Tag: Kallakurichi Hooch Tragedy

  • ತಮಿಳುನಾಡು | 68 ಮಂದಿ ಬಲಿ ಪಡೆದ ಮದ್ಯ ದುರಂತ – ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ

    ತಮಿಳುನಾಡು | 68 ಮಂದಿ ಬಲಿ ಪಡೆದ ಮದ್ಯ ದುರಂತ – ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ

    ಚೆನ್ನೈ: ತಮಿಳುನಾಡಿನ (Tamil Nadu) ವಿಲ್ಲುಪುರಂ ಜಿಲ್ಲೆಯಲ್ಲಿ 68 ಜನರ ಸಾವಿಗೆ ಕಾರಣವಾದ ಅಕ್ರಮ ಮದ್ಯ ದುರಂತ (Kallakurichi Hooch Tragedy0 ಪ್ರಕರಣವನ್ನು ಕೇಂದ್ರ ತನಿಖಾ ದಳದ (CBI) ತನಿಖೆಗೆ ಮದ್ರಾಸ್ ಹೈಕೋರ್ಟ್ (Madras High Court) ಆದೇಶಿಸಿದೆ.

    ಡಿಎಂಕೆ (DMK) ಸರ್ಕಾರ ಈ ಪ್ರಕರಣವನ್ನು ಈಗಾಗಲೇ ಸಿಐಡಿಯ ಕ್ರೈಂ ಬ್ರಾಂಚ್ ವಿಭಾಗಕ್ಕೆ ವರ್ಗಾಯಿಸಿತ್ತು. ಇನ್ನೂ ಸಿಬಿಐ ತನಿಖೆಗೆ ಈ ಪ್ರಕರಣದ ವರ್ಗಾವಣೆಯನ್ನು ವಿರೋಧಿಸಿತ್ತು. ಈ ಸಂಬಂಧ ಐಎಡಿಎಂಕೆ, ಪಿಎಂಕೆ ಮತ್ತು ಬಿಜೆಪಿ ನ್ಯಾಯಾಲಯದ ಮೊರೆ ಹೋಗಿದ್ದವು. ಇದೀಗ ಆಡಳಿತಾರೂಢ ಡಿಎಂಕೆಗೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದೆ.

    ಪ್ರಕರಣ ಸಂಬಂಧ 24 ಜನರನ್ನು ಬಂಧಿಸಲಾಗಿದೆ. ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಲಾಗಿದ್ದು, ಎಸ್ಪಿಯನ್ನು ಅಮಾನತು ಮಾಡಲಾಗಿದೆ. ಪ್ರಮುಖ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಈ ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯ ಇಲ್ಲ ಎಂದು ನ್ಯಾಯಾಲಯದಲ್ಲಿ ಸರ್ಕಾರದ ಪರ ವಕೀಲರು ವಾದ ಮಂಡಿಸಿದ್ದರು.

    ಅರ್ಜಿದಾರರ ಪರ ವಕೀಲರು, ಈ ಹಿಂದೆ ಇದೇ ರೀತಿಯ ದುರಂತದಿಂದ ಸರ್ಕಾರವು ಯಾವುದೇ ಪಾಠವನ್ನು ಕಲಿತಿಲ್ಲ. ಪಕ್ಕದ ರಾಜ್ಯಗಳಿಂದ ಮೆಥೆನಾಲ್ ಬರುತ್ತಿದೆ. ಇದರಿಂದ ಪ್ರಕರಣವನ್ನು ಸಿಬಿಐಗೆ ನಿಭಾಯಿಸಲು ಸುಲಭವಾಗಲಿದೆ ಎಂದು ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅರ್ಜಿದಾರರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಸಿಬಿಐ ತನಿಖೆಗೆ ಸಮ್ಮತಿಸಿದೆ.

    ಈ ಬಗ್ಗೆ ವಿರೋಧ ಪಕ್ಷದ ಎಐಎಡಿಎಂಕೆಯ ಕಾನೂನು ವಿಭಾಗದ ಕಾರ್ಯದರ್ಶಿ ಇನ್ಬದುರೈ, ಪ್ರತಿಕ್ರಿಯಿಸಿ, ಈ ಆದೇಶವು ತಮಿಳುನಾಡಿನ ಕಳಪೆ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ ಎಂದಿದ್ದಾರೆ.

    ಪಿಎಂಕೆ ನಾಯಕ ಮತ್ತು ವಕೀಲ ಬಾಲು ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಡಿಎಂಕೆ, ಸಿಬಿಐ ತನಿಖೆಗೆ ಸ್ವಯಂಪ್ರೇರಿತರಾಗಿ ಒಪ್ಪಬೇಕಿತ್ತು. ದುರಂತದಲ್ಲಿ ಬಲಿಯಾದ ಕುಟುಂಬಗಳಿಗೆ ನ್ಯಾಯದ ಅಗತ್ಯವಿದೆ. ಡಿಎಂಕೆ ಸುಪ್ರೀಂ ಕೋರ್ಟ್‌ನಲ್ಲಿ ಇದರ ವಿರುದ್ಧ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದು ನಾವು ಭಾವಿಸಿದ್ದೇವೆ ಎಂದಿದ್ದಾರೆ.

    ಡಿಎಂಕೆ ವಕ್ತಾರ ಕಾನ್‌ಸ್ಟಂಟೈನ್, ಮಾತನಾಡಿ, ಆದೇಶದ ಬಗ್ಗೆ ನಾವು ಪ್ರತಿಕ್ರಿಯಿಸಲು ಏನೂ ಇಲ್ಲ. ಆದರೆ ಸಿಬಿಐ ತನಿಖೆಯು ನ್ಯಾಯವನ್ನು ವಿಳಂಬಗೊಳಿಸುತ್ತದೆ ಎಂಬುದು ನಮ್ಮ ಆತಂಕ ಎಂದಿದ್ದಾರೆ.

  • ತಮಿಳುನಾಡಿನಲ್ಲಿ ಕಳ್ಳಭಟ್ಟಿ ಸಾರಾಯಿ ಕುಡಿದು ಸಾವು – ಮೃತರ ಸಂಖ್ಯೆ 37ಕ್ಕೆ ಏರಿಕೆ!

    ತಮಿಳುನಾಡಿನಲ್ಲಿ ಕಳ್ಳಭಟ್ಟಿ ಸಾರಾಯಿ ಕುಡಿದು ಸಾವು – ಮೃತರ ಸಂಖ್ಯೆ 37ಕ್ಕೆ ಏರಿಕೆ!

    – ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ

    ಚೆನ್ನೈ: ತಮಿಳುನಾಡಿನ ಕಲ್ಲಕುರಿಚಿ (Kallakurichi) ಜಿಲ್ಲೆಯಲ್ಲಿ ಕಳ್ಳಭಟ್ಟಿ ಪ್ಯಾಕೆಟ್‌ ಸಾರಾಯಿ (Toxic Liquor) ಕುಡಿದು ಮೃತಪಟ್ಟವರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ. 65ಕ್ಕೂ ಹೆಚ್ಚು ಮಂದಿ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಗಂಭೀರವಾಗಿರುವ 18 ಮಂದಿಯನ್ನು ಪುದುಚೆರಿಯ ಜಿಪ್ಮರ್‌, 6 ಮಂದಿಯನ್ನು ಸೇಲಂನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಕಳ್ಳಬಟ್ಟಿಯಲ್ಲಿ ವಿಷಕಾರಿ ಮೆಥನಾಲ್ ಇರುವಿಕೆಯು ವಿಧಿವಿಜ್ಞಾನ ಪ್ರಯೋಗಾಲಯದ ಪರೀಕ್ಷೆಯಲ್ಲಿ (FSL Test) ಖಚಿತವಾಗಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಆಡಳಿತ ಡಿಎಂಕೆ ಸರ್ಕಾರ ಜಿಲ್ಲಾಧಿಕಾರಿ, ಎಸ್ಪಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳನ್ನು ಅಮಾನತುಗೊಳಿಸಿ ಕ್ರಮ ಕೈಗೊಂಡಿದೆ. ಇದನ್ನೂ ಓದಿ: ದರ್ಶನ್ ಪರ ಜಾಮೀನು ಅರ್ಜಿ ಸಲ್ಲಿಸಿಲ್ಲವೇ? – ವಕೀಲರು ಕೊಟ್ಟ ಉತ್ತರವೇನು?

    ಸಾಂದರ್ಭಿಕ ಚಿತ್ರ

    ಮೃತಪಟ್ಟವರ ಕುಟುಂಬಸ್ಥರು ಮಾಧ್ಯಮಗಳೊಂದಿಗೆ ಅಳಲು ತೋಡಿಕೊಂಡಿದ್ದಾರೆ. ನನ್ನ ಮಗನಿಗೆ ತೀವ್ರ ಹೊಟ್ಟೆ ನೋವು ಕಂಡು ಬಂದಿತ್ತು. ಅವನಿಗೆ ಕಣ್ಣು ತೆರೆಯಲೂ ಆಗುತ್ತಿರಲಿಲ್ಲ, ಏನಾದರೂ ಹೇಳಿದರೆ ಕಿವಿಯೂ ಕೇಳಿಸುತ್ತಿರಲಿಲ್ಲ. ಆಸ್ಪತ್ರೆಗೆ ಹೋದರೆ ಮದ್ಯಪಾನ ಮಾಡಿದ್ದಾನೆಂದು ದಾಖಲಿಸಲೂ ನಿರಾಕರಿಸಿದರು. ರಾಜ್ಯ ಸರ್ಕಾರ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಗರ್ಭಿಣಿ ದೀಪಿಕಾ ಸ್ಟೇಜ್‌ನಿಂದ ಕೆಳಗಿಳಿಯಲು ಸಹಾಯ ಮಾಡಿದ ಪ್ರಭಾಸ್‌ಗೆ ಕಾಲೆಳೆದ ಬಿಗ್ ಬಿ

    ಇದು ರಾಜ್ಯ ಸರ್ಕಾರದ ನಿರ್ಲಕ್ಷ್ಯದ ಪರಿಣಾಮವಾಗಿ ಆಗಿರುವ ದುರಂತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ (AnnaMalai) ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಎಐಎಡಿಎಂಕೆ ಮುಖ್ಯಸ್ಥರಾಗಿರುವ ತಮಿಳುನಾಡು ವಿಧಾನಸಭೆಯ ಪ್ರತಿಪಕ್ಷದ ನಾಯಕ ಪಳನಿಸ್ವಾಮಿ ಅವರು ಆಡಳಿತಾರೂಢ ಡಿಎಂಕೆ ಪಕ್ಷವನ್ನು ತರಾಟಗೆ ತೆಗೆದುಕೊಂಡಿದ್ದಾರೆ. ಕಳೆದ ಬಾರಿಯೂ ಸರ್ಕಾರ ಈ ವಿಷಕಾರಿ ಮದ್ಯವನ್ನು ಮೆಥನಾಲ್ ಎಂದಷ್ಟೇ ಕರೆದು ಕೈತೊಳೆದುಕೊಂಡಿತ್ತು. ಇದರ ಬದಲು ಇದನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

    ತಲಾ 10 ಲಕ್ಷ ರೂ. ಪರಿಹಾರ:
    ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್‌ (MK Stalin) 10 ಲಕ್ಷ ರೂ. ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಕುಟುಂಬಕ್ಕೆ ತಲಾ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಅಲ್ಲದೇ ನಿವೃತ್ತ ನ್ಯಾ. ಬಿ.ಗೋಕುಲದಾಸ್ ಅವರನ್ನೊಳಗೊಂಡ ಏಕವ್ಯಕ್ತಿ ಆಯೋಗಕ್ಕೆ ಪ್ರಕರಣದ ತನಿಖೆಗೆ ಸೂಚಿಸಿದ್ದು, 3 ತಿಂಗಳಲ್ಲಿ ವರದಿ ನೀಡುವಂತೆ ನಿರ್ದೇಶನ ನೀಡಿದೆ. ಇದನ್ನೂ ಓದಿ: ಹಜ್ ಯಾತ್ರೆಗೆ ತೆರಳಿದ್ದ ಬೆಂಗ್ಳೂರಿನ ಇಬ್ಬರು ಸಾವು – ಕರ್ನಾಟಕದ 10,000ಕ್ಕೂ ಹೆಚ್ಚು ಮಂದಿ ಸೇಫ್‌!