Tag: kalaburgi

  • ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲೆತ್ನಿಸಿದ ಆರೋಪಿ ಮೇಲೆ ಫೈರಿಂಗ್

    ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲೆತ್ನಿಸಿದ ಆರೋಪಿ ಮೇಲೆ ಫೈರಿಂಗ್

    ಕಲಬುರಗಿ: ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿ ಮೇಲೆ ಪೊಲೀಸರು ಫೈರಿಂಗ್ ನಡೆಸಿದ ಘಟನೆ ಕಲಬುರಗಿ ಹೊರವಲಯದ ಭೋಸ್ಗಾ ಕೆರೆ ಬಳಿ ನಡೆದಿದೆ.

    ಘಟನೆಯಿಂದ ಆರೋಪಿ ವಿಕ್ರಂ ಮೂಲಿಮನಿ(24) ಕಾಲಿಗೆ ಗಂಭೀರ ಗಾಯಗಳಾಗಿವೆ. ಕಲಬುರಗಿ ನಗರದಲ್ಲಿ ಇತ್ತೀಚೆಗೆ ಶ್ರೀಕಾಂತ ರೆಡ್ಡಿ ಹಲ್ಲೆ ಸಂಬಂಧ ಮಾರ್ಕೆಟ್ ಸತೀಶನ ಸಹಚರ ರೌಡಿ ವಿಕ್ರಂ ಮೂಲಿಮನಿಯನ್ನು ಪೊಲೀಸರು ಬಂಧಿಸಿ, ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರ ಜಪ್ತಿಗಾಗಿ ಇಂದು ಕರೆದುಕೊಂಡು ಹೋಗಿದ್ದರು. ಈ ಸಂಧರ್ಭದಲ್ಲಿ ರೌಡಿ ವಿಕ್ರಂ, ಪೇದೆ ಅಂಬಾದಾಸ್ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾನೆ. ಆಗ ಆತ್ಮ ರಕ್ಷಣೆಗಾಗಿ ಪೊಲೀಸರು ರೌಡಿಯ ಬಲಗಾಲಿಗೆ ಗುಂಡು ಹೊಡೆದಿದ್ದಾರೆ.

    ಸದ್ಯ ಗಾಯಾಳು ವಿಕ್ರಂನನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • ದಿಗಂಬರ ಸ್ವಾಮೀಜಿಯ ದರ್ಶನ ಪಡೆದ ವಿಜಿ ದಂಪತಿ

    ದಿಗಂಬರ ಸ್ವಾಮೀಜಿಯ ದರ್ಶನ ಪಡೆದ ವಿಜಿ ದಂಪತಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ದುನಿಯಾ ವಿಜಯ್ ಸ್ವಾಮೀಜಿಗಳ ಆಶಿರ್ವಾದ ಪಡೆಯೋದು, ಹೋಮ ಮಾಡಿಸೋದು, ಇಂತಹ ಹಲವು ಕೆಲಸಗಳನ್ನು ಆಗಾಗ ಮಾಡ್ತಾನೇ ಇರ್ತಾರೆ.

    ಆದ್ರೆ ಇದೀಗ ದುನಿಯಾ ವಿಜಿ ದಂಪತಿ ದಿಗಂಬರ ಸ್ವಾಮೀಜಿಯ ಆಶೀರ್ವಾದ ಪಡೆದಿರೋದು ಕುತೂಹಲಕ್ಕೆ ಕಾರಣವಾಗಿದೆ. ದುನಿಯಾ ವಿಜಿ ಹಾಗೂ ಅವರ ಪತ್ನಿ ಕೀರ್ತಿ ಕಲಬುರ್ಗಿ ಜಿಲ್ಲೆಯ ಶ್ರೀ ಶ್ರೀ ಶ್ರೀ ದತ್ತ ದಿಗಂಬರ ಅಭಿನವ ಬಾಲಯೋಗಿ ಶಂಕರಲಿಂಗ ಮಹಾರಾಜ ಸ್ವಾಮಿಗಳ ದರ್ಶನ ಪಡೆದಿದ್ದಾರೆ. ದುನಿಯಾ ವಿಜಿ ಅವರ ಪತ್ನಿ ಕೀರ್ತಿ ಕೂಡ ಫೋಟೋದಲ್ಲಿದ್ದಾರೆ.

    ಈ ಸ್ವಾಮೀಜಿಯನ್ನ ದುನಿಯಾ ವಿಜಿ ನಂಬೋಕೆ ಏನು ಕಾರಣ ಅನ್ನೋದು ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

  • ಕಾಂಗ್ರೆಸ್ ಮುಕ್ತ ಭಾರತ ಮಾಡಲು ಯಾರಿಂದ್ಲೂ ಸಾಧ್ಯವಿಲ್ಲ: ಖರ್ಗೆ

    ಕಾಂಗ್ರೆಸ್ ಮುಕ್ತ ಭಾರತ ಮಾಡಲು ಯಾರಿಂದ್ಲೂ ಸಾಧ್ಯವಿಲ್ಲ: ಖರ್ಗೆ

    ಕಲಬುರಗಿ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಹಿನ್ನಡೆಗೆ ರಾಹುಲ್ ಗಾಂಧಿ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ಕಾಂಗ್ರೆಸ್ ಮುಕ್ತ ಭಾರತ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಅಂತಾ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ನುಡಿದಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚರಾಜ್ಯ ಚುನಾವಣಾ ಫಲಿತಾಂಶದಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವು ಕಂಡಿದೆ. ಆದ್ರೆ ಕಾಂಗ್ರೆಸ್ ಹಿನ್ನಡೆಯಾಗಲು ರಾಹುಲ್ ಗಾಂಧಿ ಕಾರಣವಲ್ಲ. ಅವರ ನಾಯಕತ್ವ ಪಕ್ಷಕ್ಕೆ ಬೇಕೇ ಬೇಕು. ಅವರನ್ನು ಬಿಟ್ಟರೆ ಪಕ್ಷಕ್ಕೆ ದೊಡ್ಡ ಹಾನಿಯಾಗುತ್ತೆ. ಸೋಲಿಗೆ ಎಲ್ಲಿ ತಪ್ಪಾಗಿದೆ ಗುರುತಿಸಿ ತಿದ್ದಿಕೊಳ್ಳುತ್ತೇವೆ. ಒಟ್ಟಿನಲ್ಲಿ ರಾಹುಲ್ ಗಾಂಧಿ ನಾಯಕತ್ವ ಮುಂದುವರೆಯಲಿದೆ ಅಂತಾ ಹೇಳಿದ್ದಾರೆ.

    ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನ ಪಕ್ಷವನ್ನು ಮುಗಿಸಬಹುದು. ಆದ್ರೆ ರಾಜಕೀಯ ಮುಖಂಡರ ವೀರಾವೇಶದ ಮಾತಿನಿಂದ ಯಾವ ಪಕ್ಷವನ್ನೂ ಮುಗಿಸಲು ಸಾಧ್ಯವಿಲ್ಲ ಅಂತಾ ಪ್ರಧಾನಿ ನರೇಂದ್ರ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದರು.

    ಇದನ್ನೂ ಓದಿ: ಕಾಂಗ್ರೆಸ್ ಮುಕ್ತ ಭಾರತದಲ್ಲಿ ಕರ್ನಾಟಕದಲ್ಲಿರೋ ಕಾಂಗ್ರೆಸ್ ಅಳಿಸಿಹೋಗುತ್ತೆ: ಗೋ ಮಧುಸೂದನ್

  • ಮನ್ ಕಿ ಬಾತ್ ಬಿಟ್ಟು ಕಾಮ್ ಕಿ ಬಾತ್ ಆರಂಭಿಸಿ- ಪ್ರಧಾನಿಗೆ ಖರ್ಗೆ ಕಿವಿಮಾತು

    ಮನ್ ಕಿ ಬಾತ್ ಬಿಟ್ಟು ಕಾಮ್ ಕಿ ಬಾತ್ ಆರಂಭಿಸಿ- ಪ್ರಧಾನಿಗೆ ಖರ್ಗೆ ಕಿವಿಮಾತು

    ಕಲಬುರಗಿ: ಮನ್ ಕಿ ಬಾತ್ ಬಿಟ್ಟು ಕಾಮ್ ಕಿ ಬಾತ್ ಆರಂಭಿಸಿ (ಮನದ ಮಾತು ಬಿಟ್ಟು ಕೆಲಸದ ಮಾತು ಆರಂಭಿಸಿ) ಅಂತಾ ಪ್ರಧಾನಿ ನರೇಂದ್ರ ಮೋದಿಗೆ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿವಿ ಮಾತು ಹೇಳಿದ್ದಾರೆ.

    ಕಲಬುರಗಿಯಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ಖರ್ಗೆ, ಒಂದು ರಾಜ್ಯದ ಚುನಾವಣೆಯ ಹಿನ್ನೆಲೆಯಲ್ಲಿ ಓರ್ವ ಪ್ರಧಾನಿಯಾಗಿ ಗಲ್ಲಿ ಗಲ್ಲಿಯಲ್ಲಿ ಚುನಾವಣಾ ಪ್ರಚಾರ ಮಾಡೋದು ನಗೆಪಾಟಲಿಗೀಡು ಮಾಡಿದೆ. ನನ್ನ ಹೆಸರು ಹೇಳಿದ್ರೆ ಮತ ಹಾಕ್ತಾರೆ ಅನ್ನೊ ಭ್ರಮೆಯಲ್ಲಿದ್ದಾರೆ ಪ್ರಧಾನಿಯವರು. ಜಿಡಿಪಿ ಹೆಚ್ಚಳದ ಅಂಕಿ ಅಂಶಗಳು ಸುಳ್ಳಿನ ಕಂತೆ. ಗುರಿ ಕಡಿಮೆ ಮಾಡಿಕೊಂಡು ಜಿಡಿಪಿ ಬೆಳವಣಿಗೆ ಹೆಚ್ಚಳ ತೋರಿಸಿದ್ದಾರೆ. ಕೇಂದ್ರ ಸರ್ಕಾರ ಚುನಾವಣೆಗೋಸ್ಕರ ತಯಾರಿಸಿದ ಅಂಕಿ ಅಂಶ ಇದಾಗಿದೆ ಅಂತಾ ಗುಡುಗಿದ್ರು.

    ಭಾರತೀಯರ ಮೇಲಿನ ದಾಳಿಗೆ ಖಂಡನೆ: ಅಮೆರಿಕದಲ್ಲಿ ಭಾರತೀಯರ ಮೇಲಿನ ದಾಳಿಗೆ ತೀವ್ರ ಕಳವಳ ವ್ಯಕ್ತಪಡಿಸಿದ ಖರ್ಗೆ, ಈ ಕುರಿತು ಪ್ರಧಾನಿ ತಕ್ಷಣವೇ ಅಮೆರಿಕ ಅಧ್ಯಕ್ಷರ ಜೊತೆ ಮಾತನಾಡಬೇಕು. ಭಾರತೀಯರ ಮೇಲೆ ಪದೇ ಪದೇ ದಾಳಿ ನಡೆಯುತ್ತಿರುವುದು ಖಂಡನೀಯ. ಈ ವಿಷಯದಲ್ಲಿ ಕೇಂದ್ರ ಸರ್ಕಾರ ನಿರ್ಲಕ್ಷ್ಯ ವಹಿಸಬಾರದು. ಇದೇ ರೀತಿ ವಿದೇಶದಲ್ಲಿ ಭಾರತೀಯ ಪ್ರಜೆಗಳ ಮೇಲೆ ದಾಳಿ ಮುಂದುವರೆದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಯುದ್ಧಕ್ಕೆ ನಾಂದಿ ಹಾಡಲಿದೆ ಅಂತಾ ಖರ್ಗೆ ಎಚ್ಚರಿಕೆ ನೀಡಿದ್ರು.

  • ಕುಟುಂಬಕ್ಕೆ ಆಶ್ರಯವಾಗಲಿ ಅಂತಾ ಕರೆಸಿದ್ರೆ ಮಗಳನ್ನೇ ರೇಪ್, ಕೊಲೆ ಮಾಡಿ ಆತ್ಮಹತ್ಯೆ ಮಾಡ್ಕೊಂಡ!

    ಕುಟುಂಬಕ್ಕೆ ಆಶ್ರಯವಾಗಲಿ ಅಂತಾ ಕರೆಸಿದ್ರೆ ಮಗಳನ್ನೇ ರೇಪ್, ಕೊಲೆ ಮಾಡಿ ಆತ್ಮಹತ್ಯೆ ಮಾಡ್ಕೊಂಡ!

    ಕಲಬುರ್ಗಿ: ಕುಟುಂಬಕ್ಕೆ ಆಶ್ರಯವಾಗಲಿ ಅಂತಾ ಕರೆ ತಂದರೆ ಮಗಳ ಪಾಲಿಗೆ ಸೋದರ ಮಾವನೇ ವಿಲನ್ ಆದ ಹೀನಾಯ ಘಟನೆ ಕಲಬುರ್ಗಿ ಜಿಲ್ಲೆಯ ಕೋಟನೂರ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ.

    ಇದೀಗ ಕಲಬುರ್ಗಿ ನಗರದ ಹೊರವಲಯದ ಕೋಟನೂರ(ಡಿ) ಗ್ರಾಮದ ನಿವಾಸಿಯಾಗಿರುವ ತಾಯಿ ಶಾಂತಾಬಾಯಿ ತನ್ನ ಮಗಳನ್ನು ಕಳೆದುಕೊಂಡು ದುಃಖದಲ್ಲಿ ಮುಳುಗಿದ್ದಾರೆ. 15 ವರ್ಷಗಳ ಹಿಂದೆ ಗಂಡ ತೀರಿಕೊಂಡ ಬಳಿಕ ಮನೆಯ ಜವಾಬ್ದಾರಿಗಾಗಿ ಸಹೋದರ ವಿಜಯಕುಮಾರ್‍ಗೆ ಶಾಂತಾಬಾಯಿ ಮನೆಯಲ್ಲಿ ಆಶ್ರಯ ನೀಡಿದ್ದರು.

    ಆದರೆ ಕಾಮುಕ ವಿಜಯಕುಮಾರ್ ತನ್ನ ಮಗಳಿಗೆ ಸಮನಾದ 17 ವರ್ಷದ ಯುವತಿಯ ಮೇಲೆ ಶನಿವಾರ ರಾತ್ರಿ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದಾನೆ. ಮಾತ್ರವಲ್ಲದೇ ಬಳಿಕ ಈ ವಿಷಯ ಜನರಿಗೆ ತಿಳಿದ್ರೆ ತೊಂದರೆ ಅಂತಾ ಪಕ್ಕದ ಕೋಣೆಗೆ ಹೋಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಆರೋಪಿ ವಿಜಯಕುಮಾರ್ ಜೇಬಿನಲ್ಲಿ ಡೆತ್ ನೋಟ್ ಸಹ ಪೊಲೀಸರಿಗೆ ಪತ್ತೆಯಾಗಿದೆ. ಅದರಲ್ಲಿ ನಮ್ಮ ಸಾವಿಗೆ ಕಾರಣ ಮನೆಯ ಮಾಲೀಕ ಹಾಗು ಸೋದರನಾದ ಜಯರಾಜ್ ರಾಠೋಡ್ ಅಂತಾ ಬರೆಯಲಾಗಿದ್ದು, ಈ ಮೂಲಕ ಪ್ರಕರಣ ತಿರುವು ಪಡೆಯಲಿ ಅಂತಾ ಕಾಮುಕ ವಿಜಯಕುಮಾರ್ ಸಾಯುವ ಮುನ್ನ ಪ್ಲ್ಯಾನ್ ಮಾಡಿ ನೇಣಿಗೆ ಶರಣಾಗಿದ್ದಾನೆ.

    ಗುಲ್ಬರ್ಗಾ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ಟಿನಲ್ಲಿ ಉಂಡ ಮನೆಗೇ ಕನ್ನ ಬಗೆದ್ರು ಅಂತಾ ಹೇಳೋ ಮಾತು ಇಂತಹವರನ್ನೇ ನೋಡಿ ಹೇಳಿರಬೇಕು.

  • ರಸ್ತೆ ಅಪಘಾತದ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ಶಾಸಕ ಡಾ.ಅಜಯ್‍ಸಿಂಗ್

    ರಸ್ತೆ ಅಪಘಾತದ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ಶಾಸಕ ಡಾ.ಅಜಯ್‍ಸಿಂಗ್

    ಕಲಬುರಗಿ: ಬೈಕ್ ಅಪಘಾತದಲ್ಲಿ ರಸ್ತೆಯ ಮೇಲೆ ಬಿದ್ದು ಇಬ್ಬರು ಯುವಕರು ಚಿಕಿತ್ಸೆ ಜನರ ಬಳಿ ಅಂಗಲಾಚಿದ್ರೂ ಸಹಾಯಕ್ಕೆ ಬರದ ಘಟನೆ ಕಲಬುರಗಿ ನಗರದ ಹೊರವಲಯದ ಕೋಟನೂರ ಗ್ರಾಮದ ಬಳಿ ನಡೆದಿದೆ.

    ಇಂದು ಬೆಳಗ್ಗೆ 10.50ಕ್ಕೆ ಫಾರ್ಚೂನರ್ ವಾಹನಕ್ಕೆ ಪಲ್ಸರ್ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ನಂತರ ಅಲ್ಲಿನ ಸ್ಥಳೀಯರು 108 ಅಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಆದರೆ ಯಾರು ಕೂಡ ಗಾಯಗೊಂಡವರ ಸಹಾಯಕ್ಕೆ ಮುಂದಾಗಿಲ್ಲ.

    ಈ ವೇಳೆ ಅದೇ ರಸ್ತೆಯಲ್ಲಿ ತೆರಳುತ್ತಿದ್ದ ಜೇವರ್ಗಿ ಕಾಂಗ್ರೆಸ್ ಶಾಸಕ ಡಾ.ಅಜಯ್ ಸಿಂಗ್ ಮಾನವೀಯತೆ ಮೆರೆದಿದ್ದು, ಗಾಯಾಳುಗಳ ಸಹಾಯಕ್ಕೆ ಮುಂದಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿದ್ದಾರೆ. ಅಂಬುಲೆನ್ಸ್ ಕಳುಹಿಸುವುದಿಲ್ಲ ಅಂದರೆ ನನ್ನ ವಾಹನದಲ್ಲಿ ಗಾಯಗೊಂಡವರನ್ನು ಕರೆದುಕೊಂಡು ಹೋಗುವುದಾಗಿ ಎಚ್ಚರಿಸಿದ ಬಳಿಕ ಸ್ಥಳಕ್ಕೆ ಅಂಬುಲೆನ್ಸ್ ಬಂದಿದೆ.

    ಅಂಬುಲೆನ್ಸ್ ಬರುವಷ್ಟರಲ್ಲೇ ನೀರು ಕುಡಿಸಿ ಗಾಯಾಳುಗಳ ಕಾಲನ್ನು ಶಾಲಿನಿಂದ ಕಟ್ಟಿ ಪ್ರಥಮ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.

    https://www.youtube.com/watch?v=859q7s4qSd4&feature=youtu.be