Tag: Kalidasa kannada mestru

  • ಸಿನಿಮಾ ನೋಡ್ತಿದ್ದಾಗಲೇ ಸಾವನ್ನಪ್ಪಿದ ವ್ಯಕ್ತಿಗೆ ಜಗ್ಗೇಶ್ ಸಂತಾಪ

    ಸಿನಿಮಾ ನೋಡ್ತಿದ್ದಾಗಲೇ ಸಾವನ್ನಪ್ಪಿದ ವ್ಯಕ್ತಿಗೆ ಜಗ್ಗೇಶ್ ಸಂತಾಪ

    ಬೆಂಗಳೂರು: ನವರಸನಾಯಕ ಜಗ್ಗೇಶ್ ನಟಿಸಿರುವ ‘ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರ ನೋಡುತ್ತಿದ್ದ ವ್ಯಕ್ತಿಯೊಬ್ಬರು ಚಿತ್ರಮಂದಿರದಲ್ಲೇ ಮೃತಪಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಜಗ್ಗೇಶ್ ಮೃತಪಟ್ಟ ವ್ಯಕ್ತಿಗೆ ಸಂತಾಪ ಸೂಚಿಸಿದ್ದಾರೆ.

    ವ್ಯಕ್ತಿಯೊಬ್ಬರು ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾ ನೋಡಲು ಸೋಮವಾರ ಮೈಸೂರಿನ ಪ್ರಭಾ ಚಿತ್ರಮಂದಿರಕ್ಕೆ ಬಂದಿದ್ದರು. ಈ ವೇಳೆ ಸಿನಿಮಾ ನೋಡುತ್ತಿದ್ದಂತೆ ವ್ಯಕ್ತಿ ಮೃತಪಟ್ಟಿದ್ದಾರೆ. ಕೊನೆಗೆ ಚಿತ್ರ ಮುಗಿದ ನಂತರ ಚಿತ್ರಮಂದಿರ ಸ್ವಚ್ಛಗೊಳಿಸಲು ಸಿಬ್ಬಂದಿ ಹೋಗಿದ್ದಾರೆ. ಈ ವೇಳೆ ವ್ಯಕ್ತಿ ಮೃತಪಟ್ಟಿರುವುದು ತಿಳಿದು ಬಂದಿದೆ.

    ಮೃತಪಟ್ಟ ವ್ಯಕ್ತಿಯನ್ನು ನೋಡಿ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಮೃತದೇಹವನ್ನು ಮೈಸೂರಿನ ಮೆಡಿಕಲ್ ಕಾಲೇಜು ಮತ್ತು ಸಂಶೋಧನ ಸಂಸ್ಥೆಯ ಶವಾಗಾರಕ್ಕೆ ರವಾನಿಸಿದ್ದಾರೆ

    ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ವ್ಯಕ್ತಿಗೆ ಸುಮಾರು 40 ರಿಂದ 50 ವರ್ಷ ವಯಸ್ಸು ಆಗಿದೆ ಎಂಬುದು ತಿಳಿದು ಬಂದಿದೆ. ಅಲ್ಲದೆ ಅವರ ಎಡಗೈ ಮೇಲೆ ಬೋರೆಗೌಡ ಎಂಬ ಹೆಸರು ಅಚ್ಚೆ ಹಾಕಿಸಿಕೊಂಡಿರುವುದು ಪತ್ತೆಯಾಗಿದೆ. ಆದರೆ ಅವರ ವಿಳಾಸ ಇನ್ನೂ ತಿಳಿದು ಬಂದಿಲ್ಲ.

    ಈ ವಿಷಯ ತಿಳಿದ ಜಗ್ಗೇಶ್ ಅವರು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. “ದಿಘ್ಬ್ರಾಂತನಾದೆ ಈ ವಿಷಯ ಓದಿ. ನನ್ನ ಅಭಿಮಾನದ ಆತ್ಮವೇ ಒಬ್ಬ ಸಹೋದರನ ಕಳೆದುಕೊಂಡ ದುಃಖವಾಯಿತು. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ದಯಮಾಡಿ ಇವರ ವಿಳಾಸ ಸಿಕ್ಕರೆ ತಿಳಿಸಿ ವೈಯಕ್ತಿಕವಾಗಿ ನಾನು ಅವರ ಕುಟುಂಬಕ್ಕೆ ಸಾಂತ್ವನ ಹೇಳಬೇಕು. ಹರಿಓಂ” ಎಂದು ಟ್ವೀಟ್ ಮಾಡಿದ್ದಾರೆ.

    ನವರಸ ನಾಯಕ ಜಗ್ಗೇಶ್ ಅಭಿನಯದ `ಕಾಳಿದಾಸ ಕನ್ನಡ ಮೇಷ್ಟ್ರು’ ಸಿನಿಮಾ ಕಳೆದ ವಾರ ಬಿಡುಗಡೆಯಾಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ.

  • ಕಾಳಿದಾಸ ಕನ್ನಡ ಮೇಷ್ಟ್ರು: ಟ್ರೈಲರ್ ಲಾಂಚ್ ಮಾಡಿದ ಚಾಲೆಂಜಿಂಗ್ ಸ್ಟಾರ್!

    ಕಾಳಿದಾಸ ಕನ್ನಡ ಮೇಷ್ಟ್ರು: ಟ್ರೈಲರ್ ಲಾಂಚ್ ಮಾಡಿದ ಚಾಲೆಂಜಿಂಗ್ ಸ್ಟಾರ್!

    ದುವರೆಗೂ ನೂರಾರು ಹಾಡುಗಳನ್ನು ಬರೆಯುವ ಮೂಲಕ ಯಶಸ್ವಿ ಗೀತ ಸಾಹಿತಿಯಾಗಿ ಗುರುತಿಸಿಕೊಂಡಿರುವವರು ಕವಿರಾಜ್. ಸದಾ ನೆನಪಿಟ್ಟುಕೊಳ್ಳುವ, ಗುನುಗುನಿಸಿಕೊಳ್ಳುವ ಹಾಡುಗಳೊಂದಿಗೆ ಕನ್ನಡಿಗರನ್ನೆಲ್ಲ ಆವರಿಸಿಕೊಂಡಿರೋ ಅವರು ನಿರ್ದೇಶಕರಾಗಿಯೂ ಅವತಾರವೆತ್ತಿ ವರ್ಷಗಳು ಕಳೆದಿವೆ. ಇದೀಗ ನಿರ್ದೇಶಕರಾಗಿ ಅವರ ಎರಡನೇ ಪ್ರಯತ್ನವೆಂಬಂತೆ ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರ ರೆಡಿಯಾಗಿದೆ. ನವರಸ ನಾಯಕ ಜಗ್ಗೇಶ್ ಅಭಿನಯದ ಈ ಸಿನಿಮಾದ ಟೀಸರೊಂದು ಈ ಹಿಂದೆ ಲಾಂಚ್ ಆಗಿತ್ತು. ಅದರ ಬಿಸಿಯಿನ್ನೂ ಯಥಾ ರೀತಿಯಲ್ಲಿರುವಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ರೈಲರನ್ನು ಬಿಡುಗಡೆಗೊಳಿಸಿದ್ದಾರೆ.

    ಈ ಹಿಂದೆ ತೂಗುದೀಪ ಪ್ರೊಡಕ್ಷನ್ ನಿರ್ಮಾಣದಲ್ಲಿ ಮದುವೆಯ ಮಮತೆಯ ಕರೆಯೋಲೆ ಎಂಬ ಚಿತ್ರವನ್ನು ಕವಿರಾಜ್ ನಿರ್ದೇಶನ ಮಾಡಿದ್ದರು. ಈ ಮೂಲಕ ದರ್ಶನ್, ಕವಿರಾಜ್ ಅವರ ಮೊದಲ ಹೆಜ್ಜೆಗೆ ಸಾಥ್ ಕೊಟ್ಟಿದ್ದರು. ಇದೀಗ ಎರಡನೇ ಪ್ರಯತ್ನವಾದ ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರಕ್ಕೂ ಅವರು ಬೆಂಬಲವಾಗಿ ನಿಂತಿದ್ದಾರೆ. ಈ ಟ್ರೈಲರ್ ಬಿಡುಗಡೆಗೊಳಿಸಿರೋ ದರ್ಶನ್ ಸದರಿ ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಇಲ್ಲಿ ನವರಸ ನಾಯಕ ಜಗ್ಗೇಶ್ ಅವರಿಗೆಂದೇ ಹೇಳಿ ಮಾಡಿಸಿದ ಕಥೆ ಇದ್ದಂತಿದೆ. ಎಲ್ಲ ರಸಗಳನ್ನೂ ಸೇರಿಸಿ ಮಾಡಿರುವಂತಿರೋ ಈ ಸಿನಿಮಾಗೆ ಒಳಿತಾಗಲಿ, ಇದುವೇ ಕನ್ನಡ ಪ್ರೇಮವನ್ನು ಮತ್ತಷ್ಟು ತೀವ್ರವಾಗಿಸುವಂತಾಗಲೆಂದು ಹಾರೈಸಿದ್ದಾರೆ.

    ಖುದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಬೆಂಬಲ ನೀಡಿರೋದರಿಂದ ಕವಿರಾಜ್ ಅವರ ಎರಡನೇ ಹೆಜ್ಜೆಗೆ ಮತ್ತಷ್ಟು ಬಲ ಬಂದಂತಾಗಿದೆ. ಕನ್ನಡದ ಮಟ್ಟಿಗೆ ಮೇಷ್ಟ್ರು ಎಂಬ ಗುರು ಪರಂಪರೆಗೊಂದು ಇತಿಹಾಸವೇ ಇದೆ. ಅದರ ಭಾಗವಾಗಿ ರೂಪುಗೊಂಡ ಮನಸುಗಳೇ ಇಂದು ಕನ್ನಡ ಸಾಂಸ್ಕೃತಿಕ ಲೋಕವನ್ನು ಶ್ರೀಮಂತಗೊಳಿಸುತ್ತಿವೆ. ಆ ಪರಂಪರೆ ಇಂದು ಸವಕಲಾಗುತ್ತಿದೆ. ಇಂಥಾ ಸೂಕ್ಷ್ಮ ಕಥಾನಕವನ್ನು ಕಾಮಿಡಿ ಟಚ್‍ನೊಂದಿಗೆ, ಆಕ್ಷನ್ ಸನ್ನಿವೇಶಗಳನ್ನೂ ಬೆರೆಸಿ ಹೇಳೋ ವಿನೂತನ ಪ್ರಯತ್ನಕ್ಕೆ ಕವಿರಾಜ್ ಕೈ ಹಾಕಿದ್ದಾರೆ. ಈ ಟ್ರೈಲರ್ ಗೆ ಸಿಗುತ್ತಿರೋ ವ್ಯಾಪಕ ಮೆಚ್ಚುಗೆಯೇ ಗೆಲುವಿನ ಸೂಚನೆಯಂತಿದೆ.