Tag: Kadabagere Srinivas

  • ಕಡಬಗೆರೆ ಶ್ರೀನಿವಾಸ್ ಶೂಟೌಟ್ ಕೇಸ್‍ನಲ್ಲಿ ಬಿಜೆಪಿ ಶಾಸಕನ ಕೈವಾಡ?

    ಕಡಬಗೆರೆ ಶ್ರೀನಿವಾಸ್ ಶೂಟೌಟ್ ಕೇಸ್‍ನಲ್ಲಿ ಬಿಜೆಪಿ ಶಾಸಕನ ಕೈವಾಡ?

    ಬೆಂಗಳೂರು: ಹಾಡಹಗಲೇ ಕಡಬಗೆರೆ ಶ್ರೀನಿವಾಸ್ ಮೇಲೆ ಫೈರ್ ಮಾಡಿದ್ದ ಪ್ರಕರಣದಲ್ಲಿ ಬಿಜೆಪಿ ಶಾಸಕರೊಬ್ಬರ ಕೈವಾಡವಿದೆ ಎನ್ನುವ ಶಂಕೆ ವ್ಯಕ್ತವಾಗಿದೆ.

    ಪ್ರಕರಣವನ್ನು ಕೈಗೆತ್ತಿಕೊಂಡು ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ಬಿಜೆಪಿ ಶಾಸಕರ ಆಪ್ತರಾದ ಬೂನ್ ಬಾಬು, ಸತೀಶ್ ಸೇರಿದಂತೆ ಮೂವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಅಷ್ಟೇ ಅಲ್ಲದೆ ಶಾಸಕರನ್ನು ವಿಚಾರಣೆ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ.

    ಡಿಸಿಪಿ ಗಿರೀಶ್ ಅವರ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಜೊತೆಗೆ ಶೂಟೌಟ್ ನಡೆದ ಸ್ಥಳದಲ್ಲಿ ಪಂಚನಾಮೆ ಮಾಡಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಮಹಜರು ಹಾಗೂ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯನ್ನು ಪುನರ್ ಪರಿಶೀಲನೆ ನಡೆಸಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಪರಾಧ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರು, ಎಸಿಪಿ ಬಾಲರಾಜ್ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ. ಘಟನಾ ಸ್ಥಳ ಪರಿಶೀಲನೆ ನಡೆಸಿ ಪ್ರಕರಣದ ಮಾಹಿತಿ ಕಲೆಹಾಕಲಾಗಿದೆ. ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಿದ್ದೇವೆ. ಈ ಸಂಬಂಧ ಈಗಾಗಲೇ ಕೆಲ ಆರೋಪಿಗಳನ್ನು ಕರೆದು ವಿಚಾರಣೆ ನಡೆಸಲಾಗಿದೆ. ಅವಶ್ಯವಿದ್ದಲ್ಲಿ ಶಂಕಿತರನ್ನು ಕರೆತಂದು ವಿಚಾರಣೆ ನಡೆಸುತ್ತೇವೆ ಎಂದರು.

    ಏನಿದು ಪ್ರಕರಣ?:
    ಯಲಹಂಕದ ಕೋಗಿಲು ಕ್ರಾಸ್ ಬಳಿ 2017ರ ಫೆಬ್ರವರಿ 3ರಂದು ಕಡಬಗೆರೆ ಶ್ರೀನಿವಾಸ್ ಮೇಲೆ ಗುಂಡಿನ ದಾಳಿ ನಡೆದಿತ್ತು. ದಾಳಿಯಿಂದ ಶ್ರೀನಿವಾಸ್ ದೇಹಕ್ಕೆ 3 ಗುಂಡು ಹೊಕ್ಕಿತ್ತು. ಭುಜಕ್ಕೆ ಒಂದು, ಹೊಟ್ಟೆಯ ಭಾಗಕ್ಕೆ 2 ಗುಂಡು ಹೊಕ್ಕಿತ್ತು. ಈ ಪ್ರಕರಣದ ತನಿಖೆ ತೀವ್ರಗೊಳಿಸಿದ ತನಿಖಾ ತಂಡ 15 ಕ್ಕೂ ಹೆಚ್ಚು ಅಪರಾಧ ಹಿನ್ನಲೆಯುಳ್ಳ ವ್ಯಕ್ತಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಪ್ರಮುಖವಾಗಿ ಮಾದನಾಯಕನಹಳ್ಳಿ, ನೆಲಮಂಗಲ ಹಾಗೂ ಬಸವೇಶ್ವರನಗರದ ಸುತ್ತ ಮುತ್ತಲಿನ ಹಳೇ ರೌಡಿಶೀಟರ್ ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಅಗ್ನಿ ಶ್ರೀಧರ್ ಮನೆ ಮೇಲೆ ದಾಳಿ ಹೇಗಾಯ್ತು? ಏನೇನು ಸಿಕ್ಕಿದೆ?

    ಬೆಂಗಳೂರು: ಕಾಂಗ್ರೆಸ್ ಮುಖಂಡ, ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಶೂಟೌಟ್ ಪ್ರಕರಣದಲ್ಲಿ ಇವತ್ತು ಬೆಂಗಳೂರಿನ ಅಂಡರ್ ವರ್ಲ್ಡ್ ಗಢಗಢ ನಡುಗಿದೆ.

    ಈಗಾಗಲೇ ಪೊಲೀಸರ ವಶದಲ್ಲಿರುವ ಬಿಜೆಪಿ ಶಾಸಕರ ಬಲಗೈ ಬಂಟ ಸತೀಶ್ ನೀಡಿದ ಮಾಹಿತಿ ಮೇರೆಗೆ ಇವತ್ತು ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ನೇತೃತ್ವದಲ್ಲಿ ಖ್ಯಾತ ಪತ್ರಕರ್ತ ಅಗ್ನಿ ಶ್ರೀಧರ್ ಅವರ ಇಸ್ರೋ ಲೇಔಟ್ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ

    ಐವರು ಡಿಸಿಪಿಗಳ ತಂಡ ದಾಳಿ ನಡೆಸಿ ರೌಡಿ ಒಂಟೆ ರೋಹಿತ್, ಸೈಲೆಂಟ್ ಸುನೀಲ ಸೇರಿದಂತೆ ಕೆಲ ಆರೋಪಿಗಳನ್ನು ಹುಡುಕಾಡಿದೆ. ಪೊಲೀಸ್ ದಾಳಿ ವೇಳೆ ಅಗ್ನಿ ಶ್ರೀಧರ್ ಮಧ್ಯಾಹ್ನ 3.30ರ ವೇಳೆಗೆ ಲಘು ಹೃದಯಾಘಾತವಾಗಿದ್ದು ಆಂಬುಲೆನ್ಸ್‍ನಲ್ಲೇ ಕುಮಾರಸ್ವಾಮಿ ಲೇಔಟ್‍ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಚ್ಚನ್ ಸೇರಿದಂತೆ ಪೊಲೀಸರು 7 ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ.

    ದಾಳಿ ಹೇಗಾಯ್ತು?
    ಟಾಟಾ ರಮೇಶ್ ಹಾಗೂ ಕಡಬಗೆರೆ ಶ್ರೀನಿವಾಸ್‍ಗೆ ಒಂಟೆ ರೋಹಿತ್, ಸೈಲೆಂಟ್ ಸುನೀಲ ಬೆದರಿಕೆ ಹಾಕಿದ್ದರು. ಇವರಿಬ್ಬರ ಮೊಬೈಲ್ ಟವರ್ ಲೊಕೇಶನ್ ಬೆನ್ನತ್ತಿದ್ದಾಗ ಇಬ್ಬರು ಪತ್ರಕರ್ತ ಅಗ್ನಿ ಶ್ರೀಧರ್ ಮನೆಯಲ್ಲಿದ್ದಾರೆ ಎನ್ನುವ ಶಂಕೆ ಆಧಾರದಲ್ಲಿ ದಾಳಿ ನಡೆಸಲಾಯಿತು.

    ತಕ್ಷಣ ಸರ್ಚ್ ವಾರೆಂಟ್ ಪಡೆದು ಐವರು ಡಿಸಿಪಿಗಳ ತಂಡದಿಂದ ಏಕಕಾಲಕ್ಕೆ ದಾಳಿ ನಡೆಯುತ್ತದೆ. ಸರ್ಚ್ ವಾರೆಂಟ್ ಇಲ್ಲದ ಕಾರಣ 10 ನಿಮಿಷ ಗೇಟ್ ಮುಂದೆ ಪೊಲೀಸರನ್ನು ಅಗ್ನಿ ಶ್ರೀಧರ್ ನಿಲ್ಲಿಸುತ್ತಾರೆ. ಈ ವೇಳೆ ಅಗ್ನಿ ಶ್ರೀಧರ್ ಮನೆಯಲ್ಲಿದ್ದ 10ಕ್ಕೂ ಹೆಚ್ಚು ಯುವಕರನ್ನು ಪೊಲೀಸರು ವಶಕ್ಕೆ ಪಡೆಯುತ್ತಾರೆ.

    ದಾಳಿ ವೇಳೆ ಮನೆಯಲ್ಲಿ ಲೈಸೆನ್ಸ್ ಇಲ್ಲದ ಗನ್, ಮಾರಕಾಸ್ತ್ರಗಳು ಹಾಗೂ 70 ವಿದೇಶಿ ಮದ್ಯದ ಬಾಟಲ್‍ಗಳು, ಗಾಂಜಾ ಹಾಗೂ ಚಿನ್ನಾಭರಣ ಪತ್ತೆಯಾಗಿದೆ. ಈ ಸಂಬಂಧ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಕಾಯ್ದೆಯಡಿ ಅಗ್ನಿ ಶ್ರೀಧರ್ ಮೇಲೆ ಎಫ್‍ಐಆರ್ ದಾಖಲಾಗಿದೆ.

    ಅಗ್ನಿ ಶ್ರೀಧರ್ ಆಪ್ತ, ಭೂಗತಪಾತಕಿ ಚೋಟಾ ರಾಜನ್ ಸಹಚರನಾಗಿದ್ದ ಅಮಾನ್ ಅಲಿಯಾಸ್ ಸೈಯದ್ ಅಮಾನುಲ್ಲಾ ಬಚ್ಚನ್ ನನ್ನು ಪೊಲೀಸರು ಬಂಧಿಸಿದ್ದಾರೆ. ದಯಾನಂದ ಸಾಗರ್ ಆಸ್ಪತ್ರೆಯಲ್ಲಿ ಅಗ್ನಿ ಶ್ರೀಧರ್ ನೋಡಲು ಬಂದ ವೇಳೆ ರಾತ್ರಿ 8.30ರ ವೇಳೆ ಸೈಲೆಂಟ್ ಸುನೀಲನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಸೈಲೆಂಟ್ ಸುನೀಲನ ಗಾಯತ್ರಿನಗರ, ಪ್ರಕಾಶ್ ನಗರ, ಕುಮಾರಸ್ವಾಮಿ ಲೇಔಟ್‍ನ ಮನೆಗಳ ಮೇಲೆ ಪೊಲೀಸರು ಶೋಧ ನಡೆಸಿದ್ದರು.

  • ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಸ್ಥಿತಿ ಚಿಂತಾಜನಕ

    – 15ಕ್ಕೂ ಹೆಚ್ಚು ರೌಡಿಗಳ ವಿಚಾರಣೆ ತೀವ್ರ

    ಬೆಂಗಳೂರು: ಶುಕ್ರವಾರದಂದು ಶೂಟೌಟ್‍ಗೆ ಒಳಗಾದ ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಸ್ಥಿತಿ ಚಿಂತಾಜನಕವಾಗಿದೆ.

    ಶುಕ್ರವಾರದಂದು ಯಲಹಂಕದ ಕೋಗಿಲು ಕ್ರಾಸ್ ಬಳಿ ಕಡಬಗೆರೆ ಶ್ರೀನಿವಾಸ್ ಮೇಲೆ ಗುಂಡಿನ ದಾಳಿ ನಡೆದಿತ್ತು. ದಾಳಿಯಿಂದ ಶ್ರೀನಿವಾಸ್ ದೇಹಕ್ಕೆ 3 ಗುಂಡು ಹೊಕ್ಕಿತ್ತು. ಭುಜಕ್ಕೆ ಒಂದು, ಹೊಟ್ಟೆಯ ಭಾಗಕ್ಕೆ 2 ಗುಂಡು ಹೊಕ್ಕಿತ್ತು. ಹೊಟ್ಟೆಗೆ 2 ಗುಂಡು ತಗುಲಿರುವುದರಿಂದ ಲಿವರ್‍ಗೆ ಡ್ಯಾಮೇಜ್ ಆಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿರುವ ಕಡಬಗೆರೆ ಶ್ರೀನಿವಾಸ್, ಸದ್ಯ ಕೋಮಾ ಸ್ಥಿತಿಯಲ್ಲಿದ್ದಾರೆ.

    ಈ ಪ್ರಕರಣದ ತನಿಖೆ ತೀವ್ರಗೊಳಿಸಿದ ತನಿಖಾ ತಂಡ 15 ಕ್ಕೂ ಹೆಚ್ಚು ಅಪರಾಧ ಹಿನ್ನಲೆಯುಳ್ಳ ವ್ಯಕ್ತಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಮುಖವಾಗಿ ಮಾದನಾಯಕನಹಳ್ಳಿ, ನೆಲಮಂಗಲ ಹಾಗೂ ಬಸವೇಶ್ವರನಗರದ ಸುತ್ತ ಮುತ್ತಲಿನ ಹಳೇ ರೌಡಿಶೀಟರ್‍ಗಳನ್ನು ವಶಕ್ಕೆ ಪಡೆದು ರಾತ್ರಿಯಿಡೀ ಶಂಕಿತರ ವಿಚಾರಣೆ ನಡೆಸಿದ್ದಾರೆ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಶೂಟೌಟ್ ನಡೆದಿರುವ ಶಂಕೆ ವ್ಯಕ್ತವಾಗಿದೆ.

    ಕಡಬಗೆರೆ ಶ್ರೀನಿವಾಸ್‍ರೊಂದಿಗೆ ಹೆಚ್ಚು ಆತ್ಮೀಯತೆ ಹೊಂದಿದ್ದ ಹೇರೋಹಳ್ಳಿ ಮಾಜಿ ಕಾರ್ಪೊರೇಟರ್ ಹನುಮಂತೇಗೌಡರನ್ನು ಯಲಹಂಕ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಕಡಬಗೆರೆ ಶ್ರೀನಿವಾಸ್ ಅವರ ಇತ್ತೀಚಿನ ಚಟುವಟಿಕೆ ಬಗ್ಗೆ ಮಾಹಿತಿ ಸಿಗುವ ಹಿನ್ನೆಲೆಯಲ್ಲಿ ಹನುಮಂತೇಗೌಡ ಅವರ ವಿಚಾರಣೆ ನಡೆಯುತ್ತಿದೆ.