Tag: kambala

  • ಕರಾವಳಿಯಲ್ಲಿ ಕಂಬಳ ಅಬ್ಬರ – ಜಾನಪದ ಕ್ರೀಡೆ ಕಣ್ತುಂಬಿಕೊಂಡ ಮಂಗ್ಳೂರಿಗರು

    ಕರಾವಳಿಯಲ್ಲಿ ಕಂಬಳ ಅಬ್ಬರ – ಜಾನಪದ ಕ್ರೀಡೆ ಕಣ್ತುಂಬಿಕೊಂಡ ಮಂಗ್ಳೂರಿಗರು

    ಮಂಗಳೂರು: ಕಂಬಳ ಕರಾವಳಿಯ ಜಾನಪದ ಕ್ರೀಡೆಯಾಗಿದ್ದು, ಕರಾವಳಿಯಲ್ಲಿರುವಷ್ಟು ಕಂಬಳದ ಕ್ರೇಜ್ ಬೇರೆಲ್ಲೂ ಕಾಣಸಿಗದು. ಆದರೆ ನಗರ ಬೆಳೆಯುತ್ತಿದ್ದಂತೆ ಕಂಬಳದಂತಹ ಹಳ್ಳಿ ಸೊಗಡಿನ ಆಚರಣೆಗಳು ನಗರ ಪ್ರದೇಶದ ಜನತೆಯಿಂದ ದೂರವಾಗಿತ್ತು. ಆದರೆ ಈಗ ಅಂತಹ ಭಾವನೆಯನ್ನು ದೂರ ಮಾಡುವ ಯತ್ನ ಮಂಗಳೂರಿನಲ್ಲಿ ನಡೆಯುತ್ತಿದೆ.

    ನಗರದ ಜನರಿಗೂ ತುಳುನಾಡಿನ ಜಾನಪದ ಕ್ರೀಡೆಯಾದ ಕಂಬಳದ ಬಗ್ಗೆ ಅರಿವು ಮೂಡಿಸಲು, ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸಲು ಮಂಗಳೂರು ನಗರದ ಕುಳೂರು ಬಳಿಯ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಕಂಬಳ ಏರ್ಪಡಿಸಲಾಗಿತ್ತು. ಕೃತಕವಾಗಿ ರೂಪಿಸಿದ ಕಂಬಳದ ಕರೆಯಲ್ಲಿ ಓಟದ ಕೋಣಗಳು ಜನರಲ್ಲಿ ಆಟದ ರಂಗನ್ನು ಮೂಡಿಸಿದ್ದವು.

    ಸಾಮಾನ್ಯವಾಗಿ ಕಂಬಳ ಹಳ್ಳಿಗಳಲ್ಲಿ ಮಾತ್ರ ನಡೆಯುತ್ತೆ ಎನ್ನುವಂತಿತ್ತು. ಆದರೆ ಕಳೆದ ಮೂರು ವರ್ಷಗಳಿಂದ ನಗರದಲ್ಲಿ ರಾಮ-ಲಕ್ಷ್ಮಣ ಮಂಗಳೂರು ಕಂಬಳೋತ್ಸವ ನಡೆಸಲಾಗುತ್ತಿದೆ. ಕ್ಯಾಪ್ಟನ್ ಬೃಜೇಶ್ ಚೌಟ ನೇತ್ರತ್ವದಲ್ಲಿ ಕಂಬಳ ನಡೆದಿದ್ದು, ಮಣ್ಣಿನ ಆಟವನ್ನು ನೋಡಿ ನಗರದ ಜನ ಸಂಭ್ರಮ ಪಡುವಂತೆ ಕಂಬಳವನ್ನು ಆಯೋಜಿಸಲಾಗಿತ್ತು.

    ಈ ಕಂಬಳ ಯಾವುದೇ ಕ್ರಿಕೆಟ್ ಆಟಕ್ಕೆ ಕಡಿಮೆ ಇಲ್ಲ. ಕ್ರಿಕೆಟ್‍ನಲ್ಲಿ ಕ್ರೀಡಾಪಟುಗಳೇ ಪ್ರಮುಖ ಆಕರ್ಷಣೆಯಾದರೆ, ಇಲ್ಲಿ ಮೂಕ ಪ್ರಾಣಿ ಕೋಣಗಳೇ ಪ್ರಮುಖ ಆಕರ್ಷಣೆ. ಪ್ರತೀ ಕೋಣದ ಮೇಲೂ ಸಾವಿರಾರು ರೂಪಾಯಿ ಬಾಜಿ ಕಟ್ಟುವ ಕಂಬಳ ಪ್ರೇಮಿಗಳು, ಕ್ರಿಕೆಟ್‍ನಂತೆ ಇಲ್ಲಿಯೂ ಕೂಡಾ ಮೂರನೇ ಅಂಪೈರ್, ವೀಕ್ಷಕ ವಿವರಣೆ, ನುರಿತ ತೀರ್ಪುಗಾರರು ಇರುತ್ತಾರೆ. ಮೂಕ ಪ್ರಾಣಿಗಳನ್ನು ಪಳಗಿಸಿ ಶಿಸ್ತಿಗೆ ಒಡ್ಡಿಕೊಳ್ಳುವ ರೀತಿಯೇ ಆಧುನಿಕತೆಯ ನಡುವೆಯೂ ಕೃಷಿಕರ ಪಾಲಿನ ಕಂಬಳ ಮನೋರಂಜನೆಯಾಗಿದೆ. ಅದಕ್ಕೂ ಮಿಗಿಲಾಗಿ ಪ್ರತಿಷ್ಟೆಯ ಕ್ರೀಡೆಯಾಗಿ ಕಂಬಳ ದಿನದಿಂದ ದಿನಕ್ಕೆ ಜನಪ್ರಿಯಗೊಳ್ಳುತ್ತಿದೆ. ಒಟ್ಟಿನಲ್ಲಿ ನಗರ ಭಾಗದಲ್ಲೂ ಈ ಕರಾವಳಿಯ ಜಾನಪದ ಕ್ರೀಡೆಯನ್ನು ಆಯೋಜಿಸುತ್ತಾ ಬಂದಿರುವುದು ನಿಜಕ್ಕೂ ಶ್ಲಾಘನೀಯ.

  • ಕಂಬಳ ನೋಡಲು ಹೋದ ಯುವಕ ಬಾವಿಯಲ್ಲಿ ಶವವಾಗಿ ಪತ್ತೆ

    ಕಂಬಳ ನೋಡಲು ಹೋದ ಯುವಕ ಬಾವಿಯಲ್ಲಿ ಶವವಾಗಿ ಪತ್ತೆ

    ಮಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಬುಧವಾರ ಉದ್ಘಾಟಿಸಿದ್ದ ಮೂಡಬಿದ್ರೆಯ ಕಡಲಕೆರೆ ನಿಸರ್ಗಧಾಮದಲ್ಲಿ ನಡೆದ ಕೋಟಿ ಚೆನ್ನಯ ಜೋಡುಕೆರೆ ಕಂಬಳಕ್ಕೆ ಹೋದ ಯುವಕ ಗುರುವಾರ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

    ಕಂಬಳಕ್ಕಾಗಿ ಬಂದಿದ್ದ ಮಂಗಳೂರಿನ ಕಿನ್ನಿಗೋಳಿ ತೋಕೂರು ನಿವಾಸಿ ಲೋಹಿತ್ ದೇವಾಡಿಗ(26) ಸಾವನ್ನಪ್ಪಿದ ದುರ್ದೈವಿ. ಈತ ಬುಧವಾರ ನಡೆದ ಕಂಬಳಕ್ಕಾಗಿ ಬಂದಿದ್ದು ರಾತ್ರಿಯೂ ಕಂಬಳದಲ್ಲಿ ಭಾಗಿಯಾಗಿದ್ದನು. ಆದರೆ ಗುರುವಾರ ಮುಂಜಾನೆ ಮನೆಗೂ ಬಾರದೆ ನಾಪತ್ತೆಯಾಗಿದ್ದನು. ಇದರಿಂದ ಹೆದರಿದ ಮನೆಯವರು ಎಲ್ಲರಲ್ಲಿ ವಿಚಾರಿಸಿದ್ದರು. ಆದರೆ ಕಂಬಳ ನಡೆದ ಪ್ರದೇಶದ ಒಂದು ತೆರೆದ ಬಾವಿಯಲ್ಲಿ ಲೋಹಿತ್ ಶವವಾಗಿ ಪತ್ತೆಯಾಗಿದ್ದಾನೆ.

    ತನ್ನ ಸ್ನೇಹಿತನ ಜೊತೆ ಬಂದಿದ್ದ ಲೋಹಿತ್, ಕಂಬಳದ ಭಾಗವಾಗಿ ನಡೆಯುತ್ತಿದ್ದ ಇಸ್ಪೀಟ್ ಆಟ ಆಡುತ್ತಿದ್ದನು. ಈ ವೇಳೆ ಸ್ಥಳೀಯರು ಯಾರೋ ಪೊಲೀಸ್.. ಪೊಲೀಸ್.. ಎಂದು ಬೊಬ್ಬೆ ಹಾಕಿದ್ದರಿಂದ ಆತ ಓಡಿ ಹೋಗಿದ್ದು, ಈ ವೇಳೆ ಬಾವಿಗೆ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ.

    ಮೃತದೇಹದ ಮುಖದಲ್ಲಿ ರಕ್ತದ ಕಲೆಗಳು ಇದ್ದ ಕಾರಣ ಸ್ಥಳಕ್ಕಾಗಮಿಸಿದ ಮೂಡಬಿದ್ರೆ ಪೊಲೀಸರು ಪ್ರಕರಣ ದಾಖಲಿಸಿ ಕೊಲೆಯಾಗಿರಬಹುದು ಎಂದು ಶಂಕಿಸಿ, ತನಿಖೆ ಆರಂಭಿಸಿದ್ದಾರೆ.

  • ಬ್ರಹ್ಮಾವರದಲ್ಲಿ ವಂಡಾರು ದೇವರ ಕಂಬಳ ಸಂಪನ್ನ

    ಬ್ರಹ್ಮಾವರದಲ್ಲಿ ವಂಡಾರು ದೇವರ ಕಂಬಳ ಸಂಪನ್ನ

    ಉಡುಪಿ: ಕರಾವಳಿಯ ಓಟದ ಜಿದ್ದಿನ ಕಂಬಳ ಆರಂಭಕ್ಕೂ ಮುನ್ನ ದೇವರ ಕಂಬಳ ಶುರುವಾಗಿದೆ. ಉಡುಪಿ ಜಿಲ್ಲೆಯ ಪ್ರಸಿದ್ಧ ಕಂಬಳಗಳಲ್ಲಿ ಒಂದಾದ ಯಡ್ತಾಡಿ ಕಂಬಳವು ಭರ್ಜರಿ ಕೋಣಗಳ ಓಟದ ನಡುವೆ ನಡೆಯಿತು.

    ಬ್ರಹ್ಮಾವರ ತಾಲೂಕು ವ್ಯಾಪ್ತಿಗೆ ಬರುವ ಯಡ್ತಾಡಿ ಕಂಬಳವು ಐತಿಹಾಸಿಕ ಪ್ರಾಮುಖ್ಯತೆಯನ್ನು ಪಡೆದಿರುವ ಕಂಬಳವಾಗಿದೆ. ವಂಡಾರು ಕಂಬಳವೆಂದೇ ಇದು ಪ್ರಸಿದ್ಧಿ. ಕೆಲವು ವರ್ಷಗಳ ಹಿಂದೆ ಪೇಟಾ ಹೋರಾಟದ ಹಿನ್ನೆಲೆಯಲ್ಲಿ ಕಂಬಳಕ್ಕೆ ನಿಷೇಧ ಹೇರಿದ್ದರಿಂದ ಯಡ್ತಾಡಿ ಕಂಬಳವು ಸಂಪ್ರದಾಯಕ್ಕೆ ಮಾತ್ರ ಸೀಮಿತವಾಗಿತ್ತು.

    ಸ್ಥಳೀಯ ಕಂಬಳ ಆಸಕ್ತ ಹರೀಶ್ ಶೆಟ್ಟಿ ಮಾತನಾಡಿ, ಓಟದ ಕಂಬಳ ಆರಂಭಕ್ಕೆ ಮುನ್ನ ದೇವರ ಕಂಬಳ ನಡೆಯುತ್ತಿತ್ತು. ನಮ್ಮಲ್ಲಿ ಸಾಂಪ್ರದಾಯಿಕ ಆಚರಣೆ ಮಾತ್ರ ಇದೆ. ಸ್ಪರ್ಧಾ ಕಂಬಳ ಇಲ್ಲ. ಹಾಗಾಗಿ ಜಿಲ್ಲೆಯ ಹೊರ ಜಿಲ್ಲೆಯ ಕೋಣಗಳು ಬರುತ್ತವೆ ಎಂದು ಹೇಳಿದರು.

    ಈ ಬಾರಿ ಕಂಬಳಕ್ಕೆ ಯಾವುದೇ ಅಡೆತಡೆಗಳು ಇರಲಿಲ್ಲದ ಹಿನ್ನೆಲೆಯಲ್ಲಿ ಕಂಬಳವು ಸಾಂಗವಾಗಿ ನಡೆದಿದೆ. ವಿಶೇಷವಾಗಿ ಮುಂಜಾನೆ ಧಾರ್ಮಿಕ ವಿಧಿಗಳ ಬಳಿಕ ಕೋಣಗಳನ್ನು ಕಂಬಳ ಗದ್ದೆಗೆ ಇಳಿಸಲಾಯಿತು. ಹರಕೆಗಾಗಿ ಆಗಮಿಸಿದ್ದ ಕೋಣಗಳನ್ನು ಕಂಬಳ ಗದ್ದೆಗೆ ಇಳಿಸಿ ಹರಕೆ ತೀರಿಸಲಾಯಿತು.

  • ಕಂಬಳ ಸಂಘಟಕ, ಉದ್ಯಮಿ ಕರಿಂಜೆ ವಿನು ವಿಶ್ವನಾಥ್ ಶೆಟ್ಟಿ ನಿಧನ

    ಕಂಬಳ ಸಂಘಟಕ, ಉದ್ಯಮಿ ಕರಿಂಜೆ ವಿನು ವಿಶ್ವನಾಥ್ ಶೆಟ್ಟಿ ನಿಧನ

    ಮಂಗಳೂರು: ಕಂಬಳ ಸಂಘಟಕ, ಉದ್ಯಮಿ ಮೂಡಬಿದಿರೆ ಕರಿಂಜೆ ವಿನು ವಿಶ್ವನಾಥ ಶೆಟ್ಟಿ (54) ಭಾನುವಾರ ಮಧ್ಯಾಹ್ನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

    ಬಂಟ್ವಾಳದ ಹೊಕ್ಕಾಡಿಗೋಳಿಯಲ್ಲಿ ನಿನ್ನೆ ರಾತ್ರಿ ನಡೆಸಿದ್ದ ಕಂಬಳ ಮುಗಿಸಿಕೊಂಡು ವಿನು ವಿಶ್ವನಾಥ ಶೆಟ್ಟಿ ಅವರು ಹಿಂತಿರುಗಿದ್ದರು. ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ತೀವ್ರ ಎದೆನೋವು ಕಾಣಿಸಿಕೊಂಡು ಹೃದಯಾಘಾತ ಸಂಭವಿದೆ. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿನು ವಿಶ್ವನಾಥ ಮೃತಪಟ್ಟಿದ್ದಾರೆ.

    ಹೊಕ್ಕಾಡಿಗೋಳಿಯಲ್ಲಿ ನಡೆದಿದ್ದ ಕಂಬಳದಲ್ಲಿ ವಿನು ವಿಶ್ವನಾಥ್ ಶೆಟ್ಟಿ ಅವರ ಕೋಣಗಳು ಪ್ರಥಮ ಸ್ಥಾನ ಪಡೆಡಿದ್ದವು. ಕಂಬಳ ಕ್ರೀಡೆಯಲ್ಲಿ ವಿನು ವಿಶ್ವನಾಥ ಶೆಟ್ಟಿ ಅವರು ಹೊಸತನ ತಂದಿದ್ದರು. ಮಿನು ವಿಶ್ವನಾಥ್ ಅಬರು ತಮ್ಮ ಕೋಣಗಳಿಗೆ ಈಜುಕೊಳ, ಕೊಠಡಿಗೆ ಎಸಿ ವ್ಯವಸ್ಥೆ ಮಾಡಿದ್ದರು.

    ದುಬೈನಲ್ಲಿ ಯಶಸ್ವಿ ಉದ್ಯಮ ನಡೆಸುತ್ತಿದ್ದ ಶೆಟ್ಟಿ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು. ಕಂಬಳ ಉಳಿವಿಗಾಗಿ ನಡೆದ ಹೋರಾಟದಲ್ಲಿ ವಿನು ವಿಶ್ವನಾಥ್ ಶೆಟ್ಟಿ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗದ್ದೆಯಲ್ಲಿದ್ದ ಕೋಣಗಳು ವೇದಿಕೆಗೆ – ವೇದಿಕೆಯಲ್ಲಿದ್ದ ಜನ ಕೆಸರು ಗದ್ದೆಗೆ!

    ಗದ್ದೆಯಲ್ಲಿದ್ದ ಕೋಣಗಳು ವೇದಿಕೆಗೆ – ವೇದಿಕೆಯಲ್ಲಿದ್ದ ಜನ ಕೆಸರು ಗದ್ದೆಗೆ!

    ಉಡುಪಿ: ಕಂಬಳ ಗದ್ದೆಯಲ್ಲಿ ಓಡುತ್ತಿದ್ದ ಕೋಣಗಳು ಏಕಾಏಕಿ ಎಡಕ್ಕೆ ತಿರುಗಿ ವೇದಿಕೆಯತ್ತ ನುಗ್ಗಿ ಇಬ್ಬರನ್ನು ಕೆಸರು ಗದ್ದೆಗೆ ಎತ್ತಿ ಬಿಸಾಕಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಚೇರ್ಕಾಡಿಯಲ್ಲಿ ಹರಕೆಯ ಕಂಬಳ ನಡೆಯುತ್ತಿತ್ತು. ಹರಕೆಗಾಗಿ ಕಂಬಳ ಗದ್ದೆಯಲ್ಲಿ ಕೋಣಗಳನ್ನು ಓಡಿಸಲಾಗುತ್ತಿತ್ತು. ಈ ವೇಳೆ ಕೋಣವೊಂದು ಕಂಬಳ ಗದ್ದೆ ಬಿಟ್ಟು ಯದ್ವಾತದ್ವಾ ಓಡಿದೆ. ಪರಿಣಾಮ ಯದ್ವಾತದ್ವಾ ಓಡಿ ಓರ್ವನನ್ನು ತಿವಿದು ಕಸರುಗದ್ದೆಗೆ ಉರುಳಿಸಿದೆ.

    ಕೋಣ ಟ್ರ್ಯಾಕ್ ಬಿಟ್ಟು ಎಡಕ್ಕೆ ಓಡಿ ಕಂಬಳ ವೀಕ್ಷಿಸುತ್ತಿದ್ದ ಜನರ ಮೇಲೆ ಎರಗಿದ್ದು, ಜನರು ಚಲ್ಲಾಪಿಲ್ಲಿ ಆಗಿದ್ದಾರೆ. ಎದುರು ಸಿಕ್ಕಿದ ಇಬ್ಬರನ್ನು ಉರುಳಿಸಿ ಎಸೆದಿದೆ. ವ್ಯಕ್ತಿಯೋರ್ವನಿಗೆ ಕೋಣವು ಕೊಂಬಿನಲ್ಲಿ ತಿವಿದಿದೆ. ಆದರೆ ಯಾವುದೇ ಹಾನಿ ಸಂಭವಿಸಿಲ್ಲ. ಈ ಎಲ್ಲ ದೃಶ್ಯವನ್ನು ವಿಡಿಯೋದಲ್ಲಿ ಸೆರೆಯಾಗಿದೆ.

    ಗದ್ದೆಯ ಮತ್ತೊಂದು ಬದಿಯಲ್ಲಿದ್ದ ಕಂಬಳಾಭಿಮಾನಿಗಳು ವಿಡಿಯೋ ಮಾಡಿದ್ದಾರೆ. ಆ ವಿಡಿಯೋ ಈಗ ವೈರಲ್ ಆಗಿದೆ. ಅದೃಷ್ಟವಶಾತ್ ಕೋಣದ ತಿವಿತಕ್ಕೆ ಒಳಗಾದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಇಬ್ಬರು ಕೆಸರು ಗದ್ದೆಗೆ ಬಿದ್ದು ಕೆಸರುಮಯವಾಗಿದ್ದಾರೆ.

    ಕಂಬಳದ ಕೋಣಗಳಿಗೆ ಬೆತ್ತದ ಏಟು ಹಾಕಲು ನಿರ್ಬಂಧ ಇದೆ. ಹೀಗಾಗಿ ಕೋಣ ಓಡಿಸುವ ವ್ಯಕ್ತಿಯ ನಿಯಂತ್ರಣಕ್ಕೆ ಕೋಣ ಸಿಗುವುದಿಲ್ಲ. ಆದ್ದರಿಂದ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕೆಸರು ಗದ್ದೆಯ ಉಸೇನ್ ಬೋಲ್ಟ್ ಇನ್ನಿಲ್ಲ – `ರಾಕೆಟ್ ಮೋಡ’ ಕಂಬಳದ ಕೋಣ ನೆನಪು ಮಾತ್ರ

    ಕೆಸರು ಗದ್ದೆಯ ಉಸೇನ್ ಬೋಲ್ಟ್ ಇನ್ನಿಲ್ಲ – `ರಾಕೆಟ್ ಮೋಡ’ ಕಂಬಳದ ಕೋಣ ನೆನಪು ಮಾತ್ರ

    ಉಡುಪಿ: ವೀರ ಜಾನಪದ ಕ್ರೀಡೆ ಕಂಬಳ ಕ್ಷೇತ್ರದಲ್ಲಿ ಪದಕಗಳ ಮೇಲೆ ಪದಕ ಬಾಚಿ ಸಾಧನೆ ಮಾಡಿದ್ದ `ರಾಕೆಟ್ ಮೋಡ’ ಹೆಸರಿನ ಕಂಬಳದ ಕೋಣ ಮೃತಪಟ್ಟಿದ್ದು, ಕರಾವಳಿಯ ಕಂಬಳಪ್ರಿಯರಿಗೆ ದುಃಖ ತಂದಿದೆ.

    ಕಂಬಳ ಕ್ಷೇತ್ರದಲ್ಲಿ ಕಿರಿಯ ಮತ್ತು ಹಿರಿಯ ವಿಭಾಗದಲ್ಲಿ ನೂರಾರು ಬಹುಮಾನಗಳನ್ನು ಗೆದ್ದ ಹೆಗ್ಗಳಿಕೆ ರಾಕೆಟ್ ಮೋಡ ಕೋಣದ್ದಾಗಿತ್ತು. ಮೂರು ಮನೆತನದ ಪರವಾಗಿ ಓಡಿದ್ದ ಮೋಡ ಕಡೆಯದಾಗಿ ನಂದಳಿಕೆ ಶ್ರೀಕಾಂತ ಭಟ್ಟರ ಕೊಟ್ಟಿಗೆಯ ಅರಸನಾಗಿತ್ತು. ಆತನ ಸ್ಪೀಡ್ ರಾಕೆಟ್ ಗಿಂತ ತುಸು ಹೆಚ್ಚಾಗಿದ್ದು, ಜಿದ್ದಿಗೆ ಬಿದ್ದು ಜಿಗಿಯಲು ಶುರು ಮಾಡಿದರೆ ಎದುರಾಳಿ ಸೋಲು ಖಚಿತವಾಗಿತ್ತು.

    ಎಣ್ಣೆ ಹಚ್ಚಿಸಿಕೊಂಡು, ಬಿಸಿನೀರು ಸ್ನಾನ ಮಾಡಿ ನೊಗ ಕಟ್ಟಿ ಕೆಸರು ಗದ್ದೆಗೆ ಇಳಿದರೆ `ಕುಟ್ಟಿ’ ಮತ್ತು `ಮೋಡ’ನೇ ಆ ಕೂಟಕ್ಕೆ ರಾಜರು. ಕಂಬಳ ಗದ್ದೆಯಲ್ಲಿ ಇವರಿಬ್ಬರ ಜೋಡಿಯನ್ನು ಕಳೆದ 15 ವರ್ಷದಲ್ಲೇ ಸೋಲಿಸಿರಲಿಲ್ಲ. ಕಂಬಳಪ್ರಿಯರು ಈ ಕೋಣದ ಹೆಸರಿನಲ್ಲಿ ಅಳುಕಿಲ್ಲದೆ ಬಾಜಿ ಕಟ್ಟುತ್ತಿದ್ದರು. ಇಂತಹ ಕೋಣ ಸದ್ಯ ಇಹಲೋಹದ ಓಟ ಮುಗಿಸಿ ಎಲ್ಲರ ಕಣ್ಣು ತೇವ ಮಾಡಿಸಿದ್ದಾನೆ.

    ಕಂಬಳದಲ್ಲಿ ಎಂದು ಕಂಬಳ ಪ್ರಿಯರಿಗೆ ನಿರಾಸೆ ಮಾಡಿಸದ ಈತ ಕೊಳಕೆ ಇರ್ವತ್ತೂರು ಭಾಸ್ಕರ ಕೋಟ್ಯಾನ್, ಕೊಳಚ್ಚೂರು ಕೊಂಡೆಟ್ಟು ಸುಕುಮಾರ್ ಶೆಟ್ಟಿ ಹಾಗೂ ನಂದಳಿಕೆ ಶ್ರೀಕಾಂತ್ ಭಟ್ ಆರೈಕೆಯಲ್ಲಿತ್ತು. ರಾಜ್ಯದ ಜನರಿಗೆ ಕಂಬಳ ಎಂಬುದು ಕೇವಲ ಕೋಣಗಳ ಓಟದ ಅಖಾಡ ಆಗಿರಬಹುದು. ಆದರೆ ಕರಾವಳಿಯ ಜನರಿಗೆ ಕಂಬಳ ಎನ್ನುವುದು ಮನುಷ್ಯ ಮತ್ತು ಕೋಣಗಳ ನಡುವೆ ಸಂಬಂಧವಿದೆ. ಅತ್ಯಂತ ಪ್ರೀತಿ ಮತ್ತು ಕಾಳಜಿಯಿಂದ ವರ್ಷಕ್ಕೆ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಕಾಳಜಿ ಮಾಡಿದ್ದ ಕೋಣವನ್ನು ಕಳೆದುಕೊಂಡ ಶ್ರೀಕಾಂತ್ ಭಟ್ ಕುಟುಂಬ ಮತ್ತು ಕಂಬಳಾಭಿಮಾನಿಗಳು ಬಹಳ ನೋವಿನಲ್ಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv 

  • ಕಂಬಳದ ಬೆತ್ತಕ್ಕೆ ಸ್ಪಾಂಜ್ ಹೊದಿಕೆ- ಪೆಟ್ಟಿನ ಸೌಂಡ್ ಬರುತ್ತೆ ಆದರೆ ನೋವಾಗಲ್ಲ

    ಕಂಬಳದ ಬೆತ್ತಕ್ಕೆ ಸ್ಪಾಂಜ್ ಹೊದಿಕೆ- ಪೆಟ್ಟಿನ ಸೌಂಡ್ ಬರುತ್ತೆ ಆದರೆ ನೋವಾಗಲ್ಲ

    ಉಡುಪಿ: ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ಕಳೆದ ಮೂರು ವರ್ಷದಿಂದ ವಿಘ್ನದ ಮೇಲೆ ವಿಘ್ನ ಬರುತ್ತಿತ್ತು. ಕೋಣಗಳ ಮೇಲೆ ಕಂಬಳದ ಗದ್ದೆಯಲ್ಲಿ ಬೀಳುತ್ತಿದ್ದ ಏಟುಗಳೇ ರಾದ್ಧಾಂತಕ್ಕೆ ಕಾರಣವಾಗಿತ್ತು. ಏಟು ಬೀಳುವ ಬೆತ್ತದ ಮೇಲೆ ಮೃದುವಾದ ಸ್ಪಾಂಜ್‍ನ ಹೊದಿಕೆ ಬಂದಿದೆ. ಓಡುವ ಕೋಣಗಳಿಗೆ ಪೆಟ್ಟು ಬಿದ್ದಾಗ ಸೌಂಡ್ ಬರುತ್ತೆ ಆದ್ರೆ ನೋವಾಗಲ್ಲ.

    ಕಂಬಳ ಕರ್ನಾಟಕ ಕರಾವಳಿಯ ವೀರ ಜಾನಪದ ಕ್ರೀಡೆ. ಕಂಬಳದ ಫೋಟೋ, ವಿಡಿಯೋಗಳು ಇಂಟರ್ ನ್ಯಾಶನಲ್ ಲೆವೆಲ್ ನಲ್ಲಿ ಫೇಮಸ್ ಆದ ಮೇಲೆ ಸಿಕ್ಕಾಪಟ್ಟೆ ಸಮಸ್ಯೆಗಳೂ ಕಂಬಳದ ಮೇಲೆ ಆಯಿತು. ಪ್ರಾಣಿದಯಾ ಸಂಘ ಸುಪ್ರೀಂಕೋರ್ಟ್ ಮೆಟ್ಟಲು ಹತ್ತಿ ಕೋಣಗಳ ಓಟವನ್ನು ಒಂದು ವರ್ಷ ನಿಲ್ಲಿಸಿತ್ತು. ಎರಡು ವರ್ಷ ಸಿಕ್ಕಾಪಟ್ಟೆ ಕಂಡೀಶನ್‍ನಲ್ಲಿ ಕಂಬಳ ನಡೆಯಿತು. ಇಷ್ಟಕ್ಕೆಲ್ಲಾ ಕಾರಣ ಕೋಣಗಳಿಗೆ ಕೊಡುತ್ತಿದ್ದ ಹಿಂಸೆ. ಇದೀಗ ಕಂಬಳ ಸಮಿತಿ ಬೆತ್ತಕ್ಕೆ ಹೊಸ ರೂಪ ಕೊಟ್ಟಿದೆ. ಬೆತ್ತದ ಮೇಲೆ ಸ್ಪಾಂಜ್‍ನ ಕವರ್ ಬಂದಿದ್ದು ಏಟು ನೋವೇ ಮಾಡುವುದಿಲ್ಲ. ಪೆಟ್ಟು ಬಿದ್ದ ಶಬ್ಧ ಬಂದರೂ ಅದು ಪೆಟ್ಟು ಅಂತ ಅನ್ನಿಸಲ್ಲ.

    ಕಂಬಳ ಕ್ರೀಡೆಯನ್ನು ಈ ಹಿಂದೆ ಜಾನಪದವಾಗಿ, ಕೃಷಿ ಚಟುವಟಿಕೆಯ ಫ್ರೀ ಟೈಮಲ್ಲಿ ಆಚರಿಸಲಾಗುತ್ತಿತ್ತು. ಆದರೆ ಈಗ ಕಂಬಳಕ್ಕೆ ಶಾಸ್ತ್ರೀಯ ಸ್ಥಾನ ಸಿಕ್ಕಿದೆ. ಕಂಬಳವನ್ನು ಶಿಸ್ತುಬದ್ಧವಾಗಿ ಕಲಿಯಲು ಕಳೆದ 5 ವರ್ಷದಿಂದ ಉಡುಪಿ ಜಿಲ್ಲೆ ಕಾರ್ಕಳದ ಮೀಯಾರಿನಲ್ಲಿ ಶಿಬಿರವನ್ನು ಆಯೋಜಿಸಲಾಗಿದೆ.

    ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ 155 ಅರ್ಜಿಗಳಲ್ಲಿ 27 ಮಂದಿಯನ್ನು ಆಯ್ಕೆ ಮಾಡಿ ತರಬೇತಿ ನೀಡುತ್ತಿದೆ. ಯೋಗ, ಧ್ಯಾನ, ಕಂಬಳದ ಹಗ್ಗ ನೇಯುವುದು, ಬೆತ್ತ ತಯಾರಿಕೆ, ಕೋಣಗಳ ಸ್ನಾನ, ಆಹಾರ ಕೊಡುವುದು ಹೀಗೆ ಕಂಬಳದ ಎ ಟು ಝಡ್ ಟ್ರೈನಿಂಗ್ ಕೊಟ್ಟು ಕಂಬಳದ ಓಟಗಾರರನ್ನಾಗಿ ಮಾಡಲಾಗಿದೆ. ವರ್ಷಕ್ಕೆ ಐದು ತಿಂಗಳು ಕಂಬಳ ನಡೆಯುತ್ತದೆ. ಅಂತಾರಾಷ್ಟ್ರೀಯ ಕ್ರೀಡಾಪಟು ಓಡುವುದಕ್ಕಿಂತ ಹೆಚ್ಚು ವೇಗದಲ್ಲಿ ಇವರು ಓಡುತ್ತಾರೆ. ಉತ್ತಮ ಓಟಗಾರ 5 ರಿಂದ 7 ಲಕ್ಷ ರೂ. ಸಂಪಾದನೆ ಮಾಡಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಂಬಳ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ನ್ಯಾ. ಅಬ್ದುಲ್ ನಜೀರ್

    ಕಂಬಳ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ನ್ಯಾ. ಅಬ್ದುಲ್ ನಜೀರ್

    ನವದೆಹಲಿ: ಕಂಬಳ ಕ್ರೀಡೆಗೆ ಅನುಮತಿ ನೀಡಿ ಪ್ರಾಣಿ ಹಿಂಸೆ ಕಾಯ್ದೆಗೆ ರಾಜ್ಯ ಸರ್ಕಾರ ತಂದಿದ್ದ ತಿದ್ದುಪಡಿ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಬ್ದುಲ್ ನಜೀರ್ ನಿರಾಕರಿಸಿದ್ದಾರೆ.

    ಪ್ರಾಣಿ ದಯಾ ಸಂಘ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ  ನ್ಯಾ. ಕುರಿಯನ್ ಜೋಸೆಫ್ ಹಾಗೂ ನ್ಯಾ. ಅಬ್ದುಲ್ ನಜೀರ್ ಪೀಠ ಬೇರೊಂದು ಪೀಠ ಕ್ಕೆ ಪ್ರಕರಣವನ್ನು ವರ್ಗಾಯಿಸಿದೆ. ಇದನ್ನೂ ಓದಿ: ಕೆಲ ಮನಸ್ಸುಗಳಿಗೆ ಬಿತ್ತು ಬ್ರೇಕ್: ಕಂಬಳ ಮತ್ತೆ ಆರಂಭಗೊಂಡಿದ್ದಕ್ಕೆ ಸಂಭ್ರಮಿಸಿದ ಸೆಹ್ವಾಗ್

    ಈ ಹಿಂದೆ ಹೈಕೋರ್ಟ್ ನಲ್ಲಿ ಪ್ರಕರಣದ ವಿಚಾರಣೆ ನಡೆಸಿದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನಲ್ಲಿ ಪ್ರಕರಣದ ವಿಚಾರಣೆ ನಡೆಸಲು ನ್ಯಾ. ಅಬ್ದುಲ್ ನಜೀರ್ ನಿರಾಕರಿಸಿದ್ದಾರೆ. ಕಂಬಳ ವಿಚಾರದ ಬಗ್ಗೆ ನಾನು ಹೈಕೋರ್ಟ್ ನಲ್ಲಿ ವಿಚಾರಣೆ ನಡೆಸಿದ್ದೇನೆ. ಕಂಬಳ ಆಚರಣೆಗೆ ಅನುಮತಿ ನೀಡಿದ್ದೆ. ಪ್ರಾಣಿ ದಯಾ ಸಂಘದ ಬೇಡಿಕೆಗೆ ವಿರುದ್ಧವಾದ ತೀರ್ಪು ನೀಡಿದ್ದೆ. ಹೀಗಾಗಿ ಇಲ್ಲಿ ನಾನು ಅರ್ಜಿ ವಿಚಾರಣೆ ನಡೆಸಲಾರೆ. ಬೇರೆ ನ್ಯಾಯಪೀಠದ ಮುಂದೆ ವಿಚಾರಣೆ ನಡೆಯಲಿ ಎಂದು ನ್ಯಾ ಅಬ್ದುಲ್ ನಜೀರ್ ಅಭಿಪ್ರಾಯಪಟ್ಟರು. ನ್ಯಾ. ಅಬ್ದುಲ್ ನಜೀರ್ ಮಾತಿಗೆ ದನಿಗೂಡಿಸಿದ ನ್ಯಾ ಕುರಿಯನ್ ಜೋಸೆಫ್ ಬದಲಿ ಪೀಠಕ್ಕೆ ಪ್ರಕರಣವನ್ನು ಅರ್ಜಿ ವರ್ಗಾಯಿಸಿದರು.

    ಕಂಬಳ ಸೇರಿದಂತೆ ಇತರೆ ಗೂಳಿ ಮತ್ತು ಎತ್ತಿನ ಗಾಡಿ ಸ್ಪರ್ಧೆಗಳಿಗೆ ಅನುಮತಿ ನೀಡಿ ರಾಜ್ಯ ವಿಧಾನ ಮಂಡಲ ಅಂಗೀಕರಿಸಿದ್ದ ಪ್ರಾಣಿ ಹಿಂಸೆ (ಕರ್ನಾಟಕ ತಿದ್ದುಪಡಿ) ತಡೆ ಕಾಯ್ದೆ – 2017ನ್ನು ತಿರಸ್ಕರಿಸಬೇಕೆಂದು ಪ್ರಾಣಿ ದಯಾ ಸಂಘ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದೆ. ಕರ್ನಾಟಕ ಸರ್ಕಾರದ ಹೊಸ ಕಾನೂನು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಯುವ 1960 ಕಾಯ್ದೆಯ ಗುರಿ ಮತ್ತು ಉದ್ದೇಶಕ್ಕೆ ವಿರುದ್ಧವಾಗಿದೆ. ಇದು ಪ್ರಾಣಿಗಳ ಹಕ್ಕಿನ ಉಲ್ಲಂಘನೆ ಮತ್ತು ಸಾಂವಿಧಾನಿಕ ವಿರೋಧಿ ಎಂದು ಆರೋಪಿಸಿ ಮರು ಅರ್ಜಿ ಸಲ್ಲಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=Gvg5H_DvDHo

  • ಕೆಲ ಮನಸ್ಸುಗಳಿಗೆ ಬಿತ್ತು ಬ್ರೇಕ್: ಕಂಬಳ ಮತ್ತೆ ಆರಂಭಗೊಂಡಿದ್ದಕ್ಕೆ ಸಂಭ್ರಮಿಸಿದ ಸೆಹ್ವಾಗ್

    ಕೆಲ ಮನಸ್ಸುಗಳಿಗೆ ಬಿತ್ತು ಬ್ರೇಕ್: ಕಂಬಳ ಮತ್ತೆ ಆರಂಭಗೊಂಡಿದ್ದಕ್ಕೆ ಸಂಭ್ರಮಿಸಿದ ಸೆಹ್ವಾಗ್

    ನವದೆಹಲಿ: ಕರಾವಳಿಯ ಜಾನಪದ ಕ್ರೀಡೆ ಕಂಬಳ ಮಸೂದೆಗೆ ಕೊನೆಗೂ ರಾಷ್ಟ್ರಪತಿ ಅಂಕಿತ ಸಿಕ್ಕಿದ್ದು, ಈ ಕುರಿತು ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಸಾಮಾಜಿಕ ಜಾಲತಾಣ ಟ್ವೀಟ್ ನಲ್ಲಿ ಪ್ರತಿಕ್ರಿಯಿಸಿರೋ ಸೆಹ್ವಾಗ್, `ಕಂಬಳದ ಕುರಿತಂತೆ ರಾಷ್ಟ್ರಪತಿ ಅವರು ಅಂಕಿತ ಹಾಕುವ ಮೂಲಕ ಎಲ್ಲಾ ಅಡೆತಡೆಗಳಿಗೆ ಬ್ರೇಕ್ ಬಿದ್ದಿರುವುದು ನಿಜಕ್ಕೂ ಖುಷಿಯ ವಿಚಾರವಾಗಿದೆ. ಈ ಮೂಲಕ ಗ್ರಾಮೀಣ ಭಾಗದ ಕ್ರೀಡೆಗೆ ಉತ್ತೇಜನ ನೀಡಿರುವುದು ಸಂತಸ ತಂದಿದೆ. ಪ್ರಾಣಿ ಹಿಂಸೆ ನೆಪದಲ್ಲಿ ಈ ಗ್ರಾಮೀಣ ಭಾಗದ ಕ್ರೀಡೆಯನ್ನು ನಿಷೇಧಿಸಲು ಹೊರಟಿದ್ದ ಕೆಲವು ಮನಸ್ಸುಗಳಿಗೆ ಬ್ರೇಕ್ ಬಿದ್ದಿರುವುದು ಖುಷಿಯ ವಿಚಾರವೇ ಸರಿ. ಒಟ್ಟಿನಲ್ಲಿ ಕರ್ನಾಟಕದ ಗ್ರಾಮೀಣ ಕ್ರೀಡೆಯಾಗಿ ಕಂಬಳಕ್ಕೆ ಮಾನ್ಯತೆ ಸಿಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

    ಏನಿದು ಪ್ರಕರಣ?: ಪ್ರಾಣಿದಯಾ ಸಂಘ ಸಂಸ್ಥೆ ಸಲ್ಲಿಸಿದ್ದ ಅರ್ಜಿ ಹಿನ್ನೆಲೆ ಕಂಬಳಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿತ್ತು. ಇದರ ವಿರುದ್ಧವಾಗಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು. ರಾಜ್ಯ ಸರ್ಕಾರ ಮಂಡಿಸಿದ್ದ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಹಿ ಹಾಕಿದ್ದರು. ಇದನ್ನೂ ಓದಿ: ಕಂಬಳ ಮಸೂದೆಗೆ ರಾಷ್ಟ್ರಪತಿ ಅಂಕಿತ, ಎಲ್ಲ ಅಡೆ ತಡೆ ನಿವಾರಣೆ

    ಸುಗ್ರಿವಾಜ್ಞೆ ಅವಧಿ ಮುಗಿದ ಕಾರಣ ಈ ವರ್ಷ ಕಂಬಳಕ್ಕೆ ಅನುಮತಿ ನೀಡಬಾರದು ಎಂದು ಪೇಟಾ ಸುಪ್ರೀಂ ಕೋರ್ಟ್ ನಲ್ಲಿ ವಾದಿಸಿತ್ತು. ವಿಚಾರಣೆ ವೇಳೆ ರಾಜ್ಯದ ಪರ ವಕೀಲರು ಮಸೂದೆ ಅಂಗೀಕಾರವಾಗಿದ್ದು, ರಾಷ್ಟ್ರಪತಿಗಳ ಅಂಕಿತ ಬೀಳಲು ಬಾಕಿಯಿದೆ ಎಂದು ವಾದಿಸಿದ್ದರು. ಸರ್ಕಾರದ ವಾದವನ್ನು ಪರಿಗಣಿಸಿ ಸುಪ್ರೀಂ ಕೋರ್ಟ್ ಕಂಬಳ ಕ್ರೀಡೆಗೆ ತಡೆ ನೀಡಲು ನಿರಾಕರಿಸಿತ್ತು. ಈ ಅರ್ಜಿಯ ವಿಚಾರಣೆಯನ್ನು ನಡೆಸಿದ್ದ ನ್ಯಾಯಮೂರ್ತಿಗಳಾದ ಎ.ಎಂ.ಕನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವರಿದ್ದ ದ್ವಿಸದಸ್ಯ ಪೀಠ ಸುಪ್ರೀಂ ಕೋರ್ಟ್ ಮಾರ್ಚ್ 14ಕ್ಕೆ ಮುಂದೂಡಿತ್ತು.

    ಗೌರವಾನ್ವಿತ ರಾಷ್ಟ್ರಪತಿಗಳು ತಮ್ಮ ಬಳಿ ಇದ್ದ ಕರಾವಳಿಯ ಜಾನಪದ ಕ್ರೀಡೆಯಾದ ಕಂಬಳ ಮಸೂದೆಗೆ ಅಂಕಿತ ಹಾಕಿದಕ್ಕಾಗಿ ಪ್ರೀತಿಯ ಸೊಲ್ಮೆಲು. ಇದರಿಂದ ಈವರೆಗೆ ಕಂಬಳಕ್ಕೆಇದ್ದ ಎಲ್ಲ ಅಡ್ಡಿ ಆತಂಕಗಳು ನಿವಾರಣೆಯಾಗಿದೆ ಇದಕ್ಕೆ ಸಂಭಂದಿಸಿದ ಸುತ್ತೋಲೆ ಈಗಾಗಲೇ ರಾಜ್ಯ ಸರಕಾರಕ್ಕೆ ರವಾನೆಯಾಗಿದೆ. ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆಗಳು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿವಿ ಸದಾನಂದ ಗೌಡ ಟ್ವೀಟ್ ಮಾಡಿ ಸಂತೋಷವನ್ನು ಹಂಚಿಕೊಂಡಿದ್ದರು.

  • ಕಂಬಳ ಮಸೂದೆಗೆ ರಾಷ್ಟ್ರಪತಿ ಅಂಕಿತ, ಎಲ್ಲ ಅಡೆ ತಡೆ ನಿವಾರಣೆ

    ಕಂಬಳ ಮಸೂದೆಗೆ ರಾಷ್ಟ್ರಪತಿ ಅಂಕಿತ, ಎಲ್ಲ ಅಡೆ ತಡೆ ನಿವಾರಣೆ

    ನವದೆಹಲಿ: ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ಕೊನೆಗೂ ರಾಷ್ಟ್ರಪತಿ ಅಂಕಿತ ಸಿಕ್ಕಿದೆ. ತಿದ್ದುಪಡಿ ಮಾಡಿ ರಾಜ್ಯ ಸರ್ಕಾರ ಕಳಿಸಿದ್ದ ಮಸೂದೆಗೆ ಏಳು ತಿಂಗಳ ಬಳಿಕ ರಾಷ್ಟ್ರಪತಿಗಳಿಂದ ಅಂಕಿತ ಹಾಕಿದ್ದಾರೆ.

    ರಾಜ್ಯಪಾಲ ವಜುಭಾಯಿ ವಾಲಾ ಕಳಿಸಿದ್ದ ತಿದ್ದುಪಡಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಹಿ ಮಾಡಿದ್ದು, ಕಂಬಳಕ್ಕೆ ಇದ್ದ ಅಡ್ಡಿ ದೂರವಾಗಿದೆ.

    ಏನಿದು ಪ್ರಕರಣ?
    ಪ್ರಾಣಿದಯಾ ಸಂಘ ಸಂಸ್ಥೆ ಸಲ್ಲಿಸಿದ್ದ ಅರ್ಜಿ ಹಿನ್ನೆಲೆ ಕಂಬಳಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿತ್ತು. ಇದರ ವಿರುದ್ಧವಾಗಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು. ರಾಜ್ಯ ಸರ್ಕಾರ ಮಂಡಿಸಿದ್ದ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಹಿ ಹಾಕಿದ್ದರು.

    ಸುಗ್ರಿವಾಜ್ಞೆ ಅವಧಿ ಮುಗಿದ ಕಾರಣ ಈ ವರ್ಷ ಕಂಬಳಕ್ಕೆ ಅನುಮತಿ ನೀಡಬಾರದು ಎಂದು ಪೇಟಾ ಸುಪ್ರೀಂ ಕೋರ್ಟ್ ನಲ್ಲಿ ವಾದಿಸಿತ್ತು. ವಿಚಾರಣೆ ವೇಳೆ ರಾಜ್ಯದ ಪರ ವಕೀಲರು ಮಸೂದೆ ಅಂಗೀಕಾರವಾಗಿದ್ದು, ರಾಷ್ಟ್ರೀಪತಿಗಳ ಅಂಕಿತ ಬೀಳಲು ಬಾಕಿಯೆ ಎಂದು ವಾದಿಸಿದ್ದರು. ಸರ್ಕಾರದ ವಾದವನ್ನು ಪರಿಗಣಿಸಿ ಸುಪ್ರೀಂ ಕೋರ್ಟ್ ಕಂಬಳ ಕ್ರೀಡೆಗೆ ತಡೆ ನೀಡಲು ನಿರಾಕರಿಸಿತ್ತು. ಈ ಅರ್ಜಿಯ ವಿಚಾರಣೆಯನ್ನು ನಡೆಸಿದ್ದ ನ್ಯಾಯಮೂರ್ತಿಗಳಾದ ಎ.ಎಂ.ಕನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವರಿದ್ದ ದ್ವಿಸದಸ್ಯ ಪೀಠ ಸುಪ್ರೀಂ ಕೋರ್ಟ್ ಮಾರ್ಚ್ 14ಕ್ಕೆ ಮುಂದೂಡಿತ್ತು.

    ಗೌರವಾನ್ವಿತ ರಾಷ್ಟ್ರಪತಿಗಳು ತಮ್ಮ ಬಳಿ ಇದ್ದ ಕರಾವಳಿಯ ಜಾನಪದ ಕ್ರೀಡೆಯಾದ ಕಂಬಳ ಮಸೂದೆಗೆ ಅಂಕಿತ ಹಾಕಿದಕ್ಕಾಗಿ ಪ್ರೀತಿಯ ಸೊಲ್ಮೆಲು. ಇದರಿಂದ ಈವರೆಗೆ ಕಂಬಳಕ್ಕೆಇದ್ದ ಎಲ್ಲ ಅಡ್ಡಿ ಆತಂಕಗಳು ನಿವಾರಣೆಯಾಗಿದೆ ಇದಕ್ಕೆ ಸಂಭಂದಿಸಿದ ಸುತ್ತೋಲೆ ಈಗಾಗಲೇ ರಾಜ್ಯ ಸರಕಾರಕ್ಕೆ ರವಾನೆಯಾಗಿದೆ. ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆಗಳು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿವಿ ಸದಾನಂದ ಗೌಡ ಟ್ವೀಟ್ ಮಾಡಿ ಸಂತೋಷವನ್ನು ಹಂಚಿಕೊಂಡಿದ್ದಾರೆ.

    https://www.youtube.com/watch?v=FZd1cgX4Fys

    https://www.youtube.com/watch?v=Klbxs_37mBI