Tag: Kalaburugi

  • ಕೆಇಎ ಪ್ರಶ್ನೆಪತ್ರಿಕೆ ಲೀಕ್ ಮಾಡಲು 40 ಲಕ್ಷ ನೀಡಿದ ಆರೋಪ – ಸರ್ಕಾರಿ ಕೆಲಸಕ್ಕೆ ಸೇರಿ ತಿಂಗಳಲ್ಲೇ ಹಾಸ್ಟೆಲ್ ವಾರ್ಡನ್ ಜೈಲುಪಾಲು

    ಕೆಇಎ ಪ್ರಶ್ನೆಪತ್ರಿಕೆ ಲೀಕ್ ಮಾಡಲು 40 ಲಕ್ಷ ನೀಡಿದ ಆರೋಪ – ಸರ್ಕಾರಿ ಕೆಲಸಕ್ಕೆ ಸೇರಿ ತಿಂಗಳಲ್ಲೇ ಹಾಸ್ಟೆಲ್ ವಾರ್ಡನ್ ಜೈಲುಪಾಲು

    ಕಲಬುರಗಿ: ಕೆಇಎ ಪರೀಕ್ಷಾ ಅಕ್ರಮ (KEA Exam Paper Leak Case) ಬಗೆದಷ್ಟು ಬಯಲಾಗುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ ಹಾಗೂ ಪರೀಕ್ಷಾ ಮೇಲ್ವಿಚಾರಕರಿಗೆ ಹಣ ನೀಡಿದ ಆರೋಪದಡಿ ಹಾಸ್ಟೆಲ್ ವಾರ್ಡನ್ ಒಬ್ಬ ಕೆಲಸಕ್ಕೆ ಸೇರಿ ಒಂದೇ ತಿಂಗಳಲ್ಲಿ ಜೈಲುಪಾಲಾಗಿದ್ದಾನೆ.

    ಸಮಾಜ ಕಲ್ಯಾಣ ಇಲಾಖೆಯ ಚಿಕ್ಕಬಳ್ಳಾಪುರದ (Chikkaballapur) ವೃತ್ತಿಪರ ಹಾಸ್ಟೆಲ್ ವಾರ್ಡನ್ ಬಸವರಾಜ್ ಯಾಳವಾರ್ ಬಂಧಿತ ಆರೋಪಿಯಾಗಿದ್ದಾನೆ. ಈತ ಪ್ರಶ್ನೆ ಪತ್ರಿಕೆ ಲೀಕ್ ಮಾಡಲು ಪ್ರಿನ್ಸಿಪಾಲ್‍ಗೆ 40 ಲಕ್ಷ ರೂ. ಹಣ ನೀಡಿದ್ದ ಎಂದು ಸಿಐಡಿ (CID) ತನಿಖೆ ವೇಳೆ ತಿಳಿದು ಬಂದಿದೆ. ಈತನ ವಿರುದ್ಧ ಕಲಬುರಗಿಯ (Kalaburugi) ಅಶೋಕ್ ನಗರ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ಈತ ತಲೆ ಮರೆಸಿಕೊಂಡಿದ್ದ. ಇದೀಗ ಸಿಐಡಿ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಮದುವೆ ಪ್ರಸ್ತಾಪ ನಿರಾಕರಿಸಿದ್ದಕ್ಕೆ ಟಿವಿ ನಿರೂಪಕನನ್ನು ಅಪಹರಿಸಿ ಪೊಲೀಸರ ಅತಿಥಿಯಾದ ಮಹಿಳಾ ಉದ್ಯಮಿ

    ಆರೋಪಿ ಬಸವರಾಜ್ ಬಂಧನಕ್ಕೆ ಆತ ಓದಿದ ಪ್ರದೇಶಗಳಲ್ಲಿ, ಕಲಬುರಗಿ ವಿವಿ, ಸಿಂದಗಿ ಹಾಗೂ ಬೆಂಗಳೂರಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದರು. ಕೊನೆಗೆ ಚಿಕ್ಕಬಳ್ಳಾಪುರದಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ವಾರ್ಡನ್ ಆಗಿದ್ದಾನೆ ಎಂಬ ಸುಳಿವಿನ ಮೇಲೆ ಬಂಧಿಸಲಾಗಿದೆ. ಪ್ರಕರಣದಲ್ಲಿ ಬಸವರಾಜ್ 15ನೇ ಆರೋಪಿಯಾಗಿದ್ದಾನೆ. ಈತನ ವಿರುದ್ಧ ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

    ಇಂಗ್ಲಿಷ್‍ನಲ್ಲಿ ಎಂ.ಎ, ಬಿ.ಇಡಿ ಪದವೀಧರನಾಗಿರುವ ಬಸವರಾಜ್ ಯಾಳವಾರ್ ಜನವರಿ 19ರಂದು ವಾರ್ಡನ್ ಆಗಿ ಕೆಲಸಕ್ಕೆ ಸೇರಿದ್ದ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಜೋಕಾಲಿ ಆಡುವಾಗ ಹಗ್ಗಕ್ಕೆ ಕುತ್ತಿಗೆ ಸಿಲುಕಿ ಬಾಲಕ ದರ್ಮರಣ

  • ಮಾತಾ ಮಾಣಿಕೇಶ್ವರಿ ಅಂತಿಮ ದರ್ಶನಕ್ಕೆ ಸಿದ್ಧತೆ- ತಾವೇ ನಿರ್ಮಿಸಿಕೊಂಡಿರೋ ಸಮಾಧಿಯಲ್ಲಿ ಅಂತ್ಯಕ್ರಿಯೆ

    ಮಾತಾ ಮಾಣಿಕೇಶ್ವರಿ ಅಂತಿಮ ದರ್ಶನಕ್ಕೆ ಸಿದ್ಧತೆ- ತಾವೇ ನಿರ್ಮಿಸಿಕೊಂಡಿರೋ ಸಮಾಧಿಯಲ್ಲಿ ಅಂತ್ಯಕ್ರಿಯೆ

    ಕಲಬುರಗಿ: ಲಿಂಗೈಕ್ಯರಾದ ಯಾನಾಗುಂದಿಯ ಮಾತಾ ಮಾಣಿಕೇಶ್ವರಿ ಅವರ ಅಂತಿಮ ದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜೊತೆಗೆ ಅವರೇ ನಿರ್ಮಿಸಿಕೊಂಡಿರುವ ಸಮಾಧಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

    ಅನಾರೋಗ್ಯದಿಂದ ಶನಿವಾರ ಲಿಂಗೈಕ್ಯರಾದ ಮಾತಾ ಮಾಣಿಕೇಶ್ವರಿ ಅವರನ್ನು ನೋಡಲು ತಡರಾತ್ರಿಯಿಂದಲೇ ಸಾವಿರಾರು ಭಕ್ತರು ಮಾಣಿಕ್ಯಗಿರಿ ಬೆಟ್ಟಕ್ಕೆ ಬರುತ್ತಿದ್ದಾರೆ. ಆಂಧ್ರ ಪ್ರದೇಶ ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಿದ್ದು, ಮಠದ ಮುಖ್ಯ ದ್ವಾರದ ಆವರಣದಲ್ಲಿ ವೇದಿಕೆಗೆ ಸಿದ್ಧತೆ ಮಾಡಿ 10 ಗಂಟೆಯ ನಂತರ ಸಾರ್ವಜನಿಕ ದರ್ಶನಕ್ಕೆ ಚಿಂತನೆ ಮಾಡಲಾಗಿದೆ.

    ಮಾತಾ ಮಾಣಿಕೇಶ್ವರಿಯವರ ದರ್ಶನಕ್ಕಾಗಿ ಲಕ್ಷಾಂತರ ಭಕ್ತರು ಹರಿದು ಬರುವ ನೀರಿಕ್ಷೆ ಇದ್ದು, ಜಿಲ್ಲಾಡಳಿತ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಿಂದಲು ಭಕ್ತರು ಆಗಮಿಸಲಿದ್ದು, ಎರಡು ಸಾವಿರ ಪೊಲೀಸರು ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಮಠದ ಅವರಣದಲ್ಲಿ ಹಾಕಿರುವ ವೇದಿಕೆ ಮುಂಭಾಗ ಬ್ಯಾರಿಕೇಡ್ ಅಳವಡಿಸಿ ಸರತಿ ಸಾಲಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

    ಬೆಳಗ್ಗೆ ಐದು ಗಂಟೆಗೆ ಅಮ್ಮನಿಗೆ ಮಠದ ಗುಹೆಯಲ್ಲಿ ಅರ್ಚಕರು ಹಾಲಿನಿಂದ ಅಭಿಷೇಕ ಮಾಡಿದ್ದಾರೆ. ವೀರಶೈವ ಲಿಂಗಾಯತ ಧರ್ಮದ ಪ್ರಕಾರ ಅಂತಿಮ ವಿಧಿವಿಧಾನ ನಡೆಯಲಿದ್ದು, ಮಠದ ಆವರಣದಲ್ಲಿಯೇ ಇರುವ ಶಿವಲಿಂಗದ ಆಕಾರದ ಸಮಾಧಿಯಲ್ಲಿ ಅವರನ್ನು ಲಿಂಗೈಕ್ಯ ಮಾಡಲಾಗುತ್ತದೆ. ಈ ಸಮಾಧಿಯನ್ನು ಸ್ವತಃ ಮಾತಾ ಮಾಣಿಕೇಶ್ವರಿ ಅವರೇ ನಿರ್ಮಾಣ ಮಾಡಿಕೊಂಡಿದ್ದರು.

    ಹೈದರಾಬಾದ್ ಕರ್ನಾಟಕ ಭಾಗದ ನಡೆದಾಡುವ ದೇವರು, ಪೀಠಾಧಿಪತಿ ಮಾತಾ ಮಾಣಿಕೇಶ್ವರಿ ಅಮ್ಮನವರು ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಜಿಲ್ಲೆಯ ಸೇಡಂ ತಾಲೂಕಿನ ಯಾನಾಗುಂದಿಯ ಮಠದಲ್ಲಿ ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಶನಿವಾರ ರಾತ್ರಿ ಲಿಂಗೈಕ್ಯರಾಗಿದ್ದರು.

  • ದರ್ಗಾ ಜಾತ್ರೆಗಾಗಿ ರಸ್ತೆ ನಿರ್ಮಾಣ ಮಾಡಿ ಐಕ್ಯತೆ ಮೆರೆದ ಗ್ರಾಮಸ್ಥರು

    ದರ್ಗಾ ಜಾತ್ರೆಗಾಗಿ ರಸ್ತೆ ನಿರ್ಮಾಣ ಮಾಡಿ ಐಕ್ಯತೆ ಮೆರೆದ ಗ್ರಾಮಸ್ಥರು

    ಕಲಬುರುಗಿ: ಚುನಾವಣೆ ಹತ್ತಿರ ಬರುತ್ತಿದ್ದಂತೆ ಜಾತಿ ಜಾತಿಗಳ ಮಧ್ಯೆ ವೈಮನಸ್ಸು ಮೂಡುವುದು ಸಾಮಾನ್ಯ, ಆದರೆ ಜಿಲ್ಲೆಯ ತರಕಸಪೇಟ ಗ್ರಾಮದ ದರ್ಗಾ ಜಾತ್ರೆಗಾಗಿ ಹಿಂದು-ಮುಸ್ಲಿಮರು ಐಕ್ಯತೆ ಮೆರೆದಿದ್ದು, ತಾವೇ ರಸ್ತೆ ನಿರ್ಮಿಸಿಕೊಂಡು, ಜನಪ್ರತಿನಿಧಿಗಳಿಗೆ ಪಾಠ ಕಲಿಸಿದ್ದಾರೆ.

    ಜಿಲ್ಲೆ ಚಿತ್ತಾಪುರ ತಾಲೂಕಿನ ತರಕಸಪೇಟದ ಈ ಗ್ರಾಮದ ಹೊರವಲಯದ ಶಾಪೀರ್ ವಲಿ-ಗೈಪೀರ್ ವಲಿ ದರ್ಗಾದ ಬೃಹತ್ ಜಾತ್ರೆ ನಡೆಯುತ್ತದೆ. ಜಾತ್ರೆಯಲ್ಲಿ ಹಿಂದು-ಮುಸ್ಲಿಮರು ಒಟ್ಟಿಗೆ ಸೇರುತ್ತಾರೆ. ಆದರೆ ಗ್ರಾಮದಿಂದ ಒಂದೂವರೆ ಕಿ.ಮೀ. ದೂರದ ದರ್ಗಾಕ್ಕೆ ರಸ್ತೆ ನಿರ್ಮಾಣವಾಗಿಲ್ಲ. ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಇದರಿಂದ ರೋಸಿಹೋದ ತರಕಸಪೇಟದ ಗ್ರಾಮಸ್ಥರು ತಮ್ಮಲ್ಲೇ ಹಣ ಸಂಗ್ರಹಿಸಿ ಕಚ್ಚಾ ರಸ್ತೆ ನಿರ್ಮಿಸಿಕೊಂಡಿದ್ದಾರೆ.

    ಗ್ರಾಮದ ಜನ ನಿರ್ಮಿಸಿರುವ ರಸ್ತೆ ಚಿಕ್ಕದಾದರೂ ಇವರ ಭಾವೈಕತೆಯ ಮನಸ್ಸು ಮಾತ್ರ ದೊಡ್ಡದು. ಈ ಕಚ್ಚಾ ರಸ್ತೆಗೆ ಮುಂಬರುವ ದಿನಗಳಲ್ಲಿ ಡಾಂಬರೀಕರಣ ಮಾಡಲು ಸಹ ಗ್ರಾಮಸ್ಥರೇ ಸಿದ್ಧತೆ ಕೈಗೊಂಡಿದ್ದಾರೆ.

  • ಕಲಬುರಗಿಯಲ್ಲಿ ಜೀ ಕನ್ನಡದ ಕಾಮಿಡಿ ಕಿಲಾಡಿಗಳು-2, ಸರಿಗಮಪ ಆಡಿಷನ್

    ಕಲಬುರಗಿಯಲ್ಲಿ ಜೀ ಕನ್ನಡದ ಕಾಮಿಡಿ ಕಿಲಾಡಿಗಳು-2, ಸರಿಗಮಪ ಆಡಿಷನ್

    ಕಲಬುರುಗಿ: ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಸೀಜನ್ ಟು ಮತ್ತು ಸರಿಗಮಪ ಲಿಟಲ್ ಚಾಂಪ್ಸ್ ಸೀಜನ್ 14ರ ಆಡಿಷನ್ ಕಲಬುರುಗಿಯಲ್ಲಿ ನಡೆಯಿತು. ನೂರಾರು ಮಕ್ಕಳು ಆಡಿಷನ್‍ನಲ್ಲಿ ಪಾಲ್ಗೊಂಡರು.

    ಮೇಹತಾ ಶಾಲೆಯಲ್ಲಿ ಬೆಳಗ್ಗೆ ಆರಂಭವಾದ ಆಡಿಷನ್ ಸಂಜೆಯವರೆಗೆ ಕೂಡಾ ಮುಂದುವರೆಯಿತು. 13 ಸೀಜನ್‍ಗಳನ್ನು ಯಶಸ್ವಿಯಾಗಿ ಪೂರೈಸಿರುವ ಸರಿಗಮಪ ರಾಜ್ಯಾದ್ಯಂತ ಬಹಳ ಪ್ರಸಿದ್ಧಿ ಪಡೆದಿದೆ.

    ಎಲ್ಲಾ ಮೂವತ್ತು ಜಿಲ್ಲೆಗಳಲ್ಲಿ ಮತ್ತು ಮಹಾ ನಗರಗಳಲ್ಲಿ ಆಡಿಷನ್ ನಡೆಯುತ್ತಿದ್ದು ಪ್ರತಿಭೆಗಳ ಹುಡುಕಾಟ ನಡೆಯುತ್ತಿದೆ. ಜೀ ವಾಹಿನಿಯ ಸುಮಾರು 50ಕ್ಕಿಂತಲೂ ಹೆಚ್ಚು ಸಿಬ್ಬಂದಿ ಆಡಿಷನ್‍ನಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಕಲಬುರಗಿ ನಗರದ ಸೇರಿದಂತೆ ಜಿಲ್ಲೆಯ ಹಲವೆಡೆಯಿಂದ 300ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು.

    ಹಾಸ್ಯದ ಬಗ್ಗೆ ಆಸಕ್ತಿಯಿರುವವರು, ಸಂಗೀತ ಕಲಿತ ಮಕ್ಕಳು ಖುಷಿ ಖುಷಿಯಾಗಿ ಆಡಿಷನ್‍ನಲ್ಲಿ ಪಾಲ್ಗೊಂಡರು. ಇನ್ನು ತಮ್ಮ ಮಕ್ಕಳನ್ನು ಈ ಆಡಿಷನ್‍ನಲ್ಲಿ ಭಾಗವಹಿಸಲು ಅವರ ಪೋಷಕರು ಅಷ್ಟೇ ಕಾತುರದಿಂದ ಕಾಯುತ್ತಿರುವುದು ಸರ್ವೇ ಸಾಮಾನ್ಯವಾಗಿತ್ತು.

  • ರಾಜ್ಯದಲ್ಲಿ ಮುಂದುವರಿದ ಮಳೆಯ ಆರ್ಭಟ – ಬಳ್ಳಾರಿಯಲ್ಲಿ ಮರವೇರಿ ಕುಳಿತಿದ್ದ ಅಂಗವಿಕಲ ರೈತನ ರಕ್ಷಣೆ

    ರಾಜ್ಯದಲ್ಲಿ ಮುಂದುವರಿದ ಮಳೆಯ ಆರ್ಭಟ – ಬಳ್ಳಾರಿಯಲ್ಲಿ ಮರವೇರಿ ಕುಳಿತಿದ್ದ ಅಂಗವಿಕಲ ರೈತನ ರಕ್ಷಣೆ

    ಬೆಂಗಳೂರು: ರಾಜ್ಯಾದ್ಯಂತ ಮಳೆ ಅಬ್ಬರ ಮುಂದುವರಿದಿದೆ. ತಡರಾತ್ರಿಯೂ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವರುಣ ಅಬ್ಬರಿಸಿದ್ದಾನೆ. ಇನ್ನೂ ಬಿಸಿಲ ನಗರಿ ಬಳ್ಳಾರಿಯಲ್ಲಿ ಭೀಕರ ಮಳೆಗೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಸಿಂಧವಾಳ ಗ್ರಾಮದಲ್ಲಿ ಪ್ರವಾಹಕ್ಕೆ ಸಿಲುಕಿದ್ದ ರೈತರೊಬ್ಬರನ್ನು ರಕ್ಷಣೆ ಮಾಡಲಾಗಿದೆ.

    ಗುರುವಾರ ಎಂದಿನಂತೆ ತೋಟಕ್ಕೆ ತೆರಳಿದ್ದ ರೈತ ಶ್ರೀನಿವಾಸ್ ಹಳ್ಳದ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಜೀವದಾಸೆಗೆ ಮರವೇರಿ ಕುಳಿತಿದ್ದರು. ಈ ಮಾಹಿತಿ ಪಡೆದ ಜಿಲ್ಲಾಡಳಿತ 125 ಕ್ಕೂ ಹೆಚ್ಚಿನ ರಕ್ಷಣಾ ಸಿಬ್ಬಂದಿಯೊಂದಿಗೆ ರೈತ ಶ್ರೀನಿವಾಸ್ ಅವರನ್ನು ರಕ್ಷಣೆ ಮಾಡಿದೆ. ಈ ರಕ್ಷಣಾ ಕಾರ್ಯವನ್ನು ವೀಕ್ಷಿಸಲು ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ರಕ್ಷಣಾ ಕಾರ್ಯಚಾರಣೆ ವೇಳೆ ಬಳ್ಳಾರಿ ಎಸಿ, ತಹಶೀಲ್ದಾರ್, ಡಿವೈಎಸ್‍ಪಿ, ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು. ರೈತ ಶ್ರೀನಿವಾಸ್ ಅಂಗವಿಕಲರಾಗಿದ್ದು, 12 ಗಂಟೆಗಳ ಕಾಲ ಮರ ಹತ್ತಿ ಕುಳಿತ ಧೈರ್ಯವನ್ನು ಮೆಚ್ಚಿ ಮಾಜಿ ಶಾಸಕ, ಗಣಿ ಉದ್ಯಮಿ ಸೂರ್ಯನಾರಾಯಣ ರೆಡ್ಡಿ 11 ಸಾವಿರ ರೂ. ಬಹುಮಾನ ಘೋಷಿಸಿದ್ದಾರೆ.

    ಬಳ್ಳಾರಿ ತಾಲೂಕಿನ ಬಸರಕೋಡು ಗ್ರಾಮದ ಸುತ್ತ ಮುತ್ತ ಡ್ರೋನ್ ಕ್ಯಾಮೆರಾದ ಮೂಲಕ ಮಳೆ ದೃಶ್ಯಗಳನ್ನ ಪಬ್ಲಿಕ್ ಟಿವಿ ಸೆರೆ ಹಿಡಿದಿದೆ. ಫೋಟೋಗ್ರಾಫರ್ ಮಹೇಶ್ ಹನ್ಸಿ ಅನ್ನೋವ್ರು ಡ್ರೋನ್ ಬಳಸಿ ಈ ದೃಶ್ಯ ತೆಗೆದಿದ್ದಾರೆ.

     

    ಅತ್ತ ರಾಯಚೂರಿನ ಲಿಂಗಸುಗೂರಿನಲ್ಲಿ ಸುರಿದ ಭಾರೀ ಮಳೆಗೆ ತಾಲೂಕಿನ ಬುದ್ದಿನ್ನಿ ಕೆರೆ ಒಡೆದಿದ್ದು ಸುತ್ತಮುತ್ತಲ ಗ್ರಾಮಗಳಿಗೆ ನೀರು ನುಗ್ಗಿದೆ. ಗುಡಿಹಾಳ ಗ್ರಾಮ ಸಂಪೂರ್ಣ ಜಲಾವೃತವಾಗಿದೆ. ಬುದ್ದಿನ್ನಿ, ಮಟ್ಟೂರಿನಲ್ಲೂ ಮನೆಗಳಿಗೆ ನೀರು ನುಗ್ಗಿದೆ. ಬೆಳಗಿನ ಜಾವ ಕೆರೆ ಒಡೆದಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಹೊಲಗಳಲ್ಲಿ ನೀರು ನಿಂತಿದ್ದು ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೆರೆ ತುಂಬಿದ್ದು, ಕೆರೆ ಒಡೆದ ಹಿನ್ನೆಲೆಯಲ್ಲಿ ಮಸ್ಕಿ ನಾಲಾ ಡ್ಯಾಮಿಗೆ ಹೆಚ್ಚು ಪ್ರಮಾಣದ ನೀರು ಹರಿದು ಬರುತ್ತಿದೆ. ಹೀಗಾಗಿ ಡ್ಯಾಮ್ ನಿಂದ ಹೆಚ್ಚುವರಿ ನೀರು ಹಳ್ಳಕ್ಕೆ ಬಿಡುಗಡೆ ಮಾಡಲಾಗುತ್ತಿದೆ.

    ಹಾಸನ ಜಿಲ್ಲೆಯಾದ್ಯಂತ ರಾತ್ರಿಯಿಡೀ ಭಾರಿ ಮಳೆ ಸುರಿದಿದ್ದು, ತಾಲೂಕಿನ ತೇಜೂರು ಗ್ರಾಮದಲ್ಲಿ ಐದು ಮನೆಗಳು ಕುಸಿದಿವೆ. ಘಟನಾ ಸಂದರ್ಭದಲ್ಲಿ ಮನೆಯಲ್ಲಿದ್ದ ಮಗು ಪಾರಾಗಿದ್ದು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಸತತವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಬೆಳೆ ನಾಶವಾಗಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ.

    ಕಲಬುರಗಿ ಜಿಲ್ಲೆಯಲ್ಲಿ ಸತತ ಮಳೆಯ ಹಿನ್ನೆಲೆಯಲ್ಲಿ ಸೇಡಂ ಪಟ್ಟಣದ ಕಮಲಾವತಿ ನದಿ ಉಕ್ಕಿ ಹರಿದಿದೆ. ಎರಡು ತಿಂಗಳ ಹಿಂದೆಯಷ್ಟೆ ಒಂದೂವರೆ ಕೋಟಿ ರೂ. ಹಣ ಖರ್ಚು ಮಾಡಿ ನದಿಗೆ ನಿರ್ಮಾಣ ಮಾಡಲಾಗಿದ್ದ ಬ್ರಿಡ್ಜ್ ನೀರಿನಲ್ಲಿ ಕೊಚ್ಚಿ ಹೋಗಿದೆ. ಕಳಪೆ ಕಾಮಾಗಾರಿಯೇ ಬ್ರಿಡ್ಜ್ ನೀರಿನಲ್ಲಿ ಕೊಚ್ಚಿ ಹೋಗಲು ಕಾರಣ ಅಂತಾ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಸುರಿಯುತ್ತಿರುವ ಮಳೆಗೆ ತೊಗರಿ ಬೆಳೆ ಸಂಪೂರ್ಣ ನಾಶವಾಗಿದೆ. ಹೀಗಾಗಿ ಜಿಲ್ಲೆಯ ತೊಗರಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ.

     

    ರೇಷ್ಮೆನಗರಿ ರಾಮನಗರ ಜಿಲ್ಲೆಯಾದ್ಯಂತ ರಾತ್ರಿ ವರುಣ ಆರ್ಭಟಿಸಿದ್ದಾನೆ. ರಾತ್ರಿ ಜಿಲ್ಲೆಯಾದ್ಯಂತ ಜೋರು ಮಳೆಯಾಗಿದ್ದು ಅದರಲ್ಲೂ ಚನ್ನಪಟ್ಟಣ ಹಾಗು ಕನಕಪುರ ತಾಲೂಕುಗಳಲ್ಲಿ ಗುಡುಗು ಸಿಡಿಲು ಸಹಿತ ಜೋರು ಮಳೆಯಾಗಿದೆ. ಮಳೆಯಿಂದಾಗಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಅಲ್ಲದೇ ರಸ್ತೆಯಲ್ಲಿ ಉಂಟಾಗಿರುವ ಗುಂಡಿಗಳಲ್ಲಿ ಮಳೆ ನೀರು ನಿಂತು ಬೈಕ್ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಜೋರು ಮಳೆ ನಿಂತ ಬಳಿಕ ಮಧ್ಯರಾತ್ರಿಯ ವರೆಗೂ ಸಹ ತುಂತುರು ಮಳೆ ಮುಂದುವರೆದಿತ್ತು.