Tag: Kailash Satyarthi

  • ಗೋಡ್ಸೆಯಿಂದ ಗಾಂಧೀಜಿ ದೇಹ ಹತ್ಯೆ, ಪ್ರಜ್ಞಾಸಿಂಗ್‍ರಿಂದ ಆತ್ಮದ ಕೊಲೆ: ಕೈಲಾಶ್ ಸತ್ಯಾರ್ಥಿ

    ಗೋಡ್ಸೆಯಿಂದ ಗಾಂಧೀಜಿ ದೇಹ ಹತ್ಯೆ, ಪ್ರಜ್ಞಾಸಿಂಗ್‍ರಿಂದ ಆತ್ಮದ ಕೊಲೆ: ಕೈಲಾಶ್ ಸತ್ಯಾರ್ಥಿ

    ನವದೆಹಲಿ: ನಾಥೂರಾಮ್ ಗೋಡ್ಸೆ ದೇಶಭಕ್ತ ಎಂಬ ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾಸಿಂಗ್ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಈ ಬೆನ್ನಲ್ಲೇ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ  ಕೈಲಾಶ್ ಸತ್ಯಾರ್ಥಿ ಅವರು ಕೂಡ ಅಸಮಾಧಾನ ಹೊರ ಹಾಕಿದ್ದಾರೆ.

    ಟ್ವೀಟ್ ಮೂಲಕ ಕಿಡಿಕಾರಿರುವ ಕೈಲಾಶ್ ಸತ್ಯಾರ್ಥಿ ಅವರು, ನಾಥೂರಾಮ್ ಗೋಡ್ಸೆ ಮಹಾತ್ಮ ಗಾಂಧಿಯವರ ದೇಹವನ್ನು ಹತ್ಯೆ ಮಾಡಿದ. ಆದರೆ ಸಾಧ್ವಿ ಪ್ರಜ್ಞಾಸಿಂಗ್ ಅವರಂತಹ ವ್ಯಕ್ತಿಗಳು ಗಾಂಧೀಜಿಯ ಆತ್ಮವಾದ ಅಹಿಂಸೆ, ಶಾಂತಿ ಹಾಗೂ ಸಹಿಷ್ಣುತೆಯನ್ನು ಕೊಲೆ ಮಾಡುತ್ತಿದ್ದಾರೆ. ಅವರಿಂದ ಸಿಗುವ ಸಣ್ಣ ಪ್ರಯೋಜನವನ್ನು ಬಿಜೆಪಿ ನಾಯಕರು ಪಕ್ಕಕ್ಕೆ ಸರಿಸಬೇಕು. ಈ ಮೂಲಕ ಅಂತಹ ನಾಯಕರನ್ನು ಪಕ್ಷದಿಂದ ವಜಾಗೊಳಿಸಿ ರಾಜಧರ್ಮವನ್ನು ಪಾಲಿಸಬೇಕು ಎಂದು ಒತ್ತಾಯಿಸಿದ್ದಾರೆ.

    ಪ್ರಜ್ಞಾಸಿಂಗ್ ಹೇಳಿದ್ದೇನು?:
    ಭೋಪಾಲ್‍ನಲ್ಲಿ ಗುರುವಾರ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ್ದ ಸಾಧ್ವಿ ಪ್ರಜ್ಞಾಸಿಂಗ್ ಅವರು, ನಾಥೂರಾಮ್ ಗೋಡ್ಸೆ ದೇಶಭಕ್ತರು. ಅವರು ದೇಶಭಕ್ತರಾಗಿಯೇ ಜನರ ಮನದಲ್ಲಿ ಇರುತ್ತಾರೆ. ಗೋಡ್ಸೆ ಬಗ್ಗೆ ಕೆಲವರು ಹಗುರವಾಗಿ ಮಾತನಾಡುತ್ತಿದ್ದಾರೆ. ಅವರನ್ನು ಭಯೋತ್ಪಾದಕ ಎಂದು ಕರೆಯುತ್ತಿದ್ದಾರೆ. ಅಂತವರಿಗೆ ಈ ಚುನಾವಣೆ ಮೂಲಕ ಉತ್ತರ ನೀಡಲಾಗುತ್ತದೆ ಎಂದು ನಟ ಕಮಲ್ ಹಾಸನ್ ವಿರುದ್ಧ ಕಿಡಿಕಾರಿದ್ದರು.

    ಸಾಧ್ವಿ ಪ್ರಜ್ಞಾಸಿಂಗ್ ಅವರ ಬೆನ್ನಲ್ಲೇ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಹಾಗೂ ನಳಿನ್ ಕುಮಾರ್ ಕಟೀಲ್ ಗೋಡ್ಸೆ ದೇಶಭಕ್ತಿಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿ, ಡಿಲೀಟ್ ಮಾಡಿದ್ದರು.

    ಮಧು ಪೂರ್ಣಿಮಾ ಕಿಶ್ವರ್ ಎಂಬವರು, ಗೋಡ್ಸೆ ಗಾಂಧೀಜಿಯನ್ನು ಹತ್ಯೆ ಮಾಡಿದ್ದರೂ ಓಡಿ ಹೋಗಿರಲಿಲ್ಲ. ಶರಣಾಗಿ ವಿಚಾರಣೆ ಹಾಜರಾಗಿ ಧೈರ್ಯದಿಂದ ನಾನು ಗಾಂಧೀಜಿಯನ್ನು ಹತ್ಯೆ ಮಾಡಿದ್ದು ಯಾಕೆ ಎಂದು ಸಮರ್ಥಿಸಿಕೊಂಡಿದ್ದ. ಕೊಲೆ ಮಾಡಿದ್ದನ್ನು ನಾನು ಖಂಡಿಸುತ್ತೇನೆ. ಆದರೆ ಗೋಡ್ಸೆ ದೇಶಭಕ್ತಿಯನ್ನು ನಾನು ಮೆಚ್ಚುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು.

    ಈ ಟ್ವೀಟ್‍ಗೆ ಅನಂತ್ ಕುಮಾರ್ ಹೆಗ್ಡೆ, ಬದಲಾದ ಸನ್ನಿವೇಶದಲ್ಲಿ 7 ವರ್ಷದ ಬಳಿಕ ಇಂದಿನ ತಲೆಮಾರುಗಳು ಈ ವಿಚಾರದ ಬಗ್ಗೆ ಚರ್ಚೆ ನಡೆಸುತ್ತಿರುವುದು ಸಂತೋಷ ತಂದಿದೆ. ನಾಥುರಾಮ್ ಗೋಡ್ಸೆ ಈ ಚರ್ಚೆಯನ್ನು ನೋಡಿ ಸಂತೋಷ ಪಡಬಹುದು ಎಂದು ಅಭಿಪ್ರಾಯ ಬರೆದು ಟ್ವೀಟ್ ಮಾಡಿದ್ದರು.

    ಈ ಟ್ವೀಟ್ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಹೆಗ್ಡೆ, ನನ್ನ ಟ್ವಿಟ್ಟರ್ ಖಾತೆ ನಿನ್ನೆಯಿಂದ ಹ್ಯಾಕ್ ಆಗಿದೆ. ಗಾಂಧೀಜಿಯನ್ನು ಹತ್ಯೆಗೈದ ವಿಚಾರವನ್ನು ನಾನು ಸಮರ್ಥಿಸಿಕೊಳ್ಳುವುದಿಲ್ಲ. ದೇಶಕ್ಕೆ ಗಾಂಧೀಜಿಯವರು ನೀಡಿದ ಕೊಡುಗೆಯ ಬಗ್ಗೆ ನನಗೆ ಗೌರವವಿದೆ ಎಂದು ಸ್ಪಷ್ಟನೆ ನೀಡಿದ್ದರು.

    ಮಹಾತ್ಮ ಗಾಂಧಿ ಪಾಕಿಸ್ತಾನದ ಪಿತಾಮಹ ಎಂದು ಮಧ್ಯಪ್ರದೇಶದ ಬಿಜೆಪಿ ಮುಖಂಡ ಅನಿಲ್ ಸೌಮಿತ್ರ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆಯಿಂದಾಗಿ ಬಿಜೆಪಿ ಹೈಕಮಾಂಡ್ ಅನಿಲ್ ಸೌಮಿತ್ರ ಅವರನ್ನು ಪಕ್ಷದಿಂದ ವಜಾಗೊಳಿಸಿದೆ. ಇತ್ತ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಗುರುವಾರದಿಂದ 10 ದಿನಗಳ ಒಳಗೆ ಗೋಡ್ಸೆ ಪರವಾಗಿ ಮಾತನಾಡಿದ ನಾಯಕರು ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಬೇಕು. ಪಕ್ಷದ ಅಂತರಿಕವಾಗಿ ಶಿಸ್ತು ಸಮಿತಿ ಎದುರಿಸಬೇಕಾಗುತ್ತದೆ ಎಂದು ಅಮಿತ್ ಶಾ ಸೂಚಿಸಿದ್ದಾರೆ.