Tag: Kagawada

  • ಒಂದೇ ತಾಲೂಕಿಗೆ 3 ಸಚಿವರು, ಅಥಣಿಯ ಸೌಭಾಗ್ಯ: ಡಿಸಿಎಂ ಲಕ್ಷ್ಮಣ ಸವದಿ

    ಒಂದೇ ತಾಲೂಕಿಗೆ 3 ಸಚಿವರು, ಅಥಣಿಯ ಸೌಭಾಗ್ಯ: ಡಿಸಿಎಂ ಲಕ್ಷ್ಮಣ ಸವದಿ

    ಬೆಳಗಾವಿ: ಅಥಣಿ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗೆ ಭಾರೀ ಅಂತರದ ಗೆಲುವು ಲಭಿಸಿದ್ದು, ಕ್ಷೇತ್ರದ ಜನರಿಗೆ ನಾನು ಧನ್ಯವಾದ ಹೇಳುತ್ತೇನೆ. ಸಿಎಂ ಬಿಎಸ್‍ವೈ ನೇತೃತ್ವದ ಸರ್ಕಾರದಲ್ಲಿ ಸ್ಥಿರ ಹಾಗೂ ಅಭಿವೃದ್ಧಿ ಪರ ಆಡಳಿತವನ್ನು ನೀಡುತ್ತೇವೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಅವರು ಹೇಳಿದರು.

    ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಡಿಸಿಎಂ ಲಕ್ಷ್ಮಣ ಸವದಿ ಅವರು, ಕ್ಷೇತ್ರದ ಗೆಲುವಿನ ಶ್ರೇಯಸ್ಸನ್ನು ಕ್ಷೇತ್ರದ ಕಾರ್ಯಕರ್ತರಿಗೆ, ಜನತೆಗೆ ನೀಡುತ್ತೇನೆ. ಬೆಳಗಾವಿಯ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಪಡೆದಿದೆ. ನಮ್ಮ ಪಕ್ಷ ಹೇಳಿರುವಂತೆ ಅಥಣಿಗೆ ಮೂರು ಸಚಿವ ಸ್ಥಾನ ಲಭಿಸಲಿದ್ದು, ಇದು ಅಥಣಿಯ ಸೌಭಾಗ್ಯ, ಇತಿಹಾಸದಲ್ಲಿ ಬರೆದಿಡುವ ದಿನ ಎಂದರು. ಅಲ್ಲದೇ ಶೀಘ್ರವೇ ಸಂಪುಟ ವಿಸ್ತರಣೆ ಆಗಲಿದ್ದು, ಮೂವರು ಸಚಿವರು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದರು.

    ಇದೇ ವೇಳೆ ಶಾಸಕ ಮಹೇಶ್ ಕುಮಟಹಳ್ಳಿ ಮಾತನಾಡಿ, ಜನರು ಆಶೀರ್ವಾದ ಮಾಡಿದ್ದು, ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ಲಕ್ಷ್ಮಣ ಸವದಿ ಅವರು 15 ವರ್ಷಗಳ ಕಾಲ ಅಥಣಿಯಲ್ಲಿ ಶಾಸಕರಾಗಿದ್ದರು. ನಾನು ಕೂಡಾ ಇಲ್ಲಿ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಸರ್ಕಾರದಲ್ಲಿ ಯಾವುದೇ ಜವಾಬ್ದಾರಿ ಕೊಟ್ಟರು ನಾನು ನಿಭಾಯಿಸುತ್ತೇನೆ. ಆದರೆ ಸಚಿವ ಸ್ಥಾನ ನೀಡುವುದು ಬಿಡುವುದು ಹೈಮಾಂಡ್ ನಿರ್ಧಾರ ಎಂದರು.

    ಬೆಳಗಾವಿಯಲ್ಲಿ ಮಾತನಾಡಿದ ಶಾಸಕ ಶ್ರೀಮಂತ ಪಾಟೀಲ ಅವರು, ನಾನು 15 ರಿಂದ 20 ಸಾವಿರ ಮತಗಳಿಂದ ಗೆಲ್ಲುತ್ತೆನೆ ಎಂಬ ನಿರೀಕ್ಷೆ ಇತ್ತು. ರಾಜು ಕಾಗೆ ಅವರು 20 ವರ್ಷದಿಂದ ಕ್ಷೇತ್ರದಲ್ಲಿ ಏನು ಮಾಡಲಿಲ್ಲ, ಅವರಿಂದ ಜನರು ಬೇಸರಗೊಂಡಿದ್ದರು. ಸದ್ಯ ಕಾಗವಾಡ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡಬೇಕಾಗಿದೆ. ನನಗೆ ಯಾವ ಸಚಿವ ಸ್ಥಾನ ನೀಡುತ್ತಾರೆ ಗೊತ್ತಿಲ್ಲ. ನನಗೆ ಬೇಕಾದ ಸಚಿವ ಸ್ಥಾನ ಕೇಳುತ್ತೇನೆ. ನನ್ನ ಕ್ಷೇತ್ರದ ಜನರು ಕೃಷಿ ಸಚಿವ ಹಾಗೂ ನೀರಾವರಿ ಸಚಿವರಾಗಿ ಎಂದು ಹೇಳುತ್ತಿದ್ದಾರೆ. ಹೈಕಮಾಂಡ್ ಯಾವ ಸಚಿವ ಸ್ಥಾನ ನೀಡುತ್ತದೆ ಕಾದು ನೋಡುತ್ತೇನೆ ಎಂದರು.

  • ಬಿಎಸ್‍ವೈ ಟಿಕೆಟ್ ಕೊಡಲ್ಲ, ನನ್ನ ದಾರಿ ನನಗೆ: ರಾಜು ಕಾಗೆ

    ಬಿಎಸ್‍ವೈ ಟಿಕೆಟ್ ಕೊಡಲ್ಲ, ನನ್ನ ದಾರಿ ನನಗೆ: ರಾಜು ಕಾಗೆ

    – ಕಾಂಗ್ರೆಸ್ ನಾಯಕರು ನನ್ನ ಜೊತೆ ಸಂಪರ್ಕದಲ್ಲಿದ್ದಾರೆ

    ಬೆಳಗಾವಿ(ಚಿಕ್ಕೋಡಿ): ಕಾಗವಾಡ ಮತ್ತು ಅಥಣಿ ಎರಡು ಮತಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಬಿಜೆಪಿಯ ಹಿರಿಯ ಮುಖಂಡ ರಾಜು ಕಾಗೆ ಅವರು ನೇರವಾಗಿಯೇ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ನಾಯಕರ ವಿರುದ್ಧ ಬಹಿರಂಗವಾಗಿ ಹರಿಹಾಯ್ದಿದ್ದಾರೆ. ಸಿಎಂ ಯಡಿಯೂರಪ್ಪನವರು ನನಗೆ ಟಿಕೆಟ್ ಕೊಡುವದಿಲ್ಲ ಎಂದು ನೇರವಾಗಿ ಹೇಳಿದ್ದಾರೆ. ಹೀಗಾಗಿ ನನ್ನ ದಾರಿ ನಾನು ನೋಡಿಕೊಳ್ಳುತ್ತೇನೆ ಎಂದು ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿದರು.

    ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಬಿಎಸ್‍ವೈ ನನಗೆ ಬಿಜೆಪಿ ಟಿಕೆಟ್ ಕೊಡಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಕಾಂಗ್ರೆಸ್ ನಾಯಕರು ನನ್ನ ಜೊತೆಯಲ್ಲಿ ನಿರಂತರ ಸಂಪರ್ಕದಲ್ಲಿದ್ದಾರೆ. ಆದರೆ ಸುಪ್ರೀಂ ಕೋರ್ಟ್ ತೀರ್ಪನ್ನು ಗಮನದಲ್ಲಿಟ್ಟುಕೊಂಡು ನಾನು ಮುಂದುವರಿಯುತ್ತೇನೆ. ಕೋರ್ಟ್ ತೀರ್ಪು ಅನರ್ಹರ ಪರವಾಗಿ ಬಂದರೆ, ನಾನು ಅಥಣಿಗೆ ಹೋಗಿ ಸ್ಪರ್ಧೆ ಮಾಡುತ್ತೇನೆ. ಅವರ ವಿರೋಧವಾಗಿ ಬಂದರೆ ನಾನು ಕಾಗವಾಡದಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ರಾಜು ಕಾಗೆ ತಿಳಿಸಿದರು.

    ಡಿಸಿಎಂ ಲಕ್ಷ್ಮಣ ಸವದಿಯವರು ನಿಮಗೆ ಅಥಣಿ ಪ್ರವೇಶಕ್ಕೆ ಅವಕಾಶ ನೀಡ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಾಜು ಕಾಗೆ, ರಾಜಕಾರಣದಲ್ಲಿ ಸ್ನೇಹಿತ, ಅಣ್ಣ, ತಮ್ಮ, ಮಾವ, ಅಳಿಯ ಯಾವುದು ಲೆಕ್ಕಕ್ಕೆ ಬರೋದಿಲ್ಲ. ನನ್ನ ಸ್ವಂತ ಸಹೋದರನೇ ನನ್ನ ವಿರುದ್ಧ ಒಂದು ಬಾರಿ ಚುಣಾವಣೆಯಲ್ಲಿ ಕೆಲಸ ಮಾಡಿದ್ದನು. ಹೀಗಾಗಿ ರಾಜಕಾರಣದಲ್ಲಿ ಯಾವುದೇ ಸಂಬಂಧ ಲೆಕ್ಕಕ್ಕೆ ಬರೋದಿಲ್ಲ. ಹೀಗಾಗಿ ಶ್ರೀಮಂತ ಪಾಟೀಲ್ ಅನರ್ಹರಾದರೆ ಕಾಗವಾಡದಲ್ಲಿ ಚುನಾವಣೆಗೆ ನಿಲ್ಲುತ್ತೇನೆ ಎಂದರು.