Tag: Kanadante Mayavadanu

  • ಮನಸ್ಸಿನ ಕದ ತಟ್ಟಿದ ‘ಕೊನೆಯಿರದಂತ ಪ್ರೀತಿಗೆ’ ಹಾಡು

    ಮನಸ್ಸಿನ ಕದ ತಟ್ಟಿದ ‘ಕೊನೆಯಿರದಂತ ಪ್ರೀತಿಗೆ’ ಹಾಡು

    ಕಾಣದಂತೆ ಮಾಯಾವಾದನು ಸಿನಿಮಾದ ಟೈಟಲ್ ಕೇಳಿದಾಕ್ಷಣ ಪುನೀತ್ ರಾಜ್‍ಕುಮಾರ್ ಬಾಲ ನಟನಾಗಿ ನಟಿಸಿದ್ದ ‘ಚಲಿಸುವ ಮೋಡಗಳು’ ಸಿನಿಮಾ ನೆನಪಾಗುತ್ತೆ. ಆ ಸಿನಿಮಾದಲ್ಲಿ ಕಾಣದಂತೆ ಮಾಯಾವಾದನು, ನಮ್ಮ ಶಿವ ಕೈಲಾಸ ಸೇರಿಕೊಂಡನು ಅನ್ನೋ ಹಾಡು ಈಗಲೂ ಚಾಲ್ತಿಯಲ್ಲಿದೆ. ಆ ಹಾಡಿನ ಒಂದು ಎಳೆಯನ್ನೇ ಸಿನಿಮಾದ ಶೀರ್ಷಿಕೆ ಮಾಡಿರುವುದು ವಿಶೇಷ. ಸಿನಿಮಾಗೆ ಹಾರಾರ್ ಟಚ್ ಇದ್ರು ಕೂಡ ಫೆಂಟಾಸ್ಟಿಕ್ ಲವ್ ಸ್ಟೋರಿ ಇದೆ. ಹಿಂದೆಂದೂ ಈ ರೀತಿಯ ಕಥೆಯನ್ನ ನೋಡಿಲ್ಲ ಎಂಬ ಫೀಲ್ ಈಗಾಗಲೇ ಟ್ರೇಲರ್ ನೋಡಿದವರಿಗೆ ಅನ್ನಿಸಿದೆ. ಇದೀಗ ಸಿನಿಮಾದ ಲಿರಿಕಲ್ ಸಾಂಗ್ ರಿಲೀಸ್ ಆಗಿದ್ದು, ಎಲ್ಲರ ಮನಸ್ಸನ್ನು ತಣಿಸುವಂತಿದೆ. ‘ಕೊನೆಯಿರದಂತ ಪ್ರೀತಿಗೆ’ ಹಾಡು ಮತ್ತೆ ಮತ್ತೆ ಕೇಳಬೇಕೆನ್ನಿಸುತ್ತಿದೆ. ಅನಿರುದ್ಧ್ ಶಾಸ್ತ್ರಿ ಬರೆದಿರುವ ಹಾಡಿಗೆ ವಿಜಯ್ ಪ್ರಕಾಶ್ ಧ್ವನಿಯಾಗಿದ್ದಾರೆ.

    ಸಿನಿಮಾ ಆರಂಭವಾದಾಗಿನಿಂದ ಒಂದಲ್ಲ ಒಂದು ರೀತಿಯಲ್ಲಿ ಸದ್ದು ಮಾಡುತ್ತಿದೆ. ಸಿನಿಮಾದ ಟೈಟಲ್ ಕೊಟ್ಟು ಇದಕ್ಕೊಂದು ಟ್ಯಾಗ್‍ಲೈನ್ ಕೊಟ್ಟವರಿಗೊಂದು ಬಹುಮಾನ ಅಂತ ಚಿತ್ರತಂಡ ಪ್ರಚಾರ ಮಾಡಿತ್ತು. ಹೀಗಾಗಿ ಸಾಕಷ್ಟು ಮಂದಿ ಟೈಟಲ್ ಕೊಡುವಲ್ಲಿ ನಿರತರಾಗಿದ್ದರು. ಕಡೆಗೆ ‘ಗೋರಿಯಾದ್ಮೇಲ್ ಹುಟ್ಟಿದ್ ಸ್ಟೋರಿ’ ಕೊಟ್ಟವರಿಗೆ ಬಹುಮಾನವನ್ನು ಕೊಟ್ಟು ಸಿನಿಮಾದ ಮೇಲೆ ಜನರಿಗೆ ಮತ್ತಷ್ಟು ನಿರೀಕ್ಷೆ ಹುಟ್ಟಿಸಿದೆ.

    ಸಿನಿಮಾದ ಮತ್ತೊಂದು ವಿಶೇಷತೆ ಎಂದರೆ ‘ಕಳೆದೋದಾ ಕಾಳಿದಾಸ’ ಎಂಬ ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಡಿದ್ದಾರೆ. ಈ ಹಾಡು ಕೂಡ ಈಗಾಗಲೇ ಹಿಟ್ ಆಗಿದೆ. ನಿರ್ದೇಶಕರಾಗಿಯೂ ಹೆಸರು ಮಾಡಿದ್ದ ವಿಕಾಸ್ ಮೊದಲ ಬಾರಿಗೆ ನಟನಾಗಿ ಬೆಳ್ಳಿತೆರೆಗೆ ಜಿಗಿದಿದ್ದಾರೆ. ವಿಕಾಸ್ ಗೆ ಸಿಂಧು ಲೋಕನಾಥ್ ನಾಯಕಿಯಾಗಿದ್ದಾರೆ.

    ರಾಜ್ ಪತ್ತಿಪಾಟಿ ನಿರ್ದೇಶನ ಮಾಡಿದ್ದು, ಚಂದ್ರಶೇಖರ್ ನಾಯ್ಡು, ಸೋಮಸಿಂಗ್, ಪುಷ್ಪಾ ಸೋಮಸಿಂಗ್ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಗುಮ್ಮಿನೇನಿ ವಿಜಯ್ ಸಂಗೀತವಿದ್ದು, ವಿ. ನಾಗೇಂದ್ರ ಪ್ರಸಾದ್, ಅನಿರುದ್ಧ್ ಶಾಸ್ತ್ರಿ, ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದಾರೆ. ಅಚ್ಯತ್ ಕುಮಾರ್, ರಾಘವ್ ಉದಯ್, ಭಜರಂಗಿ ಲೋಕಿ ಸೇರಿದಂತೆ ಅನೇಕರು ತಾರಾಬಳಗದಲ್ಲಿದ್ದಾರೆ.

  • ಕಾಣದಂತೆ ಮಾಯವಾದನು: ಮಂದಹಾಸದ ಹಾಡಿಗೆ ಧ್ವನಿಯಾದರು ಪುನೀತ್!

    ಕಾಣದಂತೆ ಮಾಯವಾದನು: ಮಂದಹಾಸದ ಹಾಡಿಗೆ ಧ್ವನಿಯಾದರು ಪುನೀತ್!

    ಬೆಂಗಳೂರು: ನಿರ್ದೇಶಕರಾಗಿಯೂ ಹೆಸರು ಮಾಡಿದ್ದ ವಿಕಾಸ್ ಕಾಣದಂತೆ ಮಾಯವಾದನು ಚಿತ್ರದ ಮೂಲಕ ನಾಯಕನಾಗಿಯೂ ಸದ್ದು ಮಾಡುತ್ತಿದ್ದಾರೆ. ಈ ಹಿಂದೆ ಬಂದಿದ್ದ ಟ್ರೇಲರ್ ನೊಂದಿಗೆ ವಿಶಿಷ್ಟ ಕಥೆಯ ಸುಳಿವು ಕೊಡುತ್ತಾ ಈ ಸಿನಿಮಾ ಪ್ರೇಕ್ಷಕರ ಮನಸೆಳೆದಿತ್ತು. ಇದೀಗ ಇದರ ಹಾಡುಗಳ ಹಂಗಾಮ ಶುರುವಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಡಿರೋ ಮೆಲೋಡಿ ಹಾಡೊಂದು ಈಗ ಬಿಡುಗಡೆಯಾಗಿದೆ.

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಇತ್ತೀಚೆಗೆ ಗಾಯಕನಾಗಿಯೂ ಬಹು ಬೇಡಿಕೆ ಪಡೆದುಕೊಂಡಿದ್ದಾರೆ. ಸಾಮಾನ್ಯವಾಗಿ ಹೊಸ ಪ್ರಯೋಗಗಳ ತಾಜಾ ಸಾಹಿತ್ಯವೇ ಅವರ ಹಾಡಿಗೆ ಸಿಗುತ್ತಿವೆ. ಆದರೆ ಕಾಣದಂತೆ ಮಾಯವಾದನು ಚಿತ್ರದಲ್ಲಿ ಸ್ವತಃ ಪುನೀತ್ ಅವರೇ ಖುಷಿಗೊಳ್ಳುವಂಥಾ ಮೆಲೋಡಿ ಹಾಡೇ ಸಿಕ್ಕಿದೆ. ಈ ಬಗ್ಗೆ ಅತೀವ ಸಂತಸದೊಂದಿಗೇ ಅವರು ಈ ಹಾಡನ್ನು ಹಾಡಿದ್ದಾರೆ. ಕಳೆದೋದ ಕಾಳಿದಾಸ ನೋಡುತ್ತ ಮಂದಹಾಸ ಎಂಬ ಸಾಲುಗಳ ಈ ಹಾಡನ್ನು ಕವಿರತ್ನ ಡಾ ವಿ ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಗುಮ್ಮಿನೇನಿ ವಿಜಯ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರೋ ಈ ಹಾಡು ಎಲ್ಲರನ್ನೂ ಮೋಹಕವಾಗಿ ಸೆಳೆದುಕೊಳ್ಳುತ್ತಿದೆ.

    ರಾಜ್ ಪತ್ತಿಪಾಟಿ ನಿರ್ದೇಶನದ ಈ ಚಿತ್ರದ ಮೂಲಕ ವಿಕಾಸ್ ಹೀರೋ ಆಗಿ ನಟಿಸುತ್ತಲೇ ಈಗ ಬಿಡುಗಡೆಯಾಗಿರೋ ಲಿರಿಕಲ್ ವೀಡಿಯೋ ಮೂಲಕ ಮತ್ತಷ್ಟು ಭರವಸೆ ಮೂಡಿಸಿದ್ದಾರೆ. ಅವರಿಲ್ಲಿ ಯಾವ ಥರದ ಪಾತ್ರ ಮಾಡಿದ್ದಾರೆಂಬ ಸ್ಯಾಂಪಲ್ ಕೂಡಾ ಈ ಹಿಂದೆ ಟ್ರೈಲರ್ ಮೂಲಕ ಅನಾವರಣಗೊಂಡಿತ್ತು. ಪ್ರೇಮಿಯಾಗಿ, ಆತ್ಮವಾಗಿ, ಸಾಹಸ ಸನ್ನಿವೇಶಗಳಲ್ಲಿಯೂ ವಿಕಾಶ್ ವಿಜೃಂಭಿಸಿರೋ ಸೂಚನೆಗಳೂ ಅನಾವರಣಗೊಂಡಿದ್ದವು. ಇದೀಗ ಪುನೀತ್ ರಾಜ್ ಕುಮಾರ್ ಹಾಡಿರೋ ರೊಮ್ಯಾಂಟಿಕ್ ಸಾಂಗ್ ಮೂಲಕ ಕಾಣದಂತೆ ಮಾಯವಾದನು ಚಿತ್ರ ಪ್ರೇಕ್ಷಕರನ್ನೆಲ್ಲ ಮತ್ತೆ ಆವರಿಸಿಕೊಂಡಿದೆ.

  • ಕಾಣದಂತೆ ಮಾಯವಾದನು: ಟ್ಯಾಗ್ ಲೈನ್ ಕೊಟ್ಟು ಬಂಪರ್ ಬಹುಮಾನ ಗೆಲ್ಲೋ ಅವಕಾಶ!

    ಕಾಣದಂತೆ ಮಾಯವಾದನು: ಟ್ಯಾಗ್ ಲೈನ್ ಕೊಟ್ಟು ಬಂಪರ್ ಬಹುಮಾನ ಗೆಲ್ಲೋ ಅವಕಾಶ!

    ದುನಿಯಾ ವಿಜಯ್ ಅಭಿನಯದ ಜಯಮ್ಮನ ಮಗ ಚಿತ್ರವನ್ನು ನಿರ್ದೇಶನ ಮಾಡಿ ಗೆಲುವು ಕಂಡಿದ್ದವರು ವಿಕಾಸ್. ಈ ಮೂಲಕವೇ ಯಶಸ್ವೀ ನಿರ್ದೇಶಕರಾಗಿಯೂ ಗುರುತಿಸಿಕೊಂಡ ವಿಕಾಸ್ ಆ ನಂತರದಲ್ಲಿ ಒಂದಷ್ಟು ಕಾಲ ಗ್ಯಾಪ್ ತೆಗೆದುಕೊಂಡು ಇದೀಗ ಕಾಣದಂತೆ ಮಾಯವಾದನು ಚಿತ್ರದ ಹೀರೋ ಆಗಿ ಪ್ರತ್ಯಕ್ಷರಾಗಿದ್ದಾರೆ. ಈಗಾಗಲೇ ಟ್ರೈಲರ್ ಮುಖೇನ ಅಲೆಯೆಬ್ಬಿಸಿರೋ ಈ ಸಿನಿಮಾ ತಂಡ ಪ್ರೇಕ್ಷಕರಿಗೊಂದು ಭರ್ಜರಿ ಸ್ಪರ್ಧೆ ಏರ್ಪಡಿಸಿದೆ. ಇದಕ್ಕೆ ಬಂಪರ್ ಬಹುಮಾನವನ್ನೂ ಕೊಡಲು ತಯಾರಾಗಿದೆ.

    ಕಾಣದಂತೆ ಮಾಯವಾದನು ಚಿತ್ರವೀಗ ತೆರೆಗಾಣುವ ಸನ್ನಾಹದಲ್ಲಿದೆ. ಈ ಹೊತ್ತಿನಲ್ಲಿಯೇ ಇದಕ್ಕೊಂದು ಸೂಕ್ತವಾದ ಟ್ಯಾಗ್ ಲೈನ್ ಹುಡುಕಾಟದಲ್ಲಿ ಚಿತ್ರತಂಡ ನಿರತವಾಗಿದೆ. ಈಗಾಗಲೇ ಈ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆಯಲ್ಲಾ? ಅದನ್ನು ಆನಂದ್ ಆಡಿಯೂ ಯೂಟ್ಯೂಬ್ ಚಾನೆಲ್ ಮೂಲಕ ಒಮ್ಮೆ ವೀಕ್ಷಿಸಿ ಅದಕ್ಕೆ ತಕ್ಕುದಾದ ಟ್ಯಾಗ್ ಲೈನ್ ಅನ್ನು ಕಮೆಂಟ್ ಬಾಕ್ಸ್ ಮೂಲಕ ಸೂಚಿಸಬಹುದು. ಹೀಗೆ ಒಂದು ಸಲ ಕಮೆಂಟ್ ಬಾಕ್ಸ್ ಮೂಲಕ ಒಂದೇ ಟ್ಯಾಗ್ ಲೈನ್ ಅನ್ನು ಸೂಚಿಸಬಹುದು. ಆದರೆ ಒಬ್ಬರು ಎಷ್ಟು ಟ್ಯಾಗ್ ಲೈನುಗಳನ್ನಾದರೂ ಬಿಡಿ ಬಿಡಿಯಾಗಿ ದಾಖಲಿಸಬಹುದು. ಇದರಲ್ಲಿ ಆಯ್ಕೆಯಾದ ಟ್ಯಾಗ್ ಲೈನಿಗೆ ಐವತ್ತು ಸಾವಿರ ರೂಪಾಯಿ ಬಹುಮಾನ ನೀಡಲು ಚಿತ್ರತಂಡ ತೀರ್ಮಾನಿಸಿದೆ. ಇದು ಅಂತಿಮಗೊಳ್ಳುತ್ತಲೇ ಬಿಡುಗಡೆಯ ದಿನಾಂಕ ಘೋಷಣೆ ಮಾಡಲೂ ಚಿತ್ರತಂಡ ಯೋಜನೆ ಹಾಕಿಕೊಂಡಿರುವಂತಿದೆ.

    ಸದರಿ ಟ್ರೈಲರ್ ಮೂಲಕವೇ ಕಾಣದಂತೆ ಮಾಯವಾದನು ಭಿನ್ನ ಜಾಡಿನ ಹಾರರ್ ಕಥಾನಕ ಹೊಂದಿರೋ ಚಿತ್ರವೆಂಬುದು ಸಾಬೀತಾಗಿದೆ. ಆತ್ಮದ ಪ್ರೇಮವೃತ್ತಾಂತ ಹೊಂದಿರೋ ಕಾಣದಂತೆ ಮಾಯವಾದನು ಸಿನಿಮಾ ಪಕ್ಕಾ ಆಕ್ಷನ್ ಮೂವಿಯಾಗಿಯೂ ಎದುರುಗೊಳ್ಳಲು ರೆಡಿಯಾಗಿದೆ. ಇದರೊಂದಿಗೆ ನಿರ್ದೇಶರಾಗಿದ್ದ ವಿಕಾಸ್ ಆಕ್ಷನ್ ಹೀರೋ ಆಗಿ ಅವತರಿಸುವ ಕಾತರದಲ್ಲಿದ್ದಾರೆ. ನಿರ್ದೇಶಕ ರಾಜ್ ಪತ್ತಿಪಾಟಿ ಕನ್ನಡಕ್ಕೆ ಅಪರೂಪವಾದಂಥಾ ಕಥೆಯೊಂದಿಗೆ ಈ ಚಿತ್ರವನ್ನು ರೋಚಕವಾಗಿ ಕಟ್ಟಿ ಕೊಟ್ಟಿದ್ದಾರೆ.

    https://www.youtube.com/watch?v=GNaimyGV1m4