Tag: Kalubaragi

  • ಫ್ರೆಂಡ್ಸ್ ಜೊತೆಗೆ ಊರು ಸುತ್ತೋಕೆ ಬಂದು ಪೊಲೀಸರ ಕೈಗೆ ತಗ್ಲಾಕೊಂಡ ನವದಂಪತಿ

    ಫ್ರೆಂಡ್ಸ್ ಜೊತೆಗೆ ಊರು ಸುತ್ತೋಕೆ ಬಂದು ಪೊಲೀಸರ ಕೈಗೆ ತಗ್ಲಾಕೊಂಡ ನವದಂಪತಿ

    ಯಾದಗಿರಿ: ಸಂಪೂರ್ಣ ಲಾಕ್‍ಡೌನ್ ಹಿನ್ನೆಲೆ ಅಂತರ್ ಜಿಲ್ಲೆಯ ಪ್ರಯಾಣ ನಿಷೇಧವಿದೆ. ಹೀಗಿದ್ದರೂ ಹೊಸದಾಗಿ ಮದುವೆಯಾದ ನವದಂಪತಿ ಫ್ರೆಂಡ್ಸ್ ಜೊತೆಗೆ ಊರು ಸುತ್ತೋಕೆ ಬಂದು, ಪೊಲೀಸರ ಕೈಗೆ ತಗ್ಲಾಕಿಕೊಂಡಿದ್ದಾರೆ. ಇದನ್ನೂ ಓದಿ: ಬೈಕ್ ಬಿಟ್ಟು ಬಿಡಿ – ಡಿವೈಎಸ್ಪಿ ಕಾಲಿಗೆ ಬಿದ್ದು ಮಹಿಳೆ ಕಣ್ಣೀರು

    ಕಲಬುರಗಿ ಜಿಲ್ಲೆಯ ರಾಮತೀರ್ಥದ ನವ ಜೋಡಿಯೊಂದು ಯಾದಗಿರಿ ಮಲ್ಲಯ್ಯನ ದರ್ಶನಕ್ಕೆ ಅವರ ಗೆಳೆಯರು ಜೊತೆಗೆ ಬಂದಿದ್ದರು. ಯಾದಗಿರಿ ಸಂಪೂರ್ಣ ಲಾಕ್‍ಡೌನ್ ಆಗಿರುವ ಹಿನ್ನೆಲೆ ನಗರದಲ್ಲಿ ಪೊಲೀಸರ ಫುಲ್ ರೌಂಡ್ಸ್ ನಡೆಸುತ್ತಿದ್ದರು. ಈ ವೇಳೆ ಯಾದಗಿರಿ ನಗರದ ಡಿಗ್ರಿ ಕಾಲೇಜು ವೃತ್ತದಲ್ಲಿ ಪೊಲೀಸರ ಕೈಯಲ್ಲಿ ಈ ನವದಂಪತಿ ಸಿಕ್ಕಿದ್ದಾರೆ. ಪೊಲೀಸರ ಕಂಡ ಕೂಡಲೇ ಹೈಡ್ರಾಮಾ ಶುರು ಮಾಡಿದ ದಂಪತಿ, ಕಾರಿನಲ್ಲಿ ವಧುವಿನ ಗೆಟಪ್‍ನಲ್ಲಿದ್ದವಳು ಅಪ್ರಾನ್ ಧರಿಸಿದ ಸ್ಟಾಪ್ ನರ್ಸ್ ಆಗಿ ಬದಲಾಗಿ ಬಿಟ್ಟಿದ್ದಾಳೆ. ಇದನ್ನೂ ಓದಿ: ಮದ್ಯದಂಗಡಿಗೆ ಮುಗಿಬಿದ್ದ ಜನ

    ಈ ಬಗ್ಗೆ ವಿಚಾರಣೆ ನಡೆಸಿದಾಗ. ಪೊಲೀಸರಿಗೆ ದಾರಿ ತಪ್ಪಿಸಲು ಮುಂದಾದ ಪತಿ,ಸಾರ್ ನನ್ನ ಹೆಂಡತಿ ಸ್ಟಾಪ್ ನರ್ಸ್ ಡ್ಯೂಟಿಗೆ ಬಿಡಲು ಮತ್ತು ಜೊತೆಗೆ ನಾನು ವ್ಯಾಕ್ಸಿನ್ ಹಾಕಿಕೊಳ್ಳಲು ಬಂದೆ ಅಂತ ಕಲರ್‍ಕಲರ್ ಕಾಗೆ ಹಾರಿಸೋಕೆ ಶುರು ಮಾಡಿದ್ದಾನೆ. ಗಂಡ-ಹೆಂಡತಿ ಡ್ರಾಮಾ ಕಂಡು ಕೆಂಡಾಮಂಡಲವಾದ, ಎಸ್ಪಿ ವೇದಮೂರ್ತಿ, ಸಂಚಾರಿ ಪಿಎಸ್ ಐ ಪ್ರದೀಪ್, ತಹಶಿಲ್ದಾರ ಚನ್ನಮಲ್ಲಪ್ಪ ಘಂಟಿ ಬೈದು ಬುದ್ಧಿವಾದ ಹೇಳಿದರು. ಕಾರು ವಶಕ್ಕೆ ಪಡೆದು ದಂಡ ಹಾಕಿ ನವದಂಪತಿಗಳಿಗೆ ಮತ್ತು ಸ್ನೇಹಿತರಿಗೆ ಪೊಲೀಸರು ಖಡಕ್ ವಾನಿರ್ಂಗ್ ಕೊಟ್ಟಿದ್ದಾರೆ.  ಇದನ್ನೂ ಓದಿ: ಲಾಕ್‍ಡೌನ್ ನಿಯಮ ಉಲ್ಲಂಘಿಸಿ ಗ್ರಾಮದಲ್ಲಿ ಅದ್ಧೂರಿ ಜಾತ್ರೆ

  • ಏಪ್ರಿಲ್ 30ರೊಳಗೆ ಉಚಿತ ಮರಳು ನೀತಿ ಜಾರಿ: ಸಚಿವ ಮುರಗೇಶ್ ನಿರಾಣಿ ಘೋಷಣೆ

    ಏಪ್ರಿಲ್ 30ರೊಳಗೆ ಉಚಿತ ಮರಳು ನೀತಿ ಜಾರಿ: ಸಚಿವ ಮುರಗೇಶ್ ನಿರಾಣಿ ಘೋಷಣೆ

    – 10 ಲಕ್ಷ ರೂ. ಒಳಗಿನ ಮನೆ ನಿರ್ಮಾಣಕ್ಕೆ 100 ರೂ.ಗೆ ಒಂದು ಟನ್ ಮರಳು

    ಕಲಬುರಗಿ: ಶ್ರೀಸಾಮಾನ್ಯರು ಹಾಗೂ ಕಡುಬಡವರು ಕಡಿಮೆ ದರದಲ್ಲಿ ಮನೆಗಳನ್ನು ಕಟ್ಟಿಸಿಕೊಳ್ಳಲು ಅನುಕೂಲವಾಗುವಂತೆ ಇದೇ 30ರಿಂದ ರಾಜ್ಯಾದ್ಯಂತ ಉಚಿತ ಮರಳು ನೀತಿ ಜಾರಿಗೆ ಬರಲಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ಆರ್.ನಿರಾಣಿ ಪ್ರಕಟಿಸಿದರು.

    ನಗರದಲ್ಲಿ ಸಚಿವರಾದ ಆನಂದ್ ಸಿಂಗ್, ಬಿ.ಸಿ.ಪಾಟೀಲ್, ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಅವರೊಂದಿಗೆ ಜಂಟಿ ಸುದ್ದಿಗೋಷ್ಟಿ ನಡೆಸಿದ ಅವರು, ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಮರಳು ವಿತರಣೆ ಮಾಡಬೇಕೆಂಬುದು ಸರ್ಕಾರದ ಪ್ರಮುಖ ಉದ್ದೇಶ. ಹೀಗಾಗಿಯೇ ಇದೇ 30ರಿಂದ ಅನ್ವಯವಾಗುವಂತೆ ಉಚಿತ ಮರಳು ನೀತಿ ಜಾರಿಗೆ ತರಲಾಗುತ್ತಿದೆ ಎಂದು ತಿಳಿಸಿದರು.

    ಹೊಸ ಮರಳು ನೀತಿ: ಉಚಿತ ಮರಳು ನೀತಿ ಜೊತೆಗೆ ಏ.30ರೊಳಗೆ ಹೊಸ ಮರಳು ನೀತಿಯನ್ನು ಜಾರಿ ಮಾಡಲಿದ್ದೇವೆ. ಈಗಾಗಲೇ ಮರಳು ನೀತಿ ಸಿದ್ಧವಾಗಿದ್ದು, ದೇಶಕ್ಕೆ ಮಾದರಿಯಾಗುವಂತಹ ನೀತಿ ಇದಾಗಲಿದೆ. ಬೇರೆ ರಾಜ್ಯಗಳು ಕೂಡ ಕರ್ನಾಟಕ ಮಾದರಿಯನ್ನು ಅನುಸರಿಸಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

    100 ರೂ.ಗೆ ಒಂದು ಟನ್ ಮರಳು: ಹತ್ತು ಲಕ್ಷ ರೂ. ಒಳಗಿನ ಮನೆ ನಿರ್ಮಾಣಕ್ಕೆ 100 ರೂ.ಗೆ ಒಂದು ಟನ್ ಮರಳು ವಿತರಣೆ ಮಾಡಲಿದ್ದೇವೆ. ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಮನೆ ಕಟ್ಟಿಕೊಳ್ಳುವವರಿಗೆ ಇದರಿಂದ ಅನುಕೂಲವಾಗಲಿದೆ. ಹಳ್ಳಕೊಳ್ಳ, ಚೆಕ್‍ಡ್ಯಾಂ, ಝರಿಗಳಲ್ಲಿ ಉಚಿತವವಾಗಿ ಮರಳು ತೆಗೆದು ಎತ್ತಿನ ಗಾಡಿ ಮೂಲಕ ಸಾಗಾಣಿಕಗೆ ಅವಕಾಶ ನೀಡಲಾಗುವುದು ಎಂದರು.

    ಬಿಜೆಪಿಗೆ ಗೆಲುವು: ಇದೇ 17ರಂದು ನಡೆಯಲಿರುವ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ದಾಖಲೆ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ನಿರಾಣಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

    ಬೆಳಗಾವಿ ಲೋಕಸಭೆ, ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ದಾಖಲೆ ಮತಗಳ ಅಂತರದಿಂದ ಗೆಲ್ಲಲಿದ್ದಾರೆ. ಕಾಂಗ್ರೆಸ್ ಏನೇ ಆರೋಪ ಮಾಡಿದರೂ ಜನರು ನಂಬುವುದಿಲ್ಲ ಎಂದು ಟೀಕಿಸಿದರು.

    ಮುಷ್ಕರ ಕಾನೂನು ಬಾಹಿರ: ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಸಾರಿಗೆ ಇಲಾಖೆ ಸಿಬ್ಬಂದಿ ಕಳೆದ 5 ದಿನಗಳಿಂದ ನಡೆಸುತ್ತಿರುವ ಮುಷ್ಕರ ಕಾನೂನು ಬಾಹಿರವಾಗಿದೆ. ಇದಕ್ಕೆ ಯಾವುದೇ ರೀತಿಯ ಕಾನೂನಿನ ಮಾನ್ಯತೆ ಇಲ್ಲ. ಆರನೇ ವೇತನ ಆಯೋಗವನ್ನು ಜಾರಿ ಮಾಡಲು ಯಾವುದೇ ಕಾರಣಕ್ಕೂ ಆಗುವುದಿಲ್ಲ. ಈ ಬಗ್ಗೆ ಈಗಾಗಲೇ ಸಿಎಂ ಮತ್ತು ಸಾರಿಗೆ ಸಚಿವರು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.

    ಆದರೂ ಕೆಲವರು ರಾಜಕೀಯ ಪ್ರೇರಿತವಾಗಿ ಹೋರಾಟ ಮಾಡುವುದು ಸರಿಯಲ್ಲ. ಕಾರ್ಮಿಕರ ಒಂಬತ್ತು ಬೇಡಿಕೆಗಳಲ್ಲಿ ಎಂಟು ಬೇಡಿಕೆಗಳನ್ನು ಸರ್ಕಾರ ಈಡೇರಿಸಿದೆ. ಇದನ್ನು ಅರ್ಥ ಮಾಡಿಕೊಂಡು ಸಾರಿಗೆ ಸಿಬ್ಬಂದಿ ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕೆಂದು ಮನವಿ ಮಾಡಿದರು.

    ಉಪಚುನಾವಣೆ ನಂತರ ವೇತನ ಹೆಚ್ಚಳ ಮಾಡುವ ಸ್ಪಷ್ಟ ಭರವಸೆ ನೀಡಲಾಗಿದೆ. ನೌಕರರು ಕೂಡಲೇ ಪ್ರತಿಭಟನೆ ಕೈ ಬಿಟ್ಟು ಸರ್ಕಾರದ ಜೊತೆ ಮಾತುಕತೆಗೆ ಮುಂದಾಗಬೇಕು. ಪ್ರತಿಭಟನೆ ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಕಾರ್ಮಿಕರು ಹೋರಾಟಕ್ಕೆ ಇಳಿಯುವಾಗ ರಾಜಕೀಯ ಪ್ರೇರಿತ ವ್ಯಕ್ತಿ ಇಟ್ಟುಕೊಂಡು ಹೋಗುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

  • ಕಲಬುರಗಿಗೆ ತಬ್ಲಿಘಿ ಬಳಿಕ ಧಾರಾವಿ ಕಂಟಕ

    ಕಲಬುರಗಿಗೆ ತಬ್ಲಿಘಿ ಬಳಿಕ ಧಾರಾವಿ ಕಂಟಕ

    – ಧಾರಾವಿ ಸ್ಲಂನಿಂದ ಬಂದ ನಾಲ್ವರಿಗೆ ಕೊರೊನಾ

    ಕಲಬುರಗಿ: ಇಷ್ಟು ದಿನ ತಬ್ಲಿಘಿಗಳ ಸೋಂಕಿನಿಂದ ನರಳಿದ ಕಲಬುರಗಿ ಜಿಲ್ಲೆಗೆ ಇದೀಗ ಮುಂಬೈನ ಧಾರಾವಿ ಸ್ಲಂ ಪ್ರದೇಶ ಕಂಟಕವಾಗಿದ್ದು, ಬುಧವಾರ ದಾಖಲಾದ 8 ಪ್ರಕರಣಗಳಲ್ಲಿ 4 ಜನರಲ್ಲಿ ಮುಂಬೈ ವಲಸಿಗ ಕಾರ್ಮಿಕನಿಂದಲೇ ಬಂದಿದೆ. ಅದರಲ್ಲೂ ಜಿಲ್ಲೆಗೆ 10 ಸಾವಿರಕ್ಕೂ ಹೆಚ್ಚು ವಲಸಿಗ ಕಾರ್ಮಿಕರು ಬಂದಿದ್ದಾರೆ.

    ಇಡೀ ದೇಶದಲ್ಲಿ ಕೊರೊನಾದಿಂದ ಅತಿ ಹೆಚ್ಚು ನಲುಗಿದ ರಾಜ್ಯ ಅಂದರೆ ಅದು ಮಹಾರಾಷ್ಟ್ರ. ಮುಂಬೈನ ಧಾರಾವಿಯಲ್ಲಿ ನೆಲೆಸಿದ್ದ ಕಲಬುರಗಿ ಮೂಲದ 10 ಸಾವಿರಕ್ಕೂ ಹೆಚ್ಚು ವಲಸಿಗರು ರೈಲು, ಬಸ್ ಮೂಲಕ ಊರಿಗೆ ಬಂದು ಕ್ವಾರಂಟೈನ್‍ನಲ್ಲಿದ್ದಾರೆ. ಅಷ್ಟೇ ಅಲ್ಲದೇ ಸಾವಿರಾರು ಜನ ಕಳ್ಳದಾರಿಲಿ ನುಸುಳಿ ವಿವಿಧ ಗ್ರಾಮಗಳಲ್ಲಿ ಬಿಂದಾಸ್ ಆಗಿ ಓಡಾಡುತ್ತಿದ್ದಾರೆ. ಹೀಗೆ ಕಳ್ಳ ಮಾರ್ಗದಿಂದ ಬಂದ 30 ವರ್ಷದ ಯುವಕನಿಗೆ ಕೊರೊನಾ ಬಂದಿತ್ತು. ಈಗ ಆತನ ಸಂಪರ್ಕದಲ್ಲಿದ್ದ ಮೂವರಿಗೆ ಸೋಂಕು ತಗುಲಿದೆ. ಇಂಥಾ ಸ್ಥಿತಿಯಲ್ಲಿ ಮುಂಬೈ-ಪುಣೆಯಿಂದ ಮತ್ತೆ 10 ಸಾವಿರಕ್ಕೂ ಹೆಚ್ಚು ವಲಸಿಗರನ್ನು ಕರೆತರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

    ಬಟ್ಟೆ ವ್ಯಾಪಾರಿ ಸಂಪರ್ಕ:
    ಇತ್ತ ತಬ್ಲಿಘಿಗಳ ಸಂಪರ್ಕದಿಂದ ಏಪ್ರಿಲ್ 7ರಂದು ಮೃತಪಟ್ಟ ಕೇಸ್ ನಂಬರ್ 205ರ 57 ವರ್ಷದ ಬಟ್ಟೆ ವ್ಯಾಪಾರಿಯ ಚೈನ್‍ಲಿಂಕ್ ಸಹ ಬೆಳೆಯುತ್ತಿದೆ. ಬಟ್ಟೆ ವ್ಯಾಪಾರಿ ಇರುವ ಮೋಮ್ಮಿನಪುರ ಬಡಾವಣೆಯಲ್ಲಿಯೇ 35 ಜನರಿಗೆ ಸೋಂಕು ತಗುಲಿದೆ. ಹೀಗಾಗಿ ಈ ಚೈನ್ ಲಿಂಕ್ ಹೇಗೆ ಕಟ್ ಮಾಡಬೇಕು ಅನ್ನೋದು ಆರೋಗ್ಯ ಇಲಾಖೆಗೆ ತಲೆನೋವಾಗಿದೆ. ಇನ್ನೂ ನಿನ್ನೆ ಕೊರೊನಾಗೆ ಬಲಿಯಾದ 60 ವರ್ಷದ ವೃದ್ಧ ಸಹ ಇದೇ ಬಟ್ಟೆ ವ್ಯಾಪಾರಿಯ ಸಂಪರ್ಕದಲ್ಲಿ ಇದ್ದವರೇ ಆಗಿದ್ದಾರೆ.

    ಸದ್ಯ ಕಲಬುರಗಿಯಲ್ಲಿ ಒಟ್ಟು 81 ಕೊರೊನಾ ಪ್ರಕರಣ ದಾಖಲಾಗಿದ್ದು, ಏಳು ಜನ ಸಾವನ್ನಪ್ಪಿದ್ದಾರೆ. ಇಷ್ಟು ದಿನ ತಬ್ಲಿಘಿಯಿಂದ ಕಂಗೆಟ್ಟ ಜಿಲ್ಲೆಗೆ ಇದೀಗ ಮುಂಬೈ ಧಾರಾವಿ ನಂಟು ನಿದ್ದೆಗೆಡಿಸಿದೆ.

  • ಕೊರೊನಾದಿಂದ ಸಾವನ್ನಪ್ಪಿದ ವೃದ್ಧನ ಟ್ರಾವೆಲ್ ಹಿಸ್ಟರಿ – ಸೋಂಕಿತ ಯಾವ ದಿನ? ಎಲ್ಲೆಲ್ಲಿ ಭೇಟಿ?

    ಕೊರೊನಾದಿಂದ ಸಾವನ್ನಪ್ಪಿದ ವೃದ್ಧನ ಟ್ರಾವೆಲ್ ಹಿಸ್ಟರಿ – ಸೋಂಕಿತ ಯಾವ ದಿನ? ಎಲ್ಲೆಲ್ಲಿ ಭೇಟಿ?

    -ಬೆಚ್ಚಿ ಬೀಳುವ ಸಂಗತಿಗಳು ಬಯಲು

    ಕಲಬುರಗಿ: ಕೊರೊನಾ ವೈರಸ್‍ನಿಂದ 76 ವರ್ಷದ ವೃದ್ಧ ಸಾವನ್ನಪ್ಪಿದ ಪ್ರಕರಣ ಸಂಬಂಧ ಇನ್ನಷ್ಟು ಮಾಹಿತಿ ಲಭ್ಯವಾಗಿದೆ. ವೃದ್ಧ ಪ್ರವಾಸದಿಂದ ಬಂದ ನಂತರ ಎಲ್ಲೆಲ್ಲಿ ಹೋಗಿದ್ದರು ಎಂಬ ಬಗ್ಗೆ ಅಧಿಕೃತ ಟ್ರಾವೆಲ್ ಹಿಸ್ಟರಿಯನ್ನ ಆರೋಗ್ಯ ಇಲಾಖೆ ಬಿಚ್ಚಿಟ್ಟಿದೆ.

    ವೃದ್ಧನ ಟ್ರಾವೆಲ್ ಹಿಸ್ಟರಿ ಗಮನಿಸಿದಾಗ ಬೆಚ್ಚಿ ಬೀಳುವ ಸಂಗತಿಗಳು ಬಯಲಾಗಿವೆ. ಫೆಬ್ರವರಿ 29ರಂದು ಮಧ್ಯಾಹ್ನ 12:30ಕ್ಕೆ ಸೌದಿಯಿಂದ ಹೈದರಾಬಾದ್‍ಗೆ ಬಂದಿದ್ದ ವೃದ್ಧ ನಗರದ ಪಟೆಂಚರು ಬಳಿ ಚಹಾ ಕುಡಿದಿದ್ದರು. ಚಹಾ ಕುಡಿದ ಬಳಿಕ ಕಾರ್ ನಲ್ಲಿ ಕಲಬುರಗಿ ಕಡೆಗೆ ರಸ್ತೆ ಮಾರ್ಗದಲ್ಲಿ ಪಯಣ ಬೆಳೆಸಿದರು. ಮಾರ್ಗ ಮಧ್ಯದಲ್ಲಿ ಕಾರ್ ನಿಲ್ಲಿಸಿ ಕಮಲಾಪುರ ತಾಲೂಕಿನ ಢಾಬಾದಲ್ಲಿ ಮಧ್ಯಾಹ್ನ 3:30 ರಿಂದ 4:30ರವರೆಗೂ ಊಟ ಮಾಡಿದ್ದರು. ಢಾಬಾದಲ್ಲಿ ನಾನ್ ವೆಜ್ ಊಟ ಮಾಡಿದ ಬಳಿಕ ಮತ್ತೆ ಕಲಬುರಗಿಯತ್ತ ಪ್ರಯಾಣ ಬೆಳೆಸಿದರು. ಸಂಜೆ 5 ಗಂಟೆಗೆ ಮನೆ ತಲುಪಿದ್ದರು.

    ಫೆಬ್ರವರಿ 29ರಿಂದ ಮಾರ್ಚ್ 6ವರೆಗೆ ಕಲಬುರಗಿಯ ನಿವಾಸದಲ್ಲೇ ವೃದ್ಧ ವಾಸವಿದ್ದರು. ಮಾರ್ಚ್ 6ರಂದು ಜ್ವರದಿಂದ ಬಳಲುತ್ತಿದ್ದ ಅವರಿಗೆ ಫ್ಯಾಮಿಲಿ ಡಾಕ್ಟರ್ ಮನೆಗೆ ಬಂದು ತಪಾಸಣೆ ಮಾಡಿದ್ದರು. ಮಾರ್ಚ್ 9ರವರೆಗೆ ಮನೆಯಲ್ಲೇ ಫ್ಯಾಮಿಲಿ ಡಾಕ್ಟರ್ ತಪಾಸಣೆ ಮಾಡಿದ್ದರು. ಜ್ವರ, ಕೆಮ್ಮು, ನೆಗಡಿ ಕಮ್ಮಿಯಾಗದ ಹಿನ್ನೆಲೆ ಮಾರ್ಚ್ 9ರಂದು ಖಾಸಗಿ ಆಸ್ಪತ್ರೆಗೆ ವೃದ್ಧರನ್ನ ಶಿಫ್ಟ್ ಮಾಡಲಾಯ್ತು. ಬಳಿಕ ಮಾರ್ಚ್ 9ರಂದು ರಾತ್ರಿ 10 ಗಂಟೆಗೆ ವೃದ್ಧರನ್ನ ಡಿಸ್ಚಾರ್ಜ್ ಮಾಡಿಸಿಕೊಂಡು ಕುಟುಂಬಸ್ಥರು ಕಲಬುರಗಿಯಿಂದ ನೇರವಾಗಿ ಹೈದರಾಬಾದ್‍ಗೆ ತೆರಳಿದ್ದರು.

    ಮಾರ್ಚ್ 10 ರಂದು ಹೈದರಾಬಾದ್‍ನ ಕೇರ್ ಆಸ್ಪತ್ರೆಯಲ್ಲಿ ವೃದ್ಧ ಚಿಕಿತ್ಸೆಗೆ ದಾಖಲಾದರು. ಹೈದರಾಬಾದ್ ಕೇರ್ ಆಸ್ಪತ್ರೆಗೆ ದಾಖಲಿಸಿದ ಬೆನ್ನಲ್ಲೆ ಪರಿಸ್ಥಿತಿ ತೀರ ಹದಗೆಟ್ಟಿತ್ತು, ಈ ಹಿನ್ನೆಲೆ ವಾಪಸ್ ಕಲಬುರಗಿಗೆ ಕರೆದುಕೊಂಡು ಬರಲು ಕುಟುಂಬಸ್ಥರು ನಿರ್ಧರಿಸಿದರು. ಮಾರ್ಚ್ 10ರ ಸಂಜೆ ಹೈದರಾಬಾದ್‍ನ ಕೇರ್ ಆಸ್ಪತ್ರೆಯಿಂದ ಅಂಬುಲೆನ್ಸ್ ನಲ್ಲಿ ಕರೆದುಕೊಂಡು ಬರುವಾಗಲೇ ವೃದ್ಧ ಸಾವನ್ನಪ್ಪಿದ್ದರು.

    ಈ ಬಗ್ಗೆ ತಿಳಿಯದೇ ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ಅವರನ್ನು ಕುಟುಂಬ ದಾಖಲಿಸಿತು. ಈ ವೇಳೆ ಜಿಮ್ಸ್ ಆಸ್ಪತ್ರೆಯ ವೈದ್ಯರು ವೃದ್ಧ ಸಾವನ್ನಪ್ಪಿರುವ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದರು. ಮಾರ್ಚ್ 11ರಂದು ವೃದ್ಧನ ಅಂತ್ಯಕ್ರಿಯೆ ನಡೆದಿತ್ತು. ಆದರೆ ಮಾರ್ಚ್ 12ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ತೆಲಂಗಾಣ ಸರ್ಕಾರಕ್ಕೆ ಕ್ರಾಸ್ ನೋಟಿಫಿಕೆಷನ್ ನೀಡಲಾಯಿತು. ವೃದ್ಧನ ಜೊತೆ ಸಂಪರ್ಕ ಹೊಂದಿದ್ದ 71 ಜನರ ಮೇಲೆ ಆರೋಗ್ಯ ಇಲಾಖೆ ನಿಗಾ ವಹಿಸಿದ್ದು, ವೃದ್ಧನ ಕುಟುಂಬ, ಅವರು ವಾಸವಿದ್ದ ಏರಿಯಾ ಜನ ಸೇರಿ ಅಂತ್ಯಕ್ರಿಯೆಯಲ್ಲಿ ಭಾಗಿಯಾದವರ ಮೇಲೆ ನಿಗಾ ವಹಿಸಲಾಗಿದೆ.

    ಆದರೆ ವೃದ್ಧ ಊಟ ಮಾಡಿದ್ದ ಢಾಬಾದ ಕೆಲಸಗಾರರ ಸಂಪರ್ಕವೇ ಮಾಡಲಿಲ್ವಾ ಆರೋಗ್ಯ ಇಲಾಖೆ ಎಂಬ ಪ್ರಶ್ನೆ ಹುಟ್ಟುಕೊಂಡಿದೆ. ಜಿಲ್ಲಾಡಳಿತ ನೀಡಿರುವ ಮಾಹಿತಿಯಲ್ಲಿ ಢಾಬಾದಲ್ಲಿ ಕೆಲಸ ಮಾಡಿರುವವರ ಬಗ್ಗೆ ತಪಾಸಣೆ ನಡೆಸಿರುವ ಯಾವುದೇ ಉಲ್ಲೆಖವಿಲ್ಲ. ಹಾಗಾದರೆ ಢಾಬಾದಲ್ಲಿ ವೃದ್ಧನಿಗೆ ಊಟ ಸಪ್ಲೈ ಮಾಡಿದ ವೇಟರ್, ಬಿಲ್ ಕೌಂಟರ್ ನಲ್ಲಿ ಬಿಲ್ ಪಡೆದವರನ್ನ ಸಂಪರ್ಕ ಮಾಡಲಿಲ್ಲವಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

  • ರಾಜ್ಯದಲ್ಲಿ ಕೊರೊನಾ ಶಂಕಿತ ವ್ಯಕ್ತಿ ಸಾವು

    ರಾಜ್ಯದಲ್ಲಿ ಕೊರೊನಾ ಶಂಕಿತ ವ್ಯಕ್ತಿ ಸಾವು

    ಕಲಬುರಗಿ: ಕೊರೊನಾ ವೈರಸ್ ಶಂಕಿತ ಕಲಬುರಗಿಯ 76 ವರ್ಷದ ಮೊಹ್ಮದ್ ಹುಸೇನ್ ಸಿದ್ದಿಕಿ ಸಾವನ್ನಪ್ಪಿದ್ದಾರೆ.

    ಫೆಬ್ರವರಿ 29ರಂದು ಸೌದಿಯಿಂದ ವೃದ್ಧ ಮೊಹ್ಮದ್ ಹುಸೇನ್ ಸಿದ್ದಿಕಿ ಕಲಬುರಗಿ ನಗರಕ್ಕೆ ಬಂದಿದ್ದರು. ಮಾರ್ಚ್ 5ರಂದು ಸಿದ್ಧಿಕಿ ಅವರಿಗೆ ಜ್ವರ ಮತ್ತು ಕೆಮ್ಮು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ವಿಶೇಷ ವಾರ್ಡ್ ನಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು.

    ಸಿದ್ದಿಕಿ ಅವರ ಗಂಟಲು ದ್ರವ ಸಂಗ್ರಹಿಸಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆ ಲ್ಯಾಬ್‍ಗೆ ಕಳಿಸಲಾಗಿತ್ತು. ಆದರೆ ವರದಿಗೂ ಮುನ್ನವೇ ಹೆಚ್ಚಿನ ಚಿಕಿತ್ಸೆಗಾಗಿ ಕುಟುಂಬಸ್ಥರು ಸಿದ್ದಿಕಿಯವರನ್ನು ಹೈದರಾಬಾದ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದರು. ಸಿದ್ದಿಕಿ ಸಾವನ್ನಪ್ಪಿರುವ ಬೆನ್ನಲ್ಲೇ ಅಧಿಕಾರಿಗಳು ಕುಟುಂಬಸ್ಥರ ಆರೋಗ್ಯದ ಮೇಲೆ ನಿಗಾ ಇರಿಸಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡದಂತೆ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ.

    ಕೊರೊನಾ ವೈರಸ್ ನಿಂದ ಸಿದ್ದಿಕಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆ ಮುಗಿಯುವವರೆಗೂ ಕಲಬುರಗಿ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ಶರಣಬಸಪ್ಪ ಕ್ಯಾತನಾಳ ಹಾಗೂ ಅವರ ತಂಡ ಉಸ್ತುವಾರಿ ವಹಿಸಿಕೊಂಡು ಎಲ್ಲಾ ರೀತಿಯ ಮುಂಜಾಗ್ರತಾ ಮತ್ತು ನಿಯಂತ್ರಣ ಕ್ರಮ ಕೈಗೊಳ್ಳುವುದಾಗಿ ಕಲಬುರಗಿ ಜಿಲ್ಲಾಧಿಕಾರಿ ಅಧಿಕೃತ ಜ್ಞಾಪನಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಭಾರತದಲ್ಲಿ ಕೊರೊನಾ ಪೀಡಿತರ ಸಂಖ್ಯೆ 61ಕ್ಕೆ ಹೆಚ್ಚಳವಾಗಿದೆ. ಈಗಾಗಲೇ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಬ್ರಿಟನ್ ನಲ್ಲಿ ಮೃತಪಟ್ಟಿದ್ದಾರೆ. ಇತ್ತ ಪುಣೆಯಲ್ಲಿ ಮತ್ತೆ ಮೂರು ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಕೇರಳದಲ್ಲಿ 12 ಜನಕ್ಕೆ ತಗುಲಿದ್ದ ಕೊರೊನಾ ಒಂದೇ ದಿನದಲ್ಲಿ 19ಕ್ಕೆ ಹೆಚ್ಚಾಗಿದೆ. ನಿನ್ನೆಯಷ್ಟೇ ಸಿಎಂ ಪಿಣರಾಯಿ ವಿಜಯನ್ ಅವರು ಸಭೆ ನಡೆಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ, 7ನೇ ತರಗತಿವರೆಗೆ ಎಲ್ಲ ಶಾಲೆಗಳಿಗೆ ರಜೆ ಘೋಷಿಸಿದ್ದರು. ಅಲ್ಲದೆ ಮಾ.31ರ ವರೆಗೆ ಚಿತ್ರಮಂದಿರಗಳನ್ನು ಬಂದ್ ಮಾಡುವ ಕುರಿತು ಕೂಡ ಸರ್ಕಾರ ನಿರ್ಧಾರ ಕೈಗೊಂಡಿದೆ.