Tag: Kakanuru villagers

  • ಉತ್ತರ ಕರ್ನಾಟಕ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದ ದಾವಣಗೆರೆ ಜನತೆ

    ಉತ್ತರ ಕರ್ನಾಟಕ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದ ದಾವಣಗೆರೆ ಜನತೆ

    ದಾವಣಗೆರೆ: ಉತ್ತರ ಕರ್ನಾಟದಲ್ಲಿ ಉಂಟಾಗಿರುವ ಪ್ರವಾಹಕ್ಕೆ ಸಿಲುಕಿದ ಸಂತ್ರಸ್ತರಿಗೆ ದಾವಣಗೆರೆಯ ಜನತೆ ಸಹಾಯ ಹಸ್ತ ಚಾಚಿದ್ದಾರೆ. ಜಿಲ್ಲೆಯ ಚನ್ನಗಿರಿ ತಾಲೂಕಿನ ಕಾಕನೂರು ಗ್ರಾಮಸ್ಥರು 5 ಸಾವಿರ ರೊಟ್ಟಿಗಳ ಜೊತೆ ಇತರೆ ಆಹಾರವನ್ನು ತಯಾರಿಸುತ್ತಿದ್ದು, ಅದನ್ನು ಪ್ರವಾಹ ಪೀಡಿತ ಪ್ರದೇಶಗಳಿಗೆ ರವಾನಿಸಲಿದ್ದಾರೆ.

    ವರುಣನ ರೌದ್ರಾವತಾರಕ್ಕೆ ಉತ್ತರ ಕರ್ನಾಟಕ ಅಕ್ಷರಶಃ ನಲುಗಿ ಹೋಗಿದೆ. ಪ್ರವಾಹ ಸೃಷ್ಟಿಸಿರುವ ಅವಾಂತರಕ್ಕೆ ಅಲ್ಲಿನ ಜನರು ತತ್ತರಿಸಿ ಹೋಗಿದ್ದಾರೆ. ಈ ಹಿನ್ನೆಲೆ ಚನ್ನಗಿರಿ ತಾಲೂಕಿನ ಕಾಕನೂರು ಗ್ರಾಮಸ್ಥರು ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದ್ದಾರೆ. ಗ್ರಾಮದ ಮಹಿಳೆಯರೆಲ್ಲಾ ಸೇರಿ ಸಂತ್ರಸ್ತರಿಗೆ ಎರಡು ಕ್ವಿಂಟಲ್ ಜೋಳದಿಂದ 5 ಸಾವಿರಕ್ಕೂ ಹೆಚ್ಚು ರೊಟ್ಟಿಗಳನ್ನು ತಯಾರಿಸುತ್ತಿದ್ದಾರೆ. ಜೊತೆಗೆ ಶೇಂಗಾ ಪುಡಿ, ಕುರಸಾನೇ ಪುಡಿ ಸೇರಿದಂತೆ ರೊಟ್ಟಿ ಜೊತೆ ಇತರೆ ಆಹಾರವನ್ನು ಉತ್ತರ ಕರ್ನಾಟಕಕ್ಕೆ ಕಳುಹಿಸಿಕೊಡಲು ನಿರ್ಧರಿಸಿದ್ದಾರೆ.

    ಗ್ರಾಮದ ಮಹಿಳೆಯರು ರಾತ್ರಿ ಹಗಲು ರೊಟ್ಟಿ ಮತ್ತಿತರ ಪದಾರ್ಥಗಳನ್ನು ತಯಾರಿಸುತ್ತಿದ್ದು, ಗ್ರಾಮಸ್ಥರೆಲ್ಲಾ ಈ ಒಳ್ಳೆಯ ಕಾರ್ಯಕ್ಕೆ ಸಾಥ್ ನೀಡಿದ್ದಾರೆ. ಗ್ರಾಮದ ಮುಂಭಾಗ ಪಾತ್ರೆಗಳನ್ನು ಇಟ್ಟು ತಮಗೆ ಕೊಡಬೇಕು ಎನಿಸಿದ ಧಾನ್ಯ, ಮತ್ತಿತರ ಸಾಮಾಗ್ರಿಗಳನ್ನು ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ಹೀಗೆ ಸಂಗ್ರಹಿಸಿದ ಸಾಮಾಗ್ರಿಗಳಿಂದ ಆಹಾರ ಪದಾರ್ಥಗಳನ್ನು ತಯಾರು ಮಾಡಿ ಉತ್ತರ ಕರ್ನಾಟಕಕ್ಕೆ ಕಳುಹಿಸಲು ತಯಾರಿ ಮಾಡುತ್ತಿದ್ದಾರೆ.

    ಶನಿವಾರ ಗ್ರಾಮದ ಕೆಲ ಯುವಕರು ಹಾಗೂ ಮುಖಂಡರು ಬೆಳಗಾವಿಗೆ ಹೋಗಿ ಸಂತ್ರಸ್ತರಿಗೆ ಈ ಆಹಾರವನ್ನು ವಿತರಣೆ ಮಾಡುವ ಯೋಜನೆಯನ್ನು ರೂಪಿಸಿದ್ದಾರೆ.