳಗೆ ವೈದ್ಯರ ತಂಡ, ಭೇಟಿ ನೀಡಲಿದೆ. ಇದಲ್ಲದೆ ಕೋವಿಡ್ ಇದ್ದರೂ ಇರದಿದ್ದರೂ, ವೈದ್ಯರ ತಂಡ ಮನೆಮನೆ ಬಾಗಿಲಿಗೆ ಭೇಟಿ ನೀಡಲಿದೆ. ಪ್ರತೀ ಮನೆಗೂ ಒಂದು ಕ್ಷೇತ್ರದ ಎರಡು ವಾರ್ಡ್ ಗಳಲ್ಲಿ ಪೈಲೆಟ್ ಯೋಜನೆ ಜಾರಿಯಾಗಲಿದೆ. ಇದರಿಂದ ನಗರದ ಜನರ ಪೂರ್ಣ ಚಿತ್ರಣ ಸಿಗಲಿದೆ. ರೋಗಿಗಳ ರಕ್ಷಣೆ, ರೋಗ ಬಾರದಂತೆ ತಡೆಗಟ್ಟಲು, ವ್ಯಾಕ್ಸಿನೇಷನ್ ಪಡೆಯಲು “ಮನೆಬಾಗಿಲಿಗೆ ಕಾರ್ಪೋರೇಷನ್  ವೈದ್ಯರು” ಎಂಬ ಮೂಲಕ ನಡೆಯಲಿದೆ. ಸರ್ಕಾರದ ನಿರ್ದೇಶನದ ಪ್ರಕಾರ ವಾರ್ಡ್ ಗೆ ಒಬ್ಬರಂತೆ, 198 ವೈದ್ಯರನ್ನು 60 ಸಾವಿರ ರೂ. ಸಂಬಳ ನೀಡಿ ಗುತ್ತಿಗೆಗೆ ತೆಗೆದುಕೊಳ್ಳಲಾಗುವುದು ಎಂದರು.

    ಪ್ರತೀ ವಿಧಾನಸಭಾ ಕ್ಷೇತ್ರದಲ್ಲೂ ಇಬ್ಬರು ವೈದ್ಯರು ಇರಲಿದ್ದಾರೆ. ಕೋವಿಡ್ ಸೋಂಕಿತರಿಗೆ ಕೊಟ್ಟ ಕಿಟ್ ನಿಂದ ಏನಾದರೂ ಅಡ್ಡ ಪರಿಣಾಮಗಳಾದರೆ, ಬೇರೆ ಮೆಡಿಸಿನ್ ಸಲಹೆ ನೀಡಲು ಪ್ರತೀ ಕ್ಷೇತ್ರದಲ್ಲಿ ಇಬ್ಬರು ಹೆಚ್ಚುವರಿ ವೈದ್ಯರು ಕೋವಿಡ್ ಗಾಗಿಯೇ ಮೀಸಲಾಗಿ ಇರಲಿದ್ದಾರೆ. ಇವರ ಹೆಸರು, ಸಂಪರ್ಕ ಸಂಖ್ಯೆಯನ್ನು ಕಿಟ್ ನಲ್ಲಿಯೇ ನಮೂದಿಸಿ ಇಡಲಾಗುತ್ತದೆ ಎಂದು ವಿವರಿಸಿದರು.

    ಬೆಂಗಳೂರಲ್ಲಿಯೂ ಕೇರಳದ ಪರಿಸ್ಥಿತಿ ನಿರ್ಮಾಣ ಆಗದಿರಲು, ಕರ್ಫ್ಯೂ ಜಾರಿಯಾಗದಂತೆ ಇರಲು ಎಲ್ಲರೂ ಮಾಸ್ಕ್ ಧರಿಸಬೇಕು. ಹೋಟೆಲ್, ರೆಸ್ಟೋರೆಂಟ್ ನಲ್ಲಿ ಹೇಗಿರಬೇಕು ಎಂಬ ಗೈಡ್ ಲೈನ್ಸ್ ಬಿಡುಗಡೆ ಮಾಡಲಾಗುವುದು ಎಂದರು.

  • ಕೊರೊನಾ ನಿಯಂತ್ರಣಕ್ಕೆ 1 ತಿಂಗಳು ಲಾಕ್‍ಡೌನ್ ಮಾಡಿ: ಎಚ್‍ಡಿಕೆ

    ಕೊರೊನಾ ನಿಯಂತ್ರಣಕ್ಕೆ 1 ತಿಂಗಳು ಲಾಕ್‍ಡೌನ್ ಮಾಡಿ: ಎಚ್‍ಡಿಕೆ

    ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ಕರ್ನಾಟಕವನ್ನು ಒಂದು ತಿಂಗಳು ಲಾಕ್‍ಡೌನ್ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

    ಲಾಕ್‍ಡೌನ್‍ನಿಂದ ಕೊರೊನಾ ನಿಯಂತ್ರಣ ಆಗುತ್ತಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ನಾನು ನಮ್ಮ ಶಾಸಕರಿಂದ ಮಾಹಿತಿ ಪಡೆದಿದ್ದು ಇದು ಸುಳ್ಳು. ಸರ್ಕಾರ ಕೊರೊನಾ ಪರೀಕ್ಷೆಯನ್ನು ಕಡಿಮೆ ಮಾಡಿದೆ. ಹೀಗಾಗಿ ಕೊರೊನಾ ಕೇಸ್‍ಗಳು ಕಡಿಮೆಯಾಗುತ್ತಿದೆ ಎಂದು ತಿಳಿಸಿದರು.

    ತಜ್ಞರ ಸಮಿತಿ ಸಹ ಟೆಸ್ಟಿಂಗ್ ಕಡಿಮೆ ಮಾಡಬಾರದು ಎಂದು ತಿಳಿಸಿದೆ. ಸರ್ಕಾರ ಸತ್ಯ ಮುಚ್ಚಿಡಬಾರದು. ದೊಡ್ಡ ಅನಾಹುತ ಆಗದಂತೆ ನೋಡಿಕೊಳ್ಳಬೇಕು. ಲಾಕ್ ಡೌನ್ ಅವಶ್ಯಕತೆ ಇದ್ದು, ಸರ್ಕಾರ ಆರ್ಥಿಕ ಪ್ಯಾಕೇಜ್ ಕೊಡಬೇಕು ಎಂದು ಆಗ್ರಹಿಸಿದರು.

    ಕರ್ನಾಟಕದ ಸಮಸ್ಯೆಗೆ ಸಂಸದರು ಕೆಲಸ ಮಾಡಬೇಕು. ಕೇಂದ್ರ ನಮ್ಮನ್ನ ಮಲತಾಯಿ ಧೋರಣೆ ತೋರಿಸುತ್ತಿದ್ದಾರೆ. ನಮ್ಮ ಸಂಸದರಿಗೆ ಪ್ರತಿಭಟನೆ ಮಾಡುವ ಧೈರ್ಯವಿಲ್ಲ. ರಾಜ್ಯದ ಪರ ಸಂಸದರು ಧ್ವನಿ ಎತ್ತಬೇಕು. ಮೋದಿ ಅವರಿಗೆ ಎಷ್ಟು ಜನ ಮಂತ್ರಿ ಇದ್ದಾರೆ ಅಂತ ಗೊತ್ತಿಲ್ಲ. ಅನೇಕ ಕೇಂದ್ರ ಸಚಿವರೇ ಕಾಣೆಯಾಗಿದ್ದಾರೆ. ರಾಜ್ಯಕ್ಕಾಗಿ ನಮ್ಮ ಸಂಸದರು ಪ್ರತಿಭಟನೆ ಮಾಡಿ ನಮ್ಮ ರಾಜ್ಯದ ಪರ ಕೆಲಸ ಮಾಡಬೇಕು ಎಂದು ಹೇಳಿ ಸಂಸದರ ನಡೆಯನ್ನು ಟೀಕಿಸಿದರು.

    ಸರ್ಕಾರ ಸರಿಯಾಗಿ ಕೆಲಸ ಮಾಡದ್ದಕ್ಕೆ ಹೈಕೋರ್ಟ್ ಮಧ್ಯಪ್ರವೇಶ ಮಾಡಿದೆ. ನಿಮ್ಮ ನಡವಳಿಕೆ ಸರಿ ಇದ್ದಿದ್ದರೆ ನ್ಯಾಯಾಂಗ ಯಾಕೆ ಹಸ್ತಕ್ಷೇಪ ಮಾಡುತ್ತಿತ್ತು? ನಿಮ್ಮ ನಡವಳಿಕೆ ಸರಿ ಮಾಡಿಕೊಂಡು ಕೆಲಸ ಮಾಡಿ. ಅದನ್ನು ಬಿಟ್ಟು ಕೋರ್ಟ್ ಮಧ್ಯ ಪ್ರವೇಶದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

  • ಮಾ.21 ರಿಂದ 28ರವರೆಗೆ ಮೆಜೆಸ್ಟಿಕ್‌ನಿಂದ ಮೈಸೂರು ರಸ್ತೆಯವರೆಗೆ ಮೆಟ್ರೋ ಸೇವೆ ಇರಲ್ಲ

    ಮಾ.21 ರಿಂದ 28ರವರೆಗೆ ಮೆಜೆಸ್ಟಿಕ್‌ನಿಂದ ಮೈಸೂರು ರಸ್ತೆಯವರೆಗೆ ಮೆಟ್ರೋ ಸೇವೆ ಇರಲ್ಲ

    ಬೆಂಗಳೂರು: ನೇರಳೆ ಮಾರ್ಗದಲ್ಲಿ ಕಾಮಗಾರಿ ನಡೆಯಲಿರುವ ಕಾರಣ 8 ದಿನಗಳ ಕಾಲ ಮೆಟ್ರೋ ಸೇವೆಯಲ್ಲಿ ವ್ಯತ್ಯಯವಾಗಲಿದೆ.

    ಮೆಜೆಸ್ಟಿಕ್ ಹಾಗೂ ಮೈಸೂರು ರಸ್ತೆ ನಡುವೆ ಮಾರ್ಚ್ 21 ರಿಂದ 28ರವರೆಗೆ ಸಂಚಾರವನ್ನು ಸ್ಥಗಿತಗೊಳಿಸಲಾಗುವುದು ಎಂದು ನಮ್ಮ ಮೆಟ್ರೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

     

    ಹೇಳಿಕೆಯಲ್ಲಿ ಏನಿದೆ?
    ಮೈಸೂರು ರಸ್ತೆಯಿಂದ ಕೆಂಗೇರಿಯವರೆಗಿನ ಪೂರ್ವ ಪಶ್ಚಿಮ ವಿಸ್ತರಿಸಿದ ನೇರಳೆ ಮಾರ್ಗ ಪೂರ್ವ ನಿಯೋಜನೆಗೆ ಸಂಬಂಧಿಸಿದಂತೆ ಮಾಗಡಿ ರಸ್ತೆಯಿಂದ ಮೈಸೂರು ರಸ್ತೆಯಲ್ಲಿ ಸಿಗ್ನಲಿಂಗ್‌ ವ್ಯವಸ್ಥೆಗೆ ಮಾರ್ಪಾಡು ಕಾಮಗಾರಿಗಳನ್ನು ಕೈಗೊಳ್ಳಬೇಕಿದೆ.

    ಕೆಂಪೇಗೌಡ ನಿಲ್ದಾಣ ಮತ್ತು ಮೈಸೂರು ರಸ್ತೆ ನಡುವೆ ಮೆಟ್ರೋ ರೈಲು ಸೇವೆಗಳನ್ನು ಮಾರ್ಚ್‌ 21 ರಿಂದ ಮಾರ್ಚ್‌ 28ರವರೆಗೆ ಸ್ಥಗಿತಗೊಳಿಸಲಾಗುವುದು.

     

    ಈ ಅವಧಿಯಲ್ಲಿ ನೇರಳೆ ಮಾರ್ಗದಲ್ಲಿರುವ ಮೆಟ್ರೋ ಸೇವೆಗಳು ಬೈಯಪ್ಪನಹಳ್ಳಿಯಿಂದ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ವರೆಗೆ ಮಾತ್ರ ಇರಲಿದೆ. ಮಾರ್ಚ್‌ 29 ಬೆಳಗ್ಗೆ 7 ಗಂಟೆಯಿಂದ ಮೆಟ್ರೋ ಸೇವೆಗಳು ಎಂದಿನಂತೆ ನೇರಳೆ ಮಾರ್ಗದಲ್ಲಿ ಆರಂಭಗೊಳ್ಳಲಿದೆ.

    ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ನಿಲ್ದಾಣಗಳ ನಡುವೆ ಮೆಟ್ರೋ ಸೇವೆಗಳಲ್ಲಿ ಈ ದಿನಾಂಕದಂದು ಯಾವುದೇ ಬದಲಾವಣೆ ಇರುವುದಿಲ್ಲ.

  • ‘ಮಹಾ’ ಕೊರೊನಾ ಸುನಾಮಿ – ಒಂದೇ ದಿನ ದಾಖಲೆಯ 388 ಮಂದಿಗೆ ಸೋಂಕು

    ‘ಮಹಾ’ ಕೊರೊನಾ ಸುನಾಮಿ – ಒಂದೇ ದಿನ ದಾಖಲೆಯ 388 ಮಂದಿಗೆ ಸೋಂಕು

    – ಉಡುಪಿಯಲ್ಲಿ 150, ಕಲಬುರುಗಿಯಲ್ಲಿ 100
    – ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 3796ಕ್ಕೆ ಏರಿಕೆ
    – 367 ಅಂತರಾಜ್ಯ ಪ್ರಯಾಣಿಕರು

    ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ‘ಮಹಾ’ ಸುನಾಮಿಯಾಗಿದೆ. ಇಂದು ಒಂದೇ ದಿನ ಬರೋಬ್ಬರಿ ದಾಖಲೆಯ ಪ್ರಮಾಣದ 388 ಪ್ರಕರಣಗಳು ಬಂದಿದ್ದು ಒಟ್ಟು ಸೋಂಕಿತರ ಸಂಖ್ಯೆ 3,796ಕ್ಕೆ ಏರಿಕೆಯಾಗಿದೆ.

    ಇಲ್ಲಿಯವರೆಗೆ 200ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿತ್ತು. ಆದರೆ ಒಂದೇ ದಿನ 380ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ಇದೇ ಮೊದಲು. ಸೋಮವಾರದವರೆಗೆ ರಾಜ್ಯದಲ್ಲೇ ಬೆಂಗಳೂರಿನಲ್ಲಿ(385) ಅತ್ಯಧಿಕ ಪ್ರಕರಣ ದಾಖಲಾಗಿತ್ತು. ಆದರೆ ಇಂದು ಬರೋಬ್ಬರಿ 150 ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಉಡುಪಿ ಮೊದಲ ಸ್ಥಾನಕ್ಕೆ ಏರಿದೆ. ಉಡುಪಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 410ಕ್ಕೆ ಏರಿಕೆಯಾಗಿದೆ. ಕಲಬುರಗಿಯಲ್ಲಿ 100 ಹೊಸ ಪ್ರಕರಣ ಬಂದಿದ್ದು ಸೋಂಕಿತರ ಸಂಖ್ಯೆ 405ಕ್ಕೆ ತಲುಪಿದೆ.

    ಇಂದು ಉಡುಪಿಯಲ್ಲಿ ಬಂದ ಎಲ್ಲ 150 ಮತ್ತು ಕಲಬುರಗಿಯ 100 ಪ್ರಕರಣಗಳಿಗೆ ಮಹಾರಾಷ್ಟ್ರ ಸಂಪರ್ಕವಿದೆ. ಇಂದು ಒಟ್ಟು 75 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದು ಕಂಡುಬಂದ ಒಟ್ಟು 388 ಸೋಂಕಿತರ ಪೈಕಿ 367 ಸೋಂಕಿತರು ಅಂತರಾಜ್ಯ ಪ್ರಯಾಣಿಕರಾಗಿದ್ದಾರೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಕೊರೊನಾಗೆ ಯಾರೂ ಬಲಿಯಾಗಿಲ್ಲ. ಒಟ್ಟು 2,339 ಸಕ್ರೀಯ ಪ್ರಕರಣಗಳಿದ್ದು, ಇಲ್ಲಿಯವರೆಗೆ ಒಟ್ಟು 1403 ಮಂದಿ ಬಿಡುಗಡೆಯಾಗಿದ್ದಾರೆ.

    ಯಾವ ಜಿಲ್ಲೆಯಲ್ಲಿ ಎಷ್ಟು?
    ಉಡುಪಿ 150, ಕಲಬುರಗಿ 100, ಬೆಂಗಳೂರು ನಗರ 12, ಯಾದಗಿರಿ 5, ಮಂಡ್ಯ 4, ರಾಯಚೂರು 16, ಬೆಳಗಾವಿ 51, ಹಾಸನ 9, ಬೀದರ್ 10, ದಾವಣಗೆರೆ 7, ಚಿಕ್ಕಬಳ್ಳಾಪುರ 2, ವಿಜಯಪುರ 4, ಬಾಗಲಕೋಟೆ 9, ಧಾರವಾಡ 2, ಕೋಲಾರ 1, ಬೆಂಗಳೂರು ಗ್ರಾಮಾಂತರ 3, ಹಾವೇರಿ 1 ಪ್ರಕರಗಳು ಬಂದಿದೆ.

    ದಕ್ಷಿಣ ಕನ್ನಡ, ಮೈಸೂರು, ಉತ್ತರ ಕನ್ನಡ, ಬಳ್ಳಾರಿ, ಶಿವಮೊಗ್ಗ, ಚಿತ್ರದುರ್ಗ , ಗದಗ, ಚಿಕ್ಕಮಗಳೂರು, ಕೊಪ್ಪಳ, ಕೊಡಗು, ರಾಮನಗರದಲ್ಲಿ ಇಂದು ಯಾವುದೇ ಪಾಸಿಟಿವ್ ವರದಿಯಾಗಿಲ್ಲ.

    ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಬಿಡುಗಡೆ?
    ಮಂಡ್ಯ 20, ಧಾರವಾಡ 15, ಬಳ್ಳಾರಿ 11, ಬೆಳಗಾವಿ 9, ಉತ್ತರ ಕನ್ನಡ 5, ತುಮಕೂರು 5, ಕೋಲಾರ 4, ಹಾವೇರಿ 3, ವಿಜಯಪುರದಲ್ಲಿ 3 ಮಂದಿ ಬಿಡುಗಡೆಯಾಗಿದ್ದಾರೆ.

  • ವುಹಾನ್‍ನಲ್ಲಿ ಸಾವಿನ ಸಂಖ್ಯೆ ದಿಢೀರ್ ಶೇ.50 ಹೆಚ್ಚಳ, 3869ಕ್ಕೆ ಏರಿಕೆ

    ವುಹಾನ್‍ನಲ್ಲಿ ಸಾವಿನ ಸಂಖ್ಯೆ ದಿಢೀರ್ ಶೇ.50 ಹೆಚ್ಚಳ, 3869ಕ್ಕೆ ಏರಿಕೆ

    ಬೀಜಿಂಗ್: ಕೊರೊನಾ ವೈರಸ್ ವಿಚಾರದಲ್ಲಿ ಸುಳ್ಳು ಮಾಹಿತಿ ನೀಡಿದ ಚೀನಾ ವುಹಾನ್ ನಗರದಲ್ಲಿನ ಸಾವಿನ ಸಂಖ್ಯೆಯನ್ನು ಮರೆ ಮಾಡಿತ್ತೆ ಎನ್ನುವ ಪ್ರಶ್ನೆ ಈಗ ಎದ್ದಿದೆ.

    ಕೊರೊನಾ ವೈರಸಿನ ಹುಟ್ಟೂರು ವುಹಾನ್ ನಗರದಲ್ಲಿನ ಸಾವಿನ ಸಂಖ್ಯೆ ದಿಢೀರ್ ಶೇ.50 ರಷ್ಟು ಹೆಚ್ಚಾಗಿದೆ. ಗುರುವಾರದವರೆಗೆ ವುಹಾನ್ ನಗರದಲ್ಲಿ 2,579 ಜನ ಮೃತಪಟ್ಟಿದ್ದರು. ಆದರೆ ಈಗ ಹೊಸದಾಗಿ 1,290 ಮಂದಿ ಸೇರಿದ್ದು ಒಟ್ಟು ಸಾವನ್ನಪ್ಪಿದ ರೋಗಿಗಳ ಸಂಖ್ಯೆ 3,869ಕ್ಕೆ ಏರಿಕೆಯಾಗಿದೆ.

    ಅಮೆರಿಕ, ಇಟಲಿಯಲ್ಲಿ ದಿನಕ್ಕೆ ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪುತ್ತಿರುವಾಗ ವುಹಾನ್ ನಗರದಲ್ಲಿನ ಮೃತರ ಸಂಖ್ಯೆ ಬಗ್ಗೆ ಮೊದಲೇ ಅನುಮಾನವಿತ್ತು. ಈಗ ವುಹಾನ್ ನಗರದಲ್ಲಿ ಲಾಕ್‍ಡೌನ್ ಸಂಪೂರ್ಣವಾಗಿ ತೆಗೆದ ಬಳಿಕ ಚೀನಾ ಸರ್ಕಾರ ಈ ಮಾಹಿತಿಯನ್ನು ನೀಡಿದೆ.

    ಕೊರೊನಾ ವೈರಸ್ ನಿಯಂತ್ರಣ ಸಂಬಂಧ ಸ್ಥಳೀಯ ಸರ್ಕಾರ ತಪ್ಪು ವರದಿ, ವಿಳಂಬ ನೀತಿಯಿಂದಾಗಿ ಈ ಸಂಖ್ಯೆ ಬೆಳಕಿಗೆ ಬಂದಿರಲಿಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ. ಇದನ್ನೂ ಓದಿ: ಬೆಳಕಿಗೆ ಬಂತು ಚೀನಾದ ಮತ್ತೊಂದು ಮಹಾ ಎಡವಟ್ಟು

    ಆರಂಭದಲ್ಲಿ ಆಸ್ಪತ್ರೆಗಳಲ್ಲಿ ಎಲ್ಲ ಕೊರೊನಾ ರೋಗಿಗಳನ್ನು ದಾಖಲಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅಷ್ಟೇ ಅಲ್ಲದೇ ವೈದ್ಯರ ಸಂಖ್ಯೆ ಸಹ ಕಡಿಮೆಯಿತ್ತು. ಈ ಕಾರಣದಿಂದ ರೋಗಿಗಳು ಮೃತಪಟ್ಟಿದರು. ಈ ವರದಿ ಬರಲು ತಡವಾಗಿತ್ತು ಎಂದು ಚೀನಾ ಗ್ಲೋಬಲ್ ಟಿಲಿವಿಷನ್ ನೆಟವರ್ಕ್(ಸಿಜಿಟಿಎನ್) ವರದಿ ಮಾಡಿದೆ.

    ಬುಧವಾರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವುಹಾನ್ ನಗರದಲ್ಲಿ 3 ಸಾವಿರ ಮಂದಿ ಮೃತಪಟ್ಟಿದ್ದಕ್ಕೆ ಅನುಮಾನ ವ್ಯಕ್ತಪಡಿಸಿದ್ದರು. ಚೀನಾದಲ್ಲಿ 3 ಸಾವಿರ ಸಾವು ಸಂಭವಿಸಿದೆ ಎಂಉ ನಂಬಲು ಸಾಧ್ಯವೇ ಎಂದು ಪ್ರಶ್ನಿಸಿದ್ದರು.

  • 76 ದಿನಗಳ ಲಾಕ್‍ಡೌನ್ ತೆರವು – ವುಹಾನ್‌ನಲ್ಲಿ  ಲೈಟ್ ಶೋ,  ಪ್ರಜೆಗಳ ಆನಂದ ಭಾಷ್ಪ

    76 ದಿನಗಳ ಲಾಕ್‍ಡೌನ್ ತೆರವು – ವುಹಾನ್‌ನಲ್ಲಿ ಲೈಟ್ ಶೋ, ಪ್ರಜೆಗಳ ಆನಂದ ಭಾಷ್ಪ

    – ಶೇ.97 ರಷ್ಟು ಅಂಗಡಿಗಳು ಓಪನ್
    – ರಸ್ತೆ, ರೈಲು, ವಾಯು ಮಾರ್ಗಗಳ ಸಂಚಾರ ಆರಂಭ

    ಬೀಜಿಂಗ್: ಆಪ್ತರ ಜೊತೆ ವಿಡಿಯೋ ಕಾಲಿಂಗ್ ವೇಳೆ ಆನಂದ ಭಾಷ್ಪ, ಹಾಡುಗಳನ್ನು ಹಾಡಿ ನೃತ್ಯ ಮಾಡಿ ಸಂಭ್ರಮ, ಲ್ಯಾಂಡ್ ಆದ ವಿಮಾನಕ್ಕೆ ವಾಟರ್ ಸೆಲ್ಯೂಟ್, ಬಹುಮಹಡಿ ಕಟ್ಟಡಗಳಲ್ಲಿ ವಿದ್ಯುತ್ ದೀಪಗಳ ನರ್ತನ. ಆತ್ಮೀಯರು ಸಿಕ್ಕಾಗ ಪ್ರೀತಿಯ ಅಪ್ಪುಗೆ… ಇದು 76 ದಿನಗಳ ಬಳಿಕ ಚೀನಾದ ಉಹಾನ್ ನಗರದಲ್ಲಿ ಕಂಡು ಬಂದ ದೃಶ್ಯ.

    ವಿಶ್ವದೆಲ್ಲೆಡೆ ಸಾವಿರಾರು ಜನರ ಸಾವಿಗೆ ಕಾರಣವಾದ ಕೊರೊನಾ ವೈರಸ್ಸಿನ ಉಗಮ ಸ್ಥಾನ ಚೀನಾದ ಹುಬೇ ಪ್ರಾಂತ್ಯದ ರಾಜಧಾನಿ ಉಹಾನ್ ನಲ್ಲಿದ್ದ 76 ದಿನಗಳ ಲಾಕ್‍ಡೌನ್ ಮಂಗಳವಾರಕ್ಕೆ ಅಂತ್ಯವಾಗಿದೆ. ಲಾಕ್‍ಡೌನ್ ಅಂತ್ಯವಾಗಿದ್ದೇ ತಡ ಬುಧವಾರದಿಂದ ಜನ ಸಂಭ್ರಮದಿಂದ ವುಹಾನ್ ನಗರದಲ್ಲಿ ಸುತ್ತಾಡುತ್ತಿದ್ದಾರೆ.

    ವಿಶ್ವದ ಹಲವು ರಾಷ್ಟ್ರಗಳಲ್ಲಿ ಲಾಕ್‍ಡೌನ್ ಘೋಷಣೆಯಾಗಿದ್ದರೆ ವುಹಾನ್ ನಗರದ ಶೇ.97 ರಷ್ಟು ಅಂಗಡಿಗಳು ತೆರೆದಿದೆ. ಅಂಗಡಿಗಳ ಮುಂದೆ ನಿಂತು ಫೋಟೋ ಕ್ಲಿಕ್ಕಿಸುವುದರ ಜೊತೆ ವಿಡಿಯೋ ಕಾಲಿಂಗ್ ಮಾಡುತ್ತಿದ್ದಾರೆ. ಕಡ್ಡಾಯವಾಗಿ ಮಾಸ್ಕ್ ಧರಿಸಿದ ಗ್ರಾಹಕರಿಗೆ ಮಾತ್ರ ಅಂಗಡಿಗಳ ಪ್ರವೇಶಕ್ಕೆ ಅನುಮತಿ ನೀಡಬೇಕೆಂದು ಸೂಚಿಸಿದ ಹಿನ್ನೆಲೆಯಲ್ಲಿ ಎಲ್ಲರೂ ಮಾಸ್ಕ್ ಧರಿಸಿ ಸುತ್ತಾಡುತ್ತಿದ್ದಾರೆ. ಅಂಗಡಿ ಪ್ರವೇಶಕ್ಕೂ ಮುನ್ನ ದೇಹದ ಉಷ್ಣಾಂಶವನ್ನು ಪರೀಕ್ಷೆ ಮಾಡಲಾಗುತ್ತದೆ.

    ಲಾಕ್‍ಡೌನ್ ತೆರವಾಗುತ್ತಿದ್ದಂತೆ ರಾತ್ರಿಯೇ ಜನ ರಸ್ತೆಗೆ ಕಾರನ್ನು ಇಳಿಸಿದ್ದಾರೆ. ಲೇಸರ್ ಲೈಟ್‍ಗಳು ಮತ್ತೆ ಬೆಳಗುವ ಮೂಲಕ ಜನರನ್ನು ಸ್ವಾಗತಿಸಿವೆ. ಎರಡೂವರೆ ತಿಂಗಳ ಕಾಲ ‘ಮೌನ’ಕ್ಕೆ ಶರಣಾಗಿದ್ದ ಗಗನಚುಂಬಿ ಕಟ್ಟಡಗಳ ದೀಪಗಳು ‘ನೃತ್ಯ’ ಮಾಡಿ ರಂಜಿಸಲು ಆರಂಭಿಸಿವೆ.

    ರಸ್ತೆ, ರೈಲು, ವಾಯು ಸೇವೆಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ದೂರದ ಊರುಗಳಿಂದ ಬಂದು ಲಾಕ್ ಆಗಿದ್ದ ಸಾವಿರಾರು ಜನ ತಮ್ಮ ಊರುಗಳಿಗೆ ತೆರಳಿದ್ದಾರೆ. ಚೀನಾದ ಪ್ರಮುಖ ನಗರಗಳಾದ ಬೀಜಿಂಗ್, ಶಾಂಘೈ, ಶೆಂಜೀನ್ ಗೆ ರೈಲು ಸೇವೆ ಆರಂಭಗೊಂಡಿದೆ.

    ಕೊರೊನಾ ವೈರಸ್‍ನಿಂದಾಗಿ ಮುಚ್ಚಲ್ಪಟ್ಟ ವಿಮಾನ ನಿಲ್ದಾಣಕ್ಕೆ ಮೊದಲ ವಿಮಾನ ಲ್ಯಾಂಡ್ ಆಗಿದೆ. ಸಾಧಾರಣವಾಗಿ ಹೊಸ ವಿಮಾನ ಲ್ಯಾಂಡ್ ಆದಾಗ ವಾಟರ್ ಸೆಲ್ಯೂಟ್ ನೀಡಲಾಗುತ್ತದೆ. ಆದರೆ 76 ದಿನಗಳ ಬಳಿಕ ಲ್ಯಾಂಡ್ ಆದ ಪ್ರಯಾಣಿಕ ವಿಮಾನಕ್ಕೆ ವಾಟರ್ ಸೆಲ್ಯೂಟ್ ನೀಡುವ ಮೂಲಕ ಸ್ವಾಗತಿಸಲಾಯಿತು.

    ಚೀನಾದಲ್ಲಿ ಮದುವೆ ಆಗಬೇಕಾದರೆ ಆನ್‍ಲೈನ್ ನಲ್ಲಿ ನೊಂದಣಿ ಮಾಡಬೇಕು. ಲಾಕ್‍ಡೌನ್ ಹಿನ್ನೆಲೆಯಲ್ಲಿ ಆನ್‍ಲೈನ್ ನೋಂದಣಿಯನ್ನು ನಿರ್ಬಂಧಿಸಲಾಗಿತ್ತು. ಹೀಗಾಗಿ ಹಲವು ಜೋಡಿಗಳು ಮದುವೆಯಾಗಿರಲಿಲ್ಲ. ಏಪ್ರಿಲ್ 3 ರಿಂದ ನೋಂದಣಿ ಮಾಡಲು ಅನುಮತಿ ಸಿಕ್ಕಿತ್ತು. ಒಂದೇ ಬಾರಿಗೆ ಭಾರೀ ಸಂಖ್ಯೆಯ ಜನ ವೆಬ್‍ಸೈಟಿಗೆ ಭೇಟಿ ನೀಡಿದ ಕಾರಣ ಕ್ರ್ಯಾಶ್ ಆಗಿತ್ತು. ಹೆಲ್ತ್ ಕೋಡ್ ಇದ್ದವರಿಗೆ ಮಾತ್ರ ನೋಂದಣಿ ಮಾಡಲು ಸರ್ಕಾರ ಅನುಮತಿ ನೀಡಿತ್ತು.

    ಈ ಸಂಬಂಧ ಇಂದು ಮದುವೆ ಪ್ರಮಾಣಪತ್ರ ಪಡೆದ ಜೋಡಿ ಪ್ರತಿಕ್ರಿಯಿಸಿ, ನಾವು ಈ ದಿನಕ್ಕಾಗಿ ಹಲವು ದಿನಗಳಿಂದ ಕಾಯುತ್ತಿದ್ದೆವು. ಆ ಸುದಿನ ಇಂದು ಬಂದಿದೆ. ಲಾಕ್‍ಡೌನ್ ತೆರವಾದ ದಿನವೇ ಪ್ರಮಾಣ ಪತ್ರ ಸಿಕ್ಕಿದ ಕಾರಣ ಈ ದಿನವನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

    ವುಹಾನ್ ವಿಶೇಷತೆ ಏನು?
    ಮಧ್ಯ ಚೀನಾದ ದೊಡ್ಡ ನಗರ ವುಹಾನ್ ಆಗಿದ್ದು ಇಲ್ಲಿ ಬಂದರು, ವಿಮಾನ ನಿಲ್ದಾಣಗಳಿವೆ. 35 ಶಿಕ್ಷಣ ಸಂಸ್ಥೆಗಳಿದ್ದು ಚೀನಾದ ಶೈಕ್ಷಣಿಕ ಹಬ್ ಎಂದು ವುಹಾನ್ ನಗರವನ್ನು ಕರೆಯಲಾಗುತ್ತದೆ. ಈ ಕಾರಣಕ್ಕೆ ಹಲವು ರಾಷ್ಟ್ರಗಳ ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೇ ಚೀನಾ ಸರ್ಕಾರವೇ ಇಲ್ಲಿ ಹಲವು ಸಂಶೋಧನಾ ಕೇಂದ್ರಗಳನ್ನು ತೆರೆದಿದೆ. ಒಟ್ಟು ಇಲ್ಲಿ 350 ಸಂಶೋಧನಾ ಕೇಂದ್ರಗಳಿವೆ.