Tag: Kalakuragi

  • ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೇಳುವುದು ಸರಿಯಲ್ಲ: ಮಲ್ಲಿಕಾರ್ಜುನ ಖರ್ಗೆ

    ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೇಳುವುದು ಸರಿಯಲ್ಲ: ಮಲ್ಲಿಕಾರ್ಜುನ ಖರ್ಗೆ

    ಕಲಬುರಗಿ: ಬಹಳ ಕಷ್ಟಪಟ್ಟು ದೇಶ ಮತ್ತು ಭಾಷಾವಾರು ಪ್ರಾಂತ ರಚನೆಯಾಗಿದೆ. ಹೀಗಾಗಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೇಳುವುದು ಸರಿಯಲ್ಲ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

    ಜಿಲ್ಲೆಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿಯಲ್ಲಿ ದಕ್ಷಿಣ ಕರ್ನಾಟಕ ಎ ಕ್ಲಾಸ್, ಬಾಂಬೆ ಕರ್ನಾಟಕ ಬಿ ಕ್ಲಾಸ್, ಹೈದ್ರಾಬಾದ್ ಕರ್ನಾಟಕ ಸಿ ಕ್ಲಾಸ್ ನಲ್ಲಿದೆ. ನಿಜಾಮರ ಆಳ್ವಿಕೆ ಈ ಭಾಗದಲ್ಲಿ ಇದ್ದಿದ್ದರಿಂದ ಹೈದರಾಬಾದ್ ಕರ್ನಾಟಕ ಭಾಗ ಅಷ್ಟೊಂದು ಅಭಿವೃದ್ಧಿ ಆಗಲಿಲ್ಲ. ಆದ್ರೆ ಇದೀಗ 371 ಜೆ ವಿಧಿಯಡಿ ವಿಶೇಷ ಸ್ಥಾನಮಾನ ಸಿಕ್ಕ ನಂತರ ಅಭಿವೃದ್ಧಿ ಕೆಲಸಗಳು ಹೆಚ್ಚಾಗಿವೆ ಎಂದು ತಿಳಿಸಿದರು.

    ಕನ್ನಡ ಮಾತನಾಡುವಂತಹ ಜನ ಒಂದೇ ಕಡೆ ಇರಬೇಕು ಎನ್ನುವ ದೃಷ್ಠಿಯಿಂದ ಅಖಂಡ ಕರ್ನಾಟಕದ ಒಂದು ಕನಸನ್ನು ನನಸು ಮಾಡ್ಕೊಂಡು ನಾವು ಎಲ್ಲರೂ ಇವತ್ತು ಒಂದಾಗಿದ್ದೇವೆ. ಇಂತಹ ಸಂದರ್ಭದಲ್ಲಿ ಅಪಸ್ವರ ತೆಗೆದರೆ ಯಾರಿಗೂ ಒಳ್ಳೆಯದು ಆಗುವುದಿಲ್ಲ ಎಂದು ಎಚ್ಚರಿಸಿದರು.

    ಇನ್ನು ಅಭಿವೃದ್ಧಿಯಲ್ಲಿ ಅನ್ಯಾಯವಾದ್ರೆ ಮುಖ್ಯಮಂತ್ರಿಯನ್ನು ಕೇಳಬೇಕು. ಆದ್ರೆ ರಾಜ್ಯವನ್ನು ಇಬ್ಭಾಗ ಮಾಡುವ ಕೆಲಸವನ್ನು ಯಾರು ಮಾಡಬಾರದು. ನಮ್ಮ ಹಿರಿಯರು ಸಾಕಷ್ಟು ಕಷ್ಟಪಟ್ಟು ರಾಜ್ಯವನ್ನು ಒಗ್ಗೂಡಿಸಿದ್ದಾರೆ, ಅದಕ್ಕಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ. ಈಗ ನಾವು ಮತ್ತೆ ಬೇರೆಯಾಗುತ್ತೇವೆ ಎಂದರೆ ಅದು ಸರಿಯಲ್ಲ. ಹಾಗಾಗಿ ಸಮಸ್ಯೆಯನ್ನು ಮಾತಾಡಿಕೊಂಡು ಸರಿಪಡಿಸಿಕೊಳ್ಳಬೇಕು ಎಂದು ಖರ್ಗೆ ಸೂಚಿಸಿದರು.

    ಲೋಕಸಭಾ ಚುನಾವಣೆ ಬಗ್ಗೆ ಮಾತನಾಡಿದ ಅವರು ನಾನು ಕಾಂಗ್ರೆಸ್‍ನವನಾದ ಕಾರಣ ರಾಹುಲ್ ಗಾಂಧಿಯವರೇ ಪ್ರಧಾನ ಮಂತ್ರಿಯಾಗಬೇಕು. ಪ್ರತಿಯೊಬ್ಬರಿಗೂ ಅವರವರ ಪಕ್ಷದ ನಿಯಮ, ಕಾನೂನುಗಳಿರುತ್ತವೆ. ರಾಷ್ಟ್ರೀಯ ಪಕ್ಷವಾಗಿ ಬಿಜೆಪಿಯ ಯೋಜನೆಗಳಿಗೆ, ತತ್ವಗಳಿಗೆ ವಿರುದ್ಧವಾಗಿ ನಿಲ್ಲುವಂತಹ ಪಕ್ಷ ಕಾಂಗ್ರೆಸ್ ಒಂದೇ. ಅಷ್ಟೇ ಅಲ್ಲದೇ ಅಭಿವೃದ್ಧಿ ಮಾಡುವ ಹಾಗೂ ಎಲ್ಲರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುವ ಪಕ್ಷ ಕಾಂಗ್ರೆಸ್. ಹಾಗಾಗಿ ರಾಹುಲ್ ಗಾಂಧಿಯವರೇ ಪ್ರಧಾನಿಯಾದರೇ ಒಳ್ಳೆಯದು ಎಂದು ತಿಳಿಸಿದರು.

  • ಮಲ್ಲಿಕಾರ್ಜುನ ಖರ್ಗೆ ಎರಡನೇ ಅಂಬೇಡ್ಕರ್: ಬಾಬುರಾವ್ ಚಿಂಚನಸೂರ್

    ಮಲ್ಲಿಕಾರ್ಜುನ ಖರ್ಗೆ ಎರಡನೇ ಅಂಬೇಡ್ಕರ್: ಬಾಬುರಾವ್ ಚಿಂಚನಸೂರ್

    ಕಲಬುರಗಿ: ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ನಮಗೆ ಎರಡನೇ ಅಂಬೇಡ್ಕರ್ ಇದ್ದಂತೆ ಎಂದು ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಾಬುರಾವ್ ಚಿಂಚನಸೂರ್ ಹೇಳಿದ್ದಾರೆ.

    ಕಾಂಗ್ರೆಸ್ ಪಕ್ಷ ನನಗೆ ತಂದೆ ಇದ್ದಂತೆ. ನಾನು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ನನಗೆ ಗೆಲ್ಲಿಸಿ ಅಧಿಕಾರ ನೀಡಿದೆ. ನನ್ನ ಮೈಯಲ್ಲಿ ಹರಿಯುವ ಪ್ರತಿಕಣದಲ್ಲಿ ಪಕ್ಷದ ರಕ್ತವಿದೆ. ಆದ್ರೆ ಮಾಧ್ಯಮಗಳಲ್ಲಿ ಮಾತ್ರ ಪಕ್ಷ ಬಿಡುವ ಸುದ್ದಿ ಹರಿದಾಡುತ್ತಿದೆ ಎಂದು ತಿಳಿಸಿದರು.

    ನನ್ನ ಹಾಗೂ ಪ್ರಿಯಾಂಕ ಖರ್ಗೆ ಮಧ್ಯೆ ಅಭಿವೃದ್ಧಿ ವಿಷಯದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಇನ್ನು ಮುಂದಿನ ಬಾರಿಯೂ ಸಹ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಶತ ಸಿದ್ಧ. ಅದೇ ರೀತಿ ನಾನೇ ಮಂತ್ರಿಯಾಗುವುದು ಖಚಿತ ಎಂದು ಚಿಂಚನಸೂರ್ ಹೇಳಿದರು.