Tag: Kalpana Soren

  • 4ನೇ ಬಾರಿಗೆ ಜಾರ್ಖಂಡ್‌ ಸಿಎಂ ಆಗಿ ಇಂದು ಹೇಮಂತ್‌ ಸೊರೆನ್‌ ಪ್ರಮಾಣ ವಚನ ಸ್ವೀಕಾರ

    4ನೇ ಬಾರಿಗೆ ಜಾರ್ಖಂಡ್‌ ಸಿಎಂ ಆಗಿ ಇಂದು ಹೇಮಂತ್‌ ಸೊರೆನ್‌ ಪ್ರಮಾಣ ವಚನ ಸ್ವೀಕಾರ

    ರಾಂಚಿ: ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟವನ್ನು (INDIA alliance) ನಿರ್ಣಾಯಕ ಗೆಲುವಿನತ್ತ ಮುನ್ನಡೆಸಿದ ಹೇಮಂತ್‌ ಸೊರೆನ್‌ (Hemant Soren) ಇಂದು (ನ.28) 4ನೇ ಬಾರಿಗೆ ಜಾರ್ಖಂಡ್‌ನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಂಚಿಯ ಮೊರ್ಹಬಾದಿ ಮೈದಾನದಲ್ಲಿ ಪ್ರಮಾಣ ವಚನ ಸಮಾರಂಭ ನಡೆಯಲಿದ್ದು, ಜಾರ್ಖಂಡ್‌ ರಾಜ್ಯಪಾಲ ಸಂತೋಷ್‌ ಕುಮಾರ್‌ ಗಂಗ್ವಾರ್‌, 49 ವರ್ಷದ ಹೇಮಂತ್‌ ಸೊರೆನ್‌ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ.

    ಮೈತ್ರಿಕೂಟದ ನಡುವೆ ಸಚಿವ ಸಂಪುಟ ಪಟ್ಟಿ ಅಂತಿಮವಾಗದೇ ಇರುವುದರಿಂದ ಇಂದು ಹೇಮಂತ್‌ ಸೊರೆನ್‌ ಏಕೈಕ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಜೆಎಂಎಂ (JMM) ಮುಖ್ಯಮಂತ್ರಿ ಹುದ್ದೆಯೊಂದಿಗೆ 6 ಸಚಿವ ಸ್ಥಾನಗಳನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ. ಕಾಂಗ್ರೆಸ್‌ (Congress) ನಾಲ್ಕು ಸ್ಥಾನಗಳು ಮತ್ತು ತೇಜಸ್ವಿ ಯಾದವ್‌ ಅವರ ರಾಷ್ಟ್ರೀಯ ದಳಕ್ಕೆ ಒಂದು ಸ್ಥಾನ ಸಿಗಲಿದೆ. ಇಬ್ಬರು ಶಾಸಕರನ್ನು ಹೊಂದಿರುವ ಸಿಪಿಐ-ಎಂಎಲ್ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಲಿದೆ. ಇದನ್ನೂ ಓದಿ: ಸಂತ ಚಿನ್ಮಯ್ ಕೃಷ್ಣದಾಸ್‌ ವಿರುದ್ಧ ದೇಶದ್ರೋಹದ ಕೇಸ್‌ – ಬಾಂಗ್ಲಾದಲ್ಲಿ ಇಸ್ಕಾನ್ ಬ್ಯಾನ್‌ ಆಗುತ್ತಾ?

    ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್‌ ಸುಖು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

    ಇದೇ ನವೆಂಬರ್‌ ತಿಂಗಳು 2 ಹಂತಗಳಲ್ಲಿ ನಡೆದ ಜಾರ್ಖಂಡ್‌ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟ ಸತತ 2ನೇ ಬಾರಿಗೆ ಅಧಿಕಾರ ಹಿಡಿಯಿತು. 81 ಸ್ಥಾನಗಳಲ್ಲಿ ಜೆಎಂಎಂ 34 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 16, ಆರ್‌ಜೆಡಿ 4 ಮತ್ತು ಸಿಪಿಐ (ಎಂಎಲ್) ಎರಡು ಸ್ಥಾನಗಳನ್ನು ಗೆದ್ದುಕೊಂಡಿತು. ಇದನ್ನೂ ಓದಿ: ಮೀಸಲಾತಿ ಲಾಭಕ್ಕಾಗಿ ಮರು ಮತಾಂತರ ಆಗೋದು ಸಂವಿಧಾನಕ್ಕೆ ಮಾಡುವ ವಂಚನೆ: ಸುಪ್ರೀಂ

    ಹೇಮಂತ್‌ ಸೊರೆನ್‌ ಹಾದಿ ಹೇಗಿತ್ತು?
    ಹೇಮಂತ್‌ ಸೊರೆನ್‌ಗೆ 2024ರ ಆರಂಭ ಮತ್ತು ಅಂತ್ಯವು ಹೆಚ್ಚು ಭಿನ್ನವಾಗಿರಲಿಲ್ಲ. ಪ್ರಕರಣವೊಂದರಲ್ಲಿ ಜೈಲುವಾಸ ಅನುಭವಿಸಿ ಬಂದ ನಾಯಕನ ಕೈ ಹಿಡಿದು ಜನ ಅಭಯ ತುಂಬಿದ್ದಾರೆ. ಜಾರ್ಖಂಡ್‌ನಲ್ಲಿ ಜಯಭೇರಿ ಬಾರಿಸಿದ ಸೊರೆನ್‌ ಒಂದೇ ವರ್ಷದಲ್ಲಿ 2ನೇ ಬಾರಿಗೆ ಸಿಎಂ ಆಗಿ ಪುನರಾಗಮನಕ್ಕೆ ಸಜ್ಜಾಗಿದ್ದಾರೆ. ಇದನ್ನೂ ಓದಿ: ನಾನ್‌ವೆಜ್ ಸೇವನೆ ಬಿಡುವಂತೆ ಒತ್ತಡ; ಏರ್ ಇಂಡಿಯಾ ಪೈಲಟ್ ಆತ್ಮಹತ್ಯೆ – ಪ್ರಿಯಕರ ಅರೆಸ್ಟ್

    ಈಚೆಗೆ ಜಾರ್ಖಂಡ್ ಮುಕ್ತಿ ಮೋರ್ಚಾ ನಾಯಕ ಸೊರೆನ್‌ರನ್ನು ಭೂಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ವಶಕ್ಕೆ ತೆಗೆದುಕೊಂಡಿತು. ಬಂಧನಕ್ಕೊಳಗಾಗುವ ಮೊದಲು ಅವರು ಜಾರ್ಖಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈಗ ವರ್ಷ (2024) ಮುಗಿಯಲು ಒಂದು ತಿಂಗಳು ಉಳಿದಿರುವಾಗ, ಸೊರೆನ್ ಅವರು ಅಮೋಘ ವಿಜಯದ ವಾಸ್ತುಶಿಲ್ಪಿಯಾಗಿ ಹೊರಹೊಮ್ಮಿದ್ದಾರೆ. ‘ಇಂಡಿಯಾ’ ಮೈತ್ರಿಕೂಟವು ರಾಜ್ಯದಲ್ಲಿ ಮತ್ತೆ ಅಧಿಕಾರ ಉಳಿಸಿಕೊಂಡಿದೆ. ಸೊರೆನ್‌ ಮತ್ತೆ ಸಿಎಂ ಆಗಿ ಮುಂದುವರಿಯಲಿದ್ದಾರೆ.

  • ಜೈಲಿನಲ್ಲಿರೋ ಹೇಮಂತ್ ಸೊರೆನ್ ಪತ್ನಿ ಜಾರ್ಖಂಡ್ MLA ಆಗಿ ಪ್ರಮಾಣವಚನ ಸ್ವೀಕಾರ!

    ಜೈಲಿನಲ್ಲಿರೋ ಹೇಮಂತ್ ಸೊರೆನ್ ಪತ್ನಿ ಜಾರ್ಖಂಡ್ MLA ಆಗಿ ಪ್ರಮಾಣವಚನ ಸ್ವೀಕಾರ!

    ರಾಂಚಿ: ಭೂ ಹಗರಣ ಪ್ರಕರಣದಲ್ಲಿ ಜೈಲಿನಲ್ಲಿರುವ ಮಾಜಿ ಸಿಎಂ ಹೇಮಂತ್ ಸೊರೆನ್ (Hemant Soren) ಅವರ ಪತ್ನಿ ಕಲ್ಪನಾ ಸೊರೆನ್ (Kalpana Soren)ಅವರು ಸೋಮವಾರ ಗಂಡೇ ಕ್ಷೇತ್ರದಿಂದ ಜಾರ್ಖಂಡ್ ವಿಧಾನಸಭೆಯ ಸದಸ್ಯರಾಗಿ (Jharkhand MLA) ಪ್ರಮಾಣ ವಚನ ಸ್ವೀಕರಿಸಿದರು.

    ಸ್ಪೀಕರ್ ರವೀಂದ್ರ ನಾಥ್ ಮಹತೋ ಕಲ್ಪನಾ ಸೊರೆನ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಚಂಪೈ ಸೊರೆನ್ ಮತ್ತು ಇತರ ಜೆಎಂಎಂ ನಾಯಕರು ಉಪಸ್ಥಿತರಿದ್ದರು. ಇದನ್ನೂ ಓದಿ: ಹಾಸ್ಟೆಲ್‍ನಲ್ಲೇ ನೇಣು ಬಿಗಿದುಕೊಂಡು ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ!

    ಗಂಡೇ ಉಪಚುನಾವಣೆಯಲ್ಲಿ ಕಲ್ಪನಾ ಸೊರೆನ್ ಅವರು ಬಿಜೆಪಿಯ ದಿಲೀಪ್ ಕುಮಾರ್ ವರ್ಮಾ ಅವರನ್ನು 27,149 ಮತಗಳ ಅಂತರದಿಂದ ಸೋಲಿಸಿದರು. ಜೆಎಂಎಂ ಶಾಸಕ ಸರ್ಫರಾಜ್ ಅಹ್ಮದ್ ರಾಜೀನಾಮೆ ನೀಡಿದ ನಂತರ ಈ ಸ್ಥಾನ ತೆರವಾಗಿತ್ತು. ಮೇ 20 ರಂದು ಮತದಾನ ನಡೆದಿದ್ದು, 3.16 ಲಕ್ಷ ಅರ್ಹ ಮತದಾರರಲ್ಲಿ 2.17 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಇದನ್ನೂ ಓದಿ: ಕ್ರಿಮಿನಲ್‍ಗಳಿಗೆ ಇಲಾಖೆ ಮಾಹಿತಿ ರವಾನೆ – ಐವರು ಪೊಲೀಸ್ ಸಿಬ್ಬಂದಿ ಅಮಾನತು

    ಹೇಮಂತ್ ಸೊರೆನ್ ಅವರನ್ನು ಜನವರಿ 31 ರಂದು ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಕೇಸ್‌ನಲ್ಲಿ ಇಡಿ ಬಂಧಿಸಿತ್ತು. ಬಂಧನಕ್ಕೂ ಮುನ್ನ ಹೇಮಂತ್ ಸೊರೆನ್ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇವರ ರಾಜೀನಾಮೆ ಬಳಿಕ ಚಂಪೈ ಸೊರೆನ್ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದರು. ಇದನ್ನೂ ಓದಿ: Modi Cabinet: ಕೇಂದ್ರ ಸಚಿವರಿಗೆ ಖಾತೆ ಹಂಚಿಕೆ – ಬಲಿಷ್ಠ ಖಾತೆಗಳನ್ನು ತನ್ನಲ್ಲೇ ಉಳಿಸಿಕೊಂಡ ಬಿಜೆಪಿ – ಇಲ್ಲಿದೆ ಲಿಸ್ಟ್

  • ಸುನೀತಾ ಕೇಜ್ರಿವಾಲ್ ಭೇಟಿಯಾದ ಜೈಲಿನಲ್ಲಿರುವ ಜಾರ್ಖಂಡ್ ಮಾಜಿ ಸಿಎಂ ಪತ್ನಿ

    ಸುನೀತಾ ಕೇಜ್ರಿವಾಲ್ ಭೇಟಿಯಾದ ಜೈಲಿನಲ್ಲಿರುವ ಜಾರ್ಖಂಡ್ ಮಾಜಿ ಸಿಎಂ ಪತ್ನಿ

    ನವದೆಹಲಿ: ಜೈಲಿನಲ್ಲಿರುವ ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೋರೆನ್ (Hemant Soren) ಅವರ ಪತ್ನಿ ಕಲ್ಪನಾ ಸೊರೆನ್ (Kalpana Soren) ಅವರು ಇಡಿ ಕಸ್ಟಡಿಯಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರನ್ನು ದೆಹಲಿಯ ನಿವಾಸದಲ್ಲಿ ಭೇಟಿಯಾಗಿದ್ದಾರೆ.

    ಸುನಿತಾ ಅವರು, ಕಲ್ಪನಾ ಸೊರೆನ್ ಭೇಟಿಯ ನಂತರ, ದೆಹಲಿಯ ಸಚಿವೆ ಅತಿಶಿ ಅವರು ಎಕ್ಸ್‌ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಸುನಿತಾ ಅವರು, ಕಲ್ಪನಾ ಸೊರೆನ್ ಅವರನ್ನು ನೋಡಿದ ನಂತರ ಬಿಜೆಪಿಯು ಹೆದರುತ್ತಿದೆ. ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರಗಳ ನೇತೃತ್ವ ವಹಿಸುತ್ತಿರುವ ಸೊರೆನ್ ಮತ್ತು ಕೇಜ್ರಿವಾಲ್ ವಿರುದ್ಧ ಕೇಂದ್ರೀಯ ಸಂಸ್ಥೆಗಳ ಕ್ರೂರ ನಡೆಗೆ ಬೆದರದ ಇಬ್ಬರು ಬಲಿಷ್ಠ ಮಹಿಳೆಯರ ಈ ವೀಡಿಯೊವನ್ನು ನೋಡಿದರೆ ಬಿಜೆಪಿ ಭಯಪಡಲಿದೆ ಎಂದು ಅವರು ಬರೆದುಕೊಂಡಿದ್ದಾರೆ.

    ಅರವಿಂದ್ ಕೇಜ್ರಿವಾಲ್ ವಿರುದ್ಧ ಜಾರಿ ನಿರ್ದೇಶನಾಲಯದ ಕ್ರಮದ ನಂತರ ಕಲ್ಪನಾ ಸೊರೆನ್, ಸುನೀತಾ ಕೇಜ್ರಿವಾಲ್ ಅವರೊಂದಿಗೆ ಚರ್ಚಿಸಿದ್ದಾರೆ. ಬಳಿಕ ಅವರು ಎಕ್ಸ್‍ನಲ್ಲಿ ಸುನೀತಾ ಕೇಜ್ರಿವಾಲ್ ಅವರ ಸಮಸ್ಯೆಗಳನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರೊಂದಿಗೆ ಮಾತನಾಡಿ ಅವರಿಗೆ ಧೈರ್ಯ ತುಂಬಲು ಪ್ರಯತ್ನಿಸಿದೆ. ಸ್ನೇಹಿತೆಯಾಗಿ ಅವರ ಸಮಸ್ಯೆಗಳನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳ ವೇಳಾಪಟ್ಟಿ ಪ್ರಕಟವಾದಾಗ ಅಕ್ರಮ ಬಂಧನದ ಈ ಘಟನೆ ಪ್ರಜಾಸತ್ತಾತ್ಮಕ ದೇಶಕ್ಕೆ ಸಾಮಾನ್ಯ ಘಟನೆಯಲ್ಲ. ಬಿಕ್ಕಟ್ಟಿನ ಈ ಸಮಯದಲ್ಲಿ, ಹೇಮಂತ್ ಸೊರೆನ್ ನೇತೃತ್ವದಲ್ಲಿ ಇಡೀ ಜಾರ್ಖಂಡ್ ಕೇಜ್ರಿವಾಲ್ ಅವರೊಂದಿಗೆ ನಿಂತಿದೆ ಎಂದು ಕಲ್ಪನಾ ಸೊರೆನ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.