Tag: Kabza

  • ಮಹಾ ಗೆಲುವನ್ನು ‘ಕಬ್ಜ’ ಮಾಡಿಕೊಳ್ಳೋ ಕನಸು!

    ಮಹಾ ಗೆಲುವನ್ನು ‘ಕಬ್ಜ’ ಮಾಡಿಕೊಳ್ಳೋ ಕನಸು!

    ಕೊರೊನಾ ಅಬ್ಬರದ ನಡುವೆ ಪ್ಯಾನಿಂಡಿಯಾ ಸಿನಿಮಾ ಸದ್ದು!

    ಯಾವಾಗ ಮಿತಿಗಳನ್ನ ಮೀರುವ ಮನಸಾಗುತ್ತೋ, ಗೆರೆಗಳನ್ನ ದಾಟಿಕೊಳ್ಳುವ ಹುರುಪು ತುಂಬಿಕೊಳ್ಳುತ್ತೋ ಅದು ಹೊಸ ಸೃಷ್ಟಿಗೆ ನಾಂದಿ ಹಾಡುತ್ತೆ. ಪ್ರತೀ ಸಿನಿಮಾಗಳನ್ನೂ ಕೂಡಾ ಅಂಥಾದ್ದೇ ಮನಸ್ಥಿತಿಯಿಂದ ದೃಷ್ಯ ಕಾವ್ಯವಾಗಿಸುತ್ತಾ, ಗೆಲ್ಲುತ್ತಾ ಸಾಗಿ ಬಂದಿರುವವರು ನಿರ್ದೇಶಕ ಆರ್ ಚಂದ್ರು. ಅವರ ಸಿನಿಮಾಗಳೆಂದರೆ ಅಲ್ಲೊಂದು ಫ್ಯಾಷನ್ ಇರುತ್ತೆ, ಅಗಾಧ ಅದ್ಧೂರಿತನ ಇದ್ದೇ ಇರುತ್ತೆ. ಸದ್ಯ ಅದೆಲ್ಲವನ್ನೂ ಮೀರಿಸುವಂತೆ ಮಿನುಗುತ್ತಿರೋ ಚಿತ್ರ ‘ಕಬ್ಜ’.

    ಆರ್ ಚಂದ್ರು ಮತ್ತು ರಿಯಲ್ ಸ್ಟಾರ್ ಉಪೇಂದ್ರ ಕಾಂಬಿನೇಷನ್ನಿನ ಕಬ್ಜ ಆರಂಭದಿಂದಲೂ ಸುದ್ದಿ ಕೇಂದ್ರದಲ್ಲಿದೆ. ಅದ್ಭುತ ಕಥೆ, ಅದ್ದೂರಿ ಮೇಕಿಂಗ್‍ನ ಸುಳಿವಿನೊಂದಿಗೇ ಪ್ಯಾನಿಂಡಿಯಾ ಲೆವೆಲ್ಲಿನಲ್ಲಿ ಸದ್ದು ಮಾಡೋ ಖದರ್ ಕಬ್ಜಾಗಿದ್ದಂತಿದೆ. ಇದೀಗ ಎಲ್ಲ ಕೆಲಸ ಕಾರ್ಯಗಳನ್ನ ಮುಗಿಸಿಕೊಂಡು ಬಿಡುಗಡೆಯ ಹಾದಿಯಲ್ಲಿರೋ ಈ ಸಿನಿಮಾದ ವೆಬ್‍ಸೈಟ್ ಅನಾವರಣ ಕಾರ್ಯಕ್ರಮ ಬೆಂಗಳೂರಿನ ಶೆರ್ಟಾನ್ ಹೊಟೇಲಿನಲ್ಲಿ ನಡೆದಿದೆ. ಖ್ಯಾತ ನಿರ್ಮಾಪಕ ಕೆ.ಪಿ ಶ್ರೀಕಾಂತ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಉಪೇಂದ್ರ, ಎಂಟಿಬಿ ನಾಗರಾಜ್ ಸಮ್ಮುಖದಲ್ಲಿ ವೆಬ್‍ಸೈಟ್ ಅನಾವರಣಗೊಂಡಿದೆ.

    ಈ ನೆಪದಲ್ಲಿ ಮಹಾ ಗೆಲುವೊಂದನ್ನು ಕಬ್ಜ ಮಾಡಿಕೊಳ್ಳೋ ಮಹಾ ಕನಸನ್ನು ಆರ್. ಚಂದ್ರು ಮೆಲುಕು ಹಾಕಿದ್ದಾರೆ. ವೆಬ್ ಸೈಟ್ ಲಾಂಚ್ ಮಾಡಲು ಪ್ರೀತಿಯಿಂದ ಆಗಮಿಸಿದ ಶಿವರಾಜ್ ಕುಮಾರ್, ರಾಜಕಾರಣಿ ಎಂಟಿಬಿ ನಾಗರಾಜ್‍ರನ್ನು ಪ್ರೀತಿಯಿಂದ ಕೊಂಡಾಡುತ್ತಲೇ ತಮ್ಮ ಮಹತ್ವಾಕಾಂಕ್ಷೆಯನ್ನ ತೆರೆದಿಟ್ಟಿದ್ದಾರೆ. ಆ ಮಾತುಗಳಲ್ಲಿಯೇ ಕಬ್ಜ ರೂಪುಗೊಂಡ ಖದರ್ ಕೂಡಾ ಹೊಳೆದಿದೆ.

    ಆರ್.ಚಂದ್ರು ಯಾವುದೇ ಕಾರ್ಯಕ್ರಮ ಮಾಡಿದರೂ ಅಲ್ಲೊಂದು ಪಾಸಿಟಿವ್ ಎನರ್ಜಿ ಸುಳಿದಾಡುವಂತೆ ನೋಡಿಕೊಳ್ಳುತ್ತಾರೆ. ಅದು ಅವರ ಭರವಸೆಯ ಮಾತುಗಳಿಂದಲೇ ಪ್ರವಹಿಸುತ್ತೆ. ಈ ಬಾರಿಯೂ ಅವರು ಪ್ಯಾನಿಂಡಿಯಾ ಮಟ್ಟದಲ್ಲಿ ಕನ್ನಡ ಚಿತ್ರರಂಗದ ಘನತೆಯನ್ನ ಪ್ರತಿಫಲಿಸುವ ಮಾತುಗಳನ್ನಾಡಿದ್ದಾರೆ. ಉಪ್ಪಿಯ ಜೊತೆಗೂಡಿ ದೇಶಾದ್ಯಂತ ಗೆಲುವು ದಾಖಲಿಸೋ ಹುರುಪನ್ನೂ ಹೊರ ಹಾಕಿದ್ದಾರೆ.

    ಈಗಾಗಲೇ ಕಬ್ಜ ದೇಶದ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಗಿಟ್ಟಿಸಿಕೊಂಡಿದೆ. ಅದು ಈ ಸಿನಿಮಾ ಮತ್ತು ಚಂದ್ರು ಅವರ ಪರಿಶ್ರಮದ ಪ್ರತೀಕ ಅಂತ ಶಿವಣ್ಣ ಮೆಚ್ಚಿಕೊಂಡಿದ್ದಾರೆ. ಇದೇ ಹೊತ್ತಿನಲ್ಲಿ ಚಂದ್ರು ಅವರ ಅದ್ದೂರಿತನ, ಸಮರ್ಪಣಾ ಭಾವಗಳನ್ನೂ ಶಿವಣ್ಣ ಮೆಚ್ಚಿಕೊಂಡಿದ್ದಾರೆ. ಇನ್ನು ಈ ಹಿಂದಷ್ಟೇ ಐ ಲವ್ ಯೂ ಸಿನಿಮಾ ಗೆದ್ದ ಖುಷಿ, ಮತ್ತೆ ಕಬ್ಜ ಮೂಲಕ ಚಂದ್ರುಗೆ ಜೊತೆಯಾದ ಥ್ರಿಲ್‍ನೊಂದಿಗೇ ಉಪ್ಪಿ ಕೂಡಾ ಮಾತಾಡಿದ್ದಾರೆ. ಅದರಲ್ಲಿಯೂ ಕಬ್ಜ ಮಹಾ ಗೆಲುವಿನ ರೂವಾರಿಯಾಗೋ ಭರವಸೆಯೇ ಮಾರ್ಧನಿಸಿದೆ. ಒಟ್ಟಾರೆಯಾಗಿ ಕೊರೊನಾ ಭೀತಿಯ ನಡುವೆಯೂ ಕಬ್ಜ ಚಿತ್ರದ ವೆಬ್‍ಸೈಟ್ ಅನಾವರಣ ಕಾರ್ಯಕ್ರಮ ಸಿನಿ ಜಗತ್ತಿನಲ್ಲಿ, ಸಿನಿಮಾ ಪ್ರೇಮಿಗಳಲ್ಲಿ ಹಸ ಆವೇಗ ಮೂಡಿಸಿದೆ.

  • ಅಣ್ಣಾವ್ರು, ಬಿಗ್ ಬಿ ಬಳಸಿದಂಥ ಪಿಸ್ತೂಲ್ ಹಿಡಿದ ಉಪ್ಪಿ

    ಅಣ್ಣಾವ್ರು, ಬಿಗ್ ಬಿ ಬಳಸಿದಂಥ ಪಿಸ್ತೂಲ್ ಹಿಡಿದ ಉಪ್ಪಿ

    ಬೆಂಗಳೂರು: ಉಪೇಂದ್ರ ಅಭಿನಯದ ಬಹುನಿರೀಕ್ಷಿತ ಕಬ್ಜ ಚಿತ್ರ ತೀವ್ರ ಸಂಚಲನ ಸೃಷ್ಟಿಸಿದ್ದು, ರಿಯಲ್ ಸ್ಟಾರ್ ಉಪೇಂದ್ರ ಸಹ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಕುರಿತ ಹಲವು ಅಚ್ಚರಿ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಉಪ್ಪಿ ಕೇವಲ ಸಿನಿಮಾ ಮಾತ್ರವಲ್ಲ ರಾಜಕೀಯದಲ್ಲೂ ಸಕ್ರಿಯರಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿದ್ದಾರೆ. ತಮ್ಮ ಸಿನಿಮಾಗಳ ಅಪ್‍ಡೇಟ್ ಜೊತೆಗೆ ನೀತಿ ಬೋಧನೆಗಳು, ತಮ್ಮ ಪ್ರಜಾಕೀಯದ ವಿಷಯಗಳ ಕುರಿತು ಹಂಚಿಕೊಳ್ಳುತ್ತಿರುತ್ತಾರೆ.

    ಇದೀಗ ಕಬ್ಜ ಸಿನಿಮಾದ ಕುರಿತು ಅಚ್ಚರಿಯ ವಿಷಯವೊಂದನ್ನು ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಮಾರ್ಚ್‍ನಿಂದ ಕಬ್ಜ ಸಿನಿಮಾ ಚಿತ್ರೀಕರಣ ಪ್ರಾರಂಭವಾಗಿದ್ದು, ಬಿರುಸಿನಿಂದ ಸಾಗಿದೆ. ಅಲ್ಲದೆ ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ, ಹಿಂದಿ, ಮರಾಠಿ ಹಾಗೂ ಬೆಂಗಾಲಿ ಒಟ್ಟು ಏಳು ಭಾಷೆಗಳಲ್ಲಿ ಸಿನಿಮಾ ಸಿದ್ಧವಾಗುತ್ತಿದೆ. ಮಾತ್ರವಲ್ಲದೆ ಚೀನಾದಲ್ಲಿ ಕನ್ನಡ ಚಿತ್ರಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚೀನಿ ಭಾಷೆಗೂ ಚಿತ್ರವನ್ನು ಡಬ್ ಮಾಡಲು ನಿರ್ದೇಶಕರು ಚಿಂತನೆ ನಡೆಸಿದ್ದಾರೆ.

    ಆರ್.ಚಂದ್ರು ಇದಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಈ ಮೂಲಕ ಐ ಲವ್ ಯು ಚಿತ್ರದ ಬಳಿಕ ಮತ್ತೆ ಉಪೇಂದ್ರ ಹಾಗೂ ಆರ್.ಚಂದ್ರು ಜೋಡಿ ಒಂದಾಗುತ್ತಿದೆ. ಚಿತ್ರ ಭೂಗತ ಲೋಕದ ಕಥೆಯನ್ನು ಒಳಗೊಂಡಿದೆ. ಬರೀ ಲಾಂಗು, ಮಚ್ಚು ಮಾತ್ರವಲ್ಲದೆ ಲವ್ ಹಾಗೂ ಸೆಂಟಿಮೆಂಟ್‍ಗಳನ್ನೂ ಒಳಗೊಂಡಿದೆಯಂತೆ. ಅಲ್ಲದೆ ಉಪೇಂದ್ರ ನಿರ್ದೇಶನದ ಓಂ ಚಿತ್ರಕ್ಕೆ ಇದನ್ನು ಹೋಲಿಸಲಾಗುತ್ತಿದೆ. ಸುಮಾರು 40 ಕೋಟಿ ರೂ. ವೆಚ್ಚದಲ್ಲಿ ಸಿನಿಮಾ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಇದೀಗ ಚಿತ್ರದ ಕುರಿತು ಉಪ್ಪಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದು, ಕುತೂಹಲಕ್ಕೆ ಕಾರಣವಾಗಿದೆ. 80ರ ದಶಕದ ಕಥೆಯನ್ನು ಹೇಳಲಾಗುತ್ತಿದ್ದು, ಈ ಹಿಂದೆ 80 ದಶಕದ ಶೈಲಿಯಂತೆ ಅಂಗಿ ಹಾಗೂ ಬೆಲ್ ಬಾಟಂ ಪ್ಯಾಂಟ್ ಧರಿಸಿ, ಲಾಂಗ್ ಹಿಡಿದಿದ್ದ ಪೋಸ್ಟರ್ ಮೂಲಕ ಉಪೇಂದ್ರ ಗಮನ ಸೆಳೆದಿದ್ದರು. ಇದೀಗ ಹಳೆ ಕಾಲದ ಪಿಸ್ತೂಲುಗಳನ್ನು ಹಿಡಿದು ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.

    ಎರಡೂ ಕೈಯಲ್ಲಿ ಪಿಸ್ತೂಲುಗಳನ್ನು ಹಿಡಿದು ಮೂರು ವಿಭಿನ್ನ ಭಂಗಿಗಳಲ್ಲಿ ಕಾಣಿಸಿಕೊಂಡಿರುವ ಚಿತ್ರಗಳನ್ನು ಉಪೇಂದ್ರ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಇದಕ್ಕೆ ಸಾಲುಗಳನ್ನು ಬರೆದಿರುವ ಅವರು, ‘ಅಣ್ಣಾವ್ರು, ಅಮಿತಾಬ್ ಬಚ್ಚನ್ ಸಾರ್ ರಂತಹ ಮೇರು ನಟರು ಗಂಧದ ಗುಡಿ, ಶೋಲೆ ಚಿತ್ರಗಳಲ್ಲಿ ಬಳಸಿದಂತಹ ಪಿಸ್ತೂಲು ಚಿತ್ರೀಕರಣದಲ್ಲಿ ಬಳಸಿದಾಗ ಆದ ರೋಮಾಂಚನ ಅವಿಸ್ಮರಣೀಯ’ ಎಂದು ಬರೆದುಕೊಂಡಿದ್ದಾರೆ.

  • 7 ಭಾಷೆಯಲ್ಲಿ ಬರುತ್ತಿದೆ ಉಪೇಂದ್ರ ನಟನೆಯ ಕಬ್ಜಾ ಸಿನಿಮಾ

    7 ಭಾಷೆಯಲ್ಲಿ ಬರುತ್ತಿದೆ ಉಪೇಂದ್ರ ನಟನೆಯ ಕಬ್ಜಾ ಸಿನಿಮಾ

    ಬಳ್ಳಾರಿ: ರಿಯಲ್ ಸ್ಟಾರ್ ಉಪೇಂದ್ರ ನಟನೆಯ ‘ಕಬ್ಜಾ’ ಸಿನಿಮಾ 7 ಭಾಷೆಗಳಲ್ಲಿ ಬರುತ್ತಿದ್ದು, ರಾಜ್ಯದ ಜನರಷ್ಟೇ ಅಲ್ಲ ಇಡೀ ದೇಶದ ಜನರು ಈ ಸಿನಿಮಾವನ್ನು ಮೆಚ್ಚುವ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ನಿರ್ದೇಶಕ ಆರ್. ಚಂದ್ರು ಹೇಳಿದ್ದಾರೆ.

    ಸಿನಿಮಾ ಪ್ರಮೋಶನ್‍ಗಾಗಿ ಬಳ್ಳಾರಿಗೆ ಬಂದಿದ್ದ ನಿರ್ದೇಶಕ ಆರ್. ಚಂದ್ರು ಸುದ್ದಿಗಾರರೊಂದಿಗೆ ಮಾತನಾಡಿ, ಸ್ಥಳೀಯ ಕಲಾವಿದರಿಗೆ ಹೆಚ್ಚು ಅವಕಾಶವನ್ನು ನೀಡುವ ಮೂಲಕ ಸಾಕಷ್ಟು ವಿಭಿನ್ನ ರೀತಿಯಲ್ಲಿ ಸಿನಿಮಾವನ್ನು ಮಾಡಲಾಗಿದೆ. ಅಲ್ಲದೇ ಬಳ್ಳಾರಿ ಮೂಲದ ಕೌಶಿಕ್ ಎನ್ನುವ ಕಲಾವಿದ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟನೆ ಮಾಡಿದ್ದಾನೆ. ಸಿನಿಮಾದಲ್ಲಿ ಉಪೇಂದ್ರ ಅವರ ಜೊತೆ ಸಾಥ್ ನೀಡಿರೋ ಕೌಶಿಕ್ ಮುಂದೆ ಸಿನಿಮಾ ರಂಗದಲ್ಲಿ ಮತ್ತಷ್ಟು ಅವಕಾಶಗಳು ಬರಲಿವೆ ಎಂದರು.

    ಇನ್ನೂ ದ್ವಾರಕೀಶ್ ಅವರ ಆರ್ಥಿಕ ಸ್ಥಿತಿ ಬಗ್ಗೆ ಮಾತನಾಡಿದ ಅವರು, ಸಿನಿಮಾ ಎಂದರೇನೇ ವ್ಯಾಪಾರ. ಇಲ್ಲಿ ಏಳು ಬೀಳು ಸಹಜ. ಅವರವರೇ, ಕುಳಿತುಕೊಂಡು ಮಾತನಾಡುತ್ತಾರೆ ಎಂದರು. ಹೀಗಿರುವ ಸಮಸ್ಯೆ ಮುಂದಿನ ಸಿನಿಮಾ ಮಾಡುವುದರೊಳಗೆ ಸರಿ ಹೋಗುತ್ತದೆ. ಸಿನಿಮಾ ಎನ್ನುವುದು ವ್ಯಾಪಾರ. ಯಾರು ಕೂಡ ಧರ್ಮಕ್ಕೆ ಸಿನಿಮಾ ಮಾಡಲ್ಲ. ಮುಂದೆ ಎಲ್ಲ ಸರಿ ಹೋಗುತ್ತದೆ ಎಂದು ಪ್ರತಿಕ್ರಿಯಿಸಿದರು.