Tag: Kalasa Banduri

  • ಕಳಸಾ ಬಂಡೂರಿ – ಇನ್ನೂ 60 ದಿನಗಳಲ್ಲಿ ಒಳ್ಳೆ ಸುದ್ದಿ‌ ಕೊಡ್ತೇವೆ: ಮುನೇನಕೊಪ್ಪ

    ಕಳಸಾ ಬಂಡೂರಿ – ಇನ್ನೂ 60 ದಿನಗಳಲ್ಲಿ ಒಳ್ಳೆ ಸುದ್ದಿ‌ ಕೊಡ್ತೇವೆ: ಮುನೇನಕೊಪ್ಪ

    ಧಾರವಾಡ: ಕಳಸಾ ಬಂಡೂರಿಗೆ ಇನ್ನೂ 60 ದಿನಗಳಲ್ಲಿ ಒಂದು ಒಳ್ಳೆ ಸಿಹಿ‌ ಸುದ್ದಿ‌ ಕೊಡುತ್ತೇವೆ ಎಂದು ಸಚಿವ ಶಂಕರ್‌ ಪಾಟೀಲ್ ಮುನೇನಕೊಪ್ಪ (Shankar Patil Munenakoppa) ತಿಳಿಸಿದರು.

    ಕಾಂಗ್ರೆಸ್‌ನಿಂದ ಕಳೆದ ವಾರವಷ್ಟೇ ಹುಬ್ಬಳ್ಳಿಯಲ್ಲಿ ಮಹದಾಯಿ ಬಗ್ಗೆ ಸಮಾವೇಶ ಮಾಡಲಾಗಿತ್ತು. ಈ‌ ವಿಚಾರವಾಗಿ ಧಾರವಾಡದಲ್ಲಿ ಪ್ರತಿಕ್ರಿಯಿಸಿ, ಕಳಸಾ ಬಂಡೂರಿಗೆ (Kalasa Banduri) ಕಾಂಗ್ರೆಸ್ (Congress) ವಿರೋಧ ಮಾಡುತ್ತಲೇ ಬಂದಿದೆ. ಈ ಹಿಂದೆ ಕಳಸಾ‌ ಬಂಡೂರಿಗೆ ಒಂದು ಹನಿ ನೀರು ಬಿಡಲ್ಲ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi) ಹೇಳಿದ್ದರು. ಈ ಹಿನ್ನೆಲೆಯಲ್ಲಿ ಕಳಸಾ‌ ಬಂಡೂರಿ ಬಗ್ಗೆ ಮಾತನಾಡುವಂತದ್ದು‌ ಹಾಗೂ ಸಮಾವೇಶ ಮಾಡುವಂತ ನೈತಿಕತೆ ಕಾಂಗ್ರೆಸ್‌ನವರಿಗೆ ಇಲ್ಲ ಎಂದು ತಿಳಿಸಿದರು.

    ಟ್ರಿಬ್ಯುನಲ್ ಸರಿ ಪಡಿಸುವ ಕೆಲಸ ಅವರಿಂದ ಯಾವತ್ತೂ ಆಗಿಲ್ಲ. ರೈತರ ಮೇಲೆ ಗೋಲಿಬಾರ್ ಹಾಗೂ ಲಾಠಿ ಚಾರ್ಜ್ ಮಾಡಿದ್ದು ಕಾಂಗ್ರೆಸ್, ನಾನು ಅದೇ ಭಾಗದಲ್ಲಿ ಹುಟ್ಟಿದ್ದೇನೆ. ನಾವು ಹೋರಾಟದಿಂದ ನೀರು ಪಡೆಯುವಂತಹ ಪರಿಸ್ಥಿತಿ ಬಂದಿದೆ. ನಮ್ಮ ಭಾಗದ ಅನೇಕ ರೈತರಿಗೆ ಚಿತ್ರದುರ್ಗ ಹಾಗೂ ಬಳ್ಳಾರಿ ಜೈಲಿಗೆ ಹಾಕುವಂತೆ ಆಯಿತು, ಹೀಗಾಗಿ ಕಾಂಗ್ರೆಸ್‌ಗೆ ಈ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.

    ಕಾಂಗ್ರೆಸ್‌ನವರು ಹುಬ್ಬಳ್ಳಿ ನೆಹರು ಮೈದಾನದಲ್ಲಿ ಸಮಾವೇಶ ಮಾಡಿದ್ದು, ಚುನಾವಣೆ ಸಮಾವೇಶ ಅಷ್ಟೇ ಎಂದ ಅವರು, ಮಹದಾಯಿ ವಿಚಾರವಾಗಿ ಗೋವಾ‌ ಸಚಿವ ರಾಜೀನಾಮೆ ನೀಡುವ ವಿಚಾರವಾಗಿ ನಾನು ಮಾತನಾಡಲ್ಲ ಎಂದರು. ಇದನ್ನೂ ಓದಿ: ಬಿಜೆಪಿಯ 20 ಶಾಸಕರಿಗೆ ಟಿಕೆಟ್ ಟೆನ್ಷನ್ – ಹೈಕಮಾಂಡ್ ಕೈ ಸೇರಿದೆ 16 ಜಿಲ್ಲೆಗಳ ಶಾರ್ಟ್ ಲಿಸ್ಟ್

    ಕಾನೂನು ಬದ್ಧವಾಗಿ ಟ್ರಿಬ್ಯುನಲ್‌ನಲ್ಲಿ ಆದೇಶವಾದ 3.9 ಟಿಎಂಸಿ ನೀರು ನಮ್ಮ ಹಕ್ಕು. ಆ‌ ಹಕ್ಕನ್ನು ಪಡೆಯುವ‌ ಕೆಲಸ ಮಾಡುತ್ತೇವೆ.‌ ಗೋವಾ ರಾಜ್ಯ ತಮ್ಮ ನೆಲ‌, ಜಲದ ವಿಚಾರದಲ್ಲಿ ಅವರು ಹೇಳಿದ್ದಾರೆ. ನಮಗೆ ಆಗಲೇ ಅನುಮೋದನೆ ಸಿಕ್ಕಿದೆ. ಆದರೆ ನಾವು ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಬೇಗ ಟೆಂಡರ್ ಕರೆದು ಭೂಮಿ ಪೂಜೆ ಮಾಡುವ ಬಗ್ಗೆ ಸಿಎಂ ತೀರ್ಮಾನ ತೆಗೆದುಕೊಳ್ಳುತ್ತಾರೆ. ಡಿಪಿಆರ್ ಅನುಮೋದನೆ ಸಿಕ್ಕಿದೆ. ಇದಕ್ಕಾಗಿ 60 ವರ್ಷ ಕಾದಿದ್ದೇವೆ. ಇನ್ನೂ 60 ದಿನ ಕಾದರೆ ಇದಕ್ಕೆ ಒಳ್ಳೆ ಸುದ್ದಿಯನ್ನ ಕೊಡುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: 13 ವರ್ಷಗಳ ಬಳಿಕ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಕರ್ನಾಟಕದ ಟ್ಯಾಬ್ಲೋಗಿಲ್ಲ ಅವಕಾಶ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಳಸಾ ಬಂಡೂರಿ ಯೋಜನೆಗೆ ಗ್ರೀನ್ ಸಿಗ್ನಲ್ – ಡಿಪಿಆರ್ ಚುನಾವಣೆಗೆ ಮಾತ್ರ ಮೀಸಲಾಗಬಾರದು: ರೈತರ ಆಗ್ರಹ

    ಕಳಸಾ ಬಂಡೂರಿ ಯೋಜನೆಗೆ ಗ್ರೀನ್ ಸಿಗ್ನಲ್ – ಡಿಪಿಆರ್ ಚುನಾವಣೆಗೆ ಮಾತ್ರ ಮೀಸಲಾಗಬಾರದು: ರೈತರ ಆಗ್ರಹ

    ಧಾರವಾಡ: ಉತ್ತರ ಕರ್ನಾಟಕ ಭಾಗದ ಅದರಲ್ಲೂ ಧಾರವಾಡ ಜಿಲ್ಲೆಯ ನವಲಗುಂದ ಹಾಗೂ ಗದಗ ಜಿಲ್ಲೆಯ ನರಗುಂದ ರೈತರ (Farmers) ಬಹು ದಿನಗಳ ಬೇಡಿಕೆಯಾಗಿದ್ದ ಕಳಸಾ ಬಂಡೂರಿ (Kalasa-Banduri) ನಾಲಾ ಜೋಡಣೆ ಯೋಜನೆಗೆ ಕೇಂದ್ರ ಸರ್ಕಾರದ ಡಿಪಿಆರ್ (DPR) ಅನುಮೋದನೆ ನೀಡಿದೆ.

    ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದನ್ನು ಸ್ವತಃ ಕೇಂದ್ರ ಸಚಿವರೂ ಆಗಿರುವ ಧಾರವಾಡ ಜಿಲ್ಲೆಯ ಸಂಸದರಾದ ಪ್ರಹ್ಲಾದ್ ಜೋಶಿ (Pralhad Joshi) ಅವರೇ ಹೇಳಿಕೊಂಡಿದ್ದು, ಇದು ಈ ಭಾಗದ ರೈತರಲ್ಲಿ ಹರ್ಷವನ್ನುಂಟು ಮಾಡಿದೆ. ವೀಡಿಯೋ ಮೂಲಕ ಮಾಹಿತಿ ಹಂಚಿಕೊಂಡ ಪ್ರಹ್ಲಾದ್ ಜೋಶಿ, ಕರ್ನಾಟಕಕ್ಕೆ ಅತ್ಯಂತ ಅವಶ್ಯಕವಾಗಿದ್ದ ಈ ಯೋಜನೆಗೆ ಅನುಮೋದನೆ ನೀಡಿದ್ದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi), ಗೃಹ ಸಚಿವ ಅಮಿತ್ ಶಾ (AmitShah) ಅವರಿಗೆ ಹಾಗೂ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಬಸವರಾಜ ಬೊಮ್ಮಾಯಿ (Basavaraj Bommai), ಬಿ.ಎಸ್‌ ಯಡಿಯೂರಪ್ಪ ಮತ್ತು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರಿಗೆ ಧನ್ಯವಾದಗಳು ತಿಳಿಸುವುದಾಗಿ ಹೇಳಿದರು. ಇದನ್ನೂ ಓದಿ: ಕಳಸಾ ಬಂಡೂರಿ ಯೋಜನೆಗೆ ಜಲ ಆಯೋಗ ಅನುಮತಿ: ಪ್ರಹ್ಲಾದ್ ಜೋಶಿ ಮಾಹಿತಿ

    ಈ ಯೋಜನೆ ಅನುಷ್ಠಾನಕ್ಕಾಗಿ ಆಗ್ರಹಿಸಿ ಸದಾ ಹೋರಾಟ ಮಾಡುತ್ತ ಬಂದ ರೈತ ಮುಖಂಡ ಶಂಕರ ಅಂಬಲಿ ಹರ್ಷ ವ್ಯಕ್ತಪಡಿಸಿದ್ದು, ಡಿಪಿಆರ್ ಕೇವಲ ಚುನಾವಣೆಗೆ ಮಾತ್ರ ಮೀಸಲಾಗಬಾರದು. ಕೂಡಲೇ ಕಾಮಗಾರಿ ಆರಂಭಿಸಿ ನಮ್ಮ ಪಾಲಿನ ನೀರನ್ನು ನಮಗೆ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ನಾಳೆ ಮಂಡ್ಯಕ್ಕೆ ಅಮಿತ್ ಶಾ ಗ್ರ್ಯಾಂಡ್ ಎಂಟ್ರಿ – ಅನ್ನದಾತರ ಕಿಚ್ಚಿಗೆ ಬೆದರಿ ಕಾರ್ಯಕ್ರಮ ದಿಢೀರ್ ಬದಲಾವಣೆ

    Live Tv
    [brid partner=56869869 player=32851 video=960834 autoplay=true]

  • ಕಳಸಾ ಬಂಡೂರಿ ಯೋಜನೆಗೆ ಜಲ ಆಯೋಗ ಅನುಮತಿ: ಪ್ರಹ್ಲಾದ್ ಜೋಶಿ ಮಾಹಿತಿ

    ಕಳಸಾ ಬಂಡೂರಿ ಯೋಜನೆಗೆ ಜಲ ಆಯೋಗ ಅನುಮತಿ: ಪ್ರಹ್ಲಾದ್ ಜೋಶಿ ಮಾಹಿತಿ

    ಹುಬ್ಬಳ್ಳಿ: ಕೇಂದ್ರ ಜಲ ಆಯೋಗವು ಕರ್ನಾಟಕದ ಕಳಸಾ ಬಂಡೂರಿ (Kalasa Banduri Yojana) ವಿಸ್ತೃತ ಯೋಜನಾ ವರದಿಗೆ ಅನುಮತಿಯನ್ನು ನೀಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahad Joshi) ಹೇಳಿದ್ದಾರೆ.

    ವೀಡಿಯೋ ಮೂಲಕ ಮಾಹಿತಿ ಹಂಚಿಕೊಂಡ ಅವರು, ಕರ್ನಾಟಕಕ್ಕೆ ಅತ್ಯಂತ ಅವಶ್ಯಕವಾಗಿದ್ದ ಈ ಯೋಜನೆಗೆ ಅನುಮೋದನೆ ನೀಡಿದ್ದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ (AmitShah) ಅವರಿಗೆ ಹಾಗೂ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಅನಂತ ಧನ್ಯವಾದಗಳು ತಿಳಿಸುವುದಾಗಿ ಹೇಳಿದರು.

    ಕಳಸಾ ಬಂಡೂರಿ ಯೋಜನೆಗೆ ಈ ಹಿಂದೆ ನಾವು ಕೂಡಾ ಹೋರಾಟ ಮಾಡಿದ್ದೆವು. ಇದೀಗ ವಿಸ್ತೃತ ಯೋಜನಾ ವರದಿಗೆ ಸರ್ಕಾರ ಒಪ್ಪಿಗೆ ನೀಡಿದೆ. ಬೊಮ್ಮಾಯಿ ಸರ್ಕಾರವೂ ಅತ್ಯಂತ ಪರಿಶ್ರಮ ವಹಿಸಿದೆ, ನಾನು ಬೊಮ್ಮಾಯಿ (Basavaraj Bommai) ಹಾಗೂ ಗೋವಿಂದ್ ಕಾರಜೋಳ (Govind Karajola) ಅವರಿಗೆ ಕೂಡ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಇದನ್ನೂ ಓದಿ: ಹೊಸವರ್ಷದ ಸಂಭ್ರಮಕ್ಕೆ ಗೋವಾ ಮದ್ಯ ಕರ್ನಾಟಕದತ್ತ – ಒಂದು ಕೋಟಿ ರೂ.ಗೂ ಹೆಚ್ಚು ಮೌಲ್ಯದ ಮದ್ಯ ಅಬಕಾರಿ ವಶಕ್ಕೆ

    ಜನವರಿ 2 ರಂದು ಮಹದಾಯಿ ವಿಚಾರವಾಗಿ ಕಾಂಗ್ರೆಸ್ (Congress) ಬೃಹತ್ ಸಮಾವೇಶ ಮಾಡಲಿದೆ. ಕಾಂಗ್ರೆಸ್ ಸಮಾವೇಶಕ್ಕೂ ಮುನ್ನವೇ ಯೋಜನೆ ವರದಿಗೆ ಅನುಮೋದನೆ ನೀಡಿದೆ. ಈ ಮೂಲಕ ಕಾಂಗ್ರೆಸ್ ನಾಯಕರಿಗೆ ಬಿಜೆಪಿ (BJP) ಕೌಂಟರ್ ಕೊಟ್ಟಿದೆ. ಮಲ್ಲಿಕಾರ್ಜುನ್ ಖರ್ಗೆ, ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಸಮಾವೇಶ ಹಮ್ಮಿಕೊಂಡಿದ್ದರು. ಆದರೆ ಸಮಾವೇಶ ಮಾಡೋ ಒಳಗೆ ಕಳಸಾ ಬಂಡೂರಿ ವಿಸ್ತ್ರತ ವರಿದಿಗೆ ಜಲ ಆಯೋಗ ಅನುಮತಿ ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ಕಳಸಾ ಬಂಡೂರಿ ಯೋಜನೆಗೆ ಮತ್ತೆ ಗ್ರೀನ್ ಸಿಗ್ನಲ್

    ಕಳಸಾ ಬಂಡೂರಿ ಯೋಜನೆಗೆ ಮತ್ತೆ ಗ್ರೀನ್ ಸಿಗ್ನಲ್

    ನವದೆಹಲಿ: ಕಳಸಾ ಬಂಡೂರಿ ನಾಲಾ ಯೋಜನೆಗೆ ಮತ್ತೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಕಾಮಗಾರಿ ಆರಂಭಿಸಲು ನಮ್ಮ ತಕರಾರಿಲ್ಲ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಸ್ಪಷ್ಟಪಡಿಸಿದ್ದಾರೆ.

    ಈ ಸಂಬಂಧ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಜಾವ್ಡೇಕರ್, ಕುಡಿಯುವ ನೀರಿನ ಯೋಜನೆಗೆ ಪರಿಸರ ಇಲಾಖೆ ಒಪ್ಪಿಗೆ ಬೇಕಿಲ್ಲ, ಹೀಗಾಗಿ ಕಳಸಾ ಬಂಡೂರಿ ಯೋಜನೆ ಆರಂಭಿಸಬಹುದು. ನ್ಯಾಯಾಧೀಕರಣ ಆದೇಶದ ಹೊರಡಿಸಿದ ಮೇಲೆ ಅರಣ್ಯ ಮತ್ತು ವನ್ಯಜೀವಗಳ ಇಲಾಖೆಯಿಂದ ಒಪ್ಪಿಗೆ ಪಡೆದು ಕಾಮಗಾರಿ ಆರಂಭಿಸಬಹುದು ಎಂದು ತಿಳಿಸಿದ್ದಾರೆ.

    ಕಳಸಾ ಬಂಡೂರಿ ಯೋಜನೆ ಆರಂಭಿಸಲು ಕೇಂದ್ರ ಸರ್ಕಾರದ ತಡೆ ಇಲ್ಲ ನಿಮ್ಮ ಮನವಿಯನ್ನು ಆಧರಿಸಿ ಈ ಸಂಬಂಧ ಇದ್ದ ಗೊಂದಲಗಳನ್ನು ಬಗೆಹರಿಸಿದ್ದೇವೆ ಎಂದು ಭಾವಿಸಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

    ಮಹದಾಯಿ ನ್ಯಾಯಾಧೀಕರಣ ತೀರ್ಪಿನ ಬಳಿಕ ಕಳಸಾ ಬಂಡೂರಿ ಕಾಮಗಾರಿ ಆರಂಭಿಸಿಲು ಕೇಂದ್ರ ಪರಿಸರ ಇಲಾಖೆ ಒಪ್ಪಿಗೆ ನೀಡಿತ್ತು. ಈ ವೇಳೆ ಗೋವಾ ಸರ್ಕಾರದ ನಿಯೋಗ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಭೇಟಿಯಾಗಿ ಅನುಮತಿ ರದ್ದು ಮಾಡುವಂತೆ ಮನವಿ ಮಾಡಿತ್ತು. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್‍ನಲ್ಲಿ ಪ್ರಕರಣ ಬಾಕಿ ಇರುವ ಕಾರಣ ಅನುಮತಿ ತಡೆ ಹಿಡಿಯಲಾಗಿದೆ ಎಂದು ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ಪತ್ರ ಬರೆಯಲಾಗಿತ್ತು. ಈ ಪತ್ರದ ಬೆನ್ನಲ್ಲೇ ರಾಜ್ಯದಲ್ಲಿ ಹೋರಾಟಗಳು ನಡೆದಿದ್ದವು. ಅಲ್ಲದೆ ತಡೆ ರದ್ದು ಮಾಡುವಂತೆ ಕಳೆದ ವಾರ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಶಾಸಕ ಉಮೇಶ್ ಕತ್ತಿ ಅವರು ಜಾವ್ಡೇಕರ್ ಭೇಟಿ ಮಾಡಿ ಕಾಮಗಾರಿಗೆ ಯೋಜನೆಗೆ ಅನುಮತಿ ನೀಡುವಂತೆ ಮನವಿ ಮಾಡಿದ್ದರು.

  • ಕಳಸಾ ಬಂಡೂರಿ ಯೋಜನೆ ಒಪ್ಪಿಗೆಗೆ ತಾತ್ಕಾಲಿಕ ತಡೆ

    ಕಳಸಾ ಬಂಡೂರಿ ಯೋಜನೆ ಒಪ್ಪಿಗೆಗೆ ತಾತ್ಕಾಲಿಕ ತಡೆ

    ನವದೆಹಲಿ: ಮಹದಾಯಿ ನ್ಯಾಯಾಧೀಕರಣ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಕೆ ಹಿನ್ನೆಲೆಯಲ್ಲಿ ಕಳಸಾ ಬಂಡೂರಿ ಯೋಜನೆಗೆ ನೀಡಿದ್ದ ಪರಿಸರ ಒಪ್ಪಿಗೆಯನ್ನು ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ತಡೆ ಹಿಡಿದಿದೆ. ಈ ಬಗ್ಗೆ ಪತ್ರ ಬರೆದಿರುವ ಕೇಂದ್ರ ಸರ್ಕಾರ ಪ್ರಕರಣ ಸುಪ್ರೀಂಕೋರ್ಟ್‍ನಲ್ಲಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಒಪ್ಪಿಗೆ ತಡೆ ಹಿಡಿದಿದೆ ಎಂದು ರಾಜ್ಯ ಸರ್ಕಾರಕ್ಕೆ ಮಾಹಿತಿ ತಿಳಿಸಿದೆ.

    2018 ಅಗಸ್ಟ್ 14 ರಂದು ಮಹದಾಯಿ ನ್ಯಾಯಾಧೀಕರಣ ನೀಡಿದ್ದ ತೀರ್ಪು ಪ್ರಶ್ನಿಸಿ ಗೋವಾ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಮತ್ತಷ್ಟು ನೀರಿನ ಬೇಡಿಕೆ ಇಟ್ಟು ಕರ್ನಾಟಕವೂ ಅರ್ಜಿ ಸಲ್ಲಿಸಿತ್ತು. ಸದ್ಯ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿದೆ.

    ಇತ್ತೀಚಿಗೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದ ಕೇಂದ್ರ ಅರಣ್ಯ ಪರಿಸರ ಇಲಾಖೆ ಕಳಸಾ ಬಂಡೂರಿ ಯೋಜನೆಗೆ ಅನುಮತಿ ನೀಡಿತ್ತು. ಇದೊಂದು ಕುಡಿಯುವ ನೀರಿನ ಯೋಜನೆಯಾದ ಹಿನ್ನೆಲೆಯಲ್ಲಿ ಅನುಮತಿ ನೀಡಲಾಗಿದೆ. ಇಲ್ಲಿ ಯಾವುದೇ ನೀರಾವರಿ ಮತ್ತು ಜಲ ವಿದ್ಯುತ್ ಯೋಜನೆ ಇಲ್ಲದಿರುವ ಹಿನ್ನೆಲೆ ಇಲಾಖೆ ಅನುಮತಿ ನೀಡಲಾಗಿತ್ತು. ಕೇಂದ್ರ ಸರ್ಕಾರದ ಯಾಕ ಆಕ್ಷೇಪಣೆ ಇಲ್ಲದೇ ನೀವೂ ಕಾಮಗಾರಿ ಆರಂಭಿಸಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಈ ನಿರಪೇಕ್ಷಣಾ ಪತ್ರವನ್ನು ವಿರೋಧಿಸಿ ಗೋವಾ ನಿಯೋಗ ಕೇಂದ್ರ ಸಚಿವ ಪ್ರಕಾಶ್ ಜಾವೇಡ್ಕರ್ ಭೇಟಿಯಾಗಿ ಒಪ್ಪಿಗೆಯನ್ನು ಹಿಂದೆ ಪಡೆಯುವಂತೆ ಒತ್ತಾಯ ಮಾಡಿತ್ತು.

    ಎಚ್‍ಡಿಕೆ ಕಿಡಿ: ಕನ್ನಡಿಗರನ್ನು ರಾಜಕೀಯಕ್ಕೆ ದುಡಿಸಿಕೊಳ್ಳುವುದು, ಯೋಜನೆ, ಕಾರ್ಯಕ್ರಮ, ಅನುದಾನಗಳ ವಿಷಯದಲ್ಲಿ ಶೋಷಿಸುವುದು ಬಿಜೆಪಿಯ ಚಾಳಿಯಾಗಿದೆ. ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಸರ್ಕಾರ ತಡೆ ನೀಡಿರುವುದನ್ನು ಕನ್ನಡಿಗರಾಗಿ ಟೀಕಿಸಬೇಕೋ? ಬೆಂಬಲಿಸಬೇಕೋ? ಕನ್ನಡಿಗರ ಆತ್ಮಾಭಿಮಾನ ಕೆಣಕುವುದರಲ್ಲಿ ನಿಮಗೆಂಥ ಸಂತೋಷ ಎಂದು ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

    ಚುನಾವಣೆ ವೇಳೆ ಮಹದಾಯಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ವೋಟು ಹಾಕಿಸಿಕೊಂಡ ರಾಜ್ಯದ ಬಿಜೆಪಿ ನಾಯಕರು ಇದೀಗ ಮೋದಿಗೆ ಬೆದರಿ ತಮ್ಮ ಧ್ವನಿಯನ್ನೇ ಕಳೆದುಕೊಂಡಿದ್ದಾರೆ. ಕನ್ನಡಿಗರನ್ನು ದಾಸ್ಯಕ್ಕೆ ಈಡು ಮಾಡುವ ದಲ್ಲಾಳಿಗಳಾಗಿದ್ದಾರೆ ಎಂದು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಮಳೆಗೂ ಆರದ ‘ಕಳಸಾ’ ಕಿಚ್ಚು – ಮೂವರು ಮಹಿಳೆಯರು ಆಸ್ಪತ್ರೆಗೆ ದಾಖಲು

    ಮಳೆಗೂ ಆರದ ‘ಕಳಸಾ’ ಕಿಚ್ಚು – ಮೂವರು ಮಹಿಳೆಯರು ಆಸ್ಪತ್ರೆಗೆ ದಾಖಲು

    ಬೆಂಗಳೂರು: ಕಳಸಾ ಬಂಡೂರಿ ಹೋರಾಟಗಾರರ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಇದೀಗ ಮೂವರು ಮಹಿಳೆಯರು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಯಲ್ಲಿ ಸವದತ್ತಿ ಮೂಲದ ಗದಿಗೆಮ್ಮ ಸೇರಿ ಮೂವರು ಮಹಿಳೆಯರು ತೀವ್ರ ಜ್ವರದಿಂದಾಗಿ ಆಸ್ಪತ್ರೆ ಸೇರಿದ್ದಾರೆ. ಅಲ್ಲದೆ ಮೂಲ ಸೌಕರ್ಯಗಳಿಲ್ಲದೆ ಮಹಿಳೆಯರು ಪರದಾಡುತ್ತಿದ್ದಾರೆ.

    ಮಳೆಯಲ್ಲೂ ಟಾರ್ಪಲ್ ಹಿಡಿದು ರೈತರು ಅಹೋರಾತ್ರಿ ಧರಣಿ ಕುಳಿತಿದ್ದಾರೆ. ಸ್ಥಳಕ್ಕೆ ಬಾರದ ಉತ್ತರ ಕರ್ನಾಟಕದ ಜನಪ್ರತಿನಿಧಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯಪಾಲರನ್ನು ಭೇಟಿಯಾಗೋ ತನಕ ಇಲ್ಲಿಂದ ಹೋಗೋ ಪ್ರಶ್ನೆಯೇ ಇಲ್ಲ ಅಂತ ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ. ರಾತ್ರಿ ಕೂಡ ಮಹಿಳೆಯರು, ಮಕ್ಕಳು, ವಯಸ್ಸಾದವರು, ಕೊರೆವ ಚಳಿಯಲ್ಲಿ ಅಹೋರಾತ್ರಿ ಧರಣಿ ಮುಂದುವರಿಸಿದರು.

    ಕೆಲ ವಯಸ್ಸಾದ ಮಹಿಳಾ ಹೋರಾಟಗಾರರು ಹೊದಿಕೆಯಿಲ್ಲದೆ ಚಳಿಯಲ್ಲೇ ರೈಲ್ವೆ ನಿಲ್ದಾಣದಲ್ಲಿ ನಿದ್ದೆ ಮಾಡಿದ್ದಾರೆ. ಇಂದಾದರೂ ರಾಜ್ಯಪಾಲರನ್ನ ಭೇಟಿ ಮಾಡಿಸುವ ನಿರೀಕ್ಷೆಯಲ್ಲಿ ರೈತರಿದ್ದಾರೆ.

  • ಮತ್ತೆ ಹೆಚ್ಚಾದ ಕಳಸಾ ಬಂಡೂರಿ ಕಿಚ್ಚು – ಸಾವಿರಾರು ರೈತರಿಂದ ಬೆಂಗಳೂರು ಚಲೋ

    ಮತ್ತೆ ಹೆಚ್ಚಾದ ಕಳಸಾ ಬಂಡೂರಿ ಕಿಚ್ಚು – ಸಾವಿರಾರು ರೈತರಿಂದ ಬೆಂಗಳೂರು ಚಲೋ

    ಹುಬ್ಬಳ್ಳಿ: ಕಳಸಾ ಬಂಡೂರಿ ಹೋರಾಟ ಕಿಚ್ಚು ಮತ್ತೆ ಹೆಚ್ಚಾಗಿದೆ. ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ನೂರಾರು ರೈತರು ಬೆಂಗಳೂರು ಚಲೋ ಅಭಿಯಾನ ಆರಂಭಿಸಿದ್ದಾರೆ.

    ಕಳಸಾ ಬಂಡೂರಿ ಅನುಷ್ಠಾನಕ್ಕಾಗಿ ಗೆಜೆಟೆಡ್ ನೋಟಿಫಿಕೇಶನ್ ಹೊರಡಿಸುವಂತೆ ಆಗ್ರಹಿಸಿ ಕಳೆದ ಒಂದು ತಿಂಗಳು ಪತ್ರ ಚಳುವಳಿ ಆರಂಭಿಸಿದ್ದ ರೈತರು ಹೋರಾಟಗಾರರು ಇದೀಗ ರಾಜಭವನ ಚಲೋ ಹೋರಾಟ ಆರಂಭಿಸಿದ್ದಾರೆ.

    ನಾಳೆ ಬೆಳಿಗ್ಗೆ ರಾಜಭವನಕ್ಕೆ ತೆರಳಿ ನೂರಾರು ರೈತರು ಹೋರಾಟಗಾರರು ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ರೈತ ಹೋರಾಟಗಾರ ವೀರೇಶ ಸೊಬರದಮಠ ನೇತೃತ್ವದಲ್ಲಿ ಬೆಂಗಳೂರು ಚಲೋ ಆರಂಭಗೊಂಡಿದೆ.

    ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ರೈಲಿನ ಮೂಲಕ ಬೆಂಗಳೂರು ಚಲೋ ಆರಂಭಿಸಿದ ರೈತರು ಗುರುವಾರ ರಾಜ್ಯಪಾಲರ ಕಚೇರಿಗೆ ಹೋಗಿ ಮನವಿ ಸಲ್ಲಿಸುವ ಮೂಲಕ ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಲಿದ್ದಾರೆ.

  • ಮಹದಾಯಿ, ಕಳಸಾ ಬಂಡೂರಿ ನೀರಿಗಾಗಿ ನರಗುಂದ ಬಂದ್

    ಮಹದಾಯಿ, ಕಳಸಾ ಬಂಡೂರಿ ನೀರಿಗಾಗಿ ನರಗುಂದ ಬಂದ್

    ಗದಗ: ಮಹದಾಯಿ, ಕಳಸಾ ಬಂಡೂರಿ ನೀರಿಗಾಗಿ ಆಗ್ರಹಿಸಿ ಇಂದು ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಸಂಪೂರ್ಣ ಬಂದ್ ಆಚರಿಸಲಾಯಿತು.

    ರೈತಸೇನೆ ರೈತರ ನಿರಂತರ ಹೋರಾಟಕ್ಕೆ ಇಂದಿಗೆ ನಾಲ್ಕು ವರ್ಷ ಪೂರೈಸಿದ ಹಿನ್ನೆಲೆ ರೈತ ಮುಖಂಡ ವೀರೇಶ ಸೊಬರದಮಠ ನೇತೃತ್ವದಲ್ಲಿ ಬಂದ್‍ಗೆ ಕರೆ ನೀಡಲಾಗಿತ್ತು. ಅಗಸ್ಟ್ 14, 2018 ರಂದು ಮಹದಾಯಿಗಾಗಿ ನ್ಯಾಯಾಧೀಕರಣದಿಂದ ರಾಜ್ಯಕ್ಕೆ 13.5 ಟಿಎಂಸಿ ನೀರು ಬಿಡುವಂತೆ ಆದೇಶ ನೀಡಲಾಗಿತ್ತು. ನ್ಯಾಯಾಧೀಕರಣ ತೀರ್ಪು ನೀಡಿ ವರ್ಷಗಳೇ ಕಳೆದರೂ ಯೋಜನೆ ಕಾರ್ಯ ರೂಪಕ್ಕೆ ಬಾರದ ಹಿನ್ನೆಲೆ ನರಗುಂದ ಬಂದ್ ಮಾಡುವ ಮೂಲಕ ರೈತರು ಆಕ್ರೋಶ ವ್ಯಕ್ತಪಡಿಸಿದರು.

    ಮಹದಾಯಿ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವೈಫಲ್ಯವನ್ನು ವಿರೋಧಿಸಿ ರೈತ ಮುಖಂಡರು ಹೋರಾಟ ನಡೆಸಿದರು.

    ತಾಲೂಕಿನ ಚಿಕ್ಕನರಗುಂದ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ಸಹ ರಸ್ತೆಗೆ ಮುಳ್ಳಿನ ಬೇಲಿಹಾಕಿ ರಸ್ತೆಮಧ್ಯೆ ಟೈರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿದರು.

    ಗದಗ, ಬೆಳಗಾವಿ, ಧಾರವಾಡ, ಬಾಗಲಕೋಟೆ ಜಿಲ್ಲೆಯ 11 ತಾಲೂಕಿನ ನೂರಾರು ರೈತರು ಹೋರಾಟ ನಡೆಸುವ ಮೂಲಕ ಎಚ್ಚರಿಕೆ ನೀಡಿದರು. ಬಂದ್ ಹಿನ್ನೆಲೆ ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.

  • ಮಹದಾಯಿ ನದಿ ನೀರಿಗೆ ಗೋವಾ ಕ್ಯಾತೆ ಯಾಕೆ? ಆರಂಭದಿಂದ ಇಲ್ಲಿಯವರೆಗೆ ಏನಾಗಿದೆ? ಇಲ್ಲಿದೆ ಪೂರ್ಣ ಮಾಹಿತಿ

    ಮಹದಾಯಿ ನದಿ ನೀರಿಗೆ ಗೋವಾ ಕ್ಯಾತೆ ಯಾಕೆ? ಆರಂಭದಿಂದ ಇಲ್ಲಿಯವರೆಗೆ ಏನಾಗಿದೆ? ಇಲ್ಲಿದೆ ಪೂರ್ಣ ಮಾಹಿತಿ

    ನದಿ ನೀರಿನ ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಪ್ರತಿಬಾರಿಯೂ ನೆರೆ ರಾಜ್ಯಗಳು ಖ್ಯಾತೆಯನ್ನು ತೆರೆಯುವುದು ಸಾಮಾನ್ಯವಾಗಿಬಿಟ್ಟಿದೆ. ಕೊಡಗಿನ ತಲಕಾವೇರಿಯಲ್ಲಿ ಹುಟ್ಟುವ ಕಾವೇರಿ ನದಿಗೆ ತಮಿಳುನಾಡು ಕಿರಿಕ್ ಮಾಡುತ್ತಿದ್ದರೆ, ಇತ್ತ ಬೆಳಗಾವಿ ಹುಟ್ಟುವ ಮಹದಾಯಿ ನದಿಗೆ ಗೋವಾ ಕ್ಯಾತೆ ತೆಗೆಯುತ್ತಿದೆ. ಮಹದಾಯಿ ನದಿಯ ತಿರುವು ಯೋಜನೆಯಿಂದ ಗೋವಾಕ್ಕೆ ಮತ್ತು ಪರಿಸರಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ ಎಂದು ಅಧ್ಯಯನಗಳು ವರದಿ ನೀಡಿದರೂ ಗೋವಾ ಸರ್ಕಾರ ಮಾತ್ರ ತನ್ನ ಮೊಂಡುವಾದವನ್ನು ಮುಂದುವರೆಸಿಕೊಂಡೆ ಬಂದಿದೆ. ಆದರೆ ಉತ್ತರ ಕರ್ನಾಟಕದ ಜನ ಕುಡಿಯುವ ನೀರಿಗಾಗಿ ತತ್ತರಿಸಿ ಹೋಗಿದ್ದು, ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಈಗ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ಮಹದಾಯಿ ಯೋಜನೆ ಎಂದರೆ ಏನು? ವಿವಾದ ಯಾಕೆ ಆರಂಭವಾಯಿತು ಮತ್ತು ಪ್ರಸ್ತುತ ಯೋಜನೆ ಸ್ಥಿತಿಗತಿ ಏನು ಎಂಬುದರ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    ಮಲಪ್ರಭಾ ನದಿ ಸಂಜೀವಿನಿ ಯಾಕೆ?
    ಕಳಸಾ-ಬಂಡೂರಿ ನಾಲಾ ಜೋಡಣೆ ಅಥವಾ ಮಹದಾಯಿ ತಿರುವು ಹೆಸರಿನಿಂದ ಕರೆದುಕೊಳ್ಳುವ ಯೋಜನೆ ಕರ್ನಾಟಕ ಸರ್ಕಾರದ ಒಂದು ಮಹಾತ್ವಾಕಾಂಕ್ಷೆಯ ಯೋಜನೆ. ಈ ಯೋಜನೆಗಳನ್ನು ತಿಳಿದುಕೊಳ್ಳುವ ಮೊದಲು ಬೆಳಗಾವಿ, ಗದಗ್, ಬಾಗಲಕೋಟೆ ಮತ್ತು ಧಾರವಾಡ ಜಿಲ್ಲೆಯ ಸಂಜೀವಿನಿ ಎಂದೇ ಕರೆಯಿಸಿಕೊಳ್ಳುವ ಮಲಪ್ರಭಾ ನದಿಯ ಬಗ್ಗೆ ನೀವು ತಿಳಿದುಕೊಳ್ಳಬೇಕು. ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಕಣಕುಂಬಿ ಗ್ರಾಮದ ಮಾವೋಲಿ ಪ್ರದೇಶದಲ್ಲಿ ಹುಟ್ಟುವ ಮಲಪ್ರಭಾ ನದಿ ಪಶ್ಚಿಮಾಭಿಮುಖವಾಗಿ ಹರಿಯುತ್ತದೆ. ಈ ರೀತಿಯಾಗಿ ಹರಿದು ಬರುವ ನದಿಗೆ ಬೆಳಗಾವಿ ಜಿಲ್ಲೆಯ ಸವದತ್ತಿ ಬಳಿಯ ನವಿಲುತೀರ್ಥ ಎಂಬಲ್ಲಿ ರೇಣುಕಾಸಾಗರ ಹೆಸರಿನಲ್ಲಿ ಅಣೆಕಟ್ಟನ್ನು ಕಟ್ಟಲಾಗಿದೆ. 1962 ರಲ್ಲಿ ಆರಂಭಿಸಿ, 1972 ರಲ್ಲಿ ಪೂರ್ಣಗೊಂಡ ಈ ಜಲಾಶಯದಲ್ಲಿ 37 ಟಿಎಂಸಿ ನೀರು ಸಂಗ್ರಹವಾಗುತಿತ್ತು. ಈ ಜಲಾಶಯದಲ್ಲಿ ಸಂಗ್ರಹವಾದ ನೀರು ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ ಕೆಲ ತಾಲೂಕಿನ ಗ್ರಾಮಗಳಿಗೆ ಸಿಗುತಿತ್ತು. ಆದರೆ ಮಳೆ ಕಡಿಮೆಯಾಗುತ್ತಿದ್ದಂತೆ ಈ ಭಾಗದಲ್ಲಿ ನೀರಿನ ಸಮಸ್ಯೆ ಹೆಚ್ಚಾಯಿತು. ಹೀಗಾಗಿ ನವಿಲು ತೀರ್ಥ ಜಲಾಶಯದ ನೀರಿನ ಸಮಸ್ಯೆಯನ್ನು ಪರಿಹರಿಸಲು ಸಿದ್ದವಾದ ಯೋಜನೆಯೇ ಮಹದಾಯಿ ತಿರುವು ಯೋಜನೆ.

    ಏನಿದು ಮಹದಾಯಿ ಯೋಜನೆ?
    ನವಿಲು ತೀರ್ಥ ಜಲಾಶಯ ನಿರ್ಮಾಣ ಮಾಡುವ ಮೊದಲೇ ಈ ಡ್ಯಾಂನಲ್ಲಿ ನೀರಿನ ಸಂಗ್ರಹ ಕಡಿಮೆ ಆಗಬಹುದು ಎನ್ನುವ ಮುಂದಾಲೋಚನೆ ಸರ್ಕಾರಕ್ಕಿತ್ತು. ಹೀಗಾಗಿ ಈ ಪ್ರದೇಶಗಳ ನದಿಗಳನ್ನು ಮೊದಲು ಜೋಡಿಸಿ, ನಂತರ ಅವುಗಳನ್ನು ಮಲಪ್ರಭೆಗೆ ಜೋಡಿಸಿ, ಕಟ್ಟಲು ಉದ್ದೇಶಿಸಿರುವ ಡ್ಯಾಂಗೆ ಮತ್ತಷ್ಟು ನೀರು ಸಂಗ್ರಹಿಸಲು ಯೋಜನೆ ರೂಪುಗೊಂಡಿತ್ತು. ಮಹದಾಯಿ ಕಣಿವೆಗೆ ಎಲ್ಲ ಉಪ ನದಿಗಳು ಸೇರುವ ಕಾರಣ ಈ ಯೋಜನೆಗೆ ‘ಮಹಾದಾಯಿ ಕಣಿವೆ ತಿರುವು ಯೋಜನೆ’ ಎಂದು ನಾಮಕರಣ ಮಾಡಲಾಯಿತು.

    ಮಹದಾಯಿ ನದಿಯ ಪಾತ್ರ ಏನು?
    ಮಲಪ್ರಭಾ ನದಿಯಂತೆ ಮಹದಾಯಿ ನದಿ ಕೂಡಾ ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ದೇವಗಾವುಡು ಗ್ರಾಮದ ಬಳಿ ಹುಟ್ಟುತ್ತದೆ. ಈ ಮಹದಾಯಿ ನದಿ ಕರ್ನಾಟಕದಲ್ಲಿ 35 ಕಿ.ಮೀ. ಹರಿದು ‘ಸುರಗ’ ಪ್ರದೇಶದಲ್ಲಿ ಗೋವಾ ರಾಜ್ಯ ಪ್ರವೇಶಿಸುತ್ತದೆ. ಗೋವಾದಲ್ಲಿ ‘ಮಾಂಡೋವಿ’ ಹೆಸರಿನಲ್ಲಿ ಕರೆಯುವ ನದಿ ಅಲ್ಲಿ ಸುಮಾರು 45 ಕಿ.ಮೀ. ಹರಿಯುತ್ತದೆ. ಮಹದಾಯಿ ನದಿ ಹಳತಾರಾ, ಕಳಸಾ, ಬಂಡೂರಿ, ಕಾರಂಜೋಳ, ಬೊಮ್ಮನರಿ ದೂದ ಸಾಗರ ಹೀಗೆ ಅನೇಕ ಉಪನದಿಗಳಿಂದ ಕೂಡಿದ ನದಿ ಕಣಿವೆ ಆಗಿದೆ. ಇದು ಹೆಚ್ಚು ಮಳೆಬೀಳುವ ಪ್ರದೇಶವಾಗಿದ್ದು ಸರಾಸರಿ 3,134 ಮಿಲಿಮೀಟರ್ ಮಳೆ ಬೀಳುತ್ತದೆ. ಮಹಾದಾಯಿ ನದಿ ಕಣಿವೆಯಿಂದ ಕಾಲುವೆ ಮೂಲಕ ಮಲಪ್ರಭಾ ನದಿಗೆ ನೀರು ವರ್ಗಾಯಿಸುವುದೇ ಈ ಯೋಜನೆಯ ಉದ್ದೇಶ.

    ಮಹದಾಯಿ ನದಿಯಲ್ಲಿ ಯಾವ ರಾಜ್ಯಕ್ಕೆ ಎಷ್ಟು ಪಾಲು?
    ಮಹದಾಯಿ ನದಿ 2032 ಚ.ಕಿ.ಮೀ ಜಲನಯನ ಪ್ರದೇಶ ಹೊಂದಿದ್ದು ಕರ್ನಾಟಕದಲ್ಲಿ 375 ಚ.ಕಿ.ಮೀ, ಮಹಾರಾಷ್ಟ್ರದಲ್ಲಿ 77 ಚ.ಕಿ.ಮೀ, ಗೋವಾದಲ್ಲಿ 1580 ಚ.ಕೀ.ಮೀ ಪ್ರದೇಶವನ್ನು ಹೊಂದಿದೆ.

    ಕಾಲುವೆ ಜೋಡಣೆ ಹೇಗೆ?
    ಗದಗ್, ಧಾರವಾಡ, ಬೆಳಗಾವಿ ಜನರ ನೀರಿನ ಸಮಸ್ಯೆ ಪರಿಹಾರಿಸಲು ಸರ್ಕಾರ ಕಳಸಾ ಹಾಗೂ ಬಂಡೂರಿ ಎಂಬ ಎರಡು ಹೊಸ ಯೋಜನೆಗಳನ್ನು ಆರಂಭಿಸಲು ಮುಂದಾಯಿತು. ಇದಕ್ಕಾಗಿ ಕಳಸಾ ಯೋಜನೆಯಲ್ಲಿ ಮೊದಲು ಕಳಸಾ ನದಿಗೆ ಅಣೆಕಟ್ಟು ಹಾಗೂ 4.8 ಕಿ.ಮಿ. ಉದ್ದದ ಕಾಲುವೆ ನಿರ್ಮಾಣ ಮಾಡುವುದು, ಇನ್ನೊಂದು ಹಳತಾರಾ ನದಿಗೆ ಅಣೆಕಟ್ಟು ನಿರ್ಮಿಸಿ ಅಲ್ಲಿ ಸಂಗ್ರಹವಾದ ನೀರನ್ನು 5.5 ಕಿ.ಮೀ. ಉದ್ದದ ಕಾಲುವೆಯ ಮೂಲಕ ಕಳಸಾ ಅಣೆಕಟ್ಟೆಗೆ ಸಾಗಿಸುವ ಉದ್ದೇಶದೊಂದಿಗೆ ಈ ಕಾಮಗಾರಿ ಆರಂಭವಾಯಿತು. ಬಂಡೂರಿ ಯೋಜನೆಯಲ್ಲಿ ಸಿಂಗಾರ ನಾಲಾ ಹಾಗೂ ವಾಟಿ ನಾಲಾಗಳಿಗೆ ಅಣೆಕಟ್ಟು ಕಟ್ಟಿ ಸಂಗ್ರಹವಾದ ನೀರನ್ನು ಬಂಡೂರಿ ಜಲಾಶಯಕ್ಕೆ ವರ್ಗಾಯಿಸುವುದು. ಇಲ್ಲಿ ಸಂಗ್ರಹವಾದ 4 ಟಿಎಂಸಿ ನೀರನ್ನು 5.15 ಕಿ.ಮೀ ಕಾಲುವೆ ಮೂಲಕ ಮಲಪ್ರಭಾ ನದಿಗೆ ವರ್ಗಾಯಿಸುವ ಯೋಜನೆಯನ್ನು ಸರ್ಕಾರ ರೂಪಿಸಿತು.

    ಯೋಜನೆ ಆರಂಭಗೊಂಡು ಅರ್ಧದಲ್ಲಿ ನಿಂತ ಕಥೆ:
    ಸಮುದ್ರಕ್ಕೆ ಹರಿದು ಹೋಗುವ ನೀರನ್ನು ಕುಡಿಯುವ ನೀರಿಗಾಗಿ ಬಳಸಿಕೊಳ್ಳುವ ಚಿಂತನೆ ಆರಂಭವಾದ ಹಿನ್ನೆಲೆಯಲ್ಲಿ 1978ರಲ್ಲಿ ಮುಖ್ಯಮಂತ್ರಿಯಾಗಿದ್ದ ಆರ್.ಗುಂಡೂರಾವ್ ಅವರು ಎಸ್.ಆರ್.ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ನೀಡುವಂತೆ ಸೂಚಿಸಿದರು. 1980ರಲ್ಲಿ ವರದಿ ನೀಡಿದ ಸಮಿತಿ ಯೋಜನೆಯನ್ನು ಜಾರಿಗೊಳಿಸಬಹುದು ಎಂದು ಸರ್ಕಾರಕ್ಕೆ ಶಿಫಾರಸು ಮಾಡಿತು. ಕರ್ನಾಟಕ ಸರ್ಕಾರ 1988ರಲ್ಲಿ ಯೋಜನೆಗೆ ಒಪ್ಪಿಗೆ ನೀಡಿತು. ಆದರೆ, ಗೋವಾ ಸರ್ಕಾರದಿಂದ ಇದಕ್ಕೆ ವಿರೋಧ ವ್ಯಕ್ತವಾಯಿತು. ಈ ವೇಳೆ ಎಸ್.ಆರ್.ಬೊಮ್ಮಾಯಿ ಅವರು 1989ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಅಂದಿನ ಗೋವಾ ಮುಖ್ಯಮಂತ್ರಿ ಪ್ರತಾಪ್ ಸಿಂಗ್ ರಾಣಾ ಜೊತೆ ಮಾತುಕತೆ ನಡೆಸಿದರು. ಮಾತುಕತೆ ಫಲಪ್ರದವಾಗಿ ಯೋಜನೆಗೆ ಗೋವಾ ಒಪ್ಪಿಗೆ ನೀಡಿತು. 2000ದಲ್ಲಿ ಕಳಸಾ-ಬಂಡೂರಿ ನಾಲೆ ಯೋಜನೆಗೆ ಅರಣ್ಯ ಇಲಾಖೆಯೂ ಅನುಮತಿ ನೀಡಿತು. ಬಂಡೂರಿ ನಾಲಾ ಯೋಜನೆಗೆ 49.20 ಕೋಟಿ ರೂ. ಕಳಸಾ ನಾಲಾ ಯೋಜನೆಗೆ 44.78 ಕೋಟಿ ರೂ. ವೆಚ್ಚ ಮಾಡಲು ಆಡಳಿತಾತ್ಮಕ ಒಪ್ಪಿಗೆ ಸಿಕ್ಕಿತು. 2002ರ ಏ.30ರಂದು ಕಳಸಾ ಬಂಡೂರಿ ಕಾಲುವೆ ಮೂಲಕ ನೀರನ್ನು ಹರಿಸಲು ವಾಜಪೇಯಿ ನೃತೃತ್ವದ ಕೇಂದ್ರ ಸರ್ಕಾರದ ಜಲಸಂಪನ್ಮೂಲ ಸಚಿವಾಲಯವೂ ಒಪ್ಪಿಗೆ ನೀಡಿತು. ಆದರೆ 2002ರ ಮೇನಲ್ಲಿ ಗೋವಾ ಸರ್ಕಾರ ಯೋಜನೆ ಬಗ್ಗೆ ತಕರಾರು ಎತ್ತಿದ ಪರಿಣಾಮ ಈ ಯೋಜನೆ ಈಗ ಅರ್ಧದಲ್ಲೇ ನಿಂತಿದೆ.

    ಕಾಮಗಾರಿಗೆ ತಡೆ ನೀಡುತ್ತಿರುವ ಗೋವಾದ ವಾದವೇನು?
    ಮೊದಲನೆಯದಾಗಿ ಮಹದಾಯಿ ನೀರಿನ ಕೊರತೆಯನ್ನು ಅನುಭವಿಸುತ್ತಿರುವ ಒಂದು ಕಣಿವೆ ಪ್ರದೇಶ. ಹೀಗಾಗಿ ಈ ಕಣಿವೆಯಲ್ಲಿ ಹರಿಯುವ ನೀರನ್ನು ವರ್ಗಾಯಿಸಬಾರದು. ಎರಡನೇಯದಾಗಿ ಮಹದಾಯಿ ನದಿಯನ್ನು ತಿರುವು ಮಾಡಿದರೆ ಪಶ್ಚಿಮ ಘಟ್ಟದ ಪರಿಸರದ ಮೇಲೆ ಪರಿಣಾಮ ಬೀರುತ್ತದೆ. ಮೂರನೇಯದಾಗಿ ಈ ನೀರಿನಲ್ಲಿ ವಾಸ ಮಾಡುತ್ತಿರುವ ಸಿಗಡಿ ಮೀನು ನಮಗೆ ಅಮೂಲ್ಯವಾಗಿದೆ. ಸಿಹಿ ನೀರಿನಲ್ಲಿ ಮಾತ್ರ ಬದುಕಬಲ್ಲ ಈ ಮೀನು ಗೋವಾಕ್ಕೆ ಬರುವ ಪ್ರವಾಸಿಗರಿಗೆ ಅಚ್ಚುಮೆಚ್ಚು. ಒಂದು ವೇಳೆ ನೀರಿನ ಸಮಸ್ಯೆಯಾಗಿ ಮೀನು ಉತ್ಪಾದನೆ ಕಡಿಮೆಯಾದರೆ ಪ್ರವಾಸೋದ್ಯಮದ ಮೇಲೆ ನೇರ ಹೊಡೆತ ಬೀಳುತ್ತದೆ. ಹೀಗಾಗಿ ಮಹಾದಾಯಿ ನದಿಯ ನೀರು ತನ್ನ ರಾಜ್ಯದ ಮೂಲಕವೇ ಹಾದು ಹೋಗಬೇಕೆಂಬ ವಾದವನ್ನು ಮುಂದಿಟ್ಟುಕೊಂಡು ಬಂದಿದೆ.

    ಮಹಾರಾಷ್ಟ್ರದ ಕಿರಿಕ್ ಏನು?
    ಮಹಾರಾಷ್ಟ್ರದಲ್ಲಿ 77 ಚ.ಕಿ.ಮೀನಷ್ಟು ದೂರದವರೆಗೆ ಮಹದಾಯಿ ನದಿ ಹರಿಯುತ್ತದೆ. ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಯಾವುದೇ ತಡೆಗೋಡೆಗಳನ್ನ ನಿರ್ಮಿಸಬಾರದೆಂಬ ಕೇಂದ್ರ ಜಲ ಮಂಡಳಿ ಆದೇಶ ನೀಡಿದ್ದರೂ ಮಹಾರಾಷ್ಟ್ರ ಸರ್ಕಾರ ತನ್ನ ವ್ಯಾಪ್ತಿಯಲ್ಲಿ ಒಟ್ಟು 9 ಬ್ಯಾರೇಜ್ ನಿರ್ಮಿಸಿ, ಅದಕ್ಕೆ ತಿಲಹರಿ ಜಲಾಶಯ ಎಂದು ಹೆಸರಿಟ್ಟಿತು. ಈ ಪೈಕಿ 7 ಬ್ಯಾರೇಜ್ ನೀರು, ಕರ್ನಾಟಕದ ಅರಣ್ಯ ಪ್ರದೇಶವನ್ನ ಹಾಳು ಮಾಡಿತು. ಒಂದು ವೇಳೆ ಮಹದಾಯಿ ನದಿ ತಿರುವುಗೊಂಡರೆ ನಮ್ಮ ರಾಜ್ಯದ ಜನರಿಗೆ ಸಮಸ್ಯೆ ಆಗುತ್ತದೆ ಎನ್ನುವ ವಾದವನ್ನು ಮಂಡಿಸಿದೆ.

    ಕರ್ನಾಟಕದ ವಾದ ಏನು?
    ನಾವು ಈ ಯೋಜನೆಯನ್ನು ವಿದ್ಯುತ್ ಅಥವಾ ಇನ್ಯಾವುದೇ ಯೋಜನೆಗಾಗಿ ಆರಂಭಿಸಿಲ್ಲ. ಕುಡಿಯುವ ನೀರಿಗಾಗಿ ನಾವು ಈ ಯೋಜನೆಯನ್ನು ಆರಂಭಿಸಿದ್ದೇವೆ. ನದಿ ನೀರಿನ ಹಂಚಿಕೆ ವಿಚಾರದಲ್ಲಿ ಕುಡಿಯುವ ನೀರಿಗೆ ಮೊದಲು ಆದ್ಯತೆ ನೀಡಬೇಕೆಂದು ಅಂತಾರಾಷ್ಟ್ರೀಯ ಜಲ ನೀತಿ ಹೇಳಿದೆ. ಅಷ್ಟೇ ಅಲ್ಲದೇ ಈ ಯೋಜನೆ ಆರಂಭಗೊಂಡರೂ ಗೋವಾ ರಾಜ್ಯಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ. ಹೀಗಾಗಿ ನಮ್ಮ ಯೋಜನೆ ನ್ಯಾಯಸಮ್ಮತವಾಗಿದೆ ಎಂದು ವಾದವನ್ನು ನ್ಯಾಯಾಲಯಕ್ಕೆ ತಿಳಿಸಿತ್ತು.

    ಯೋಜನೆಯಿಂದ ಪರಿಸರದ ಮೇಲೆ ಹಾನಿ ಆಗುತ್ತಾ?
    ಗೋವಾ ಸರ್ಕಾರ ಈ ಯೋಜನೆ ಆರಂಭಗೊಂಡರೆ ಪರಿಸರ ಹಾಳಾಗುತ್ತದೆ ಎನ್ನುವ ವಾದ ಮಂಡಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಈ ಯೋಜನೆಯ ಬಗ್ಗೆ ಅಧ್ಯಯನ ನಡೆಸಬೇಕೆಂದು ಕೇಳಿಕೊಂಡಿತ್ತು. ಹೀಗಾಗಿ ಕೇಂದ್ರ ಸರ್ಕಾರದ ಸಲಹೆಯಂತೆ ‘ನೀರಿ’ ಸಂಸ್ಥೆ 1997ರಲ್ಲಿ ಅಧ್ಯಯನ ನಡೆಸಿತು. ತನ್ನ ವರದಿಯಲ್ಲಿ ನೀರಿ, ಈ ಯೋಜನೆಯಿಂದ ಪರಿಸರದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ, ಮುಂಗಾರು ನಂತರದ ನದಿಯ ನೀರಿನ ಹರಿವಿನಲ್ಲೂ ಯಾವುದೇ ವ್ಯತ್ಯಾಸ ಆಗುವುದಿಲ್ಲ ಎಂದು ತಿಳಿಸಿದೆ. ನೀರಿ ಅಲ್ಲದೇ ಕೇಂದ್ರ ಜಲ ಆಯೋಗದ ಅಧ್ಯಯನದಲ್ಲಿ 200 ಟಿಎಂಸಿ ನೀರು ಯಾವುದೇ ನೆರೆ ರಾಜ್ಯಗಳು ಬಳಸದೇ ಅನುಪಯುಕ್ತವಾಗಿ ಅರಬ್ಬಿ ಸಮುದ್ರವನ್ನು ಸೇರುತ್ತದೆ ಎಂದು ತಿಳಿಸಿತ್ತು. ಅಧ್ಯಯನಗಳು ವರದಿ ನೀಡಿದರೂ ಗೋವಾ ಈಗಲೂ ತನ್ನ ಮೊಂಡುವಾದವನ್ನು ಮುಂದುವರೆಸಿಕೊಂಡೆ ಬಂದಿದೆ.

    ನ್ಯಾಯಾಧಿಕರಣ ರಚಿಸಲು ಗೋವಾ ಪಟ್ಟು:
    ಈ ವಿಚಾರ ಇತ್ಯರ್ಥ ಆಗಬೇಕಾದರೆ ಅದು ನ್ಯಾಯಾಧಿಕರಣದಿಂದ ಮಾತ್ರ. ಹೀಗಾಗಿ ನ್ಯಾಯಾಧಿಕರಣ ರಚಿಸಿ ಎಂದು 2002ರಲ್ಲಿ ಕೇಂದ್ರ ಸರ್ಕಾರವನ್ನು ಗೋವಾ ಕೇಳಿಕೊಂಡಿತು. 2006ರಲ್ಲಿ ಕರ್ನಾಟಕ ಆರಂಭಿಸಿರುವ ಕಳಸಾ ಬಂಡೂರಿ ಯೋಜನೆಗೆ ತಡೆ ನೀಡಿ ಮತ್ತು ನ್ಯಾಯಾಧಿಕರಣವನ್ನು ರಚಿಸುವುಂತೆ ಸುಪ್ರೀಂ ಕೋರ್ಟ್‍ನಲ್ಲಿ ಮನವಿ ಮಾಡಿಕೊಂಡಿತು. 2006ರಲ್ಲಿ ಕೇಂದ್ರದ ಪರಿಸರ ಮಂತ್ರಾಲಯ, ಈ ಯೋಜನೆಯನ್ನು ಮಾತುಕತೆ ಮೂಲಕ ಬಗೆ ಹರಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ 1956ರ ಅಂತರ್ ರಾಜ್ಯ ಜಲ ವಿವಾದ ಕಾಯ್ದೆಯ ಮೆರೆಗೆ ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಕರ್ನಾಟಕ ಸರ್ಕಾರಕ್ಕೆ ತಿಳಿಸಿತು. 2010 ಜೂನ್‍ನಲ್ಲಿ ಕರ್ನಾಟಕ, 2010ರ ಅಕ್ಟೋಬರ್ ನಲ್ಲಿ ಮಹಾರಾಷ್ಟ್ರ ಸರ್ಕಾರ ಕೇಂದ್ರಕ್ಕೆ ನ್ಯಾಯಾಧಿಕರಣ ರಚಿಸುವಂತೆ ಮನವಿ ಮಾಡಿತು. ಅಂತಿಮವಾಗಿ ಕೇಂದ್ರ ಸರ್ಕಾರ ನವೆಂಬರ್ 16 ರಂದು 2010ರಂದು ‘ಮಹದಾಯಿ ಜಲ ವಿವಾದ ನ್ಯಾಯಧಿಕರಣ’ವನ್ನು ರಚಿಸಿದ್ದು, ಈಗ ಈ ಯೋಜನೆ ವಿವಾದ ನ್ಯಾಯಾಧಿಕರಣದ ಅಂಗಳದಲ್ಲಿದೆ. ಮೂರು ರಾಜ್ಯ ಸರ್ಕಾರಗಳು ನ್ಯಾಯಾಧಿಕರಣ ನೀಡುವ ತೀರ್ಪಿಗೆ ನಾವು ಬದ್ಧರಾಗಿರುತ್ತೇವೆ ಎನ್ನುವ ಪ್ರಮಾಣಪತ್ರವನ್ನು ಸುಪ್ರೀಂ ಕೋರ್ಟ್‍ಗೆ ಸಲ್ಲಿಸಿವೆ.

    ಪ್ರಸ್ತುತ ಈ ಕಾಮಗಾರಿಗಳ ಸ್ಥಿತಿ ಗತಿ ಹೇಗಿದೆ?
    ಗೋವಾ ಸರ್ಕಾರ ಕಿರಿಕಿರಿ ಮತ್ತು ನಮ್ಮ ರಾಜ್ಯ ಸರ್ಕಾರಗಳ ರಾಜಕೀಯದಿಂದಾಗಿ ಈ ಯೋಜನೆ ಆರಂಭವಾಗಲೇ ಇಲ್ಲ. ಆದರೆ 2006ರಲ್ಲಿ ಬಿಜೆಪಿ- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನೀರಾವರಿ ಮಂತ್ರಿಯಾಗಿದ್ದ ಕೆ.ಎಸ್.ಈಶ್ವರಪ್ಪ ಕಳಸಾ ನಾಲಾ ಯೋಜನೆಗೆ ಚಾಲನೆ ನೀಡಿದರು. ಕುಂಟುತ್ತಾ, ತೆವಳುತ್ತಾ ಕಾಮಗಾರಿ ಆರಂಭವಾಯಿತು. ಈ ಯೋಜನೆಯಲ್ಲಿ ತಾತ್ಕಾಲಿಕ ಬಂಡ್ ನಿರ್ಮಾಣ ಅಗತ್ಯವಾಗಿತ್ತು. ಈ ತಾತ್ಕಾಲಿಕ ಬಂಡ್ ನಿರ್ಮಾಣಕ್ಕೆ ಕೇಂದ್ರ ಜಲ ಮಂಡಳಿ ಒಪ್ಪಿಗೆ ನೀಡಿತು. ಆದರೆ ಸುಮ್ಮನೇ ಕೂರದ ಗೋವಾ ರಾಜ್ಯ ಇದನ್ನ ವಿರೋಧಿಸಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಮೊರೆ ಹೋಗಿ, ಅಲ್ಲಿಂದ ತಡೆಯಾಜ್ಞೆಗೆ ಪ್ರಯತ್ನಿಸಿತು. ಆಗ ಸುಪ್ರೀಂಕೋರ್ಟ್ 6 ತಿಂಗಳ ಕಾಲಾವಧಿಯಲ್ಲಿ ಈ ಬಗ್ಗೆ ದಾಖಲೆಗಳನ್ನು ತಂದು ತೋರಿಸುವಂತೆ ಸೂಚಿಸಿತು. ಹೀಗೆ ಮೂರು ಬಾರಿ ವಿನಾಕಾರಣ ಕ್ಯಾತೆ ತೆಗೆದ ಗೋವಾ ಸರ್ಕಾರ ಒಂದೂವರೆ ವರ್ಷ ಹಾಳು ಮಾಡಿತು. ಮೂರು ಬಾರಿ 6 ತಿಂಗಳ ಕಾಲಾವಕಾಶ ನೀಡಿದ ಸುಪ್ರೀಂ ಕೋರ್ಟ್, ಕೊನೆಗೆ ಛೀಮಾರಿ ಹಾಕಿ ಕೊನೆಗೆ ಗೋವಾದ ಅರ್ಜಿಯನ್ನು ವಜಾಗೊಳಿಸಿತು. ಆಗಲೇ ರಾಜ್ಯ ಸರಕಾರ ಈ ಕಾಮಗಾರಿ ಬಗ್ಗೆ ಗಂಭೀರವಾಗಿ ಚಿಂತಿಸಿ, ಶೀಘ್ರವಾಗಿ ಪೂರ್ಣಗೊಳಿಸಲು ಯೋಚಿಸಬಹುದಿತ್ತು. ಆದರೆ ರಾಜಕಾರಣದಿಂದಾಗಿ ಗುತ್ತಿಗೆದಾರರನ್ನು ಬದಲಾಯಿಸುವುದು ಮತ್ತೆ ಬೇರೆಯವರಿಗೆ ನೀಡಿದ ಕಾರಣ ಕಾಮಗಾರಿ ವಿಳಂಬವಾಯಿತು. ಪ್ರಸ್ತುತ ಕಳಸಾ ನಾಲದ 5.5 ಕಿ.ಮೀ ಉದ್ದದ ಕಾಮಗಾರಿಯಲ್ಲಿ ಶೇ.95 ಭಾಗ ಪೂರ್ಣಗೊಂಡಿದೆ. ಬಂಡೂರಿ ನಾಲಾ ಯೋಜನೆಯ ಕಾಮಗಾರಿಗೆ ಚಾಲನೆಯೇ ಸಿಕ್ಕಿಲ್ಲ.

    ಪ್ರಸ್ತುತ ಕೇಂದ್ರ ಸರ್ಕಾರದ ನಿಲುವು ಏನಿದೆ?
    ಪ್ರಧಾನಿ ಮಧ್ಯಸ್ಥಿಕೆ ವಹಿಸಿದ್ದಲ್ಲಿ ಸಮಸ್ಯೆ ಪರಿಹಾರವಾಗಬಹುದು ಎನ್ನುವ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ವಪಕ್ಷ ನಿಯೋಗ 2015 ಆಗಸ್ಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿತ್ತು. ಈ ವೇಳೆ ಪ್ರಧಾನಿ, “ಪ್ರಸ್ತುತ ವಿವಾದ ನ್ಯಾಯಾಧಿಕರಣದ ಮುಂದೆ ಇದೆ. ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕದ ರಾಜ್ಯದ ಮೂವರು ಮುಖ್ಯಮಂತ್ರಿಗಳು ಸೇರಿ ಮೊದಲು ಮಾತನಾಡಿಕೊಂಡು ಬನ್ನಿ. ಅಷ್ಟೇ ಅಲ್ಲದೇ ಈ ರಾಜ್ಯಗಳ ವಿರೋಧ ಪಕ್ಷಗಳನ್ನು ಮನವೊಲಿಸಿ” ಎಂಬುದಾಗಿ ನಿಯೋಗಕ್ಕೆ ಸೂಚಿಸಿದ್ದಾರೆ ಎಂದು ಕರ್ನಾಟಕದ ಬಿಜೆಪಿ ನಾಯಕರು ತಿಳಿಸಿದ್ದರು.

    2017ರ ಡಿಸೆಂಬರ್ ನಲ್ಲಿ ಏನಾಯ್ತು?
    2018 ವಿಧಾನಸಭೆ ಚುನಾವಣೆ ನಡೆಯುವ ಕಾರಣ ಮಹದಾಯಿ ವಿಚಾರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ರಾಜ್ಯದ ಬಿಜೆಪಿ ನಾಯಕರು ದೆಹಲಿಯಲ್ಲಿ ಅಮಿತ್ ಶಾ ನೇತೃತ್ವದಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಜೊತೆ ಸಂಧಾನ ಸಭೆ ನಡೆಸಿದರು. ಈ ಸಂಧಾನ ಸಭೆಯ ಬಳಿಕ ಮಾನವೀಯತೆ ದೃಷ್ಟಿಯಿಂದ ನೀರು ಬಿಡಲು ಒಪ್ಪಿಗೆ ನೀಡುತ್ತೇನೆ ಎಂದು ಪರಿಕ್ಕರ್ ಬಿಎಸ್ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದರು. ಈ ಪತ್ರವನ್ನು ಬಿಎಸ್‍ವೈ ಹುಬ್ಬಳ್ಳಿಯಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ಓದಿದರು. ಆದರೆ ಮಹದಾಯಿ ಹೋರಾಟಗಾರರು ಈ ರೀತಿಯ ಪತ್ರ ಬರೆಯುದರಿಂದ ವಿವಾದ ಪರಿಹಾರವಾಗುವುದಿಲ್ಲ. ಕೂಡಲೇ ವಿವಾದವನ್ನು ಪರಿಹರಿಸುವಂತೆ ಆಗ್ರಹಿಸಿ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಪ್ರತಿಭಟಿಸಿದರು. ಅಷ್ಟೇ ಅಲ್ಲದೇ ಡಿಸೆಂಬರ್ 27 ರಂದು ಉತ್ತರ ಕರ್ನಾಟಕ ಬಂದ್ ಗೆ ಕರೆ ನೀಡಿದರು.

    ಬಿಜೆಪಿ ಆರೋಪ ಏನು?
    ಗೋವಾದಲ್ಲಿರುವ ಬಿಜೆಪಿ ಮಹದಾಯಿ ನೀರನ್ನು ಹರಿಸಲು ಒಪ್ಪಿಗೆ ನೀಡಿದೆ. ಆದರೆ ಅಲ್ಲಿನ ಕಾಂಗ್ರೆಸ್ ಒಪ್ಪಿಗೆ ನೀಡಿಲ್ಲ. 2007ರಲ್ಲಿ ಚುನಾವಣಾ ಭಾಷಣದ ವೇಳೆ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಅವರು ಮಹದಾಯಿ ನೀರನ್ನು ಕರ್ನಾಟಕಕ್ಕೆ ಹರಿಸಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ನಮ್ಮ ವಿರುದ್ಧ ಪ್ರತಿಭಟಿಸುವ ಬದಲು ಕಾಂಗ್ರೆಸ್ ವಿರುದ್ಧ ಪ್ರತಿಭಟಿಸಿ. ನಾವು ನೀರು ತರಲು ಸಿದ್ಧರಿದ್ದೇವೆ ಎಂದು ಹೇಳಿದ್ದರು. ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ 6 ತಿಂಗಳ ಒಳಗಡೆ ಈ ಸಮಸ್ಯೆಯನ್ನು ಬಗೆ ಹರಿಸುತ್ತೇವೆ ಎಂದು ಭರವಸೆ ನೀಡಿದ್ದರು.

    ಕಾಂಗ್ರೆಸ್ ಆರೋಪ ಏನು?
    ಈಗ ಕೇಂದ್ರದಲ್ಲಿ ಮತ್ತು ಗೋವಾದಲ್ಲಿ ಬಿಜೆಪಿ ಸರ್ಕಾರವಿದೆ. ಹೀಗಾಗಿ ರಾಜ್ಯದ ಬಿಜೆಪಿ ನಾಯಕರು ಮನಸ್ಸು ಮಾಡಿದರೆ ನೀರು ತರುವುದು ಸುಲಭ. ಪ್ರಧಾನಿ ಮೋದಿಗೆ ಒತ್ತಡ ಹಾಕಿದರೆ ಮಹದಾಯಿ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಆದರೆ ಮೋದಿ ಮಹದಾಯಿ ವಿಚಾರದಲ್ಲಿ ಮೌನಕ್ಕೆ ಶರಣಾಗಿದ್ದಾರೆ ಎಂದು ಆರೋಪಿಸುತ್ತಿದೆ. ಅಷ್ಟೇ ಅಲ್ಲದೇ ಗೋವಾದ  ಸರ್ಕಾರಕ್ಕೆ ನಾವು ಪತ್ರ ಬರೆದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಯಡಿಯೂರಪ್ಪನವರಿಗೆ ಪತ್ರ ಬರೆಯುವ ಮೂಲಕ ಬಿಜೆಪಿ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದೆ.

    –  ಜಾವೇದ್ ಅಧೋನಿ,  ಅಶ್ವಥ್ ಸಂಪಾಜೆ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

    https://www.youtube.com/watch?v=Pen28gCcuho


  • ಬಡವರ ಊಟದ ಹೆಸರಲ್ಲಿ ಸಾರ್ವಜನಿಕರ ಹಣ ಲೂಟಿ- ಬಯಲಾಯ್ತು ಇಂದಿರಾ ಕ್ಯಾಂಟೀನ್ ಕಳ್ಳ ಬಿಲ್!

    ಬಡವರ ಊಟದ ಹೆಸರಲ್ಲಿ ಸಾರ್ವಜನಿಕರ ಹಣ ಲೂಟಿ- ಬಯಲಾಯ್ತು ಇಂದಿರಾ ಕ್ಯಾಂಟೀನ್ ಕಳ್ಳ ಬಿಲ್!

    ಬೆಂಗಳೂರು: ಕಡುಬಡವರಿಗೆ ಕಡಿಮೆ ದರದಲ್ಲಿ ಊಟ ನೀಡುವ ಉದ್ದೇಶದಿಂದ ಸಿದ್ದರಾಮಯ್ಯ ಸರ್ಕಾರ ಜಾರಿ ಮಾಡಿದ್ದ ಮಹತ್ವದ ಇಂದಿರಾ ಕ್ಯಾಂಟೀನ್ ನಲ್ಲಿ ಭ್ರಷ್ಟಾಚಾರ ನಡೆದಿದ್ದು, ಕಳ್ಳ ಬಿಲ್ ಲೆಕ್ಕ ನೀಡಿ ಅಪಾರ ಪ್ರಮಾಣದ ಹಣ ಲೂಟಿ ಮಾಡಿರುವ ಅಂಶ ಬೆಳಕಿಗೆ ಬಂದಿದೆ.

    ಹೌದು, ಜನವರಿ 25 ರಂದು ಕಳಾಸ ಬಂಡೂರಿ ಹೋರಾಟಕ್ಕೆ ಬೆಂಬಲಿಸಿ ಬೆಂಗಳೂರು ಬಂದ್ ಮಾಡಲಾಗಿತ್ತು. ಅಂದು ಯಾವುದೇ ಇಂದಿರಾ ಕ್ಯಾಂಟಿನ್ ಕಾರ್ಯನಿರ್ವಹಿಸಿರಲಿಲ್ಲ. ಆದರೆ ಅಂದು ಸಹ ಕ್ಯಾಂಟಿನ್ ನಡೆದಿದ್ದಾಗಿ ಬಿಲ್ ಸಲ್ಲಿಸಲಾಗಿದೆ.

    ಸದ್ಯ ಕ್ಯಾಂಟಿನ್ ನಿರ್ವಹಣೆ ಕುರಿತು ಬಿಬಿಎಂಪಿ ನೀಡಿರುವ ಪಟ್ಟಿಯಲ್ಲಿ ಕಳಾಸ ಬಂಡೂರಿ ಹೋರಾಟದ ಬಂದ್ ದಿನವೂ 172 ಇಂದಿರಾ ಕ್ಯಾಂಟೀನ್ ಕಾರ್ಯನಿರ್ವಹಿಸಿದೆ. ಅಲ್ಲದೇ 1,97,575 ಮಂದಿ ಊಟ ಮಾಡಿದ್ದಾಗಿ ಮಾಹಿತಿ ನೀಡಿದೆ. ಇದರಿಂದ ಒಟ್ಟಾರೆ 63,22,400 ರೂ. ಸುಳ್ಳು ಲೆಕ್ಕದ ಬಿಲ್ ಮಾಡಿರುವ ವಿಚಾರ ದಾಖಲೆ ಸಮೇತ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಗುತ್ತಿಗೆ ಪಡೆದ ಸಂಸ್ಥೆ ಕಳುಹಿಸಿದ ಬಿಲ್ ಅನ್ನು ಪರಿಶೀಲಿಸದೇ ಬಿಬಿಎಂಪಿ ಹಣವನ್ನು ಪಾವತಿ ಮಾಡಿದೆ. ಕ್ಯಾಂಟಿನ್ ನಡೆಯದೇ ಇದ್ದರೂ ಬಿಲ್ ಪಾವತಿ ಹೇಗಾಯ್ತು ಎನ್ನುವುದಕ್ಕೆ ಬಿಬಿಎಂಪಿ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.