Tag: Kailas

  • `ಕೈಲಾಸ’ದಲ್ಲಿ ಕಿಕ್ಕೇರಿಸೋ ಟ್ರಾನ್ಸ್ ಸಾಂಗ್

    `ಕೈಲಾಸ’ದಲ್ಲಿ ಕಿಕ್ಕೇರಿಸೋ ಟ್ರಾನ್ಸ್ ಸಾಂಗ್

    ತಾರಕಾಸುರ ಚಿತ್ರದ ಮೂಲಕ ಅಬ್ಬರದ ಎಂಟ್ರಿ ಕೊಟ್ಟಿದ್ದವರು ರವಿ (Ravi). ಇದೀಗ ಅವರು ಕೈಲಾಸ (Kailas) ಎಂಬ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿದ್ದಾರೆ. ನಾಗ್ ವೆಂಕಟ್ (Nag Venkat) ನಿರ್ದೇಶನದ ಕೈಲಾಸ ಚಿತ್ರಕ್ಕೆ ಕಾಸಿದ್ರೆ ಎಂಬ ಅಡಿ ಬರಹವಿದೆ. ಈಗಾಗಲೇ ಟೀಸರ್ ಮೂಲಕ ಝಲಕ್ ಅನಾವರಣಗೊಳಿಸಿದ್ದ ಚಿತ್ರತಂಡವೀಗ ಕನ್ನಡದ ಮಟ್ಟಿಗೆ ಹೊಸತೆನ್ನಿಸುವಂತಹ ಟ್ರಾನ್ಸ್ ಸಾಂಗ್ ವೊಂದನ್ನು ಬಿಡುಗಡೆಗೊಳಿಸಿದೆ. ದೃಶ್ಯಗಳ ಮೂಲಕವೇ ಕಿಕ್ಕೇರಿಸೋ ಶೈಲಿಯ ಈ ಟ್ರಾನ್ಸ್ (Trance Song) ವೀಡಿಯೋ ಸಾಂಗ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ನೋಡುಗರ ಕಡೆಯಿಂದ ಮೆಚ್ಚುಗೆಯನ್ನೂ ಪಡೆದುಕೊಳ್ಳುತ್ತಿದೆ.

    ಈ ಸಿನಿಮಾದ ಆಂತರ್ಯಕ್ಕನುಗುಣವಾಗಿ ಈ ಟ್ರಾನ್ಸ್ ವೀಡಿಯೋ ಸಾಂಗ್ ಅನ್ನು ನಿರ್ದೇಶಕರು ರೂಪಿಸಿದ್ದಾರಂತೆ. ಮಾದಕ ಜಗತ್ತಿನ ಉನ್ಮತ್ತ ಕ್ಷಣಗಳನ್ನು ಹಿಡಿದಿಟ್ಟಂತೆ ಭಾಸವಾಗುವ ಈ ಹಾಡಿನ ಮಧ್ಯೆ ಪೂರಕವಾದ ಒಂದಷ್ಟು ಸಾಲುಗಳು, ಪಾತ್ರದ ಕಡೆಯಿಂದ ತಗೇಲಿ ಬರುತ್ತದೆ. ಅದಕ್ಕೆ ಲೇಖಕ್ ಎಂ ಸಿದ್ದಾರ್ಥ ಸಾಹಿತ್ಯ ಒದಗಿಸಿದ್ದಾರೆ. ಆಶಿಕ್ ಅರುಣ್ ಸಂಗೀತ ಸಂಯೋಜನೆಯೊಂದಿಗೆ ಈ ಟ್ರಾನ್ಸ್ ವೀಡಿಯೋ ಸಾಂಗ್ ಮೂಡಿ ಬಂದಿದೆ. ಇದರ ಮೂಲಕವೇ ನಾಯಕ ರವಿಯ ಪಾತ್ರ ಕೂಡಾ ಪ್ರೇಕ್ಷಕರ ಮುಂದೆ ಸುಳಿದಂತಾಗಿದೆ. ಇದುವರೆಗೂ ಕನ್ನಡ ಸಿನಿಮಾಗಳಲ್ಲಿ ಇಂಥಾ ಟ್ರಾನ್ಸ್ ವೀಡಿಯೋ ಸಾಂಗ್ ಅಲ್ಲಲ್ಲಿ ಕಾಣಿಸಿಕೊಂಡಿವೆ. ಆದರೆ ಈ ಚಿತ್ರದಲ್ಲಿ ಅದನ್ನು ಪೂರ್ಣಪ್ರಮಾಣದಲ್ಲಿ ಪ್ರಯೋಗ ಮಾಡಲಾಗಿದೆಯಂತೆ.

    ಇದು ಕ್ರೈಂ ಕಂ ಕಾಮಿಡಿ ಜಾನರಿಗೊಳಪಡುವ ಚಿತ್ರ. ಪಕ್ಕಾ ಕಮರ್ಶಿಯಲ್ ಬಗೆಯಲ್ಲಿ ತಯಾರುಗೊಂಡಿರುವ ಇದು ನಾಗ್ ವೆಂಕಟ್ ನಿರ್ದೇಶನದ ಮೊದಲ ಸಿನಿಮಾ. ಮೂಲತಃ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ನಾಗ್ ವೆಂಕಟ್ ಈಗೊಂದಷ್ಟು ವರ್ಷಗಳ ಹಿಂದೆಯೇ ಪೂರ್ಣಪ್ರಮಾಣದಲ್ಲಿ ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಈವರೆಗೂ ಸಾಕಷ್ಟು ಕಿರು ಚಿತ್ರಗಳ ಮೂಲಕ ಪರೀಕ್ಷೆಗೊಡ್ಡಿಕೊಂಡಿದ್ದ ನಾಗ್ ವೆಂಕಟ್, ಕೈಲಾಸ ಕಾಸಿದ್ರೆ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ.

     

    ತಿಂಗಳೊಪ್ಪತ್ತಿನಲ್ಲಿ ಈ ಸಿನಿಮಾವನ್ನು ತೆರೆಗಾಣಿಸಲು ತಯಾರಿ ನಡೆಯುತ್ತಿದೆ. ಇದೇ ತಿಂಗಳ 24ರಂದು ಟ್ರೈಲರ್ ಬಿಡುಗಡೆಗೊಳ್ಳಲಿದೆ. ತಾರಕಾಸುರ ನಂತರ ರವಿ ಮತ್ತೊಂದು ವಿಶೇಷವಾದ ಪಾತ್ರದ ಮೂಲಕ ಪ್ರೇಕ್ಷಕರನ್ನು ಅಚ್ಚರಿಗೀಡು ಮಾಡಲಿದ್ದಾರಂತೆ. ಈಗ ಬಿಡುಗಡೆಯಾಗಿರೋ ನಶೆ ಹಾಡಿನ ಪ್ರಭೆಯಲ್ಲಿಯೇ, ಪ್ರೇಮಿಗಳ ದಿನದಂದು ಚೆಂದದ್ದೊಂದು ಹಾಡು ಬಿಡುಗಡೆಗೊಳಿಸಲು ಚಿತ್ರತಂಡ ತೀರ್ಮಾನಿಸಿದೆ. ವಿಶೇಷವೆಂದರೆ, ಈ ಚಿತ್ರದಲ್ಲಿ ಕ್ರೈಂ ಹಾಗೂ ಕಾಮಿಡಿ ಮಿಳಿತವಾಗಿರೋದರಿಂದಾಗಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ಕೂಡಾ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ರವಿ ಗೆ ಜೋಡಿಯಾಗಿ ಸುಕನ್ಯಾ ನಟಿಸಿದ್ದಾರೆ. ಶಿವಾಜಿ ಸುರತ್ಕಲ್ ಚಿತ್ರದ ಸಣ್ಣ ಪಾತ್ರದಲ್ಲಿ ನಟಿಸಿದ್ದ ಸುಕನ್ಯಾ ಈ ಮೂಲಕ ನಾಯಕಿಯಾಗಿದ್ದಾರೆ. ವಾಸಿಕ್ ಅಲ್ಸಾದ್ ನಿರ್ಮಾಣ ಮಾಡಿರುವ ಕೈಲಾಸ ಚಿತ್ರಕ್ಕೆ ಆಶಿಕ್ ಅರುಣ್ ಸಂಗೀತ, ತ್ಯಾಗರಾಜನ್ ಸಂಕಲನ, ಲೇಖಕ್ ಎಂ ಸಾಹಿತ್ಯ, ವಿನೋದ್ ರಾಜೇಂದ್ರನ್ ಛಾಯಾಗ್ರಹಣ, ಧನಂಜಯ ಬಿ ನೃತ್ಯ ನಿರ್ದೇಶನವಿದೆ.

  • ನಿತ್ಯಾನಂದನ ಕೈಲಾಸಕ್ಕೆ ಮೂರು ದಿನದ ವೀಸಾ ಆಫರ್

    ನಿತ್ಯಾನಂದನ ಕೈಲಾಸಕ್ಕೆ ಮೂರು ದಿನದ ವೀಸಾ ಆಫರ್

    ನವದೆಹಲಿ: ಸ್ವಯಂಘೋಷಿತ ದೇವಮಾನದ ನಿತ್ಯಾನಂದನ ಸ್ವಯಂ ಕೈಲಾಸ ದೇಶಕ್ಕೆ ವೀಸಾ ಆಫರ್ ನೀಡಿದ್ದಾನೆ. ಈ ಕುರಿತ ನಿತ್ಯಾನಂದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾನೆ.

    ಮೂರು ದಿನದ ವೀಸಾ: ಕೈಲಾಸಕ್ಕೆ ಮೂರು ದಿನದ ವೀಸಾ ನೀಡಲಾಗುವುದು. ನಿಮ್ಮ ಸ್ವಂತ ಹಣದಲ್ಲಿ ಮೊದಲು ಆಸ್ಟ್ರೇಲಿಯಾಗೆ ಬರಬೇಕು. ಅಲ್ಲಿಂದ ಕೈಲಾಸ ದೇಶದ ಚಾರ್ಟೆಡ್ ಫ್ಲೈಟ್ ಗರುಡ ನಿಮ್ಮನ್ನ ಇಲ್ಲಿಗೆ ಕರೆತರಲಾಗುವುದು. ಮೂರು ದಿನದಲ್ಲಿ ಒಂದು ಬಾರಿ ಅಂದ್ರೆ 10 ನಿಮಿಷ ನನ್ನ ದರ್ಶನ ನಿಮಗೆ ಸಿಗಲಿದೆ. ಈ ವೇಳೆ ನಿಮ್ಮ ಕಷ್ಟಗಳನ್ನ ನನ್ನ ಬಳಿ ಹೇಳಿಕೊಳ್ಳಬಹುದು. ಮೂರು ದಿನಕ್ಕಿಂತ ಹೆಚ್ಚು ಇಲ್ಲಿರಲು ಯಾರಿಗೂ ಅವಕಾಶವಿಲ್ಲ ಎಂದು ನಿತ್ಯಾನಂದ ವೀಡಿಯೋದಲ್ಲಿ ಹೇಳಿಕೊಂಡಿದ್ದಾನೆ.

    ಕೈಲಾಸಕ್ಕೆ ಭೇಟಿ ನೀಡುವವರು ವೀಸಾ ಅಪ್ಲೈ ಮಾಡಲು ಲಿಂಕ್ (shrikailasa.org/e-passport) ಸಹ ನೀಡಿದ್ದಾನೆ. ಇಲ್ಲಿಗೆ ಬಂದ ಮೇಲೆ ಇನ್ನಷ್ಟು ದಿನ ಇರುತ್ತೇನೆ ಎಂದು ಹಠ ಹಿಡಿಯುವಂತಿಲ್ಲ. ಕೈಲಾಸದಲ್ಲಿ ನಿಮಗೆ ಆಹಾರ, ವಸತಿ ವ್ಯವಸ್ಥೆಯನ್ನ ಉಚಿತವಾಗಿ ಕಲ್ಪಿಸಲಾಗುವುದು ಎಂದು ನಿತ್ಯಾನಂದ ಹೇಳಿದ್ದಾರೆ.

    ಗಣೇಶ ಚತುರ್ಥಿಯಂದು ನಿತ್ಯಾನಂದ ತನ್ನ ಕೈಲಾಸ ದೇಶದ ರಿಸರ್ವ್ ಬ್ಯಾಂಕ್ ಘೋಷಿಸಿದ್ದನು. ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಈಕ್ವೆಡಾರ್ ನ ಸಮುದ್ರದ ಮಧ್ಯದಲ್ಲಿರುವ ಪುಟ್ಟ ದ್ವೀಪದಲ್ಲಿ ಅತ್ಯಾಚಾರ ಆರೋಪಿ ನಿತ್ಯಾನಂದ ತನ್ನದೇ ಕೈಲಾಸ ದೇಶದ ರಿಸರ್ವ್ ಬ್ಯಾಂಕ್‍ನ್ನು ತನ್ನ ಸಹಚರರೊಂದಿಗೆ ಲಾಂಚ್ ಮಾಡಿದ್ದನು.

    ನಾನು ಹಿಂದೂ ಧರ್ಮದ ಸುಧಾರಕನಲ್ಲ, ನಾನು ಪುನರುಜ್ಜೀವನಗೊಳಿಸುವವನು ಎಂದು ಹೇಳಿಕೊಂಡಿದ್ದನು. ಅಲ್ಲದೆ ಕರೆನ್ಸಿ ಬಿಡುಗಡೆ ಮಾಡಿದ ಕುರಿತ ಫೋಟೋಗಳನ್ನು ಫೇಸ್ಬುಕ್‍ನಲ್ಲಿ ಹಂಚಿಕೊಂಡಿರುವ ನಿತ್ಯಾನಂದ, ಗಣೇಶ ಚತುರ್ಥಿಯ ಅಂಗವಾಗಿ ರಿಸರ್ವ್ ಬ್ಯಾಂಕ್ ಆಫ್ ಕೈಲಾಸದ ಕರೆನ್ಸಿಯನ್ನು ಗಣೇಶನ ಹಾಗೂ ಪರಮಶಿವ ಮತ್ತು ಗುರು ಹಿಂದೂ ಧರ್ಮದ ಪ್ರಮುಖ, ಜಗದ್ಗುರು ಮಹಾಸನ್ನಿಧಾನಂ, ದೇವರ ಪ್ರತೀಕವಾಗಿರುವ ಭಗವಾನ್ ನಿತ್ಯಾನಂದ ಪರಮ ಶಿವಂ ಪಾದಗಳಿಗೆ ಅರ್ಪಿಸಲಾಗುತ್ತಿದೆ ಎಂದು ಪೋಸ್ಟ್ ಮಾಡಿದ್ದನು.

    ಕೈಲಾಸ ಹಾಗೂ ಅದರ ಸನ್ಯಾಸಿಗಳ ತಂಡ 100ಕ್ಕೂ ಹೆಚ್ಚು ಪುಸ್ತಕ, 360 ಲೇಖನಗಳು ಹಾಗೂ ಸಂಶೋಧನಾ ಪ್ರಬಂಧಗಳನ್ನು ಒಳಗೊಂಡ ಹಿಂದೂ ಆರ್ಥಿಕ ನೀತಿಗಳ ಬಗ್ಗೆ ವ್ಯಾಪಕ ಸಂಶೋಧನೆ ಮತ್ತು ಅಧ್ಯಯನ ನಡೆಸಿ, ಕರೆನ್ಸಿ ತಯಾರಿಸಲಾಗಿದೆ ಎಂದು ಪೋಸ್ಟ್ ನಲ್ಲಿ ಬರೆಯಲಾಗಿತ್ತು. ಅಲ್ಲದೆ ನಿತ್ಯಾನಂದ ದೈವಿಕ ಪಾವಿತ್ರ್ಯತೆ ಹಾಗೂ ನೇರ ಭಾಷಣಗಳ ಮೂಲಕ ಕರೆನ್ಸಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದನು.

    ಈ ಆರ್ಥಿಕ ನೀತಿಯು ಆಂತರಿಕ ಕರೆನ್ಸಿ ವಿನಿಮಯ ಹಾಗೂ ಬಾಹ್ಯ ವಿಶ್ವ ಕರೆನ್ಸಿ ವಿನಿಮಯವನ್ನು ಹೇಗೆ ಮಾಡಬೇಕು ಎಂಬುದನ್ನು ತಿಳಿಸುತ್ತದೆ. ಅಲ್ಲದೆ ಕೈಲಾಸ ದೇಶವು ಮತ್ತೊಂದು ರಾಷ್ಟ್ರದೊಂದಿಗೆ ಎಂಒಯುಗೆ ಸಹಿ ಹಾಕಿದ್ದು, ನಮ್ಮ ರಿಸರ್ವ್ ಬ್ಯಾಂಕ್‍ಗೆ ಆತಿಥ್ಯವಹಿಸಲಿದೆ ಎಂದು ತಿಳಿಸಿದ್ದಾನೆ. ಆದರೆ ಯಾವ ದೇಶ ಎಂಬುದನ್ನು ನಿತ್ಯಾನಂದ ಹೇಳಿಲ್ಲ.

    ನಿತ್ಯಾನಂದ ತನ್ನ ದೇಶಕ್ಕೆ ಕೈಲಾಸ ಎಂದು ನಾಮಕರಣ ಮಾಡಿದ್ದು, ಇದಕ್ಕೆ ತನ್ನನ್ನೇ ಪ್ರಧಾನಿಯಾಗಿ ಘೋಷಿಸಿಕೊಂಡಿದ್ದಾನೆ. ಕಳೆದ ವರ್ಷ ನವೆಂಬರ್ ನಲ್ಲಿ ಇಂತಹದ್ದೊಂದು ದೇಶ ಕಟ್ಟುತ್ತಿರುವ ಕುರಿತು ನಿತ್ಯಾನಂದ ಮಾಹಿತಿ ನೀಡಿದ್ದ. ನಿತ್ಯಾನಂದನ ವಿರುದ್ಧ 50 ಕ್ಕೂ ಹೆಚ್ಚು ನ್ಯಾಯಾಲಯಗಳಲ್ಲಿ ಪ್ರಕರಣಗಳಿದ್ದು, ವಿಚಾರಣೆಗೆ ಹಾಜರಾಗದೆ ಇಕ್ವಿಡಾರ್ ಗೆ ಪರಾರಿಯಾಗಿದ್ದಾನೆ.

    ಕೈಲಾಸ ಎಲ್ಲಿದೆ ಎಂಬುದು ನಿಖರವಾಗಿ ತಿಳಿದಿಲ್ಲ. ಆದರೆ ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡುತ್ತಿದ್ದು, ಈಕ್ವೆಡಾರ್ ನ ಸಮುದ್ರದ ಮಧ್ಯದಲ್ಲಿರುವ ಪುಟ್ಟ ದ್ವೀಪವನ್ನು ನಿತ್ಯಾನಂದ ಖರೀದಿಸಿ ಅದಕ್ಕೆ ಕೈಲಾಸ ಎಂದು ನಾಮಕರಣ ಮಾಡಿದ್ದಾನೆ ಎನ್ನಲಾಗುತ್ತಿದೆ. ಆದರೆ ಈಕ್ವೆಡಾರ್ ಇದನ್ನು ಅಲ್ಲಗಳೆದಿದ್ದು, ಅಂತಹ ಯಾವುದೇ ವ್ಯಕ್ತಿಗೆ ದ್ವೀಪವನ್ನು ನೀಡಿಲ್ಲ ಎಂದು ಹೇಳಿದೆ.