ದುನಿಯಾ ವಿಜಯ್ ಅಭಿನಯದ ಜಯಮ್ಮನ ಮಗ ಚಿತ್ರವನ್ನು ನಿರ್ದೇಶನ ಮಾಡಿ ಗೆಲುವು ಕಂಡಿದ್ದವರು ವಿಕಾಸ್. ಈ ಮೂಲಕವೇ ಯಶಸ್ವೀ ನಿರ್ದೇಶಕರಾಗಿಯೂ ಗುರುತಿಸಿಕೊಂಡ ವಿಕಾಸ್ ಆ ನಂತರದಲ್ಲಿ ಒಂದಷ್ಟು ಕಾಲ ಗ್ಯಾಪ್ ತೆಗೆದುಕೊಂಡು ಇದೀಗ ಕಾಣದಂತೆ ಮಾಯವಾದನು ಚಿತ್ರದ ಹೀರೋ ಆಗಿ ಪ್ರತ್ಯಕ್ಷರಾಗಿದ್ದಾರೆ. ಈಗಾಗಲೇ ಟ್ರೈಲರ್ ಮುಖೇನ ಅಲೆಯೆಬ್ಬಿಸಿರೋ ಈ ಸಿನಿಮಾ ತಂಡ ಪ್ರೇಕ್ಷಕರಿಗೊಂದು ಭರ್ಜರಿ ಸ್ಪರ್ಧೆ ಏರ್ಪಡಿಸಿದೆ. ಇದಕ್ಕೆ ಬಂಪರ್ ಬಹುಮಾನವನ್ನೂ ಕೊಡಲು ತಯಾರಾಗಿದೆ.

ಕಾಣದಂತೆ ಮಾಯವಾದನು ಚಿತ್ರವೀಗ ತೆರೆಗಾಣುವ ಸನ್ನಾಹದಲ್ಲಿದೆ. ಈ ಹೊತ್ತಿನಲ್ಲಿಯೇ ಇದಕ್ಕೊಂದು ಸೂಕ್ತವಾದ ಟ್ಯಾಗ್ ಲೈನ್ ಹುಡುಕಾಟದಲ್ಲಿ ಚಿತ್ರತಂಡ ನಿರತವಾಗಿದೆ. ಈಗಾಗಲೇ ಈ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆಯಲ್ಲಾ? ಅದನ್ನು ಆನಂದ್ ಆಡಿಯೂ ಯೂಟ್ಯೂಬ್ ಚಾನೆಲ್ ಮೂಲಕ ಒಮ್ಮೆ ವೀಕ್ಷಿಸಿ ಅದಕ್ಕೆ ತಕ್ಕುದಾದ ಟ್ಯಾಗ್ ಲೈನ್ ಅನ್ನು ಕಮೆಂಟ್ ಬಾಕ್ಸ್ ಮೂಲಕ ಸೂಚಿಸಬಹುದು. ಹೀಗೆ ಒಂದು ಸಲ ಕಮೆಂಟ್ ಬಾಕ್ಸ್ ಮೂಲಕ ಒಂದೇ ಟ್ಯಾಗ್ ಲೈನ್ ಅನ್ನು ಸೂಚಿಸಬಹುದು. ಆದರೆ ಒಬ್ಬರು ಎಷ್ಟು ಟ್ಯಾಗ್ ಲೈನುಗಳನ್ನಾದರೂ ಬಿಡಿ ಬಿಡಿಯಾಗಿ ದಾಖಲಿಸಬಹುದು. ಇದರಲ್ಲಿ ಆಯ್ಕೆಯಾದ ಟ್ಯಾಗ್ ಲೈನಿಗೆ ಐವತ್ತು ಸಾವಿರ ರೂಪಾಯಿ ಬಹುಮಾನ ನೀಡಲು ಚಿತ್ರತಂಡ ತೀರ್ಮಾನಿಸಿದೆ. ಇದು ಅಂತಿಮಗೊಳ್ಳುತ್ತಲೇ ಬಿಡುಗಡೆಯ ದಿನಾಂಕ ಘೋಷಣೆ ಮಾಡಲೂ ಚಿತ್ರತಂಡ ಯೋಜನೆ ಹಾಕಿಕೊಂಡಿರುವಂತಿದೆ.

ಸದರಿ ಟ್ರೈಲರ್ ಮೂಲಕವೇ ಕಾಣದಂತೆ ಮಾಯವಾದನು ಭಿನ್ನ ಜಾಡಿನ ಹಾರರ್ ಕಥಾನಕ ಹೊಂದಿರೋ ಚಿತ್ರವೆಂಬುದು ಸಾಬೀತಾಗಿದೆ. ಆತ್ಮದ ಪ್ರೇಮವೃತ್ತಾಂತ ಹೊಂದಿರೋ ಕಾಣದಂತೆ ಮಾಯವಾದನು ಸಿನಿಮಾ ಪಕ್ಕಾ ಆಕ್ಷನ್ ಮೂವಿಯಾಗಿಯೂ ಎದುರುಗೊಳ್ಳಲು ರೆಡಿಯಾಗಿದೆ. ಇದರೊಂದಿಗೆ ನಿರ್ದೇಶರಾಗಿದ್ದ ವಿಕಾಸ್ ಆಕ್ಷನ್ ಹೀರೋ ಆಗಿ ಅವತರಿಸುವ ಕಾತರದಲ್ಲಿದ್ದಾರೆ. ನಿರ್ದೇಶಕ ರಾಜ್ ಪತ್ತಿಪಾಟಿ ಕನ್ನಡಕ್ಕೆ ಅಪರೂಪವಾದಂಥಾ ಕಥೆಯೊಂದಿಗೆ ಈ ಚಿತ್ರವನ್ನು ರೋಚಕವಾಗಿ ಕಟ್ಟಿ ಕೊಟ್ಟಿದ್ದಾರೆ.
https://www.youtube.com/watch?v=GNaimyGV1m4
