Tag: Kamanahalli

  • ಒಂದು ಜಮೀನಿನಲ್ಲಿ 18 ವೆರೈಟಿ ಸಾವಯವ ಭತ್ತ: ಕೃಷಿಯಲ್ಲಿ ವಿಶಿಷ್ಟ ಸಾಧನೆಗೈದ ರೈತ

    ಒಂದು ಜಮೀನಿನಲ್ಲಿ 18 ವೆರೈಟಿ ಸಾವಯವ ಭತ್ತ: ಕೃಷಿಯಲ್ಲಿ ವಿಶಿಷ್ಟ ಸಾಧನೆಗೈದ ರೈತ

    ಹಾವೇರಿ: ಒಂದು ಜಮೀನಿನಲ್ಲಿ ಅಬ್ಬಬ್ಬಾ ಅಂದ್ರೆ ಎರಡ್ಮೂರು, ಮೂರ್ನಾಲ್ಕು ವಿವಿಧ ತಳಿಯ ಭತ್ತ ಬೆಳೆಯಬಹುದು. ಆದರೆ ಹಾನಗಲ್ ತಾಲೂಕಿನ ಕಾಮನಹಳ್ಳಿ ಗ್ರಾಮದ ಮುತ್ತಣ್ಣ ಪೂಜಾರ ಅವರು ಜಮೀನಿನಲ್ಲಿ 18 ತಳಿಯ ಭತ್ತ ಬೆಳೆದಿದ್ದಾರೆ.

    ಮುತ್ತಣ್ಣ ಮೂಲತಃ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನವರು. ಕುರಿಗಾಯಿ ಆಗಿದ್ದ ಮುತ್ತಣ್ಣ, ಕುರಿ ಕಾಯುತ್ತಾ ಬಂದು ಕೆಲವು ವರ್ಷಗಳ ಹಿಂದೆ ಕಾಮನಹಳ್ಳಿ ಗ್ರಾಮದಲ್ಲಿ ಕೃಷಿ ಜಮೀನು ಖರೀದಿಸಿದ್ದಾರೆ. ಬಳಿಕ ಸಾವಯವ ಕೃಷಿ ಮೂಲಕ ಅದ್ಭುತವಾದ ಕೃಷಿ ಮಾಡಿ ಸೈ ಎನಿಸಿಕೊಂಡಿದ್ದಾರೆ.

    ಮುತ್ತಣ್ಣ ಅವರು ತಮ್ಮ ಎಂಟು ಎಕರೆ ಜಮೀನಿನಲ್ಲಿ 20 ಬಗೆಯ ಭತ್ತ ಬೆಳೆದಿದ್ದಾನೆ. ಎರಡು ತಳಿಗಳನ್ನು ಹೊರತುಪಡಿಸಿ ಹದಿನೆಂಟು ತಳಿಯ ಭತ್ತ ದೇಶೀಯ ತಳಿಯ ಭತ್ತಗಳಾಗಿವೆ. ಬಹುತೇಕ ತಳಿಯ ಭತ್ತಗಳು ಈಗಾಗಲೇ ಅವಸಾನದ ಅಂಚಿನಲ್ಲಿವೆ. ಅಂತಹ ಭತ್ತಗಳನ್ನ ಬೆಳೆದು ರೈತರಿಗೆ ನೀಡುವುದರ ಜೊತೆಗೆ ದೇಶೀಯ ತಳಿಯ ಭತ್ತ ಉಳಿಸಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಶಿವಮೊಗ್ಗದಿಂದ ಬಗೆಬಗೆಯ ತಳಿಯ ಭತ್ತದ ಬೀಜಗಳನ್ನ ತಂದು ಬಿತ್ತನೆ ಮಾಡಿದ್ದರು. ಈಗ ಇಪ್ಪತ್ತು ತಳಿಯ ಭತ್ತದ ಫಸಲು ಭರಪೂರ ಬೆಳೆದು ನಿಂತಿದೆ.

    ಮೈಸೂರು ಮಲ್ಲಿಗೆ, ಮ್ಯಾಜಿಕ್, ಸಿದ್ದಸಣ್ಣ ಹೀಗೆ ವಿವಿಧ ಹೆಸರಿನ ಭತ್ತದ ಫಸಲು ಜಮೀನಿನ ತುಂಬ ಕಂಪು ಸೂಸುತ್ತಿದೆ. ಕೆಲವು ತಳಿಯ ಭತ್ತಗಳಂತೂ ಆಳೆತ್ತರಕ್ಕೆ ಬೆಳೆದು ನಿಂತಿದೆ. ಕಡಿಮೆ ಪ್ರಮಾಣದಲ್ಲಿ ದೊರೆತಿದ್ದ ಎರಡು ಹೈಬ್ರಿಡ್ ತಳಿಯ ಬೀಜ ಹೊರತುಪಡಿಸಿ ಹದಿನೆಂಟು ತಳಿಯ ಬೀಜಗಳು ಈಗ ಸಾಕಷ್ಟು ಪ್ರಮಾಣದ ಜಮೀನಿಗೆ ಬಿತ್ತನೆಗೆ ಸಾಕಾಗುವಷ್ಟು ಬೆಳೆದಿವೆ. ಬಹುತೇಕ ದೇಶೀಯ ತಳಿಯ ಭತ್ತಗಳು ಯಾವುದೇ ರೋಗ, ಸೋಂಕಿಲ್ಲದಂತೆ ಬೆಳೆದು ನಿಂತಿವೆ. ಅಷ್ಟಾಗಿ ಶಾಲೆಯನ್ನು ಕಲಿಯದ ಮುತ್ತಣ್ಣ ಕುರಿಗಾಯಿಯಾಗಿ ಬಂದು ನೆಲೆ ನಿಂತು ಈಗ ಕೃಷಿಯಲ್ಲಿ ವಿಭಿನ್ನ ಪ್ರಯೋಗಗಳ ಮೂಲಕ ಯಶಸ್ಸು ಕಾಣುತ್ತಿದ್ದಾರೆ. ಮುತ್ತಣ್ಣ ಅವರ ಸಾವಯವ ಕೃಷಿ ಮತ್ತು ಕೃಷಿಯಲ್ಲಿನ ವಿಭಿನ್ನ ಪ್ರಯತ್ನಗಳಿಗೆ ಕೃಷಿ ಇಲಾಖೆ ಮತ್ತು ಸ್ಥಳೀಯ ರೈತರು ಸಾಥ್ ನೀಡುತ್ತಿದ್ದಾರೆ.

    ಒಂದು ಜಮೀನಿನಲ್ಲಿ ಒಂದು ತಳಿಯ ಭತ್ತ ಬೆಳೆಯುವುದಕ್ಕೆ ರೈತರು ಇನ್ನಿಲ್ಲದ ಹರಸಾಹಸ ಪಡುತ್ತಾರೆ. ಅದರಲ್ಲೂ ದೇಶೀಯ ತಳಿಯ ಭತ್ತದ ಬೆಳೆಯುವುದು ಅಂದ್ರೆ ಸಾಮಾನ್ಯವಲ್ಲ. ಆದರೂ ಇಪ್ಪತ್ತು ತಳಿಯ ಭತ್ತದ ಬೆಳೆದು ರೈತ ಮುತ್ತಣ್ಣ ಅವರು ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.