Tag: K.surendran

  • ಕೇರಳದಲ್ಲಿ ಟಿಪ್ಪು ಸದ್ದು – ಸುಲ್ತಾನ್ ಬತ್ತೇರಿ ಹೆಸರನ್ನು ಬದಲಾಯಿಸುತ್ತೇನೆ ಎಂದ ಬಿಜೆಪಿ ಅಧ್ಯಕ್ಷ ಸುರೇಂದ್ರನ್‌

    ಕೇರಳದಲ್ಲಿ ಟಿಪ್ಪು ಸದ್ದು – ಸುಲ್ತಾನ್ ಬತ್ತೇರಿ ಹೆಸರನ್ನು ಬದಲಾಯಿಸುತ್ತೇನೆ ಎಂದ ಬಿಜೆಪಿ ಅಧ್ಯಕ್ಷ ಸುರೇಂದ್ರನ್‌

    ತಿರುವನಂತಪುರಂ: ಕೇರಳದ ಲೋಕಸಭಾ ಚುನಾವಣೆಯಲ್ಲಿ (Kerala Lok Sabha Election) ಟಿಪ್ಪು ಸುಲ್ತಾನ್‌ (Tipu Sulthan) ಹೆಸರು ಸದ್ದು ಮಾಡಿದೆ. ನಾನು ಗೆದ್ದರೆ ಸುಲ್ತಾನ್ ಬತ್ತೇರಿ (Sultan Bathery) ಹೆಸರನ್ನು ಗಣಪತಿವಟ್ಟಂ ಎಂದು ಬದಲಾಯಿಸುವುದು ನನ್ನ ಮೊದಲ ಆದ್ಯತೆ ಎಂದು ವಯನಾಡು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಂದ್ರನ್‌ (K Surendran) ಘೋಷಿಸಿದ್ದಾರೆ.

    ಬಿಜೆಪಿ (BJP) ರಾಜ್ಯಾಧ್ಯಕ್ಷರಾಗಿರುವ ಸುರೇಂದ್ರನ್‌ ಅವರನ್ನು ರಾಹುಲ್‌ ಗಾಂಧಿ (Rahul Gandhi) ಸ್ಪರ್ಧಿಸುತ್ತಿರುವ ವಯನಾಡು (Wayanad) ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ.

    ಇಂದಿನ ಪ್ರಚಾರ ಭಾಷಣದಲ್ಲಿ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಯಾರು? ಸುಲ್ತಾನ್‌ ಬತ್ತೇರಿ ಹೆಸರು ಯಾಕೆ ಬಂತು? ಮೊದಲು ಈ ಸ್ಥಳವನ್ನು ಗಣಪತಿವಟ್ಟಂ (Ganapativattam) ಎಂದು ಕರೆಯಲಾಗುತ್ತಿತ್ತು. ಈ ವಿಚಾರ ವಯನಾಡು ಜನತೆಗೆ ತಿಳಿದಿದೆಯೇ ಎಂದು ಪ್ರಶ್ನಿಸಿದರು.  ಇದನ್ನೂ ಓದಿ: ನಮ್ಮ ಬಲಿಷ್ಠ ಸರ್ಕಾರದ ಅವಧಿಯಲ್ಲಿ ಉಗ್ರರು ಅವರ ನೆಲದಲ್ಲೇ ಹತ್ಯೆಯಾಗುತ್ತಿದ್ದಾರೆ: ಮೋದಿ

     

    ಸುಲ್ತಾನ್ ಬತ್ತೇರಿ ಎಂಬ ಹೆಸರು ಟಿಪ್ಪು ಸುಲ್ತಾನನ ಆಕ್ರಮಣದ ಭಾಗವಾಗಿ ಹೊರಹೊಮ್ಮಿದೆ. ಸುಲ್ತಾನ್ ಬತ್ತೇರಿಯನ್ನು ಗಣಪತಿವಟ್ಟಂ ಎಂದು ಮರುನಾಮಕರಣ ಮಾಡಬೇಕು. ಇದು ಹಿಂದೂಗಳು ಮತ್ತು ಕ್ರಿಶ್ಚಿಯನ್ನರನ್ನು ಕಗ್ಗೊಲೆ ಮಾಡಿದ ಟಿಪ್ಪು ಸುಲ್ತಾನನ ನಾಡಲ್ಲ. ಕಾಂಗ್ರೆಸ್ ಮತ್ತು ಸಿಪಿಎಂಗಳು ಈಗಲೂ ಕ್ರಿಮಿನಲ್‌ಗಳ ಹೆಸರನ್ನು ಇಡಲು ಬಯಸುತ್ತವೆ ಎಂದು ವಾಗ್ದಾಳಿ ನಡೆಸಿದರು.

    ಸುಲ್ತಾನ್‌ ಬತ್ತೇರಿ ಹೆಸರು ಬಂದಿದ್ದು ಹೇಗೆ?
    ಈ ಪಟ್ಟಣವನ್ನು ಮೂಲತಃ ಗಣಪತಿವಟ್ಟಂ ಎಂದು ಕರೆಯಲಾಗುತ್ತಿತ್ತು. ಸುಲ್ತಾನ್ ಬತ್ತೇರಿಯ ಪುರಸಭಾ ವೆಬ್‌ಸೈಟ್‌ನ ಪ್ರಕಾರ ಗಣಪತಿ ದೇವಸ್ಥಾನದ ಹೆಸರನ್ನು ಇಡಲಾಗಿತ್ತು. ಸುಲ್ತಾನ್ ಬತ್ತೇರಿಯು ಮೈಸೂರು ಆಳ್ವಿಕೆಯ ಸಮಯದಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಡಂಪಿಂಗ್ ಮೈದಾನವಾಗಿತ್ತು ಎಂದು ಕೇರಳ ಪ್ರವಾಸೋದ್ಯಮದ ಅಧಿಕೃತ ವೆಬ್‌ಸೈಟ್ ಹೇಳುತ್ತದೆ.

    18ನೇ ಶತಮಾನ ಟಿಪ್ಪು ಸುಲ್ತಾನ್ ಸೇನೆ ಪಟ್ಟಣವನ್ನು ವಶಪಡಿಸಿಕೊಳ್ಳುತ್ತದೆ ಮತ್ತು ದೇವಾಲಯವನ್ನು ಭಾಗಶಃ ನಾಶ ಮಾಡುತ್ತದೆ. ಈಗ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಸ್ವಾಧೀನಪಡಿಸಿಕೊಂಡಿದ್ದು,  ಈಗ ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕವೆಂದು ಘೋಷಣೆ ಮಾಡಲಾಗಿದೆ. ಇದನ್ನೂ ಓದಿ: ಭಾರತದ ಮೊದಲ ಚುನಾವಣೆ 4 ತಿಂಗಳ ಕಾಲ ನಡೆದಿದ್ದು ನಿಮಗೆ ಗೊತ್ತಾ..?

    ಟಿಪ್ಪುವಿನ ಸೇನೆಯು ಗಣಪತಿವಟ್ಟಂ ಪಟ್ಟಣವನ್ನು ತನ್ನ ಬ್ಯಾಟರಿಯನ್ನು (ಕ್ಯಾನನ್‌ಗಳ ಸಮೂಹ) ಶೇಖರಿಸುವ ಸ್ಥಳವಾಗಿ ಬಳಸಿಕೊಂಡಿತು. ಬ್ರಿಟಿಷರ ಈ ಜಾಗವನ್ನು ವಶಪಡಿಸಿದ ಬಳಿಕ ಈ ಪಟ್ಟಣವನ್ನು ‘ಸುಲ್ತಾನರ ಬ್ಯಾಟರಿ’ ಎಂದು ಕರೆಯುತ್ತಿದ್ದರು. ಕಾಲಾನಂತರದಲ್ಲಿ ಈ ಹೆಸರು ಸುಲ್ತಾನ್ ಬತ್ತೇರಿಯಾಗಿ ಬದಲಾಯಿತು.

    ದೇವಸ್ಥಾನ ಧ್ವಂಸ, ಬಲವಂತದ ಮತಾಂತರ
    ಟಿಪ್ಪುವಿನ ಸೇನೆ ದೇವಸ್ಥಾನ ಮತ್ತು ಚರ್ಚುಗಳನ್ನು ಧ್ವಂಸ ಮಾಡಿತು. ಬಲವಂತದ ಧಾರ್ಮಿಕ ಮತಾಂತರದಿಂದ ತಪ್ಪಿಸಿಕೊಳ್ಳಲು ಹಲವು ಮಂದಿ ಆ ಪ್ರದೇಶವನ್ನು ತೊರೆದರು. 25 ಚರ್ಚುಗಳನ್ನು ಟಿಪ್ಪುವಿನ ಸೇನೆ ನಾಶ ಮಾಡಿತು. ಮತಾಂತರ ಮತ್ತು ಚರ್ಚ್‌ಗಳ ನಾಶದಿಂದ ಈ ಭಾಗದಲ್ಲಿ ಪ್ರಬಲವಾಗಿದ್ದ ರೋಮನ್ ಕ್ಯಾಥೋಲಿಕ್‌ ಜನರ ಸಂಖ್ಯೆ ಗಮನಾರ್ಹವಾಗಿ ಇಳಿಕೆಯಾಯಿತು. ಟಿಪ್ಪು ಸುಲ್ತಾನ್ ಮಹಾ ಗಣಪತಿ ದೇವಸ್ಥಾನವನ್ನು ತನ್ನ ಶಸ್ತ್ರಾಸ್ತವನ್ನು ಇರಿಸುವ ಜಾಗವನ್ನಾಗಿ ಬದಲಾಯಿಸಿದ್ದ ಎಂದು ಇತಿಹಾಸದಲ್ಲಿ ಉಲ್ಲೇಖವಿದೆ.

     

  • ರಾಹುಲ್‌ ಗಾಂಧಿ ವಿರುದ್ಧ ಕಣಕ್ಕಿಳಿದಿರೋ ಬಿಜೆಪಿ ಅಭ್ಯರ್ಥಿ ಮೇಲೆ 242 ಕ್ರಿಮಿನಲ್‌ ಕೇಸ್‌

    ರಾಹುಲ್‌ ಗಾಂಧಿ ವಿರುದ್ಧ ಕಣಕ್ಕಿಳಿದಿರೋ ಬಿಜೆಪಿ ಅಭ್ಯರ್ಥಿ ಮೇಲೆ 242 ಕ್ರಿಮಿನಲ್‌ ಕೇಸ್‌

    ತಿರುವನಂತಪುರಂ: ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿರುವ ಕೆ.ಸುರೇಂದ್ರನ್ ವಿರುದ್ಧ 242 ಕ್ರಿಮಿನಲ್ ಪ್ರಕರಣಗಳಿವೆ.

    ಶಾಸನಬದ್ಧ ಅವಶ್ಯಕತೆಗಳ ಭಾಗವಾಗಿ, ಸುರೇಂದ್ರನ್ ಅವರು ಇತ್ತೀಚೆಗೆ ತಮ್ಮ ಪ್ರಕರಣಗಳ ವಿವರಗಳನ್ನು ಮೂರು ಪುಟಗಳಲ್ಲಿ ಪ್ರಕಟಿಸಿದ್ದರು. ಸುರೇಂದ್ರನ್‌ ಬಿಜೆಪಿ ರಾಜ್ಯಾಧ್ಯಕ್ಷರೂ ಹೌದು. ಅದೇ ರೀತಿ, ಬಿಜೆಪಿ ಪಕ್ಷದ ಎರ್ನಾಕುಲಂ ಕ್ಷೇತ್ರದ ಅಭ್ಯರ್ಥಿ ಕೆ.ಎಸ್.ರಾಧಾಕೃಷ್ಣನ್ ವಿರುದ್ಧ ಸುಮಾರು 211 ಪ್ರಕರಣಗಳಿವೆ.

    ಹೆಚ್ಚಿನ ಪ್ರಕರಣಗಳು 2018 ರಲ್ಲಿ ನಡೆದ ಶಬರಿಮಲೆ ಪ್ರತಿಭಟನೆಗೆ ಸಂಬಂಧಿಸಿವೆ. ಈ ಪ್ರಕರಣಗಳು ನ್ಯಾಯಾಲಯದ ವಿಚಾರಣೆಯಲ್ಲಿವೆ. ಪಕ್ಷದ ಮುಖಂಡರು ಮುಷ್ಕರ ಅಥವಾ ಪ್ರತಿಭಟನೆಗೆ ಕರೆ ನೀಡಿದಾಗ ಪೊಲೀಸರು ಅದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸುತ್ತಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾರ್ಜ್ ಕುರಿಯನ್ ತಿಳಿಸಿದ್ದಾರೆ.

    ಅಭ್ಯರ್ಥಿಗಳ ವಿರುದ್ಧದ ಪ್ರಕರಣಗಳ ವಿವರಗಳನ್ನು ಪ್ರಕಟಿಸುವುದು ಕಡ್ಡಾಯವಾಗಿದೆ. ಏತನ್ಮಧ್ಯೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಶುಕ್ರವಾರ ಸುರೇಂದ್ರನ್, ರಾಧಾಕೃಷ್ಣನ್, ಪಕ್ಷದ ಅಲಪ್ಪುಳದ ಅಭ್ಯರ್ಥಿ ಶೋಭಾ ಸುರೇಂದ್ರನ್ ಮತ್ತು ವಟಕರ ಅಭ್ಯರ್ಥಿ ಪ್ರಫುಲ್ ಕೃಷ್ಣ ವಿರುದ್ಧದ ಪ್ರಕರಣಗಳ ವಿವರಗಳನ್ನು ಟ್ವೀಟ್ ಮಾಡಿದ್ದಾರೆ. ಭಾರತದ ಕೆಲವು ಭಾಗಗಳಲ್ಲಿ ರಾಷ್ಟ್ರೀಯವಾದಿಯಾಗುವುದು ಕಷ್ಟ ಎಂದು ಕೇರಳ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

    ಬಿಜೆಪಿ ರಾಜ್ಯ ಮುಖ್ಯಸ್ಥರ ವಿರುದ್ಧದ ಪ್ರಕರಣಗಳ ವಿವರವನ್ನು ನೀಡಿದ ಕುರಿಯನ್, ಶಬರಿಮಲೆ ಪ್ರತಿಭಟನೆಗೆ ಸಂಬಂಧಿಸಿದಂತೆ 237 ಮತ್ತು ಕೇರಳದಲ್ಲಿ ವಿವಿಧ ಆಂದೋಲನಗಳಿಗೆ ಸಂಬಂಧಿಸಿದಂತೆ ಐದು ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದ್ದಾರೆ.

  • ರಾಗಾ ವಿರುದ್ಧ ಕೇರಳ ಬಿಜೆಪಿ ಮುಖ್ಯಸ್ಥ ಕೆ.ಸುರೇಂದ್ರನ್‌ ಸ್ಪರ್ಧೆ – ಕಾಂಗ್ರೆಸ್‌ ಭದ್ರಕೋಟೆ ಛಿದ್ರವಾಗುತ್ತಾ?

    ರಾಗಾ ವಿರುದ್ಧ ಕೇರಳ ಬಿಜೆಪಿ ಮುಖ್ಯಸ್ಥ ಕೆ.ಸುರೇಂದ್ರನ್‌ ಸ್ಪರ್ಧೆ – ಕಾಂಗ್ರೆಸ್‌ ಭದ್ರಕೋಟೆ ಛಿದ್ರವಾಗುತ್ತಾ?

    ತಿರುನಂತಪುರಂ: 2024ರ ಲೋಕಸಭಾ ಚುನಾವಣೆಗೆ ಈಗಾಗಲೇ ದಿನಾಂಕ ಫಿಕ್ಸ್‌ ಆಗಿದ್ದು, ಈ ಬಾರಿಯೂ ಕಾಂಗ್ರೆಸ್‌ನ ಹಾಲಿ ಸಂಸದ ರಾಹುಲ್‌ ಗಾಂಧಿ ವಯನಾಡಿನಿಂದಲೇ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ರಾಹುಲ್‌ ಗಾಂಧಿ (Rahul Gandhi) ಅವರಿಗೆ ಪ್ರತಿಸ್ಪರ್ಧಿಯಾಗಿ ಕೇರಳದ ಬಿಜೆಪಿ ಮುಖ್ಯಸ್ಥ ಕೆ. ಸುರೇಂದ್ರನ್‌ ವಯಾನಾಡು (Wayanad) ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

    ಅಮೇಥಿಯಲ್ಲಿ ಸೋಲು ಕಂಡಿದ್ದ ರಾಗಾ:
    2019ರ ಲೋಕಸಭಾ ಚುನಾವಣೆಯಲ್ಲಿ (Lok Sabha Elections) ರಾಗಾ ಕೇರಳದ ವಯನಾಡು ಹಾಗೂ ಉತ್ತರ ಪ್ರದೇಶದ ಅಮೇಥಿಯಿಂದ ಸ್ಪರ್ಧೆ ಮಾಡಿದ್ದರು. ಅಮೇಥಿಯಲ್ಲಿ ಸ್ಮೃತಿ ಇರಾನಿ ಅವರ ವಿರುದ್ಧ 55,120 ಮತಗಳ ಅಂತರದಿಂದ ಸೋಲು ಕಂಡಿದ್ದ ರಾಗಾ, ವಯನಾಡಿನಲ್ಲಿ ಗೆದ್ದಿದ್ದರು. ಇದನ್ನೂ ಓದಿ: ಹಾಸನದಲ್ಲಿ ಯಾವುದೇ ಬಂಡಾಯ ಇಲ್ಲ, ಜನಾರ್ದನ ರೆಡ್ಡಿ ಪಕ್ಷ ಸೇರ್ಪಡೆ ಸ್ವಾಗತ ಮಾಡ್ತೀನಿ: ತೇಜಸ್ವಿಸೂರ್ಯ

    4 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು:
    ಇದೇ ಸಮಯಕ್ಕೆ ವಯನಾಡಿನಿಂದ ಸ್ಪರ್ಧಿಸಿದ್ದ ರಾಹುಲ್‌ ಗಾಂಧಿ 10,92,197 ಮತಗಳನ್ನು ಪಡೆದುಕೊಂಡಿದ್ದರು. ಈ ಮೂಲಕ 4,31,770 ಮತಗಳ ಅಂತರದಿಂದ (ಶೇಕಡವಾರು ಮತ 39.5%) ಗೆಲುವು ಸಾಧಿಸಿದ್ದರು. ಕೇರಳದ ಜನತೆ ಮೇಲೆ ವಿಶ್ವಾಸ ಇಟ್ಟಿರುವ ರಾಗಾ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅಲ್ಲದೇ ಕೇರಳದ ಅಲಪ್ಪುಳ ಕ್ಷೇತ್ರದಿಂದ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ (KC Venugopal), ತಿರುವನಂತಪುರಂನಿಂದ ಡಾ.ಶಶಿ ತರೂರ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಇದನ್ನೂ ಓದಿ: ನನ್ನ ರಕ್ತದ ಕಣಕಣದಲ್ಲೂ ಬಿಜೆಪಿ ಇದೆ, ಷರತ್ತುಗಳಿಲ್ಲದೇ ಪಕ್ಷ ಸೇರಿದ್ದೇನೆ: ಜನಾರ್ದನ ರೆಡ್ಡಿ

    ಕೆ. ಸುರೇಂದ್ರನ್‌ ಯಾರು?
    ಬಿಜೆಪಿಯ ನಿಷ್ಠಾವಂತ ಕಾರ್ಯರ್ತರಾಗಿದ್ದ ಕೆ. ಸುರೇಂದ್ರನ್‌ 2020ರಲ್ಲಿ ಕೇರಳ ಬಿಜೆಪಿ ಘಟಕದ ರಾಜ್ಯಾಧ್ಯಕ್ಷರಾದರು. 2019 ರಲ್ಲಿ, ಸುರೇಂದ್ರನ್ ಪತ್ತನಂತಿಟ್ಟದಿಂದ ಚುನಾವಣೆಗೆ ಸ್ಪರ್ಧಿಸಿದ್ದರು, ಆದರೆ ಯಶಸ್ವಿಯಾಗಲಿಲ್ಲ. 2018ರಲ್ಲಿ ಶಬರಿಮಲೆಗೆ ಮಹಿಳೆಯರ ಪ್ರವೇಶ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸುರೇಂದ್ರನ್ ಒಂದು ತಿಂಗಳ ಕಾಲ ಜೈಲಿನಲ್ಲಿದ್ದರು. ಈ ಬಾರಿ ಕೇರಳದಲ್ಲಿ ಬಿಜೆಪಿ ಗೆಲುವಿಗೆ ಶಕ್ತಿ ಮೀರಿ ಶ್ರಮಿಸುತ್ತಿದ್ದಾರೆ. ಹೀಗಾಗಿ ಬಿಜೆಪಿ ಅವರನ್ನು ರಾಹುಲ್‌ ಗಾಂಧಿ ಅವರ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಲೋಕಸಭಾ ಚುನಾವಣೆ ಹಿನ್ನೆಲೆ 17 ರಾಜ್ಯಗಳ 111 ಅಭ್ಯರ್ಥಿಗಳ ಐದನೇ ಪಟ್ಟಿಯನ್ನು ಬಿಜೆಪಿ ಭಾನುವಾರ ಬಿಡುಗಡೆ ಮಾಡಿದೆ. ಪಕ್ಷಕ್ಕೆ ಹೊಸದಾಗಿ ಸೇರ್ಪಡೆಗೊಂಡ ನಾಯಕರು, ಕೋರ್ಟ್‌ ಮಾಜಿ ನ್ಯಾಯಾಧೀಶರು, ಸಿನಿಮಾ ರಂಗದ ತಾರೆಯರು ಹಾಗೂ ವಾಣಿಜ್ಯ ಉದ್ಯಮಿಗಳಿಗೂ ಪಕ್ಷ ಟಿಕೆಟ್‌ ನೀಡಿದೆ. ಇದನ್ನೂ ಓದಿ: ಹೋಳಿ ಹಬ್ಬದಂದು ಉಜ್ಜಯಿನಿಯ ಮಹಾಕಾಳೇಶ್ವರ ದೇಗುಲದಲ್ಲಿ ಭಾರೀ ಅಗ್ನಿ ದುರಂತ – 14 ಅರ್ಚಕರಿಗೆ ಗಾಯ

  • ಬಿಜೆಪಿ ಅಭ್ಯರ್ಥಿ ವಿರುದ್ಧ 204 ಕ್ರಿಮಿನಲ್ ಪ್ರಕರಣ ದಾಖಲು

    ಬಿಜೆಪಿ ಅಭ್ಯರ್ಥಿ ವಿರುದ್ಧ 204 ಕ್ರಿಮಿನಲ್ ಪ್ರಕರಣ ದಾಖಲು

    – ಪತ್ರಿಕೆಯಲ್ಲಿ ಮಾಹಿತಿ ಪಬ್ಲಿಷ್ ಮಾಡಲು 60 ಲಕ್ಷ ರೂ. ವೆಚ್ಚ

    ತಿರುವನಂತಪುರಂ: ಬಿಜೆಪಿ ಅಭ್ಯರ್ಥಿಯೊಬ್ಬರ ವಿರುದ್ಧ ದಾಖಲಾಗಿರುವ ಪ್ರಕರಣಗಳ ವಿವರಣೆಯನ್ನು ಪತ್ರಿಕೆಯೊಂದರ ನಾಲ್ಕು ಪುಟಗಳಲ್ಲಿ ಮುದ್ರಿಸಲಾಗಿದೆ. ಇದು ಪತ್ರಿಕೆ ತೆರೆದು ನೋಡಿದ ಓದುಗರಲ್ಲಿ ಅಚ್ಚರಿ ಮೂಡಿಸಿದೆ.

    ಕೇರಳದ ಪಥನಂತಿಟ್ಟಿಯ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್ ಅವರ ವಿರುದ್ಧ 204 ಕ್ರಿಮಿನಲ್ ಕೇಸ್ ದಾಖಲಾಗಿವೆ. ಈ ಕುರಿತು ಅವರು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ.

    ಮತದಾರರ ಜಾಗೃತಿ ಉದ್ದೇಶದಿಂದ ಚುನಾವಣಾ ಆಯೋಗವು ಮೂರು ಮುದ್ರಣ ಮಾಧ್ಯಮಗಳಲ್ಲಿ ಅಭ್ಯರ್ಥಿಯ ವಿರುದ್ಧ ಇರುವ ಪ್ರಕರಣಗಳ ಕುರಿತು ಜಾಹೀರಾತು ನೀಡಬೇಕು. ಹೀಗಾಗಿ ಪ್ರತಿಕೆಯೊಂದರ ಪಥನಂತಿಟ್ಟಿಯ ಆವೃತ್ತಿಯಲ್ಲಿ ಕೆ.ಸುರೇಂದ್ರನ್ ಅವರು ಎದುರಿಸುತ್ತಿರುವ ಕ್ರಿಮಿನಲ್ ಕೇಸ್‍ಗಳ ಕುರಿತು ಜಾಹೀರಾತು ನೀಡಲಾಗಿತ್ತು. ಇದನ್ನು ಮುದ್ರಿಸಲು ಬರೋಬ್ಬರಿ ನಾಲ್ಕು ಪುಟಗಳೇ ಬೇಕಾಯಿತು. ಗುರುವಾರ ಪತ್ರಿಕೆ ತೆರೆದು ನೋಡಿದ ಓದುಗರು ಯಾವುದೋ ಟೆಂಡರ್, ಕಾಮಗಾರಿ ಮಾಹಿತಿ ಎಂದು ತಿಳಿದಿದ್ದರು. ಬಳಿಕ ಅಭ್ಯರ್ಥಿಯ ವಿರುದ್ಧ ಇರುವ ಪ್ರಕರಣಗಳ ಮಾಹಿತಿ ಎಂದು ತಿಳಿದಾಗ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

    ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್ ಅವರ ವಿರುದ್ಧ ಇರುವ ಪ್ರಕರಣಗಳಲ್ಲಿ ಶೇ.90 ರಷ್ಟು ಶಬರಿಮಲೆ ಹೋರಾಟಕ್ಕೆ ಸಂಬಂಧಿಸಿವೆ. ಪ್ರತಿಕೆಯಲ್ಲಿ ಪಬ್ಲಿಷ್ ಆಗಿರುವ ನಾಲ್ಕು ಪುಟಗಳ ಜಾಹೀರಾತಿಗೆ 20 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಚುನಾವಣಾ ಆಯೋಗದ ಮಾರ್ಗಸೂಚಿಯ ಪ್ರಕಾರ ಕನಿಷ್ಠ ಮೂರು ಪತ್ರಿಕೆಗಳಲ್ಲಿ ಅಭ್ಯರ್ಥಿಗಳ ವಿರುದ್ಧ ಇರುವ ಪ್ರಕರಣಗಳ ಕುರಿತು ಪಬ್ಲಿಷ್ ಮಾಡಬೇಕು. ಈ ಮೂಲಕ ಮೂರು ಪತ್ರಿಕೆಗಳಿಗೆ ಜಾಹೀರಾತು ನೀಡಿದ ವೆಚ್ಚ 60 ಲಕ್ಷ ರೂ. ಆಗಿದೆ.