Tag: Kaiga nuclear power plant

  • ಕೈಗಾ ಅಣುಸ್ಥಾವರದ ವಿಕಿರಣದಿಂದ ಜನರಲ್ಲಿ ಕ್ಯಾನ್ಸರ್ ಪತ್ತೆಯಾಗಿಲ್ಲ: ಅಣು ವಿದ್ಯುತ್ ಸ್ಥಾವರದ ನಿರ್ದೇಶಕ ಸ್ಪಷ್ಟನೆ

    ಕೈಗಾ ಅಣುಸ್ಥಾವರದ ವಿಕಿರಣದಿಂದ ಜನರಲ್ಲಿ ಕ್ಯಾನ್ಸರ್ ಪತ್ತೆಯಾಗಿಲ್ಲ: ಅಣು ವಿದ್ಯುತ್ ಸ್ಥಾವರದ ನಿರ್ದೇಶಕ ಸ್ಪಷ್ಟನೆ

    ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಕೈಗಾದಲ್ಲಿ ಸ್ಥಾಪನೆಯಾಗಿರುವ ಕೈಗಾ ಅಣು ವಿದ್ಯುತ್ ಸ್ಥಾವರದಿಂದ (Kaiga Nuclear Power Plant) ಹೊರಸೂಸುವ ವಿಕಿರಣದಿಂದ ಕ್ಯಾನ್ಸರ್ ಹೆಚ್ಚಾಗಿರುವುದು ಪತ್ತೆಯಾಗಿಲ್ಲ ಎಂದು ಕೈಗಾ ಅಣುಸ್ಥಾವರದ ಬಿ.ವಿನೋದ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

    ಕೈಗಾದಲ್ಲಿ ಮಾಧ್ಯಮಗಳ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೈಗಾ ಅಣು ಸ್ಥಾವರದಿಂದ ಅರಣ್ಯ ನಾಶವಾಗಿದೆ. ಕ್ಯಾನ್ಸರ್ ಪ್ರಮಾಣ ಹೆಚ್ಚಾಗಿದೆ ಎಂದು ವಿರೋಧಗಳು ವ್ಯಕ್ತವಾಗುತ್ತಿದೆ. ಆದರೆ, ಈವರೆಗೆ ನಡೆಸಿದ ಸಂಶೋಧನೆಯಲ್ಲಿ ಅಣು ವಿಕಿರಣದಿಂದಲೇ ಕ್ಯಾನ್ಸರ್ ಪತ್ತೆಯಾಗಿದೆ ಎಂಬುದು ದೃಢಪಡಿಸಿಲ್ಲ. ಕೈಗಾದ 1 ರಿಂದ 4ನೇ ಅಣು ವಿದ್ಯುತ್ ಸ್ಥಾವರಗಳ ವಿದ್ಯುತ್‌ ಉತ್ಪಾದನೆ ಪ್ರಕ್ರಿಯೆಯ ವೇಳೆ ಸ್ಥಾವರಗಳ ತಾಪಮಾನ ನಿಯಂತ್ರಿಸಲು ಬಳಕೆಯಾಗುವ ನೀರನ್ನು ಶುದ್ದೀಕರಿಸಿ, ವಿಕಿರಣಕಾರಕ ಅಂಶಗಳಿಲ್ಲದಂತೆ ಶುದ್ದೀಕರಿಸಿದ ಬಳಿಕವೇ ನದಿಗೆ ಬಿಡಲಾಗುತ್ತಿದೆ. ಇದೇ ನದಿಯ ನೀರನ್ನು ಕೈಗಾ ಟೌನ್‌ಶಿಪ್‌ಗೆ ಬಳಕೆ ಮಾಡುತ್ತಿದ್ದೇವೆ. ಮೂರು ದಶಕಗಳಿಂದ ಇದೇ ನೀರನ್ನು ನಾವೂ ಸೇವಿಸುತ್ತಿದ್ದೇವೆ. ನಮಗ್ಯಾರಿಗೂ ಕ್ಯಾನ್ಸರ್ ಬಂದಿಲ್ಲ. ಹೀಗೆ ಬರಲು ಸಾಧ್ಯವಿಲ್ಲ. ಹೊರಸೂಸುವ ವಿಕಿರಣವು ಕೇವಲ 1% ಮಾತ್ರ ಇದ್ದು, ಇದು ನಾವು ತೆಗೆದುಕೊಳ್ಳುವ ನೈಸರ್ಗಿಕ ಆಹಾರದಲ್ಲಿ ಇರುವ ವಿಕಿರಣದ ಅಂಶಕ್ಕಿಂತ ಕಡಿಮೆ ಇದೆ ಎಂದರು. ಇದನ್ನೂ ಓದಿ: ಪ್ರಸಾದ್‌ ಯೋಜನೆಯಡಿ ಕೊಲ್ಲೂರು ದೇವಸ್ಥಾನ ಸೇರಿಸಿ: ನಿರ್ಮಲಾ ಸೀತಾರಾಮನ್‌ಗೆ ಬಿ.ವೈ.ರಾಘವೇಂದ್ರ ಮನವಿ

    ಉದ್ಯೋಗದಲ್ಲಿ ಸ್ಥಳೀಯರಿಗೆ ಅನ್ಯಾಯ ಆಗುತ್ತಿದೆ ಎಂಬುದು ಅನಗತ್ಯ ಆರೋಪ. ಕೈಗಾ ಅಣು ವಿದ್ಯುತ್ ಉತ್ಪಾದನಾ ಘಟಕದಲ್ಲಿ 995 ಕಾಯಂ ನೌಕರರ ಪೈಕಿ 483 ಮಂದಿ ಕರ್ನಾಟಕದವರು. 2,057 ಹೊರಗುತ್ತಿಗೆ ನೌಕರರ ಪೈಕಿ 1,062 ಇದೇ ಜಿಲ್ಲೆಯವರಿದ್ದಾರೆ. ನಿಗಮಕ್ಕೆ ಕಾಯಂ ನೌಕರರ ಆಯ್ಕೆಗೆ ಕೇಂದ್ರ ಕಚೇರಿಯಿಂದಲೇ ಪರೀಕ್ಷೆ ನಡೆಸಲಾಗುತ್ತದೆ. ಸ್ಥಳೀಯವಾಗಿ ಸೌಕರ್ಯಗಳಿಲ್ಲದ ಕಾರಣಕ್ಕೆ ಹೊರಜಿಲ್ಲೆಯಲ್ಲಿ ಪರೀಕ್ಷೆ ನಡೆಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.

    ಕೈಗಾದ 1 ರಿಂದ 4ನೇ ಅಣು ಸ್ಥಾವರ ಘಟಕಗಳು ಈವರೆಗೆ 1.3 ಲಕ್ಷ ಮಿಲಿಯನ್ ಯುನಿಟ್ ವಿದ್ಯುತ್‌ ಉತ್ಪಾದಿಸಿವೆ. ಕಲ್ಲಿದ್ದಲು, ಉಷ್ಣ ವಿದ್ಯುತ್ ಸ್ಥಾವರಗಳಿಂದ ಪರಿಸರಕ್ಕೆ ಹಾನಿ ಹೆಚ್ಚು. ಅಣು ಸ್ಥಾವರಗಳಿಂದ ಪರಿಸರಕ್ಕೆ ಅಷ್ಟೇನೂ ಹಾನಿ ಇಲ್ಲ. ಹೀಗಾಗಿ, ಗರಿಷ್ಠಮಟ್ಟದ ವಿದ್ಯುತ್‌ ಉತ್ಪಾದಿಸುವ ಮೂಲಕ ಪರಿಸರಕ್ಕೆ ಹಾನಿಯುಂಟಾಗುವ ಪ್ರಮಾಣವನ್ನೂ ಕೈಗಾದ ಘಟಕಗಳು ನಿಯಂತ್ರಿಸಿವೆ. ಅರಣ್ಯ ವೃದ್ಧಿಗಾಗಿ ಹಣ ವಿನಿಯೋಗ ಮಾಡಲಾಗುತ್ತಿದೆ. ಕೈಗಾ ಅಣು ವಿದ್ಯುತ್ ಉತ್ಪಾದನಾ ಘಟಕವು ಸಾಮಾಜಿಕ ಜವಾಬ್ದಾರಿ ನಿಧಿ (ಸಿಎಸ್‌ಆರ್) ಅಡಿಯಲ್ಲಿ ಕೈಗಾದಿಂದ 16 ಕಿ.ಮೀ ವ್ಯಾಪ್ತಿಯ ಹಳ್ಳಿಗಳಲ್ಲಿ ಆರೋಗ್ಯ ಶಿಕ್ಷಣ ಸ್ವಚ್ಛತೆ ಕೌಶಲಾಭಿವೃದ್ಧಿ ಚಟುವಟಿಕೆಗೆ 119 ಕೋಟಿಯಷ್ಟು ಮೊತ್ತ ವಿನಿಯೋಗಿಸಿದೆ. ಗ್ರಾಮೀಣ ಅಭಿವೃದ್ಧಿಗೆ ಅವುಗಳಲ್ಲಿ 110 ಕೋಟಿಯಷ್ಟು ವಿನಿಯೋಗಿಸಲಾಗಿದ್ದು, ಶಾಲೆ ಕಟ್ಟಡ ಸೇತುವೆಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಜನೌಷಧಿ ಕೇಂದ್ರಗಳನ್ನು ಮುಚ್ಚಿಸಿಲ್ಲ, ಸರ್ಕಾರಿ ಆಸ್ಪತ್ರೆ ಆವರಣಗಳಲ್ಲಿ ಮಾತ್ರ ನಿರ್ಬಂಧಿಸಲು ನಿರ್ಧಾರ: ದಿನೇಶ್ ಗುಂಡೂರಾವ್

  • ಕೈಗಾದಲ್ಲಿ ಉದ್ಯೋಗ ಮಾಹಿತಿ ನೀಡದೇ ಕನ್ನಡಿಗರಿಗೆ ವಂಚನೆ!

    ಕೈಗಾದಲ್ಲಿ ಉದ್ಯೋಗ ಮಾಹಿತಿ ನೀಡದೇ ಕನ್ನಡಿಗರಿಗೆ ವಂಚನೆ!

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಹಲವು ಹುದ್ದೆಗಳಿಗೆ ಅರ್ಜಿ ಕರೆದಿದೆ. ಆದರೆ, ಈ ವಿಷಯ ಕನ್ನಡಿಗರಿಗೆ ತಿಳಿಯದಂತೆ ಮುಚ್ಚಿಟ್ಟು ಕೇರಳ, ತಮಿಳುನಾಡು, ಮಹರಾಷ್ಟ್ರ, ಉತ್ತರ ಪ್ರದೇಶ ಸೇರಿದಂತೆ ಬೇರೆ ರಾಜ್ಯದ ಪತ್ರಿಕೆಯಲ್ಲಿ ಮಾತ್ರ ಇದರ ಬಗ್ಗೆ ಪ್ರಕಟಣೆ ಹೊರಡಿಸಲಾಗಿದೆ. ಕನ್ನಡದ ಯಾವ ಮಾಧ್ಯಮದಲ್ಲೂ ಈ ವಿಷಯ ತಿಳಿಯದಂತೆ ನೋಡಿಕೊಂಡಿದ್ದು, ಈ ಮೂಲಕ ಕನ್ನಡ ನೆಲದಲ್ಲಿ ಇದ್ದರೂ ಕನ್ನಡಿಗರಿಗೆ ದ್ರೋಹ ಎಸಗಿದೆ.

    ಕೈಗಾ ಅಣುಸ್ಥಾವರದಲ್ಲಿ ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಯಿಂದ ಹಿಡಿದು ಟೆಕ್ನೀಷಿಯನ್ ವರೆಗೆ ಒಟ್ಟು 108 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಸ್ಥಳೀಯ ಜನರಿಗೆ ಹಾಗೂ ರಾಜ್ಯದ ಜನರಿಗೆ ತಿಳಿಯದಂತೆ ಇಂಗ್ಲಿಷ್, ಹಿಂದಿ, ಮಲೆಯಾಳಿ, ತಮಿಳು ಭಾಷೆಯ ಪತ್ರಿಕೆಗಳಿಗೆ ಪ್ರಕಟಣೆ ನೀಡಿದೆ.

    ಆದರೆ, ಸ್ಥಳೀಯ ಕನ್ನಡ ಪತ್ರಿಕೆಯಲ್ಲಿ ಪ್ರಕಟಣೆ ನೀಡದೇ ಸ್ಥಳೀಯರಿಗೆ ಉದ್ಯೋಗದ ಬಗ್ಗೆ ಮಾಹಿತಿ ದೊರೆಯದಂತೆ ಕೈಗಾ ಅಧಿಕಾರಿಗಳು ನೋಡಿಕೊಂಡಿದ್ದಾರೆ. ಈ ಮೂಲಕ ಕನ್ನಡ ನೆಲದಲ್ಲಿದ್ದು, ಕನ್ನಡಿಗರಿಗೇ ಅನ್ಯಾಯ ಮಾಡಲು ಹೊರಟಿದ್ದಾರೆ ಕೇಂದ್ರ ಸರ್ಕಾರ ಸ್ವಾಮ್ಯದ ಕೈಗಾ ಅಣುಸ್ಥಾವರದ ಅಧಿಕಾರಿಗಳು.

    ಕನ್ನಡ ಸಂಘಟನೆಯೇ ಇಲ್ಲದ ಕಾರವಾರ
    ಜಿಲ್ಲೆಯ ಕರಾವಳಿಯಲ್ಲಿ ಕನ್ನಡ ಸಂಘಟನೆಗಳ ಶಕ್ತಿ ಕಡಿಮೆಯಿದೆ‌. ಕಾರವಾರದಲ್ಲಿ ಕನ್ನಡ ಸಂಘಟನೆಗೆ ಶಕ್ತಿ ಇಲ್ಲ. ನೆಪಕ್ಕೆ ಮಾತ್ರ ಎನ್ನುವಂತಾಗಿದೆ. ಇನ್ನು ಸ್ಥಳೀಯ ಜನರಿಗೂ ಆಸಕ್ತಿ ಕಡಿಮೆ. ಹೀಗಾಗಿ ತಾವು ಮಾಡಿದ್ದೇ ಸರಿ ಎನ್ನುವಂತೆ ಕನ್ನಡಿಗರನ್ನು ಬಿಟ್ಟು ಉಳಿದವರಿಗೆ ಉದ್ಯೋಗ ಕೊಡಲು ಕೈಗಾ ಅಧಿಕಾರಿಗಳು ಮುಂದಾಗಿದ್ದಾರೆ.

  • ದೇಶದ ಪ್ರತಿಷ್ಠೆ ಉತ್ತುಂಗಕ್ಕೇರಿಸಿ ಹೆಸ್ರು ತಂದ ಕೈಗಾ ವಿರುದ್ಧ ಗ್ರಾಮಸ್ಥರು ಆಕ್ರೋಶ!

    ದೇಶದ ಪ್ರತಿಷ್ಠೆ ಉತ್ತುಂಗಕ್ಕೇರಿಸಿ ಹೆಸ್ರು ತಂದ ಕೈಗಾ ವಿರುದ್ಧ ಗ್ರಾಮಸ್ಥರು ಆಕ್ರೋಶ!

    ಕಾರವಾರ: ದೇಶದ ಪ್ರತಿಷ್ಠೆ ಉತ್ತುಂಗಕ್ಕೇರಿಸಿ ಕರ್ನಾಟಕಕ್ಕೂ ಹೆಸರು ತಂದ ಕೈಗಾ ಅಣು ವಿದ್ಯುತ್ ಸ್ಥಾವರದ ಸುತ್ತಮುತ್ತಲ ಗ್ರಾಮಗಳಲ್ಲಿ ಕ್ಯಾನ್ಸರ್ ಪ್ರಮಾಣ ದುಪ್ಪಟ್ಟಾಗಿದೆ ಎಂಬ ಆಘಾತಕಾರಿ ವರದಿ ಪಬ್ಲಿಕ್ ಟಿವಿಗೆ ದೊರಕಿದೆ.

    ಕೈಗಾ ಅಣುಸ್ಥಾವರದ ಸುತ್ತಮುತ್ತಲ ಗ್ರಾಮಗಳ ಜನರೀಗ, ರೇಡಿಯೇಷನ್ ಎಫೆಕ್ಟ್‍ನಿಂದಾಗಿ ಕ್ಯಾನ್ಸರ್ ನಂತಹ ಮಾರಕ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಅಣು ವಿಕಿರಣಗಳ ಅಡ್ಡ ಪರಿಣಾಮದ ಬಗ್ಗೆ ಈ ಹಿಂದೆ ಸ್ಥಳೀಯರು ಹಾಗೂ ಪರಿಸರವಾದಿಗಳು ತೀವ್ರವಾಗಿ ಪ್ರತಿಭಟನೆ ನಡೆಸಿದ್ರು.

    ಪ್ರತಿಭಟನೆಗೆ ಮಣಿದಿದ್ದ ಸರ್ಕಾರ ಹಾಗೂ ಎನ್.ಪಿ.ಸಿ.ಐ.ಎಲ್, 2010ರಲ್ಲಿ ಜಂಟಿಯಾಗಿ ಮುಂಬೈನ ಟಾಟಾ ಸ್ಮಾರಕ ಸಂಸ್ಥೆಗೆ ಸಂಶೋಧನೆ ನಡೆಸುವಂತೆ ಸೂಚಿತ್ತು. ಇದರಂತೆ 2010 ರಿಂದ 2013ರವರೆಗೆ ತಜ್ಞರ ಸಂಶೋಧನೆ ನಡೆಸಿ ವರದಿ ತಯಾರಿಸಿದೆ. ಇದರ ಪ್ರಕಾರ ಅಣುಸ್ಥಾವರ ಪ್ರಾರಂಭವಾದ ಬಳಿಕ ಶೇಕಡಾ 200ರಷ್ಟು ಕ್ಯಾನ್ಸರ್ ಪ್ರಮಾಣ ಹೆಚ್ಚಾಗಿದೆ. ಇದನ್ನೂ ಓದಿ: ವಿಶ್ವದಲ್ಲೇ ನಾಲ್ಕನೇ ಕೇಂದ್ರ -ಹೊಸ ದಾಖಲೆ ಬರೆದ ಕೈಗಾ ಅಣು ವಿದ್ಯುತ್ ಸ್ಥಾವರ

    ಕಾರವಾರ ತಾಲೂಕೊಂದರಲ್ಲೇ 316 ಜನ ಜನ ಅಣು ವಿಕಿರಣಗಳಿಂದ ಕ್ಯಾನ್ಸರ್‍ಗೆ ತುತ್ತಾಗಿದ್ದಾರೆ. ಇದರಲ್ಲಿ ಪುರುಷರು-129, ಮಹಿಳೆಯರು-187.. ಪುರುಷರಲ್ಲಿ ಬಾಯಿ, ಗಂಟಲು, ಅನ್ನನಾಳ, ಶ್ವಾಸಕೋಶ ಗಳಲ್ಲಿ ಕ್ಯಾನ್ಸರ್ ಪತ್ತೆಯಾದರೇ ಮಹಿಳೆಯರಲ್ಲಿ ಗರ್ಭಕೋಶ, ಬಾಯಿ, ಸ್ತನ ಕ್ಯಾನ್ಸರ್ ಕಂಡುಬಂದಿದ್ದು, ರೋಗಿಗಳು ಗೋವಾ ಹಾಗೂ ಕರ್ನಾಟಕದ ವಿವಿಧ ಭಾಗಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಆದ್ರೆ ಈ ಎಲ್ಲಾ ಅಂಶಗಳನ್ನು ಅಧಿಕೃತವಾಗಿ ಹೊರಹಾಕದೇ ಮುಚ್ಚಿಡಲಾಗಿದೆ. ಹೀಗಾಗಿ ಈ ಬಗ್ಗೆ ಪರಿಸರವಾದಿಗಳು ಮತ್ತು ಸುತ್ತಮುತ್ತಲ ಗ್ರಾಮಸ್ಥರು ಆತಂಕ ಹೊರಹಾಕ್ತಿದ್ದಾರೆ.