Tag: Kalaburagi Textile Park

  • ಕಲಬುರಗಿ ಜವಳಿ ಪಾರ್ಕ್ ರದ್ದು- ಕೇಂದ್ರದ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ

    ಕಲಬುರಗಿ ಜವಳಿ ಪಾರ್ಕ್ ರದ್ದು- ಕೇಂದ್ರದ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ

    ಕಲಬುರಗಿ: 2001ರಲ್ಲಿ ಯುಪಿಎ ಸರ್ಕಾರ ಅವಧಿಯಲ್ಲಿ ಕಲಬುರಗಿ ಜಿಲ್ಲೆಗೆ ಮಂಜೂರಾಗಿದ್ದ ‘ಗುಲಬರ್ಗಾ ಜವಳಿ ಪಾರ್ಕ್’ನ್ನು ಕೇಂದ್ರ ಸರ್ಕಾರ ಕಿತ್ತುಕೊಂಡು ಈ ಭಾಗಕ್ಕೆ ಅನ್ಯಾಯ ಮಾಡಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಮೋದಿ ಸರ್ಕಾರ ಈ ಭಾಗಕ್ಕೆ ತೀವ್ರ ಅನ್ಯಾಯ ಮಾಡಿದೆ. ಉದ್ದೇಶಿತ ಜವಳಿ ಪಾರ್ಕ್ ನಿರ್ಮಾಣದಿಂದ ಸುಮಾರು 5 ಸಾವಿರ ವಿದ್ಯಾವಂತರಿಗೆ ಉದ್ಯೋಗ ಕಲ್ಪಿಸಬಹುದಾಗಿತ್ತು. ಆದರೆ ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ಉದ್ಯೋಗಾವಕಾಶ ವಂಚಿಸುವುದಲ್ಲದೇ ಅನ್ಯಾಯವೆಸಗಿದಂತಾಗಿದೆ ಎಂದು ದೂರಿದ್ದಾರೆ.

    ಅಂದಹಾಗೇ ನಿರೀಕ್ಷಿತ ಅವಧಿಯಲ್ಲಿ ಜವಳಿ ಪಾರ್ಕ್ ಪೂರ್ಣಗೊಳಿಸದ ಕಾರಣ ‘ಗುಲಬರ್ಗಾ ಟೆಕ್ಸ್ ಟೈಲ್ ಪಾರ್ಕ್’ ಯೋಜನೆ ರದ್ದುಗೊಳಿಸಿದೆ. ನಗರದ ನಂದೂರು-ಕೆಸರಟಗಿ ಕೈಗಾರಿಕಾ ವಸಾಹತು ಪ್ರದೇಶದ ಬಳಿ ‘ಗುಲಬರ್ಗಾ ಟೆಕ್ಸ್ ಟೈಲ್ ಪಾರ್ಕ್’ ಅಭಿವೃದ್ಧಿಗೆ ಉದ್ದೇಶಿಸಲಾಗಿತ್ತು. 50 ಎಕರೆ ಭೂ ಪ್ರದೇಶದಲ್ಲಿ ಒಟ್ಟು 52 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಲು ಯೋಜನೆ ರೂಪಿಸಲಾಗಿತ್ತು. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಉದ್ಯಮಿಗಳ ಪಾಲುದಾರಿಕೆ ಹಾಗೂ ಸಾಲದಲ್ಲಿ ಪಾರ್ಕ್ ತಲೆ ಎತ್ತಬೇಕಿತ್ತು. 100 ಘಟಕಗಳು ಸ್ಥಾಪನೆಯಾಗಿ ನಾಲ್ಕು ಸಾವಿರಕ್ಕೂ ಅಧಿಕ ಜನರಿಗೆ ಉದ್ಯೋಗ ಕಲ್ಪಿಸುವ ಉದ್ದೇಶ ಹೊಂದಿತ್ತು.