Tag: Kaiga

  • ಕೈಗಾದಲ್ಲಿ ಪ್ರತ್ಯಕ್ಷವಾದ ಹುಲಿ ಕಂಡು ಜನರಲ್ಲಿ ಆತಂಕ

    ಕೈಗಾದಲ್ಲಿ ಪ್ರತ್ಯಕ್ಷವಾದ ಹುಲಿ ಕಂಡು ಜನರಲ್ಲಿ ಆತಂಕ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೈಗಾ -ಜೋಯಿಡಾ ಭಾಗಕ್ಕೆ ತೆರಳುವ ರಸ್ತೆಯಲ್ಲಿ ಹುಲಿ ಪ್ರತ್ಯಕ್ಷವಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

    ಕೈಗಾದಿಂದ ಜೋಯಿಡಾ ಮಾರ್ಗವಾಗಿ ತೆರಳುತಿದ್ದ ಕೈಗಾ ಉದ್ಯೋಗಿ ಯೊಬ್ಬರಿಗೆ ರಸ್ತೆಯಲ್ಲಿ ಹುಲಿ ಕಾಣಿಸಿಕೊಂಡಿದ್ದು ಹುಲಿಯ ವೀಡಿಯೋವನ್ನು ಚಿತ್ರಿಸಿ ಸ್ಥಳೀಯರಾದ ಗೋಪಾಲಕೃಷ್ಣ ಎಂಬುವವರಿಗೆ ನೀಡಿದ್ದಾರೆ.

    ಅದೃಷ್ಟವಶಾತ್ ಕಾರಿನಲ್ಲಿ ಇದ್ದಿದ್ದರಿಂದ ಉದ್ಯೋಗಿಗೆ ಯಾವುದೇ ತೊಂದರೆಯಾಗಲಿಲ್ಲ. ಹುಲಿಯು ಕೈಗಾ ರಸ್ತೆ ಭಾಗದಲ್ಲಿ ಹಲವು ಕಡೆ ಓಡಾಡುತಿದ್ದು, ಸ್ಥಳೀಯ ಜನರಿಗೆ ಕಾಣಿಸಿಕೊಂಡಿದೆ. ಹುಲಿಯ ಸಂಚಾರದ ಬಗ್ಗೆ ಕಾರವಾರದ ಅರಣ್ಯ ಅಧಿಕಾರಿಗೆ ಮಾಹಿತಿ ನೀಡಲಾಗಿದ್ದು, ಕಳೆದ ಆರು ತಿಂಗಳ ಹಿಂದೆ ಕದ್ರಾ ಜಲಾಶಯದ ಬಳಿ ಈ ಹುಲಿ ಕಾಣಿಸಿಕೊಂಡಿದ್ದು ನರಿಯೊಂದನ್ನು ಬೇಟೆಯಾಡಿ ತೆರಳಿತ್ತು. ಇದೀಗ ಕೈಗಾ ಭಾಗದಲ್ಲಿ ಹುಲಿ ಕಾಣಿಸಿಕೊಂಡಿದ್ದು ಜನರಲ್ಲಿ ಆತಂಕ ಮೂಡಿಸಿದೆ.

  • ತಪಾಸಣೆ ಮಾಡದೇ ಕೈಗಾ ಪ್ರವೇಶಕ್ಕೆ ಹೊರರಾಜ್ಯದವರಿಗೆ ಅನುಮತಿ – 26 ಗ್ರಾ.ಪ ಸದಸ್ಯರಿಂದ ರಾಜೀನಾಮೆ

    ತಪಾಸಣೆ ಮಾಡದೇ ಕೈಗಾ ಪ್ರವೇಶಕ್ಕೆ ಹೊರರಾಜ್ಯದವರಿಗೆ ಅನುಮತಿ – 26 ಗ್ರಾ.ಪ ಸದಸ್ಯರಿಂದ ರಾಜೀನಾಮೆ

    ಕಾರವಾರ: ಲಾಕ್‍ಡೌನ್ ನಡುವೆಯೇ ಕೈಗಾ ಅಣು ಸ್ಥಾವರಕ್ಕೆ ಹೊರರಾಜ್ಯದ ಕೆಲಸಗಾರರಿಗೆ ತಪಾಸಣೆ ಮಾಡದೇ ಕೆಲಸ ನಿರ್ವಹಿಸಲು ಪ್ರವೇಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಇದನ್ನು ಖಂಡಿಸಿ ಕಾರವಾರ ತಾಲೂಕಿನ ಮಲ್ಲಾಪುರ ಗ್ರಾಮ ಪಂಚಾಯ್ತಿಯ 26 ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.

    ಅನುಮತಿ ಇಲ್ಲದಿದ್ದರೂ ಕೈಗಾ ಅಣು ವಿದ್ಯುತ್ ಸ್ಥಾವರ ಪ್ರದೇಶಕ್ಕೆ ಉತ್ತರಾಖಂಡ್ ರಾಜ್ಯದ ಕೆಲಸಗಾರರನ್ನು ಎರಡು ವಾಹನಗಳಲ್ಲಿ ಚಾಲಕರ ಸಹಿತ ಎಂಟು ಮಂದಿಯನ್ನು ಕರೆಸಲಾಗಿತ್ತು. ಅಲ್ಲದೇ ಅವರಿಗೆ ಯಾವುದೇ ವೈದ್ಯಕೀಯ ತಪಾಸಣೆ ಮಾಡದೇ ಕೈಗಾ ಅಣು ಸ್ಥಾವರದ ಒಳಗಡೆ ಹೋಗಲು ಅವಕಾಶ ನೀಡಲಾಗಿತ್ತು. ಹೀಗಾಗಿ ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯ್ತಿ ಸದಸ್ಯರನ್ನೊಳಗೊಂಡ ಟಾಸ್ಕ್ ಪೋರ್ಸ್ ಸಮಿತಿ ಜಿಲ್ಲಾಡಳಿತಕ್ಕೆ ದೂರು ನೀಡಿ, ಹೊರ ರಾಜ್ಯದಿಂದ ಬಂದ ಕೆಲಸಗಾರರ ವೈದ್ಯಕೀಯ ತಪಾಸಣೆ ಮಾಡುವಂತೆ ಮನವಿ ಮಾಡಿತ್ತು.

    ಆದರೇ ಈ ಮನವಿಗೆ ಅಧಿಕಾರಿಗಳು ಸ್ಪಂದಿಸದೇ ಸ್ಥಳೀಯರಿಗೊಂದು ನ್ಯಾಯ ಹೊರ ರಾಜ್ಯದವರಿಗೊಂದು ನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿ, ಅಧಿಕಾರಿಗಳ ತಾರತಮ್ಯಕ್ಕೆ ಕಾರವಾರದ ಮಲ್ಲಾಪುರ ಗ್ರಾಮ ಪಂಚಾಯ್ತಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾಗಿ 26 ಜನ ಗ್ರಾಮ ಪಂಚಾಯ್ತಿ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಕೈಗಾ ಘಟಕ ನಿರ್ಮಾಣಕ್ಕೆ ವಿರೋಧಿಸಿ ಕೇಂದ್ರಕ್ಕೆ ಖಡಕ್ ಸಂದೇಶ ಕೊಟ್ಟಿದ್ದ ಶ್ರೀಗಳು

    ಕೈಗಾ ಘಟಕ ನಿರ್ಮಾಣಕ್ಕೆ ವಿರೋಧಿಸಿ ಕೇಂದ್ರಕ್ಕೆ ಖಡಕ್ ಸಂದೇಶ ಕೊಟ್ಟಿದ್ದ ಶ್ರೀಗಳು

    ಕಾರವಾರ: ಶತಮಾನದ ದಾರ್ಶನಿಕ ಸಂತ ಪೇಜಾರವ ಶ್ರೀಗಳು ಅಸ್ತಂಗತರಾಗಿರುವುದಕ್ಕೆ ಎಲ್ಲೆಡೆ ಶೋಕ ವ್ಯಕ್ತವಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಅಪಾರ ಭಕ್ತವೃಂದ ಹೊಂದಿದ್ದ ಅವರು ಜಿಲ್ಲೆಯ ಜನರು ಮತ್ತು ಇಲ್ಲಿನ ಮಠ ಮಂದಿರಗಳ ಜೊತೆಯಲ್ಲಿ ಸದಾ ಓಡನಾಟವನ್ನೂ ಸಹ ಶ್ರೀಗಳು ಹೊಂದಿದ್ದರು.

    ಕೈಗಾ ಹೋರಾಟ:
    ಉತ್ತರ ಕನ್ನಡ ಜಿಲ್ಲೆಗೆ ಪೇಜಾವರ ಶ್ರೀಗಳು ಕೈಗಾ ವಿಚಾರದಲ್ಲಿ ಬಹುದೊಡ್ಡ ಬೆಂಬಲ ನೀಡಿದ್ದರು. ಪರಿಸರ ಹೋರಾಟದಲ್ಲಿ ಮೊದಲಿನಿಂದಲೂ ತಮ್ಮನ್ನು ತಾವು ತೊಡಗಿಸಿಕೊಂಡು ಬಂದಿದ್ದರು. ಕೈಗಾದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ 5 ಮತ್ತು 6ನೇ ಘಟಕಕ್ಕೆ ಶ್ರೀಗಳು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ಇತ್ತೀಚಿಗೆ ನಡೆದ ಕೈಗಾ ವಿರೋಧಿ ಸಭೆಯಲ್ಲೂ ಪಾಲ್ಗೊಂಡು ಕೇಂದ್ರಕ್ಕೆ ನೇರವಾದ ಸಂದೇಶವನ್ನು ಶ್ರೀಗಳು ರವಾನಿಸಿದ್ದರು. ಅದಕ್ಕಾಗಿ ತಾವು ಪ್ರಾಣ ಕೊಡಲೂ ಸಿದ್ಧ ಎಂದು ಹೇಳಿದ್ದರು. ಇದನ್ನೂ ಓದಿ: ದೆಹಲಿಯ ಕೊರೆಯುವ ಚಳಿ ನಡುವೆ ಪೇಜಾವರ ಶ್ರೀಗಳ ಪೂಜೆ

    ಜಿಲ್ಲೆಯ ಶಿರಸಿ ತಾಲೂಕಿನ ವಾದಿರಾಜ ಮಠ ಉಡುಪಿಯ ಅಷ್ಟ ಮಠಗಳಲ್ಲಿ ಒಂದಾಗಿದೆ. ಉಡುಪಿಯಲ್ಲಿ ಮಠವನ್ನು ಹೊಂದಿದ್ದರೂ ಸೋಂದಾದಲ್ಲಿ ವಾದಿರಾಜ ಮಠದ ಮೂಲ ಮಠವಿದೆ. ಶ್ರೀಗಳೂ ಸಹ ಅಲ್ಲೆ ಇರುವ ಕಾರಣ ಪೇಜಾವರ ಶ್ರೀಗಳು ಸಾಕಷ್ಟು ಬಾರಿ ಅಲ್ಲಿಗೆ ಭೇಟಿ ನೀಡಿದ್ದರು. ಅಲ್ಲಿ ಪೂಜೆ ಪುನಸ್ಕಾರಗಳನ್ನೂ ಸಹ ನೆರವೇರಿಸಿದ್ದರು. ಇದನ್ನೂ ಓದಿ: ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಸಹಾಯ ಹಸ್ತ – ದಲಿತರ ಎದುರೇ ಕೃಷ್ಣನ ಪೂಜೆ

    ಶಿರಸಿಯ ರಾಘವೇಂದ್ರ ಮಠದಲ್ಲಿ ಪೇಜಾವರ ಶ್ರೀಗಳು ತಂಗುತ್ತಿದ್ದರು. ರಾಘವೇಂದ್ರನ ಭಕ್ತರಾಗಿರುವ ಅವರು ಶಿರಸಿಯ ಮೂಲಕ ಹಾದು ಹೋಗುವ ಸಂದರ್ಭದಲ್ಲಿ ಅಲ್ಲೇ ವಾಸ ಮಾಡುತ್ತಿದ್ದರು. ಕೆಲವೊಮ್ಮೆ ಸನ್ನಿಧಿಯ ಕಟ್ಟೆಯ ಮೇಲೂ ನಿದ್ರಿಸಿದ್ದರು ಎಂದು ಮಠದ ಹಿರಿಯರು ತಿಳಿಸಿದ್ದಾರೆ.

    ಇಷ್ಟೇ ಅಲ್ಲದೆ ಸೋಂದಾ ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಗಳ ಜೊತೆಯಲ್ಲಿ ಸಾಕಷ್ಟು ಆತ್ಮೀಯತೆಯನ್ನು ಪೇಜಾವರ ಶ್ರೀಗಳು ಹೊಂದಿದ್ದರು. ಸ್ವರ್ಣವಲ್ಲಿ ಶ್ರೀಗಳ ಭಗವದ್ಗೀತಾ ಅಭಿಯಾನದಲ್ಲಿ ಅವರು ಪಾಲ್ಗೊಂಡಿದ್ದರು. ಇತ್ತೀಚಿಗೆ ಚಿತ್ರದುರ್ಗದಲ್ಲಿ ನಡೆದ ಭಗವದ್ಗೀತಾ ಅಭಿಯಾನದ ಮಹಾಸಮರ್ಪಣಾ ಕಾರ್ಯಕ್ರದಲ್ಲಿ ಪೇಜಾವರ ಶ್ರೀಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಅಲ್ಲದೇ ಉಡುಪಿಯಲ್ಲಿ ನಡೆದ ಧರ್ಮ ಸಮ್ಮೇಳನದಲ್ಲಿ ಸ್ವರ್ಣವಲ್ಲೀ ಶ್ರೀಗಳು ಭಾಗವಹಿಸಿದ್ದರು.

  • ಕೈಗಾದಿಂದ ಹೆಚ್ಚುವರಿ ವಿದ್ಯುತ್ ಉತ್ಪಾದನೆಗೆ ಅನುಮತಿ – ಕೇಂದ್ರ ಸರ್ಕಾರಕ್ಕೆ ನೋಟಿಸ್

    ಕೈಗಾದಿಂದ ಹೆಚ್ಚುವರಿ ವಿದ್ಯುತ್ ಉತ್ಪಾದನೆಗೆ ಅನುಮತಿ – ಕೇಂದ್ರ ಸರ್ಕಾರಕ್ಕೆ ನೋಟಿಸ್

    ನವದೆಹಲಿ: ಕೈಗಾ ಅಣು ವಿದ್ಯುತ್ ಸ್ಥಾವರದಿಂದ ಹೆಚ್ಚುವರಿ ಉತ್ಪಾದನೆಗೆ ಅನುಮತಿ ನೀಡಿದ ಕ್ರಮಕ್ಕೆ ಉತ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ದಕ್ಷಿಣ ವಲಯ ಹಸಿರು ನ್ಯಾಯಾಧಿಕರಣ ನೋಟಿಸ್ ನೀಡಿದೆ.

    ಇಂದು ವಿಚಾರಣೆ ನಡೆಸಿದ ದಕ್ಷಿಣ ವಲಯ ಹಸಿರು ನ್ಯಾಯಾಧಿಕರಣ, ಕೇಂದ್ರ ಅರಣ್ಯ, ಪರಿಸರ ಮತ್ತು ಹವಮಾನ ಬದಲಾವಣೆ ಇಲಾಖೆಗೆ ನೋಟಿಸ್ ನೀಡಿದೆ.

    ಕೈಗಾದಲ್ಲಿ 14 ಸಾವಿರ ಮೆಗಾ ವ್ಯಾಟ್ ಹೆಚ್ಚುವರಿ ವಿದ್ಯುತ್ ಉತ್ಪಾದನೆಗೆ ಅನುಮತಿ ನೀಡಿದ್ದ ಕೇಂದ್ರ ಸರ್ಕಾರದ ನಡೆಯನ್ನು ಪ್ರಶ್ನಿಸಿ ಸ್ಥಳೀಯ ಗ್ರಾಮಸ್ಥರು ಅರ್ಜಿ ಸಲ್ಲಿಸಿದ್ದರು. ಪಶ್ಚಿಮ ಘಟ್ಟಗಳು ಪರಿಸ್ಥಿತಿ ಸೂಕ್ಷ್ಮ ವಲಯಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಲೆಕ್ಕಿಸದೆ ಅನುಮತಿ ನೀಡಿದೆ, ಇದು ಸರಿಯಾದ ನಿರ್ಣಯ ಅಲ್ಲ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.

    ಅರ್ಜಿದಾರರ ಪರ ವಾದ ಮಂಡಸಿದ ವಕೀಲ ದೇವದತ್ ಕಾಮತ್, ಜಾವೇದೂರ್ ರೆಹಮಾನ್, ಬಿ.ಎಸ್ ಪೈ ಅನುಮತಿಯನ್ನು ರದ್ದು ಮಾಡುವಂತೆ ಮನವಿ ಮಾಡಿದರು. ವಾದ ಆಲಿಸಿದ ದಕ್ಷಿಣ ಪೀಠ ನೋಟಿಸ್ ನೀಡಿ ಜನವರಿ 28ಕ್ಕೆ ವಿಚಾರಣೆ ಮುಂದೂಡಿದೆ.

  • ಕೆಮಿಕಲ್ ಸೋರಿಕೆಯಿಂದ ಸುಟ್ಟು ಕರಕಲಾದ ಮರಗಳು

    ಕೆಮಿಕಲ್ ಸೋರಿಕೆಯಿಂದ ಸುಟ್ಟು ಕರಕಲಾದ ಮರಗಳು

    ಕಾರವಾರ: ಕೈಗಾ ಅಣು ವಿದ್ಯುತ್ ಸ್ಥಾವರಕ್ಕೆ ಕೆಮಿಕಲ್ ಸಾಗಿಸುತ್ತಿದ್ದ ಲಾರಿಯಿಂದ ಕೆಮಿಕಲ್ ಸೋರಿಕೆಯಾಗಿ ಮರಗಳು ಸುಟ್ಟು ಹೋಗಿರುವ ಘಟನೆ ಕಾಳಿ ನದಿಯ ಬಳಿ ನಡೆದಿದೆ.

    ಕೈಗಾಗೆ ಹೋಗಬೇಕಿದ್ದ ಲಾರಿ ದಾರಿ ತಪ್ಪಿ ಕದ್ರಾ ಕಡೆ ಬಂದಿದೆ. ಕೈಗಾ ಕಡೆ ಲಾರಿ ತಿರುಗಿಸುವಾಗ ಕೆಮಿಕಲ್ ಸೋರಿಕೆಯಾಗಿ ಮರಗಳು ಸುಟ್ಟು ಹೋಗಿವೆ. ಪಕ್ಕದಲ್ಲೇ ಹರಿಯುತ್ತಿದ್ದ ನೀರಿಗೂ ಕೆಮಿಕಲ್ ಸೇರಿಕೊಂಡಿದೆ. ಇದರಿಂದ ನೂರಾರು ಮೀನುಗಳು ಸಾವನ್ನಪ್ಪಿವೆ ಹಾಗೂ ಒಂದು ಎಮ್ಮೆ ಸತ್ತಿದೆ ಎಂದು ತಿಳಿದುಬಂದಿದೆ.

    ಕದ್ರಾ ಗ್ರಾಮಕ್ಕೆ ಸರಬರಾಜಾಗುವ ಕುಡಿಯುವ ನೀರು ಇದಾಗಿದ್ದು, ಮುನ್ನೇಚ್ಚರಿಕಾ ಕ್ರಮವಾಗಿ ಗ್ರಾಮಕ್ಕೆ ಎರಡು ದಿನ ಕುಡಿಯುವ ನೀರನ್ನು ಸ್ಥಗಿತಗೊಳಿಸಿದ್ದಾರೆ. ನೀರಿನ ಸ್ಯಾಂಪಲ್ ಅನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕದ್ರಾ ಗ್ರಾಮದಲ್ಲಿ ಸುಮಾರು 5 ಸಾವಿರ ಜನ ವಾಸಮಾಡುತ್ತಾರೆ. ಎರಡು ದಿನ ಕುಡಿಯುವ ನೀರನ್ನು ಸ್ಥಗಿತ ಮಾಡಿದಲ್ಲಿ ತೊಂದರೆಯಾಗುತ್ತದೆ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಎಂದು ಗ್ರಾಮಸ್ಥರು ಅಳಲನ್ನು ತೋಡಿಕೊಂಡಿದ್ದಾರೆ.

    ಕರ್ನಾಟಕ ವಿದ್ಯುತ್ ನಿಗಮ, ಎನ್ ಪಿ ಸಿ ಕಾಲೋನಿಗಳು ಇದೇ ಗ್ರಾಮದಲ್ಲಿ ಇವೆ. ಎರಡು ದಿನ ಕುಡಿಯುವ ನೀರನ್ನು ಬಂದ್ ಮಾಡಿದಲ್ಲಿ ಬೇರೆ ನೀರಿನ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಬೇಕು ಎಂದು ಜನರು ಆಗ್ರಹಿಸಿದ್ದಾರೆ.

    ಲಾರಿ ಸಿಬ್ಬಂದಿಗಳು ಸೋರಿಕೆಯನ್ನು ಸರಿಪಡಿಸಿಕೊಂಡು ಸ್ಥಳದಿಂದ ಹೊರಟು ಹೋಗಿದ್ದಾರೆ. ಈ ವಿಚಾರಕ್ಕೆ ಸಂಬಂಧ ಪಟ್ಟಂತೆ ಯಾವುದೇ ದೂರು ದಾಖಲಾಗಿಲ್ಲ.