Tag: kalaburahi

  • ಶೋಕಿ ಜೀವನಕ್ಕಾಗಿ ಕಳ್ಳತನ- ಅಂತರ್ ರಾಜ್ಯ ಗ್ಯಾಂಗ್ ಅಂದರ್, ಅರ್ಧ ಕೆಜಿ ಚಿನ್ನ ವಶ

    ಶೋಕಿ ಜೀವನಕ್ಕಾಗಿ ಕಳ್ಳತನ- ಅಂತರ್ ರಾಜ್ಯ ಗ್ಯಾಂಗ್ ಅಂದರ್, ಅರ್ಧ ಕೆಜಿ ಚಿನ್ನ ವಶ

    – ಕಳ್ಳತನ ಮಾಡಿದ ಹಣದೊಂದಿಗೆ ಯುವತಿರೊಂದಿಗೆ ಟೂರ್, ಐಷಾರಾಮಿ ಜೀವನ

    ಕಲಬುರಗಿ: ಐಷಾರಾಮಿ ಜೀವನ ನಡೆಸಲು ಕಳ್ಳತನ ದಂಧೆಗೆ ಇಳಿದಿದ್ದ ಕುಖ್ಯಾತ ಅಂತರ್ ರಾಜ್ಯ ಕಳ್ಳರನ್ನು ಕಲಬುರಗಿ ಜಿಲ್ಲಾ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದು, ಆರೋಪಿಗಳಿಂದ ಅರ್ಧ ಕೆಜಿ ಚಿನ್ನ, ಒಂದು ಕೆಜಿ ಬೆಳ್ಳಿ, ಒಂದು ನಾಡಪಿಸ್ತೂಲ್ ಸೇರಿದಂತೆ ಕೃತ್ಯಕ್ಕೆ ಬಳಕೆ ಮಾಡಲಾಗುತ್ತಿದ್ದ ಶಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಬಂಧಿತರನ್ನು ಜಿಲ್ಲೆಯ ನಾಗರಾಜ್ ಕಚೇರಿ, ಮಹಾರಾಷ್ಟ್ರ ರಾಜ್ಯದ ಸೋಲ್ಲಾಪುರ ಮೂಲದ ಹುಸೇನ್ ಗಾಯ್ಕ್ವಡ್, ಶ್ರೀಕಾಂತ್ ಸಿಂಧೆ ಹಾಗೂ ಶಂಕರ್ ಜಾಧವ್ ಎಂದು ಗುರುತಿಸಲಾಗಿದೆ.

    ಬಂಧಿತ ಕಳ್ಳರು ಕಳೆದ ಹಲವು ವರ್ಷಗಳಿಂದ ಕರ್ನಾಟಕದ ಹಾಗೂ ನೆರೆಯ ಮಹಾರಾಷ್ಟ್ರದಲ್ಲಿ ಅನೇಕ ಮನೆಗಳನ್ನ ಕಳ್ಳತನ ಮಾಡಿದ್ದಾರೆ. ಹಗಲಿನ ವೇಳೆಯಲ್ಲಿ ಬೀಗ ಇರುವ ಮನೆಗಳನ್ನು ನೋಡಿ ಟಾರ್ಗೆಟ್ ಮಾಡುತ್ತಿದ್ದ ಆರೋಪಿಗಳು ರಾತ್ರಿಯಾಗುತ್ತಿದಂತೆ ಕಳ್ಳತನಕ್ಕೆ ಇಳಿಯುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಮನೆಯ ಬೀಗ ಮುರಿದು ಒಳ ಪ್ರವೇಶಿಸುತ್ತಿದ್ದ ಆರೋಪಿಗಳು ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳು, ಚಿನ್ನಭರಣ ದೋಚಿ ಪರಾರಿಯಾಗುತ್ತಿದ್ದರು. ಹೀಗೆ ಕದ್ದ ಹಣದಲ್ಲಿ ವಿವಿಧೆಡೆ ಯುವತಿಯರ ಜೊತೆ ಪ್ರವಾಸ ಕೈಗೊಂಡು ಮೋಜು ಮಸ್ತಿ ಮಾಡುತ್ತಿದ್ದರು. ಕಳೆದ ತಿಂಗಳಷ್ಟೇ ಕಲಬುರಗಿ ನಗರದ ಖೂಬಾ ಪ್ಲಾಟ್‍ನಲ್ಲಿ ಖ್ಯಾತ ವಕೀಲರೊಬ್ಬರ ಮನೆಗೆ ಸಹ ಈ ಗ್ಯಾಂಗ್ ಕನ್ನ ಹಾಕಿತ್ತು. ತಾವು ಕಳ್ಳತನ ಮಾಡುವ ನಗರದಲ್ಲಿ 15 ದಿನಗಳು ಮಾತ್ರ ಇರುತ್ತಿದ್ದ ಈ ಗ್ಯಾಂಗ್ ಈ ವೇಳೆಯಲ್ಲೇ ವಿವಿಧೆಡೆ ಮನೆಗಳಿಗೆ ಕನ್ನ ಹಾಕಿ ತಮ್ಮ ಕೈಚಳಕ ತೋರುತ್ತಿದ್ದರು. ಕೃತ್ಯದ ವೇಳೆ ಯಾರಾದರೂ ಪ್ರತಿರೋಧ ತೋರಿದರೆ ಕಣ್ಣಿಗೆ ಖಾರದ ಪುಡಿ ಎರಚಿ ಪರಾರಿಯಾಗುತ್ತಿದ್ದರು.

    ಬಂಧಿತರಿಂದ ಅರ್ಧ ಕೆಜಿ ಚಿನ್ನ, ಒಂದು ಕೆಜಿ ಬೆಳ್ಳಿ, ಒಂದು ನಾಡಪಿಸ್ತೂಲ್ ಸೇರಿದಂತೆ ಒಂಭತ್ತು ಜೀವಂತ ಗುಂಡುಗಳು, ಮಹಿಂದ್ರಾ ಎಕ್ಸ್‍ಯುವಿ ಕಾರು, ಕಳ್ಳತನಕ್ಕೆ ಬಳಸುವ ವಸ್ತುಗಳಾದ ಕಬ್ಬಿಣದ ರಾಡ್, ಸ್ಕ್ರೂಡ್ರೈವರ್, ಖಾರದ ಪುಡಿ ವಶಪಡಿಸಿಕೊಳ್ಳಲಾಗಿದೆ. ಕಲಬುರಗಿ ನಗರದ ಬ್ರಹ್ಮಪುರ, ಅಶೋಕನಗರ, ಚೌಕ್ ಪೊಲೀಸ್ ಠಾಣೆ ವ್ಯಾಪ್ತಿ ಸೇರಿದಂತೆ ವಿವಿಧೆಡೆ ಹದಿನಾರು ಮನೆಗಳನ್ನ ಕಳ್ಳತನ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv